ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shishir Hegde Column: ಇದೆಲ್ಲಾ ಕಾಮನ್‌ ಸಾರ್‌, ಸ್ವಲ್ಪ ಅಡ್ಜಸ್ಟ್‌ ಮಾಡ್ಕೊಳ್ಳಿ !

ನಾನು ಮತ್ತು ಕಿರಣ್ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳವುದುರೊಳಗೆ ‘ಅಯ್ಯೋ ಹೋಗಿ ಸಾರ್.. ಅಡ್ಜ ಮಾಡ್ಕೊಳ್ಳಿ ಸಾರ್..’ ಎಂದು ಅಕ್ಕಪಕ್ಕದಲ್ಲಿದ್ದ ಕೆಲವರು ಹೇಳಿದರೆ, ಇನ್ನು ಕೆಲವರು ಹಾರ್ನ್ ಮಾಡಿ ಅಸಹನೆ ತೋರಿಸಿ ಅಲ್ಲಿಂದ ನಮ್ಮ ಕಾರನ್ನು, ಪ್ರಯಾಣವನ್ನು ಮುನ್ನಡೆಸಿದರು. ಹಿಂದಿನ ದಿನವಷ್ಟೇ ಕಿರಣ್ ಅವರ ಕಾರಿಗೆ ಯಾರೋ ಬೈಕಿನವನೇ ತಾಗಿಸಿ ಗೀರು ಮಾಡಿ ಹೋಗಿದ್ದನಂತೆ.

ಇದೆಲ್ಲಾ ಕಾಮನ್‌ ಸಾರ್‌, ಸ್ವಲ್ಪ ಅಡ್ಜಸ್ಟ್‌ ಮಾಡ್ಕೊಳ್ಳಿ !

-

ಶಿಶಿರಕಾಲ

ಇತ್ತೀಚೆಗೆ ಅಂಕಣಕಾರರಾದ ಕಿರಣ್ ಉಪಾಧ್ಯಾಯರ ಜೊತೆ ಬೆಂಗಳೂರಿನಲ್ಲಿ ಪ್ರಯಾಣಿಸುತ್ತಿದ್ದೆ. ಕಾರನ್ನು ಅವರು ಡ್ರೈವ್ ಮಾಡುತ್ತಿದ್ದರು, ನಾನು ಪಕ್ಕದಲ್ಲಿ ಕೂತಿದ್ದೆ. ದೇಶಾಂತರ ಗೆಳೆಯರಿಬ್ಬರು ಅಪರೂಪಕ್ಕೆ ಸೇರಿದರೆ- ಅದರಲ್ಲೂ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಬೇಕಾದಷ್ಟು ಸಮಯ ಸಿಕ್ಕಾಗ ಮಾತಿನ ವಿಷಯ ಎಲ್ಲಿಂದೆಲ್ಲಿಗೂ ಹೋಗುವುದು ಸಾಮಾನ್ಯವಲ್ಲವೇ! ನಮ್ಮ ಮಾತು-ಕಥೆಯೂ ಹಾಗೆಯೇ ಸಾಗಿತ್ತು. ಕೆಲ ದಿನಗಳ ಹಿಂದೆ ಅಬುಧಾಬಿಯಲ್ಲಿ ಸುತ್ತಾಡಿದ ಅನುಭವ ಹೇಳುತ್ತ ಹೀಗೊಂದು ಗ್ರಹಿಕೆಯನ್ನು ಅವರಲ್ಲಿ ಪ್ರಸ್ತಾಪಿಸಿದೆ.

ನೀವು ಒಂದು ನಗರಕ್ಕೆ ಮೊದಲ ಬಾರಿ ಈಗಷ್ಟೇ ಬಂದಿಳಿದಿದ್ದೀರಿ ಎಂದಿಟ್ಟುಕೊಳ್ಳಿ. ಅಲ್ಲಿನ ರಸ್ತೆ, ಸಂಸ್ಕೃತಿ, ಭಾಷೆ ಎಲ್ಲದೂ ಹೊಸತು. ಆದರೂ ಅಲ್ಲಿರುವ ಕೆಲವೇ ಗಂಟೆಗಳಲ್ಲಿ ಅಲ್ಲಿನ ಜನರು ಪದೇ ಪದೆ ಬಳಸುವ ಕೆಲವೊಂದಿಷ್ಟು ಶಬ್ದ ಪುಂಜಗಳು ನಮ್ಮ ಗಮನಕ್ಕೆ ಬರುತ್ತವೆ. ಅಬುಧಾಬಿ ಯಲ್ಲಿ ಜನರು ಮಾತಿನ ಮಧ್ಯೆ ಪದೇ ಪದೆ ‘ಶುಕ್ರಾನ್ ಶುಕ್ರಾನ್, ಶುಕ್ರಾನ್ ಹಬೀಬಿ’ ಅನ್ನುತ್ತಾರೆ ಎಂದೆ.

ಕಿರಣ್ ಇನ್ನೊಂದಿಷ್ಟು ದೇಶದ ಜನರು ಆಗಾಗ ಬಳಸುವ ಶಬ್ದಪುಂಜಗಳ ಉದಾಹರಣೆ ಕೊಟ್ಟರು. ಭಾಷೆ ಬಾರದ ದೇಶಕ್ಕೆ ಹೋದಾಗ ಇಂತಹ ಕೆಲವು ಶಬ್ದಪುಂಜಗಳು ನಮ್ಮ ನೆನಪಿನ ಭಾಗಗಳೇ ಆಗಿರುತ್ತವೆ. ಹೋಗಿ ಬಂದ ಮೇಲೂ ಅದೇ ಶಬ್ದ ನೆನಪಾಗುತ್ತಿರುತ್ತದೆ. ಅದನ್ನು ನಾವು ನಮ್ಮಷ್ಟಕ್ಕೇ ಪುನರಾವರ್ತಿಸುತ್ತಿರುತ್ತೇವೆ!

ಎಲ್ಲ ಊರಿನಲ್ಲೂ ಅವರದ್ದೇ ಆದ ಇಂತಹ ಕೆಲವು ಪದಪುಂಜಗಳಿರುತ್ತವೆ ಎನ್ನುವುದು ಸುಳ್ಳಲ್ಲ. ನೀವು ದೆಹಲಿಗೆ ಹೋದರೆ ಅಲ್ಲಿನ ಮಂದಿ ಮಾತುಮಾತಿಗೆ ‘ಚಲ್ತಾ ಹೈ’ ಅಂತಿರುತ್ತಾರೆ. ಪಂಜಾಬಿ ಗಳು ‘ಸರಿ, ಓಕೆ, ಅಡ್ಡಿಲ್ಲ’ ಎಂದು ಹೇಳಲು ‘ಕೋಯ್ ಗಾಲ್ ನಾ’ (ಏನೂ ತೊಂದ್ರೆ ಇಲ್ಲ) ಎಂದು ನಾಲ್ಕನೆಯ ವಾಕ್ಯದ ತುದಿಯಲ್ಲಿ ನಾಲ್ಕು ಬಾರಿ ಹೇಳುತ್ತಾರೆ, ಕಲ್ಕತ್ತಾ ಮಂದಿ ‘ಹೊಯಿ ಜಾಬೆ’ (ಆಗುತ್ತದೆ) ಎಂದರೆ ನ್ಯೂಯಾರ್ಕ್‌ನವರು ಬಾಯಿ ತೆಗೆದರೆ ’no worries, no worries’ (ಪರವಾಗಿಲ್ಲ) ಎನ್ನುತ್ತಿರುತ್ತಾರೆ.

ಇದನ್ನೂ ಓದಿ: Shishir Hegde Column: ನಮ್ಮ ಅಧಿಕಾರಿಗಳ ದರ್ಪ ಕಂಡಾಗ ನೆನಪಾದದ್ದು ಜಡ್ಜ್‌ ಕ್ಯಾಪ್ರಿಯೊ

ಶಿಕಾಗೋ ಮಂದಿ ‘no big deal’, ಬ್ರಿಟನ್ನಿನಲ್ಲಿ ‘never mind, it's alright’. ಸಿಂಗಾಪುರದಲ್ಲಿ ಮಜ ವಾಗಿದೆ- ಅವರು ಬಾಯಿ ತೆಗೆದರೆ ಕ್ಯಾನ್ ಕ್ಯಾನ್- & can can ’ ಅನ್ನುತ್ತಿರುತ್ತಾರೆ. ಇಲ್ಲಿ ‘ಕ್ಯಾನ್’ ಎಂದರೆ ಪ್ಲಾಸ್ಟಿಕ್ ಕ್ಯಾನ್ ಅಲ್ಲ. ‘ಹೌದು, ಯೆಸ್, ಮಾಡಬಹುದು’ ಎಂದರ್ಥ. ಅವು ಅಲ್ಲಿನವರಿಗೆ ಸಹಜ, ಹೊರಗಿನವರಗಷ್ಟೇ ಇದು ಗಮನಕ್ಕೆ ಬರಲು ಸಾಧ್ಯ. ಇದೆಲ್ಲ ಮಾತನಾಡಿಕೊಂಡು ನಾನು ಮತ್ತು ಕಿರಣ್ ರಾಜರಾಜೇಶ್ವರಿ ನಗರದ ಡಬಲ್ ರೋಡ್ ವರೆಗೆ ಬಂದುಮುಟ್ಟಿದ್ದೆವು.

ಅಷ್ಟರಲ್ಲಿ ಒಮ್ಮಿಂದೊಮ್ಮೆಲೆ ಅಡ್ಡದಿಂದ ಶರವೇಗದಲ್ಲಿ ಒಬ್ಬ ಬೈಕ್ ಸವಾರ ಅದೆಲ್ಲಿಂದಲೋ ಎದುರಿಗೆ ಬಂದುಬಿಟ್ಟ. ತಕ್ಷಣ ಕಿರಣ್ ‘ಗಜಕ್’ ಎಂದು ಬ್ರೇಕ್ ಹಾಕಿದರು. ಕಾರಿನ ಚಕ್ರಗಳು ಕ್ರೀಂ ಕರಿಸಿದವು. ಬೈಕ್ ಸವಾರನಿಗೂ ಆಕ್ಸಿಡೆಂಟ್ ಕೂದಲೆಳೆಯಲ್ಲಿ ತಪ್ಪಿತು ಎಂದೆನಿಸಿರಬೇಕು. ಸ್ವಲ್ಪವೇ ದೂರದಲ್ಲಿ ಹೋಗಿ ಒಂದೆರಡು ಕ್ಷಣ ನಿಂತು ಸುಧಾರಿಸಿಕೊಂಡ. ದೂರದಿಂದಲೇ ‘ಅಡ್ಜ ಮಾಡ್ಕೊಳ್ಳಿ ಸಾರ್’ ಎಂದು ಕೂಗಿ ಹೇಳಿ ಬುರ್ ಎಂದು ಹೊರಟು ರಸ್ತೆಯಂಚಿನಲ್ಲಿ ಮಾಯವಾಗಿ ಬಿಟ್ಟ.

ನಾನು ಮತ್ತು ಕಿರಣ್ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳವುದುರೊಳಗೆ ‘ಅಯ್ಯೋ ಹೋಗಿ ಸಾರ್.. ಅಡ್ಜ ಮಾಡ್ಕೊಳ್ಳಿ ಸಾರ್..’ ಎಂದು ಅಕ್ಕಪಕ್ಕದಲ್ಲಿದ್ದ ಕೆಲವರು ಹೇಳಿದರೆ, ಇನ್ನು ಕೆಲವರು ಹಾರ್ನ್ ಮಾಡಿ ಅಸಹನೆ ತೋರಿಸಿ ಅಲ್ಲಿಂದ ನಮ್ಮ ಕಾರನ್ನು, ಪ್ರಯಾಣವನ್ನು ಮುನ್ನಡೆಸಿದರು. ಹಿಂದಿನ ದಿನವಷ್ಟೇ ಕಿರಣ್ ಅವರ ಕಾರಿಗೆ ಯಾರೋ ಬೈಕಿನವನೇ ತಾಗಿಸಿ ಗೀರು ಮಾಡಿ ಹೋಗಿದ್ದ ನಂತೆ. ಇವರು ಏನಾಯಿತು ಎಂದು ನೋಡುವುದಕ್ಕೆ ಕೆಳಗೆ ಇಳಿದರೆ ಅಲ್ಲಿರುವ ಆರರಿಂದ ಎಂಟು ಮಂದಿ ‘ಬೆಂಗ್ಳೂರ್ ಅಲ್ಲಿ ಇದು ಕಾಮನ್ನು ಸಾರ್, ಅಡ್ಜ ಮಾಡ್ಕೊಳ್ಳಿ’ ಎಂದು ಹೇಳಿಯೇ ಕಳುಹಿಸಿದ್ದರಂತೆ.

61_R

ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಏನನ್ನು ಅಡ್ಜ ಮಾಡ್ಕೊಳ್ಳೋದು? - ರಸ್ತೆ ಯನ್ನೋ, ನಮ್ಮ ಕಾರನ್ನೋ, ಅಥವಾ ನಮ್ಮ ರಕ್ತದೊತ್ತಡ- ಬ್ಲಡ್ ಪ್ರೆಶರ್ ಅನ್ನೋ, ಬೆಂಗಳೂರಿನ ಮಟ್ಟಿಗಂತೂ ‘ಸ್ವಲ್ಪ ಅಡ್ಜ ಮಾಡ್ಕೊಳ್ಳಿ’ ಅನ್ನೋದೇ ಇಲ್ಲಿನ ಆ ಜನಪ್ರಿಯ ಶಬ್ದಪುಂಜ ಎಂದು ಇಬ್ಬರೂ ಒಮ್ಮತಕ್ಕೆ ಬಂದು- ಗಟ್ಟಿಯಾಗಿ ನಗ್ಯಾಡಿಕೊಂಡೆವು! ಆದರೆ ಇದು ತಮಾಷೆಗಷ್ಟೇ ಸೀಮಿತ ವಾಗಿರಲಿಲ್ಲ. ಮುಂದೆ ನೋಡುತ್ತಾ ಹೋದಂತೆ ‘ಅಡ್ಜ ಮಾಡ್ಕೊಳ್ಳಿ’ ಅಲ್ಲಲ್ಲಿ ಕೇಳಿಸುತ್ತಲೇ ಹೋಯಿತು, ಕಾಣಿಸುತ್ತಲೇ ಹೋಯಿತು! ತಮಾಷೆಗಲ್ಲ- ‘ಈ ಅಡ್ಜ ಮಾಡ್ಕೊಳ್ಳಿ’ ಇದೆಯಲ್ಲ- ಇದು ತೀರಾ ಭಾರತೀಯರ ತೀರಾ ಅಸಾಮಾನ್ಯ ಗುಣ. ನಾವು ಅಡ್ಜ ಮಾಡಿಕೊಳ್ಳುತ್ತೇವೆ.

ಜಗತ್ತಿನ ಬಹುತೇಕರಿಗಿಂತ ಸ್ವಲ್ಪ ಜಾಸ್ತಿಯೇ ನಾವು ಅಡ್ಜ ಮಾಡಿಕೊಳ್ಳುತ್ತೇವೆ. ಹಾಗಾಗಿಯೇ ಬಹುಶಃ ಅದನ್ನು ಪದೇ ಪದೆ ಈಗೀಗ ಸ್ವಲ್ಪ ಜಾಸ್ತಿಯೇ ಹೇಳುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಬಸ್- ಮೆಟ್ರೋ ಕಿಕ್ಕಿರಿದು ತುಂಬಿರುತ್ತದೆ. ಆದರೂ ಹೇಗೋ ನಾಲ್ಕು ಮಂದಿ ಒಳಹೊಕ್ಕುತ್ತಾರೆ. ಒಳ ಹೊಕ್ಕವರು ಸ್ವಲ್ಪ ‘ಅಡ್ಜ ಮಾಡ್ಕೊಳ್ಳಿ’ ಅಂತಾರೆ. ಎಲ್ಲರೂ ಇಂಚಿಂಚೇ ಸರಿದು ಅಡ್ಜ ಮಾಡಿ ಕೊಳ್ಳುತ್ತಾರೆ. ಮದುವೆ ಮನೆ- ಆ ದಿನ ಮದುವೆಗೆ ಅಂದಾಜಿಸಿದ್ದಕ್ಕಿಂತ ನೂರಿನ್ನೂರು ಮಂದಿ ಹೆಚ್ಚಿಗೆ ಅತಿಥಿಗಳು ಬಂದು ಬಿಡುತ್ತಾರೆ. ನಮ್ಮಲ್ಲಿ ಮಾತ್ರ ಅಡುಗೆ- ಮದುವೆ ಒಂದು ಊಹೆ ಅಂದಾಜಿನ ಲೆಕ್ಕ.

ಯಜಮಾನರು ಬಂದವರಿಗೆ, ಅಡುಗೆ ಮಾಡುವವರಿಗೆ ‘ಅಡ್ಜ ಮಾಡ್ಕೊಳ್ಳಿ’ ಅಂತಾರೆ. ಎಲ್ಲವೂ ಅಡ್ಜ ಆಗುತ್ತದೆ. ಇದು ವಿಶೇಷ- ನಮ್ಮಲ್ಲಿನ ವಿಶೇಷ. ವಿಶೇಷ ಎಂದು ಹೇಳಲು ಸಕಾರಣವಿದೆ. ಅಮೆರಿಕಾದ, ಐರ್ಲ್ಯಾಂಡ್‌ನ ಮದುವೆ ಎಂದರೆ ಹೀಗಿರುವುದಿಲ್ಲ. ಅಮೆರಿಕದಲ್ಲಂತೂ ಸಾಮಾನ್ಯ ವಾಗಿ ಹತ್ತರಿಂದ ಇಪ್ಪತ್ತು ಜನರಿಗಷ್ಟೇ ಆಹ್ವಾನಿಸಿ ಮಾಡುವ ಮದುವೆಗಳೇ ಜಾಸ್ತಿ. ಹೆಚ್ಚೆಂದರೆ ಮೂವತ್ತು, ಇಲ್ಲವೇ ದೊಡ್ಡ ಮದುವೆಯಾದರೆ ಅಬ್ಬಬ್ಬಾ ಐವತ್ತು.

ಅಲ್ಲಿ ಊಟಕ್ಕೆ ದುಂಡುಮೇಜಿನ ಸುತ್ತ ಐವತ್ತೆಂದರೆ ಐವತ್ತೇ ಕುರ್ಚಿ ಹಾಕಿಡುತ್ತಾರೆ. ಆಹ್ವಾನಿತ ತಿಂಗಳ ಮೊದಲೇ ಮದುವೆಗೆ ಬರುತ್ತೇನೆಂದು ಖಂಡಿತ ಮಾಡಿರಬೇಕು. ಅದಕ್ಕೂ ಒಂದು ಗಡುವಿದೆ. ಆಗ ಮಾತ್ರ ಮದುವೆಯ ದಿನ ಊಟದ ಟೇಬಲ್ಲಿನ ಮೇಲೆ ಅವನ ಹೆಸರು, ಅವನಿಗೊಂದು ಕುರ್ಚಿ ಇರುತ್ತದೆ. ಮನೆಗೆ ನೆಂಟರು ಬಂದಿದ್ರು, ಅವರನ್ನೂ ಕರೆದುಕೊಂಡು ಬಂದೆ ಎಂದರೆ ನಮ್ಮೂರಿನ ಯಜಮಾನ ಖುಷಿಯಾಗುತ್ತಾನೆ. ಆದರೆ ಅಮೆರಿಕಾದಲ್ಲಿ ಅದು ಅಕ್ಷಮ್ಯ. ಬಸ್ಸಿನಲ್ಲಿ ಸೀಟು ಐವತ್ನಾಲ್ಕು ಎಂದರೆ ಐವತ್ತೈದನೆಯ ವ್ಯಕ್ತಿಗೆ ಒಳಪ್ರವೇಶವೇ ಇಲ್ಲ.

ನಮ್ಮಲ್ಲಿ ವಿಮಾನದಲ್ಲಿ ಮಾತ್ರ ಸ್ಟ್ಯಾಂಡಿಂಗ್ ಸೀಟ್ ಇಲ್ಲ. ನಮ್ಮಲ್ಲಿ ಐವತ್ನಾಲ್ಕು ಸೀಟಿನ ಬಸ್ಸಿನಲ್ಲಿ ನೂರಾ ಎಂಟು ಜನರು ಅಡ್ಜ ಮಾಡಿಕೊಂಡು ಪ್ರಯಾಣಿಸುತ್ತಾರೆ. ಬೆಂಗಳೂರಿನ ರಸ್ತೆಗಳಲ್ಲಿ ದನಗಳು ಓಡಾಡುತ್ತವೆ, ಕೆಆರ್ ಮಾರ್ಕೆಟ್ ಸುತ್ತಮುತ್ತಲಂತೂ ಆಕಳುಗಳು ನಡುರಸ್ತೆ ಯಲ್ಲಿ ಮಲಗಿರುತ್ತವೆ. ಬಿಎಂಟಿಸಿ ಬಸ್ಸಿನವನು ಆಕಳು ನೀಡಿಸಿಟ್ಟ ಕಾಲನ್ನು ಬಸ್ಸಿನ ಚಕ್ರಗಳು ಹತ್ತದಂತೆ ಅಡ್ಜ ಮಾಡಿಕೊಂಡು ಬಸ್ ಓಡಿಸುತ್ತಾನೆ.

ಆಕಳೂ ಇದನ್ನೆಲ್ಲ ಅಡ್ಜ ಮಾಡಿಕೊಳ್ಳುತ್ತದೆ. ಅದುವೇ ಅಮೆರಿಕಾದ ರಸ್ತೆಯಲ್ಲಿ ದನವೊಂದು ಬರಲಿ!? ತಮಾಷೆಗಲ್ಲ, ಅಮೆರಿಕಾದ ರಾಷ್ಟ್ರೀಯ ವಾಹಿನಿಗಳಲ್ಲಿ ಅದು ಪ್ರೈಮ್ ಟೈಮ್ ಬ್ರೇಕಿಂಗ್ ನ್ಯೂಸ್ ಆಗಿಬಿಡುತ್ತದೆ! ನಮ್ಮ ಬೆಂಗಳೂರಿನಲ್ಲಿ ಹಾಗಲ್ಲ. ಫುಟ್‌ಪಾತ್ ಇಲ್ಲದ ರಸ್ತೆಯಲ್ಲಿ ಮೇಲೆ ಕೆಳಗೆ ಹಾರುತ್ತ ಪಾದಚಾರಿ ಅಡ್ಜ ಮಾಡಿಕೊಳ್ಳುತ್ತಾನೆ. ಅಲ್ಲಿಯೇ ಫುಟ್‌ಪಾತ್ ಮೇಲೆ ಬೈಕ್ ಓಡಿಸಿಕೊಂಡು ಹೋಗುವವನನ್ನು ನೋಡಿ ಕೋಪಗೊಂಡರೂ ಪಕ್ಕಕ್ಕೆ ಸರಿದು ಅಡ್ಜ ಮಾಡಿ ಕೊಳ್ಳುತ್ತಾನೆ.

ವಿಶೇಷವಾಗಿ ಬೆಂಗಳೂರಿಗನ ಸಹನೆಯಂತೂ ಶ್ಲಾಘಿಸಲೇಬೇಕು. ಮೂರು ದಿನ ಕಾವೇರಿ ನೀರು ಬಾರದಿದ್ದರೂ ಸ್ವಲ್ಪವೇ ಸ್ನಾನ ಮಾಡಿ ಅಡ್ಜ ಮಾಡಿಕೊಳ್ಳುತ್ತಾನೆ. ಬೆಂಗಳೂರಿನ ಇನ್ನೊಂದು ವಿರುದ್ಧ ದಿಕ್ಕಿನಲ್ಲಿರುವ ನೆಂಟರ ಮನೆಗೆ ಹೋಗಿ ಬರಲು ಮೂರು ಗಂಟೆ ಬೇಕು, ಇನ್ನು ಕೆಲವೊಮ್ಮೆ ಮಳೆ ಬಂದರೆ- ಟ್ರಾಫಿಕ್‌ನಲ್ಲಿ ಸಿಕ್ಕಿ ಹೋಗಿಬರಲು ಪೂರ್ಣ ದಿನವೇ ಬೇಕಾಗಬಹುದು, ಅಡ್ಜ ಮಾಡಿಕೊಳ್ಳುತ್ತಾರೆ.

ನಾಲ್ಕು ತಾಸು ಕರೆಂಟ್ ಹೋಯ್ತೋ, ರಾತ್ರಿಯಿಡೀ ಕರೆಂಟ್ ಇಲ್ಲದೆ ನಿದ್ರೆಯಿಲ್ಲ- ಇಡ್ಲಿ ಡಿಪ್ ಸಾಂಬಾರಿನಲ್ಲಿ ಜಿರಳೆಯ ಕಾಲು ಕಾಣಿಸಿತೋ, ಮ್ಯಾನೇಜರ್ ಬಂದು ಸರ್ ಅಡ್ಜ ಮಾಡ್ಕೊಳ್ಳಿ ಅನ್ನುತ್ತಾನೆ. ಎಲ್ಲದಕ್ಕೂ ಎಲ್ಲ ಸಮಯದಲ್ಲೂ ಅಡ್ಜ! ಬಹುಶಃ ನಮ್ಮ ಈ ‘ಅಡ್ಜ ಮಾಡ್ಕೊಳ್ಳೋ’ ಗುಣವೇ ನಮ್ಮ ಭಾರತೀಯ ಕೌಟುಂಬಿಕ ಗಟ್ಟಿತನಕ್ಕೆ ಮುಖ್ಯ ಕಾರಣವೇನೋ ಎಂದೆನಿಸುತ್ತದೆ.

ವಿಭಿನ್ನ ಕೌಟುಂಬಿಕ ಸ್ಥಿತಿ, ಹಿನ್ನೆಲೆ, ಸಂಸ್ಕೃತಿಯಲ್ಲಿ ಬೆಳೆದವರಿಬ್ಬರು ಮದುವೆಯಾದ ದಿನವೇ ಬಚ್ಚಲು ಮನೆ, ಬೀರು, ಬದುಕನ್ನು ಹಂಚಿಕೊಳ್ಳುವಾಗ ಅಡ್ಜಸ್ಟ್‌ಮೆಂಟ್ ಅಲ್ಲಿರಲೇಬೇಕು. ಒಬ್ಬರಿಗೆ ಬಿಸಿನೀರು, ಇನ್ನೊಬ್ಬರಿಗೆ ತಣ್ಣೀರು, ಒಬ್ಬರಿಗೆ ಮಲಗುವಾಗ ಫ್ಯಾನ್ ಬೇಕು, ಇನ್ನೊಬ್ಬರಿಗೆ ಬೇಡ, ಒಬ್ಬರಿಗೆ ಹಾಗಲಕಾಯಿ ಇಷ್ಟ, ಇನ್ನೊಬ್ಬರಿಗೆ ಕಂಡರಾಗದು.

ಬಹುತೇಕ ಗಂಡ ಹೆಂಡತಿಯರ ಇಷ್ಟಗಳಲ್ಲಿ ವೈರುಧ್ಯಗಳೇ ಜಾಸ್ತಿಯಿರುತ್ತದೆ. ಚಿಕ್ಕಪುಟ್ಟ ಸಾವಿರ ದೆಂಟು ಅಡ್ಜಸ್ ಮೆಂಟು ಗಳಿಂದಲೇ ಬದುಕು ನಡೆಯುತ್ತಿರುತ್ತದೆ. ಈ ಅಡ್ಜಸ್'ಮೆಂಟ್‌ಗೆ ಇಡೀ ಸಮಾಜವೂ ಒಂದಿಷ್ಟು ಒತ್ತಡವನ್ನು ಪ್ರತೀ ಗಂಡ- ಹೆಂಡತಿ- ಕುಟುಂಬದ ಮೇಲೆ ಹೇರಿರುತ್ತದೆ. ಅದೆಲ್ಲದರಿಂದ ಕೆಲವೊಂದಿಷ್ಟು ಅನಿವಾರ್ಯ ಅಡ್ಜಸ್ಟ್‌ಮೆಂಟ್ ಗಳನ್ನು ಗಂಡ, ಹೆಂಡತಿ ಮಾಡಿಕೊಳ್ಳುತ್ತಾರೆ!

ಆ ಒತ್ತಡ- ಗುಣವಿಲ್ಲದಿದ್ದಲ್ಲಿ ನಿಶ್ಚಿತ ವಿವಾಹಗಳು ಪದ್ಧತಿ ನಿಲ್ಲುತ್ತಲೇ ಇರಲಿಲ್ಲ! ಪಾಶ್ಚಾತ್ಯ ದೇಶಗಳಿಗಿಂತ ನಮ್ಮಲ್ಲಿ ಮೂವತ್ತು ಪ್ರತಿಶತ ಡೈವರ್ಸ್ ಹೆಚ್ಚಿರುತ್ತಿತ್ತು. ನಾವಷ್ಟೇ ಅಲ್ಲ, ನಮ್ಮ ಮನೆಗಳು ಕೂಡ ಹಾಗೆಯೇ. ಅವು ಕೂಡ ಅಡ್ಜ ಮಾಡಿಕೊಳ್ಳುತ್ತವೆ. ಸಾಮಾನ್ಯ ದಿನಗಳಲ್ಲಿ ಸಾಮಾನುಗಳ ಗುಡಾಣವಾಗುವಗೆ ಬೆಡ್ರೂಮ್ ನೆಂಟರು ಬರುವ ದಿನ ತನ್ನೆಲ್ಲ ಹರಗಣಗಳನ್ನು ಅಡಗಿಸಿಟ್ಟು ಮದುವಣಗಿತ್ತಿಯಂತೆ ಶೃಂಗಾರವಾಗುತ್ತದೆ. ನೆಂಟರು ಬರುವ ಹಿಂದಿನ ದಿನ ಇಡೀ ಮನೆ ಹೇರ್‌ಕಟ್, ಶೇವಿಂಗ್ ಮಾಡಿಸಿಕೊಂಡಂತೆ ಶಿಸ್ತಾಗುತ್ತದೆ. ‌

ಅಲ್ಲಿಯೇ ಅಡ್ಜ ಆಗಿ ಒಂದು ನಾವೀನ್ಯತೆ ಪಡೆಯುತ್ತದೆ. ನಮ್ಮ ಮನೆಗಳಲ್ಲಿ ಇಂತಿಂತದ್ದಕ್ಕೆ ಇದು ಎಂದು ಪ್ರತ್ಯೇಕ ರೂಮುಗಳ ನಿರ್ಬಂಧಗಳಿಲ್ಲ. ಮೂರು ಬೆಡ್ ರೂಮಿನ ಮನೆಯಲ್ಲಿ ಐದು ನೆಂಟರ ಕುಟುಂಬ ಬಂದರೆ ಇಡೀ ಮನೆ ಅದಕ್ಕನುಗುಣವಾಗಿಯೂ ಅಡ್ಜ ಆಗುತ್ತದೆ. ಮನೆಯಲ್ಲಿ ರೋದು ಮೂರೆ ಬೆಡ್ರೂಮು, ಉಳಿದ ಎರಡು ಕುಟುಂಬ ಹತ್ತಿರದ ವಸತಿಗೃಹಕ್ಕೆ ಹೋಗಿ ಎಂದು ಅಮೆರಿಕಾದವರಂತೆ ಯಾರೂ ಹೇಳುವುದೇ ಇಲ್ಲ. ಅದೊಂದು ನಮ್ಮಲ್ಲಿ ಸಾಧ್ಯತೆಯೇ ಅಲ್ಲ. ಅಲ್ಲಿಯೇ ಹಾಲಿನಲ್ಲಿ ಜಮಖಾನಾ ಹಾಸಿ ಮಲಗಿ ಬೆಳಗು ಮಾಡುತ್ತೇವೆ.

ಮನೆಗೆ ಬಂದ ನೆಂಟರೂ ಅಷ್ಟೇ- ಒಂದೇ ಬಾತ್ ರೂಮ್, ಒಂದೇ ಟಾಯ್ಲೆಟ್ ಎಂದೆಲ್ಲ ಯಾರೂ ಪುಕಾರು ಮಾಡುವುದಿಲ್ಲ. ಮನೆಯೇ ಎಲ್ಲರಿಗೂ ಅಡ್ಜ ಮಾಡಿಕೊಳ್ಳುತ್ತದೆ. ಇನ್ನು, ಅಕ್ಕ ಪಕ್ಕದ ಮನೆಗಳೂ ಅಡ್ಜ ಆಗುವ ರೀತಿ ಅನನ್ಯ. ಗೌಜಿ- ಗದ್ದಲ- ಕಾರ್ಯಕ್ರಮ- ಗಣಹೋಮ- ನಾಮಕರಣ ಇದೆಲ್ಲ ಇzಗ, ಮನೆಗೆ ನೆಂಟರು ತಡರಾತ್ರಿ ಬಂದು ಗಲಾಟೆ ಗೌಜಿ ಮಾಡಿದಾಗ, ಮನೆಗೆ ಬಂದವರು ತಮ್ಮ ವಾಹನ ಬೇಕಾಬಿಟ್ಟಿ ನಿಲ್ಲಿಸಿದಾಗ ಅಕ್ಕ ಪಕ್ಕದ ಮನೆಯವರಷ್ಟೇ ಅಲ್ಲ- ಇಡೀ ಬೀದಿಗೆ ಬೀದಿಯೇ ಅಡ್ಜ ಮಾಡಿಕೊಳ್ಳುತ್ತದೆ. ಅದು ಬಿಟ್ಟು ಸಹಿಸದೇ ಪಾಶ್ಚಾತ್ಯ ದೇಶಗಳಂತೆ ಯಾರೂ ಪೊಲೀಸರಿಗೆ ಫೋನ್ ಮಾಡುವುದಿಲ್ಲ.

ಇವತ್ತು ನಾನು ನಿನ್ನನ್ನು ಸಹಿಸಿಕೊಳ್ಳುತ್ತೇನೆ, ನೀನು ನಾಳೆ ನನ್ನನ್ನು ಸಹಿಸಿಕೋ ಎನ್ನುವ ಅಲಿಖಿತ ಸಾಮಾಜಿಕ ಒಡಂಬಡಿಕೆ. ನಮ್ಮಲ್ಲಿ ಜನರು, ಮನೆ, ಪಕ್ಕದ ಮನೆ, ಬೀದಿ ಅಷ್ಟೇ ಅಲ್ಲ, ರೈಲು, ಬಸ್ಸು, ಕೊನೆಗೆ ಕಾರು ಬೈಕು, ರಸ್ತೆಗಳು ಕೂಡ ಅಡ್ಜ ಮಾಡಿಕೊಳ್ಳುವುದನ್ನು ಚೆನ್ನಾಗಿಯೇ ಅಭ್ಯಾಸ ಮಾಡಿಕೊಂಡಿವೆ.

ಹೆಲ್ಮೆಟ್, ಟ್ರಿಪಲ್ ರೈಡ್, ಸೀಟ್ ಬೆಲ್ಟ್ ಇತ್ಯಾದಿ ಕಾನೂನುಗಳು ಕೂಡ ಊರು- ಪೇಟೆಗೆ ತಕ್ಕಂತೆ ತಮ್ಮನ್ನು ಅಡ್ಜ ಮಾಡಿಕೊಳ್ಳುತ್ತವೆ. ಒಟ್ಟಾರೆ ನಿತ್ಯ ಬದುಕಿನಲ್ಲಿ ಬೇಸರಿಸದೆ- ರಸ್ತೆಯ ಹೊಂಡ‌ ಗಳನ್ನು ಬೈಕಿನಲ್ಲಿ ತಪ್ಪಿಸಿಕೊಳ್ಳುತ್ತ ಹೋದಂತೆ ನಾವು ಅಡ್ಜ ಮಾಡಿಕೊಳ್ಳು ತ್ತಲೇ ಹೋಗುತ್ತೇವೆ, ಹೋಗುತ್ತಲೇ ಇರುತ್ತೇವೆ. ‌

ನಮ್ಮ ಜನರ ಅಡ್ಜಸ್ಟ್‌ಮೆಂಟುಗಳನ್ನು ಗ್ರಹಿಸುತ್ತಾ ಹೋದಂತೆ- ನಮ್ಮ ಸಮಾಜ ನಡೆಯುವ ರೀತಿಯೇ ಒಂದು ಬೆರಗಿನಂತೆ ಕಾಣಿಸುತ್ತದೆ. ಇಷ್ಟೊಂದು ಜನಸಂಖ್ಯೆ ನಮ್ಮಲ್ಲಿ. ಸಾಂಸ್ಕೃತಿಕ ವೈವಿಧ್ಯ, ಭಾಷೆ, ಜಾತಿ ಹೀಗೆ ಸಾವಿರದೆಂಟು ಶ್ರೇಣೀಕರಣ. ಅದೆಲ್ಲವನ್ನು ಪಾಲಿಸುತ್ತ, ಮೀರುತ್ತ ಇಲ್ಲಿ ಎಲ್ಲವನ್ನೂ ಹಂಚಿಕೊಳ್ಳಲೇಬೇಕು, ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು.

ವಾಹನ, ರಸ್ತೆಯ ಜೊತೆ ಅಪಾರ್ಟ್ಮೆಂಟಿನ ನಡುದಾರಿ, ದೇವಾಲಯ, ಕಚೇರಿ, ಮಾರುಕಟ್ಟೆ, ಹೋಟೆ‌ ಲ್ಲಿನ ಪಕ್ಕದ ಖಾಲಿ ಸೀಟು, ಕೆಲವೊಮ್ಮೆ ಬಸ್ಸಿನ ಮೂರು ಸೀಟಿನ ನಾಲ್ಕನೆಯ ಭಾಗ- ಹೀಗೆ ಎಲ್ಲವನ್ನೂ ಹಂಚಿಕೊಳ್ಳಲೇಬೇಕು. ಪ್ರತಿಯೊಬ್ಬರೂ ನಮನಮಗೆ ಬೇಕಾದದ್ದೇ ಆಗಬೇಕು ಎಂದು ಹಠ ಹಿಡಿದು ಕೂತರೆ? ಎಲ್ಲದಕ್ಕೂ, ಎಲ್ಲವನ್ನೂ ಪೊಲೀಸರೇ ಬಂದು ಸಂತೈಸಬೇಕು, ಕಾನೂನಿ ನಂತೆಯೇ ನಡೆಯಬೇಕು ಎಂದು ಹೊರಟರೆ? ನಮ್ಮ ದೇಶ ಸಾಗುವುದಿಲ್ಲ. ಹಾಗಾಗಿಯೇ ಇಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪವೇ ಬಾಗಬೇಕು, ಒಬ್ಬರಿಗೊಬ್ಬರು ಹೊಂದಿಕೊಳ್ಳಬೇಕು, ಇನ್ನೊಬ್ಬರಿಗೆ ಜಾಗ ಮಾಡಿಕೊಡಬೇಕು, ನಮ್ಮ ಪಾಲಿನ ಸ್ವಲ್ಪವನ್ನು ಆಗೀಗ ಬಿಟ್ಟುಕೊಡುತ್ತಲೇ ಇರಬೇಕು.

ಜನಸಂಖ್ಯೆ ಹೆಚ್ಚಿದಂತೆ ಅಡ್ಜ ಇನ್ನಷ್ಟು ಹೆಚ್ಚಿಗೆಯೇ ಮಾಡಬೇಕು. ಇದು ಸಾಮಾಜಿಕ ದೌರ್ಬಲ್ಯ ವಲ್ಲ. ಇದು ಕೂಡ ಒಂದು ನಾಗರೀಕತೆಯೇ. ಆದರೆ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುತ್ತ ಹೋರಟ ನಮಗೆ ಅದನ್ನು ಎಲ್ಲಿ ನಿಲ್ಲಿಸಬೇಕು ಎಂದು ಕೆಲವೊಮ್ಮೆ ತಿಳಿಯದಾಗುತ್ತದೆ. ನಮ್ಮ ಸಹನೆ ಅದೆಷ್ಟೋ ಬಾರಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದರಾಚೆಯೂ ಅನಿವಾರ್ಯ ವೆಂಬಂತೆ ವಿಸ್ತರಿಸಿ ರುತ್ತದೆ. ರಸ್ತೆಯಲ್ಲಿ ಪಾಟ್ ಹೋಲ್- ಹೊಂಡಗಳು ಮಳೆ ಬಂದಾಗ ರಸ್ತೆಯಲ್ಲಿ ನೀರು ತುಂಬಿ ಮೃತ್ಯುಕೂಪವಾಗಿಬಿಡುತ್ತವೆ- ನಾವು ಅದನ್ನೂ ಅಡ್ಜ ಮಾಡಿಕೊಳ್ಳುತ್ತೇವೆ.

ರೈಲು ಹೇಳಿದ ಸಮಯಕ್ಕಿಂತ ಮೂರು ಗಂಟೆ ತಡವಾಗಿ ಬರಲಿ, ಸರಕಾರಿ ಆಫೀಸರ್ ವಿನಾ ಕಾರಣ ನಾಳೆ ಬನ್ನಿ ಎಂದು ಕಳುಹಿಸಲಿ, ಲಂಚ ಕೇಳಲಿ. ಆಫೀಸಿನ ಬಾಸ್ ಸಂಜೆ ಆರು ಗಂಟೆಗೆ ಬಂದು ಹೊಸ ಕೆಲಸ ಕೊಟ್ಟು ಅದನ್ನು ಇನ್ನೆರಡು ಗಂಟೆಯಲ್ಲಿ ಮುಗಿಸೆಂದು ಹೇಳಲಿ, ದೂರದ ಅಮೆರಿಕಾದ ಐಟಿ ಗ್ರಾಹಕ ಮಧ್ಯರಾತ್ರಿ ಮೀಟಿಂಗ್ ಇಟ್ಟುಕೊಳ್ಳಲಿ ಎಲ್ಲದಕ್ಕೂ ನಾವು ಮಾತ್ರ ಅಡ್ಜ!

ಇವೆಲ್ಲ ಸಹನೆಯೇ, ಹೊಂದಾಣಿಕೆಯೇ, ಅನಿವಾರ್ಯತೆಯೇ ಅಥವಾ ಹತಾಶೆಯೇ? ಕೊನೆಗೆ ಎಷ್ಟೆಂದರೆ ಎರಡು ವಿರುದ್ಧ ಪಕ್ಷದ ರಾಜಕಾರಣಿಗಳು ಅ ತೆರೆಮರೆಯಲ್ಲಿ ಒಟ್ಟಾಗಿ ಅಡ್ಜ ಮಾಡಿ ಕೊಂಡುಬಿಡುತ್ತಾರೆ. ಸರಕಾರವೇ ಉರುಳಿ ಹೋಗುತ್ತದೆ. ಕೊಲೆ ಮಾಡಿ ಸಾಬೀತಾದ ರಾಜಕಾರಣಿ ಬೇಲ್ ಪಡೆದು ಹೊರಬಂದು ಜನನಾಯಕನ ಪೋಸ್ ಕೊಡುತ್ತಾನೆ. ಕೋಟಿಗಟ್ಟಲೆ ನುಂಗಿ ನೀರು ಕುಡಿದ ಅಧಿಕಾರಿ ಖುಲಾಸೆಯಾಗಿ ಹೊರ ಬಂದು ತನ್ನ ಕೈಂಕರ್ಯ ಮುಂದುವರಿಸುತ್ತಾನೆ, ಮತ್ತೊಮ್ಮೆ ಸಿಕ್ಕಿ ಬೀಳುತ್ತಾನೆ. ‘ಇನ್ನಷ್ಟು ಒಳ್ಳೆಯ’ ಕಡೆಗೆ ವರ್ಗಾವಣೆ ಪಡೆಯುತ್ತಾನೆ. ನಾವು ಎಲ್ಲದನ್ನೂ ಅಡ್ಜ ಮಾಡಿ.. ಕೊಳ್ಳುತ್ತೇವೆ!

ಒಟ್ಟಾರೆ ಅಡ್ಜ ಮಾಡಿ, ಅಡ್ಜ ಮಾಡಿ ಎನ್ನುವುದನ್ನು ಅದೆಷ್ಟು ಅಭ್ಯಾಸ ಮಾಡಿಕೊಂಡು ಬಿಟ್ಟಿ .

ದ್ದೇವೆ ಎಂದರೆ ಈಗೀಗ ಇದನ್ನೊಂದು ‘ಫಿಕ್ಸ್ ಮಾಡಿ’ ಎಂದು ಹೇಳುವುದೇ ಮರೆತು ಹೋದಂತಿದೆ. ಬೆಂಗಳೂರಿ ನಿಂದ ಅಬುಧಾಬಿ ಮಾರ್ಗವಾಗಿ ಶಿಕಾಗೋಗೆ ಹೊರಟಿದ್ದೆ. ಅಬುಧಾಬಿ ವಿಮಾನದಲ್ಲಿ ನನ್ನ ಪಕ್ಕದ ಎರಡು ಸೀಟಿನಲ್ಲಿ ನಾಲ್ಕೈದು ವರ್ಷದ ಹುಡುಗ ಮತ್ತು ಅವನ ತಂದೆ. ಅವರು ನಾನಲ್ಲಿ ಹೋಗುವಾಗಲೇ ಸೀಟಿನಲ್ಲಿ ಕೂತಿದ್ದರು. ತಂದೆ ಮಗ ಇಬ್ಬರೇ ಪ್ರಯಾಣಕ್ಕೆ ಹೊರಟಂತಿತ್ತು.

ಮೂರು ಸೀಟಿನ ಮಧ್ಯದ ಸೀಟಿನಲ್ಲಿ ಆ ಮಗುವನ್ನು ತಂದೆ ಅಡ್ಡಲಾಗಿ ಮಲಗಿಸಿದ್ದ. ಮಗುವಿನ ಕಾಲು ನಾನು ಕೂರುವ ಬದಿಗಿತ್ತು. ಬೆಳಗಿನ ಜಾವದ ವಿಮಾನ- ನನಗೂ ಎಲ್ಲಿಲ್ಲದ ನಿದ್ರೆ. ಪ್ರತಿ ಬಾರಿ ಕಣ್ಣು ಕೂರು ವಂತಾದಾಗಲೆಲ್ಲ ಮಗು ನನ್ನನ್ನು ಕಾಲೊದೆ ಕೊಟ್ಟು ಎಬ್ಬಿಸುತ್ತಿತ್ತು. ನಾನು ಮಗು ವಿನ ತಂದೆಯತ್ತ ನೋಡಿ- ನನಗೂ ಅರ್ಥವಾಗುತ್ತದೆ ಎಂಬಂತೆ- ‘ಪರವಾಗಿಲ್ಲ, ಆದರೆ ಮಗುವಿನ ಚಪ್ಪಲಿ ಕಳಚಿಬಿಡಿ’ ಎಂದು ವಿನಂತಿಸಿಕೊಂಡ.

ಅದು ಮಣ್ಣುಮಣ್ಣಾಗಿತ್ತು, ಸಗಣಿಯ ಕಲೆಯಿತ್ತು. ಮಗುವಿನ ತಂದೆ ನನ್ನತ್ತ ನೋಡುತ್ತ, ಚಪ್ಪಲಿ ಸಡಿಲಿಸುತ್ತ ‘ಕೊಂಜಂ ಅಡ್ಜ ಪನ್ನುಂಗ’ ಎಂದ. ನನಗೆ ಆ ಮಾತು ಕೇಳಿದ್ದೇ- ನಗು ತಡೆಯಲಾಗ ಲಿಲ್ಲ. ಹೇಳಿಕೊಳ್ಳಲು ಪಕ್ಕದಲ್ಲಿ ಯಾರೂ ಇರಲಿಲ್ಲ. ವಿಮಾನ ಇಳಿದ ತಕ್ಷಣ ಕಿರಣ್ ಉಪಾಧ್ಯಾಯ ರಿಗೆ ವಿನಾ ಕಾರಣ ‘ಕೊಂಜಂ ಅಡ್ಜ ಪನ್ನುಂಗ’ ಎಂದು ವಾಟ್ಸ್ಯಾಪ್ ಮೆಸೇಜ್ ಮಾಡಿ ಪ್ರಯಾಣ ಮುಂದುವರಿಸಿದೆ!