ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ravi Sajangadde Column: ಎಐ ಎಂಬ ಸುನಾಮಿ ಬರುತ್ತಿದೆ, ದಾರಿ ಬಿಡಿ!

‘ಎಐ’ ತಂತ್ರಜ್ಞಾನದಲ್ಲಿ ತನಗಿರುವ ಬಲಿಷ್ಠ ಸಾಮರ್ಥ್ಯವನ್ನು ಭಾರತವು ಜಗಕ್ಕೆ ಸಾರುವ ನಿಟ್ಟಿನಲ್ಲಿ ಈ ಶೃಂಗವು ಬಹಳ ಪ್ರಾಮುಖ್ಯವನ್ನು ಪಡೆದುಕೊಂಡಿತ್ತು. ಶೃಂಗವನ್ನು ಸಮರ್ಥ ವಾಗಿ ನಿರ್ವಹಿಸಿದ ಭಾರತವು, ‘ಎಐ’ ತಂತ್ರಜ್ಞಾನ ಲೋಕಕ್ಕೆ ಸಂಬಂಧಿಸಿದ ನಿಯಮಗಳ, ಯೋಜನೆಗಳು ಮತ್ತು ದೃಷ್ಟಿಕೋನವನ್ನು ರೂಪಿಸಬಲ್ಲ ನಾಯಕನ ಪಾತ್ರವನ್ನು ತಾನು ವಹಿಸುವುದಾಗಿ ಜಗತ್ತಿಗೆ ಸ್ಪಷ್ಟವಾಗಿ ಸಾರಿತು.

Ravi Sajangadde Column: ಎಐ ಎಂಬ ಸುನಾಮಿ ಬರುತ್ತಿದೆ, ದಾರಿ ಬಿಡಿ!

-

Ashok Nayak
Ashok Nayak Feb 21, 2026 10:24 AM

ಕಾಲಚಕ್ರ

ರವೀ ಸಜಂಗದ್ದೆ

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಪ್ರಮುಖ ಕಂಪನಿಗಳು, ಹೂಡಿಕೆದಾರರು, ಜಾಗತಿಕ ನಾಯಕರನ್ನು ಒಂದೆಡೆ ಸೇರಿಸಿದ ಮತ್ತು ಭಾರತವು ಆತಿಥ್ಯವನ್ನು ವಹಿಸಿದ್ದ ‘ಎಐ ಇಂಪ್ಯಾಕ್ಟ್ ಸಮಿಟ್-2026’ ಹೆಸರಿನ 5 ದಿನಗಳ ಶೃಂಗಸಭೆಯು ಇತ್ತೀಚೆಗೆ ನವದೆಹಲಿಯಲ್ಲಿ ಸಂಪನ್ನಗೊಂಡಿತು.

ಬಹೂಪಯೋಗಿ ಎನ್ನಲಾಗಿರುವ ಈ ಬಹುಚರ್ಚಿತ ಶೃಂಗದಲ್ಲಿ ನೀತಿ ನಿರೂಪಕರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಶೋಧಕರು/ದಿಗ್ಗಜರು, ಸ್ಟಾರ್ಟಪ್ ನಾಯಕರು, ವಿದೇಶಿ ಗಣ್ಯರು, ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರಮುಖರು ಭಾಗಿಯಾಗಿದ್ದರು.

‘ಎಐ’ ತಂತ್ರಜ್ಞಾನದಲ್ಲಿ ತನಗಿರುವ ಬಲಿಷ್ಠ ಸಾಮರ್ಥ್ಯವನ್ನು ಭಾರತವು ಜಗಕ್ಕೆ ಸಾರುವ ನಿಟ್ಟಿನಲ್ಲಿ ಈ ಶೃಂಗವು ಬಹಳ ಪ್ರಾಮುಖ್ಯವನ್ನು ಪಡೆದುಕೊಂಡಿತ್ತು. ಶೃಂಗವನ್ನು ಸಮರ್ಥವಾಗಿ ನಿರ್ವಹಿಸಿದ ಭಾರತವು, ‘ಎಐ’ ತಂತ್ರಜ್ಞಾನ ಲೋಕಕ್ಕೆ ಸಂಬಂಧಿಸಿದ ನಿಯಮಗಳ, ಯೋಜನೆಗಳು ಮತ್ತು ದೃಷ್ಟಿಕೋನವನ್ನು ರೂಪಿಸಬಲ್ಲ ನಾಯಕನ ಪಾತ್ರವನ್ನು ತಾನು ವಹಿಸುವುದಾಗಿ ಜಗತ್ತಿಗೆ ಸ್ಪಷ್ಟವಾಗಿ ಸಾರಿತು.

ಇದು ಶೃಂಗದ ಯಶಸ್ಸಿನ ಬಲುದೊಡ್ಡ ಭಾಗ. ‘ಎಐ’ ತಂತ್ರಜ್ಞಾನದ ಬಗೆಗಿನ ಭಾರತದ ಚಿಂತನೆ ಮತ್ತು ಯೋಜನೆಗಳು ಪ್ರಬುದ್ಧವಾಗುತ್ತಿವೆ ಎಂಬುದನ್ನು ಈ ಶೃಂಗ ರುಜುವಾತು ಮಾಡಿದೆ.

‘ಎಐ’ ತಂತ್ರಜ್ಞಾನದಲ್ಲಿನ ಮುಂಚೂಣಿಯ ದೇಶವಾಗಿ ಹೊರಹೊಮ್ಮುತ್ತಿರುವ ಭಾರತವು ಮುಂದಿನ 2 ವರ್ಷಗಳಲ್ಲಿ ಈ ವಲಯದಲ್ಲಿ 200 ಶತಕೋಟಿ ಡಾಲರ್‌ಗಿಂತಲೂ ಅಧಿಕ ಹೂಡಿಕೆಯನ್ನು ಆಕರ್ಷಿಸುತ್ತಿದೆ ಎನ್ನುವ ವಿಚಾರವೇ ಸಂಚಲನ ಮೂಡಿಸಿದೆ.

ಭಾರತದಲ್ಲಿ ‘ಎಐ’ ತಂತ್ರಜ್ಞಾನದ ಆವಿಷ್ಕಾರ ಮತ್ತು ಪ್ರಸರಣ ತ್ವರಿತವಾಗಿ ಸಾಗಲಿದ್ದು, ಜನರ ಜೀವನಮಟ್ಟವನ್ನು ಸುಗಮಗೊಳಿಸಲು ಹೊಸ ಕಂಪನಿಗಳು ಮತ್ತು ಅವುಗಳ ‘ಎಐ’ ಉತ್ಪನ್ನಗಳು ಮುಂದಿನ ದಿನಗಳಲ್ಲಿ ಬರಲಿವೆ.

ಇದನ್ನೂ ಓದಿ: Ravi Sajangadde Column: ನಿಂತ ನೀರಾದ ನೀರಾವರಿ ಯೋಜನೆಗಳು !

ಪ್ರಧಾನಿ ಮೋದಿಯವರು ಈ ಶೃಂಗದಲ್ಲಿ ಮಾತನಾಡುತ್ತಾ, “ಎಐ ತಂತ್ರಜ್ಞಾನವು ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಆತಂಕ ಬೇಡ. ಯಾವುದೇ ಸವಾಲಿಗೆ ಸಮರ್ಪಕ ಪೂರ್ವಸಿದ್ಧತೆಯೇ ಮದ್ದು ಎನ್ನುವಂತೆ, ನವೀನ ಕೌಶಲದ ಕಲಿಕೆಯ ಮೂಲಕ ‘ಎಐ’ ಸವಾಲನ್ನು ಎದುರಿಸಲು ಭಾರತವು ಸಿದ್ಧವಾಗಬೇಕು.

ಇದಕ್ಕಾಗಿ ಸರಕಾರವು ‘ಕೌಶಲಾಭಿವೃದ್ಧಿ’ ಯೋಜನೆಗಳನ್ನು ಆರಂಭಿಸಿದೆ. ಮಾನವ ಸಂಪನ್ಮೂಲದ ಕೌಶಲವನ್ನು ಅವಲೋಕಿಸಿ, ಅದಕ್ಕೆ ಮತ್ತಷ್ಟು ಬಲ ತುಂಬಿ, ‘ಎಐ’ ವ್ಯವಸ್ಥೆಗೆ ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗಿದೆ" ಎಂದರು. ಇದು ದೇಶದ ‘ಎಐ’ ಭವಿಷ್ಯಕ್ಕೆ ಹಿಡಿದ ದುರ್ಬೀನು ಎಂದರೆ ಅತಿಶಯೋಕ್ತಿಯಲ್ಲ.

ಎಐ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಳಾಗಿ, ಆ ವಲಯ ಬೆಳೆದಂತೆ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎನ್ನುವುದು ತಜ್ಞರ ಅಭಿಮತ. ‘ಎಐ’ ವಿಚಾರದಲ್ಲಿ ಸಾರ್ವಭೌಮತ್ವ, ಒಳಗೊಳ್ಳುವಿಕೆ ಮತ್ತು ನಾವೀನ್ಯ ಈ ಮೂರು ಭಾರತದ ದೃಷ್ಟಿಕೋನಗಳಾಗಿವೆ. ಎಲ್ಲವೂ ಅಂದುಕೊಂಡಂತೆಯೇ ನಡೆದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ ಮೊದಲ 3 ಸೂಪರ್‌ಪವರ್ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ.

ಆಹಾರ, ಕೃಷಿ, ಹವಾಮಾನ, ಉತ್ಪಾದನೆ, ಮಾರುಕಟ್ಟೆ, ಸರಕು ಸಾಗಣೆ, ಮಾಹಿತಿ ತಂತ್ರಜ್ಞಾನ, ಮನರಂಜನೆ, ಶಿಕ್ಷಣ, ಪ್ರವಾಸ, ಆರೋಗ್ಯ, ಹಣಕಾಸು, ಕಾರ್ಯಾಂಗ, ನ್ಯಾಯಾಂಗ, ರೈಲು, ವೈಮಾನಿಕ ಕ್ಷೇತ್ರ, ಶ್ರಮಿಕ ವಲಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ‘ಎಐ’ ತನ್ನ ಛಾಪನ್ನು ಮೂಡಿಸಲಿದೆ, ಒಟ್ಟಾರೆಯಾಗಿ ಬದುಕನ್ನು ಮತ್ತಷ್ಟು ಮೃದ್ಧವಾಗಿಸಲಿದೆ.

ಸಮಸ್ಯೆಗಳಿಗೆ ಪರಿಹಾರಗಳನ್ನು ತ್ವರಿತವಾಗಿ ಮತ್ತು ನಿಖರವಾಗಿ ನೀಡಲಿದೆ. ಹೀಗಾದಾಗ ದೈನಂದಿನ ಜೀವನ ಸುಲಲಿತ. ಇವೆಲ್ಲದರ ನಡುವೆ, ‘ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಐಟಿ ವಲಯವು ಬಹುತೇಕ ಉದ್ಯೋಗಗಳನ್ನು ಕಳೆದುಕೊಳ್ಳಲಿದೆ’ ಎನ್ನುವ ಸುದ್ದಿಯು ತಳಮಳವನ್ನು ಸೃಷ್ಟಿಸಿದೆ.

ಆದರೆ ‘ಎಐ’ ಕ್ಷೇತ್ರದ ತಜ್ಞರು ಹೇಳುವಂತೆ, ಎಐ ತಂತ್ರಜ್ಞಾನದ ಜತೆಗೆ ಐಟಿ ಉದ್ಯಮವೂ ಮತ್ತಷ್ಟು ಬೆಳೆಯಲಿದೆ. ಹೀಗಾಗಿ ‘ಎಐ’ ತಂತ್ರಜ್ಞಾನವು ಕೆಲಸಗಳನ್ನು ಕಸಿಯಲಿದೆ ಎನ್ನು ವುದನ್ನು ಒಪ್ಪಲಾಗದು. ಆದರೆ ಕಾಲಕ್ಕೆ ತಕ್ಕಂತೆ ಕೌಶಲವನ್ನು ನವೀಕರಿಸಿಕೊಂಡರೆ ಮಾತ್ರವೇ ಚಲಾವಣೆಯಲ್ಲಿರಲು ಸಾಧ್ಯ ಎಂಬ ಸತ್ಯವನ್ನು ನಾವೆಲ್ಲರೂ ಅರಿಯ ಬೇಕಾಗಿದೆ.

ಮಾಡುವ ಉದ್ಯೋಗಗಳ ಸ್ವರೂಪವು ನಿರಂತರ ಬದಲಾಗುವುದು ಐಟಿ ಉದ್ಯಮದ ಪ್ರಮುಖ ಅಂಶ. ಹೀಗಾಗಿ, ಈಗಿನ ‘ಎಐ’ ತಂತ್ರಜ್ಞಾನವು ಐಟಿ ಕ್ಷೇತ್ರದ ವಿಸ್ತರಿತ ಭಾಗವಾಗಿದೆ ಮತ್ತು ಐಟಿ ಕ್ಷೇತ್ರದ ಹೊಸತನದ ರೂಪವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.

ಹೀಗೆ ವ್ಯಾಪಕವಾಗಿ ಬದಲಾಗುತ್ತಿರುವ ಸನ್ನಿವೇಶಕ್ಕೆ ಹೊಂದಿಕೊಂಡು ಮುನ್ನಡೆಯ ಲೆಂದು, ನಮ್ಮ ಚಿಂತನೆ ಮತ್ತು ಕೌಶಲಗಳಲ್ಲಿ ಅಪ್‌ಗ್ರೇಡ್ ಮಾಡಿಕೊಳ್ಳಬೇಕಿದೆ. ಡೇಟಾದ ಸಮರ್ಪಕ ಅರಿವು ಬೆಳೆಸಿಕೊಂಡು, ‘ಎಐ’ ತಂತ್ರಜ್ಞಾನವನ್ನು ವಿವೇಚನಾಯುತವಾಗಿ ಬಳಸುವ ಉದ್ಯೋಗಿಗಳು ಮತ್ತು ಸಂಸ್ಥೆಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಕಟ್ಟಿಟ್ಟಬುತ್ತಿ.

ಆದ್ದರಿಂದ, “ಭಾರತದ ಐಟಿ ಉದ್ಯಮವು ‘ಎಐ’ ಅನ್ನು ಬೆದರಿಕೆ ಎಂದು ಭಾವಿಸದೆ, ಕೌಶಲ ವನ್ನು ಮೇಲ್ದರ್ಜೆಗೇರಿಸಿಕೊಳ್ಳುವ ಸುವರ್ಣಾವಕಾಶ ಎಂದು ಭಾವಿಸಬೇಕು’ ಎನ್ನುತ್ತಾರೆ ‘ಎಐ’ ತಜ್ಞರು. ಜಗತ್ತಿನ ವಿವಿಧ ದೇಶಗಳಿಗೆ ಅನೇಕ ಐಟಿ ಸೇವೆಗಳನ್ನು ರಫ್ತು ಮಾಡುವಲ್ಲಿ ಭಾರತ ಮುಂಚೂಣಿಯಲ್ಲಿದೆ.

‘ಎಐ’ ಅಲೆಯಿಂದ ಬಚಾವಾಗಲು, ‘ಎಐ’ ತಂತ್ರಜ್ಞಾನದ ಅಭಿವೃದ್ಧಿ, ‘ಎಐ’ ಆಧಾರಿತ ಸೇವೆ ಮತ್ತು ‘ಎಐ’ ಉತ್ಪನ್ನಗಳ ರಫ್ತಿನ ಕುರಿತು ಗಮನಹರಿಸುವ ಅಗತ್ಯವಿದೆ. ಏಕೆಂದರೆ, ತಂತ್ರಜ್ಞಾನ ಬದಲಾದಾಗೆಲ್ಲಾ ಜಗತ್ತು ಕಂಪಿಸಿದೆ, ಅಚ್ಚರಿಯೆಂದರೆ ಅಂಥ ಬದಲಾವಣೆ ಗಳಿಗೆ ಅದು ಕ್ಷಿಪ್ರವಾಗಿ ಒಗ್ಗಿಕೊಂಡು ಮುನ್ನಡೆದಿದೆ. ಐಟಿ ಉದ್ಯಮವು ತಾನು ಬದಲಾಗುವುದರ ಜತೆಗೆ ಮುಂದಿನ ಪೀಳಿಗೆಯನ್ನೂ ಇಂಥ ಬದಲಾವಣೆಗೆ ಸಜ್ಜುಗೊಳಿಸು ವಂತಾಗಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಸೂಕ್ತ ಮಾರ್ಪಾಟು ಆಗಬೇಕು.

‘ಎಐ’ ಎಂಬುದು ಜಗದಗಲ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮೆಲ್ಲ ರ ಸುರಕ್ಷತೆಯ ಜವಾಬ್ದಾರಿಯನ್ನು ಮರೆಯಬಾರದು. ‘ಎಐ’ ಎಷ್ಟೇ ಪ್ರಬಲವಾಗಿದ್ದರೂ, ಕರಾರುವಾಕ್ಕಾಗಿದ್ದರೂ, ಯಾವುದೇ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಮನುಷ್ಯರದ್ದೇ ಆಗಿರಬೇಕು. ತಂತ್ರಜ್ಞಾನವು ಬೆಳೆದಂತೆ ಅದರ ದುರುಪ ಯೋಗದ ಪ್ರಮಾಣವೂ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಆದ್ದರಿಂದ ‘ಡೀಪ್ ಫೇಕ್’, ಡಿಜಿಟಲ್ ಅರೆಸ್ಟ್ ಅಪರಾಧಗಳು, ಭಯೋತ್ಪಾದಕ ಚಟು ವಟಿಕೆಗಳು ಮುಂತಾದ ಸಮಾಜಘಾತುಕ ವಿಚಾರಗಳಲ್ಲಿ ‘ಎಐ’ನ ದುರ್ಬಳಕೆಯನ್ನು ತಡೆಯುವ ಕಠಿಣ ಕಾನೂನುಗಳು ಜಾರಿಯಾಗಬೇಕು.

ರೇಡಿಯೋ, ಟಿವಿ, ದೂರವಾಣಿ, ಕಂಪ್ಯೂಟರ್, ಮೊಬೈಲ್, ಇಂಟರ್‌ನೆಟ್, ಸಾಫ್ಟ್‌ʼವೇರ್, ವಿವಿಧ ಆಪ್‌ಗಳು ಮತ್ತು ಈಗ ‘ಎಐ’ ತಂತ್ರಜ್ಞಾನದ ತನಕ ಜಗತ್ತು ಬೆಳೆದುಬಂದಿದೆ. ಯಾವುದೇ ಹೊಸ ತಂತ್ರಜ್ಞಾನವಿರಲಿ, ಅದೊಂದು ಆಯುಧದಂತೆ; ಅದರಿಂದ ಒಳಿತು ಇರುವಂತೆ ಕೆಡುಕೂ ಇರುತ್ತದೆ. ಆಯುಧವನ್ನು ಬಳಸುವವರಿಗೆ ವಿವೇಚನೆ ಇರಬೇಕಷ್ಟೇ. ‘ಎಐ’ ಎನ್ನುವ ಆಯುಧವೂ ಜಗದ ಒಳಿತಿಗಾಗಿ ಮಾತ್ರವೇ ಬಳಕೆಯಾಗಬೇಕು. ತಂತ್ರಜ್ಞಾನವು ಮನುಕುಲದ ಸೇವೆಗಾಗಿ ಇರಬೇಕೇ ವಿನಾ, ಅದು ಮನುಕುಲಕ್ಕೇ ಅಸ್ತಿತ್ವಕ್ಕೇ ಧಕ್ಕೆ ತರಬಾರದು!

‘ಎಐ’ಯನ್ನು ಕಾರ್ಯತಂತ್ರದ ದೃಷ್ಟಿಕೋನದಿಂದ ನೋಡಿ, ಪ್ರಜ್ಞಾಪೂರ್ವಕವಾಗಿ ಬಳಸಿದಾಗ, ಅದು ನಮ್ಮೆಲ್ಲರ ಒಳಿತಿಗೆ ಮತ್ತು ಅಭಿವೃದ್ಧಿಯ ವಿಚಾರಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಿ, ಹೊಸ ಆರ್ಥಿಕ ಮತ್ತು ಔದ್ಯೋಗಿಕ ಅವಕಾಶಗಳನ್ನು ಸೃಷ್ಟಿಸಲಿದೆ.

ಎಲ್ಲರನ್ನೂ ಒಳಗೊಂಡ ಪ್ರಗತಿ ಮತ್ತು ನವೀನ ಅವಕಾಶಗಳ ಲಭ್ಯತೆಗೆ ‘ಎಐ’ ತಂತ್ರಜ್ಞಾನ ವು ದಿಕ್ಸೂಚಿಯಾಗಲಿ. 2047ರ ‘ವಿಕಸಿತ ಭಾರತ’ದ ಗುರಿ ತಲುಪಲು ‘ಎಐ’ ತಂತ್ರಜ್ಞಾನವು ದೀವಟಿಕೆಯಾಗಲಿ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)