Vishweshwar Bhat Column: ನ್ಯಾಯಾಧೀಶನ ಮಾತು ʼಶಾಸನʼವಾಗಬೇಕೇ ಹೊರತು ʼಹರಿಕಥೆʼ ಆಗಬಾರದು !
ಸಂಸತ್ತಿರಬಹುದು, ನ್ಯಾಯಾಲಯವಿರಬಹುದು, ಸಾರ್ವಜನಿಕ ವೇದಿಕೆಯಿರಬಹುದು, ಸಂದರ್ಭದ ಔಚಿತ್ಯ ಗೊತ್ತಿಲ್ಲದೇ ಯದ್ವಾತದ್ವಾ ಮಾತಾಡುವವರಿಗೆ ‘ತುಪುತುಪು ತುಪಾಕಿ’ ಎಂದು ಗೇಲಿ ಮಾಡುತ್ತಾರೆ. ಬುದ್ಧಿವಂತಿಕೆಯಿದ್ದೂ, ಮಾತು ಬಲ್ಲಿದನಾಗಿಯೂ ಜನರಿಂದ ಗೇಲಿಗೊಳಗಾಗುವವನೇ ಈ ವಾಚಾಳಿ. ಆತನಿಗೆ ಗೊತ್ತಿರದ ಸಂಗತಿಯೇನೆಂದರೆ, ಸನ್ನಿವೇಶ ವನ್ನು ಅರ್ಥ ಮಾಡಿಕೊಳ್ಳದೇ ಮಾತಾಡುವುದು.
-
ನೂರೆಂಟು ವಿಶ್ವ
ಒಬ್ಬ ವ್ಯಕ್ತಿ ಬೇಕೋ, ಬೇಡವೋ, ಜನರು ತನ್ನ ಮಾತನ್ನು ಕೇಳುತ್ತಾರೋ, ಇಲ್ಲವೋ, ಆ ಸಂದರ್ಭಕ್ಕೆ ಅಗತ್ಯವಿದೆಯೋ, ಇಲ್ಲವೋ ಎಂಬುದನ್ನು ಅರಿಯದೇ, ಓತಪ್ರೋತವಾಗಿ ಬಾಯಿಗೆ ಬಂದದ್ದನ್ನು ಮಾತಾಡುತ್ತಿದ್ದರೆ ನಾವು ಅಂಥವರಿಗೆ ‘ಬಾಯಿಬಡುಕ’, ‘ವಾಚಾಳಿ’, ‘ಹರಟೆಮಲ್ಲ’, ‘ಬುರುಡೆದಾಸ’ ಎನ್ನುತ್ತೇವೆ. ಅವರು ಹೇಳುವುದು ಸರಿಯೇ ಇರಬಹುದು, ಆದರೆ ಅನಗತ್ಯವಾಗಿ, ಸಂದರ್ಭ-ಸನ್ನಿವೇಶ ನೋಡದೇ ಮಾತಾಡುವವರನ್ನು ಸಹಿಸಿ ಕೊಳ್ಳುವುದು ಕಷ್ಟ.
ಇಂಗ್ಲಿಷ್‌ನಲ್ಲಿ ಇಂಥವರಿಗೆ ಬಳಸುವ ಒಂದು ಅರ್ಥಪೂರ್ಣ ಪದವೆಂದರೆ ’Loose Cannon ’ (ತುಪುತುಪು ತುಪಾಕಿ). ಕನ್ನಡದ ಸೊಗಡಿನಲ್ಲಿ ಹೇಳುವುದಾದರೆ, ‘ಇದು ಹಗ್ಗವಿಲ್ಲದ ಹೋರಿ’ ಅಥವಾ ‘ಲಗಾಮಿಲ್ಲದ ಕುದುರೆ’.
ಅತಿಯಾಗಿ ಮಾತಾಡುವವರಿಗೆ ‘ಲೂಸ್ ಕ್ಯಾನನ್’ ಎಂದು ಏಕೆ ಕರೆಯುತ್ತಾರೆ? ಇದಕ್ಕೆ ಹಿನ್ನೆಲೆಯಿದೆ. ಈ ಪದವು ಹದಿನೇಳನೇ ಮತ್ತು ಹದಿನೆಂಟನೇ ಶತಮಾನದ ನೌಕಾಯಾನದ ಹಿನ್ನೆಲೆಯಿಂದ ಬಂದಿದೆ. ಅಂದಿನ ಕಾಲದಲ್ಲಿ ಯುದ್ಧನೌಕೆಗಳಲ್ಲಿ ಭಾರವಾದ ಕಬ್ಬಿಣದ ಫಿರಂಗಿಗಳನ್ನು ಇರಿಸಲಾಗುತ್ತಿತ್ತು.
ಇವುಗಳನ್ನು ಬಲವಾದ ಹಗ್ಗಗಳಿಂದ ಹಡಗಿನ ಪಕ್ಕದ ಗೋಡೆಗಳಿಗೆ ಬಿಗಿದು ಕಟ್ಟಿರಲಾಗು ತ್ತಿತ್ತು. ಯಾವಾಗಲಾದರೂ ಚಂಡಮಾರುತ ಬಂದಾಗ ಅಥವಾ ಯುದ್ಧದ ಅಬ್ಬರಕ್ಕೆ ಈ ಹಗ್ಗಗಳು ಕಳಚಿಕೊಂಡರೆ, ಆ ಫಿರಂಗಿಯು ಹಡಗಿನ ಡೆಕ್ ಮೇಲೆ ಅತ್ತಿತ್ತ ಉರುಳಲು ಶುರು ಮಾಡುತ್ತಿತ್ತು.
ಇದನ್ನೂ ಓದಿ: Vishweshwar Bhat Column: ಡಿಎಲ್ʼಇ 6 ನಂಬರಿನ ಒಂದು ಫಿಯಟ್ ಕಾರಿನ ಕತೆ !
ಒಮ್ಮೆ ಈ ‘ಫಿರಂಗಿ’ ಕಟ್ಟುಗಳಿಂದ ಮುಕ್ತವಾಗಿ (Loose) ಉರುಳಲು ಶುರುಮಾಡಿದರೆ, ಅದನ್ನು ನಿಯಂತ್ರಿಸುವುದು ಅಸಾಧ್ಯವಾಗಿತ್ತು. ಅದು ಹಡಗಿನ ಗೋಡೆಗಳನ್ನು ಜಖಂ ಮಾಡುವುದು ಮಾತ್ರವಲ್ಲದೇ, ತನ್ನದೇ ಸೈನಿಕರನ್ನು ತುಳಿದು ಸಾಯಿಸುತ್ತಿತ್ತು. ಹೀಗೆ, ತನ್ನದೇ ಜನರಿಗೆ ಮತ್ತು ಹಡಗಿಗೆ ಮಾರಕವಾಗುವ ಈ ಫಿರಂಗಿಯನ್ನು ‘ಲೂಸ್ ಕ್ಯಾನನ್’ ಎಂದು ಕರೆಯಲಾಗುತ್ತಿತ್ತು.
ಕಾಲಕ್ರಮೇಣ, ಈ ಪದವು ಸಮಾಜದಲ್ಲಿ ಅತಿಯಾಗಿ ಮಾತನಾಡುವ, ಗುಟ್ಟುಗಳನ್ನು ರಕ್ಷಿಸಲಾಗದ ಮತ್ತು ತನ್ನ ಮಾತುಗಳಿಂದ ತನಗೇ ಮುಜುಗರ ತಂದುಕೊಳ್ಳುವ ವ್ಯಕ್ತಿಗಳಿಗೆ ಅನ್ವಯವಾಗಲು ಶುರುವಾಯಿತು. ಈ ಪರಿಕಲ್ಪನೆಯನ್ನು ಸಾಹಿತ್ಯಲೋಕಕ್ಕೆ ಅನ್ವಯಿಸಿ ದವರು ಪ್ರಸಿದ್ಧ ಫ್ರೆಂಚ್ ಲೇಖಕ ವಿಕ್ಟರ್ ಹ್ಯೂಗೋ.
ಅವರು ತಮ್ಮ ’Ninety-Three’ (1874) ಎಂಬ ಕಾದಂಬರಿಯಲ್ಲಿ, ಹಡಗಿನ ಮೇಲಿನ ಈ ಲೂಸ್ ಕ್ಯಾನನ್ ಹೇಗೆ ಅನಾಹುತ ಸೃಷ್ಟಿಸುತ್ತದೆ ಎಂಬುದನ್ನು ಅದ್ಭುತವಾಗಿ ವರ್ಣಿಸಿ ದ್ದಾರೆ. ಅಲ್ಲಿಂದ ಮುಂದೆ ಇದು ಮನುಷ್ಯನ ನಡೆವಳಿಕೆಗೆ ಒಂದು ರೂಪಕವಾಗಿ ಬಳಕೆ ಯಾಗಲು ಶುರು ಮಾಡಿತು. ಇಂದು ನಾವು ಈ ಪದವನ್ನು ಯಾವುದೇ ವ್ಯಕ್ತಿಯ ಸ್ವಭಾವ ವನ್ನು ವರ್ಣಿಸಲು ಬಳಸುತ್ತೇವೆ. ಯಾರಾದರೂ ಸಾರ್ವಜನಿಕವಾಗಿ ಏನು ಮಾತನಾಡು ತ್ತಾರೆ ಅಥವಾ ಹೇಗೆ ವರ್ತಿಸುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲದಿದ್ದಾಗ ಅವರನ್ನು ಲೂಸ್ ಕ್ಯಾನನ್ ಎನ್ನಲಾಗುತ್ತದೆ.
ಸಂಸತ್ತಿರಬಹುದು, ನ್ಯಾಯಾಲಯವಿರಬಹುದು, ಸಾರ್ವಜನಿಕ ವೇದಿಕೆಯಿರಬಹುದು, ಸಂದರ್ಭದ ಔಚಿತ್ಯ ಗೊತ್ತಿಲ್ಲದೇ ಯದ್ವಾತದ್ವಾ ಮಾತಾಡುವವರಿಗೆ ‘ತುಪುತುಪು ತುಪಾಕಿ’ ಎಂದು ಗೇಲಿ ಮಾಡುತ್ತಾರೆ. ಬುದ್ಧಿವಂತಿಕೆಯಿದ್ದೂ, ಮಾತು ಬಲ್ಲಿದನಾಗಿಯೂ ಜನರಿಂದ ಗೇಲಿಗೊಳಗಾಗುವವನೇ ಈ ವಾಚಾಳಿ. ಆತನಿಗೆ ಗೊತ್ತಿರದ ಸಂಗತಿಯೇನೆಂದರೆ, ಸನ್ನಿವೇಶ ವನ್ನು ಅರ್ಥ ಮಾಡಿಕೊಳ್ಳದೇ ಮಾತಾಡುವುದು.
‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬ ಗಾದೆ ಇವರಿಗೆ ಅನ್ವಯಿಸುವುದೇ ಇಲ್ಲ. ಈ ಲೂಸ್ ಕ್ಯಾನನ್‌ಗಳಿಗೆ ಕೆಲವು ವಿಶಿಷ್ಟ ಗುಣಗಳಿರುತ್ತವೆ. ಇವರ ಮಾತಿಗೆ ಫಿಲ್ಟರ್ ಇರುವುದಿಲ್ಲ. ಮಿದುಳಿನಲ್ಲಿ ಒಂದು ಆಲೋಚನೆ ಬಂದರೆ ಅದು ತಕ್ಷಣ ನಾಲಿಗೆಯ ಮೂಲಕ ಹೊರ ಬರಲೇಬೇಕು. ಅದು ಯಾರಿಗೆ ನೋವು ನೀಡುತ್ತದೆ ಅಥವಾ ಸಂದರ್ಭಕ್ಕೆ ಸರಿ ಹೊಂದು ತ್ತದೆಯೇ, ಇಲ್ಲವೇ ಎಂಬುದನ್ನು ಸಹ ಇವರು ಯೋಚಿಸುವುದಿಲ್ಲ.
ಇವರು ‘ಯಾರಿಗೂ ಹೇಳ್ಬೇಡ ಅಂತ ಅವರು ಹೇಳಿದ್ರು...’ ಎಂದು ಶುರುಮಾಡಿ ಇಡೀ ಊರಿಗೆ ರಹಸ್ಯವನ್ನು ಸಾರುತ್ತಾರೆ. ಸಣ್ಣ ವಿಷಯವನ್ನು ಬೆಟ್ಟದಷ್ಟು ದೊಡ್ಡದು ಮಾಡಿ ಹೇಳುವುದು ಇವರ ಹವ್ಯಾಸ. ಎಲ್ಲರೂ ತಮ್ಮನ್ನೇ ಗಮನಿಸಬೇಕು ಎಂಬ ಹಂಬಲದಿಂದ ಅನಗತ್ಯ ವಿಷಯಗಳನ್ನು, ಬಾಯಿಭೇದಿಯಾದವರಂತೆ ಹರಟುತ್ತಾ ಹೋಗುತ್ತಾರೆ.
ಪ್ರಜಾಪ್ರಭುತ್ವದ ಅಂತಿಮ ಆಸರೆ ಆಗಿರುವ ನ್ಯಾಯಾಧೀಶರು ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಗಂಭೀರತೆ, ಮಿತಭಾಷಿ ಮತ್ತು ನಿಷ್ಪಕ್ಷಪಾತ ಧೋರಣೆ. ಆದರೆ, ಒಬ್ಬ ನ್ಯಾಯಾಧೀಶರು ‘ಲೂಸ್ ಕ್ಯಾನನ್’ ಆದರೆ ಏನಾಗಬಹುದು ಎಂಬುದು ಅತ್ಯಂತ ಚರ್ಚಾ ಸ್ಪದ ಮತ್ತು ಗಂಭೀರ ವಿಷಯ. ಒಬ್ಬ ನ್ಯಾಯಾಧೀಶರು ತಮ್ಮ ಮಿತಿಯನ್ನು ಮೀರಿ, ಅನಗತ್ಯವಾಗಿ ಮಾತನಾಡಿದರೆ ಅದು ಇಡೀ ನ್ಯಾಯದಾನ ವ್ಯವಸ್ಥೆಯ ಘನತೆ ಯನ್ನು ಮೂರಾಬಟ್ಟೆ ಮಾಡಿದಂತಾಗುತ್ತದೆ.
ನ್ಯಾಯಾಲಯದಲ್ಲಿ ನ್ಯಾಯಾಧೀಶರ ಪ್ರತಿಯೊಂದು ಶಬ್ದಕ್ಕೂ ಕಾನೂನಿನ ಬಲವಿರುತ್ತದೆ. ಅವರು ಲೂಸ್ ಕ್ಯಾನನ್ನಂತೆ ವರ್ತಿಸಿದರೆ ಏನೆಲ್ಲ ಅನಾಹುತಗಳಾಗಬಹುದು ಎಂಬು ದನ್ನು ಊಹಿಸಲೂ ಸಾಧ್ಯವಿಲ್ಲ. ನ್ಯಾಯಾಧೀಶರು ವಿಚಾರಣೆ ನಡೆಯುತ್ತಿರು ವಾಗಲೇ ಯಾವುದೋ ಒಂದು ಪಕ್ಷದ ಪರ ಅಥವಾ ವಿರುದ್ಧವಾಗಿ ಕಠಿಣವಾದ ಅಥವಾ ಲೇವಡಿ ಮಾತುಗಳನ್ನು ಆಡಿದರೆ, ಅಲ್ಲಿ ‘ನ್ಯಾಯಸಮ್ಮತ ವಿಚಾರಣೆ’ ನಡೆಯುತ್ತಿಲ್ಲ ಎಂಬ ಭಾವನೆ ಮೂಡುತ್ತದೆ.
ನ್ಯಾಯಾಲಯವು ಭಾವನೆಗಳಿಗಿಂತ ಹೆಚ್ಚಾಗಿ ಸಾಕ್ಷ್ಯಾಧಾರಗಳ ಮೇಲೆ ನಡೆಯಬೇಕು. ನ್ಯಾಯಾಧೀಶರು ರೇಗಾಡುವುದು ಅಥವಾ ವೈಯಕ್ತಿಕ ಅಭಿಪ್ರಾಯಗಳನ್ನು ತೀರ್ಪಿನಂತೆ ಹೇಳುವುದು ನ್ಯಾಯಾಂಗದ ಪಾವಿತ್ರ್ಯವನ್ನು ಕುಗ್ಗಿಸುತ್ತದೆ.
ನ್ಯಾಯಾಧೀಶರ ಅತಿಯಾದ ಮಾತುಗಳನ್ನೇ ಅಸ್ತ್ರವಾಗಿ ಬಳಸಿಕೊಂಡು, ಸೋತ ಪಕ್ಷವು ಮೇಲಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮೊದಲೇ ‘ಪೂರ್ವಗ್ರಹ ಪೀಡಿತರಾಗಿ ದ್ದರು’ ಎಂದು ವಾದಿಸಿ ತಡೆಯಾe ತರಬಹುದು. ಜನಸಾಮಾನ್ಯರು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆಯು ನ್ಯಾಯಾಽಶರ ಸಂಯಮದ ಮೇಲೆ ನಿಂತಿರುತ್ತದೆ. ಲೂಸ್ ಕ್ಯಾನನ್ ನ್ಯಾಯಾಧೀಶರು ಈ ನಂಬಿಕೆಯನ್ನು ಕ್ಷಣಮಾತ್ರದಲ್ಲಿ ಧೂಳೀಪಟ ಮಾಡ ಬಲ್ಲರು.
ವಿಚಾರಣೆ ವೇಳೆ ನ್ಯಾಯಾಧೀಶರು ನೀಡುವ ಲಘುಟಿಪ್ಪಣಿಗಳು ಅಥವಾ ಮಾತುಗಳು ಅಂತಿಮ ತೀರ್ಪಿನ ಭಾಗವಾಗಿರುವುದಿಲ್ಲ. ಆದರೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಯಾಗುತ್ತವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಚಾರಿತ್ರ್ಯದ ಬಗ್ಗೆ ಅಥವಾ ರಾಜಕಾರಣಿಗಳ ಬಗ್ಗೆ ಅನಗತ್ಯವಾಗಿ ಕಟುವಾದ ಶಬ್ದಗಳನ್ನು ಬಳಸುವುದು.
ಕೆಲವೊಮ್ಮೆ ನ್ಯಾಯಾಧೀಶರು ಕಾರ್ಯನಿರ್ವಾಹಕ ವ್ಯವಸ್ಥೆ ಅಥವಾ ಶಾಸಕಾಂಗದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಾ, ತಮಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಸುದೀರ್ಘ ಭಾಷಣ ಅಥವಾ ಟೀಕೆಗಳನ್ನು ಮಾಡುತ್ತಾರೆ. ಕೆಲವು ಗಂಭೀರ ಪ್ರಕರಣಗಳಲ್ಲಿ (ಉದಾ ಹರಣೆಗೆ ಅತ್ಯಾಚಾರ ಅಥವಾ ಕೌಟುಂಬಿಕ ದೌರ್ಜನ್ಯ) ಸಂತ್ರಸ್ತೆಯ ಬಗ್ಗೆ ಅಥವಾ ಸಮಾಜದ ಬಗ್ಗೆ ತಪ್ಪು ಅರ್ಥ ಬರುವಂತೆ ಮಾತನಾಡುವುದು ದೊಡ್ಡ ವಿವಾದಕ್ಕೆ ಕಾರಣವಾಗುತ್ತದೆ.
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ಹೇಗೆ ವರ್ತಿಸಬೇಕು ಎಂಬು ದಕ್ಕೆ ಕೆಲವು ಮಾರ್ಗಸೂಚಿಗಳಿವೆ. ನ್ಯಾಯಾಧೀಶರು ತಮ್ಮ ವೈಯಕ್ತಿಕ ನಂಬಿಕೆ ಗಳನ್ನು ಮರೆತು ಸಂವಿಧಾನದ ಚೌಕಟ್ಟಿನೊಳಗೆ ಮಾತನಾಡಬೇಕು. ನ್ಯಾಯಾಧೀಶರು ಮಾತನಾಡುವುದು ಅವರ ಬಾಯಿಂದಲ್ಲ,
ಬದಲಿಗೆ ಅವರು ಬರೆಯುವ ‘ತೀರ್ಪು’ಗಳ ಮೂಲಕ. ತೀರ್ಪಿನ ಹೊರಗಿನ ಮಾತುಗಳಿಗೆ ಕಾನೂನಿನಲ್ಲಿ ಬೆಲೆಯಿಲ್ಲದಿದ್ದರೂ, ಅವು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರುವುದರಿಂದ ನ್ಯಾಯಾಧೀಶರ ಪ್ರತಿಯೊಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವು ನ್ಯಾಯಾಧೀಶರು ವಕೀಲರನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋಗಳು ಜನರಿಗೆ ‘ಸಿಂಗಂ’ ಸ್ಟೈಲ್‌ನಲ್ಲಿ ಖುಷಿ ಕೊಡಬಹುದು. ಆದರೆ ನ್ಯಾಯಾಧೀಶರು ಹೀಗೆ ‘ಪಬ್ಲಿಕ್ ಹೀರೋ’ ಆಗಲು ಹವಣಿಸು ವುದು ಅಥವಾ ಲೂಸ್ ಕ್ಯಾನನ್ ಆಗಿ ವರ್ತಿಸುವುದು ನ್ಯಾಯದಾನದ ಪ್ರಕ್ರಿಯೆಗೆ ಮಾರಕ. ಉನ್ನತ ನ್ಯಾಯಾಲಯಗಳು ಇಂಥ ಸಂದರ್ಭಗಳಲ್ಲಿ ಮಧ್ಯಪ್ರವೇಶಿಸಿ, ನ್ಯಾಯಾಧೀಶರು ತಮ್ಮ ಮೌಖಿಕ ಅವಲೋಕನಗಳಲ್ಲಿ ‘ಸಂಯಮ ಹೊಂದಿರಬೇಕು’ ಎಂದು ಹಲವು ಬಾರಿ ಎಚ್ಚರಿಸಿವೆ.
ಬ್ರಿಟಿಷ್ ನ್ಯಾಯಾಂಗದ ಇತಿಹಾಸದಲ್ಲಿ ಲೂಸ್ ಕ್ಯಾನನ್’ ಎನ್ನಬಹುದಾದ ನ್ಯಾಯಾ ಧೀಶರ ಬಗ್ಗೆ ಚರ್ಚಿಸುವಾಗ ಪ್ರಮುಖವಾಗಿ ನೆನಪಿಗೆ ಬರುವ ಹೆಸರು ಲಾರ್ಡ್ ಡೆನ್ನಿಂಗ್. ಇವರನ್ನು ಇಂಗ್ಲಿಷ್ ನ್ಯಾಯಾಂಗದ ಇತಿಹಾಸದ ಅತ್ಯಂತ ಪ್ರಭಾವಶಾಲಿ ಮತ್ತು ವಿವಾದಾ ತ್ಮಕ ನ್ಯಾಯಾಧೀಶರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ಲಾರ್ಡ್ ಡೆನ್ನಿಂಗ್ ಅವರ ಮಾತುಗಳು ಮತ್ತು ತೀರ್ಪುಗಳ ಶೈಲಿಯು ಎಷ್ಟು ವಿಶಿಷ್ಟ ವಾಗಿತ್ತೆಂದರೆ, ಅವು ಅವರನ್ನು ಜನಪ್ರಿಯಗೊಳಿಸಿದವು ಮತ್ತು ಅಂತಿಮವಾಗಿ ಅವರ ವೃತ್ತಿಜೀವನದ ಅಂತ್ಯಕ್ಕೂ ಕಾರಣವಾದವು. ಲಾರ್ಡ್ ಡೆನ್ನಿಂಗ್ (1899-1999) ಅವರು ಬ್ರಿಟಿಷ್ ಮೇಲ್ಮನವಿ ನ್ಯಾಯಾಲಯದ (Court of Appeal) ‘ಮಾಸ್ಟರ್ ಆಫ್ ದಿ ರೋಲ್ಸ್’ ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿದವರು.
ಇವರನ್ನು ‘ಜನರ ನ್ಯಾಯಾಧೀಶ’ ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಇವರು ಕಾನೂನಿನ ತಾಂತ್ರಿಕತೆಗಿಂತ ‘ನ್ಯಾಯ’ಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ, ಇವರ ಅತಿಯಾದ ಮಾತು ಮತ್ತು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವ ಹವ್ಯಾಸವು ಇವರನ್ನು ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿಸಿತ್ತು.
ಇವರು ತೀರ್ಪುಗಳನ್ನು ಸಾಮಾನ್ಯ ಕಾನೂನು ಭಾಷೆಯಲ್ಲಿ ಬರೆಯುತ್ತಿರಲಿಲ್ಲ. ಬದಲಿಗೆ ಒಂದು ಕಾದಂಬರಿಯಂತೆ ಆರಂಭಿಸುತ್ತಿದ್ದರು. ಉದಾಹರಣೆಗೆ, ಅವರ ಒಂದು ಪ್ರಸಿದ್ಧ ತೀರ್ಪಿನ ಆರಂಭ ಹೀಗಿತ್ತು - ‘ಅದು ಬೇಸಿಗೆಯ ಸಂಜೆ, ಹಕ್ಕಿಗಳು ಗೂಡು ಸೇರುವ ಹೊತ್ತು. ಹಳ್ಳಿಯ ಮೈದಾನದಲ್ಲಿ ಕ್ರಿಕೆಟ್ ಆಡಲಾಗುತ್ತಿತ್ತು...’ ಇಂಥ ಶೈಲಿಯು ಕಾನೂನು ಪಂಡಿತ ರಿಗೇ ಅಚ್ಚರಿ ತರುತ್ತಿತ್ತು.
ಲಾರ್ಡ್ ಡೆನ್ನಿಂಗ್ ಅವರು ನ್ಯಾಯಾಲಯದ ಒಳಗೂ-ಹೊರಗೂ ತಮ್ಮ ಅಭಿಪ್ರಾಯ ಗಳನ್ನು ಮುಚ್ಚುಮರೆಯಿಲ್ಲದೇ ಹೇಳುತ್ತಿದ್ದರು. ಇದು ಹಲವು ಬಾರಿ ಜನಾಂಗೀಯ ಅಥವಾ ಲಿಂಗ ತಾರತಮ್ಯದಂತೆ ಭಾಸವಾಗುತ್ತಿತ್ತು. ಅವರ ಅತಿಯಾದ ಮಾತುಗಳು ಬ್ರಿಟಿಷ್ ಸರಕಾರ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಮುಜುಗರ ತರುತ್ತಿದ್ದವು.
‘ಲಾರ್ಡ್ ಡೆನ್ನಿಂಗ್ ಮಾತಾಡಿದರೆ, ಥೇಮ್ಸ್ ನದಿ ಹರಿದಂತೆ’ ಎಂದು ಜನ ತಮಾಷೆ ಮಾಡು ತ್ತಿದ್ದರು. ಕೋರ್ಟ್ ಹಾಲಿನಲ್ಲಿ ಅವರು ವಕೀಲರಿಗೆ ಮಾತಾಡಲು ಆಸ್ಪದ ನೀಡುತ್ತಿರಲಿಲ್ಲ. ಆ ಪರಿ ಮಾತಾಡುತ್ತಿದ್ದರು. ಕೆಲವೊಮ್ಮೆ ತಾಸು ಗಟ್ಟಲೆ ಮಾತಾಡುತ್ತಿದ್ದರು. ಅದರಲ್ಲೂ ಕೋರ್ಟಿನಲ್ಲಿದ್ದವರೆಲ್ಲ ತನ್ನ ಮಾತನ್ನು ಕೇಳಲು ಬಂದಿದ್ದಾರೆಂದೇ ಭಾವಿಸುತ್ತಿದ್ದರು. ಇದು ಕೋತಿಗೆ ಮದ್ಯ ಕುಡಿಸಿದಂತಾಗುತ್ತಿತ್ತು.
ಕೋರ್ಟ್ ಹಾಲ್‌ನಲ್ಲಿದ್ದವರೆಲ್ಲ ತಲೆ ತಲೆ ಚಚ್ಚಿಕೊಳುತ್ತಿದ್ದರು. ಆದರೆ ಲಾರ್ಡ್ ಡೆನ್ನಿಂಗ್ ‘ಕೊರೆತ’ ನಿಲ್ಲುತ್ತಿರಲಿಲ್ಲ. ಎಷ್ಟೆಂದರೂ ಜಡ್ಜ್ ತಾನೇ ಎಂದು ಸುಮ್ಮನಾಗುತ್ತಿದ್ದರು. ಆದರೆ ಎಲ್ಲರೂ ತನ್ನ ಬುದ್ಧಿವಂತಿಕೆಯನ್ನು ಪ್ರಶಂಸಿಸುತ್ತಿದ್ದಾರೆ ಎಂದು ಅವರು ತಮ್ಮಷ್ಟಕ್ಕೇ ಉಬ್ಬಿಹೋಗುತ್ತಿದ್ದರು. ಆದರೆ ಅಲ್ಲಿದ್ದವರೆಲ್ಲತಮಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂಬ ಕನಿಷ್ಠ ಪ್ರಜ್ಞೆಯೂ ಅವರಲ್ಲಿ ಇರುತ್ತಿರಲಿಲ್ಲ.
ಲಾರ್ಡ್ ಡೆನ್ನಿಂಗ್ ಅವರ ‘ಲೂಸ್ ಕ್ಯಾನನ್’ ಸ್ವಭಾವವು ಅವರ ನಿವೃತ್ತಿಗೆ ಕಾರಣ ವಾಯಿತು. 1982ರಲ್ಲಿ ಅವರು ‘What Next in the Law’ ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕದಲ್ಲಿ ಅವರು ಬ್ರಿಟಿಷ್ ಜ್ಯೂರಿ ವ್ಯವಸ್ಥೆಯ ಬಗ್ಗೆ ಬರೆಯುತ್ತಾ, ಕಪ್ಪುವರ್ಣೀಯರು ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯ ಜ್ಯೂರಿಗಳಲ್ಲಿ ಇರಬಾರದು, ಏಕೆಂದರೆ ಅವರು ಬ್ರಿಟಿಷ್ ಸಂಸ್ಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ‘ಪೂರ್ವಗ್ರಹಪೀಡಿತ ರಾಗಿರುತ್ತಾರೆ’ ಎಂಬ ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡಿ ಬಿಟ್ಟರು.
ಈ ಒಂದು ಹೇಳಿಕೆಯು ಇಡೀ ಬ್ರಿಟನ್‌ನಲ್ಲಿ ಸಂಚಲನವನ್ನೇ ಮೂಡಿಸಿತು. ವಕೀಲರ ಸಂಘಗಳು ಮತ್ತು ಸಾರ್ವಜನಿಕರು ಅವರ ವಿರುದ್ಧ ತಿರುಗಿ ಬಿದ್ದರು. ಅವರ ಈ ‘ಫಿಲ್ಟರ್ ಇಲ್ಲದ’ ಮಾತುಗಳು ಜನಾಂಗೀಯ ದ್ವೇಷವನ್ನು ಪ್ರಚೋದಿಸುತ್ತವೆ ಎಂಬ ಆರೋಪ ಕೇಳಿ ಬಂತು.
ಇದರಿಂದಾಗಿ ಅವರು ತಮ್ಮ ಎಂಬತ್ತಮೂರನೇ ವಯಸ್ಸಿನಲ್ಲಿ ಅನಿವಾರ್ಯವಾಗಿ ನಿವೃತ್ತಿ ಘೋಷಿಸಬೇಕಾಯಿತು. ಇದೇ ಸಂದರ್ಭದಲ್ಲಿ ನೆನಪಾಗುವ ಮತ್ತೊಬ್ಬ ಬ್ರಿಟಿಷ್ ಮಾಜಿ ಮುಖ್ಯ ನ್ಯಾಯಾಧೀಶರೆಂದರೆ, ಲಾರ್ಡ್ ಪಾರ್ಕರ್. ಇವರನ್ನೂ ಜನ ‘ಲೂಸ್ ಕ್ಯಾನನ್’ ಎನ್ನುತ್ತಿದ್ದರು.
ವಿಚಾರಣೆ ನಡೆಯುವಾಗ ವಕೀಲರಿಗೆ ಸರಿಯಾಗಿ ಮಾತನಾಡಲು ಬಿಡದೇ, ಸಂಬಂಧ-ಸೂತ್ರಗಳಿಲ್ಲದ ಮಾತಾಡಿ, ಪ್ರತಿಹಂತದಲ್ಲೂ ಮಧ್ಯಪ್ರವೇಶಿಸಿ ತಾವೇ ಹೆಚ್ಚು ಮಾತನಾಡು ತ್ತಿದ್ದರು. ಬ್ರಿಟಿಷ್ ನ್ಯಾಯಾಂಗದಲ್ಲಿ ಒಂದು ಪ್ರಸಿದ್ಧ ಮಾತಿದೆ - ‘ಒಬ್ಬ ನ್ಯಾಯಾಧೀಶನು ಮಧ್ಯಪ್ರವೇಶಿಸಿ ಅತಿಯಾಗಿ ಮಾತನಾಡುತ್ತಿದ್ದರೆ, ಅವನು ನ್ಯಾಯದ ದಾರಿಗೆ ಮಾರಕ.’
ಬ್ರಿಟಿಷ್ ನ್ಯಾಯಾಂಗವು ಇಂಥ ಪರಿಸ್ಥಿತಿಗಳನ್ನು ನಿಭಾಯಿಸಲು ‘Judicial Conduct Investigations Office’ ಎಂಬ ವ್ಯವಸ್ಥೆಯನ್ನು ಹೊಂದಿದೆ. ಯಾವುದೇ ನ್ಯಾಯಾಧೀಶರು ಲೂಸ್ ಕ್ಯಾನನ್ನಂತೆ ವರ್ತಿಸಿದರೆ ಅಥವಾ ಅಸಂಬದ್ಧವಾಗಿ ಮಾತನಾಡಿದರೆ, ಅವರ ವಿರುದ್ಧ ದೂರು ನೀಡಬಹುದು.
ಲಾರ್ಡ್ ಡೆನ್ನಿಂಗ್ ಅವರಂಥ ದಿಗ್ಗಜರೇ ತಮ್ಮ ಮಾತಿನಿಂದಾಗಿ ಅಧಿಕಾರ ಕಳೆದುಕೊಳ್ಳ ಬೇಕಾಯಿತು ಎಂದರೆ, ಬ್ರಿಟಿಷ್ ವ್ಯವಸ್ಥೆಯಲ್ಲಿ ಮಾತಿನ ಸಂಯಮ’ಕ್ಕೆ ಎಷ್ಟು ಬೆಲೆ ಇದೆ ಎಂದು ಅರ್ಥವಾಗುತ್ತದೆ. ಲಾರ್ಡ್ ಡೆನ್ನಿಂಗ್ ಅವರು ಜಗತ್ತಿನ ಶ್ರೇಷ್ಠ ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದರೂ, ಅವರ ಅತಿಯಾದ ಮಾತು’ ಮತ್ತು ನಿರ್ಭಯ ಅಭಿಪ್ರಾಯ’ಗಳು ಅವರನ್ನು ಒಬ್ಬ ‘ಲೂಸ್ ಕ್ಯಾನನ್’ ಎಂಬಂತೆ ಬಿಂಬಿಸಿದವು.
ಇದು ನಮಗೆ ಕಲಿಸುವ ಪಾಠವೇನೆಂದರೆ, ಅಧಿಕಾರ ದೊಡ್ಡದಾದಷ್ಟೂ, ನಾಲಿಗೆಯ ಮೇಲಿನ ಹತೋಟಿ ಅಷ್ಟೇ ಬಿಗಿಯಾಗಿರಬೇಕು. 1920 ಮತ್ತು 30ರ ದಶಕದಲ್ಲಿ ಇಂಗ್ಲೆಂಡ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ‘ಲಾರ್ಡ್ ಹ್ಯೂವಾರ್ಟ್ ಕೂಡ ಪರಮವಾಚಾಳಿ’ ಎಂಬ ಗೇಲಿಗೆ ಪಾತ್ರರಾಗಿದ್ದರು.
ಇವರು ವಿಚಾರಣೆ ನಡೆಯುವಾಗ ವಕೀಲರಿಗೆ ವಾದ ಮಂಡಿಸಲು ಬಿಡದೆ ಸದಾ ಮಧ್ಯ ಪ್ರವೇಶಿಸುತ್ತಿದ್ದರು. ಒಮ್ಮೆ ಒಬ್ಬ ವಕೀಲರು ವಾದ ಮಂಡಿಸುವಾಗ ಹ್ಯೂವಾರ್ಟ್ ಸತತ ವಾಗಿ ಪ್ರಶ್ನೆಗಳನ್ನು ಕೇಳಿ ಅಡ್ಡಿಪಡಿಸಿದರು. ಆಗ ವಕೀಲರು ಬೇಸತ್ತು, ‘ಸ್ವಾಮಿ, ನೀವು ನ್ಯಾಯಾಧೀಶರಾಗಿ ಕೇಳಿಸಿಕೊಳ್ಳುವ ಕೆಲಸ ಮಾಡಬೇಕು, ವಕೀಲರಾಗಿ ವಾದಿಸುವ ಕೆಲಸ ವನ್ನಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು.
ಅಷ್ಟಾಗಿಯೂ ಅವರಿಗೆ ಅರ್ಥವಾಗಲಿಲ್ಲ. ಲಾರ್ಡ್ ಹ್ಯೂವಾರ್ಟ್ ವಾಚಾಳಿತನ ಮುಂದು ವರಿದಾಗ, ವಕೀಲರೊಬ್ಬರು ಕೋರ್ಟ್ ಹಾಲ್‌ನಲ್ಲಿ ಜೋರಾಗಿ ಎಲ್ಲರಿಗೂ ಕೇಳಿಸುವ ಹಾಗೆ ಆಕಳಿಸಿಬಿಟ್ಟಿದ್ದರು. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧವಾದ ಪ್ರಕರಣವನ್ನು ಹೇಳಬೇಕು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಸ್ಯಾಮ್ಯುಯೆಲ್ ಚೇಸ್‌ಗೂ ಬಾಯಿ ಭೇದಿ.
ಮಾತಾಡಲಾರಂಭಿಸಿದರೆ ಯಾವಾಗ ನಿಲ್ಲಿಸುತ್ತಾರೆ ಎಂಬುದು ಗೊತ್ತಾಗುತ್ತಿರಲಿಲ್ಲ. ಸ್ಯಾಮ್ಯುಯೆಲ್ ಚೇಸ್ ಮಾತಾಡಲಾರಂಭಿಸಿದರೆ, He is literally chasing us ಚೇಸ್ ಅವರು ಗ್ರ್ಯಾಂಡ್ ಜೂರಿಯ ಮುಂದೆ ಸುದೀರ್ಘವಾದ ರಾಜಕೀಯ ಭಾಷಣ ಮಾಡಿದರು. ಅವರು ಅಂದಿನ ಸರಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದರು.
ಅಷ್ಟೇ ಅಲ್ಲ, ನ್ಯಾಯಪೀಠದ ಮೇಲೆ ಕುಳಿತು ಒಬ್ಬ ಸಾಮಾನ್ಯ ರಾಜಕಾರಣಿಯಂತೆ ಲೂಸ್ ಕ್ಯಾನನ್ ಆಗಿ ವರ್ತಿಸಿದರು. ಅಮೆರಿಕದ ಇತಿಹಾಸದಲ್ಲಿ ಇಂಪೀಚ್‌ಮೆಂಟ್ ಎದುರಿಸಿದ ಏಕೈಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇವರೇ. ನ್ಯಾಯಾಧೀಶರು ‘ಪಕ್ಷಪಾತ’ವಿಲ್ಲದ ವ್ಯಕ್ತಿಯಾಗಿರಬೇಕು ಎಂಬ ತತ್ವವನ್ನು ಇವರು ಗಾಳಿಗೆ ತೂರಿದ್ದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೂ ‘ಅತಿಯಾಗಿ ಮಾತನಾಡುವ’ ಅಥವಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾದ ಅನೇಕ ನ್ಯಾಯಾಧೀಶ ರಿದ್ದಾರೆ. ಇವರನ್ನು ಕೆಲವರು ‘ಧೈರ್ಯವಂತ’ರು ಎಂದು ಕರೆದರೆ, ಕಾನೂನು ತಜ್ಞರು ಇವರನ್ನು ‘ಲೂಸ್ ಕ್ಯಾನನ್’ ಅಥವಾ ಸಂಯಮವಿಲ್ಲದ ನ್ಯಾಯಾಧೀಶರು ಎಂದು ಟೀಕಿಸಿದ್ದಾರೆ. ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ದೊಡ್ಡ ‘ಲೂಸ್ ಕ್ಯಾನನ್’ ಎಂದರೆ ಜಸ್ಟಿಸ್ ಕರ್ಣನ್.
ಇವರು ಕಲ್ಕತ್ತಾ ಮತ್ತು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು. ಇವರು ತಮ್ಮ ಸಹೋದ್ಯೋಗಿ ನ್ಯಾಯಾಧೀಶರ ಮೇಲೆಯೇ ಭ್ರಷ್ಟಾಚಾರದ ಆರೋಪ ಹೊರಿಸಿದರು. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೇ ತಮ್ಮ ಮನೆಯಿಂದಲೇ ‘ಜೈಲು ಶಿಕ್ಷೆ’ ವಿಧಿಸಿ ಆದೇಶ ಹೊರಡಿಸಿದ್ದರು! ಇವರ ನಿಯಂತ್ರಣವಿಲ್ಲದ ಮಾತು ಮತ್ತು ನಡೆವಳಿಕೆಯಿಂದಾಗಿ ಇತಿಹಾಸದ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಒಬ್ಬ ಹಾಲಿ ನ್ಯಾಯಾಧೀಶರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು.
ಇವರು ನ್ಯಾಯಾಂಗದ ಘನತೆಗೆ ಧಕ್ಕೆ ತಂದ ಲೂಸ್ ಕ್ಯಾನನ್ ಆಗಿ ಗುರುತಿಸಿಕೊಂಡರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಮಾರ್ಕಂಡೇಯ ಕಟ್ಜು ಬಾಯಿ ಬಡಕತನಕ್ಕೆ ಹೆಸರುವಾಸಿ. ‘ಶೇ.ತೊಂಬತ್ತರಷ್ಟು ಭಾರತೀಯರು ಮೂರ್ಖರು’, ‘ಮಹಾತ್ಮ ಗಾಂಧಿ ಬ್ರಿಟಿಷ್ ಏಜೆಂಟ್’ ಎಂಬಂಥ ಹೇಳಿಕೆಗಳು ಅವರ ಲೂಸ್ ಕ್ಯಾನನ್ ಗುಣಕ್ಕೆ ನಿದರ್ಶನ.
ಹಾಗೆ ರಾಜಸ್ಥಾನ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಜಸ್ಟಿಸ್ ಮಹೇಶ್ ಚಂದ್ರ ಶರ್ಮ ತಮ್ಮ ನಿವೃತ್ತಿಯ ದಿನ ನೀಡಿದ ಒಂದು ಹೇಳಿಕೆ ಇಡೀ ದೇಶದಲ್ಲಿ ನಗೆಪಾಟಲಿಗೀಡಾಯಿತು. ‘ನವಿಲುಗಳು ಲೈಂಗಿಕ ಸಂಪರ್ಕ ಬೆಳೆಸುವುದಿಲ್ಲ, ಬದಲಿಗೆ ಗಂಡು ನವಿಲಿನ ಕಣ್ಣೀರನ್ನು ಕುಡಿಯುವ ಮೂಲಕ ಹೆಣ್ಣು ನವಿಲು ಗರ್ಭಧರಿಸುತ್ತದೆ’ ಎಂದು ಅವರು ರಾಷ್ಟ್ರೀಯ ವಾಹಿನಿಯೊಂದರಲ್ಲಿ ಹೇಳಿದರು.
ವಿಜ್ಞಾನಕ್ಕೆ ವಿರುದ್ಧವಾದ ಇಂಥ ಮಾತುಗಳನ್ನು ಒಬ್ಬ ಜವಾಬ್ದಾರಿಯುತ ನ್ಯಾಯಾ ಧೀಶರು ಆಡುವುದು ಅವರ ಬೌದ್ಧಿಕ ಸಂಯಮದ ಕೊರತೆಯನ್ನು ಎತ್ತಿ ತೋರಿಸಿತು. ಅವರ ಬಾಯಿಚಟವೇ ಅವರಿಗೆ ಮುಳುವಾಯಿತು.
‘ನ್ಯಾಯಾಧೀಶರ ಮಾತು ಶಾಸನ’ವಾಗಬೇಕೇ ಹೊರತು, ಶಬ್ದಮಾಲಿನ್ಯ’ವಾಗಬಾರದು. ಭಾರತದಂಥ ದೊಡ್ಡ ಪ್ರಜಾಪ್ರಭುತ್ವದಲ್ಲಿ ನ್ಯಾಯಾಧೀಶರು ಲೂಸ್ ಕ್ಯಾನನ್ ಆದರೆ, ಜನಸಾಮಾನ್ಯರಿಗೆ ಕಾನೂನಿನ ಮೇಲಿರುವ ಭಯ ಮತ್ತು ಭಕ್ತಿ ಎರಡೂ ಕಡಿಮೆ ಯಾಗು ತ್ತದೆ. ಅತಿಯಾಗಿ ಮಾತಾಡುವ ನ್ಯಾಯಮೂರ್ತಿಗಳನ್ನು ‘ಅವರು ಜಾಸ್ತಿ ಮಾತಾಡ ಬಹುದು, ಆದರೆ ಬುದ್ಧಿವಂತ ಕಣ್ರೀ’ ಎಂದು ಹೇಳುವುದನ್ನು ಕೇಳುತ್ತೇವೆ.
ನ್ಯಾಯಮೂರ್ತಿಯೊಬ್ಬ ಅತಿಯಾಗಿ ಮಾತಾಡುವುದು, ಭಯೋತ್ಪಾದಕನೊಬ್ಬ ತನ್ನಲ್ಲಿ ರುವ ಬಂದೂಕಿನಲ್ಲಿ ಗುಂಡುಗಳಿವೆ ಎಂದು ಮನಸ್ಸಿಗೆ ಬಂದಂತೆ ಹಾರಿಸುವುದು ಎರಡೂ ಒಂದೇ! ಕಳೆದ ಮೂರು ದಶಕಗಳಿಂದ ನೂರಾರು ಪ್ರಕರಣಗಳಿಗೆ ಸಂಬಂಧಿಸಿ ದಂತೆ ನ್ಯಾಯಾಲಯಕ್ಕೆ ಎಡತಾಕಿರುವ ನಾನು, ಮೊನ್ನೆ ಅಂಥದ್ದೇ ಪ್ರಕರಣ ಸಂಬಂಧ ಧಾರವಾಡ ಹೈಕೋರ್ಟಿಗೆ ಹೋಗಿದ್ದೆ. ವಾಪಸ್ ಬರುವಾಗ ಈ ಎಲ್ಲ ಸಂಗತಿಗಳು ನೆನಪಾದವು.