ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Karaveeraprabhu Kyalakonda Column: ಅಸೂಯೆಯ ಅಳಿವಿನಿಂದ ಆರೋಗ್ಯ- ಆನಂದ- ಅಭಿವೃದ್ಧಿ

ಅಸೂಯೆ ಎಂಬ ಶತ್ರು: ನಮ್ಮ ಸಹಪಾಠಿಗಳು ಅಥವಾ ಸಹೋದ್ಯೋಗಿಗಳ ಮೇಲೆ ಸಾಮಾನ್ಯ ವಾಗಿ ಈ ಅಸೂಯೆ ಉಂಟಾಗುತ್ತದೆ. ನಮ್ಮ ಜೀವನದ ಅವಧಿ ಕಿರಿದಾದುದು. ಹೀಗಿರುವಾಗ ವಿನಾಕಾರಣ ಅಸೂಯೆಗೆ ಒಡ್ಡಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುವುದು ವಿಪರ್ಯಾಸ ವಲ್ಲವೇ? ಅಸೂಯೆ ಎಂಬ ಕಾಯಿಲೆ ಬಹುತೇಕ ಎಲ್ಲರನ್ನೂ ಒಂದಲ್ಲಾ ಒಂದು ಹಂತದಲ್ಲಿ ಕಾಡುವುದು ನಿಜ.

ಅಸೂಯೆಯ ಅಳಿವಿನಿಂದ ಆರೋಗ್ಯ- ಆನಂದ- ಅಭಿವೃದ್ಧಿ

-

Ashok Nayak
Ashok Nayak Mar 17, 2026 11:02 AM

ಡಾ.ಕರವೀರಪ್ರಭು ಕ್ಯಾಲಕೊಂಡ

ಈ ಪ್ರಪಂಚದಲ್ಲಿ ಯಾರೇನೂ ಶಾಶ್ವತವಲ್ಲ. ಆದ್ದರಿಂದ, ಇರುವಷ್ಟು ದಿನವೂ ಬದುಕನ್ನು ಸಂತಸದಿಂದ ನಡೆಸುವ ಬಗೆಯನ್ನು ಅರಿಯ ಬೇಕಾದ್ದು ಮುಖ್ಯ. ಹಾಗಾದರೆ ಸಹಜ-ಸಂತಸವನ್ನು ರೂಢಿಸಿಕೊಳ್ಳುವುದು ಹೇಗೆ?ಹಾಗೆ ನೋಡಿದರೆ, ಸಹಜ ಸ್ಥಿತಿಯಲ್ಲಿ ವ್ಯಕ್ತಿಯ ಮನದಲ್ಲಿ ಸಂತಸ ತುಂಬಿರುತ್ತದೆ.

ಇದಕ್ಕೆ ಪುರಾವೆ ಬೇಕಿದ್ದರೆ ಪುಟ್ಟ ಮಗುವನ್ನು ನೋಡಬೇಕು. ಆ ಮಗುವಿನಲ್ಲಿ ಅದೆಂಥಾ ನಗು, ಅದೆಷ್ಟು ಸಂತಸ! ಹಸಿದರೆ ಮಾತ್ರವೇ ಅದು ಅಳುತ್ತದೆ ಇಲ್ಲವೇ ಚೀರುತ್ತದೆ. ಆದರೆ ನಾವು ಬೆಳೆಯುತ್ತಾ ಹೋದಂತೆ ಆ ಮುಗ್ಧ ಮತ್ತು ನಿಷ್ಕಳಂಕ ನಗುವನ್ನು ಕಳೆದುಕೊಳ್ಳುವ ಹಲವು ವಿಧಾನಗಳನ್ನು ಕರಗತ ಮಾಡಿಕೊಳ್ಳುತ್ತೇವೆ.

“ನಿಮ್ಮ ಆಲೋಚನಾ ಶಕ್ತಿಯನ್ನು ಹೊಟ್ಟೆಕಿಚ್ಚು ಬದಲಾಯಿಸುತ್ತದೆ; ನಿಮ್ಮಲ್ಲಿರುವ ಗುಣ, ಸಂಪತ್ತುಗಳಿಂದ ಸಂತೋಷ ಪಡುವ ಬದಲಾಗಿ, ಬೇರೆಯವರಲ್ಲಿರುವ ಗುಣ-ಸಂಪತ್ತು ಗಳನ್ನು ಆಶಿಸುತ್ತೀರಿ. ಇದುವೇ ದುಃಖದ ಮೂಲ" ಎಂದಿದ್ದಾರೆ ತತ್ವಜ್ಞಾನಿ ಬರ್ಟ್ರೆಂಡ್ ರಸೆಲ್.

ಇದನ್ನೂ ಓದಿ: Dr. Karaveeraprabhu Kyalakonda Column: ಭಾವೈಕ್ಯತೆಯ ಬನಶಂಕರಿ ಯಾತ್ರೆ

ಅಸೂಯೆ ಎಂಬ ಶತ್ರು: ನಮ್ಮ ಸಹಪಾಠಿಗಳು ಅಥವಾ ಸಹೋದ್ಯೋಗಿಗಳ ಮೇಲೆ ಸಾಮಾನ್ಯವಾಗಿ ಈ ಅಸೂಯೆ ಉಂಟಾಗುತ್ತದೆ. ನಮ್ಮ ಜೀವನದ ಅವಧಿ ಕಿರಿದಾದುದು. ಹೀಗಿರುವಾಗ ವಿನಾಕಾರಣ ಅಸೂಯೆಗೆ ಒಡ್ಡಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳು ವುದು ವಿಪರ್ಯಾಸವಲ್ಲವೇ? ಅಸೂಯೆ ಎಂಬ ಕಾಯಿಲೆ ಬಹುತೇಕ ಎಲ್ಲರನ್ನೂ ಒಂದಲ್ಲಾ ಒಂದು ಹಂತದಲ್ಲಿ ಕಾಡುವುದು ನಿಜ.

ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಬಹಳ ಪ್ರಯತ್ನ ಬೇಕು. ಯಾರು ಅಸೂಯೆಯನ್ನು ಮೆಟ್ಟಿ ನಿಲ್ಲುತ್ತಾರೋ ಅವರು ಬದುಕನ್ನು ನಿಜವಾಗಿಯೂ ಸಂತಸದಿಂದ ಕಳೆಯುತ್ತಾರೆ, ಯಶಸ್ಸನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಅಸೂಯೆಯನ್ನು ಗೆದ್ದವರಿಗೆ ಕಾಯಿಲೆಗಳು ಬಾಧಿಸುವುದಿಲ್ಲ. ಒಂದೊಮ್ಮೆ ಯಾವು ದಾದರೊಂದು ದೀರ್ಘಾವಧಿ ಕಾಯಿಲೆಯು ಅಮರಿಕೊಂಡಿದ್ದರೂ, ಅಸೂಯೆಯನ್ನು ಇಲ್ಲವಾಗಿಸಿಕೊಂಡಾತನು ಬದುಕನ್ನು ಆನಂದದಿಂದ ಕಳೆಯುವುದಂತೂ ಖಂಡಿತ. ನಮ್ಮ ಇಂದಿನ ಶಿಕ್ಷಣ ಪದ್ಧತಿಯು ಎಳೆಯ ವಯಸ್ಸಿನ ಮಕ್ಕಳಲ್ಲಿ ಅಸೂಯೆಯ ಬೀಜ ಬಿತ್ತಿ, ಅವಕ್ಕೆ ಬೇಕಾದ ಪೌಷ್ಟಿಕ ಆಹಾರಗಳನ್ನು ಕೊಟ್ಟು ಬೆಳೆಸುತ್ತಿರುವುದು ಬಹಳ ದುಃಖದ ಸಂಗತಿ.

ಹೀಗಾಗಿ ಪ್ರಾಥಮಿಕ ವಿದ್ಯಾಭ್ಯಾಸದ ಹಂತದಿಂದಲೇ ರ‍್ಯಾಂಕ್‌ನ ಗೀಳು ಎಳೆಯ ಮಕ್ಕಳನ್ನು ಕಾಡತೊಡಗುತ್ತದೆ. ರ‍್ಯಾಂಕು, ಅಂಕಗಳು, ಜೀವನದ ಸ್ಥಾನಮಾನ ಇತ್ಯಾದಿಗಳು ಮಕ್ಕಳ ಮನದ ಆನಂದವನ್ನು ತೊಲಗಿಸಿ ಅಸೂಯೆಯನ್ನು ಬೆಳೆಸುತ್ತವೆ. ಸಂತಸವೇ ಆರೋಗ್ಯದ ಮೂಲ: ಬದುಕಿನಲ್ಲಿ ಸಂತಸ ನಮ್ಮದಾಗಬೇಕೆಂದರೆ, ನಮಗಿಂತ ಹೆಚ್ಚು ಕಷ್ಟದಲ್ಲಿ ಇರುವವರನ್ನು ನೋಡಿ ತಿಳಿಯುವ ಪ್ರಯತ್ನ ಮಾಡಬೇಕು.

‘ನಮಗಿಂತ ಸಂಪಾದಿಸುವವರು ಕೆಲವೇ ಮಂದಿ, ಆದರೆ ನಮಗಿಂತ ಕೆಳಗಿನ ಮಟ್ಟದಲ್ಲಿ ಜೀವನ ಮಾಡುವವರ ಸಹಸ್ರಾರು ಮಂದಿ, ಹೊಟ್ಟೆಗೆ ಹಿಟ್ಟಿಲ್ಲದೆಯೇ ಸಾಯುವವರು ಲಕ್ಷಾಂತರ ಮಂದಿ’ ಎಂಬ ಮಾತು ವಾಸ್ತವವೂ ಹೌದು.

ಕಾಲಿನಲ್ಲಿ ನೋವಿದ್ದವನೊಬ್ಬ, ಕಾಲುಗಳೇ ಇಲ್ಲದ ವ್ಯಕ್ತಿಯೊಬ್ಬನನ್ನು ಕಂಡು ತನ್ನ ನೋವನ್ನು ಮರೆತನಂತೆ. ನಾವೆಷ್ಟೇ ಬುದ್ಧಿವಂತರಾಗಿರಲಿ, ಸಿರಿವಂತರಾಗಿರಲಿ, ಬಲಾಢ್ಯ ರಾಗಿರಲಿ, ಈ ವಿಷಯಗಳಲ್ಲಿ ನಮಗಿಂತ ಮೇಲಿರುವವರು ಇರುವುದು ಖಂಡಿತ. ಹಾಗಂತ ಅಸೂಯೆಪಟ್ಟರೆ, ನಮ್ಮ ಸಂತಸಕ್ಕೆ ನಾವೇ ಸಂಚಕಾರವನ್ನು ತಂದುಕೊಂಡಂತೆ. ಪರರ ಸೇವೆ, ಸಹಾನುಭೂತಿ ಮತ್ತು ಸರ್ವರಲ್ಲೂ ಪ್ರೀತಿ ತೋರುವಿಕೆ ಮುಂತಾದ ಗುಣ-ವೈಶಿಷ್ಟ್ಯ ಗಳು ಆರೋಗ್ಯವರ್ಧಕ ರಾಸಾಯನಿಕ ಪದಾರ್ಥಗಳನ್ನು ಹುಟ್ಟುಹಾಕಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಈಗ ಸಾಕಷ್ಟು ಪುರಾವೆಗಳಿವೆ.

ಅಂತೆಯೇ, ದ್ವೇಷ, ಅಸೂಯೆ, ಗರ್ವ, ಅಹಂಕಾರ ಮುಂತಾದ ನಕಾರಾತ್ಮಕ ಚಿಂತನೆಗಳು ಹಾನಿಕಾರಕ ರಾಸಾಯನಿಕಗಳಾಗಿ ಮಾರ್ಪಟ್ಟು, ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಹಾಳುಗೆಡವುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.

ಮೆಟ್ಟಿ ನಿಲ್ಲಬೇಕು: ’ಸಾವು ಇಲ್ಲದ ಮನೆಯಿಲ್ಲ’ ಎನ್ನುವ ಹಾಗೆ ಲವಲೇಶವಾದರೂ ಅಸೂಯೆ ಇಲ್ಲದ ವ್ಯಕ್ತಿ ಸಿಗುವುದು ವಿರಳ. ಅಸೂಯೆ ಎಂಬುದು ಮನುಷ್ಯನ ಮೂಲ ಭೂತ ಭಾವನೆಗಳಲ್ಲಿ ಒಂದೆಂದು ಮನೋವಿಜ್ಞಾನವೂ ಹೇಳುತ್ತದೆ. ಆದರೆ ಅದರ ಪ್ರಮಾಣವು ಹೆಚ್ಚಾಗಲು ಬಿಡಬಾರದು. ಅಸೂಯೆಯ ಭಾವವನ್ನು ಮೆಟ್ಟಬೇಕು, ಸಾಧನೆಗೆ ಅದನ್ನೊಂದು ಮೆಟ್ಟಿಲಾಗಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಸೂಯೆಯೇ ನಮ್ಮನ್ನು, ನಮ್ಮ ಮಾತು-ವರ್ತನೆಗಳನ್ನು ನಿಯಂತ್ರಿಸತೊಡಗುತ್ತದೆ. ಕೀಳರಿಮೆ ಮತ್ತು ಆತ್ಮವಿಶ್ವಾ ಸದ ಕೊರತೆಯು ಅಸೂಯೆಗೆ ತಾಯ್ನೆಲವಿದ್ದ ಹಾಗೆ. ನಮ್ಮ ಇತಿಮಿತಿಗಳನ್ನು ಒಪ್ಪಿ ಕೊಳ್ಳುವುದು ಮತ್ತು ಇನ್ನೊಬ್ಬರ ಸಾಮರ್ಥ್ಯವನ್ನು ಗೌರವಿಸುವುದು- ಈ ಎರಡೂ ಕಲೆತಾಗ ಅಸೂಯೆಯನ್ನು ಹತೋಟಿಯಲ್ಲಿಡಬಹುದು. ಆಗ ದೈಹಿಕ ಮತ್ತು ಮಾನಸಿಕ ಆರೋಗ್ಯವು ನಮ್ಮದಾಗುತ್ತದೆ.