Roopa Gururaj Column: ಶ್ರೀ ರಾಮನ ಭಕ್ತ ಹನುಮಂತನ ಅಪ್ರತಿಮ ಭಕ್ತಿಯ ಪರಾಕಾಷ್ಠೆ
ರಾಮನ ಹೆಸರಿಲ್ಲದ ವಸ್ತು ಅದೆಷ್ಟೇ ಬೆಲೆ ಬಾಳುವ ಚಿನ್ನವಾಗಿದ್ದರೂ ಅದು ನನಗೆ ಹೊರೆ ಮಾತ್ರ". ಸೀತೆಗೆ ಆಗ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಅವಳು ಅದನ್ನು ಶ್ರೀ ರಾಮನ ಹೆಸರಿನಿಂದ ನೀಡುವ ಬದಲು ‘ನನ್ನ ಉಡುಗೊರೆ’ ಎಂದು ನೀಡಿದ್ದಳು. ಆಗ ಸಭೆಯಲ್ಲಿದ್ದವ ರೊಬ್ಬರು “ಹನುಮಂತಾ, ಹಾಗಿದ್ದರೆ ನಿನ್ನ ದೇಹದೊಳಗೆ ರಾಮನಿದ್ದಾನೆಯೇ?" ಎಂದು ಕೇಳಿಬಿಟ್ಟರು.
-
ಒಂದೊಳ್ಳೆ ಮಾತು
ಅಯೋಧ್ಯೆಯ ರಾಜದರ್ಬಾರು ಅಂದು ಹಿಂದೆಂದೂ ಕಾಣದ ಸಡಗರಕ್ಕೆ ಸಾಕ್ಷಿಯಾಗಿತ್ತು. ರಾವಣನ ಸಂಹಾರದ ನಂತರ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವ ಮುಗಿದಿತ್ತು. ರಾಮನು ತನಗೆ ಸಹಾಯ ಮಾಡಿದ ಪ್ರತಿ ಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತಾ, ಅಮೂಲ್ಯವಾದ ಉಡುಗೊರೆಗಳನ್ನು ನೀಡುತ್ತಿದ್ದನು.
ಕೊನೆಯಲ್ಲಿ, ಪ್ರೀತಿಯ ಸಂಕೇತವಾಗಿ ಸೀತೆಯು ತನ್ನ ಕೊರಳಿನಲ್ಲಿದ್ದ ದಿವ್ಯವಾದ ಮುಕ್ತ ಹಾರವನ್ನು ತೆಗೆದಳು. ಸೀತೆಯು ಆ ಹಾರವನ್ನು ಹನುಮಂತನ ಕೈಗಿಟ್ಟು , “ಇದು ನಿನ್ನ ಭಕ್ತಿಗೆ ನನ್ನ ಉಡುಗೊರೆ" ಎಂದಳು. ಇಡೀ ಸಭೆ ‘ಹನುಮಂತನ ಭಾಗ್ಯವೇ ಭಾಗ್ಯ!’ ಎಂದು ಉದ್ಗರಿಸಿತು.
ಹಾರವನ್ನು ಸ್ವೀಕರಿಸಿದ ಹನುಮಂತನು ಅದನ್ನು ಕಣ್ಣಿಗೆ ಒತ್ತಿಕೊಂಡನು. ಆದರೆ ಮರು ಕ್ಷಣವೇ ಆತನ ನಡವಳಿಕೆ ಬದಲಾಯಿತು. ಹನುಮಂತನು ಹಾರದಿಂದ ಒಂದು ಮುತ್ತನ್ನು ಬೇರ್ಪಡಿಸಿದನು. ಅದನ್ನು ತನ್ನ ಕಣ್ಣಿಗೆ ಹತ್ತಿರ ತಂದು ಸುದೀರ್ಘವಾಗಿ ಪರೀಕ್ಷಿಸಿದನು. ನಂತರ ಹಲ್ಲಿನಿಂದ ‘ಕಟಕ್’ ಎಂದು ಕಚ್ಚಿ ಅದನ್ನು ಎರಡು ಹೋಳು ಮಾಡಿದನು. ತನ್ನ ಕಿವಿಯ ಹತ್ತಿರ ಹಿಡಿದು ಏನನ್ನೋ ಆಲಿಸಿದನು.
ಇದನ್ನೂ ಓದಿ: Roopa Gururaj Column: ಆದಿ ಶಂಕರಾಚಾರ್ಯ ಮತ್ತು ಮಂಡನ ಮಿಶ್ರ ಸಂವಾದ
ಮುಖದಲ್ಲಿ ನಿರಾಸೆ ಮೂಡಿತು. ಆ ಮುತ್ತನ್ನು ಎಸೆದು ಬಿಟ್ಟನು. ಹೀಗೆ ಒಂದಾದ ನಂತರ ಒಂದರಂತೆ ಆ ಅಮೂಲ್ಯ ಮುತ್ತುಗಳನ್ನು ಒಡೆದು ಎಸೆಯತೊಡಗಿದನು. ಇದನ್ನು ಕಂಡು ಸಭೆಯಲ್ಲಿದ್ದ ಮಂತ್ರಿಗಳು ಅಸಮಾಧಾನಗೊಂಡರು. ಈ ವಾನರನಿಗೆ ಮರ್ಯಾದೆ ತಿಳಿಯದು. ರಾಜಮಾತೆ ನೀಡಿದ ಪ್ರಸಾದವನ್ನು ಹೀಗೆ ಹಲ್ಲಿನಿಂದ ಕಚ್ಚಿ ಬೀದಿಗೆ ಎಸೆಯು ತ್ತಿದ್ದಾನಲ್ಲ? ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಇದೇ ಗತಿ! ಎಂದು ಹೀಯಾಳಿಸಿದರು.
ಲಕ್ಷ್ಮಣನಿಗೂ ತನ್ನ ಅಣ್ಣನಿಗೆ ಮತ್ತು ಅತ್ತಿಗೆಗೆ ಆದ ಅಪಮಾನವನ್ನು ಸಹಿಸಲು ಸಾಧ್ಯ ವಾಗಲಿಲ್ಲ. ಆತ ಕೋಪದಿಂದ ಕೇಳಿದ: “ಹನುಮಂತಾ! ಈ ಮುತ್ತುಗಳು ಸಾಮಾನ್ಯ ವಾದುದಲ್ಲ. ಇವುಗಳ ಬೆಲೆ ನಿನಗೆ ತಿಳಿದಿದೆಯೇ? ನೀನು ಮಾಡುತ್ತಿರುವುದು ಅಕ್ಷಮ್ಯ ಅಪರಾಧವಲ್ಲವೇ?" ಹನುಮಂತನು ವಿನಯದ ಸಾಕಾರಮೂರ್ತಿಯಾಗಿ ಎದ್ದು ನಿಂತು ಕೈಮುಗಿದು ಹೇಳಿದ: “ಕ್ಷಮಿಸಿ ಸೌಮಿತ್ರಿ, ನನಗೆ ಮುತ್ತಿನ ಲೌಕಿಕ ಬೆಲೆಯ ಬಗ್ಗೆ ಕಾಳಜಿಯಿಲ್ಲ.
ನಾನು ಈ ಮುತ್ತುಗಳನ್ನು ಒಡೆದು ನೋಡುತ್ತಿರುವುದು ಅವುಗಳ ಒಳಗಿನ ಸತ್ವಕ್ಕಾಗಿ. ಯಾವ ವಸ್ತುವಿನಲ್ಲಿ ‘ರಾಮ’ ಎಂಬ ಎರಡಕ್ಷರದ ಮಂತ್ರವಿಲ್ಲವೋ, ಅಂಥ ವಸ್ತು ನನಗೆ ಕೇವಲ ಕಸಕ್ಕೆ ಸಮಾನ. ನಾನು ಪ್ರತಿ ಮುತ್ತಿನಲ್ಲೂ ನನ್ನ ರಾಮನ ನಾಮ ಕೇಳಿಸುತ್ತದೆಯೇ ಎಂದು ಆಲಿಸಿದೆ. ಆದರೆ ಈ ಜಡವಾದ ಮುತ್ತುಗಳಲ್ಲಿ ರಾಮನ ಹೆಸರಿಲ್ಲ.
ರಾಮನ ಹೆಸರಿಲ್ಲದ ವಸ್ತು ಅದೆಷ್ಟೇ ಬೆಲೆಬಾಳುವ ಚಿನ್ನವಾಗಿದ್ದರೂ ಅದು ನನಗೆ ಹೊರೆ ಮಾತ್ರ". ಸೀತೆಗೆ ಆಗ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಅವಳು ಅದನ್ನು ಶ್ರೀ ರಾಮನ ಹೆಸರಿನಿಂದ ನೀಡುವ ಬದಲು ‘ನನ್ನ ಉಡುಗೊರೆ’ ಎಂದು ನೀಡಿದ್ದಳು. ಆಗ ಸಭೆ ಯಲ್ಲಿದ್ದವರೊಬ್ಬರು “ಹನುಮಂತಾ, ಹಾಗಿದ್ದರೆ ನಿನ್ನ ದೇಹದೊಳಗೆ ರಾಮನಿದ್ದಾನೆಯೇ?" ಎಂದು ಕೇಳಿಬಿಟ್ಟರು.
ಆ ಮಾತು ಹನುಮಂತನ ಅಂತರಂಗವನ್ನು ಬಡಿದೆಬ್ಬಿಸಿತು. ಹನುಮಂತನು ಕಿಂಚಿತ್ತೂ ಕೋಪಗೊಳ್ಳದೆ, “ನೋಡಿ ಹಾಗಿದ್ದರೆ..." ಎನ್ನುತ್ತಾ ತನ್ನ ಎರಡು ಕೈಗಳಿಂದ ಎದೆಯನ್ನು ಸೀಳಿದನು! ಹನುಮಂತನ ಹರಿದ ಎದೆಯ ಒಳಗೆ, ರಕ್ತಸಿಕ್ತವಾದ ಮಾಂಸಖಂಡಗಳ ನಡುವೆ, ಶ್ರೀರಾಮ ಮತ್ತು ಸೀತಾದೇವಿಯರು ಕುಳಿತಿರುವ ದೃಶ್ಯ ಗೋಚರವಾಯಿತು. ಅಷ್ಟೇ ಅಲ್ಲ, ಹನುಮಂತನ ಪ್ರತಿ ನರಗಳಲ್ಲಿ, ಪ್ರತಿ ರಕ್ತದ ಹನಿಯ ಸದ್ದಿನಲ್ಲಿ ‘ರಾಮ... ರಾಮ... ರಾಮ...’ ಎಂಬ ಝೇಂಕಾರವು ಇಡೀ ಸಭೆಗೆ ಕೇಳಿಸತೊಡಗಿತು.
ಭೆಯಲ್ಲಿದ್ದವರೆಲ್ಲರೂ ಆಶ್ಚರ್ಯದಿಂದ ಆಸನದಿಂದ ಎದ್ದು ನಿಂತರು. ಕೆಲವರು ಕಣ್ಣೀರು ಹಾಕುತ್ತಾ ಹನುಮಂತನ ಪಾದಕ್ಕೆ ನಮಸ್ಕರಿಸಿದರು. ರಾಮನು ಸಿಂಹಾಸನದಿಂದ ಇಳಿದು ಬಂದು ಹನುಮಂತನ ಹರಿದ ಎದೆಯನ್ನು ತನ್ನ ಮೃದುವಾದ ಹಸ್ತದಿಂದ ಸವರಿದನು. ಮರುಕ್ಷಣವೇ ಗಾಯ ಮಾಯವಾಗಿ ಹನುಮಂತನು ಮೊದಲಿನಂತಾದನು.
ರಾಮನು ಗದ್ಗದಿತನಾಗಿ ನುಡಿದ: “ಮಾರುತಿ, ನಿನಗೆ ನನ್ನನ್ನು ಬಿಟ್ಟರೆ ಬೇರೆ ಲೋಕವಿಲ್ಲ, ನನಗೆ ನಿನ್ನನ್ನು ಬಿಟ್ಟರೆ ಬೇರೆ ಭಕ್ತನಿಲ್ಲ. ಯುಗಾಂತರದವರೆಗೂ ನಿನ್ನ ಈ ಭಕ್ತಿ ಅಮರ ವಾಗಿರಲಿ". ಭಕ್ತಿ ಅಂತರಂಗದಲ್ಲಿ ಹರಿದಾಗ ಅಲ್ಲಿ ಭಗವಂತ ನೆಲೆಸಿರುತ್ತಾನೆ. ‘ನಾನು’ ಎನ್ನುವ ಅಹಂಕಾರದಲ್ಲಿ ಅವನಿರುವುದಿಲ್ಲ.
ಆದ್ದರಿಂದಲೇ ಯಾರಿಗಾದರೂ ಸಹಾಯ ಮಾಡುವಾಗಲು ಅದು ಭಗವಂತನ ಪ್ರೇರಣೆ ಎನ್ನುವ ವಿನಮ್ರತೆ ನಮಗಿದ್ದಾಗ ಮಾತ್ರ ಅದರ ಪುಣ್ಯದ ಫಲ ನಮಗೆ ದಕ್ಕಬಹುದು.