Roopa Gururaj Column: ನಾವು ಮಾಡಿದ ತ್ಯಾಗ ಅಜ್ಞಾತವಾಗಿರಬೇಕು
ಮೊಲ ತಿನ್ನುವುದು ಬರೀ ಚಿಗುರು ಹುಲ್ಲನ್ನು ಮಾತ್ರ, ಬ್ರಾಹ್ಮಣನಿಗೆ ಅದನ್ನು ಹೇಗೆ ಕೊಡುವುದು? ಎಂದು ಯೋಚಿಸಿ, ‘ಅಯ್ಯಾ, ವಿಪ್ರನೇ ನಿನಗೆ ದಾನ ಕೊಡಲು ನನ್ನ ಬಳಿ ಯಾವ ಆಹಾರವೂ ಇಲ್ಲ. ನನ್ನನ್ನೇ ನಾನು ನಿನಗೆ ಅರ್ಪಿಸಿಕೊಳ್ಳುತ್ತೇನೆ ಮೊಲದ ಮಾಂಸ ತಿನ್ನಲು ರುಚಿಯಾಗಿರುತ್ತದೆ, ಎಂದು ಹೇಳುವುದನ್ನು ಕೇಳಿದ್ದೇನೆ. ನನ್ನನ್ನು ಬೇಯಿಸಿ, ತಿಂದು ನೀವು ತೃಪ್ತಿಪಟ್ಟುಕೊಳ್ಳಬಹುದು’ ಎಂದು ಹೇಳಿತು.
-
ರೂಪಾ ಗುರುರಾಜ್
Aug 9, 2025 6:00 AM
ಒಂದೊಳ್ಳೆ ಮಾತು
rgururaj628@gmail.com
ಒಂದು ಕಾಡಿನಲ್ಲಿ ಒಂದು ಸುಂದರ ಮೊಲ ಇತ್ತು. ಅದಕ್ಕೆ ಭಗವಂತನಲ್ಲಿ ಬಹಳ ಭಕ್ತಿ. ಯಾರು ಏನೇ ಕೇಳಿದರೂ ತಕ್ಷಣ ನೀಡುವಂತ ಮನಸ್ಸು ಅದರದ್ದು. ಒಂದು ಸಲ, ಇಂದ್ರ ಇದನ್ನು ಪರೀಕ್ಷಿಸ ಲೆಂದು ಸ್ವರ್ಗದಿಂದ ಬ್ರಾಹ್ಮಣನ ವೇಷದಲ್ಲಿ ಭೂಮಿಗೆ ಬಂದ. ಅವನು ಮೊಲದ ಬಳಿಗೆ ಹೋಗಿ ‘ನಾನು ನಿನ್ನೆ ಉಪವಾಸ ಮಾಡಿದ್ದೆ, ಹಾಗಾಗಿ ಇಂದು ಹಸಿವೆ ತಡಿಯಲಾಗುತ್ತಿಲ್ಲ ದಯಮಾಡಿ ತಿನ್ನಲು ಏನಾದರೂ ಕೊಡು’ ಎಂದು ಕೇಳಿದ.
ಮೊಲ ತಿನ್ನುವುದು ಬರೀ ಚಿಗುರು ಹುಲ್ಲನ್ನು ಮಾತ್ರ, ಬ್ರಾಹ್ಮಣನಿಗೆ ಅದನ್ನು ಹೇಗೆ ಕೊಡುವುದು? ಎಂದು ಯೋಚಿಸಿ, ‘ಅಯ್ಯಾ, ವಿಪ್ರನೇ ನಿನಗೆ ದಾನ ಕೊಡಲು ನನ್ನ ಬಳಿ ಯಾವ ಆಹಾರವೂ ಇಲ್ಲ. ನನ್ನನ್ನೇ ನಾನು ನಿನಗೆ ಅರ್ಪಿಸಿಕೊಳ್ಳುತ್ತೇನೆ ಮೊಲದ ಮಾಂಸ ತಿನ್ನಲು ರುಚಿಯಾಗಿರುತ್ತದೆ, ಎಂದು ಹೇಳುವುದನ್ನು ಕೇಳಿದ್ದೇನೆ. ನನ್ನನ್ನು ಬೇಯಿಸಿ, ತಿಂದು ನೀವು ತೃಪ್ತಿಪಟ್ಟುಕೊಳ್ಳಬಹುದು’ ಎಂದು ಹೇಳಿತು.
ಹಾಗಾದರೆ ‘ನಿನ್ನನ್ನು ಬೇಯಿಸೋದು ಹೇಗೆ?’ ಎಂದು ಕೇಳಿದ ಬ್ರಾಹ್ಮಣ ವೇಷದ ಇಂದ್ರ. ಆಗ ಮೊಲ ಅಲ್ಲೇ ಸುತ್ತಮುತ್ತಲೂ ಇದ್ದ ಕಟ್ಟಿಗೆಗಳನ್ನು ಗುಡ್ಡೆ ಹಾಕಿತು. ಬ್ರಾಹ್ಮಣನ ವೇಷದಲ್ಲಿದ್ದ ಇಂದ್ರ ತನ್ನ ತಪಸ್ಸಿನ ಶಕ್ತಿಯಿಂದ ಬೆಂಕಿ ಹಚ್ಚಿದ. ಆಗ ಮೊಲ ಬೆಂಕಿಯೊಳಗೆ ಹಾರಲು ಸಿದ್ಧವಾಗಿ, ‘ಮಹಾತ್ಮರೆ, ನೀವು ನನ್ನನ್ನು ತಿಂದು ತೃಪ್ತಿ ಪಟ್ಟರೆ ನನಗೆ ಅದಕ್ಕಿಂತ ಬೇರೆ ಸಂತೋಷವೇ ಇಲ್ಲ’ ಎಂದು ಹೇಳುತ್ತಾ ಚಕ್ಕನೆ ಬೆಂಕಿಯೊಳಗೆ ಹಾರಿ ಬಿಟ್ಟಿತು.
ಇದನ್ನೂ ಓದಿ: Roopa Gururaj Column: ನಾಲ್ಕು ಮೇಣದ ಬತ್ತಿಗಳು
ಅದೇನಾಶ್ಚರ್ಯವೂ! ಕಟ್ಟಿಗೆಗಳು ಚಟಚಟನೆ ಉರಿಯುತ್ತಿದ್ದರೂ ಮೊಲದ ಒಂದು ಕೂದಲಿಗೂ ಕೂಡಾ ಬೆಂಕಿ ಹೊತ್ತಿಕೊಳ್ಳಲ್ಲಿಲ್ಲ. ಉರಿಯುತ್ತಿರುವ ಬೆಂಕಿಯ ಮಧ್ಯೆಯೂ, ಕೆರೆಯಲ್ಲಿರುವ ಕಮಲದ ಎಲೆಯ ಮೇಲೆ ಕುಳಿತಷ್ಟು ತಂಪಾಗಿತ್ತು.ಆಗ ಮೊಲ ‘ಸ್ವಾಮಿ, ಇದೆಂತಾ ಬೆಂಕಿ? ಇಷ್ಟು ತಂಪಾಗಿದೆಯಲ್ಲಾ, ಅದು ಹೇಗೆ ಸಾಧ್ಯ? ದಯವಿಟ್ಟು ನೀವು ಯಾರೆಂದು ಹೇಳಿ’ ಎಂದು ಕೇಳಿತು. ಆಗ ಇಂದ್ರ ತನ್ನ ನಿಜ ರೂಪದಲ್ಲಿ ಕಾಣಿಸಿಕೊಂಡು ದೈವೀ ಗುಣದ ‘ಮೊಲವೇ, ನಿನ್ನನ್ನು ಪರೀಕ್ಷಿಸಲೆಂದೇ ನಾನು ಸ್ವರ್ಗದಿಂದ ಇಲ್ಲಿಗೆ ಬಂದಿದ್ದು.
ನಾನು ನಿನ್ನ ದಾನ ಗುಣಕ್ಕೆ ಮೆಚ್ಚಿದೆ ನಿನಗೇನು ವರಬೇಕೊ ಕೇಳಿಕೋ’ ಎಂದು ಹೇಳಿದ. ‘ಹೇ ದೇವಾ, ನನ್ನ ದಾನದ ಬುದ್ಧಿ ಸದಾ ನನ್ನಲ್ಲಿ ಇರಲಿ. ನನಗೆ ಇನ್ನೇನೂ ಬೇಡ’ ಎಂದಿತು ಮೊಲ. ಆದರೆ ಇಂದ್ರನಿಗೆ ಇದರಿಂದ ಸಮಾಧಾನವಾಗಲಿಲ್ಲ. ಚಂದ್ರ, ಸೂರ್ಯರು ಇರುವ ತನಕವೂ ನಿನ್ನ ಗುರುತು ಶಾಶ್ವತವಾಗಿಬೇಕು ಅಂತದ್ದೇನಾದರೂ ಮಾಡಬೇಕು, ಎಂದುಕೊಂಡು ಇಂದ್ರ ಆಕಾಶದಷ್ಟು ಎತ್ತರವಾಗಿ ತ್ರಿವಿಕ್ರಮನಂತೆ ಬೆಳೆದ.
ತನ್ನ ಎಡಗೈನಲ್ಲಿ ಬೆಟ್ಟ ಒಂದನ್ನು ಹಿಂಡಿ, ಅದರಿಂದ ಹಸಿರು ರಸ ತೆಗೆದು ತನ್ನ ಬಲಗೈ ಬೆರಳಿನಿಂದ ಆ ಹಸಿರು ರಸವನ್ನು ಅದ್ದಿಕೊಂಡು, ಗುಂಡಗಾಗಿದ್ದ ಬಿಳಿಯ ಚಂದ್ರನ ಮೇಲೆ ಮೊಲದ ಚಿತ್ರವನ್ನು ಬರೆದ. ಆದ್ದರಿಂದಲೇ, ಚಂದ್ರನಲ್ಲಿ ಮೊಲದ ಚಿತ್ರ ಈಗಲೂ ಕಾಣುತ್ತದೆ ಎನ್ನುತ್ತಾರೆ.
ಅದೇನೇ ಇರಲಿ, ಅಷ್ಟು ಚಿಕ್ಕ ಪ್ರಾಣಿಯಾದ ಮೊಲ ಕೂಡ ತನ್ನ ದಾನಕ್ಕೆ ಬದಲಾಗಿ ಏನನ್ನೂ ಅಪೇಕ್ಷಿಸಲಿಲ್ಲ. ಈ ವಿಷಯ ನಮ್ಮೆಲ್ಲರಿಗೂ ದೊಡ್ಡ ಪಾಠವಾಗಬಹುದು ಅಲ್ಲವೇ? ಮಾಡಿದ ಒಂದು ಚಿಕ್ಕ ಸಹಾಯಕ್ಕೆ, ಸಹಾಯ ಪಡೆದವರು ಸದಾ ನಮಗೆ ಚಿರಋಣಿಗಳಾಗಿರಬೇಕು ಎಂದು ಅಪೇಕ್ಷೆ ಪಡುತ್ತೇವೆ. ಅವರು ನಮ್ಮಿಂದ ಸಹಾಯ ಪಡೆದ ಮೇಲೆ ಹೇಗೆ ಬೆಳೆದರು ಹೇಗೆ ಉಳಿದರು ಎನ್ನುವ ಕಥೆಯನ್ನು ನಾವು ಸಾವಿರ ಸಲ ಹೇಳುತ್ತಾ ಅವರಿಗೂ ಅದನ್ನು ಮರೆಯಲು ಬಿಡದೆ ಸದಾ ದೈಯಕ್ಕೆ ದೂಡುತ್ತೇವೆ.
ದಾನ, ಸಹಾಯ ಮಾಡಿದ್ದು ನಮ್ಮ ತೃಪ್ತಿಗಾಗಿ, ಅದನ್ನು ಮತ್ತೆ ಮತ್ತೆ ಎತ್ತಾಡುತ್ತಾ ಅದರ ಪಾವಿತ್ರ್ಯತೆ ಯನ್ನು ಹಾಳು ಮಾಡಬಾರದು. ಏನನ್ನೂ ಅಪೇಕ್ಷಿಸದೆ ಮಾಡಿದ ಸಹಾಯ ಅಥವಾ ದಾನ ದೇವರನ್ನೇ ಮೆಚ್ಚಿಸುವಂಥದ್ದು ಅದನ್ನು ಮನುಷ್ಯರಿಗೆ ಡಂಗುರ ಸಾರಿ ಆಗಬೇಕಾದ್ದು ಏನೂ ಇಲ್ಲ.