Roopa Gururaj Column: ವೃತಾಸುರ ವಧೆ: ದಧೀಚಿ ಮುನಿಗಳ ತ್ಯಾಗ ಮತ್ತು ಇಂದ್ರನ ಜಯ
ಪ್ರಜಾಪತಿ ತ್ವಷ್ಟಾರನ ಮಗನಾದ ವಿಶ್ವರೂಪನನ್ನು ಇಂದ್ರನು ಕೊಂದಾಗ, ಕೋಪಗೊಂಡ ತ್ವಷ್ಟಾರನು ಇಂದ್ರನನ್ನು ನಾಶಮಾಡಬಲ್ಲ ಮಗನನ್ನು ಪಡೆಯಲು ಒಂದು ಮಹಾಯಾಗವನ್ನು ಮಾಡುತ್ತಾನೆ. ಆ ಯಾಗದ ಅಗ್ನಿಕುಂಡದಿಂದ ಹುಟ್ಟಿದ ಮಹಾಕಾಯನೇ ವೃತ್ರಾಸುರ. ಅವನು ಬೆಳೆಯುತ್ತಾ ಇಡೀ ಬ್ರಹ್ಮಾಂಡವನ್ನೇ ಆವರಿಸತೊಡಗಿದನು (‘ವೃತ್’ ಎಂದರೆ ಆವರಿಸುವುದು ಎಂದರ್ಥ). ಭೂಮಿಯ ಮೇಲಿನ ನದಿ, ನೀರುಗಳನ್ನು ಬಂದಿಸಿ ಜಗತ್ತಿಗೆ ಭೀಕರ ಬರಗಾಲ ತಂದೊಡ್ಡಿದನು.
-
ಒಂದೊಳ್ಳೆ ಮಾತು
ದೇವಗುರು ಬೃಹಸ್ಪತಿಯು ದೇವಲೋಕದ ಸಭೆಯಲ್ಲಿ ಇಂದ್ರನ ಅಹಂಕಾರವನ್ನು ಕಂಡು ಸಭೆಯನ್ನು ತೊರೆದಾಗ ಇಂದ್ರನು ಪ್ರಜಾಪತಿ ತ್ವಷ್ಟಾರನ ಜ್ಞಾನಿ ಮಗನಾದ ವಿಶ್ವರೂಪನನ್ನು ಪರ್ಯಾಯವಾಗಿ ತನ್ನ ಗುರುವಾಗಿ ಸ್ವೀಕರಿಸುತ್ತಾನೆ; ಆದರೆ ವಿಶ್ವರೂಪನ ತಾಯಿ ಅಸುರ ವಂಶದವಳಾಗಿದ್ದರಿಂದ, ಅವನು ದೇವತೆ ಗಳ ಜೊತೆಗೆ ರಹಸ್ಯವಾಗಿ ರಾಕ್ಷಸರಿಗೂ ಯಾಗದ ಹವಿಸ್ಸನ್ನು ನೀಡುತ್ತಿರುತ್ತಾನೆ. ಇದರಿಂದ ರಾಕ್ಷಸರ ಶಕ್ತಿ ಹೆಚ್ಚುತ್ತಿರುವುದನ್ನು ಕಂಡು, ತನ್ನ ಇಂದ್ರ ಪದವಿ ಕೈತಪ್ಪಬಹುದೆಂಬ ತೀವ್ರ ಭಯ ಮತ್ತು ಸಂದೇಹದಿಂದ ಇಂದ್ರನು ವಜ್ರಾಯುಧ ಬಳಸಿ ವಿಶ್ವರೂಪನ ಮೂರೂ ತಲೆಗಳನ್ನು ಕತ್ತರಿಸಿ ಕೊಲ್ಲುತ್ತಾನೆ.
ಪ್ರಜಾಪತಿ ತ್ವಷ್ಟಾರನ ಮಗನಾದ ವಿಶ್ವರೂಪನನ್ನು ಇಂದ್ರನು ಕೊಂದಾಗ, ಕೋಪಗೊಂಡ ತ್ವಷ್ಟಾರನು ಇಂದ್ರನನ್ನು ನಾಶಮಾಡಬಲ್ಲ ಮಗನನ್ನು ಪಡೆಯಲು ಒಂದು ಮಹಾಯಾಗವನ್ನು ಮಾಡುತ್ತಾನೆ. ಆ ಯಾಗದ ಅಗ್ನಿಕುಂಡದಿಂದ ಹುಟ್ಟಿದ ಮಹಾಕಾಯನೇ ವೃತ್ರಾಸುರ. ಅವನು ಬೆಳೆಯುತ್ತಾ ಇಡೀ ಬ್ರಹ್ಮಾಂಡವನ್ನೇ ಆವರಿಸತೊಡಗಿದನು (‘ವೃತ್’ ಎಂದರೆ ಆವರಿಸುವುದು ಎಂದರ್ಥ). ಭೂಮಿಯ ಮೇಲಿನ ನದಿ, ನೀರುಗಳನ್ನು ಬಂದಿಸಿ ಜಗತ್ತಿಗೆ ಭೀಕರ ಬರಗಾಲ ತಂದೊಡ್ಡಿದನು.
ಇದನ್ನೂ ಓದಿ: Roopa Gururaj Column: ಸತ್ಯ ಮತ್ತು ಅಸತ್ದದ ನಡುವಿನ ಮಾಯಾಲೋಕ
ವೃತ್ರಾಸುರನು ಬ್ರಹ್ಮನಿಂದ ಒಂದು ವಿಶಿಷ್ಟ ವರವನ್ನು ಪಡೆದಿದ್ದನು: ಲೋಕದಲ್ಲಿರುವ ಯಾವುದೇ ಒಣ ಅಥವಾ ಹಸಿ ವಸ್ತುವಿನಿಂದಾಗಲಿ, ಕಲ್ಲು, ಮರ ಅಥವಾ ಯಾವುದೇ ಲೋಹದ ಆಯುಧ ದಿಂದಾಗಲಿ ತನಗೆ ಸಾವು ಬರಬಾ ರದು.ಈ ವರದ ಬಲದಿಂದ ಅವನು ದೇವಲೋಕದ ಮೇಲೆ ದಾಳಿ ಮಾಡಿ ಇಂದ್ರಾದಿ ದೇವತೆಗಳನ್ನು ಸೋಲಿಸಿ, ಸ್ವರ್ಗವನ್ನು ವಶಪಡಿಸಿಕೊಂಡನು. ಪರಾಜಿತರಾದ ದೇವತೆಗಳು ರಕ್ಷಣೆಗಾಗಿ ತ್ರಿಮೂರ್ತಿಗಳನ್ನು ಪ್ರಾರ್ಥಿಸಿದಾಗ, ವಿಷ್ಣುವು ಒಂದು ಉಪಾಯವನ್ನು ತಿಳಿಸುತ್ತಾನೆ: ಜಗತ್ತಿನ ಕಲ್ಯಾಣ ಕ್ಕಾಗಿ ದೇವತೆಗಳು ಮಹಾತಪಸ್ವಿಗಳಾದ ದಧೀಚಿ ಮಹರ್ಷಿಗಳನ್ನು ಆಶ್ರಯಿಸಬೇಕು. ಅವರ ದೇಹದ ಮೂಳೆಗಳು ತಪಸ್ಸಿನ ಶಕ್ತಿಯಿಂದ ವಜ್ರದಷ್ಟೇ ಕಠಿಣವಾಗಿವೆ. ಅವರ ಅಸ್ಥಿಗಳಿಂದ ಮಾತ್ರ ವೃತ್ರಾಸುರ ನನ್ನು ಕೊಲ್ಲಬಲ್ಲ ಆಯುಧ ವನ್ನು ತಯಾರಿಸಲು ಸಾಧ್ಯ ಎಂದು ವಿಷ್ಣು ಸೂಚಿಸುತ್ತಾನೆ.
ದೇವತೆಗಳು ದಧೀಚಿ ಮುನಿಗಳ ಆಶ್ರಮಕ್ಕೆ ಬಂದು ಪ್ರಾರ್ಥಿಸಿದಾಗ, ಲೋಕೋಪಕಾರಕ್ಕಾಗಿ ಮಹರ್ಷಿಗಳು ಸಂತೋಷದಿಂದ ಒಪ್ಪುತ್ತಾರೆ. ಅವರು ಯೋಗಬಲದಿಂದ ತಮ್ಮ ಪ್ರಾಣವನ್ನು ಬ್ರಹ್ಮಾಂಡದಲ್ಲಿ ಲೀನಗೊಳಿಸಿ, ದೇಹವನ್ನು ತ್ಯಜಿಸುತ್ತಾರೆ. ದೇವಶಿಲ್ಪಿ ವಿಶ್ವಕರ್ಮನು ದಧೀಚಿ ಮುನಿಗಳ ಬೆನ್ನುಮೂಳೆಯಿಂದ ಅತ್ಯಂತ ಶಕ್ತಿಶಾಲಿಯಾದ ‘ವಜ್ರಾಯುಧ’ವನ್ನು ಸಿದ್ಧಪಡಿಸು ತ್ತಾನೆ. ವಜ್ರಾ ಯುಧವನ್ನು ಹಿಡಿದ ಇಂದ್ರನು ದೇವಸೇನೆಯೊಂದಿಗೆ ವೃತ್ರಾಸುರನ ಮೇಲೆ ಯುದ್ಧ ಸಾರುತ್ತಾನೆ. ಯುದ್ಧ ಭೂಮಿಯಲ್ಲಿ ವೃತ್ರಾಸುರನು ಕೇವಲ ರಾಕ್ಷಸ ನಾಗಿರದೆ, ಒಬ್ಬ ಪರಮ eನಿಯಾಗಿ ಮತ್ತು ಹರಿ ಭಕ್ತನಾಗಿ ಮಾತನಾಡುತ್ತಾನೆ. ‘ಯುದ್ಧದಲ್ಲಿ ಜಯ ವಾಗಲಿ, ಮರಣವಾಗಲಿ... ನಾನು ಭಗವಂತನ ಪಾದ ಸೇರುವುದು ನಿಶ್ಚಿತ’ ಎಂದು ಘೋಷಿಸುತ್ತಾನೆ. ಆದರೆ ವೃತ್ರಾಸುರನ ವರವನ್ನು ಮುರಿಯುವುದು ಇಂದ್ರನಿಗೆ ಸವಾಲಾಗಿತ್ತು.
ವಜ್ರಾಯುಧವಿದ್ದರೂ ಅವನು ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ, ಒಣ ಅಥವಾ ಹಸಿ ಆಯುಧ ದಿಂದ ಸಾಯುವಂತಿರಲಿಲ್ಲ. ಆದ್ದರಿಂದ ಇಂದ್ರನು ಸಂಧ್ಯಾಕಾಲದಲ್ಲಿ (ಹಗಲೂ ಅಲ್ಲದ, ರಾತ್ರಿಯೂ ಅಲ್ಲದ ಸಮಯ) ಯುದ್ಧ ಮಾಡುತ್ತಾ, ವಜ್ರಾಯುಧಕ್ಕೆ ಸಮುದ್ರದ ನೊರೆಯನ್ನು ಸವರುತ್ತಾನೆ. ನೊರೆಯು ಹಸಿಯೂ ಅಲ್ಲದ, ಒಣಗಿದ್ದೂ ಅಲ್ಲದ ವಿಶಿಷ್ಟ ವಸ್ತುವಾಗಿತ್ತು. ಈ ನೊರೆಯನ್ನೇ ‘ಕಾಮಾ’ ಅಥವಾ ವಿಶಿಷ್ಟ ಪ್ರಕೃತಿ ರೂಪ ಎನ್ನಲಾಗುತ್ತದೆ. ಕೊನೆಗೂ ಇಂದ್ರನು ಆ ನೊರೆ ಸವರಿದ ವಜ್ರಾಯುಧದಿಂದ ವೃತ್ರಾಸುರನ ಶಿರಚ್ಛೇದನ ಮಾಡಿ ಜಗತ್ತನ್ನು ಮುಕ್ತಗೊಳಿಸು ತ್ತಾನೆ.
ವೃತ್ರಾಸುರನು ಪೂರ್ವಜನ್ಮದಲ್ಲಿ ‘ಚಿತ್ರಕೇತು’ ಎಂಬ ಮಹಾರಾಜನಾಗಿದ್ದು, ಪಾರ್ವತಿ ದೇವಿಯ ಶಾಪದಿಂದ ರಾಕ್ಷಸನಾಗಿ ಹುಟ್ಟಿದ್ದನು. ಬಾಹ್ಯವಾಗಿ ಅವನು ರಾಕ್ಷಸನಾಗಿದ್ದರೂ, ಅಂತರಂಗದಲ್ಲಿ ಭಗವದ್ಭಕ್ತನಾಗಿದ್ದನು. ಇಂದ್ರನ ಕೈಯಲ್ಲಿ ಮರಣ ಹೊಂದುವ ಮೂಲಕ ಅವನ ಶಾಪ ವಿಮೋಚನೆಯಾಗಿ ಮೋಕ್ಷ ದೊರೆಯಿತು.
ಸಮಾಜದ ಕಲ್ಯಾಣಕ್ಕಾಗಿ ವೈಯಕ್ತಿಕ ಸ್ವಾರ್ಥ ಹಾಗೂ ದೇಹವನ್ನೇ ತ್ಯಾಗ ಮಾಡುವ ದಽಚಿ ಮಹರ್ಷಿಗಳ ಉದಾತ್ತ ಗುಣ ನಿಜಕ್ಕೂ ನಮಗೆ ಜೀವನದಲ್ಲಿ ಪ್ರೇರಣೆಯಾಗುವಂತದ್ದು. ಕೆಲವೊಮ್ಮೆ ಸಮಾಜದಲ್ಲಿ ಕೆಟ್ಟತನಗಳನ್ನು ನೋಡಿದಾಗ ನಮಗೇಕೆ ಅದರ ಸಹವಾಸ ಎಂದು ಸುಮ್ಮನಿದ್ದು ಬಿಡುತ್ತೇವೆ. ಕೆಟ್ಟದ್ದನ್ನು ಕಂಡಾಗ ಸುಮ್ಮನಿರುವುದು ಕೂಡ ಅಪರಾಧವೇ! ವಿದ್ಯಾವಂತರಾದ ನಾವು ಆದಷ್ಟು ಇಂತಹವುಗಳ ವಿರುದ್ಧ ದನಿಯತ್ತಿ ಅರಿವು ಮೂಡಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಇಲ್ಲದಿದ್ದರೆ ಇದು ಎಂದೋ ಒಂದು ದಿನ ನಮ್ಮ ಮನೆಯ ಬಾಗಿಲವರೆಗೂ ಬಂದು ನಿಲ್ಲುತ್ತದೆ. ಏಕೆಂದರೆ ನಾವು ಕೂಡ ಸಮಾಜದ ಒಂದು ಭಾಗವೇ ಅಲ್ಲವೇ?