ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Vijay Darda Column: ರಾಜಕಾರಣದಲ್ಲಿ ಬಣ್ಣ ಬದಲಿಸುವ ವಿಶಿಷ್ಟ ಕಲೆಗಾರಿಕೆ

ರಾಜಕಾರಣದಲ್ಲಿ ಸಿದ್ಧಾಂತವು ನಾಯಿ ನರಿಗಳ ಪಾಲಾಗಿದೆ ಅಂದರೆ ಅದರರ್ಥ, ಇಂದಿನ ರಾಜಕಾರಣದಲ್ಲಿ ಸಿದ್ಧಾಂತಕ್ಕೆ ಯಾವುದೇ ಬೆಲೆ ಇಲ್ಲ ಎಂದು. ಸಿದ್ಧಾಂತದಿಂದ ಅಧಿಕಾರದ ಗುರಿ ತಲುಪಲು ಸಾಧ್ಯವಿಲ್ಲ ಎಂದಾದರೆ ಅಂತಹ ಸಿದ್ಧಾಂತವನ್ನು ಕೈಬಿಟ್ಟು, ಯಾವ ಗುರಿ ಯಲ್ಲಿ ನಮ್ಮ ಕಣ್ಣು ನೆಟ್ಟಿದೆಯೋ ಅದನ್ನು ಹೇಗಾದರೂ ಸರಿ ಈಡೇರಿಸಿಕೊಳ್ಳುವುದು ಜಾಣತನವಲ್ಲವೇ ಎಂದು ಅನೇಕರು ಬಹಿರಂಗವಾಗಿಯೇ ಮಾತನಾಡಲು ಆರಂಭಿಸಿದ್ದಾರೆ.

ರಾಜಕಾರಣದಲ್ಲಿ ಬಣ್ಣ ಬದಲಿಸುವ ವಿಶಿಷ್ಟ ಕಲೆಗಾರಿಕೆ

-

ಹಿರಿಯ ಪತ್ರಿಕೋದ್ಯಮಿ

ಇಂದಿನ ರಾಜಕಾರಣದಲ್ಲಿ ಸಿದ್ಧಾಂತವೆಂಬುದು ನಾಯಿ-ನರಿಗಳ ಪಾಲಾಗಿದೆ! ಬಹುಶಃ ಎಐ ಕೂಡ ಯಾವ ರಾಜಕಾರಣಿ ಯಾರೊಂದಿಗೆ ಇದ್ದಾರೆ ಮತ್ತು ಎಲ್ಲಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ನಮ್ಮ ರಾಜಕಾರಣಿಗಳು ಹೋಳಿಯನ್ನೂ ಮೀರಿಸುವ ರೀತಿಯಲ್ಲಿ, ಊಸರವಳ್ಳಿಯನ್ನೂ ನಾಚಿಸುವ ರೀತಿಯಲ್ಲಿ ‘ಕಲರ್ ಫುಲ್’ ಆಗಿರಬಲ್ಲರು.

ಕಳೆದ ವಾರ ಹೋಳಿ ಮತ್ತು ರಂಗಪಂಚಮಿಯ ಬಣ್ಣ ಮೆತ್ತಿಕೊಂಡಿದ್ದ ಮುಖಗಳನ್ನು ನೋಡುತ್ತಿದ್ದೆ. ಮನಸ್ಸಿನಲ್ಲೊಂದು ಪ್ರಶ್ನೆಯೆದ್ದಿತು. ‘ನಮ್ಮ ರಾಜಕಾರಣ ಕೂಡ ಇಷ್ಟೇ ಕಲರ್ ಫುಲ್ ಆಗಿದೆಯಲ್ಲವೇ? ಇಲ್ಲಿ ಬಣ್ಣಗಳ ಹಿಂದಿನ ನಿಜವಾದ ಮುಖವನ್ನು ಗುರುತಿಸುವುದೇ ಕಷ್ಟವಾಗುತ್ತಿದೆಯಲ್ಲ? ಎಂದು ಯೋಚಿಸಿದೆ. ರಾಜಕಾರಣಿಗಳ ನಿಜವಾದ ಬಣ್ಣವನ್ನು ಗುರುತಿಸುವುದು ಹೇಗೆ? ಹಿಂದೆ ಜನರು ಗುಲಾಲ್ ಮತ್ತು ನೈಸರ್ಗಿಕ ಬಣ್ಣ ಗಳನ್ನು ಬಳಸಿ ಹೋಳಿಯಾಡುತ್ತಿದ್ದರು. ಆಗ ಅವರನ್ನು ಗುರುತಿಸುವುದು ಸುಲಭವಾಗಿತ್ತು.

ಈಗ ಹೋಳಿಯಾಡುವಾಗ ರಾಸಾಯನಿಕ ಮಿಶ್ರಿತ ಗಾಢವಾದ ಬಣ್ಣಗಳನ್ನು ಬಳಿದು ಕೊಳ್ಳುತ್ತಾರೆ. ಕೆಲವೊಮ್ಮೆ ಟಾರು ಮತ್ತು ಚರಂಡಿಯ ಕೊಚ್ಚೆಯನ್ನೂ ಬಳಿದುಕೊಳ್ಳುವು ದುಂಟು. ಅಂತಹವರನ್ನು ಗುರುತಿಸುವುದು ಕಷ್ಟವೇ. ಹೋಳಿ ಕಳೆದು ಸಾಕಷ್ಟು ದಿನ ಆಯಿತಲ್ಲ, ಈಗೇಕೆ ಇವನು ಹೋಳಿ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಯೋಚಿಸು ತ್ತೀರಾ? ಕಾರಣ ಇದೆ. ಅದು ರಾಜಕೀಯ.

‘ರಾಜಕಾರಣದಲ್ಲಿ ಸಿದ್ಧಾಂತವೆಂಬುದು ನಾಯಿ ನರಿಗಳ ಪಾಲಾಗಿದೆ! ಅದರ ಬದಲು ಎಲ್ಲರೂ ತಮ್ಮ ತಮ್ಮ ಸ್ವಂತದ ಮತ್ತು ಸ್ವಾರ್ಥದ ಐಡಿಯಾಲಜಿಗಳಿಗೇ ಜೋತು ಬಿದ್ದಿದ್ದಾರೆ ಎಂಬ ಹೇಳಿಕೆ ಇಂದು ನೂರಕ್ಕೆ ನೂರು ಸತ್ಯವಾಗುತ್ತಿದೆ.

ರಾಜಕಾರಣದಲ್ಲಿ ಸಿದ್ಧಾಂತವು ನಾಯಿ ನರಿಗಳ ಪಾಲಾಗಿದೆ ಅಂದರೆ ಅದರರ್ಥ, ಇಂದಿನ ರಾಜಕಾರಣದಲ್ಲಿ ಸಿದ್ಧಾಂತಕ್ಕೆ ಯಾವುದೇ ಬೆಲೆ ಇಲ್ಲ ಎಂದು. ಸಿದ್ಧಾಂತದಿಂದ ಅಧಿಕಾರದ ಗುರಿ ತಲುಪಲು ಸಾಧ್ಯವಿಲ್ಲ ಎಂದಾದರೆ ಅಂತಹ ಸಿದ್ಧಾಂತವನ್ನು ಕೈಬಿಟ್ಟು, ಯಾವ ಗುರಿಯಲ್ಲಿ ನಮ್ಮ ಕಣ್ಣು ನೆಟ್ಟಿದೆಯೋ ಅದನ್ನು ಹೇಗಾದರೂ ಸರಿ ಈಡೇರಿಸಿಕೊಳ್ಳುವುದು ಜಾಣತನವಲ್ಲವೇ ಎಂದು ಅನೇಕರು ಬಹಿರಂಗವಾಗಿಯೇ ಮಾತನಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: Dr Vijay Darda Column: ಜನರೇ ಪ್ರಜಾಪ್ರಭುತ್ವವನ್ನು ಉಳಿಸಿದರು !

ಏನೇ ಬಂದರೂ ನಾವು ನಂಬಿದ ಸಿದ್ಧಾಂತವನ್ನು ಬಿಡಬಾರದು, ಅಧಿಕಾರ ಸಿಕ್ಕರೂ ಸರಿ, ಸಿಗದಿದ್ದರೂ ಸರಿ, ಸಿದ್ಧಾಂತವನ್ನು ಪಾಲಿಸಬೇಕು ಎಂಬ ಉಪದೇಶ ಇಂದು ನಂಬಿಕೆ ಕಳೆದುಕೊಂಡಿದೆ. ಈಗ ನಾವಿರುವುದು ಆಧುನಿಕ ಜಗತ್ತಿನಲ್ಲಿ. ರಾಜಕಾರಣಿಗಳು ಕೂಡ ಇಲ್ಲಿ ಹೊಸ ಮತ್ತು ಆಧುನಿಕ ಹಾದಿಗಳನ್ನು ಹುಡುಕಿಕೊಂಡಿದ್ದಾರೆ.

ಇತ್ತೀಚೆಗೆ ಶಿವಸೇನೆಯ ನಾಯಕರೊಬ್ಬರನ್ನು ಭೇಟಿಯಾಗಿದ್ದೆ. ನಿಮ್ಮ ಪಕ್ಷದ ಚಟುವಟಿಕೆ ಗಳು ಹೇಗೆ ನಡೆಯುತ್ತಿವೆ ಎಂದು ಕೇಳಿದೆ. ಅವರು ಮುಗುಳ್ನಗುತ್ತಾ, ‘ಓಹ್, ನಾನು ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿಯ ಪರ ಕೆಲಸ ಮಾಡುತ್ತಿದ್ದೇನೆ ಎಂದರು. ಹಾಗೆಯೇ, ನ್ಯಾಷ ನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ನಾಯಕರೊಬ್ಬರನ್ನು ಭೇಟಿಯಾಗಿದ್ದೆ. ಅವರಿಗೂ, ನಿಮ್ಮ ಪಕ್ಷದ ಕೆಲಸ ಹೇಗೆ ನಡೆಯುತ್ತಿದೆ ಎಂದು ಕೇಳಿದ್ದೆ.

ಅದಕ್ಕವರು, ‘ಎಲ್ಲವೂ ಬಹಳ ಚೆನ್ನಾಗಿ ನಡೆಯುತ್ತಿದೆ. ಬಿಜೆಪಿಯಂತಹ ಇನ್ನೊಂದು ಪಕ್ಷ ಇಲ್ಲ ಬಿಡಿ! ಅಂದರು. ನಾವು ಅಽಕಾರದಲ್ಲಿ ಉಳಿಯದಿದ್ದರೆ ಜನರ ಆಶೋತ್ತರಗಳನ್ನೂ, ಮತದಾರರ ನಿರೀಕ್ಷೆಗಳನ್ನೂ ಈಡೇರಿಸುವುದು ಹೇಗೆ ಎಂಬುದು ಅವರ ಪ್ರಶ್ನೆಯಾಗಿತ್ತು. ಆಗ ನನ್ನ ಪಕ್ಕದಲ್ಲಿ ಕುಳಿತಿದ್ದ ಪತ್ರಕರ್ತರೊಬ್ಬರು ಸಿದ್ಧಾಂತದ ವಿಚಾರವನ್ನು ಎತ್ತಿದರು.

ಅದಕ್ಕೆ ರಾಜಕೀಯ ನಾಯಕರು ನಗುತ್ತಾ, ‘ನಾವು ಸಿದ್ಧಾಂತಕ್ಕೆ ಜೋತು ಬಿದ್ದರೆ ಹೀಗೇ ಹೋರಾಡುತ್ತಲೇ ಮುದುಕರಾಗಿ ಸಾಯುತ್ತೇವೆ. ಸಿದ್ಧಾಂತವನ್ನಿಟ್ಟುಕೊಂಡು ಏನು ಮಾಡಬೇಕು.. ಉಪ್ಪಿನಕಾಯಿ ಹಾಕಿಕೊಂಡು ನೆಕ್ಕಬೇಕಾ! ನಮ್ಮ ಮಾತು ಬಿಡಿ. ರಾಹುಲ್ ಗಾಂಧಿಯವರಿಗೆ ತುಂಬಾ ಹತ್ತಿರದಲ್ಲಿದ್ದವರು ಕೂಡ ಅವರನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು. ಈ ರೀತಿಯ ಉತ್ತರಗಳನ್ನು ಕೇಳಿದ ನಂತರ ನಾನಿನ್ನು ಯಾವುದೇ ರಾಜಕಾರಣಿಯನ್ನು ಭೇಟಿಯಾದರೂ ಮೊದಲಿಗೆ ‘ನೀವೀಗ ಯಾವ ಪಕ್ಷದಲ್ಲಿದ್ದೀರಿ ಎಂದು ಕೇಳಿಕೊಂಡೇ ಅವರನ್ನು ಮಾತಿಗೆಳೆಯುವುದು ಒಳ್ಳೆಯದು ಎಂದು ಲೆಕ್ಕ ಹಾಕುತ್ತಿದ್ದೇನೆ.

ಅಫ್‌ʼಕೋರ್ಸ್, ಎಡಪಂಥೀಯ ನಾಯಕರ ಬಳಿ ಮಾತ್ರ ಇಂತಹ ಪ್ರಶ್ನೆ ಕೇಳುವಂತಿಲ್ಲ. ಕಮ್ಯುನಿಸ್ಟ್ ಚಳವಳಿಯ ಮೂಲವಾಗಿರುವ ಚೀನಾ ಮತ್ತು ರಷ್ಯಾ ದೇಶಗಳೇ ಇಂದು ಎಡಪಂಥೀಯ ಚಿಂತನೆಯನ್ನು ಬಿಟ್ಟು ಮುಂದೆ ಸಾಗಿದ್ದರೂ ನಮ್ಮಲ್ಲಿರುವ ಎಡ ಸ್ನೇಹಿತರು ಮಾತ್ರ ಈಗಲೂ ಅದರ ಸಿದ್ಧಾಂತವನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. ತಮ್ಮ ಒಡನಾಟಕ್ಕೆ ಬರುವವರಿಗೆ ಅವರು, ‘ಹುಷಾರು, ಆಮಿಷಗಳಿಗೆ ಬಲಿಯಾಗಬೇಡಿ ಎಂದು ಎಚ್ಚರಿಕೆಯನ್ನೂ ಕೊಡುತ್ತಾರೆ.

ನಾವು ಹಿಂದೆ ಎಡಪಂಥೀಯರಾಗಿದ್ದೆವು, ಈಗಲೂ ಎಡಪಂಥೀಯರಾಗಿದ್ದೇವೆ ಮತ್ತು ಮುಂದೆಯೂ ಎಡಪಂಥೀಯರಾಗಿಯೇ ಇರುತ್ತೇವೆ ಎಂದು ಅವರು ಹೇಳುತ್ತಾರೆ. ನಿಮಗೊಂದು ಘಟನೆಯನ್ನು ಹೇಳಬೇಕು. ಹಿಂದೆ ಸಿಪಿಎಂನ ಜ್ಯೋತಿ ಬಸು ಅವರನ್ನು ಪ್ರಧಾನಮಂತ್ರಿ ಮಾಡಲು ಎಲ್ಲಾ ವಿರೋಧ ಪಕ್ಷಗಳೂ ಒಪ್ಪಿದ್ದವು. ಆದರೆ ಅವರದೇ ಪಕ್ಷದ ಎಡಪಂಥೀಯ ನಾಯಕರಾದ ಪ್ರಕಾಶ್ ಕಾರಟ್ ಮತ್ತು ಹರಕಿಶನ್ ಸಿಂಗ್ ಸುರ್ಜೀತ್ ಅವರು ಅದನ್ನು ವಿರೋಧಿಸಿದರು.

ವಿರೋಧ ಪಕ್ಷಗಳ ಸಿದ್ಧಾಂತಕ್ಕೂ ನಮ್ಮ ಸಿದ್ಧಾಂತಕ್ಕೂ ಹೊಂದಾಣಿಕೆ ಆಗುವುದಿಲ್ಲ ಎಂಬುದು ಅವರ ವಾದವಾಗಿತ್ತು. ಹೀಗಾಗಿ ಜ್ಯೋತಿ ಬಸು ಪ್ರಧಾನಿ ಆಗಲಿಲ್ಲ. ಹಾಗೆಯೇ, ಹಿಂದೆ ಬಿಜೆಪಿ ಹೊಂದಿದ್ದ ಸೈದ್ಧಾಂತಿಕ ಬದ್ಧತೆಯನ್ನು ಕೂಡ ನಾವು ನೆನಪಿಸಿಕೊಳ್ಳಬೇಕು.

ಸಂಸತ್ತಿನಲ್ಲಿ ಬಿಜೆಪಿಯ ಇಬ್ಬರೇ ಸದಸ್ಯರು ಇದ್ದಾಗಲೂ ಪಕ್ಷದ ನಾಯಕರು ತಮ್ಮ ಸೈದ್ಧಾಂತಿಕ ನಿಲುವನ್ನು ಸಡಿಲಗೊಳಿಸಿರಲಿಲ್ಲ. ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಉತ್ತುಂಗ ದಲ್ಲಿ ಇದ್ದಾಗ ರಾಮ ಮನೋಹರ ಲೋಹಿಯಾ, ಮಧುಲಿಮಯೆ, ಮಧು ದಂಡವತೆ ಮತ್ತು ಮೃಣಾಲ್ ಗೋರ್‌ರಂತಹ ನಾಯಕರು ಎಷ್ಟೇ ಕಷ್ಟ ಬಂದರೂ ತಾವು ನಂಬಿದ ಸಿದ್ಧಾಂತಕ್ಕೆ ಕೊಂಚವೂ ಚ್ಯುತಿ ಬಾರದಂತೆ ನಡೆದುಕೊಂಡರು ಎಂಬುದನ್ನು ಹೇಗೆ ಮರೆಯಲು ಸಾಧ್ಯ? ಅವರು ಯಾವತ್ತೂ ಪಕ್ಷಾಂತರ ಮಾಡಲಿಲ್ಲ.

ಪ್ರಸಿದ್ಧ ರೈತನಾಯಕ ಎನ್.ಡಿ.ಪಾಟೀಲ್ ನಿಮಗೆ ನೆನಪಿರಬೇಕು. ಅವರು ಶರದ್ ಪವಾರ್‌ರ ಭಾವನಾಗಿದ್ದರೂ ಅವರಿಗೆ ಪ್ರಬಲವಾದ ಸೈದ್ಧಾಂತಿಕ ವಿರೋಧಿಯಾಗಿದ್ದರು. ಭಾರತದ ರಾಜಕಾರಣದಲ್ಲಿ ಇಂತಹ ಹಲವು ಉದಾಹರಣೆಗಳಿವೆ. ಆದರೆ ಈಗ ಕಾಲ ಬದಲಾಗಿದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಿತು. ಆಗ ನನ್ನ ಬಳಿ ಒಬ್ಬರು, ‘ಈಗ ಯಾವ ರಾಜಕಾರಣಿ ಯಾರ ಪರವಾಗಿದ್ದಾನೆ ಮತ್ತು ಯಾರ ವಿರುದ್ಧ ಇದ್ದಾನೆ ಎಂಬುದನ್ನು ಹೇಳುವುದೇ ತುಂಬಾ ಕಷ್ಟವಾಗಿದೆ ಎಂದಿದ್ದರು. ಮುಂಬೈ ನಲ್ಲಿ ಒಂದು ಬಣದ ನಾಯಕನ ಕೈಹಿಡಿದು ನಿಂತು ಪೋಸು ಕೊಡುವ ರಾಜಕಾರಣಿಗಳು ಪುಣೆಗೆ ಹೋಗಿ ತಲುಪುತ್ತಿದ್ದಂತೆ ಇನ್ನೊಂದು ಬಣದ ಗುಂಪಿನಲ್ಲಿ ನಿಂತಿರುತ್ತಾರೆ. ಅದೇ ವ್ಯಕ್ತಿ ಇನ್ನೊಂದು ದಿನ ಮತ್ತೊಬ್ಬರ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಾನೆ.

ಚುನಾವಣೆಯ ಸಮಯದಲ್ಲಿ ನಡೆದ ಸಂಗತಿಗಳನ್ನೆಲ್ಲ ಹೇಳಿದರೆ ಗೊಂದಲದಿಂದ ತಲೆ ಚಚ್ಚಿಕೊಳ್ಳಬೇಕಷ್ಟೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಶಿವಸೇನೆ (ಶಿಂದೆ ಬಣ) ಒಟ್ಟಿಗೇ ಸ್ಪರ್ಧಿಸಿ ದ್ದವು. ಎನ್‌ಸಿಪಿ ಅಜಿತ್ ಕುಮಾರ್ ಬಣದವರು ಕೂಡ ಸರ್ಕಾರದಲ್ಲಿ ಈ ಪಕ್ಷಗಳೊಂದಿಗೆ ಮೈತ್ರಿ ಹೊಂದಿದ್ದರು. ಆದರೆ ಬಿಎಂಸಿ ಚುನಾವಣೆಯಲ್ಲಿ ಎಲ್ಲರೂ ಪ್ರತ್ಯೇಕವಾಗಿ ಸ್ಪರ್ಧಿಸಿ ದ್ದರು. ಆದರೆ ಈ ಸಮೀಕರಣ ಪುಣೆಯಲ್ಲಿ ಬದಲಾಗಿತ್ತು. ಅಲ್ಲಿ ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸಿದ್ದವು.

ಆದರೆ, ಪುಣೆಯಲ್ಲಿ ಅಜಿತ್ ಪವಾರ್ ಬಣದ ಎನ್‌ಸಿಪಿ ಶರದ್ ಪವಾರ್ ಬಣದ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆದರೆ ನಾಗಪುರದಲ್ಲಿ ಈ ಎರಡೂ ಬಣಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಮುಂಬೈನಲ್ಲಿ ಕಾಂಗ್ರೆಸ್ ಪಕ್ಷ ಠಾಕರೆ ಸಹೋದರರ ಜೊತೆ ಮೈತ್ರಿ ಕಡಿದುಕೊಂಡಿತ್ತು, ಆದರೆ ಪುಣೆಯಲ್ಲಿ ಅವರ ಜೊತೆಗೇ ಕೈಜೋಡಿಸಿತ್ತು.

ಮುಂಬೈನಲ್ಲಿ ಕಾಂಗ್ರೆಸ್ ಜೊತೆ ಸೇರಿ ಸ್ಪರ್ಧಿಸಿದ್ದ ‘ವಂಚಿತ ಬಹುಜನ ಅಘಾಡಿ ಪಕ್ಷವು ಪುಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಸ್ಪರ್ಧಿಸಿತ್ತು. ಛತ್ರಪತಿ ಸಂಭಾಜಿ ನಗರದಲ್ಲಿ ಆಡಳಿತಾ ರೂಢ ಮೈತ್ರಿಕೂಟದ ಬಿಜೆಪಿ, ಶಿವಸೇನೆ (ಶಿಂದೆ) ಹಾಗೂ ಎನ್‌ಸಿಪಿ (ಅಜಿತ್) ಪಕ್ಷಗಳು ಪ್ರತ್ಯೇಕವಾಗಿಯೇ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.

ನಾಸಿಕ್‌ನಲ್ಲಿ ಬಿಜೆಪಿ ಒಂಟಿಯಾಗಿ ಸ್ಪರ್ಧಿಸಿದ್ದರೆ ಶಿಂದೆ ಮತ್ತು ಪವಾರ್ ಗುಂಪುಗಳು ಮೈತ್ರಿ ಮಾಡಿಕೊಂಡಿದ್ದವು. ನಂತರ ನಡೆದ ಮೇಯರ್ ಚುನಾವಣೆಯಲ್ಲೂ ಕೂಡ ಚಿತ್ರವಿಚಿತ್ರ ಮೈತ್ರಿಗಳು ಕಾಣಿಸಿದವು. ಭಿವಾಂಡಿ-ನಿಜಾಮ್‌ಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದುದರಿಂದ ಆ ಪಕ್ಷ ಸ್ನೇಹಾ ಪಾಟೀಲ್‌ರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದರೆ ಬಿಜೆಪಿ ನಾಯಕ ನಾರಾಯಣ ಚೌಧರಿ ಬಂಡೆದ್ದರು. ಅವರು ಶರದ್ ಪವಾರ್‌ರ ಎನ್‌ಸಿಪಿ ನೇತೃತ್ವದ ಭಿವಾಂಡಿ ಸೆಕ್ಯುಲರ್ ಫ್ರಂಟ್‌ನಿಂದ ಬೆಂಬಲ ಪಡೆದು ಮೇಯರ್ ಆದರು. ಅದನ್ನು ನೋಡಿ ಒಬ್ಬ ಬಿಜೆಪಿ ಕಾರ್ಯಕರ್ತ ತನ್ನ ಆತಂಕವನ್ನು ಜೋರಾಗಿಯೇ ವ್ಯಕ್ತಪಡಿಸಿದ್ದ.

ಹೊರಗಿನಿಂದ ಬಂದು ಬಿಜೆಪಿಯೊಳಗೆ ಸೇರಿಕೊಂಡಿರುವವರು ಈಗ ಎಲ್ಲಾ ಲಾಭವನ್ನೂ ಪಡೆದುಕೊಳ್ಳುತ್ತಿದ್ದಾರೆ, ಆದರೆ ದೀರ್ಘಾವಧಿಯಿಂದ ಇಲ್ಲೇ ಸೇವೆ ಸಲ್ಲಿಸುತ್ತಿರುವವರು ಜೀವನಪೂರ್ತಿ ಚಾಪೆ ಹಾಸುತ್ತಲೇ ಇದ್ದಾರೆ ಎಂದು ಆತ ಹೇಳಿಕೆ ನೀಡಿದ್ದು ಸುದ್ದಿ ಯಾಗಿತ್ತು. ಚಂದ್ರಾಪುರದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವುದಕ್ಕೆ ಅತ್ಯಂತ ಸನಿಹದಲ್ಲಿತ್ತು. ಆದರೆ ಶಿವಸೇನೆಯ ಉದ್ಧವ್ ಬಣದ ಬೆಂಬಲದೊಂದಿಗೆ ಅಲ್ಲಿ ಬಿಜೆಪಿ ಅಭ್ಯರ್ಥಿ ಮೇಯರ್ ಆದರು.

ಈಗಿನ ರಾಜಕೀಯ ವಾತಾವರಣದಲ್ಲಿ ಕೆಲವರು ರಾಮದಾಸ್ ಅಠಾವಳೆ ಬಹುಶಃ ಅತ್ಯಂತ ಪ್ರಾಮಾಣಿಕ ನಾಯಕ ಎಂದು ಹೊಗಳುತ್ತಾರೆ. ಅಠಾವಳೆಗೆ ಅವರ ಜಾಗ ಯಾವುದು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿದೆ. ಯಾರು ಅಧಿಕಾರದಲ್ಲಿದ್ದಾರೋ ಅವರ ಜೊತೆಗೆ ನಾವಿದ್ದೇವೆ ಮತ್ತು ಯಾರ ಜೊತೆಗೆ ನಾವಿದ್ದೇವೋ ಅವರು ಅಧಿಕಾರದಲ್ಲಿರುತ್ತಾರೆ ಎಂದು ಅವರು ಬಹಿರಂಗವಾಗಿಯೇ ಹೇಳುತ್ತಿದ್ದರು!

ಇದನ್ನೇ ನೇರವಾಗಿ ಹೇಳುವುದಾದರೆ, ಅಠಾವಳೆಯವರು ಯಾವುದೇ ಮುಚ್ಚುಮರೆಯಿಲ್ಲದೆ ಅಧಿಕಾರದ ಹಿಂದೆ ಓಡುತ್ತಿದ್ದರು. ಆದರೆ ಇನ್ನುಳಿದ ರಾಜಕಾರಣಿಗಳು ಹೀಗಲ್ಲ. ಅವರ ಮುಖಕ್ಕೆ ಬಣ್ಣ ಮೆತ್ತಿಕೊಂಡಿರುತ್ತದೆ. ಅದನ್ನು ಯಾವಾಗ ಬೇಕಾದರೂ ಒರೆಸಿ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಇನ್ನೊಂದು ಬಣ್ಣವನ್ನು ಅವರು ಬಳಿದುಕೊಳ್ಳುತ್ತಾರೆ.

ಒಂದು ಬಣ್ಣ ತೆಗೆದು, ಇನ್ನೊಂದು ಬಣ್ಣ ಹಚ್ಚಿಕೊಂಡು, ಮರುಕ್ಷಣವೇ ಅದನ್ನೂ ಅಳಿಸಿ, ಮತ್ತೊಂದು ಬಣ್ಣ ಬಳಿದುಕೊಳ್ಳುತ್ತಾ ಜೀವನಪೂರ್ತಿ ಬಣ್ಣ ಬದಲಾಯಿಸುತ್ತಲೇ ಇರುತ್ತಾರೆ. ನಾನು ಇಷ್ಟೆಲ್ಲಾ ಕಲರ್ ಫುಲ್ ಆಗಿರುವುದು ನಿಮಗೋಸ್ಕರ ಎಂದು ಮತದಾರ ರಿಗೆ ಮಂಕುಬೂದಿಯನ್ನು ಕೂಡ ಎರಚುತ್ತಿರುತ್ತಾರೆ. ತಮ್ಮ ಕೆಲಸ ಬರೀ ಚಪ್ಪಾಳೆ ಹೊಡೆ ಯುವುದು ಎಂಬುದು ಜನರಿಗೂ ಗೊತ್ತಿದೆ... ಹೀಗಾಗಿ ಅವರು ಚಪ್ಪಾಳೆ ಹೊಡೆಯುವು ದನ್ನು ಮುಂದುವರಿಸುತ್ತಾರೆ!