ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಕಳೆದ 11 ತಿಂಗಳಿಂದ ನಡೆದ ನಿರ್ದಾಕ್ಷಿಣ್ಯ ಕಾರ್ಯಾಚರಣೆ ಹಾಗೂ ಬೃಹತ್ ಜಾಗೃತಿ ಅಭಿಯಾನ ಗಳು ಡ್ರಗ್ ಮಾಫಿಯಾಕ್ಕೆ ಒಂದು ಲೆಕ್ಕದಲ್ಲಿ ಮರಣಶಾಸನ ಭೀತಿ ಮೂಡಿಸಿದೆ. ಕೇವಲ ಪೆಡ್ಲರ್‌ಗಳ ಬಂಧನಕ್ಕೆ ಸೀಮಿತವಾಗದ ಈ ಸಮರ, ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಸಾಮಾಜಿಕ ಚಳವಳಿಯಾಗಿ ರೂಪಾಂತರಗೊಂಡಿದೆ.

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

-

Profile
Ashok Nayak May 12, 2026 5:56 PM

ಜಿತೇಂದ್ರ ಕುಂದೇಶ್ವರ, ಮಂಗಳೂರು

ಶಿಕ್ಷಣ ಕಾಶಿಯ ಯುವಶಕ್ತಿ ರಕ್ಷಣೆಗೆ ಪೊಲೀಸ್ ಕಮಿಷನರ್ ದಿಟ್ಟ ಹೆಜ್ಜೆ

ನಿರಂತರ ಪೊಲೀಸ್ ಕಾರ್ಯಾಚರಣೆ, ಜಾಗೃತಿ

ಕರಾವಳಿಯ ಶೈಕ್ಷಣಿಕ ಹಬ್ ಮಂಗಳೂರಿನಲ್ಲಿ ಯುವಜನತೆಯ ಭವಿಷ್ಯವನ್ನು ಬಲಿ ಪಡೆಯಲು ಹೊಂಚು ಹಾಕಿದ್ದ ರಾಜ್ಯ ಮತ್ತು ಅಂತರ್ರ‍ಾಜ್ಯ ಮಾದಕ ಜಾಲದ ಬುಡವನ್ನೇ ಅಲುಗಾಡಿಸುವಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ಯಶಸ್ವಿಯಾಗಿದೆ.

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಕಳೆದ 11 ತಿಂಗಳಿಂದ ನಡೆದ ನಿರ್ದಾಕ್ಷಿಣ್ಯ ಕಾರ್ಯಾಚರಣೆ ಹಾಗೂ ಬೃಹತ್ ಜಾಗೃತಿ ಅಭಿಯಾನ ಗಳು ಡ್ರಗ್ ಮಾಫಿಯಾಕ್ಕೆ ಒಂದು ಲೆಕ್ಕದಲ್ಲಿ ಮರಣಶಾಸನ ಭೀತಿ ಮೂಡಿಸಿದೆ. ಕೇವಲ ಪೆಡ್ಲರ್‌ಗಳ ಬಂಧನಕ್ಕೆ ಸೀಮಿತವಾಗದ ಈ ಸಮರ, ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಸಾಮಾಜಿಕ ಚಳವಳಿಯಾಗಿ ರೂಪಾಂತರಗೊಂಡಿದೆ.

ಪೆಡ್ಲರ್‌ಗಳ ಜಾಲ ಧ್ವಂಸ: ಕಳೆದ ಒಂದು ವರ್ಷದ ಅವಧಿಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 133 ಮಾದಕ ವಸ್ತು ಮಾರಾಟ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು 260 ಪೆಡ್ಲರ್‌ಗಳನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಬಂಧಿತರಲ್ಲಿ 67 ಮಂದಿ ಹೊರ ರಾಜ್ಯದವರು ಹಾಗೂ ಇಬ್ಬರು ವಿದೇಶಿಯರು ಸೇರಿ ರುವುದು ಅಂತರ್‌ರಾಜ್ಯ ಜಾಲದ ತೀವ್ರತೆಯನ್ನು ತೋರಿಸುತ್ತದೆ. ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಬರೋಬ್ಬರಿ 8,44,61,510.

ಇದನ್ನೂ ಓದಿ: Zombie Drug: ಜೋಂಬಿ ಡ್ರಗ್ಸ್ ವಿಡಿಯೋ: ದುನಿಯಾ ವಿಜಿ, ಭಾಸ್ಕರ ರಾವ್‌ಗೆ ಎದುರಾಯ್ತು ಸಂಕಷ್ಟ

ವಿಶೇಷವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸುವ 7043 ಕೆ.ಜಿ ಎಂಡಿಎಂಎ ಮತ್ತು 316 ಕೆ.ಜಿ ಗಾಂಜಾವನ್ನು ಜಪ್ತಿ ಮಾಡುವ ಮೂಲಕ ಮಾಫಿಯಾದ ಆರ್ಥಿಕ ಬೆನ್ನೆಲುಬು ಮುರಿಯಲಾಗಿದೆ.

ಮಂಗಳೂರಿನ ಹೊರಭಾಗದಿಂದ ಮತ್ತು ಬೇರೆ ರಾಜ್ಯಗಳಿಂದ ನಗರದ ಶಿಕ್ಷಣ ಸಂಸ್ಥೆಗಳ ಆಸುಪಾಸಿಗೆ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಮೂಲಗಳನ್ನು ಭೇದಿಸಿರುವುದು ಈ ಕಾರ್ಯಾ ಚರಣೆಯ ಪ್ರಮುಖ ಯಶಸ್ಸು. ಕೇವಲ ಸ್ಥಳೀಯ ಮಾರಾಟಗಾರರನ್ನು ಬಂಧಿಸುವುದಕ್ಕೆ ಸೀಮಿತವಾಗದೆ, ಸಾಗಾಟದ ಕೊಂಡಿಗಳನ್ನೇ ಪೊಲೀಸರು ಗುರಿಯಾಗಿಸಿದ್ದಾರೆ.

ಡಿಜಿಟಲ್ ಕಣ್ಗಾವಲು: ಇಂದಿನ ಯುವಜನತೆ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದನ್ನು ಮನಗಂಡ ಕಮಿಷನರೇಟ್, ಡಿಜಿಟಲ್ ವೇದಿಕೆಯನ್ನು ಜಾಗೃತಿ ಯ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಒಟ್ಟು 145 ಜಾಗೃತಿ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಮ್ಮಿಕೊಳ್ಳಲಾಗಿದೆ.

ಗಮನಾರ್ಹ ಅಂಶವೆಂದರೆ, 2026ರ ಮೊದಲ ನಾಲ್ಕು ತಿಂಗಳಲ್ಲೇ 104 ಡಿಜಿಟಲ್ ಅಭಿಯಾನಗಳನ್ನು ನಡೆಸಲಾಗಿದ್ದು, ಇದು ತಂತ್ರಜ್ಞಾನದ ಮೂಲಕ ಯುವಜನತೆಯನ್ನು ಎಚ್ಚರಿ ಸುವ ಪರಿಣಾಮಕಾರಿ ಕ್ರಮವಾಗಿದೆ.

ಆಕಸ್ಮಿಕ ತಪಾಸಣೆ: ಪೊಲೀಸ್ ಇಲಾಖೆಯು ಕೇವಲ ಸಭೆ-ಸಮಾರಂಭಗಳಿಗೆ ಸೀಮಿತ ವಾಗದೆ, ಮೈದಾನಕ್ಕಿಳಿದು ಆಕಸ್ಮಿಕ ತಪಾಸಣೆ ನಡೆಸುವ ಮೂಲಕ ಮಾದಕ ವ್ಯಸನಿಗಳಲ್ಲಿ ನಡುಕ ಹುಟ್ಟಿಸಿದೆ. 2025ರ ಡಿಸೆಂಬರ್ 31ರಂದು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 989 ಜನರನ್ನು ಆಕಸ್ಮಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 52 ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿದ್ದು, ಸಂಭ್ರಮಾಚರಣೆಯ ನೆಪದಲ್ಲಿ ಡ್ರಗ್ಸ್ ಬಳಸುವವರಿಗೆ ಕಟ್ಟುನಿಟ್ಟಿನ ಸಂದೇಶ ರವಾನೆಯಾಗಿದೆ.

ಗಡಿ ಭಾಗದಲ್ಲಿ ನಿಗಾ: ಕೇರಳ ಗಡಿ ಭಾಗದ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಕೊಂಡು ನಡೆದ ತಪಾಸಣೆಯಲ್ಲಿ 188 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದ್ದು, ಈ ಮೂಲಕ ಹೊರಭಾಗದಿಂದ ಮಾದಕ ವ್ಯಸನ ಹರಡದಂತೆ ತಡೆಗೋಡೆ ನಿರ್ಮಿಸಲಾಗಿದೆ. ನಗರದ 188 ಕಾಲೇಜುಗಳಲ್ಲಿ ‘ಮಾದಕ ದ್ರವ್ಯ ವಿರೋಧಿ ಸಮಿತಿ’ಗಳನ್ನು ರಚಿಸಿ ನಿರಂತರ ನಿಗಾ ವಹಿಸಲಾಗಿದೆ.

ಬೃಹತ್ ತಪಾಸಣೆ: ಕಾಲೇಜುಗಳಲ್ಲಿ 7306 ವಿದ್ಯಾರ್ಥಿಗಳನ್ನು ಪರೀಕ್ಷೆ ಗೊಳಪಡಿಸ ಲಾಗಿದ್ದು, ವ್ಯಸನದ ಹಾದಿಯಲ್ಲಿದ್ದ 50 ವಿದ್ಯಾರ್ಥಿಗಳನ್ನು ಗುರುತಿಸಿ ಕೌನ್ಸೆಲಿಂಗ್ ಮೂಲಕ ಅವರ ಭವಿಷ್ಯವನ್ನು ರಕ್ಷಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ನಡೆದ ಜಾಗೃತಿ ಕಾರ್ಯಕ್ರಮಗಳ ಮೂಲಕ 24,895 ವಿದ್ಯಾರ್ಥಿಗಳನ್ನು ನೇರವಾಗಿ ತಲುಪಲಾಗಿದೆ.

ಸಾರ್ವಜನಿಕರ ಸಹಭಾಗಿತ್ವ: ಪೊಲೀಸ್ ಇಲಾಖೆ ಜಾರಿಗೆ ತಂದ QS ಕೋಡ್ ವ್ಯವಸ್ಥೆ ಯು ಮಾಫಿಯಾ ಪಾಲಿಗೆ ಸಿಂಹಸ್ವಪ್ನವಾಗಿದೆ. ಸಾರ್ವಜನಿಕರು ನೀಡಿದ ಅನಾ ಮಧೇಯ ದೂರುಗಳ ಆಧಾರದ ಮೇಲೆ 13 ಪೆಡ್ಲಿಂಗ್ ಪ್ರಕರಣಗಳನ್ನು ದಾಖಲಿಸಿ, 28 ಕೆ.ಜಿ ಗಾಂಜಾ ಹಾಗೂ ಮಾರಕ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಹೆತ್ತವರು ತಮ್ಮ ಮಕ್ಕಳ ಡ್ರಗ್ ಅಡಿಕ್ಷನ್ ಬಗ್ಗೆ ಕಮಿಷನರ್ ಅವರಿಗೆ ಮಾಹಿತಿ ನೀಡಿದಾಗ, ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಿ, ಮಾಫಿಯಾದ ಬುಡಕ್ಕೇ ಕೈಹಾಕಿದ ಶ್ಲಾಘನೀಯ ಕೆಲಸ ನಡೆದಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ʼಜಾಗೃತಿ ಕವಚ ʼ

ಪೊಲೀಸ್ ಕಮಿಷನರ್ ಅವರ ಈ ಹೋರಾಟದ ಹಾದಿ ಭಿನ್ನವಾದುದು. ಲಾಠಿ ಬೀಸದೆ, ಯುವಜನತೆಯ ಮನಪರಿವರ್ತನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಳೆದ 11 ತಿಂಗಳ ಅವಧಿಯಲ್ಲಿ ನಗರದಾದ್ಯಂತ ಒಟ್ಟು 188 ಶಾಲಾ-ಕಾಲೇಜುಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಅಭಿಯಾನದ ಮೂಲಕ ಬರೋಬ್ಬರಿ 24,895 ವಿದ್ಯಾರ್ಥಿಗಳನ್ನು ನೇರವಾಗಿ ತಲುಪಲಾಗಿದ್ದು, ಮಾದಕ ದ್ರವ್ಯದ ದುಷ್ಪರಿ ಣಾಮಗಳ ಕುರಿತು ಅರಿವು ಮೂಡಿಸಲಾಗಿದೆ. ಸಾರ್ವಜನಿಕರಿಗಾಗಿ ನಡೆಸಿದ 101 ಕಾರ್ಯಕ್ರಮಗಳಲ್ಲಿ ಸುಮಾರು 8759 ಜನರು ಭಾಗವಹಿಸಿ ಪೊಲೀಸರ ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ.

11 ತಿಂಗಳಲ್ಲಿ 454 ಪ್ರಕರಣಗಳು

ಕಳೆದ 11 ತಿಂಗಳಲ್ಲಿ ದಾಖಲಾದ ಮಾದಕ ವಸ್ತು ಸೇವನೆ ಪ್ರಕರಣಗಳ ಸಂಖ್ಯೆ 454ಕ್ಕೆ ತಲುಪಿದೆ. ಪೊಲೀಸರು ನಡೆಸಿದ ಒಟ್ಟು 8760 ಆಕಸ್ಮಿಕ ತಪಾಸಣೆಗಳಲ್ಲಿ 108 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಪ್ತಿಯಾದ ವಸ್ತುಗಳಲ್ಲಿ 21.03 ಗ್ರಾಂ ಕೊಕೇನ್, 186 ಗ್ರಾಂ ಅಫೀಮು ಮತ್ತು ಗಣನೀಯ ಪ್ರಮಾಣದ ಚರಸ್ ಸೇರಿದೆ. ವಿಶೇಷವಾಗಿ 2026ರ ಮೊದಲ ನಾಲ್ಕು ತಿಂಗಳಲ್ಲೇ 1.97 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿರುವುದು ಕಾರ್ಯಾ ಚರಣೆಯ ವೇಗಕ್ಕೆ ಸಾಕ್ಷಿಯಾಗಿದೆ.

image

ಮಂಗಳೂರು ಬೃಹತ್ ವಿದ್ಯಾರ್ಥಿ ಸಮೂಹವನ್ನು ಹೊಂದಿರುವ ನಗರ. ಈ ನಗರವನ್ನು ಡ್ರಗ್ಸ್ ಮುಕ್ತವಾಗಿ ಸುವುದು ನಮ್ಮೆಲ್ಲರ ಜವಾಬ್ದಾರಿ. ಪೆಡ್ಲರ್‌ಗಳನ್ನು ಬಂಧಿಸಿ ಪೂರೈಕೆ ತಡೆಯಲು ನಾವು ಬದ್ಧರಾಗಿದ್ದೇವೆ. ಹೆತ್ತವರು ಮತ್ತು ನಾಗರಿಕ ಸಮಾಜ ಕೈ ಜೋಡಿಸಿದಾಗ ಮಾತ್ರ ಈ ಹೋರಾಟ ಸಂಪೂರ್ಣ ಫಲ ನೀಡಲು ಸಾಧ್ಯ. ಸಾರ್ವಜನಿಕರ ಸಹಭಾಗಿತ್ವ ಮತ್ತು ಕಟ್ಟುನಿಟ್ಟಿನ ನಿಗಾ ಮೂಲಕ ನಗರವನ್ನು ಸುರಕ್ಷಿತವಾಗಿಡಬಹುದು

-ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಕಮಿಷನರ್