ʻನಾನು ರಾಮ, ಕೃಷ್ಣನನ್ನು ನೋಡಿಲ್ಲ, ಆದರೆ ಮೋದಿಯವರನ್ನು ನೋಡಿದ್ದೇನೆʼ; ಭಾವುಕರಾದ ತೆಲುಗಿನ ಹಿರಿಯ ನಟ
ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ಸಾಹಿತಿ ತನಿಕೇಳ್ಳ ಭರಣಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕ್ಷಣಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ಮೋದಿ ಅವರನ್ನು ಶ್ರೀರಾಮ, ಶ್ರೀಕೃಷ್ಣ ಮತ್ತು ಸ್ವಾಮಿ ವಿವೇಕಾನಂದರಿಗೆ ಹೋಲಿಸಿರುವ ಅವರು, ಪ್ರಧಾನಿಯವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದರಿಂದ ತಮ್ಮ ಜನ್ಮ ಸಾರ್ಥಕವಾಯಿತು ಎಂದು ಹೇಳಿದ್ದಾರೆ.
-
ಹಿರಿಯ ನಟ ಮತ್ತು ಸಾಹಿತಿ ತನಿಕೇಳ್ಳ ಭರಣಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ವೈಯಕ್ತಿಕ ವಿಚಾರಗಳು, ಸಿನಿಮಾ ಸುದ್ದಿಗಳು ಮತ್ತು ಶಿವತತ್ವದ ಬಗ್ಗೆ ಅವರು ಹೆಚ್ಚಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವರು ಮಾಡಿರುವ ಕಾಮೆಂಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮೋದಿ ಅವರು ಹೈದರಾಬಾದ್ ಪ್ರವಾಸದಲ್ಲಿದ್ದಾಗ ಅವರನ್ನು ಭೇಟಿಯಾದ ತನಿಕೆಲ್ಲ ಭರಣಿ, ಆ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಬಗ್ಗೆ ಏನಂದ್ರು ತನಿಕೇಳ್ಳ ಭರಣಿ?
ಪ್ರಧಾನಿ ನರೇಂದ್ರ ಮೋದಿ ಮೇಲಿರುವ ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿರುವ ತನಿಕೇಳ್ಳ ಭರಣಿ, ಮೋದಿ ಅವರನ್ನು ರಾಮ, ಕೃಷ್ಣ, ಆದಿಶಂಕರ ಮತ್ತು ವಿವೇಕಾನಂದರಿಗೆ ಹೋಲಿಸಿದ್ದಾರೆ. ಮೋದಿ ಅವರನ್ನು ನೇರವಾಗಿ ನೋಡುವುದು ಮಾತ್ರವಲ್ಲದೆ, ಅವರಿಗೆ ಹಸ್ತಲಾಘವ ಮಾಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
''ಶಿಲೆಗಳನ್ನಲ್ಲ, ಮೋದಿ-ಯೋಗಿಯನ್ನೇ ಪೂಜಿಸಿʼʼ: ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ
ನನ್ನ ಜನ್ಮ ಸಾರ್ಥಕವಾಯಿತು ಎಂದ ಭರಣಿ
"ನಾನು ರಾಮನನ್ನು ನೋಡಿಲ್ಲ, ಕೃಷ್ಣನನ್ನು ನೋಡಿಲ್ಲ, ಆದಿ ಶಂಕರಾಚಾರ್ಯರನ್ನು ನೋಡಿಲ್ಲ, ವಿವೇಕಾನಂದರನ್ನೂ ನೋಡಿಲ್ಲ. ಅಂದರೆ ನಾವು ಅವರನ್ನು ಈಗ ನೋಡಲು ಸಾಧ್ಯವೂ ಇಲ್ಲ ಎಂದರ್ಥ. ಆದರೆ ಆ ಮಹಾಪುರುಷರ ಅಂಶವನ್ನು ಹೊಂದಿರುವ ಮೋದಿ ಅವರನ್ನು ನಾನು ನೋಡಿದ್ದೇನೆ, ಅವರನ್ನು ಅಪ್ಪಿಕೊಂಡಿದ್ದೇನೆ ಮತ್ತು ಅವರೊಂದಿಗೆ ಹಸ್ತಲಾಘವ ಮಾಡಿದ್ದೇನೆ. ನನ್ನ ಜನ್ಮ ಸಾರ್ಥಕವಾಯಿತು" ಎಂದು ತನಿಕೇಳ್ಳ ಭರಣಿ ಹೇಳಿದ್ದಾರೆ.
ಹಿಂದೂತ್ವ ಮತ್ತು ಶಿವತತ್ವದ ಮೇಲೆ ಅಪಾರವಾದ ನಂಬಿಕೆ ಹೊಂದಿರುವ ತನಿಕೆಲ್ಲ ಭರಣಿ ಅವರು ನರೇಂದ್ರ ಮೋದಿಯವರನ್ನು ಪುರಾಣ ಪುರುಷರ ಅಂಶಕ್ಕೆ ಹೋಲಿಸಿರುವುದು ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಭರಣಿ ಅವರು ಈ ಹಿಂದೆಯೂ ಹಲವು ಬಾರಿ ಮೋದಿ ಅವರ ಕಾರ್ಯವೈಖರಿಯನ್ನು ಕೊಂಡಾಡಿದ್ದರು. "ಮೋದಿ ಅವರು ನಮ್ಮ ಸಂಸ್ಕೃತಿಯ ಬಗ್ಗೆ ಧೈರ್ಯವಾಗಿ ಮಾತನಾಡುವಂತೆ ಮಾಡಿದ ವ್ಯಕ್ತಿ" ಎಂದು ಪ್ರಶಂಸಿಸಿದ್ದರು. ಈಗ ಖುದ್ದು ಪ್ರಧಾನಿ ಮೋದಿ ಅವರನ್ನೇ ಭೇಟಿಯಾಗಿರುವುದು ಅವರಿಗೆ ಅತೀವ ಸಂತಸ ತಂದಿದೆ.
ಹೈದರಾಬಾದ್‌ಗೆ ಬಂದಿದ್ದ ಮೋದಿ
ಈಚೆಗೆ ಪ್ರಧಾನಿ ಮೋದಿ ಅವರು ಹೈದರಾಬಾದ್‌ಗೆ ಆಗಮಿಸಿದ್ದರು. ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಿದ ಅವರು ಬಿಜೆಪಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲೂ ಭಾಗವಹಿಸಿದ್ದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ನಿವಾಸಗಳಿಗೆ ಭೇಟಿ ನೀಡಿದ್ದರು.
ದೆಹಲಿಗೆ ವಾಪಸ್ ಹೊರಡುವಾಗ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ತನಿಕೆಲ್ಲ ಭರಣಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಭರಣಿ ನಮಸ್ಕರಿಸಿದಾಗ, ಪ್ರಧಾನಿಯವರು ಅವರನ್ನು ಹತ್ತಿರ ಕರೆದು ಆತ್ಮೀಯವಾಗಿ ಮಾತನಾಡಿಸಿದರು. ಈ ಫೋಟೋವನ್ನೇ ಭರಣಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೋದಿ ಬಗ್ಗೆ ತನಿಕೇಳ್ಳ ಭರಣಿ ಪೋಸ್ಟ್
నేను రాముణ్ణి చూడలేదు, కృష్ణుణ్ణి చూడలేదు, ఆదిశంకరుల్ని చూడలేదు, వివేకానందుణ్ణి చూడలేదు.
— Tanikella Bharani (@TanikellaBharni) May 11, 2026
అంటే చూడలేము కూడా.
కానీ వాళ్లందరి అంశలతో ఉన్న మోడీ గారిని చూశాను, ముట్టుకున్నాను, చేతిని ముద్దెట్టుకున్నాను.
నా జన్మ ధన్యం. pic.twitter.com/UepoVtqxyf
ತೆಲುಗು ಚಿತ್ರರಂಗದ ಹಿರಿಯ ನಟ
ತನಿಕೇಳ್ಳ ಭರಣಿ ಅವರು ಕೇವಲ ನಟರಾಗಿ ಮಾತ್ರವಲ್ಲದೆ ಕಥೆಗಾರರಾಗಿ, ನಿರ್ದೇಶಕರಾಗಿ ಮತ್ತು ಕವಿಯಾಗಿ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸುಮಾರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು ಖಳನಟರಾಗಿ, ಹಾಸ್ಯನಟರಾಗಿ ಮತ್ತು ಪೋಷಕ ನಟರಾಗಿಯೂ ಮಿಂಚಿದ್ದಾರೆ. ನಟನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ್ದ 'ಮಿಥುನಂ' ಚಿತ್ರವು ದೊಡ್ಡ ಹೆಸರು ಗಳಿಸಿತ್ತು.