ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಜೇವಾಕರ್ ಎಂದರೇನು ?

‘ಜೇವಾಕರ್’ ಎಂಬ ಪದವು ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸೂಚಿಸುವ ಜಾಗತಿಕ ವಾಗಿ ಚಾಲ್ತಿಯಲ್ಲಿರುವ ಒಂದು ಪದ. ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ, ನಿಗದಿತ ಸ್ಥಳಗಳಲ್ಲದೇ ರಸ್ತೆಯ ಮಧ್ಯಭಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ರಸ್ತೆ ದಾಟುವ ಪಾದಚಾರಿ ಗಳನ್ನು ಹೀಗೆ ಕರೆಯಲಾಗುತ್ತದೆ.

Vishweshwar Bhat Column: ಜೇವಾಕರ್ ಎಂದರೇನು ?

-

ಸಂಪಾದಕರ ಸದ್ಯಶೋಧನೆ

ಇತ್ತೀಚೆಗೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ Plane with 231 flyers runs over Jaywalker, engine catches fire ಎಂಬ ಹೆಡ್ ಲೈನ್ ಗಮನಿಸಿದೆ. ಇಲ್ಲಿ ಬಳಸಿದ ’Jaywalker’ ಅಂದರೆ ಏನು ಎಂಬುದು ಅನೇಕರಿಗೆ ಗೊತ್ತಿಲ್ಲದೇ ಇರಬಹುದು.

‘ಜೇವಾಕರ್’ ಎಂಬ ಪದವು ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸೂಚಿಸುವ ಜಾಗತಿಕವಾಗಿ ಚಾಲ್ತಿಯಲ್ಲಿರುವ ಒಂದು ಪದ. ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ, ನಿಗದಿತ ಸ್ಥಳಗಳಲ್ಲದೇ ರಸ್ತೆಯ ಮಧ್ಯಭಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ರಸ್ತೆ ದಾಟುವ ಪಾದಚಾರಿಗಳನ್ನು ಹೀಗೆ ಕರೆಯಲಾಗುತ್ತದೆ. ಅಷ್ಟಕ್ಕೂ ಜೇವಾಕರ್ ಎಂದರೆ ಯಾರು? ರಸ್ತೆಯನ್ನು ದಾಟಲು ಸಂಚಾರ ನಿಯಮಗಳು ನಿಗದಿಪಡಿಸಿದ ‘ಜೀಬ್ರಾ ಕ್ರಾಸಿಂಗ್’, ಪಾದ ಚಾರಿ ಮೇಲ್ಸೇತುವೆ (Foot over bridge) ಅಥವಾ ಸುರಂಗ ಮಾರ್ಗಗಳನ್ನು ಬಳಸದೇ, ತಮಗೆ ಇಷ್ಟಬಂದಂತೆ ರಸ್ತೆಯ ಮಧ್ಯೆ ನುಗ್ಗುವ ಪಾದಚಾರಿಗಳನ್ನು ‘ಜೇವಾಕರ್’ ಎಂದು ಕರೆಯಲಾಗುತ್ತದೆ.

ಅಂದರೆ, ಸಂಚಾರ ಸಂಕೇತ ಕೆಂಪು ಇರುವಾಗ ಅಥವಾ ವಾಹನಗಳು ವೇಗವಾಗಿ ಚಲಿಸು ತ್ತಿರುವಾಗ ನಿಯಮ ಬಾಹಿರವಾಗಿ ರಸ್ತೆ ದಾಟುವುದು ‘ಜೇವಾಕಿಂಗ್’ (Jaywalking) ಎನಿಸಿಕೊಳ್ಳುತ್ತದೆ. ‘Jay’ ಎಂಬುದು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ಬಳಕೆಯಲ್ಲಿದ್ದ ಒಂದು ಆಡುಭಾಷೆಯ ಪದ.

ಇದನ್ನೂ ಓದಿ: Vishweshwar Bhat Column: ವಿಮಾನದ ಕಿಟಿಕಿ ರಹಸ್ಯ

ಆಗಿನ ಕಾಲದಲ್ಲಿ ಹಳ್ಳಿಯಿಂದ ನಗರಕ್ಕೆ ಬಂದು, ನಗರದ ಸಂಕೀರ್ಣ ರಸ್ತೆಗಳ ಬಗ್ಗೆ ಅರಿವಿ ಲ್ಲದೆ ದಡ್ಡರಂತೆ ಓಡಾಡುವವರನ್ನು ’Jay’ ಎಂದು ಕರೆಯಲಾಗುತ್ತಿತ್ತು. 1900ರ ದಶಕದ ಆರಂಭದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಾಗ, ಪಾದಚಾರಿಗಳು ರಸ್ತೆಯ ಎಂದರಲ್ಲಿ ಓಡಾಡುತ್ತಿದ್ದುದರಿಂದ ಅಪಘಾತಗಳು ಹೆಚ್ಚಾದವು. ಈ ಸಂದರ್ಭದಲ್ಲಿ ವಾಹನ ತಯಾರಿಕಾ ಕಂಪನಿಗಳು ರಸ್ತೆಯ ಹಕ್ಕನ್ನು ವಾಹನಗಳಿಗೆ ಸೀಮಿತಗೊಳಿಸಲು ‘ಜೇವಾಕರ್’ ಎಂಬ ಪದವನ್ನು ಪ್ರಚಾರಕ್ಕೆ ತಂದವು.

ಪಾದಚಾರಿಗಳನ್ನು ತಪ್ಪಿತಸ್ಥರನ್ನಾಗಿ ಬಿಂಬಿಸಲು ಈ ಪದವನ್ನು ಅಸ್ತ್ರವಾಗಿ ಬಳಸ ಲಾಯಿತು. ಜೇವಾಕಿಂಗ್ ಕೇವಲ ಕಾನೂನು ಉಲ್ಲಂಘನೆಯಲ್ಲ, ಇದು ಪ್ರಾಣಾಪಾಯಕ್ಕೂ ಕಾರಣವಾಗುತ್ತದೆ. ವಾಹನ ಚಾಲಕರು ನಿರೀಕ್ಷಿಸದ ಸ್ಥಳದಲ್ಲಿ ಪಾದಚಾರಿಗಳು ಕಾಣಿಸಿ ಕೊಂಡಾಗ ಬ್ರೇಕ್ ಹಾಕಲು ಸಮಯ ಸಿಗದೇ ಅಪಘಾತಗಳು ಸಂಭವಿಸುತ್ತವೆ.

ಒಬ್ಬ ಪಾದಚಾರಿ ತಪ್ಪು ಜಾಗದಲ್ಲಿ ರಸ್ತೆ ದಾಟಿದಾಗ ಹಿಂದಿನ ಎಲ್ಲ ವಾಹನಗಳು ವೇಗ ಕಡಿಮೆ ಮಾಡಬೇಕಾಗುತ್ತದೆ, ಇದು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್‌ಗೆ ನಾಂದಿ ಯಾಗುತ್ತದೆ. ಅನೇಕ ದೇಶಗಳಲ್ಲಿ (ಸಿಂಗಾಪುರ, ಅಮೆರಿಕ ಸೇರಿದಂತೆ) ಇದಕ್ಕೆ ಭಾರಿ ದಂಡ ವಿದೆ. ಭಾರತದಲ್ಲೂ ಸಂಚಾರ ನಿಯಮಗಳ ಅಡಿಯಲ್ಲಿ ಪಾದಚಾರಿಗಳ ಶಿಸ್ತಿನ ಬಗ್ಗೆ ಕಾನೂನುಗಳಿವೆಯಾದರೂ, ಅವುಗಳ ಜಾರಿ ಅಷ್ಟು ಕಠಿಣವಾಗಿಲ್ಲ. ಭಾರತದಂಥ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಜೇವಾಕಿಂಗ್ ಒಂದು ದೊಡ್ಡ ಸವಾಲು.

ಬೆಂಗಳೂರಿನಂಥ ನಗರಗಳಲ್ಲಿ ಪಾದಚಾರಿ ಮಾರ್ಗಗಳ ಕೊರತೆ ಮತ್ತು ಅತಿಕ್ರಮಣ ದಿಂದಾಗಿ ಜನರು ಅನಿವಾರ್ಯವಾಗಿ ರಸ್ತೆಯ ಮೇಲೆ ನಡೆಯಬೇಕಾಗುತ್ತದೆ. ಸರಿಯಾದ ಜೀಬ್ರಾ ಕ್ರಾಸಿಂಗ್‌ಗಳ ಕೊರತೆ ಅಥವಾ ಅವು ಬಹಳ ದೂರದಲ್ಲಿರುವುದು ಜನರನ್ನು ನಿಯಮ ಉಲ್ಲಂಘಿಸಲು ಪ್ರೇರೇಪಿಸುತ್ತದೆ. ಆದರೆ, ಮೆಟ್ರೋ ನಿಲ್ದಾಣಗಳ ಬಳಿ ಅಥವಾ ಹೆದ್ದಾರಿಗಳಲ್ಲಿ ರಸ್ತೆ ದಾಟುವಾಗ ಪಾದಚಾರಿಗಳ ಸಣ್ಣ ನಿರ್ಲಕ್ಷ್ಯವೂ ದೊಡ್ಡ ದುರಂತಕ್ಕೆ ಕಾರಣವಾಗುತ್ತಿದೆ. ರಸ್ತೆ ಎಂಬುದು ಕೇವಲ ವಾಹನಗಳಿಗೆ ಮಾತ್ರವಲ್ಲ, ಪಾದಚಾರಿಗಳಿಗೂ ಸೇರಿದ್ದು. ಆದರೆ ಹಕ್ಕುಗಳ ಜತೆಗೆ ಜವಾಬ್ದಾರಿಯೂ ಮುಖ್ಯ.

‘ಜೇವಾಕರ್’ ಎನಿಸಿಕೊಳ್ಳುವ ಬದಲು, ಶಿಸ್ತಿನ ಪಾದಚಾರಿಯಾಗಿ ನಿಯಮ ಪಾಲಿಸುವುದು ನಮ್ಮ ಮತ್ತು ಇತರರ ಜೀವಕ್ಕೆ ಸುರಕ್ಷಿತ. ಗಡಿಯಾರದ ಮುಳ್ಳಿಗಿಂತ ಪ್ರಾಣದ ಬೆಲೆ ದೊಡ್ಡದು ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು.