ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಇದು ಉತ್ತಮ ಪುರುಷ ಬಹುವಚನ ಅಲ್ಲದ ನಾವು

ಅಯ್ಯೋ ವ್ಯಾಕರಣ ಅಂದ್ರೆ ತಲೆನೋವು, ಸಂಧಿ ಸಮಾಸಗಳನ್ನೆಲ್ಲ ನೆನ್ಪಿಟ್ಕೊಳ್ಳೋದು ನನ್ನ ಕೈಲಿ ಆಗಲ್ಲಪ್ಪ... ವ್ಯಾಕರಣ ಕ್ಯಾ ಕರನಾ... ಎಂದು ಮೂಗು ಮುರಿಯುವವರೂ ಚಿಂತಿಸಬೇಕಿಲ್ಲ. ಏಕೆಂದರೆ ಇದು ವ್ಯಾಕರಣ ಬೋಧನೆ ಅಲ್ಲ. ಸಂಧಿ ಸಮಾಸ ಲಿಂಗ ವಿಭಕ್ತಿ ಭೂತಕಾಲ ವರ್ತಮಾನಕಾಲ ಇತ್ಯಾದಿ ‘ಕಬ್ಬಿಣದ ಕಡಲೆ’ಗಳನ್ನು ಒಗ್ಗರಿಸಿದ ಉಸ್ಲಿ ಅಲ್ಲ ಗುಗ್ಗರಿಯೂ ಅಲ್ಲ.

ಇದು ಉತ್ತಮ ಪುರುಷ ಬಹುವಚನ ಅಲ್ಲದ ನಾವು

-

ತಿಳಿರು ತೋರಣ

ರಾಜ ಮಹಾರಾಜರು, ಮಠಾಧೀಶರು ಬಳಸುವ ‘ನಾವು’, ಪತ್ರಿಕೆಗಳ ಸಂಪಾದಕರು ಉಪಯೋಗಿ ಸುವ ‘ನಾವು’, ಲೇಖಕರು ಬರೆಯುವ ‘ನಾವು’, ಲಾಲನೆ- ಪಾಲನೆಯ ಹೊತ್ತಿಗೆ ಬಳಸುವ ‘ನಾವು’, ಸಂಘ ಸಂಸ್ಥೆಗಳ ನೆಲೆಯಿಂದ ಪ್ರಯೋಗಿಸುವ ‘ನಾವು’, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರಿಂದ ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್ ಆಗಿ ಚಿಮ್ಮುವ ‘ನಾವು’- ಎಲ್ಲದಕ್ಕೂ ಬೇರೆ ಬೇರೆ ಸ್ವರೂಪ, ಬೇರೆ ಬೇರೆ ಅರ್ಥ, ಧ್ವನಿಗಳೇ ಇವೆ. ಒಂದಿದ್ದಂತೆ ಇನ್ನೊಂದಿಲ್ಲ!

ಅಯ್ಯೋ ವ್ಯಾಕರಣ ಅಂದ್ರೆ ತಲೆನೋವು, ಸಂಧಿ ಸಮಾಸಗಳನ್ನೆಲ್ಲ ನೆನ್ಪಿಟ್ಕೊಳ್ಳೋದು ನನ್ನ ಕೈಲಿ ಆಗಲ್ಲಪ್ಪ... ವ್ಯಾಕರಣ ಕ್ಯಾ ಕರನಾ... ಎಂದು ಮೂಗು ಮುರಿಯುವವರೂ ಚಿಂತಿಸಬೇಕಿಲ್ಲ. ಏಕೆಂದರೆ ಇದು ವ್ಯಾಕರಣ ಬೋಧನೆ ಅಲ್ಲ. ಸಂಧಿ ಸಮಾಸ ಲಿಂಗ ವಿಭಕ್ತಿ ಭೂತಕಾಲ ವರ್ತಮಾನಕಾಲ ಇತ್ಯಾದಿ ‘ಕಬ್ಬಿಣದ ಕಡಲೆ’ಗಳನ್ನು ಒಗ್ಗರಿಸಿದ ಉಸ್ಲಿ ಅಲ್ಲ ಗುಗ್ಗರಿಯೂ ಅಲ್ಲ.

ಅಂಥವನ್ನೆಲ್ಲ ನಿಮ್ಮ ತಲೆಮೇಲೆ ಹೇರುವುದಿಲ್ಲ ಅಂತ ಬೇಕಿದ್ರೆ ವಚನ ಕೊಡ್ತೇನೆ. ಹಾಂ! ವಚನದಲ್ಲಿ ನಾಮಾಮೃತ ತುಂಬಿ ಎಂಬಂತೆ ಏಕವಚನ ಬಹುವಚನಗಳ ವಿಚಾರವನ್ನಷ್ಟೇ- ಅದೂ ವಿಷಯ ಪ್ರವೇಶಕ್ಕೊಂದು ಅನಿವಾರ್ಯ ಪೀಠಿಕೆಯಾಗಿ- ಪ್ರಸ್ತಾವಿಸುತ್ತೇನೆ. ಆ ಮೇಲಿನದೆಲ್ಲ ಜಯಂತ ಕಾಯ್ಕಿಣಿಯವರ “ನಮ್ಮ ವಚನ ಬಹುವಚನ..." ಹಾಡಿನಂತೆ ಸರಳ, ಸುರಳೀತ.

ಇದನ್ನೂ ಓದಿ: Srivathsa Joshi Column: ತಲೆಗೆ ಹತ್ತಬಲ್ಲ ಹತ್ತು ಲೆಕ್ಕ, ಉತ್ತರಗಳೂ ಪಕ್ಕ !

ಅತ್ಯಂತ ಸಿಂಪಲ್ ರೀತಿಯಲ್ಲಿ ಹೇಳಿ ಮುಗಿಸುವುದಾದರೆ, ಕನ್ನಡದಲ್ಲಿ ಮತ್ತು ಇತರ ಎಲ್ಲ ಭಾಷೆಗಳಲ್ಲೂ, ‘ನಾನು’ ಎಂದರೆ ಏಕವಚನ, ‘ನಾವು’ ಎಂದರೆ ಬಹುವಚನ. ಹೌದು ತಾನೆ? ಬಹುವಚನ ಎಂದರೆ, ಮಾತನಾಡುತ್ತಿರುವ ವ್ಯಕ್ತಿ ತನ್ನನ್ನು ಮಾತ್ರವಲ್ಲದೆ ಇನ್ನೂ ಕನಿಷ್ಠ ಒಬ್ಬರನ್ನಾದರೂ ಸೇರಿಸಿಕೊಂಡಿರುವ ಸನ್ನಿವೇಶದಲ್ಲಿ ಅದರ ಬಳಕೆ.

“ನಾವು ಬಂದೇವಾ ನಾವು ಬಂದೇವಾ... ನಾವು ಬಂದೇವ ಶ್ರೀಶೈಲ ನೋಡೋದಕ್ಕ..." ಎಂಬ ಚಿತ್ರಗೀತೆಯಲ್ಲಿ- ಅದೇ, ಪಾಪಪುಣ್ಯ ಚಿತ್ರಕ್ಕಾಗಿ ಪೀಠಾಪುರಂ ನಾಗೇಶ್ವರ ರಾವ್ ಹಾಡಿದ್ದರಲ್ಲಿ- ಒಬ್ಬನೇ ಭಕ್ತನ ಚಿತ್ರಣ ಇರುವುದಲ್ಲ, ಶ್ರೀಶೈಲ ದೇವಸ್ಥಾನದ ಆವರಣಕ್ಕೆ ಒಂದು ದೊಡ್ಡ ಭಕ್ತಸಮೂಹವೇ ಬಂದಿದೆ ಎಂದರ್ಥ.

ಚಿತ್ರದ ವಿಡಿಯೋದಲ್ಲೂ ಒಬ್ಬರಲ್ಲ ಮೂವರು ಭಕ್ತರು ಹಾಡುವುದನ್ನು ಗಮನಿಸಬಹುದು. ಹಾಗೆಯೇ ಶಂ.ಗು.ಬಿರಾದಾರರು ಬರೆದ ಪದ್ಯದ ಸಾಲು- “ನಾಳೆ ನಾವೇ ನಾಡಹಿರಿಯರು ನಮ್ಮ ಕನಸದು ಸುಂದರ..." ಇದರಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಆ ಕನಸಿದೆ ಎಂದರ್ಥ. ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ಎಂದೇ ಆ ಪದ್ಯ ಆರಂಭವಾಗುವುದು. ಮಕ್ಕಳೆಲ್ಲ ಸೇರಿ ಹಾಡುತ್ತಿರುವರೆಂಬ ಕಲ್ಪನೆ. “ನಾವು ಪರಿಸರ ರಕ್ಷಣೆಯ ಕಾಳಜಿ ವಹಿಸಿದರೇನೇ ನಮ್ಮ ಮುಂದಿನ ತಲೆಮಾರಿಗೆ ಈ ಭೂಮಿ ಉಳಿಯುತ್ತದೆ" ಎನ್ನುವಲ್ಲಿ ಆ ಜವಾಬ್ದಾರಿ ಒಬ್ಬನದೇ ಅಲ್ಲ, ಎಲ್ಲರ ಹೆಗಲ ಮೇಲೂ ಇದೆ ಎಂದರ್ಥ. ‘ನಾವು’ ಬಹುವಚನ ಎಂದು ಅರ್ಥಮಾಡಿ ಕೊಳ್ಳಲಿಕ್ಕೆ ಈ ಉದಾಹರಣೆಗಳು ಧಾರಾಳ ಸಾಕು.

62 ok

ಇದಕ್ಕೆ ವ್ಯತಿರಿಕ್ತವಾಗಿ, ಅಂದರೆ ಮಾತನಾಡುತ್ತಿರುವ ವ್ಯಕ್ತಿ ಒಬ್ಬನೇ (ಅಥವಾ ಒಬ್ಬಳೇ) ಆಗಿದ್ದಾಗಲೂ ‘ನಾವು’ ಎಂದೇ ಬಳಸುವ ಕೆಲವು ವಿಶೇಷ ಸಂದರ್ಭಗಳಿವೆ. ಅದೇ ಇಂದಿನ ಅಂಕಣದಲ್ಲಿ ನಾವು (ಅಂದರೆ ನಾನು ಮತ್ತು ನೀವು) ಸವಿಯಲಿಕ್ಕಿರುವ ಸ್ವಾರಸ್ಯ. ಮತ್ತೆ ಶೀರ್ಷಿಕೆಯಲ್ಲಿರುವ ‘ಉತ್ತಮ ಪುರುಷ’ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳಲಿಕ್ಕೆ ಹೋಗಬೇಡಿ. ಅದು, ವ್ಯಾಕರಣದ ಪರಿಭಾಷೆ. ನಾನು/ನಾವು ಅಂದರೆ ಉತ್ತಮ ಪುರುಷ; ನೀನು/ನೀವು ಅಂದರೆ ಮಧ್ಯಮ ಪುರುಷ; ಅವನು/ಅವಳು/ಅವರು ಅಂದರೆ ಪ್ರಥಮ ಪುರುಷ; ಅದರ ವಿವರಗಳೆಲ್ಲ ನಮಗೀಗ ಬೇಡ.

ನಾವಿಲ್ಲಿ ವಚನ ವಿಚಾರವನ್ನಷ್ಟೇ ಗಮನಿಸಿದರೆ ಸಾಕು. ಸರಿ, ಮಾತನಾಡುತ್ತಿರುವ ವ್ಯಕ್ತಿ ಒಬ್ಬನೇ ಆಗಿದ್ದಾಗಲೂ ‘ನಾವು’ ಎಂದೇ ಬಳಸುವ ಸಂದರ್ಭಗಳಿವೆ ಎಂದಿದ್ದೆನಷ್ಟೆ? ಯಾವುವು ಅವು? ಮೊದಲನೆಯದು ಚಕ್ರವರ್ತಿಗಳು, ರಾಜ-ಮಹಾರಾಜರು, ಧರ್ಮಗುರುಗಳು, ಮಠಾಧೀಶರು ಮುಂತಾದವರೆಲ್ಲ ಬಳಸುವ ‘ನಾವು’. ಇಂಗ್ಲಿಷ್‌ನಲ್ಲಿ ಇದನ್ನು Royal we ಅಥವಾ Pluralis Majestatis ಎನ್ನುತ್ತಾರೆ.

ನಿಮಗೆಲ್ಲ ಗೊತ್ತೇ ಇರಬಹುದಾದ, ಸರಳವಾದ ಉದಾಹರಣೆ ಕೊಡುವುದಾದರೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ‘ಬಿಸಿಲು-ಬೆಳದಿಂಗಳು’ ಅಂಕಣ ಬರೆಯುವ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಬಳಸುವ ‘ನಾವು’. ಅವರ ಅಂಕಣಬರಹಗಳಲ್ಲಿ ಉದಾಹರಣೆಗಳು ಸಿಗುತ್ತವೆ. “ಸಿಂಧುಭೈರವಿ ರಾಗದಲ್ಲಿರುವ ದೇವರನಾಮವನ್ನು ಪಿಟೀಲಿನಲ್ಲಿ ನುಡಿಸಲು ನಾವು ಕಲಿತದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರುವಾಗ" ಎಂದು ಬರೆಯುತ್ತಾರೆ. ಅವರ ಪೂರ್ವಾಶ್ರಮದ ವಿಚಾರವದು.

ಹಾಗೆಯೇ “ದಾವಣಗೆರೆ ಸುತ್ತಮುತ್ತಲಿನ ಗ್ರಾಮೀಣ ಭಕ್ತರು ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಮಠಕ್ಕೆ ಬಂದಿದ್ದರು. ನಮ್ಮ ಮಠದಲ್ಲಿ ಓದುವ ಸಾವಿರಾರು ಮಕ್ಕಳ ದಾಸೋಹಕ್ಕೆಂದು ಕ್ವಿಂಟಾಲ್ ಗಟ್ಟಲೆ ರಾಗಿ ತಂದಿದ್ದರು. ಅದರಿಂದಲೇ ನಮ್ಮ ತುಲಾಭಾರ ಮಾಡಬೇಕೆಂದು ಅವರ ಇಚ್ಛೆ. ತಕ್ಕಡಿಯಲ್ಲಿ ಕುಳಿತುಕೊಂಡು ಶಿಷ್ಯರ ಭಕ್ತಿಯನ್ನು ತೂಗಿ ನೋಡಲು ಮನಸ್ಸಾಗಲಿಲ್ಲ.

ತೂಕದ ಬಟ್ಟು ಇಡುವ ಜಾಗದಲ್ಲಿ ಅವರು ತಂದಿದ್ದ ರಾಗಿಯನ್ನೇ ಹಳೆಯ ಕಾಲದ ಕೊಳಗದಿಂದ ಹತ್ತಾರು ಬಾರಿ ನಾವು ಸುರಿದೆವು..." ಇತ್ತೀಚಿನ ಅಂಕಣವೊಂದರಲ್ಲಿ ಬರೆದಿದ್ದರು. ಓದುಗರಾಗಿ ನಮಗೆ ಗೊತ್ತಿರುತ್ತದೆ, ಅಲ್ಲಿ ಏಕವಚನ ರೂಪ ‘ನಾನು’ ಅಂತಿದ್ದರೂ ವಾಕ್ಯ ತಪ್ಪಾಗುವುದಿಲ್ಲ, ಅರ್ಥ ಬೇರೆಯಾಗುವುದಿಲ್ಲ ಎಂದು. ಆದರೆ ‘ನಾವು’ ಪದದಿಂದ ಮೂಡುವ ಘನತೆ-ಗೌರವ ಪೂಜ್ಯಭಾವ ‘ನಾನು’ ಅಂತಿದ್ದರೆ ಬರಲಾರದು.

ಕನ್ನಡದಲ್ಲಷ್ಟೇ ಅಥವಾ ಹಿಂದೂ ಧರ್ಮದಲ್ಲಷ್ಟೇ ಈ ‘ನಾವು’ ಶಿಷ್ಟಾಚಾರ ಸಂಪ್ರದಾಯ ಎಂದೇನಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲಿ ಪೋಪ್, ಬಿಷಪ್ ಮುಂತಾಗಿ ಧರ್ಮಗುರುಗಳ ಮಾತಿನಲ್ಲಿ, ಹೇಳಿಕೆಗಳಲ್ಲಿ, ಉಪದೇಶಗಳಲ್ಲಿ We ಅಂತಲೇ ಇರುತ್ತದೆ. ಹನ್ನೆರಡನೆಯ ಶತಮಾನದ ಇಂಗ್ಲಿಷ್ ಚಕ್ರವರ್ತಿ ಎರಡನೇ ಹೆನ್ರಿಯಿಂದ ಹಿಡಿದು ಇತ್ತೀಚೆಗಷ್ಟೇ ಅಸುನೀಗಿದ ರಾಣಿ ಎಲಿಜಬೆತ್ ವರೆಗೂ ಸಿಂಹಾಸನವನ್ನ ಲಂಕರಿಸಿದವರೆಲ್ಲ ಸಂಭಾಷಣೆಯಲ್ಲಿ We ಎಂದೇ ಬಳಸಿದ್ದಾರೆಯೇ ಹೊರತು ತಪ್ಪಿಯೂ ಐ ಎಂದು ಹೇಳಿಲ್ಲ.

ವಿಕ್ಟೋರಿಯಾ ರಾಣಿಯ ‘We are not amused" ಹೇಳಿಕೆಯಂತೂ ಜನಜನಿತ ಮತ್ತು ಬಹುಚರ್ಚಿತ. ಯಾವುದೋ ಹಾಸ್ಯಪ್ರಸ್ತುತಿ ಅಷ್ಟೊಂದು ನಗು ತರಿಸದಿದ್ದಾಗ ರಾಣಿ ಗಂಭೀರವದನೆಯಾಗಿ ಪ್ರಕಟಪಡಿಸಿದ ಪ್ರಾಮಾಣಿಕ ಅಭಿಪ್ರಾಯವದು. ನಿಜವಾಗಿ ನಡೆದಿದ್ದಲ್ಲ ಅದೊಂದು ಕಟ್ಟುಕಥೆ ಎಂದು ಕೂಡ ಹೇಳಲಾಗುತ್ತದೆ.

1989ರಲ್ಲಿ ಬ್ರಿಟನ್‌ನ ಪ್ರಧಾನಿಯಾಗಿದ್ದ ಮಾರ್ಗರೇಟ್ ಥ್ಯಾಚರ್ ಒಂದು ಸುದ್ದಿಗೋಷ್ಠಿಯಲ್ಲಿ ‘We have become a grandmother!" ಎಂದು ಉದ್ಘೋಷಿಸಿದ್ದರು. ಅವರೇನೂ ರಾಜಮನೆತನದವರಲ್ಲ, ರಾಜಕಾರಣಿ ಅಷ್ಟೇ. ಹಾಗಾಗಿ ಖಾಸಗಿ ವಿಚಾರವೊಂದನ್ನು ಪ್ರಕಟಿಸುವಾಗ ‘ನಾವು’ ಬಳಸುವ ಅರ್ಹತೆ ಅವರಿಗಿಲ್ಲ ಎಂದು ಆಗೊಂದಿಷ್ಟು ಚರ್ಚೆಯೂ ಆಗಿತ್ತು. ರಾಜಮನೆತನದ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್‌ಟನ್‌ಳ ಪ್ರಣಯದ ಸತ್ಯಕಥೆಯನ್ನಾಧರಿಸಿ The Royal We ಎಂಬ ಪುಸ್ತಕವೂ ಪ್ರಕಟವಾಗಿದೆ. ಅಂದಹಾಗೆ, ಕೊರಾನ್‌ನಲ್ಲಿ ಎಷ್ಟೋಕಡೆ ಅಲ್ಲಾಹುವಿನ ಮಾತುಗಳಲ್ಲಿ ‘ನಹ್ನು’ ಪದ (ಅರೇಬಿಕ್ ಭಾಷೆಯಲ್ಲಿ ಆ ಪದಕ್ಕೆ ‘ನಾವು’ ಎಂದರ್ಥ) ಬಳಕೆಯಾಗಿದೆಯಂತೆ! ಎರಡನೆಯದು, ಪತ್ರಿಕೆಗಳ ಸಂಪಾದಕರು ಬಳಸುವ ‘ನಾವು’. ಇಂಗ್ಲಿಷ್‌ನಲ್ಲಿ ಇದನ್ನು Editorial we ಎನ್ನುತ್ತಾರೆ. ಪತ್ರಿಕೆಗೊಬ್ಬ ಪ್ರಧಾನ ಸಂಪಾದಕನಿರುತ್ತಾನೆ, ಸಂಪಾದಕೀಯವನ್ನು ಅವನೇ ಬರೆಯುತ್ತಾನೆ ಎಂಬ (ತಪ್ಪು) ಕಲ್ಪನೆಯಿಂದ ಹೊರಬಂದರೆ ನಮಗಿದು ಸುಲಭವಾಗಿ ಅರ್ಥವಾಗುತ್ತದೆ.

ಸಾಮಾನ್ಯವಾಗಿ ದೊಡ್ಡ ಪತ್ರಿಕೆಗಳಲ್ಲೆಲ್ಲ ಸಂಪಾದಕ ವರ್ಗದಲ್ಲಿ ಆರೇಳು ಸದಸ್ಯರಿರುತ್ತಾರೆ. ಅವರೆಲ್ಲ ಪಾಳಿಯಂತೆ ಅಥವಾ ಒಂದೊಂದು ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರಾಗಿ ಸಂಪಾದಕೀಯ ಬರೆಯುತ್ತಾರೆ. ಹಾಗಾಗಿ ‘ನಾವು’ ಎಂದರೆ ಸಂಪಾದಕವರ್ಗ ಎಂದೇ ಅರ್ಥ ವಾಗುತ್ತದೆ. ಒಂದೊಮ್ಮೆ ಒಬ್ಬನೇ ಸಂಪಾದಕನಿದ್ದರೂ, ಅವನೇ ಸಂಪಾದಕೀಯ ಬರೆಯಬೇಕಾಗಿ ಬಂದರೂ ಆತ ಪತ್ರಿಕೆಯ ಮಾಲೀಕ ಮತ್ತು ಆಡಳಿತವರ್ಗವನ್ನೂ ಪ್ರತಿನಿಧಿಸುತ್ತ ‘ನಾವು’ ಎಂದೇ ಬಳಸುತ್ತಾನೆ.

“ನಿನ್ನೆಯ ಸಂಚಿಕೆಯಲ್ಲಿ ತಪ್ಪು ಮಾಹಿತಿ ಪ್ರಕಟಿಸಿದ್ದಕ್ಕಾಗಿ ವಿಷಾದಿಸುತ್ತೇವೆ" ಎನ್ನುತ್ತಾನೆ; “ನೆರೆಪರಿಹಾರ ನಿಧಿಗೆ ನೆರವಾಗುವಂತೆ ನಾವು ಕೊಟ್ಟ ಕರೆಗೆ ಸ್ಪಂದಿಸಿದ ಓದುಗರೆಲ್ಲರಿಗೂ ಕೃತಜ್ಞರಾಗಿದ್ದೇವೆ" ಎಂದು ಧನ್ಯತಾಭಾವ ವ್ಯಕ್ತಪಡಿಸುತ್ತಾನೆ. ಹಾಗಂತ, ಪತ್ರಿಕೆಯ ಸಂಪಾದಕ ಅದೇ ಪತ್ರಿಕೆಯಲ್ಲಿ ವ್ಯಕ್ತಿಗತ ಅಂಕಣವನ್ನೂ ಬರೆಯುತ್ತಿದ್ದರೆ ಅಲ್ಲಿ ‘ನಾವು’ ಅವಶ್ಯವಿಲ್ಲ, ಸರಿಹೊಂದುವುದೂ ಇಲ್ಲ.

ವಿಶ್ವವಾಣಿ ಪತ್ರಿಕೆಯದೇ ಉದಾಹರಣೆ ತೆಗೆದುಕೊಳ್ಳೋಣ. ಸಂಪಾದಕೀಯವನ್ನು ವಿಶ್ವೇಶ್ವರ ಭಟ್ಟರೇ ಬರೆಯಲಿ ಅಥವಾ ಸಂಪಾದಕೀಯ ತಂಡದ ಬೇರಾರೇ ಬರೆಯಲಿ ಅಲ್ಲಿ ‘ನಾನು’ ಧ್ವನಿ ಬಳಕೆಯಾಗುವು ದಿಲ್ಲ. ಆದರೆ ವಿಶ್ವೇಶ್ವರ ಭಟ್ಟರ ಜನಪ್ರಿಯ ಅಂಕಣಗಳಾದ ‘ನೂರೆಂಟು ವಿಶ್ವ’, ‘ಸಂಪಾದಕರ ಸದ್ಯಶೋಧನೆ’, ‘ಇದೇ ಅಂತರಂಗ ಸುದ್ದಿ’ಗಳಲ್ಲಿ ಅವರು ಸಂದರ್ಭೋಚಿತವಾಗಿ ‘ನಾನು’ ಎಂದೇ ಧಾರಾಳವಾಗಿ ಬಳಸುತ್ತಾರೆ; ಬರಹವನ್ನು ಮತ್ತಷ್ಟು ಆಪ್ತವಾಗಿಸುತ್ತಾರೆ.

Editorial we ವಿಚಾರ ಬಂದಾಗ ಬ್ರಾಯನ್ ವಿಲಿಯಮ್ಸ್‌ನ ಅಧಃಪತನದ ಕಥೆಯೂ ನೆನಪಾಗುತ್ತದೆ. ಅಮೆರಿಕದ ಖ್ಯಾತ ಟಿವಿ ಜರ್ನಲಿಸ್ಟ್ ಮತ್ತು ಎನ್‌ಬಿಸಿ ನ್ಯೂಸ್ ವಾಹಿನಿಯ ಪ್ರಮುಖ ನಿರೂಪಕ ನಾಗಿದ್ದ ಬ್ರಾಯನ್ ವಿಲಿಯಮ್ಸ್ 2003ರಲ್ಲಿ ಇರಾಕ್ ಯುದ್ಧದ ವರದಿಗಾರಿಕೆಗಾಗಿ ಹೋಗಿದ್ದನು. ಅಮೆರಿಕ ಸೇನೆಯ ಚಿನೂಕ್ ಹೆಲಿಕಾಪ್ಟರ್‌ಗಳಲ್ಲಿ ಪ್ರಯಾಣಿಸುತ್ತಿದ್ದಾಗ ಒಂದು ಹೆಲಿಕಾಪ್ಟರ್ ಮೇಲೆ ಶತ್ರುಗಳು ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಸಿದ್ದರು.

2003ರ ಆರಂಭಿಕ ವರದಿಯಲ್ಲಿ ಬ್ರಾಯನ್ ತಾನು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ ಮುಂದೆ ಹೋಗುತ್ತಿದ್ದ ಮತ್ತೊಂದು ಹೆಲಿಕಾಪ್ಟರ್‌ಗೆ ದಾಳಿಯಾಗಿದೆ ಎಂದು ಸರಿಯಾಗಿಯೇ ವರದಿ ಮಾಡಿದ್ದನು. ಆದರೆ ವರ್ಷಗಳು ಕಳೆದಂತೆ ಬ್ರಾಯನ್ ಈ ಕಥೆಯನ್ನು ಬದಲಾಯಿಸುತ್ತಾ ಬಂದನು. 2013ರ ಟಾಕ್ ಶೋ ಒಂದರಲ್ಲಿ ಮತ್ತು 2015ರ ಜನವರಿಯಲ್ಲಿ ಎನ್‌ಬಿಸಿ ನೈಟ್ಲೀ ನ್ಯೂಸ್ ಪ್ರಸಾರ ದಲ್ಲೂ, ತಾನು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರೇ ದಾಳಿಗೆ ಒಳಗಾದದ್ದು ಮತ್ತು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದದ್ದು ಎಂದು ಕಥೆಯನ್ನು ರಂಜಿಸಿದನು.

The Helicopter we were flying in was attacked... ಎಂದು Editorial we ಬಳಸಿದನು. ಟಿವಿಯಲ್ಲಿ ಈ ಸುಳ್ಳು ಕಥೆ ಪ್ರಸಾರವಾದಾಗ, 2003ರ ನೈಜ ಘಟನೆಯಲ್ಲಿ ಭಾಗಿಯಾಗಿದ್ದ ಅಮೆರಿಕದ ಸೈನಿಕರು ಫೇಸ್‌ಬುಕ್ ಮತ್ತು ಮಿಲಿಟರಿ ಬ್ಲಾಗ್‌ಗಳ ಮೂಲಕ ಸತ್ಯವನ್ನು ಬಹಿರಂಗಪಡಿಸಿದರು. ಬ್ರಾಯನ್ ವಿಲಿಯಮ್ಸ್ ಇದ್ದ ಹೆಲಿಕಾಪ್ಟರ್‌ಗೆ ಯಾವುದೇ ದಾಳಿಯಾಗಿರಲಿಲ್ಲ, ದಾಳಿಗೊಳಗಾದ ಹೆಲಿಕಾಪ್ಟರ್‌ಗಿಂತ ಈತನ ಹೆಲಿಕಾಪ್ಟರ್ ಸುಮಾರು ಒಂದು ಗಂಟೆ ತಡವಾಗಿ ಆ ಸ್ಥಳಕ್ಕೆ ಬಂದು ತಲುಪಿತ್ತು ಎಂದು ಸೈನಿಕರು ಸಾಕ್ಷಿಸಮೇತ ವಿವರಿಸಿದರು.

ವಿವಾದ ತಾರಕಕ್ಕೇರಿದಾಗ ಬ್ರಾಯನ್ 12 ವರ್ಷಗಳ ಹಳೆಯ ನೆನಪಿನ ಗೊಂದಲದಿಂದ ಹೀಗಾಗಿದೆ ಎಂದು ಕ್ಷಮೆ ಯಾಚಿಸಿದನು. ಒಬ್ಬ ಪ್ರಮುಖ ಪತ್ರಕರ್ತನ ವಿಶ್ವಾಸಾರ್ಹತೆಗೆ ತೀವ್ರ ಧಕ್ಕೆ ಉಂಟಾದ ಕಾರಣ, ಎನ್‌ಬಿಸಿ ನ್ಯೂಸ್ ಸಂಸ್ಥೆ ಆತನನ್ನು ಅಮಾನತು ಮಾಡಿತು. ಆತನ Editorial we ಘನಂದಾರಿಕೆ ಯಾವುದೇ ಉಪಯೋಗಕ್ಕೆ ಬರಲಿಲ್ಲ. ಮೂರನೆಯದು, ಲೇಖಕರು ಬಳಸುವ ‘ನಾವು’.

ಇಂಗ್ಲಿಷ್‌ನಲ್ಲಿ ‘Author's we’. ಹೆಚ್ಚಾಗಿ ವಿಜ್ಞಾನ-ತಂತ್ರಜ್ಞಾನ ಬರಹಗಾರರು ಉಪಯೋಗಿಸುತ್ತಾರೆ. ಓದುಗರ ಬುದ್ಧಿಮತ್ತೆಯನ್ನು (ಅಥವಾ ಜ್ಞಾನದ ಹಸಿವನ್ನು) ತನ್ನ ಮಟ್ಟಕ್ಕೇ ಊಹಿಸಿಕೊಳ್ಳುವ ಲೇಖಕ ‘ನಾವು’ ಎನ್ನುವಾಗ ಅದರಲ್ಲಿ ಲೇಖಕ-ಓದುಗ ಇಬ್ಬರೂ ಒಳಗೊಳ್ಳುತ್ತಾರೆ. ಉದಾಹರಣೆಗೆ- “ಜಲಜನಕದ ಎರಡು ಪರಮಾಣುಗಳು ಮತ್ತು ಆಮ್ಲಜನಕದ ಒಂದು ಪರಮಾಣು ಸೇರಿ ನೀರು ಆಗಿದೆ ಎಂದು ನಾವು ಬಲ್ಲೆವು. ಈ ಸಂಯುಕ್ತದಿಂದ ಜಲಜನಕದ ಒಂದು ಪರಮಾಣುವನ್ನು ಪ್ರತ್ಯೇಕಿಸಿದರೆ ಏನಾಗುತ್ತದೆ ಎಂದು ಈಗ ಒಂದು ಪ್ರಯೋಗ ಮಾಡೋಣ." - ಈ ಧಾಟಿಯ ವಾಕ್ಯ ಗಳಿದ್ದರೆ ವಿಜ್ಞಾನ ಬರಹವು ಓದುಗನಿಗೆ ಕಬ್ಬಿಣದ ಕಡಲೆಯಾಗುವುದು ಸ್ವಲ್ಪವಾದರೂ ಕಡಿಮೆ ಯಾಗುತ್ತದೆ.

ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ನ ಬರೆವಣಿಗೆಯಲ್ಲಿ, ಆತ ತನ್ನೊಬ್ಬನ ಪ್ರಯೋಗಗಳ ಬಗ್ಗೆ ವಿವರಿಸಿದ್ದರಲ್ಲೂ, we ಬಳಸಿದ ವಾಕ್ಯಗಳು ಅಲ್ಲೊಂದು ಇಲ್ಲೊಂದು ಕಂಡುಬರುತ್ತವೆ. ಕೊನೆಯ ದಾಗಿ, ಲಾಲನೆ-ಪಾಲನೆಯಿಂದ ಬಳಸುವ ‘ನಾವು’.

ಇಂಗ್ಲಿಷ್‌ನಲ್ಲಿ ಇದನ್ನು Patronising we ಎನ್ನುತ್ತಾರೆ. ಪುಟ್ಟ ಮಗುವಿಗೆ “ನಾವು ಇನ್ನು ತಾಚಿ ಮಾಡೋಣ್ವಾ?" ಎಂದು ಅಮ್ಮ ಕೇಳ್ತಾಳಲ್ಲ, ಅಲ್ಲಿ ಉದ್ದೇಶವಿರುವುದು ಮಗು ನಿದ್ದೆ ಮಾಡಬೇಕು ಎಂದು. ಅಮ್ಮ ಏನೂ ಆಗಲೇ ಮಲಗುವುದಕ್ಕೆ ಸಿದ್ಧಳಿರುವುದಿಲ್ಲ. ಮಗುವನ್ನು ಮಲಗಿಸಿದ ಮೇಲೆ ಮುಗಿಸಬೇಕಾದ ಮನೆಗೆಲಸಗಳು ರಾಶಿ ಬಿದ್ದಿರುತ್ತವೆ. ಆದರೂ ಮಗುವಿನೊಡನೆ ಸಂಭಾಷಿಸುವ ರೀತಿ ಹಾಗಿರುತ್ತದೆ. ಇಂಥದೇ ಕೇರ್‌ಟೇಕಿಂಗ್ ‘ನಾವು’ ಪ್ರಯೋಗವನ್ನು ಆಸ್ಪತ್ರೆಯಲ್ಲಿ ಕೆಲವು ವೈದ್ಯರು-ದಾದಿಯರೂ ಮಾಡುವುದಿದೆ.

“ಈವತ್ತು ಹೇಗಿದೆ ನಮ್ಮ ಕೈ ನೋವು?" ಅಥವಾ “ಈವತ್ತು ಬೆಳಿಗ್ಗೆ ನಾವು ಮಾತ್ರೆ ತಗೊಂಡಿದ್ವಾ ಇಲ್ವಾ?" ಎಂದು ರೋಗಿಯ ಜೊತೆ ಮಾತಾಡಿದರೆ ಅಲ್ಲಿ ಒಂದಿಷ್ಟು ಸಾಂತ್ವನದ ಸಿಂಚನವಾಗು ತ್ತದೆ. ರೋಗಿಯ ಮನಸ್ಸು ಒಂದು ಕ್ಷಣಕ್ಕಾದರೂ ಹಗುರಾಗಿ ತೇಲುತ್ತದೆ. ಇನ್ನೂ ಕೆಲವು ಸಂದರ್ಭ ಗಳಲ್ಲಿನ ‘ನಾವು’ ಬಳಕೆ ಚಿಂತನಯೋಗ್ಯವಾಗಿದೆ. ಎಷ್ಟೋಸರ್ತಿ ಈ ಸಣ್ಣಪುಟ್ಟ ಗೃಹೋದ್ಯಮ ಗಳೆಲ್ಲ ‘ವನ್ ಮ್ಯಾನ್ ಶೋ’ ಬಿಸಿನೆಸ್ಸುಗಳಾಗಿರುವುದೇ ಹೆಚ್ಚು. ಆದರೂ ಅವರ ಅಂಗಡಿಮುಂಗಟ್ಟಿನ ಫಲಕಗಳು ‘ನಾವು’ ಧಾಟಿಯಲ್ಲೇ ಇರುತ್ತವೆ.

ಒಬ್ಬ ಹೊಲಿಗೆಯಂತ್ರ ಇಟ್ಟುಕೊಂಡು ಸಣ್ಣ ಮಟ್ಟದ ಉದ್ಯಮ ನಡೆಸುತ್ತಿರುತ್ತಾನೆ ಎಂದುಕೊಳ್ಳೋಣ. ಅವನ ಬೋರ್ಡ್‌ನಲ್ಲಿ “ಇಲ್ಲಿ ಸೀರೆಗಳಿಗೆ ಫಾಲ್ ಜೋಡಿಸಿಕೊಡುತ್ತೇವೆ" ಎಂದು ಬಹುವಚನದ ಧಾಟಿ ಇರುತ್ತದೆಯೇ ಹೊರತು ‘ಜೋಡಿಸಿಕೊಡುತ್ತೇನೆ’ ಎಂದು ಏಕವಚನ ಅಲ್ಲ. ಅದೇ ರೀತಿ ಎರಡು-ಮೂರು ಸಬ್ಜೆಕ್ಟ್‌ಗಳಲ್ಲಿ ಟ್ಯೂಷನ್ ಹೇಳಿಕೊಡುವವ ಒಬ್ಬನೇ ಮಹಾನುಭಾವನಾದರೂ “ಇಲ್ಲಿ ಟ್ಯೂಷನ್ ಹೇಳಿಕೊಡುತ್ತೇವೆ" ಎಂದೇ ಫಲಕ ಹಾಕಿಸಿರುತ್ತಾನೆ.

ಬಹುಶಃ ಅಲ್ಲಿ ವೈಯುಕ್ತಿಕ ನೆಲೆಗಿಂತ ಸಾಂಕ ಅಥವಾ ಸಾಂಸ್ಥಿಕ ಕಲ್ಪನೆ ಇರುವುದರಿಂದ, ಸಾರ್ವಜನಿಕ ಉದ್ಯಮದ ದೃಷ್ಟಿಕೋನ ಇರುವುದರಿಂದ ‘ನಾನು’ಗಿಂತ ‘ನಾವು’ ಎಂಬ ಬಹುವಚನ ಧ್ವನಿ ಹೆಚ್ಚು ಸೂಕ್ತವೆನಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್ ಆಗಿ, ಇನ್ಸ್ಟಾಗ್ರಾಮ್ ರೀಲುಗಳ ಮತ್ತು ಮೀಮ್‌ಗಳ ಶೀರ್ಷಿಕೆಯಾಗಿ ಹೆಚ್ಚು ಬಳಕೆಯಾಗುವ “ಹೆಂಗೆ ನಾವು?"ವನ್ನೂ ನೀವು ಗಮನಿಸಿರಬಹುದು. ಅಥವಾ ನೀವೇ ಕೆಲವೊಮ್ಮೆ ಬಳಸಿರ ಲೂಬಹುದು! ‘ಲವ್ ಮಾಕ್ಟೇಲ್’ ಕನ್ನಡ ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ ರಚನಾ ಇಂದರ್, ಆ ಚಿತ್ರದಲ್ಲಿನ ಸಂಭಾಷಣೆಯಲ್ಲಿ ಪದೇ ಪದೇ “ಹೆಂಗೆ ನಾವು?" ಎಂದು (ಭುಜ ತಟ್ಟಿಕೊಂಡು, ಇಲ್ಲದ ಮೀಸೆ ಹುರಿದುಕೊಂಡು) ಹೇಳುತ್ತಿದ್ದುದರಿಂದ ಚಂದನವನದಲ್ಲಿ ‘ಹೆಂಗೆ ನಾವು’ ರಚನಾ ಎಂದೇ ಪರಿಚಿತರು.

ನಾನು ಗಮನಿಸಿದಂತೆ ಫೇಸ್‌ಬುಕ್ ಇನ್ಸ್ಟಾಗ್ರಾಮ್‌ಗಳಲ್ಲಿ ‘ಹಾಗೇ ಸುಮ್ಮನೆ’ಯ ಹಾಗೆಯೇ ಜಾಸ್ತಿ ಬಳಕೆಯಾಗುವ ಶೀರ್ಷಿಕೆ ಅಥವಾ ಉದ್ಗಾರವೆಂದರೆ “ಹೆಂಗೆ ನಾವು?". ಅದೂ ಹೆಂಗಸರೇ ಹೆಚ್ಚು. ನಿಜವಾಗಿ ಯಾರಾದರೂ ವೀರರಮಣಿ ಮಹಿಳಾಮಣಿಗಳು ಮನೆಯಲ್ಲಿ ಜಿರಳೆ ಸಂಹಾರ ಮಾಡಿ “ಹೆಂಗೆ ನಾವು?" ಎಂದು ರೀಲ್ ಹಾಕಿದರೆ ಗ್ರೇಟ್ ಎನ್ನಬೇಕಾದ್ದೇ. ಆಗ ಬೇಕಿದ್ದರೆ ನಾನೂ ಇಂದಿನ ಅಂಕಣದ ಶೀರ್ಷಿಕೆಯನ್ನು- ಇದು ಉತ್ತಮ ಮಹಿಳೆ ಬಹುವಚನ ಅಲ್ಲದ ‘ನಾವು’- ಎಂದು ಬದಲಾಯಿಸಲಿಕ್ಕೆ ತಯಾರಿದ್ದೇನೆ.

ಅಮೆರಿಕದ ಖ್ಯಾತ ಹಾಸ್ಯ ಲೇಖಕ ಮಾರ್ಕ್ ಟ್ವೈನ್ ಒಮ್ಮೆ ಹೇಳಿದ್ದನಂತೆ, “ರಾಜಮಹಾರಾಜರು, ಧರ್ಮಗುರುಗಳು, ರಾಷ್ಟ್ರಾಧ್ಯಕ್ಷರು, ಪತ್ರಿಕೆಗಳ ಸಂಪಾದಕರು... ಇವರೆಲ್ಲ ಮಾತಿನಲ್ಲಿ ಬರಹದಲ್ಲಿ ಏಕವಚನದ ‘ನಾನು ಬದಲಿಗೆ ಬಹುವಚನದ ‘ನಾವು’ ಎಂದು ಯಾಕೆ ಬಳಸುತ್ತಾರೋ ಗೊತ್ತಿಲ್ಲ. ನನ್ನ ಪ್ರಕಾರ, ಹೊಟ್ಟೆಯಲ್ಲಿ ಜಂತುಹುಳುಗಳಿರುವವರು, ತಲೆಯಲ್ಲಿ ಹೇನು ತುಂಬಿಕೊಂಡಿರುವವರು ‘ನಾವು’ ಎಂದು ಹೇಳಿದರೆ ಅದಕ್ಕೆ ಸ್ವಲ್ಪವಾದರೂ ಅರ್ಥವಿರುತ್ತದೆ".

ಮಾರ್ಕ್ ಟ್ವೈನ್ ಹಾಗೆ ಹೇಳಿದ್ದು ಲೇವಡಿ ಮಾಡಲಿಕ್ಕಷ್ಟೇ ಹೌದಾದರೂ ಅವನ ತರ್ಕವನ್ನು ಸದಭಿರುಚಿಯಿಂದ ಮುಂದುವರಿಸಿದರೆ, ಗರ್ಭಿಣಿ ಹೆಂಗಸು ತನ್ನ ಮಾತಿನಲ್ಲಿ ಅಥವಾ ಬರವಣಿಗೆ ಯಲ್ಲಿ ಏಕವಚನ ‘ನಾನು ಬಳಸಬೇಕಾದಲ್ಲಿ ಬಹುವಚನ ‘ನಾವು’ ಎಂದು ಬಳಸಿದರೆ ನಿಜಕ್ಕೂ ಅರ್ಥವಿದೆ ಅನಿಸುವುದಿಲ್ಲವೇ? ಆಕೆಯ ಹೊಟ್ಟೆಯಲ್ಲಿರುವ ಮಗು ಅಭಿಮನ್ಯುವಿನಂತೆ ‘ಹೂಂ’ಗುಟ್ಟಿದರೆ!