ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

G N Bhat Column: ಇಂದಿನ ತಾಳಮದ್ದಳೆಯೆಂದರೆ ಸೂತ್ರವಿಲ್ಲದ ಗಾಳಿಪಟದಂತೆ

ತಾಳಮದ್ದಳೆ ಮುಖ್ಯವಾಗಿ ರಾಮಾಯಣ, ಮಹಾಭಾರತ, ಪುರಾಣಗಳನ್ನು ಆಧರಿಸಿ ಪ್ರದರ್ಶನ ಗೊಳ್ಳುವಂಥದ್ದು. ಇದರಲ್ಲಿ ಬರುವ ಯಾವುದೇ ಪಾತ್ರಗಳು ಒಂದೋ ಜೀವನಮೌಲ್ಯಗಳನ್ನು ಹೊಂದಿರುತ್ತವೆ, ಇಲ್ಲವೇ ಅಪಮೌಲ್ಯಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಧರ್ಮ, ನ್ಯಾಯ, ಸತ್ಯ, ಶೀಲ, ಸಂಸ್ಕೃತಿ, ಚಾರಿತ್ರ್ಯ, ತ್ಯಾಗ, ಸಂಯಮ, ಉದಾತ್ತತೆ, ವಿನಯ, ವಿವೇಕ, ವಿರಕ್ತಿ, ಕೈಂಕರ್ಯ, ಭಕ್ತಿ- ಹೀಗೆ ಜೀವನಮೌಲ್ಯಗಳು ಸಾವಿರಾರು.

ಇಂದಿನ ತಾಳಮದ್ದಳೆಯೆಂದರೆ ಸೂತ್ರವಿಲ್ಲದ ಗಾಳಿಪಟದಂತೆ

-

Ashok Nayak
Ashok Nayak Dec 29, 2025 8:25 AM

ತಾಳ-ಮೇಳ

ಗ.ನಾ.ಭಟ್ಟ

ನಮಸೈಲೋಕ್ಯನಿರ್ಮಾಣಕವಯೇ ಶಂಭವೇ ಯತಃ | ಪ್ರತಿಕ್ಷಣಂ ಜಗನ್ನಾಟ್ಯಪ್ರಯೋಗರಸಿಕೋ ಜನಃ ||ನಮ್ಮ ಮನಸ್ಸಿಗೆ ಕಣ್ಣು, ಕಿವಿ ಮೊದಲಾದ ಇಂದ್ರಿಯಗಳ ಮೂಲಕ ಒಂದು ಸೌಂದರ್ಯ ವನ್ನೋ, ಒಂದು ಮಹತ್ತ್ವವನ್ನೋ, ಒಂದು ಗಂಭೀರ ವಿಚಾರವನ್ನೋ ಅನುಭವ ಮಾಡಿಸಿಕೊಬಲ್ಲ ಕುಶಲ ಕರ್ಮವನ್ನು ‘ಕಲೆ’ಯೆಂದು ಕರೆಯುತ್ತಾರೆ. ಅಂಥ ಕಲೆಗಳಲ್ಲಿ ತಾಳಮದ್ದಳೆಯೂ ಒಂದು.

ತಾಳಮದ್ದಳೆ ಒಂದು ಸುಂದರ ‘ಕಲಾಕೃತಿ’- Artifact-, Excellent Performance. ಗ್ರೀಕರಲ್ಲಿ ಯಾವ ವಾಕ್'ಶಾಸ್ತ್ರವನ್ನು ’Rheotoric ಅಂತ ಕರೆಯುತ್ತಾರೋ ಅದು ಸಂಪೂರ್ಣ ಮೈದಳೆದಿದ್ದು ತಾಳಮದ್ದಳೆಯಲ್ಲಿ. ಈ ‘ರೆಟ್ಹರಿಕ್-ವಾಕ್‌ ಶಾಸ್ತ್ರ’ ಅನ್ನುವುದು ನಮ್ಮಲ್ಲೂ ಇತ್ತು. ಅದು ವೇದ ಕಾಲದಷ್ಟು ಪ್ರಾಚೀನ. “ದೇವೀಂ ವಾಚಮಜನಯಂತ ದೇವಾಃ", “ಮೊದಲು ದೇವತೆಗಳು ವಾಗ್ದೇ ವತೆಗೆ ಜನ್ಮವಿತ್ತರು" ಎಂಬ ಮಾತನ್ನು ನಾವು ತೈತ್ತಿರೀಯ ಬ್ರಾಹ್ಮಣದಲ್ಲಿ ನೋಡುತ್ತೇವೆ.

ಇಂಥ ವಾಕ್‌ ಶಾಸ್ತ್ರವನ್ನು, ವಾಗ್ವೈಭವವನ್ನು, ವಚೋವಿಲಾಸವನ್ನು ಹುಲುಸಾಗಿ, ಸಮೃದ್ಧವಾಗಿ ಬಳಸಿಕೊಂಡ ಕಲೆ ತಾಳಮದ್ದಳೆ.

ಆಂಗಿಕೋ ವಾಚಿಕಶ್ಬೈವ ಆಹಾರ್ಯಃ ಸಾತ್ತ್ವಿಕಸ್ತಥಾ |

ಚತ್ವಾರೋಭಿನಯಾ ಹ್ಯೇತೇ ವಿಜ್ಞೇಯಾ ನಾಟ್ಯಸಂಶ್ರಯಾಃ ||

‘ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ತ್ವಿಕ’ ಎಂದು ನಾಟ್ಯಶಾಸ್ತ್ರಜ್ಞರು ಗುರುತಿಸಿದ ನಾಲ್ಕು ವಿಧದ ಅಭಿನಯಗಳಲ್ಲಿ ‘ವಾಚಿಕ’ವೇ ಪ್ರಧಾನವಾಗಿರುವ ಕಲಾಪ್ರಕಾರ ‘ತಾಳಮದ್ದಳೆ’. ‘ಹೃದಯದ ಕಾವಿನಿಂದ ಕಾವ್ಯ; ಅಲ್ಲಿಯ ಕಲಕಿನಿಂದ ಕಲೆ’ ಎಂಬ ಮಾತೊಂದು ಇದೆ.

ಯಾವ ಕಲಾಕೃತಿಯು ನಮ್ಮ ಮನಸ್ಸನ್ನು ಕಲಕುತ್ತದೆಯೋ, ನಮ್ಮ ಹೃದಯದಲ್ಲಿ ಒಂದು ಶೋಕ, ಕನಿಕರ, ಒಲವು, ಮುನಿಸು, ಛಲ, ವಿಷಾದ, ಆಸೆ, ನಿರಾಸೆ ಮೊದಲಾದ ಭಾವಗಳನ್ನು ಉಂಟು ಮಾಡುತ್ತದೆಯೋ ಅಂಥ ಕಲಾಪ್ರಕಾರಕ್ಕೆ ಸಲ್ಲುತ್ತದೆ ನಾಟ್ಯ, ಶಿಲ್ಪ, ಸಂಗೀತ, ಯಕ್ಷಗಾನ, ತಾಳ ಮದ್ದಳೆ ಮೊದಲಾದ ಹೆಸರುಗಳು.

ಇದನ್ನೂ ಓದಿ: Kiran Upadhyay Column: ತಾಳಮದ್ದಳೆ ಬಾಲಿವುಡ್‌, ಅರ್ಥಧಾರಿಗಳು ಐಟಂ ಡ್ಯಾನ್ಸರ್‌ʼಗಳಾಗಬಾರದು

ಪ್ರಕೃತ ತಾಳಮದ್ದಳೆ ಪಾತ್ರಗಳ ಅಂತರಂಗಗಳೇನು? ಅವುಗಳ ಒಳತೋಟಿ-ಸಂಘರ್ಷ-ಸಂಕೀರ್ಣತೆ-ದ್ವಂದ್ವಗಳೇನು? ಅವುಗಳ ರಸ-ಭಾವಗಳೇನು? ಜೀವನಮೌಲ್ಯ-ಸಿದ್ಧಾಂತಗಳು ಯಾವವು? ಅವು ಸಾರುವ ಸಂದೇಶಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ವಿರಳವಾದರೂ ಅಲ್ಲಲ್ಲಿ ಕೆಲವು ಕೃತಿ ಗಳು ಬಂದಿವೆ.

ತಾಳಮದ್ದಳೆ ಮುಖ್ಯವಾಗಿ ರಾಮಾಯಣ, ಮಹಾಭಾರತ, ಪುರಾಣಗಳನ್ನು ಆಧರಿಸಿ ಪ್ರದರ್ಶನ ಗೊಳ್ಳುವಂಥದ್ದು. ಇದರಲ್ಲಿ ಬರುವ ಯಾವುದೇ ಪಾತ್ರಗಳು ಒಂದೋ ಜೀವನಮೌಲ್ಯಗಳನ್ನು ಹೊಂದಿರುತ್ತವೆ, ಇಲ್ಲವೇ ಅಪಮೌಲ್ಯಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಧರ್ಮ, ನ್ಯಾಯ, ಸತ್ಯ, ಶೀಲ, ಸಂಸ್ಕೃತಿ, ಚಾರಿತ್ರ್ಯ, ತ್ಯಾಗ, ಸಂಯಮ, ಉದಾತ್ತತೆ, ವಿನಯ, ವಿವೇಕ, ವಿರಕ್ತಿ, ಕೈಂಕರ್ಯ, ಭಕ್ತಿ- ಹೀಗೆ ಜೀವನಮೌಲ್ಯಗಳು ಸಾವಿರಾರು.

ಇವೆಲ್ಲದರ ಜತೆಗೆ ಅಧರ್ಮ, ಅನ್ಯಾಯ, ಅನೃತ, ಅವಿವೇಕ, ಅನಾಚಾರ, ಅತ್ಯಾಚಾರ, ಅಸೂಯೆ, ಮನೆಹಾಳುಗೆಡುಕುತನ ಮೊದಲಾದ ಅಪಮೌಲ್ಯಗಳೂ ಇರುತ್ತವೆ. ಆಯಾ ಪಾತ್ರಗಳ ಮೂಲಕ ಅವೆಲ್ಲವನ್ನೂ ಪ್ರತ್ಯಕ್ಷೀಕರಿಸುವಲ್ಲಿ ತಾಳಮದ್ದಳೆಯ ಪಾತ್ರ ಹಿರಿದಾದುದು.

ತಾಳಮದ್ದಳೆಯೆಂದರೆ ಅದೊಂದು ವಚೋವಿಲಾಸ; ವಾಗ್ವೈಭವದ ಉತ್ತುಂಗ ಶಿಖರ; ಮಾತಿನ ಮರ್ಮದ ಸಲಾಕೆ; ಮಾತಿನ ಸೌಂದರ್ಯದ ನೆಲೆವೀಡು. ಅದು ಒಮ್ಮೊಮ್ಮೆ ‘ಪುರಾಣ ಪ್ರವಚನ’ ವಾಗಿಯೂ, ‘ವಿಚಾರಗೋಷ್ಠಿ’ಯಾಗಿಯೂ, ‘ನಿರ್ಣಾಯಕ ತತ್ತ್ವಾರ್ಥ ಹೇತು’ವಾಗಿಯೂ, ‘ಪೌರಾ ಣಿಕ ಪರಿಷತ್’ ಆಗಿಯೂ, ಒಂದು ಉತ್ತಮ ‘ಸಂವಹನದ ಕಣ’ವಾಗಿಯೂ, ಒಂದು ರೋಚಕ-ಹೃದಯಂಗಮ ‘ಸಂವಾದ’ದ ವೇದಿಕೆಯಾಗಿಯೂ, ವಾದ-ಪ್ರತಿವಾದದ ‘ಜಂಝಾವಾತ’ ವಾಗಿಯೂ ರಂಜಿಸಬಲ್ಲದು.

V Bhat 251

ಹಿಮ್ಮೇಳದ ಹಿನ್ನೆಲೆಯಲ್ಲಿ ಅದನ್ನು ನೋಡುವುದಾದರೆ ಅದೊಂದು ‘ಗಾನಗೋಷ್ಠಿ’ಯಾಗಿಯೂ, ‘ವಾದನಗೋಷ್ಠಿ’ಯಾಗಿಯೂ ಜನಮನವನ್ನು ಸೆಳೆಯಬಲ್ಲದು.

ಪಾತ್ರಗಳ ಅವತರಣಿಕೆಯಲ್ಲಿ ಅದನ್ನು ಅವಲೋಕಿಸುವುದಾದರೆ ಅದು ಆಯಾ ಪಾತ್ರಗಳ ಗುಣ-ದೋಷಗಳನ್ನೂ, ಪತನೋತ್ಕರ್ಷಗಳನ್ನೂ, ದೇವಾಸುರ ಗುಣಗಳನ್ನೂ, ಒಳಿತು-ಕೆಡುಕುಗಳನ್ನೂ, ಪಾತ್ರಗಳ ನೀಚೋಚ್ಚ ಭಾವಗಳನ್ನೂ ತೋರಿಸಬಲ್ಲದು.

ಪಾತ್ರಗಳ ಸಂಘರ್ಷ, ಸಂಕೀರ್ಣತೆ, ಒಳತೋಟಿ, ಸುಖ-ದುಃಖ, ಕೋಮಲತೆ, ಕಾಠಿಣ್ಯ, ಔದಾರ್ಯ, ಮುಗ್ಧತೆ, ಸಿದ್ಧಾಂತ, ಜೀವನಾದರ್ಶ, ಧ್ಯೇಯ ಮೊದಲಾದವನ್ನು ವೇದಿಕೆಯಲ್ಲಿ ಸುಂದರವಾಗಿ ಸಾಕಾರಗೊಳಿಸಬಲ್ಲದು. ಜತೆಗೆ ಕಲೆಯ ಜೀವಾಳವಾದ ರಸನಿಷ್ಪತ್ತಿಗೆ ಕಾರಣವಾಗಿ ಜನಮನವನ್ನು ತಣಿಸಬಲ್ಲದು. ಭಾವದ ಹೊಳೆಯಲ್ಲಿ ಮೀಯಿಸಬಲ್ಲದು.

ವಿಚಾರದೀಪ್ತಿಯಲ್ಲಿ ನಮ್ಮ ಮನಸ್ಸು-ಬುದ್ಧಿಯನ್ನು ಅರಳಿಸಬಲ್ಲದು. ಯಾವ ಭವ್ಯರಂಗ ಸಜ್ಜಿಕೆ ಯೂ ಇಲ್ಲದೇ, ಬಣ್ಣಗಾರಿಕೆಯೂ ಇಲ್ಲದೇ, ವೇಷಭೂಷಣವೂ ಇಲ್ಲದೇ, ನೃತ್ತ-ನೃತ್ಯವೂ ಇಲ್ಲದೇ, ನಿಯತವಾದ ಸ್ಥಳವೊಂದರಲ್ಲಿ, ನಿತ್ಯ ಉಡುಪಿನಲ್ಲಿ ಹೆಚ್ಚು ಎಂದರೆ ಒಂದು ಪಂಚೆ-ಜುಬ್ಬಾ-ಶಲ್ಯದಲ್ಲಿ ಮಾತಿನ ಮಂಟಪವನ್ನು ಕಟ್ಟಿ ಇವೆಲ್ಲವನ್ನೂ ಪ್ರೇಕ್ಷಕರಿಗೆ ತಲುಪಿಸುವಲ್ಲಿ ತಾಳ ಮದ್ದಳೆಯ ಪಾತ್ರ ಬಹಳ ದೊಡ್ಡದು.

ಆದರೆ ಇಂಥ ತಾಳಮದ್ದಳೆಯೆಂಬ ಅಪೂರ್ವ ಕಲಾಕೃತಿಯ ಸ್ಥಿತಿ ಏನಾಗಿದೆಯೆಂದರೆ- ಸುಶಿಕ್ಷಿತ, ಪ್ರಜ್ಞಾವಂತ ಪ್ರೇಕ್ಷಕನೊಬ್ಬ ಅದನ್ನು ನೋಡದ ಸ್ಥಿತಿಯುಂಟಾಗಿದೆ. ಇದನ್ನು ಕುರಿತು ‘ವಿಶ್ವವಾಣಿ’ ಸಂಪಾದಕ ಮತ್ತು ಪ್ರಖರ ಚಿಂತಕ ವಿಶ್ವೇಶ್ವರ ಭಟ್ಟರು ತಮ್ಮ ಗುರುವಾರದ (ಡಿ.18) ಅಂಕಣ ಬರಹದಲ್ಲಿ ತಾಳಮದ್ದಳೆ ಕಲಾವಿದರು ತಾವು ನಡೆಯುತ್ತಿರುವ ಹಾದಿಯನ್ನು ಒಮ್ಮೆ ತಿರುಗಿ ನೋಡುವಂತೆ, ಆತ್ಮಾವಲೋಕನ ಮಾಡಿಕೊಳ್ಳುವಂತೆ, ಕಣ್ಣು ತೆರೆಸುವ ಒಂದು ಅದ್ಭುತ ಲೇಖನ ವನ್ನು ಬರೆದಿದ್ದಾರೆ.

ಇಂದು ನಡೆಯುತ್ತಿರುವ ತಾಳಮದ್ದಳೆಯ ಓರೆ-ಕೋರೆಗಳನ್ನು, ವೈಚಿತ್ರ್ಯಗಳನ್ನು, ವಿಕೃತಿಗಳನ್ನು ಸೋದಾಹರಣವಾಗಿ ವಿವರಿಸುತ್ತಾ ತಾಳಮದ್ದಳೆಯೆಂಬ ಸುಂದರ ಕಲಾಕೃತಿ ಹೇಗೆ ತನ್ನ ಸೊಗಡು, ಸೌಂದರ್ಯವನ್ನು ಕಳೆದುಕೊಳ್ಳುತ್ತಾ ವ್ಯಕ್ತಿಪ್ರತಿಷ್ಠಿತರ, ಪಟ್ಟಭದ್ರ ಹಿತಾಸಕ್ತಿಯವರ, ಗುಂಪು ಗಾರಿಕೆಯವರ ಆಡುಂಬೊಲವಾಗಿದೆ ಅನ್ನುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ತಾಳಮದ್ದಳೆಯ ಬಗ್ಗೆ ಕಾಳಜಿಯುಳ್ಳ, ಪ್ರಜ್ಞಾವಂತ ಪ್ರೇಕ್ಷಕನ ಮನಸ್ಸಿನಲ್ಲಿ ಕುದಿಯುತ್ತಿರುವ ಸಂಕಟ, ವೇದನೆಗಳಿಗೆ ಧ್ವನಿಯಾಗಿದ್ದಾರೆ. ಅವರು ಹೇಳಿದ್ದರಲ್ಲಿ ಸುಳ್ಳಿನ ಅಂಶ ಒಂದಿನಿತೂ ಇಲ್ಲ. ತಾಳಮದ್ದಳೆ ಸಾಗುತ್ತಿರುವುದು ಹಾಗೆಯೇ. ಇದರ ಬಗ್ಗೆ ಎಚ್ಚರಿಸುವ ಯಾವ ಕೆಲಸವೂ ಆಗುತ್ತಿಲ್ಲ.

ಯಕ್ಷಗಾನ ಕಲಾವಿಮರ್ಶೆ ಎಂಬುದು ಸಂಪೂರ್ಣ ಸತ್ತು ಹೋಗಿದೆ. ಯಕ್ಷಗಾನಕ್ಕಾಗಿಯೇ ಒಂದೆರಡು ಪತ್ರಿಕೆಗಳಿದ್ದರೂ ಅವು ವಿಮರ್ಶೆಯನ್ನು ಪ್ರಕಟಿಸುವುದಿಲ್ಲ. ಪ್ರಕಟಿಸಿದರೆ ಕೆಲವು ಕಲಾವಿದರು ಮತ್ತು ಅವರ ಅಭಿಮಾನಿಗಳು ಪತ್ರಿಕಾ ಸಂಪಾದಕರ ಮೇಲೆ ಮತ್ತು ಅದನ್ನು ಬರೆದವನ ಮೇಲೆ ಇಲ್ಲಸಲ್ಲದ ಆಪಾದನೆ ಮಾಡುವುದಕ್ಕೂ, ಹಲ್ಲೆ ಮಾಡುವುದಕ್ಕೂ ಹೇಸದ ಸ್ಥಿತಿ ಉಂಟಾಗಿದೆ.

ಯಕ್ಷಗಾನ ವಾತಾವರಣವನ್ನೇ ಮತ್ತಷ್ಟು ಕಲುಷಿತಗೊಳಿಸುವ ದೌಷ್ಟ್ಯ ಎಲ್ಲೆಂದರಲ್ಲಿ ತಾಂಡವ ವಾಡುತ್ತಿದೆ. ಇದಕ್ಕೆಲ್ಲ ಕಾರಣ- ಕಲಾವಿದನೆಂದರೆ ಆತ ಪ್ರಶ್ನಾತೀತ, ಪರಿಪೂರ್ಣ, ಸರ್ವಜ್ಞ ಎಂಬ ಮನೋಭಾವವೇ ಆಗಿದೆ. ಇದನ್ನು ಬೆಳೆಸುವ ಅಂಧಾಭಿಮಾನದ ಪ್ರೇಕ್ಷಕರೂ, ಸಂಘಟಕರೂ, ಅಜ್ಞರೂ, ಮುಗ್ಧರೂ ಕಡಿಮೆಯಿಲ್ಲ.

ಇಂಥವರಿಂದಾಗಿಯೇ ತಾಳಮದ್ದಳೆ ಕ್ಷೇತ್ರದಲ್ಲಿ ಒಂದು ಬಗೆಯ ಶೂನ್ಯ ಆವರಿಸಿದೆ (ತಾಳಮದ್ದಳೆ ಪ್ರದರ್ಶನದ ಸಂಖ್ಯೆ ಹೆಚ್ಚಿದ್ದರೂ ಅವುಗಳ ಗುಣಮಟ್ಟ ಇಲ್ಲ ಎಂಬ ಅರ್ಥದಲ್ಲಿ ಶೂನ್ಯ ಎಂಬ ಪದವನ್ನು ಬಳಸಿದ್ದೇನೆ). ವಿಕೃತಿ, ಅಸಂಬದ್ಧತೆ, ಬೌದ್ಧಿಕದಾರಿದ್ರ್ಯಗಳಿಗೆ ಲೆಕ್ಕವಿಲ್ಲ. ಉದಾಹರಣೆಗೆ- ಹತ್ತು ದಿನದ ತಾಳಮದ್ದಳೆಯ ಒಂದು ಉಪಶೀರ್ಷಿಕೆ ಹೇಗಿರುತ್ತದೆಯೆಂದರೆ ‘ದಶಕಂ ಧರ್ಮ ಲಕ್ಷಣಮ್’ ಎಂದಿರುತ್ತದೆ.

ಐದು ದಿನದ ಕಾರ್ಯಕ್ರಮಕ್ಕೆ ‘ಪಂಚಾಮೃತಮ್’ ಎಂದಿರುತ್ತದೆ. ಇದಕ್ಕೆ ಏನಾದರೂ ಅರ್ಥ ವಿದೆಯೆ? ‘ದಶಕಮ್ ಧರ್ಮಲಕ್ಷಣಮ್’ ಧರ್ಮದ ಹೆಗ್ಗುರುತನ್ನು ಹೇಳುವಾಗ ಬಂದ ಮಾತಿದು.

ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |

ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||

ಇಲ್ಲಿ ‘ದಶಕಂ’ ಎಂಬ ಪದ ‘ಹತ್ತರ ಗುಚ್ಛ’ ಅಂತ ಹೇಳುವುದನ್ನು ಬಿಟ್ಟರೆ ಇತರ ಯಾವ ಸಾಮ್ಯತೆ ಯೂ ಈ ಪದಕ್ಕೆ ಇಲ್ಲ. ಇದು ತಾಳಮದ್ದಳೆಯ ಪ್ರದರ್ಶನಕ್ಕೆ ಯಾವ ರೀತಿಯಲ್ಲೂ ಹೊಂದಾಣಿಕೆ ಯಾಗುದಿಲ್ಲ, ಅನ್ವಯವಾಗುವುದಿಲ್ಲ. ಹಾಗೆಯೇ ‘ಪಂಚಾಮೃತಮ್’ ಎಂಬ ಪದ ಕೂಡಾ.

ದೇವತಾರ್ಚನೆಯಲ್ಲಿ ದೇವರಿಗೆ ಹಾಲು, ತುಪ್ಪ ಇತ್ಯಾದಿ ಐದು ದ್ರವ್ಯಗಳಿಂದ ಅಭಿಷೇಕ ಮಾಡಿ, ನಂತರ ಅವನ್ನು ಒಟ್ಟುಗೂಡಿಸಿ, ತೀರ್ಥವೆಂದು ಭಾವಿಸಿ, ಸ್ವೀಕರಿಸುವ ಒಂದು ಅಮೃತ ಸಮಾನ ವಾದ ತೀರ್ಥ ಅದು. ‘ಐದು ತಾಳಮದ್ದಳೆ’ ಒಟ್ಟಿಗೆ ಪ್ರದರ್ಶನಗೊಳ್ಳುತ್ತದೆಯೆಂದು ಅದನ್ನು ‘ಪಂಚಾಮೃತಮ್’ ಅಂತ ಹೇಳಿದರೆ ಆಭಾಸವಲ್ಲವೆ? ಯಾವುದೇ ಒಂದು ಪದಕ್ಕೆ ಅದರದ್ದೇ ಆದ ಅರ್ಥ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ, ವ್ಯಾವಹಾರಿಕ ಹಿನ್ನೆಲೆಯಿರುತ್ತದೆ.

ಒಂದು ಪದವನ್ನು ಕೇಳಿದ ಕೂಡಲೆ ಅದಕ್ಕಿರುವ ಯಾವ ಪ್ರಚಲಿತ ಅರ್ಥ ಸುರಿಸುತ್ತದೆಯೋ ಅದೇ ಅದರ ಜೀವಾಳ. ಅದನ್ನು ಕೊಂದರೆ ಅಥವಾ ಯದ್ವಾ ತದ್ವಾ ಬಳಸಿದರೆ ಇಂಥ ಅಪಸವ್ಯಗಳೇ ಉಂಟಾಗುತ್ತವೆ.

ತಾಳಮದ್ದಳೆಯ ಸಂಘಟಕರು ಇದನ್ನೆಲ್ಲ ಯೋಚಿಸುವುದಿಲ್ಲ. ಇಂಥದ್ದನ್ನು ಪ್ರಸಿದ್ಧ ಕಲಾವಿದ ನೊಬ್ಬನಿಗೆ ವಹಿಸಿ ತಾವು ಎಲೆ-ಅಡಕೆ ಜಗಿಯುತ್ತಾ ತೆಪ್ಪಗೆ ಕೂತುಕೊಳ್ಳುತ್ತಾರೆ. ಆತ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾನೆ. ದುಡ್ಡು ಮತ್ತು ವೇದಿಕೆ ಸಂಘಟಕನದು, ದರಬಾರು ಇವನದು.

ಇದು ಎಲ್ಲಿಯವರೆಗೆ ಹೋಗಿದೆಯೆಂದರೆ ತಾಳಮದ್ದಳೆಯ ಪ್ರಸಿದ್ಧ ಪ್ರಸಂಗಗಳ ಹೆಸರನ್ನೂ ಬದಲಾಯಿಸುವವರೆಗೆ ಹೋಗಿದೆ. ಉದಾಹರಣೆಗೆ- ಹರಿಭಕ್ತಿಶ್ರೇಷ್ಠ, ಶೀಲಸೌಂದರ್ಯ, ಸಂಗ್ರಾಮ ಸತ್ತ್ವ, ಧರ್ಮ ಸತ್ತ್ವ, ಹನೂಮ ಶೌಚ, ವೀರ ವಾನರ, ಧರ್ಮ ಧಿ, ಜ್ಞಾನಪದ, ವಸಿಷ್ಠ ಕ್ಷಮೆ ಇತ್ಯಾದಿ. ಇವು ಯಾರಿಗಾದರೂ ಅರ್ಥವಾಗುತ್ತದೆಯೇ? ಹೀಗೆಂದರೆ ಏನು ಎಂದು ಅವರನ್ನೇ ಕೇಳಿ ತಿಳಿದು ಕೊಳ್ಳಬೇಕು.

ಇಂಥ ಹುಚ್ಚು, ವಿಪರೀತಗಳು ತಾಳಮದ್ದಳೆಯಲ್ಲಿ ದಾಂಗುಡಿಯಿಟ್ಟಿವೆ. ಹೇಳುವವರಿಲ್ಲ-ಕೇಳುವವ ರಿಲ್ಲ ಎಂಬ ಅನಾಥ ಸ್ಥಿತಿ ತಾಳಮದ್ದಳೆಯದು ಅಥವಾ ದಾರಿದ್ರ್ಯ ಸ್ಥಿತಿ ಅದರದ್ದು.

ಇನ್ನು ಅರ್ಥಗಾರಿಕೆಯಲ್ಲಂತೂ ಕೇಳುವುದೇ ಬೇಡ. ಪ್ರತಿಶತ 95ರಷ್ಟು ಕಲಾವಿದರಿಗೆ ಪುರಾಣಪ್ರe, ಔಚಿತ್ಯಪ್ರಜ್ಞೆ ಸುತರಾಂ ಇಲ್ಲ. ಬರೀ ಪ್ರಸಂಗಪಠ್ಯವನ್ನಷ್ಟೇ ಆಧರಿಸಿ ದೈನಂದಿನ ವಿಚಾರಗಳನ್ನೇ ತುರುಕುತ್ತಾ, ಶುಷ್ಕವಾದವನ್ನು ಮಾಡುತ್ತಾ, ಕಾಲಹರಣ ಮಾಡುವ ಕಲಾವಿದರು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ.

ದುರ್ವಾದ, ವಿತಂಡವಾದ, ಕುತರ್ಕ ಇವೇ ಮೊದಲಾದವು ಇವರ ಮೇಲ್ಮೆಯನ್ನು ಸಾರುವ ಸಂಗತಿ ಯಾದುದು ದಿಟಕ್ಕೂ ತಾಳಮದ್ದಳೆಯ ದುರ್ದೈವವೇ ಹೌದು. ಇವರಿಗೆ ಔಚಿತ್ಯಪ್ರಜ್ಞೆ ಇಲ್ಲ ಅನ್ನುವುದಕ್ಕೆ ಒಂದು ಉದಾಹರಣೆ ನೀಡಬಯಸುತ್ತೇನೆ. ‘ಸುಧನ್ವಾರ್ಜುನ ಪ್ರಸಂಗ’ದಲ್ಲಿ ಸುಧನ್ವನ ಪದ್ಯ ‘ಸೃಷ್ಟಿಗರ್ಜುನನೆಂಬವನೆ ನೀನು’ ಎಂಬುದಕ್ಕೆ ಸುಧನ್ವ ಏನು ಹೇಳಬೇಕು? ಪದ್ಯದ ಆಶಯ ದಂತೆ ಅರ್ಜುನನ ಪ್ರತಾಪಾತಿಶಯವನ್ನೋ, ಅವನ ಬಿಲ್ವಿದ್ಯೆಯ ಕೌಶಲವನ್ನೋ ಎತ್ತಿ ಆಡಬೇಕು.

ಜತೆಗೆ ಅವನು ಧನುರ್ವಿದ್ಯೆಯಲ್ಲಿ ಸೃಷ್ಟಿಸಿದ (ಸೃಷ್ಟಿ ಎಂದರೆ ನೂತನ ಆವಿಷ್ಕಾರ) ಚಮತ್ಕಾರ ವನ್ನು ಹೇಳಬೇಕು. ಅದರ ಬದಲಿಗೆ ಕೌರವರ ಗೋಗ್ರಹಣದ ಪ್ರಕರಣವನ್ನು ಎತ್ತಿಕೊಂಡು ನನಗೆ ‘ಗೋವು’ ಬೇಕಿಲ್ಲ. ಗೋವತ್ಸ ಬೇಕಿಲ್ಲ. ಬದಲಿಗೆ ‘ದೋಗ್ಧಾ’ ಬೇಕು ಎಂದರೆ ಏನಾಗುತ್ತದೆ? ಭಗವದ್ಗೀತೆಯ ‘ಸರ್ವೋಪನಿಷದೋ ಗಾವೋ’ ಧ್ಯಾನಶ್ಲೋಕ ತನಗೂ ಗೊತ್ತು ಎಂದು ತೋರಿಸಿ ಕೊಳ್ಳುವ ಚಪಲವಾಗುತ್ತದೆ ಅಲ್ಲವೆ? ಇದು ಅನೌಚಿತ್ಯ ಮತ್ತು ಪಾಂಡಿತ್ಯ ಪ್ರದರ್ಶನವಲ್ಲದೆ ಇನ್ನೇನು?ಇಡೀ ರಾಮಾಯಣದಲ್ಲಿ ವಾಲ್ಮೀಕಿ ‘ಸಾಕೇತ’ ಎಂಬ ಪದವನ್ನೇ ಬಳಸುವುದಿಲ್ಲ.

ಅಲ್ಲಿ ಬರುವುದು ‘ಅಯೋಧ್ಯೆ’ ಎಂಬ ಪದ ಮಾತ್ರ. ಈ ಕಲಾವಿದರನೇಕರು ಸಾಕೇತ ಅಂತಲೇ ಬಳಸುತ್ತಾರೆ. ಇದು ಬೌದ್ಧರ ಕಾಲದಲ್ಲಿ ಆ ಪ್ರಾಂತಕ್ಕೆ ಬಳಸಲ್ಪಟ್ಟ ಪದ. ಇದನ್ನು ಬಳಸುವು ದರಿಂದ ನಾವು ಬುದ್ಧನ ಕಾಲಕ್ಕೆ ಹೋಗುತ್ತವೆಯೇ ಹೊರತು ಅಯೋಧ್ಯೆಗೆ ಹೋಗುವುದಿಲ್ಲ. ಇದನ್ನು ಕಲಾವಿದರು ಯೋಚಿಸುವುದಿಲ್ಲ.

‘ಪಟ್ಟಾಭಿಷೇಕ’ದ ದಶರಥ-ಕೈಕೇಯಿಯರ ಸಂಭಾಷಣೆ ಎಲ್ಲಿಂದ ಎಲ್ಲಿಗೋ ಹೋಗುವದು ಸರ್ವೇ ಸಮಾನ್ಯವಾಗಿದೆ. ಕೈಕೇಯಿಯ ಪ್ರಶ್ನೆಗೆ ತಾಳಮದ್ದಳೆಯ ದಶರಥ ಹೇಳುತ್ತಾನೆ- “ರಾಜಾರಿಷ್ಟ ವೊಂದು ಬಂದಿದ್ದರಿಂದ ಮತ್ತು ನನಗೆ ದುಃಸ್ವಪ್ನ ಬಿದ್ದಿದ್ದರಿಂದ ಆದಷ್ಟು ಬೇಗ ರಾಮನಿಗೆ ಪಟ್ಟಾಭಿಷೇಕ ಮಾಡಿಬಿಡಬೇಕೆಂದು ನಿರ್ಣಯಿಸಿ ಹೀಗೆ ಆತುರಾತುರದಲ್ಲಿ ಕ್ರಮಕೈಗೊಂಡೆ" ಎಂದು.

ವಾಸ್ತವವಾಗಿ ರಾಮಾಯಣದಲ್ಲಿ ಮತ್ತು ಪಠ್ಯದಲ್ಲಿ ‘ರಾಜಾರಿಷ್ಟದ ಪ್ರಸಕ್ತಿ’ಯೂ ಇಲ್ಲ; ‘ದುಃಸ್ವಪ್ನದ ಪ್ರಕರಣ’ವೂ ಇಲ್ಲ (ದಶರಥ ತನ್ನ ಯೌವನ ಕಾಲದಲ್ಲಿ ಮಾಡಿದ ಒಂದು ತಪ್ಪಿಗಾಗಿ ಮತ್ತು ಅದನ್ನು ಮರೆಮಾಚಲು ಹಾಗೆ ನಡೆದುಕೊಳ್ಳುತ್ತಾನೆ). ಹೀಗೆ ಹೇಳುವುದರಿಂದ ರಾಮಾ ಯಣದ ಆ ಸನ್ನಿವೇಶಕ್ಕೆ ತಪ್ಪು ವ್ಯಾಖ್ಯಾನ ಮಾಡಿದಂತಾಗಲಿಲ್ಲವೆ? ತಪ್ಪು ಸಂದೇಶವನ್ನು ಕಳುಹಿಸಿ ದಂತಾಗಲಿಲ್ಲವೆ? ಕಲಾವಿದರು ಇಂಥದ್ದರ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ.

ಇನ್ನೊಬ್ಬ ಕಲಾವಿದರು ಕೆರೆಯೊಂದನ್ನು ‘ಕೈ’ಯಾಗಿಯೂ, ಕಾಲಾಗಿಯೂ, ಕಣ್ಣಾಗಿಯೂ, ಸಂದರ್ಭ ಬಂದರೆ ಅದನ್ನೇ ಸಮುದ್ರವಾಗಿಯೂ, ನದಿಯಾಗಿಯೂ ಮಾಡಿ, ಅದನ್ನು ವೈಭವೀ ಕರಿಸಿ, ಉತ್ಪ್ರೇಕ್ಷಿಸಿ ಸದಾ ಅದರಲ್ಲೇ (ಆ ಕೆರೆಯಲ್ಲೇ) ಈಜುತ್ತಾ, ದಡ್ಡ ಪ್ರೇಕ್ಷಕರನ್ನು ತಬ್ಬಿಬ್ಬು ಗೊಳಿಸುತ್ತಾ, ದೊಡ್ಡ ಈಜುಗಾರನೆನಿಸಿಕೊಂಡಿದ್ದು ತಾಳಮದ್ದಳೆಯ ವಿಪರ್ಯಾಸದಲ್ಲಿ ಒಂದು.

‘ವೀರಮಣಿ ಕಾಳಗ’ದಲ್ಲಿ ವೀರಮಣಿಯು ‘ಹರನು ಬ್ರಹ್ಮಾಂಡಕೊಡೆಯ’ ಅಂತ ಹೇಳಿದರೆ ಇವರು ಹನುಮಂತನಾಗಿ “ಹರನು ನಿನಗೆ ಮಾತ್ರ ಒಡೆಯನಲ್ಲ. ನನಗೂ ಒಡೆಯ. ಅವನೇ ಮನೋಹರ" ಎಂದು ವಿರೋಧಾಭಾಸದ ಮಾತನ್ನಾಡುತ್ತಾರೆ. ವೀರಮಣಿಗೂ ಹನುಮಂತನಿಗೂ ನಡೆಯುವ ವಿಸಂಗತ ಸಂಭಾಷಣೆಯಲ್ಲಿ (ವೀರಮಣಿ ಒಬ್ಬ ಮೂರ್ಖ ಅನ್ನುವುದನ್ನು ಮರೆಯಬಾರದು.

‘ಯಾತಕಿಂತುನುಡಿವೆ ಮುರ್ಖನೆ’ ಅಂತ ಪದ್ಯದಲ್ಲೇ ಇದೆ.) ಇವರು ಇಂಥ ಅಬದ್ಧ ಮಾತುಗಳ ನ್ನಾಡಿದ್ದಕ್ಕೆ ಸಾಕ್ಷಿಯಿದೆ. ಇನ್ನೊಬ್ಬರು ಶೋಕವೇ ಇಲ್ಲದೆ ಸದಾ ಆನಂದದಲ್ಲಿರುವವರು! ಯಾವುದೇ ಪ್ರಸಂಗ ಇರಲಿ, ಅದರಲ್ಲಿ ಅವರು ಸಪಾದಭಕ್ಷ್ಯ, ಕಾಳುಮೆಣಸು, ಉಪ್ಪಿನಕಾಯಿ, ಹಾಗಲಕಾಯಿ ಗೊಜ್ಜು, ಕೇಸರಿಬಾತು ಮುಂತಾದುವನ್ನು ತಂದು ಮೃಷ್ಟಾನ್ನಭೋಜನ ಮಾಡಿಸುತ್ತಾರೆ.

ಇನ್ನೊಬ್ಬ ಮಹನೀಯರು ಯಾವುದೇ ಪಾತ್ರವಿರಲಿ, ಸದಾ ವೈದಿಕ ಪರಿಭಾಷೆಯಲ್ಲೇ ಮಾತನಾಡು ತ್ತಾರೆ. ಒಬ್ಬ ಸಂಕ್ಷಿಪ್ತವಾಗಿ, ಇನ್ನೊಬ್ಬ ದೀರ್ಘವಾಗಿ, ಮಗದೊಬ್ಬ ಪರ್ಯಾಯ ಪದಗಳನ್ನೇ ಉದುರಿಸುತ್ತಾ ಅರ್ಥ ಹೇಳುತ್ತಾನೆ. ಇಂಥವರಿಂದಲೇ ಈ ರಂಗ ತುಂಬಿಕೊಂಡಿದೆ. ಇದರ ಬಗೆಗೆ ಹೇಳಹೋದರೆ ಒಂದು ಪುಸ್ತಕವೇ ಆದೀತು!

ಒಟ್ಟಿನಲ್ಲಿ ಕೊನೆಯದಾಗಿ ಹೇಳುವುದಾದರೆ- ವಿಶ್ವೇಶ್ವರ ಭಟ್ಟರು ತಮ್ಮ ಲೇಖನದಲ್ಲಿ ಅರ್ಥಧಾರಿ ಗಳನ್ನು ‘ಐಟಮ್ ಸಾಂಗ್ ಡಾನ್ಸರ್’ಗಳಂತೆ ಇರುವವರೆಂದು ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ತಾಳಮದ್ದಳೆಯಿಂದು ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಎಲ್ಲೆಲ್ಲೋ ಹಾರಿ ಎಲ್ಲೆಲ್ಲೋ ಬೀಳುವ ದಯನೀಯ ಪರಿಸ್ಥಿತಿ ಇದರದ್ದು. ಇದು ಸರಿಯಾಗಿ ಹಾರಬೇಕಾದರೆ ಇದಕ್ಕೆ ನಿರ್ದೇಶಕನೆಂಬ ಸೂತ್ರ, ಸೂತ್ರಧಾರಿ ಬೇಕೇ ಬೇಕು. ಅದನ್ನು ಕಾಣುವವರೆಗೆ ಈ ದುರವಸ್ಥೆ ತಪ್ಪಿದ್ದಲ್ಲ.

ಅರ್ಥಧಾರಿಗಳಿಗೆ ಇದರಿಂದ ಸಿಗುವ ಸಂಭಾವನೆ, ಕೀರ್ತಿ, ಪ್ರಸಿದ್ಧಿ ಎಲ್ಲಾ ಬೇಕು. ಇತರರ ತೇಜೋ ವಧೆಯೂ ಆಗಬೇಕು. ಆದರೆ ಈ ಪವಿತ್ರ, ಸಮೃದ್ಧ ಕಲೆಯ ವಾಚಿಕ ವೈಭವ, ರಸ, ಭಾವ, ಸೌಂದರ್ಯ, ಪೌರಾಣಿಕ ಹಿನ್ನೆಲೆ, ಪಾತ್ರಗಳ ವೈವಿಧ್ಯ, ಪ್ರಸಂಗದ ಸೊಗಸು, ಒಟ್ಟಂದ, ಪ್ರೇಕ್ಷಕರನ್ನು ಮೇಲೆತ್ತುವ ಕೆಲಸ ಯಾವುದೂ ಬೇಡವಾಗಿದೆ.

(ಲೇಖಕರು ಹಿರಿಯ ಸಾಹಿತಿ)