ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Prakash Shesharaghavachar Column: ಭಾವೋದ್ವೇಗಕ್ಕೆ ಒಳಗಾಗದೆ ವಾಸ್ತವವನ್ನು ಅರ್ಥೈಸಿಕೊಳ್ಳಿ

ಮೂರು ದಿನಗಳ ಕಾಲ ನಡೆದ ಡ್ರೋನ್ ದಾಳಿಗೆ ಭಾರತ ತೀಕ್ಷ್ಣವಾಗಿ ಉತ್ತರಿಸಿದ್ದಲ್ಲದೆ, ನೂರ್ ಖಾನ್/ ಚಕ್ಲಾಲಾ, ರಫೀಕಿ, ಮುರಿದ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ (ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ವಾಯುನೆಲೆ), ಸ್ಕರ್ಡು (ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ), ಭೋಲಾರಿ ಮತ್ತು ಜಾಕೋಬಾಬಾದ್ ಮುಂತಾದ ನಗರಗಳ ವೈಮಾನಿಕ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಮತ್ತು ಪಾಕಿಸ್ತಾನದ ಹಲವಾರು ರಕ್ಷಣಾ ಸ್ಥಾವರಗಳಿಗೆ ಅಪಾರವಾದ ಹಾನಿಯುಂಟುಮಾಡುವಲ್ಲಿ ಯಶಸ್ವಿ ಯಾಯಿತು.

ಭಾವೋದ್ವೇಗಕ್ಕೆ ಒಳಗಾಗದೆ ವಾಸ್ತವವನ್ನು ಅರ್ಥೈಸಿಕೊಳ್ಳಿ

Profile Ashok Nayak May 13, 2025 6:59 AM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಸಂಜೆ ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ ಬರೆದುಕೊಂಡಾಗ, ‘ಯುದ್ಧ ಬೇಕು’ ಎಂಬ ಆಶಯವಿದ್ದವರಿಗೆ ಆಘಾತವಾಯಿತು, ‘ಬೇಡ’ ಎಂದು ಆಶಿಸುತ್ತಿದ್ದವರಿಗೆ ಸಮಾಧಾನ ವಾಯಿತು. ಸದರಿ ಕದನವಿರಾಮಕ್ಕೆ ಸಂಬಂಧಿಸಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಪತ್ರಿಕಾಗೋಷ್ಠಿಯಲ್ಲಿ, “ಪಾಕಿಸ್ತಾನದ ಡಿಜಿಎಂಒ ದೂರವಾಣಿ ಕರೆಮಾಡಿ ಕದನ ವಿರಾಮಕ್ಕೆ ಕೇಳಿಕೊಂಡರು, ಭಾರತ ತನ್ನ ಒಪ್ಪಿಗೆ ಸೂಚಿಸಿದೆ" ಎಂದು ತಿಳಿಸಿದ್ದಾರೆ.

ಕದನ ವಿರಾಮವಾಗಲು ಅಮೆರಿಕದ ಪಾತ್ರವಿತ್ತು ಅಥವಾ ಮುಂದಿನ ದಿನದಲ್ಲಿ ತಟಸ್ಥ ಸ್ಥಳದಲ್ಲಿ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತದೆ ಎಂಬುದರ ಬಗ್ಗೆಯಾಗಲೀ, ಸಂಧಾನದಲ್ಲಿನ ಅಮೆರಿಕದ ಪಾತ್ರದ ಬಗ್ಗೆಯಾಗಲೀ ಅವರು ಚಕಾರವೆತ್ತಲಿಲ್ಲ. ಪಹಲ್ಗಾಮ್‌ನಲ್ಲಿ ಉಗ್ರರಿಂದ ನಡೆದ ಅಮಾನುಷ ಕೃತ್ಯಕ್ಕೆ ಪ್ರತಿಯಾಗಿ ಭಾರತವು ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾ ಚರಣೆಯಲ್ಲಿ, ಪಾಕ್‌ನಲ್ಲಿನ 9 ಉಗ್ರರ ತಾಣಗಳ ಮೇಲೆ ವಿಮಾನ ಮತ್ತು ಕ್ಷಿಪಣಿ ದಾಳಿ ಕೈಗೊಂಡು ನೂರಾರು ಉಗ್ರರನ್ನು ಮುಗಿಸಿತು.

ಭಾರತವು ತದನಂತರ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಲಿಲ್ಲ; ಬದಲಿಗೆ ಒಂಬತ್ತರ ರಾತ್ರಿಯ ತರುವಾಯ ಪಾಕಿಸ್ತಾನವು ಭಾರತದ ಗಡಿಭಾಗದ ನಗರಗಳ ಮೇಲೆ ಡ್ರೋನ್ ದಾಳಿಯನ್ನು ಕೈಗೊಂಡಿದ್ದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡತೊಡಗಿತ್ತು. ಮೂರು ದಿನಗಳ ಕಾಲ ನಡೆದ ಡ್ರೋನ್ ದಾಳಿಗೆ ಭಾರತ ತೀಕ್ಷ್ಣವಾಗಿ ಉತ್ತರಿಸಿದ್ದಲ್ಲದೆ, ನೂರ್ ಖಾನ್/ ಚಕ್ಲಾಲಾ, ರಫೀಕಿ, ಮುರಿದ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ (ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ವಾಯುನೆಲೆ), ಸ್ಕರ್ಡು (ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ), ಭೋಲಾರಿ ಮತ್ತು ಜಾಕೋಬಾಬಾದ್ ಮುಂತಾದ ನಗರಗಳ ವೈಮಾನಿಕ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಮತ್ತು ಪಾಕಿಸ್ತಾನದ ಹಲವಾರು ರಕ್ಷಣಾ ಸ್ಥಾವರಗಳಿಗೆ ಅಪಾರವಾದ ಹಾನಿಯುಂಟುಮಾಡುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: Prakash Shesharaghavachar Column: 'ಹೋಗಿ ನಿಮ್ಮ ಮೋದಿಗೆ ಹೇಳಿʼ ಎಂದ ಆ ಮತಾಂಧ ರಾಕ್ಷಸ !

ಲಾಹೋರ್, ರಾವಲ್ಪಿಂಡಿ, ಕರಾಚಿ ಮತ್ತು ಸಿಯೋಲ್ ಕೋಟ್ ನಗರಗಳ ಮೇಲೆ ಕ್ಷಿಪಣಿ ದಾಳಿ ಮಾಡುವುದರಲ್ಲಿ ಯಶಸ್ವಿಯಾಯಿತು. ಈ ದಾಳಿಯ ಮೂಲಕ ಪಾಕಿಸ್ತಾನದ ಡ್ರೋನ್ ಲಾಂಚ್‌ ಪ್ಯಾಡ್‌ಗಳನ್ನು, ಭಯೋತ್ಪಾದಕ ಕೇಂದ್ರಗಳನ್ನು ಪುಡಿಪುಡಿ ಮಾಡಲಾಗಿದೆ. ಭಾರತದ ಮೇಲೆ ಪಾಕಿಸ್ತಾನವು ಸುರಿಸಿದ ಡ್ರೋನ್‌ಗಳ ಮಳೆಯನ್ನು ನಮ್ಮ ವೈಮಾನಿಕ ಸುರಕ್ಷಾ ವ್ಯವಸ್ಥೆಯು ಯಶ ಸ್ವಿಯಾಗಿ ತಡೆದು, ಆಕಾಶದಲ್ಲಿ ರಕ್ಷಾಕವಚವನ್ನೇ ನಿರ್ಮಿಸಿ, ಪಾಕ್‌ಗೆ ತಕ್ಕ ಉತ್ತರವನ್ನೇ ನೀಡಿತು.

ಪಾಕ್ ಮೇಲಿನ ಈ ಪ್ರತಿದಾಳಿಗೆ ಭಾರತವು ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ‘ಬ್ರಹ್ಮೋಸ್’ ಕ್ಷಿಪಣಿಯನ್ನು ಬಳಸಿತು. ಇನ್ನು, ರಫೆಲ್ ಫೈಟರ್ ಜೆಟ್‌ಗಳು ತಾವೆಷ್ಟು ಉಪಯುಕ್ತ ಎಂಬುದನ್ನು ಸಾಬೀತುಪಡಿಸಿದವು.

ಮೇ 6 ಮತ್ತು 7ರ ರಾತ್ರಿ ಭಯೋತ್ಪಾದಕ ತಾಣದ ಮೇಲೆ ಭಾರತವು ನಡೆಸಿದ ವೈಮಾನಿಕ ದಾಳಿಯಲ್ಲಿ 140 ಭಯೋತ್ಪಾದಕರು ಹತರಾಗಿದ್ದಾರೆ. ಭಾರತಕ್ಕೆ ಬೇಕಾಗಿದ್ದ ಪ್ರಮುಖ ಉಗ್ರರಾದ ಮುದಸ್ಸರ್ ಖಾಡಿಯನ್ ಖಾಸ್, ಅಬು ಜಿಂದಾಲ್, ಖಲೀದ್ ಅಲಿಯಾಸ್ ಅಬು ಅಕಾಶಾ, ಹಫೀಜ್ ಮೊಹಮ್ಮದ್ ಜಮೀಲ್, ಮೊಹಮ್ಮದ್ ಹಸನ್ ಖಾನ್, ಮೊಹಮ್ಮದ್ ಯೂಸುಫ್ ಅಜರ್, 1999ರಲ್ಲಿ‌ ನಡೆದಿದ್ದ ಐಸಿ-814 ವಿಮಾನ ಅಪಹರಣದ ಮಾಸ್ಟರ್ ಮೈಂಡ್‌ಗಳು ಮುಂತಾದವರು ಇದರಲ್ಲಿ ಸೇರಿದ್ದಾರೆ.

Operation Sindor ok

ಏಕಾಏಕಿ ಕದನವಿರಾಮದ ಘೋಷಣೆಯಾಗಿದ್ದು ಹಲವರನ್ನು ಗೊಂದಲದಲ್ಲಿ ದೂಡಿತು. ಕದನ ವಿರಾಮವು ಅನಗತ್ಯವಾಗಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟರು. ಮೋದಿ ಸರಕಾರದ ಬೆಂಬಲಿಗರು ಕೂಡ ಉತ್ಸಾಹ ಕಳೆದುಕೊಂಡು ಸರಕಾರವನ್ನು ಟೀಕಿಸಲು ಪ್ರಾರಂಭಿಸಿದರು. ಮೋದಿ ವಿರೋಧಿಗಳು ಕದನವಿರಾಮವನ್ನು ತಮ್ಮ ಅಪಪ್ರಚಾರದ ಸರಕು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದರು.

ಇನ್ನು ಕಾಂಗ್ರೆಸ್ಸಿಗರಂತೂ 1971ರ ಕಾಲಘಟ್ಟಕ್ಕೆ ಮರಳಿ ಗತಕಾಲದ ನೆನಪಲ್ಲಿ ಇಂದಿರಾ ಗಾಂಧಿ ಯವರ ಭಜನೆಯಲ್ಲಿ ತನ್ಮಯರಾಗಿದ್ದಾರೆ. “1971ರಲ್ಲಿ ಇದ್ದ ಪರಿಸ್ಥಿತಿಯು ಈಗಿಲ್ಲ"- ಇದನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೇ ಹೇಳುತ್ತಾರೆ. ಉಲ್ಬಣವು ಅನಗತ್ಯವಾಗಿ ನಿಯಂತ್ರಣ ತಪ್ಪುವ ಹಂತವನ್ನು ನಾವು ತಲುಪಿದ್ದೆವು. ಸತ್ಯವೆಂದರೆ, 1971ರ ಸಂದರ್ಭಗಳು 2025ರ ಸಂದರ್ಭ ಗಳಲ್ಲ, ಇಲ್ಲಿ ವ್ಯತ್ಯಾಸಗಳಿವೆ. ಇದು ನಾವು ಮುಂದುವರಿಸಲು ಉದ್ದೇಶಿಸಿದ್ದ ಯುದ್ಧವಲ್ಲ.

ಭಯೋತ್ಪಾದಕರಿಗೆ ಪಾಠ ಕಲಿಸಲು ನಾವು ಬಯಸಿದ್ದೆವು, ಅದು ನೆರವೇರಿದೆ. 1971ರ ಯುದ್ಧದಲ್ಲಿ ಬಾಂಗ್ಲಾದೇಶ ನಿರ್ಮಾಣವಾದ ಬಗ್ಗೆ ಹೆಮ್ಮೆ ಪಡುವವರು ಅದರಿಂದ ಭಾರತಕ್ಕೆ ಆದ ಉಪಯೋಗ ವೇನು ಎಂಬುದನ್ನು ವಿವರಿಸಲಿ. ಗೆದ್ದ ಭೂಭಾಗವನ್ನೆಲ್ಲಾ ಇಂದಿರಾ ಗಾಂಧಿಯವರು ಸಂಧಾನದ ಮೇಜಿನಲ್ಲಿ ಧಾರೆಯೆರೆದು ಕೊಟ್ಟರು, ನಮ್ಮ ವಶದಲ್ಲಿದ್ದ 90000 ಪಾಕ್ ಯುದ್ಧ ಖೈದಿಗಳನ್ನು ಬೇಷರತ್ ಹಿಂದಿರುಗಿಸಲಾಯಿತು.

ಸಾವಿರಾರು ಬಾಂಗ್ಲಾ-ಹಿಂದೂಗಳ ಮಾರಣಹೋಮ ನಡೆಸಿದ್ದ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಲಿಲ್ಲ. ಆದರೆ ಈ ವಾಸ್ತವವನ್ನು ಮರೆಮಾಚಿ ಕಾಂಗ್ರೆಸ್ ನಾಯಕರು ಇಂದಿರಾ ಗಾಂಧಿ ಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಡಿ ಹೊಗಳುತ್ತಿರುವುದು, ಉತ್ಪ್ರೇಕ್ಷಿತ ಬಣ್ಣನೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ.

ಮೋದಿ ಸರಕಾರವು ಬಂದ ತರುವಾಯ ಉರಿ, ಪುಲ್ವಾಮ ಮತ್ತು ಪಹಲ್ಗಾಮ್‌ನಲ್ಲಿನ ಉಗ್ರಕೃತ್ಯ ಗಳಿಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡಿದೆ. ಮೊನ್ನೆ ನಡೆದ ಹಣಾಹಣಿಯ ಹಿಂದೆ ಯುದ್ಧ ಮಾಡುವ, ಬಲೂಚಿಗಳಿಗೆ ಸ್ವಾತಂತ್ರ್ಯ ಕೊಡಿಸುವ ಉದ್ದೇಶವಿರಲಿಲ್ಲ ಅಥವಾ ‘ಪಿಒಕೆ’ ವಶಪಡಿಸಿ ಕೊಳ್ಳುವ ಅಜೆಂಡಾ ಸಹ ಇರಲಿಲ್ಲ. ಮೇ 6ರ ನಂತರ ಪಾಕಿಸ್ತಾನವು ಡ್ರೋನ್ ದಾಳಿಯನ್ನು ಆರಂಭಿಸದಿದ್ದಿದ್ದರೆ, ಭಾರತವು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಮುಂದುವರಿಸು ತ್ತಿರಲಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂಥರಾ ಕಾಂಗ್ರೆಸ್ ಪಕ್ಷದ ಹಾಗೆ, ಎಲ್ಲದರ ಶ್ರೇಯಸ್ಸು ತಮಗೇ ದಕ್ಕಬೇಕು ಎಂಬ ಮಹತ್ವಾಕಾಂಕ್ಷೆಯ ಆಸಾಮಿ ಅವರು! ಆತುರಾತುರವಾಗಿ ಕದನ ವಿರಾಮ ಘೋಷಿಸಿದ ತರುವಾಯ ಭಾರತದ ರಕ್ಷಣಾ ಸಚಿವರಾಗಲೀ, ವಿದೇಶಾಂಗ ಸಚಿವರಾಗಲಿ ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ ಅದರ ಕುರಿತು ದೃಢೀಕರಿಸುವ ಗೋಜಿಗೂ ಹೋಗಿಲ್ಲ.

ಪ್ರಧಾನಿ ಮೋದಿಯವರೂ ಇದರ ಬಗ್ಗೆ ಚಕಾರವೆತ್ತಿಲ್ಲ. ಅಮೆರಿಕದಂಥ ಬಲಾಢ್ಯ ರಾಷ್ಟ್ರದ ಅಧ್ಯಕ್ಷನ ಮಾತನ್ನು ಭಾರತದಲ್ಲಿ ಅನುಮೋದಿಸುವವರೇ ಇಲ್ಲವೆಂದ ಮೇಲೆ, ಅಮೆರಿಕದ ಒತ್ತಡಕ್ಕೆ ಭಾರತ ಮಣಿದಿದೆ ಎಂಬುದು ಜೊಳ್ಳು ಆರೋಪ, ಅದು ಅರ್ಥಹೀನ. ವಿದೇಶಾಂಗ ವ್ಯವಹಾರಗಳ ಬಗ್ಗೆ ಅರಿವಿದ್ದವರಿಗೆ ಭಾರತದ ನಿರ್ಲಕ್ಷ್ಯ, ಅಮೆರಿಕದ ಅಧ್ಯಕ್ಷರಿಗೆ ಮಾಡಿದ ಅಪಮಾನದ ಆಳವು ಅರ್ಥವಾಗುತ್ತದೆ!

ಮೇ 10ರಂದು ಪಾಕಿಸ್ತಾನದ 8 ವೈಮಾನಿಕ ಪ್ರದೇಶಗಳ ಮೇಲೆ ನಡೆದ ಭೀಕರ ದಾಳಿಯ ನಂತರ, ಪಾಕ್‌ನ ಡಿಜಿಎಂಒ ಖಾಸೀಫ್ ಅಬ್ದುಲ್ಲಾ ಭಾರತದ ಡಿಜಿಎಂಒಗೆ ಫೋನಾಯಿಸಿ‌ ಕದನ ವಿರಾಮಕ್ಕೆ ಕೋರಿರುವುದನ್ನು ವಿದೇಶಾಂಗ ಕಾರ್ಯದರ್ಶಿಗಳು ದೃಢಪಡಿಸಿದರು. ಗಮನಿಸಬೇಕಾದ ವಿಷಯ ವೆಂದರೆ ಭಾರತವು ಪಾಕ್ ಮೇಲೆ ಯುದ್ಧ ಸಾರಿರಲಿಲ್ಲ. ಪಾಕಿಸ್ತಾನವನ್ನು ಸದೆಬಡಿಯುತ್ತೇವೆ ಎಂದೇನೂ ಸರಕಾರ ಹೇಳಿರಲಿಲ್ಲ.

‘ದಾಳಿಗೆ ಭೀಕರ ಪ್ರತಿದಾಳಿ ಖಚಿತ’ ಎಂದು ಹೇಳಿತ್ತು, ಅದನ್ನು ಮಾಡಿ ತೋರಿಸಿತು. ದಾಳಿ ಮಾಡಿದ್ದು ಮತ್ತು ದಾಳಿ ನಿಲ್ಲಿಸಿ ಕದನವಿರಾಮಕ್ಕೆ ಗೋಗರೆದಿದ್ದು ಪಾಕಿಸ್ತಾನ. ಭಾರತವು ಕೇವಲ ತನ್ನ ಪ್ರತಿದಾಳಿಯನ್ನು ಸ್ಥಗಿತಗೊಳಿಸಿತಷ್ಟೇ.

ಗಮನಾರ್ಹ ಸಂಗತಿಯೆಂದರೆ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ತಿಕ್ಕಾಟ ಎರಡು ವರ್ಷ ದಿಂದಲೂ ನಡೆಯುತ್ತಲೇ ಇದೆ. ಹಮಾಸ್ ಉಗ್ರರು ಅಪಹರಣ ಮಾಡಿದ ಇಸ್ರೇಲ್‌ನ 59 ಒತ್ತೆಯಾ ಳುಗಳು ಇನ್ನೂ ಹಮಾಸ್ ವಶದಲ್ಲಿಯೇ ಇದ್ದಾರೆ.

ಕದನ ವಿರಾಮ ಮರೀಚಿಕೆಯಾಗಿ ಯುದ್ಧ ಮುಂದುವರಿದಿದೆ. ದೇಶ ಸಣ್ಣದಿರಲಿ ಅಥವಾ ದೊಡ್ಡದಿ ರಲಿ ಹೋರಾಟವು ಆರಂಭವಾದ ಮೇಲೆ ಸ್ಥಗಿತವಾಗುವುದು ಅನಿಶ್ಚಿತ ಎಂಬುದನ್ನು ಅರಿಯ ಬೇಕಾಗಿದೆ. ‘ಇನ್ನು ಮುಂದೆ ಭಯೋತ್ಪಾದಕ ಚಟುವಟಿಕೆಗೆ ಕುಮ್ಮಕ್ಕು ನೀಡಿದರೆ ಅದನ್ನು ಭಾರತದ ಮೇಲೆ ಯುದ್ಧ ಸಾರಿದ ಹಾಗೆ ಎಂದು ಪರಿಗಣಿಸಿ, ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎನ್ನುವ ಮೂಲಕ ನಮ್ಮ ರಣನೀತಿಯಲ್ಲಿ ಬಹುದೊಡ್ಡ ಬದಲಾವಣೆ ಮಾಡಿಕೊಳ್ಳಲಾಗಿದೆ.

ಪಾಕ್ ಮೇಲೆ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದ್ದು, ನಮ್ಮ ನೀತಿ ಬದಲಾವಣೆ ಯಿಂದಾಗಿ ಇನ್ನು ಮುಂದೆಯೂ ದಾಳಿಮಾಡುವ ಹಕ್ಕು ನಮ್ಮದು ಎಂಬ ನೇರ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸಲಾಗಿದೆ.

ಎಡಕ್ಕೆ ವಾಲಿರುವ ಪತ್ರಕರ್ತರು ಯುದ್ಧ ನಡೆಯುವಾಗ De Escalate ಎಂದು ಸಾಮಾಜಿಕ ಜಾಲತಾಣದಲ್ಲಿ ರೋದಿಸಿದರು. ಕದನ ವಿರಾಮವಾದ ಕೂಡಲೇ ಇವರು ಇಂದಿರಾ ಗಾಂಧಿಯವರ ಸ್ಮರಣೆ ಮಾಡುತ್ತಾರೆ. ಇದು ಕೇವಲ, ಮೋದಿಯವರನ್ನು ದುರ್ಬಲ ಎಂದು ಬಿಂಬಿಸುವ ಕುತಂತ್ರ ವಷ್ಟೇ. ಕೆಣಕಿದ ಪಾಕಿಸ್ತಾನವನ್ನು ಕೇವಲ ಮೂರು ದಿನದಲ್ಲಿ ಮಂಡಿಯೂರುವ ಹಾಗೆ ಮಾಡಿರುವ ಭಾರತದ ಸೇನೆಯ ಸಾಧನೆಯನ್ನು ಮರೆಮಾಚಿ ಅದಕ್ಕೆ ಅಪಮಾನವೆಸಗುತ್ತಿದ್ದಾರೆ.

ಮೂರು ಸೇನಾವಿಭಾಗದ ಅಧಿಕಾರಿಗಳು ಭಾನುವಾರ ಕೈಗೊಂಡ ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾ ನದ ಸೇನೆಯನ್ನು ಭಾರತ ಹೇಗೆ ದುರ್ಬಲಗೊಳಿಸಿತು ಎಂಬುದನ್ನು ವಿಸ್ತಾರವಾಗಿ ವಿವರಿಸಿದರು. ಅತ್ಯಾಧುನಿಕ ಶಸಗಳ ಮೂಲಕ ಪಾಕಿಸ್ತಾನದ ಯಾವುದೇ ಭಾಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಭಾರತಕ್ಕಿರುವುದನ್ನು ತಿಳಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಕ್ಕ ಪಾಠ ಕಲಿಸುವುದು ಭಾರತದ ಉದ್ದೇಶವಾಗಿತ್ತು, ಆ ನಿಟ್ಟಿನಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದೇವೆ. ಜತೆಗೆ, ಪಾಕಿಸ್ತಾನವು ಒಂದು ವಿಫಲ ಮತ್ತು ದುರ್ಬಲ ರಾಷ್ಟ್ರ ಎಂಬುದನ್ನು ಜಗಜ್ಜಾಹೀರು ಮಾಡಿದ್ದೇವೆ.

ಮೋದಿಯವರ ಹಲವಾರು ವಿರೋಧಿ ಶಕ್ತಿಗಳು, ಕೇಂದ್ರ ಸರಕಾರದ ಮೇಲಿನ ವಿಶ್ವಾಸ ಕುಸಿಯು ವಂತೆ ಮಾಡಲು ಈಗ ವ್ಯವಸ್ಥಿತವಾದ ಅಪಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇದು ಮೋದಿಯವರ ಬೆಂಬಲಿಗರ ಮನೋಬಲವನ್ನು ಕುಗ್ಗಿಸುವ ತಂತ್ರಗಾರಿಕೆಯಷ್ಟೇ. ಭಾವೋದ್ವೇಗಕ್ಕೆ ಒಳಗಾಗಿ ನಮ್ಮ ಗೆಲುವು ಮತ್ತು ಸಾಧನೆಯನ್ನು ನಿರ್ಲಕ್ಷಿಸಿ, ಸೋತವರ ಹಾಗೆ ನಾಯಕತ್ವದ ಮೇಲಿನ ನಂಬಿಕೆ ಕಳೆದುಕೊಂಡರೆ, ನಮ್ಮ ವಿರೋಧಿಗಳು ತೋಡಿದ ಹಳ್ಳಕ್ಕೆ ಬಿದ್ದಂತಾಗುವುದು.

ಕಳೆದ ಹತ್ತು ದಿನದ ಬೆಳವಣಿಗೆಗಳಿಂದ ತಲ್ಲಣಗೊಂಡಿರುವ ಮೋದಿ ವಿರೋಧಿಗಳು ಹತಾಶ ರಾಗಿದ್ದಾರೆ. ಆದರೆ ಮೋದಿಯವರನ್ನು ಮಣಿಸುವ ತಮ್ಮ ಪ್ರಯತ್ನ ಮತ್ತೆ ಮಣ್ಣು ಪಾಲಾಗಿ ರುವುದರಿಂದ ‘ಕದನವಿರಾಮ ಭಾರತಕ್ಕೆ ಹಿನ್ನಡೆ’ ಎಂಬ ನಿರೂಪಣೆಯ ಮೂಲಕ ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರ ಅಪಪ್ರಚಾರಕ್ಕೆ ಸೋಲು ಖಚಿತವಾಗಿ ಆಗಲಿದೆ.

(ಲೇಖಕರು ಬಿಜೆಪಿಯ ವಕ್ತಾರರು)