ಫ್ಯಾನ್ಸ್ಗೆ ದಿಢೀರ್ ಶಾಕ್ ಕೊಟ್ಟ ನಟಿ ರಶ್ಮಿಕಾ ಮಂದಣ್ಣ; ಸದ್ದಿಲ್ಲದೇ ಪೋಸ್ಟ್ಪೋನ್ ಆಯ್ತು ʻಮೈಸಾʼ ಸಿನಿಮಾ, ಕಾರಣವೇನು?
ರಶ್ಮಿಕಾ ಮಂದಣ್ಣ ನಟನೆಯ ʻಮೈಸಾʼ ಸಿನಿಮಾದ ಬಿಡುಗಡೆಗೆ ಕೇವಲ 5 ದಿನಗಳು ಬಾಕಿ ಇವೆ. ಆದರೆ ಈ ಕೊನೇ ಕ್ಷಣದಲ್ಲಿ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗಿದೆ. ನವೆಂಬರ್ 27ರಂದು ತೆರೆಗೆ ಬರಬೇಕಿದ್ದ ಈ ಚಿತ್ರವನ್ನು ತಾಂತ್ರಿಕ ಗುಣಮಟ್ಟದ ಕಾರಣ ನೀಡಿ ನಿರ್ಮಾಪಕರು ಸಿನಿಮಾವನ್ನಯ ಮುಂದೂಡಿದ್ದಾರೆ.
-
ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ‘ಮೈಸಾ’ ಚಿತ್ರದ ಬಿಡುಗಡೆ ಕೊನೆಯ ಕ್ಷಣದಲ್ಲಿ ಮುಂದೂಡಿಕೆಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವೆಂಬರ್ 27ರಂದು ಈ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಬೇಕಿತ್ತು. ಆದರೆ, ಚಿತ್ರ ಬಿಡುಗಡೆಗೆ ಕೇವಲ ಐದು ದಿನಗಳು ಬಾಕಿ ಇರುವಾಗ ತಾಂತ್ರಿಕ ಕಾರಣಗಳನ್ನು ನೀಡಿ ನಿರ್ಮಾಪಕರು ಸಿನಿಮಾವನ್ನು ಮುಂದೂಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ವಿಶೇಷವೆಂದರೆ, ಸಿನಿಮಾದ ಹೊಸ ಬಿಡುಗಡೆ ದಿನಾಂಕದ ಬಗ್ಗೆ ಸ್ವತಃ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂಬುದು ಅವರ ಸಾಮಾಜಿಕ ಜಾಲತಾಣದ ಪೋಸ್ಟ್ನಿಂದ ಬಹಿರಂಗವಾಗಿದೆ. ರವೀಂದ್ರ ಪುಲ್ಲೆ ನಿರ್ದೇಶನದ ಹಾಗೂ 'ಅನ್ಫಾರ್ಮುಲಾ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಈಗಾಗಲೇ ಭರ್ಜರಿ ಪ್ರಚಾರ ಕಾರ್ಯವನ್ನು ಆರಂಭಿಸಿತ್ತು.
ಮಾಹಿತಿ ನೀಡಿದ ಚಿತ್ರತಂಡ
ಸಿನಿಮಾ ಪೋಸ್ಟ್ಪೋನ್ ಆಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ನಿರ್ಮಾಪಕರು ಮತ್ತು ನಿರ್ದೇಶಕರು, "ತೆಲುಗು ಚಿತ್ರರಂಗವು ಸದ್ಯ ಅತ್ಯಂತ ರೋಮಾಂಚಕಾರಿ ಹಂತವನ್ನು ಪ್ರವೇಶಿಸಿದ್ದು, ಅಸಾಧಾರಣ ಕೌಶಲ್ಯ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಹೊಂದಿರುವ ಚಿತ್ರಗಳ ಮೂಲಕ ತನ್ನ ಗುಣಮಟ್ಟವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಅದೇ ಉತ್ಸಾಹದಲ್ಲಿ, ತೆಲುಗು ಚಿತ್ರರಂಗದಿಂದ ತಾಂತ್ರಿಕವಾಗಿ ಅತ್ಯುನ್ನತ ಹಾಗೂ ವಿಶಿಷ್ಟವಾದ ಆಕ್ಷನ್ ದೃಶ್ಯಕಾವ್ಯವಾಗಿ 'ಮೈಸಾ' ಚಿತ್ರವನ್ನು ರೂಪಿಸಲಾಗಿದ್ದು, ಪ್ರೇಕ್ಷಕರಿಗೆ ದೊಡ್ಡ ಪರದೆಯ ಮೇಲೆ ಅದ್ಭುತ ಅನುಭವ ನೀಡುವ ಗುರಿ ಹೊಂದಲಾಗಿದೆ" ಎಂದು ವಿವರಿಸಿದ್ದಾರೆ.
ಈ ಕಾಯುವಿಕೆ ದೀರ್ಘವಾಗಿರುವುದಿಲ್ಲ
ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿರುವ ಚಿತ್ರತಂಡ, "ನಮ್ಮ ಈ ಕನಸನ್ನು ಯಾವುದೇ ರಾಜಿಯಿಲ್ಲದೆ ಪ್ರೇಕ್ಷಕರ ಮುಂದೆ ತರುವ ಸಲುವಾಗಿ, ನವೆಂಬರ್ 27ರಂದು ನಿಗದಿಯಾಗಿದ್ದ ಬಿಡುಗಡೆಯನ್ನು ಮುಂದೂಡಲು ನಾವೆಲ್ಲರೂ ಒಮ್ಮತದಿಂದ ನಿರ್ಧರಿಸಿದ್ದೇವೆ. ಹೊಸ ಬಿಡುಗಡೆ ದಿನಾಂಕವನ್ನು ಅತಿ ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಿಮ್ಮ ನಿರಂತರ ಪ್ರೀತಿ, ತಾಳ್ಮೆ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಈ ಕಾಯುವಿಕೆ ದೀರ್ಘವಾಗಿರುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದೆ.
ಯಾವಾಗ ರಿಲೀಸ್ ಆಗುತ್ತೋ ನಂಗೂ ಗೊತ್ತಿಲ್ಲ
ಚಿತ್ರತಂಡದ ಈ ಅಧಿಕೃತ ಪ್ರಕಟಣೆಯನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಹೊಸ ಬಿಡುಗಡೆ ದಿನಾಂಕದ ಕುರಿತು ತಮಗೂ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. "ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ. ಯಾವಾಗ ರಿಲೀಸ್ ಆಗುತ್ತೋ ನಂಗೂ ಗೊತ್ತಿಲ್ಲ, ಆದರೆ ದಿನಾಂಕ ತಿಳಿದ ತಕ್ಷಣ ಖಂಡಿತವಾಗಿಯೂ ನಿಮಗೂ ತಿಳಿಸುತ್ತೇನೆ" ಎಂದು ಬರೆದುಕೊಳ್ಳುವ ಮೂಲಕ ತಮ್ಮ ಕುತೂಹಲ ಅಚ್ಚರಿಯನ್ನು ಹೊರಹಾಕಿದ್ದಾರೆ.
ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲು ಸಜ್ಜಾಗಿದ್ದ ‘ಮೈಸಾ’ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ರಶ್ಮಿಕಾ ಮಂದಣ್ಣ ಅವರೊಂದಿಗೆ ಈಶ್ವರಿ ರಾವ್, ರಾಹುಲ್ ರವೀಂದ್ರನ್, ಸಮುದ್ರಖನಿ, ರಾವ್ ರಮೇಶ್, ಶಿವ ಕಂದುಕುರಿ, ಕಾರ್ತಿಕ್ ರಂಜಿನಿ, ತಾರಕ್ ಪೊನ್ನಪ್ಪ ಮತ್ತು ನಿಧಿ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜೇಕ್ಸ್ ಬಿಜೋಯ್ ಸಂಗೀತ ಸಂಯೋಜಿಸಿದ್ದಾರೆ.