Roopa Gururaj Column: ವಿಕ್ರಮ ಬೇತಾಳ 19: ರಾಜ ಪ್ರತಾಪ ಮುಕುಟನ ಜೀವ ಉಳಿಸಲು ಬಲಿಪೀಠಕ್ಕೇರಿದ ಬಾಲಕ
ತನ್ನ ಜೀವ ಉಳಿಸಿಕೊಳ್ಳಲು ಹಪಹಪಿಸುತ್ತಿದ್ದ ರಾಜನು ಅಪಾರ ಚಿನ್ನದ ನಾಣ್ಯಗಳು ಮತ್ತು ನೂರು ಹಳ್ಳಿಗಳ ಜಹಗೀರನ್ನು ನೀಡುವುದಾಗಿ ಡಂಗುರ ಸಾರಿದನು. ಆ ಅಪಾರ ಸಂಪತ್ತಿನ ಆಸೆಗೆ ಬಿದ್ದ ಬಡ ದಂಪತಿಗಳು ತಮ್ಮ ಮುದ್ದಿನ ಪುಟ್ಟ ಮಗನನ್ನೇ ಮಾರಾಟ ಮಾಡಲು ಮುಂದೆ ಬಂದರು! ನಿಗದಿತ ದಿನದಂದು ಊರಾಚೆಯ ಕಾಳಿಕಾ ದೇವಾಲಯದ ಆವರಣದಲ್ಲಿ ಎಲ್ಲವೂ ಸಿದ್ಧವಾಯಿತು.
-
ಒಂದೊಳ್ಳೆ ಮಾತು
ಶಶಾಂಕಪುರದ ರಾಜ ಪ್ರತಾಪಮುಕುಟನಿಗೆ ತೀವ್ರವಾದ ರೋಗವೊಂದು ಆವರಿಸುತ್ತದೆ. ಯಾವ ವೈದ್ಯರಿಂದಲೂ ರೋಗ ಗುಣವಾಗದಿದ್ದಾಗ, ಕಪಟ ತಾಂತ್ರಿಕನೊಬ್ಬ, ಮಹಾರಾಜರೇ, ನಿಮ್ಮ ರೋಗ ವಾಸಿಯಾಗಬೇಕಾದರೆ ಚಂಡಿಕಾದೇವಿಗೆ ಏಳು ವರ್ಷದ ಬಾಲಕನೊಬ್ಬನನ್ನು ಬಲಿ ಕೊಡಬೇಕು. ಆದರೆ ಅದಕ್ಕೊಂದು ಕಠಿಣ ಶರತ್ತಿದೆ: ಆ ಮಗುವನ್ನು ತಂದೆ-ತಾಯಿಯರೇ ಸ್ವಇಚ್ಛೆಯಿಂದ ದಾನ ಮಾಡಬೇಕು; ಬಲಿಪೀಠದ ಮೇಲೆ ತಂದೆ ಆ ಮಗುವಿನ ಕಾಲುಗಳನ್ನೂ, ತಾಯಿ ಕೈಗಳನ್ನೂ ಗಟ್ಟಿಯಾಗಿ ಹಿಡಿದುಕೊಳ್ಳಬೇಕು; ರಾಜನಾದ ನೀವೇ ಸ್ವತಃ ಖಡ್ಗದಿಂದ ಆತನ ಶಿರಚ್ಛೇದ ಮಾಡಬೇಕು! ಎಂದು ಸೂಚಿಸಿದನು.
ತನ್ನ ಜೀವ ಉಳಿಸಿಕೊಳ್ಳಲು ಹಪಹಪಿಸುತ್ತಿದ್ದ ರಾಜನು ಅಪಾರ ಚಿನ್ನದ ನಾಣ್ಯಗಳು ಮತ್ತು ನೂರು ಹಳ್ಳಿಗಳ ಜಹಗೀರನ್ನು ನೀಡುವುದಾಗಿ ಡಂಗುರ ಸಾರಿದನು. ಆ ಅಪಾರ ಸಂಪತ್ತಿನ ಆಸೆಗೆ ಬಿದ್ದ ಬಡ ದಂಪತಿಗಳು ತಮ್ಮ ಮುದ್ದಿನ ಪುಟ್ಟ ಮಗನನ್ನೇ ಮಾರಾಟ ಮಾಡಲು ಮುಂದೆ ಬಂದರು! ನಿಗದಿತ ದಿನದಂದು ಊರಾಚೆಯ ಕಾಳಿಕಾ ದೇವಾಲಯದ ಆವರಣದಲ್ಲಿ ಎಲ್ಲವೂ ಸಿದ್ಧವಾಯಿತು. ಬಲಿಪೀಠದ ಮೇಲೆ ಬಾಲಕನನ್ನು ಮಲಗಿಸಲಾಯಿತು. ಅಪಾರ ಧನದ ವ್ಯಾಮೋಹದಲ್ಲಿದ್ದ ತಂದೆ ಮಗನ ಕಾಲುಗಳನ್ನು, ತಾಯಿ ಕೈಗಳನ್ನು ಅಲುಗಾಡದಂತೆ ಗಟ್ಟಿಯಾಗಿ ಹಿಡಿದುಕೊಂಡರು.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 18: ಚಂದ್ರಸೇನನ ಬೋಧನೆ, ಕಳ್ಳನ ಮನ ಪರಿವರ್ತನೆ
ರಾಜನು ತನ್ನ ರೋಗ ವಾಸಿಯಾಗಲೆಂದು ಹೊಳೆಯುವ ಖಡ್ಗವನ್ನು ಎತ್ತಿ ಇನ್ನೇನು ಕುತ್ತಿಗೆಗೆ ಇಳಿಸಬೇಕು ಎನ್ನುವಷ್ಟರಲ್ಲಿ, ಆ ಪುಟ್ಟ ಬಾಲಕ ಎಲ್ಲರ ಮುಖವನ್ನೂ ದಿಟ್ಟಿಸಿ ನೋಡಿ ಜೋರಾಗಿ ನಕ್ಕನು! ಆ ನಗು ಅಲ್ಲಿ ನೆರೆದಿದ್ದ ಎಲ್ಲರನ್ನೂ ಕ್ಷಣಕಾಲ ಬೆಚ್ಚಿಬೀಳಿಸಿತು. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಸಾವಿನ ಕದ ತಟ್ಟುತ್ತಿದ್ದ ಆ ಕ್ಷಣದಲ್ಲಿ ಮಗು ನಕ್ಕಿದ್ದೇಕೆ? ಮಗುವನ್ನು ಮಾರಿದ ತಂದೆ-ತಾಯಿ, ಜೀವ ಉಳಿಸಿಕೊಳ್ಳಲು ಹಪಹಪಿಸಿದ ರಾಜ ಮತ್ತು ಸಾವಿನೆದುರು ನಕ್ಕ ಆ ಬಾಲಕ-ಈ ಮೂವರ ನಡವಳಿಕೆಯಲ್ಲಿ ಅತ್ಯಂತ ಆಶ್ಚರ್ಯಕರ ಹಾಗೂ ನಿಗೂಢವಾದದ್ದು ಯಾವುದು?
ವಿಕ್ರಮಾದಿತ್ಯನು ಉತ್ತರಿಸುತ್ತಾನೆ: ಆ ಮಗುವಿನ ನಗು ಎಲ್ಲಕ್ಕಿಂತ ಪರಮ ಆಶ್ಚರ್ಯಕರ ಹಾಗೂ ನಿಗೂಢವಾದುದು! ಮನುಷ್ಯ ಲೋಕದಲ್ಲಿ ಯಾವುದೇ ಜೀವಿಗೆ ಆಪತ್ತು ಬಂದಾಗ ಮೊದಲು ರಕ್ಷಣೆ ಕೇಳುವುದು ಹೆತ್ತ ತಂದೆ-ತಾಯಿಯರಲ್ಲಿ; ಅವರಿಂದಲೂ ಅನ್ಯಾಯವಾದರೆ ಪ್ರಜೆಗಳನ್ನು ರಕ್ಷಿಸುವ ರಾಜನ ಬಳಿಗೆ ಹೋಗುತ್ತದೆ; ರಾಜನೇ ಅನ್ಯಾಯಕ್ಕೆ ಇಳಿದರೆ ಎಲ್ಲವನ್ನೂ ಕಾಯುವ ದೇವತೆಯ ಮುಂದೆ ಕೈಮುಗಿಯುತ್ತದೆ. ಆದರೆ ಆ ಬಾಲಕನಿಗೆ ರಕ್ಷಿಸಬೇಕಾದ ತಂದೆ-ತಾಯಿ ಯರೇ ಕೈ-ಕಾಲು ಕಟ್ಟಿ ಹಾಕಿದ್ದರು; ಧರ್ಮ ಪಾಲಿಸಬೇಕಾದ ರಾಜನೇ ಖಡ್ಗ ಹಿಡಿದು ಕೊಲ್ಲಲು ನಿಂತಿದ್ದ; ಎಲ್ಲರನ್ನೂ ಕಾಯಬೇಕಾದ ದೇವತೆಯೇ ಆ ರಕ್ತವನ್ನು ಬಯಸುತ್ತಿದ್ದಳು!
‘ಜಗತ್ತಿನ ರಕ್ಷಕರೆಲ್ಲರೂ ಕೇವಲ ತಮ್ಮ ಸ್ವಾರ್ಥಕ್ಕಾಗಿ ಹೀಗೆ ಒಂದಾಗಿದ್ದಾರಲ್ಲ’ ಎಂಬ ನಶ್ವರ ಮಾನವ ಜಗತ್ತಿನ ವಿಪರ್ಯಾಸವನ್ನು ಕಂಡು, ಆ ಮುಗ್ಧ ಬಾಲಕ ಅಸಹಾಯಕತೆಯಿಂದ ನಕ್ಕನು. ಬದುಕಿನಲ್ಲಿ ಸಂಬಂಧಗಳು ಮತ್ತು ಎಷ್ಟೋ ಬಾರಿ ಕೇವಲ ತಮ್ಮ ಲಾಭ, ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಇನ್ನೊಬ್ಬರ ಮುಗ್ಧತೆಯನ್ನು ಬಲಿ ಪೀಠಕ್ಕೆ ತಳ್ಳುತ್ತವೆ. ನಾವು ನಂಬಿದ ಆಪ್ತರೇ ಅಥವಾ ರಕ್ಷಣೆ ನೀಡಬೇಕಾದ ವ್ಯವಸ್ಥೆಯೇ ನಮಗೆ ದ್ರೋಹ ಬಗೆದಾಗ ಎಲ್ಲದರ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತೇವೆ.
ಆದರೆ ಬಾಹ್ಯ ಪ್ರಪಂಚದ ಈ ಸ್ವಾರ್ಥದ ಆಟಗಳನ್ನು ಗುರುತಿಸುವ ಅಂತರಂಗದ ಪ್ರಜ್ಞೆ ನಮ್ಮಲ್ಲಿದ್ದರೆ, ಆಘಾತಗಳ ನಡುವೆಯೂ ಒಂದು ನಿರ್ಲಿಪ್ತ ಮನಸ್ಥಿತಿ ನಮ್ಮನ್ನು ಕಾಯುತ್ತದೆ. ಪ್ರಪಂಚದಲ್ಲಿ ಅದೆಷ್ಟೇ ದೇವರು ಅದನ್ನು ನಿಭಾಯಿಸುವ ನಿರ್ಲಿಪ್ತತೆಯನ್ನು ಕೂಡ ನಮ್ಮೊಳಗೆ ಇಟ್ಟಿರುತ್ತಾನೆ.
ಕೆಟ್ಟತನವನ್ನು ಕಂಡು ಖಿನ್ನತೆಗೊಳಗಾಗಿ ನಾವು ಅದನ್ನೇ ಆರಿಸುವುದಲ್ಲ. ಅದರಿಂದ ಪಾಠ ಕಲಿತು ನಾವು ಬದಲಾವಣೆಯ ಮುಖವಾಗಬೇಕು. ಮತ್ತೊಬ್ಬರ ಕ್ರೌರ್ಯ ಕೆಟ್ಟತನ ಎಂದಿಗೂ ನಮ್ಮ ನಡವಳಿಕೆಗೆ ನೆಪವಾಗಬಾರದು. ಸಮಾಜವೆಂದರೆ ಎಲ್ಲಾ ರೀತಿಯ ಜನರು ಇರುತ್ತಾರೆ. ಆದರೆ ಅವರ ನಡುವೆ ನಾವು ನಮ್ಮ ಅಸ್ತಿತ್ವವನ್ನು ಒಳ್ಳೆಯ ತನವನ್ನು ಕಾಯ್ದು ಕೊಂಡಾಗ ಮಾತ್ರ ನಮ್ಮ ಬದುಕಿಗೊಂದು ಅರ್ಥ. ನಮ್ಮ ಸಂಸ್ಕಾರಕ್ಕೊಂದು ಬೆಲೆ.