ಕಲಬುರಗಿಯಲ್ಲಿ ʼಜಲಕ್ಷಾಮʼ
ಆಳಂದ ತಾಲೂಕಿನ ಕವಲಗಾ ಗ್ರಾಮದ ಜನ ಹನಿ ನೀರಿಗೆ ಪರಿತಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಇಲ್ಲಿನ ಮಹಿಳೆಯರು ಹಗಲು ರಾತ್ರಿಯನ್ನೂ ಲೆಕ್ಕಿಸದೇ ನಲ್ಲಿ ನೀರು ಹಿಡಿಯಲು ಕಾಯುವುದು ಸಾಮಾನ್ಯವಾಗಿದೆ. ಗ್ರಾಮದ ಸಾರ್ವಜನಿಕ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದ್ದು, ನಲ್ಲಿ ನೀರಿನ ಮೇಲೆ ಸಂಪೂರ್ಣ ಅವಲಂಬನೆ ಆಗಿದ್ದಾರೆ.
-
ದೇವೇಂದ್ರ ಜಾಡಿ ಕಲಬುರಗಿ
ಬೇಸಿಗೆಗೂ ಮುನ್ನವೇ ಬತ್ತಿದ ಜಲಮೂಲ
ಕೊಡ ನೀರಿಗಾಗಿ ಮೈಲುಗಟ್ಟಲೇ ಅಲೆದಾಟ
ಸೂರ್ಯನ ನಾಡು ಕಲಬುರಗಿಯಲ್ಲಿ ಬೇಸಿಗೆಯ ಪ್ರಖರತೆ ಏರುತ್ತಿದ್ದಂತೆ ಜಲಕ್ಷಾಮದ ಭೀತಿ ಆವರಿಸಿದೆ. ಮಾರ್ಚ್ ತಿಂಗಳಲ್ಲೇ ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದ್ದು, ಜಿಲ್ಲೆಯ ಹಲವು ಕಡೆ ಜನ, ಜಾನುವಾರುಗಳಿಗೆ ನೀರಿಗಾಗಿ ಆಹಾಕಾರ ಶುರುವಾಗಿದೆ. ಕೊಡ ನೀರಿಗಾಗಿ ಜನ ಕಿಲೋಮೀಟರ್‌ಗಟ್ಟಲೆ ತೆರಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಜಿಲ್ಲೆಯ 286 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗುವ ಸಾಧ್ಯತೆ ಇದೆ.
ಆಳಂದ ತಾಲೂಕಿನ ಕವಲಗಾ ಗ್ರಾಮದ ಜನ ಹನಿ ನೀರಿಗೆ ಪರಿತಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಇಲ್ಲಿನ ಮಹಿಳೆಯರು ಹಗಲು ರಾತ್ರಿಯನ್ನೂ ಲೆಕ್ಕಿಸದೇ ನಲ್ಲಿ ನೀರು ಹಿಡಿಯಲು ಕಾಯುವುದು ಸಾಮಾನ್ಯವಾಗಿದೆ. ಗ್ರಾಮದ ಸಾರ್ವಜನಿಕ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದ್ದು, ನಲ್ಲಿ ನೀರಿನ ಮೇಲೆ ಸಂಪೂರ್ಣ ಅವಲಂಬನೆ ಆಗಿದ್ದಾರೆ.
ಗಂಟೆಗಟ್ಟಲೆ ಕಾದು ನಿಂತರು ಒಂದು ಕೊಡ ಕೂಡ ನಲ್ಲಿ ನೀರು ಸಿಗುತ್ತಿಲ್ಲ. ಇದಕ್ಕಾಗಿ ನಿದ್ದೆ, ಊಟ ಬಿಟ್ಟು ಕಾಯುವುದೇ ನಮ್ಮ ಮುಖ್ಯ ಕೆಲಸ ಆಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Water Crisis: 411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ
ತಾಲೂಕುವಾರು ನೀರಿನ ಸಮಸ್ಯೆ: ಆಳಂದ ತಾಲೂಕಿನ 72 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅಫಜಲಪುರ 60 ಗ್ರಾಮ. ಕಲಬುರಗಿ ತಾಲೂಕು 53 ಗ್ರಾಮ. ಜೇವರ್ಗಿ, ಸೇಡಂ ಮತ್ತು ಚಿಂಚೋಳಿ ಭಾಗಗಳಲ್ಲಿಯೂ ಅಂತರ್ಜಲ ಬತ್ತುತ್ತಿರುವುದು ಆತಂಕ ಮೂಡಿಸಿದೆ. ಅಧಿಕಾರಿಗಳ ಲೆಕ್ಕಾಚಾರದಂತೆ ಏಪ್ರಿಲ್‌ನಲ್ಲಿ 94 ಹಾಗೂ ಮೇ ತಿಂಗಳಲ್ಲಿ 90 ಗ್ರಾಮಗಳಲ್ಲಿ ಈ ಸಮಸ್ಯೆಯ ತೀವ್ರತೆ ಇನ್ನೂ ದುಪ್ಪಟ್ಟಾಗ ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಜಲಮೂಲಗಳ ಹುಡುಕಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
465 ಬೋರ್‌ವೆಲ್‌ಗಳಲ್ಲಿ ಸಮಸ್ಯೆ: ಜಿಲ್ಲೆಯಲ್ಲಿರುವ ಒಟ್ಟು 1227 ಸರಕಾರಿ ಬೋರ್‌ವೆಲ್ ಗಳ ಪೈಕಿ ಕೇವಲ 754 ಮಾತ್ರ ಸುಸ್ಥಿಯಲ್ಲಿವೆ. 465 ಬೋರ್‌ವೆಲ್‌ಗಳು ನೀರಿಲ್ಲದೆ ಹಾಗೂ ಕೆಟ್ಟು ಹೋಗಿವೆ. ನೀರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ 303 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಅಗತ್ಯ ಇರುವ ಕಡೆ ನೀರು ಪೂರೈಸಲು ಯೋಜನೆ ಹಾಕಿಕೊಂಡಿದೆ. ಕೆಟ್ಟು ಹೋದ ಬೋರ್‌ವೆಲ್‌ಗಳನ್ನು ಪುನಶ್ಚೇತನಗೊಳಿಸುವ ಕೆಲಸಕ್ಕೂ ಚಾಲನೆ ನೀಡಲಾಗಿದೆ.
ಜಾನುವಾರುಗಳ ಕುಡಿಯುವ ನೀರಿಗೂ ಸಂಕಷ್ಟ: ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದಂತೆ ಕೆರೆ-ಕಟ್ಟೆ ಹಾಗೂ ಹಳ್ಳಗಳು ಬತ್ತಿವೆ. ಇದರಿಂದ ಕೇವಲ ಜನರಿಗಷ್ಟೇ ಅಲ್ಲದೆ, ಜಾನುವಾರುಗಳಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಜಾನುವಾರುಗಳ ದಾಹ ತೀರಿಸಲು ಮಾಲೀಕರು ಮೈಲುಗಟ್ಟಲೆ ಅಲೆಯುತ್ತಿದ್ದಾರೆ. ತಕ್ಷಣ ಗೋಕಟ್ಟೆಗಳನ್ನು ಭರ್ತಿ ಮಾಡಬೇಕು. ಬತ್ತಿದ ಕೆರೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜನ-ಜಾನುವಾರುಗಳ ದಾಹ ತೀರಿಸಬೇಕು ಎಂದು ಜಿಲ್ಲಾಡಳಿತಕ್ಕೆ ರೈತರು ಆಗ್ರಹವಿದೆ.
*
ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟ ಕುಸಿತ, 286
ಗ್ರಾಮಗಳಲ್ಲಿ ನೀರಿನ ಅಭಾವ
ಆಳಂದ ತಾಲೂಕಿನ 72 ಗ್ರಾಮಗಳಲ್ಲಿ ನೀರಿನ ಸಮಸ್ಯೆ
ಮಾರ್ಚ್‌ನಲ್ಲಿ 102, ಏಪ್ರಿಲ್‌ನಲ್ಲಿ 94, ಮೇನಲ್ಲಿ 90 ಗ್ರಾಮಗಳಲ್ಲಿ ಸಮಸ್ಯೆ ತೀವ್ರ
ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ 8 ಕೋಟಿ ರು. ಅನುದಾನಕ್ಕಾಗಿ ಸರಕಾರಕ್ಕೆ ಬೇಡಿಕೆ
![]()
286 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗುರುತಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 8 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
-ಭಂವರ್‌ಸಿಂಗ್ ಮೀನಾ ಸಿಇಒ, ಜಿಪಂ ಕಲಬುರಗಿ
![]()
ಬೇಸಿಗೆ ಬಂದರೆ ನಮ್ಮ ಗ್ರಾಮದಲ್ಲಿ ನೀರಿಗಾಗಿ ಆಹಾಕಾರ ಉಂಟಾಗುತ್ತದೆ. ದೂರದ ತೋಟಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳು ಕೇವಲ ಯೋಜನೆ ರೂಪಿಸದೆ, ಕೂಡಲೇ ಟ್ಯಾಂಕರ್ ಮೂಲಕ ನೀರು ಒದಗಿಸುವ ಕೆಲಸ ಮಾಡಬೇಕು.
- ನಾಗೇಶ್ ಪೆಂಚಪಳ್ಳಿ ಚಿಂಚೋಳಿ ನಿವಾಸಿ