ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ನಮ್ಮವರ ಹೊರೆ ಮಧ್ಯೆ ಟ್ರಂಪಾಸ್ತ್ರ ಏನು ಮಹಾ ?

ಟ್ರಂಪ್ ನೀತಿ ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಆಧರಿಸಿ ಇಂದಲ್ಲ ನಾಳೆ ಮರು ವಿಮರ್ಶೆ ಯಾಗಬಹುದು. ಆದರೆ ಬೆಲೆ ಏರಿಕೆ ಮತ್ತು ತೆರಿಗೆ ಏರಿಕೆಯನ್ನು ವಾರ್ಷಿಕ ಪರಂಪರೆ ಎಂದು ಪರಿಗಣಿಸಿ ರುವ ನಮ್ಮ ನಾಯಕರ ನಿರ್ಧಾರಗಳೂ ಜಪ್ಪಯ್ಯ ಎಂದರೂ ಬದಲಾಗುವುದಿಲ್ಲ. ಏಕೆಂದರೆ ನಮ್ಮಲ್ಲಿ ಏರಿಕೆ ಪ್ರಕ್ರಿಯೆ ಕುರ್ಚಿ ಏರಿದವರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರ. ಇಲ್ಲಿ ಅಹವಾಲುಗಳಿಗೆ ಸ್ಥಾನವಿಲ್ಲ.

ನಮ್ಮವರ ಹೊರೆ ಮಧ್ಯೆ ಟ್ರಂಪಾಸ್ತ್ರ ಏನು ಮಹಾ ?

ಲೋಕಮತ

kaayarga@gmail.com

ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿ ಇಡೀ ವಿಶ್ವದ ಮೇಲೆ ಸಾರಿರುವ ಸುಂಕ ಸಮರ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಮುಂದೇನಾಗಬಹುದು ಎಂಬ ಭಯದಿಂದ ವಿಶ್ವದ ಷೇರು ಮಾರುಕಟ್ಟೆಗಳು ತಲ್ಲಣಗೊಂಡಿವೆ. ಏಪ್ರಿಲ್ 7ರ ಒಂದೇ ದಿನ ಜಾಗತಿಕ ಷೇರು ಮಾರುಕಟ್ಟೆಯಲ್ಲಿ 19 ಲಕ್ಷ ಕೋಟಿ ರು. ನಷ್ಟ ಸಂಭವಿಸಿದೆ. ಮಹತ್ವದ ಘೋಷಣೆ ಗಳು ಹೊರಬಿದ್ದಾಗ ಷೇರುಪೇಟೆಯಲ್ಲಿ ಈ ರೀತಿಯ ಏರುಪೇರು ಸಹಜ ವಿದ್ಯಮಾನ. ಇಂದಲ್ಲ, ನಾಳೆ ಇವೆಲ್ಲವೂ ಸಹಜ ಸ್ಥಿತಿಗೆ ಬರಲೇಬೇಕು. ಆದರೆ ಕರುನಾಡಿನ ನಾವು, ಟ್ರಂಪ್‌ಗೆ ಮುನ್ನವೇ ನಮ್ಮ ನಾಯಕರು ನೀಡಿದ ಬೆಲೆ ಏರಿಕೆ ಬರೆಯಿಂದ ತತ್ತರಿಸಿದ್ದೇವೆ. ಟ್ರಂಪ್ ಒಂದೇ ಬಾರಿಗೆ ಸುಂಕ ನೀತಿ ಘೋಷಿಸಿದರೆ ನಮ್ಮ ನಾಯಕರು ದುರ್ಬೀನು ಹಿಡಿದುಕೊಂಡು ಹಂತ,ಹಂತವಾಗಿ ಕರಭಾರ ಹೇರುತ್ತಿದ್ದಾರೆ. ಈ ವಿಚಾರದಲ್ಲಿ ನಮ್ಮ ನಾಯಕರು, ಅಧಿಕಾರಿಗಳು ಟ್ರಂಪ್‌ಗಿಂತ ಬಹಳ ಮುಂದಿ ದ್ದಾರೆ.

ಟ್ರಂಪ್ ನೀತಿ ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಆಧರಿಸಿ ಇಂದಲ್ಲ ನಾಳೆ ಮರು ವಿಮರ್ಶೆ ಯಾಗಬಹುದು. ಆದರೆ ಬೆಲೆ ಏರಿಕೆ ಮತ್ತು ತೆರಿಗೆ ಏರಿಕೆಯನ್ನು ವಾರ್ಷಿಕ ಪರಂಪರೆ ಎಂದು ಪರಿಗಣಿಸಿರುವ ನಮ್ಮ ನಾಯಕರ ನಿರ್ಧಾರಗಳೂ ಜಪ್ಪಯ್ಯ ಎಂದರೂ ಬದಲಾಗುವುದಿಲ್ಲ. ಏಕೆಂದರೆ ನಮ್ಮಲ್ಲಿ ಏರಿಕೆ ಪ್ರಕ್ರಿಯೆ ಕುರ್ಚಿ ಏರಿದವರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರ. ಇಲ್ಲಿ ಅಹವಾಲುಗಳಿಗೆ ಸ್ಥಾನವಿಲ್ಲ.

ಇದನ್ನೂ ಓದಿ: Lokesh Kayarga Column: ಕನ್ನಡಿಗರು ಇನ್ನೆಷ್ಟು ಉದಾರಿಗಳಾಗಬೇಕು ?

ಮಾರುಕಟ್ಟೆಯ ಏರಿಳಿತಗಳಿಗೆ ಸಂಬಂಧವಿಲ್ಲ. ಕುರ್ಚಿ ಹಿಡಿದವರಿಗೆ ತಮ್ಮ ದುರಾಡಳಿತದಿಂದ ಬೊಕ್ಕಸ ಬರಿದಾಗಲೆಲ್ಲ ಏರಿಕೆಯ ಮಾರ್ಗ ತುಳಿಯುವುದೊಂದೇ ತಿಳಿದಿರುವ ಮಾರ್ಗ. ಹೊಟೇಲ್ ತಿಂಡಿಗಳ ದರವನ್ನು 25 ಪೈಸೆ ಏರಿಸಿದಾಗಲೂ ಪ್ರತಿಭಟನೆ ನಡೆಸುವ 80-90 ದಶಕದ ಹೋರಾಟ ಪ್ರವೃತ್ತಿ ಈಗ ಇಲ್ಲ ಎನ್ನುವುದು ಸರಕಾರಕ್ಕೂ ತಿಳಿದಿದೆ. ಸರಕಾರದಂತೆ ನಾಜೂಕುತನ ಬೆಳೆಸಿ ಕೊಂಡಿರುವ ಜನರು ಕೂಡ ಈಗ ಇಂತಹ ವಿಚಾರಗಳಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಿಲ್ಲ.

ಹೆಚ್ಚೆಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಆಸ್‌ಟ್ಯಾಗ್ ಹಾಕಿ ಒಂದಷ್ಟು ದಿನ ಅಭಿಯಾನ ನಡೆಸಬಹುದು. ಲೆಟರ್‌ಹೆಡ್‌ಗೆ ಸೀಮಿತವಾದ ಒಂದಷ್ಟು ಸಂಘಟನೆಗಳು ಪ್ರತಿಭಟನೆ ನಡೆಸಿ ಪತ್ರಿಕೆಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಬಹುದು. ವಿರೋಧ ಪಕ್ಷಗಳ ಪ್ರತಿಭಟನೆ ಏನಿದ್ದರೂ ಸಾಂಕೇ ತಿಕ ಕ್ರಮ. ಅವರು ಇವರತ್ತ, ಇವರು ಅವರತ್ತ ಬೊಟ್ಟು ಮಾಡುವಲ್ಲಿಗೆ ಹೋರಾಟ ಪ್ರಹಸನ ಕೊನೆಗೊಳ್ಳುತ್ತದೆ.

ಮತ್ತೆ ಎಲ್ಲವೂ ಯಥಾ ಸ್ಥಿತಿ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರನ್ನು ಮೇಲಕ್ಕೆತ್ತಲು ಹೊರಟ ಸಿದ್ದರಾಮಯ್ಯ ಸರಕಾರ ಈಗ ಹಣಕಾಸು ಬಿಕ್ಕಟ್ಟಿನಿಂದ ಮೇಲೆ ಬರುವ ಮಾರ್ಗಗಳನ್ನು ಹುಡುಕುತ್ತಿದೆ. ಅಬಕಾರಿ ಇಲಾಖೆಯಿಂದ ಹಿಡಿದು ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಸಂಪ ನ್ಮೂಲ ಕ್ರೋಡೀಕರಣದ ಮಾರ್ಗ ಹುಡುಕಲು ಸರಕಾರ ನಿರ್ದೇಶನ ನೀಡಿದೆ. ಹಿರಿಯ ಅಧಿಕಾರಿಗಳು ಎಂದಿನಂತೆ ಎಲ್ಲೆಲ್ಲಿ ತೆರಿಗೆ ಹೇರಲು ಸಾಧ್ಯ ಎಂದು ಕಿರಿಯ ಅಧಿಕಾರಿಗಳ ಸಲಹೆ ಪಡೆಯುತ್ತಿದ್ದಾರೆ.

ಕೆಳ ಹಂತದ ಅಧಿಕಾರಿಗಳು ಜನಸಾಮಾನ್ಯರ ಮೇಲಾಗುವ ಪರಿಣಾಮ ಇಲ್ಲವೇ ಒಟ್ಟು ವ್ಯವಸ್ಥೆ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಏರಿಕೆಯ ಸ್ಲ್ಯಾಬ್ ಸಿದ್ದಪಡಿಸು ತ್ತಿದ್ದಾರೆ. ದೂರದೃಷ್ಟಿತ್ವ ಇಲ್ಲದ ಮಂತ್ರಿಗಳು ಇದನ್ನೇ ಮಾಧ್ಯಮದ ಮುಂದೆ ಉರು ಹೊಡೆಯು ತ್ತಿದ್ದಾರೆ. ಕೆಲವು ಅತಿ ಬುದ್ದಿವಂತ ಸಚಿವರು ತಮ್ಮ ಮುಂದಾಲೋಚನೆಗೆ ತಕ್ಕಂತೆ ಯೋಜನೆ ಗಳನ್ನು ಹೆಣೆದು ಅವುಗಳಿಗೆ ದರ ಫಿಕ್ಸ್ ಮಾಡಲು ಹೊರಟಿದ್ದಾರೆ.

ಏರಿಕೆ ಎಂಬ ವಾರ್ಷಿಕ ಪ್ರಕ್ರಿಯೆ

ಬಜೆಟ್ ಮಂಡನೆ ವಾರ್ಷಿಕ ಪ್ರಕ್ರಿಯೆಯಾಗಿರುವಂತೆ ನಮ್ಮಲ್ಲಿ ದರ ಇಲ್ಲವೇ ತೆರಿಗೆ ಏರಿಕೆಯೂ ವಾರ್ಷಿಕ ಪ್ರಕ್ರಿಯೆ. ಚುನಾವಣೆ ಘೋಷಣೆ ಪೂರ್ವದ ಒಂದು ವರ್ಷ ಬಿಟ್ಟರೆ ಉಳಿದ ವರ್ಷಗಳಲ್ಲಿ ಏರಿಕೆ ನಿರಂತರ ಪ್ರಕ್ರಿಯೆಯಾಗಿ ಸಾಗುತ್ತದೆ. ಇಲ್ಲಿ ಮಾರುಕಟ್ಟೆ ಆಧಾರಿತ ನೀತಿ ನಿರೂಪಣೆಗಳನ್ನು ಅನುಸರಿಸುವುದು ಕಡಿಮೆ. ಆಡಳಿತ ದಕ್ಷತೆ ಮೂಲಕ ಉತ್ಪಾದಕತೆ ಹೆಚ್ಚಿಸಲು ಗಮನ ನೀಡುವು ದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಏರಿಕೆ- ಇಳಿಕೆ ಇಲ್ಲವೇ ಉಚಿತ ಯೋಜನೆಗಳ ಘೋಷಣೆಗೆ ಮುನ್ನ ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಹಾಲಿನ ದರ ಏರಿಕೆಯ ವಿಚಾರವನ್ನೇ ತೆಗೆದುಕೊಳ್ಳೊಣ. ದೇಶದಲ್ಲಿ ಅಮುಲ್ ಬಿಟ್ಟರೆ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ (ಕೆಎಂಎಫ್) ಅತಿ ಹೆಚ್ಚು ಹಾಲು ಪೂರೈ ಸುವ ಸಹಕಾರಿ ಸಂಘಟನೆ. ‌

ಕೆಎಂಎಫ್ ಪ್ರತಿದಿನ ಅಂದಾಜು ಒಂದು ಕೋಟಿ ಲೀಟರ್ ಗಳಷ್ಟು ಹಾಲು ಸಂಗ್ರಹ ಮಾಡುತ್ತಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ 16ಕ್ಕೂ ಹೆಚ್ಚು ಹಾಲು ಒಕ್ಕೂಟಗಳಿವೆ. ಗ್ರಾಮ ಮಟ್ಟದಲ್ಲಿ ಸುಮಾರು 15000ಕ್ಕೂ ಹೆಚ್ಚು ಡೈರಿ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 20 ಲಕ್ಷ ರೈತರು ಈ ಸಂಘಟನೆಯನ್ನು ನಂಬಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿ ದ್ದಾರೆ.

ಆದರೆ ಇಷ್ಟೊಂದು ದೊಡ್ಡ ಜಾಲವನ್ನು ಹೊಂದಿದ್ದರೂ ಕೆಎಂಎಫ್‌ ಉತ್ಪನ್ನಗಳ ಮಾರಾಟ ಜಾಲ ಬಹುತೇಕ ರಾಜ್ಯವನ್ನೇ ನೆಚ್ಚಿಕೊಂಡಿದೆ. ತಿರುಪತಿಯಂತಹ ದೇಗುಲಗಳಿಗೆ ತುಪ್ಪ ಪೂರೈಸುವು ದನ್ನು ಬಿಟ್ಟರೆ ನೆರೆಯ ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಅಷ್ಟಕಷ್ಟೇ. ಬೆಂಗಳೂರಿ ನಂತಹ ಮಹಾನಗರಗಳಲ್ಲಿ ಖಾಸಗಿ ಡೈರಿಗಳ ಹಾಲು ಮಾರಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಇವುಗಳ ಗುಣಮಟ್ಟದ ಬಗ್ಗೆ ಆಕ್ಷೇಪಗಳಿದ್ದರೂ ಮಾರಾಟದಲ್ಲಿ ಕುಸಿತ ಕಂಡಿಲ್ಲ.

ಇತ್ತೀಚೆಗೆ ಅಮುಲ್ ಕೂಡ ತಾಜಾ ಹಾಲಿನ ಪೂರೈಕೆ ಆರಂಭಿಸಿದೆ. ಕೆಎಂಎಫ್ ತನ್ನ ಅತಿ ದೊಡ್ಡ ಜಾಲವನ್ನು ಬಳಸಿಕೊಂಡು ತನ್ನ‌ ಉತ್ಪನ್ನಗಳ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಪದೇ ಪದೆ ವಿಫಲವಾಗುತ್ತಿದೆ. ಕೆಎಂಎಫ್‌ ನ ಸುವಾಸಿತ ಹಾಲು, ತುಪ್ಪ, ಮಜ್ಜಿಗೆ, ಐಸ್‌ಕ್ರೀಮ್ ಮತ್ತು ಇತರ ಸಿಹಿ ತಿನಿಸುಗಳ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ಸದಭಿಪ್ರಾಯವಿದೆ. ಆದರೆ ಕೆಎಂಎಫ್ ಮಳಿಗೆ ಬಿಟ್ಟರೆ‌ ಬೇರೆಲ್ಲೂ ಈ ಉತ್ಪನ್ನಗಳು ಸಿಗುವುದಿಲ್ಲ. ಅಮುಲ್ ಉತ್ಪನ್ನಗಳು ಸಾಮಾನ್ಯ ಕಿರಾಣಿದಾರರ ಅಂಗಡಿಗಳಲ್ಲೂ ಲಭ್ಯವಿರುವಾಗ ಕೆಎಂಎಫ್‌ ತನ್ನ ಉತ್ಪನ್ನ ಎಲ್ಲೆಡೆ ಲಭ್ಯ ವಾಗುವಂತೆ ಮಾಡಲು ಯಾಕೆ ಸಾಧ್ಯವಿಲ್ಲ ?

ಹೈನುಗಾರರ ಸಂಕಷ್ಟ ನೆಪ ಮಾತ್ರ

ಸರಕಾರ ಪ್ರತಿ ಬಾರಿ ಹಾಲಿನ ದರ ಏರಿಸುವಾಗಲೂ ಹೈನುಗಾರರ ಸಂಕಷ್ಟವನ್ನು ಮುಂದಿಡುತ್ತದೆ. ಕಳೆದ ಬಾರಿ ದರ ಏರಿಕೆಯ ಬಳಿಕ ಹೈನುಗಾರರಿಗೆ ನೀಡುತ್ತಿದ್ದ ಮೊತ್ತವನ್ನು 2 ರು. ಕಡಿತಗೊಳಿಸ ಲಾಗಿತ್ತು. ಈಗ ಲೀಟರ್ ಹಾಲಿನ ದರ 4 ರು. ಏರಿಸಿರುವ ಸರಕಾರ ಈ ಮೊತ್ತ ಹೈನುಗಾರರಿಗೆ ದೊರಕಲಿದೆ ಎಂದು ಹೇಳಿಕೊಂಡಿದೆ. ಆದರೆ ರೈತರಿಗೆ ಕೊಡಬೇಕಾದ 600 ಕೋಟಿ ರು.ಗಳಿಗೂ ಹೆಚ್ಚಿನ ಪ್ರೋತ್ಸಾಹಧನವನ್ನು ಸರಕಾರ ಇನ್ನೂ ಬಾಕಿ ಉಳಿಸಿಕೊಂಡಿದೆ.

ಹಾಲಿನ ಮಾರಾಟಕ್ಕಿಂತಲೂ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಹೆಚ್ಚಳದ ಮೂಲಕ ಹೆಚ್ಚಿನ ಲಾಭ ಗಳಿಸಲು ಕೆಎಂಎಫ್‌ ಗೆ ಅವಕಾಶವಿದೆ. ಆದರೆ ಕೆಎಂಎಫ್‌ ನ ತನ್ನ ಗಳಿಕೆಯ ಬಹುಭಾಗ ವನ್ನು ತನ್ನ ಸಿಬ್ಬಂದಿಗಳ ಸಂಬಳಕ್ಕಾಗಿ ವ್ಯಯಿಸುತ್ತಿದೆ. ರಾಜಕಾರಣಿಗಳ ಆಟದ ಮೈದಾನವಾದ ಸಹಕಾರಿ ಒಕ್ಕೂಟದಲ್ಲಿ ಮಂತ್ರಿಗಳ ಶಿಫಾರಸು ಪತ್ರದ ಮೇರೆಗೆ ಸೇರಿದವರೇ ಹೆಚ್ಚು.

ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟವನ್ನು ತೆಗೆದುಕೊಂಡರೆ ಇಲ್ಲಿ 400ಕ್ಕಿಂತ ಹೆಚ್ಚು ಕಾಯಂ ಸಿಬ್ಬಂದಿಗಳಿದ್ದಾರೆ. ಇದರ ಮೂರು ಪಟ್ಟು ಗುತ್ತಿಗೆ ಆಧಾರಿತ ಸಿಬ್ಬಂದಿಗಳಿದ್ದಾರೆ. ಖಾಸಗಿ ಸಂಸ್ಥೆಯಾಗಿದ್ದರೆ ಇದರ ಅರ್ಧದಷ್ಟು ಮಾನವ ಸಂಪನ್ಮೂಲ ಬಳಸಿಕೊಂಡು ಸಂಸ್ಥೆ ನಡೆಯು ತ್ತಿತ್ತು. ಹಾಲು ಒಕ್ಕೂಟ ಸಂಸ್ಥೆಯ ನಿರಂತರ ಹಗರಣ, ಅವ್ಯಹಾರಗಳನ್ನು ನಿಲ್ಲಿಸಿದರೂ ಕೋಟ್ಯಂ ತರ ರೂ. ಉಳಿಸಲು ಸಾಧ್ಯವಿದೆ.

ರೈತರಿಗೆ ಹೆಚ್ಚು ಹಣ ನೀಡಿದರೂ ರಾಜ್ಯದ ಜನತೆಗೆ ಮಿತವ್ಯಯದಲ್ಲಿ ಹಾಲು ಪೂರೈಸಲು ಸಾಧ್ಯ ವಿದೆ. ಆಸ್ತಿ ತೆರಿಗೆ ಎಂಬ ವಸೂಲಿ ದಂಧೆ. ಇನ್ನು ಆಸ್ತಿ ತೆರಿಗೆ ಎನ್ನುವುದು ಸರಕಾರ ಮತ್ತು ಅಧಿಕಾರಿ ಗಳು ನಡೆಸುವ ವಸೂಲಿ ದಂಧೆ ಎಂದರೆ ತಪ್ಪಾಗಲಾರದು. ಇಲ್ಲಿ ಆಸ್ತಿ ತೆರಿಗೆಗಿಂತಲೂ ಇದನ್ನು ನಿಗದಿಪಡಿಸುವ ಪ್ರಕ್ರಿಯೆಯೇ ಅತಿ ದೊಡ್ಡ ಕಾರಸ್ಥಾನ.

ಕಟ್ಟಡ ನಿರ್ಮಿಸಲು ಸರಕಾರ ರೂಪಿಸಿರುವ ನಿಯಮಗಳು ಹೇಗಿವೆ ಎಂದರೆ ಇವುಗಳನ್ನು ಉಲ್ಲಂ ಘಿಸದೆ ಯಾರೊಬ್ಬರೂ ಕಟ್ಟಡ ಕಟ್ಟುವಂತಿಲ್ಲ. ಹೀಗಾಗಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಪತ್ರ ನೀಡುವ ನಗರಾಡಳಿತಗಳು ಇದರ ಉಲ್ಲಂಘನೆಗೂ ಅವಕಾಶ ನೀಡುತ್ತವೆ. ಕೊನೆಗೆ ಅಕ್ರಮ ಸಕ್ರಮ ನೆಪದಲ್ಲಿ ಅಧಿಕಾರಿಗಳು ಜೇಬು ತುಂಬಿಸಿಕೊಳ್ಳುತ್ತಾರೆ.

ಸರಕಾರ ಆಸ್ತಿ ತೆರಿಗೆ ಹೆಚ್ಚಿಸುವ ಬದಲು ಆಸ್ತಿ ತೆರಿಗೆಯನ್ನು ಸುಲಭದಲ್ಲಿ ನಿಗದಿ ಮಾಡುವ ಮತ್ತು ಪಾವತಿಸುವ ವ್ಯವಸ್ಥೆ ರೂಪಿಸಿದರೆ ಎರಡರಿಂದ ಮೂರು ಪಟ್ಟು ಹೆಚ್ಚು ಕಂದಾಯ ಸಂಗ್ರಹ ಸಂಗ್ರಹಿಸಲು ಸಾಧ್ಯವಿದೆ. ಆದರೆ ಅಧಿಕಾರಿಗಳಿಗೆ ಸರಳೀಕೃತ ವ್ಯವಸ್ಥೆ ಜಾರಿಯಾಗುವುದು ಬೇಕಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಿಬಿಎಂಪಿ ಸೇರಿದಂತೆ ನಗರಾಭಿವೃದ್ಧಿ ಸಂಸ್ಥೆಗಳ ಚಿಂತನೆಯಲ್ಲಿಯೇ
ದೋಷವಿದೆ.

ನಗರ ಪ್ರದೇಶಗಳಲ್ಲಿ ಜಾಗದ್ದೇ ಅತಿ ದೊಡ್ಡ ಸಮಸ್ಯೆ. ಹೀಗಿರುವಾಗ ಮನೆ ಕಟ್ಟುವವರು ಬಾಡಿಗೆ ಮನೆ ನೀಡಲು ಅವಕಾಶವಿರುವಂತೆ ಎರಡು ಅಥವಾ ಮೂರು ಅಂತಸ್ತಿನ ಕಟ್ಟಡ ಕಟ್ಟಲು ಸರಕಾರವೇ ಖುದ್ದು ಪ್ರೋತ್ಸಾಹ ನೀಡಬೇಕು. ಇದರಿಂದ ಬಾಡಿಗೆದಾರರಿಗೂ ಅನುಕೂಲ. ಕಡಿಮೆ ದರದಲ್ಲಿ ಮನೆ ಸಿಗದೆ ಬಡವರು ಕೊಳಗೇರಿ ಪ್ರದೇಶಗಳಲ್ಲಿ ವಾಸ ಹೂಡುವುದನ್ನೂ ತಪ್ಪಿಸ ಬಹುದು.

ಆದರೆ ಸರಕಾರ ಮನೆ ಅಂತಸ್ತು ಜಾಸ್ತಿಯಾದಂತೆ ಹೆಚ್ಚೆಚ್ಚು ತೆರಿಗೆ ವಿಧಿಸುತ್ತದೆ. ರೆಡ್ ಆಕ್ಸೈಡ್‌ಗೆ ಬೇರೆ, ಟೈಲ್ಸ್‌ಗೆ ಬೇರೆ, ಗ್ರಾನೈಟ್‌ಗೆ ಬೇರೆ, ಬೋರ್‌ವೆಲ್‌ಗೆ ಪ್ರತ್ಯೇಕ ಎಂದು ಹೊಸದಾಗಿ ಮನೆ
ಕಟ್ಟಿದವರನ್ನು ಸರಕಾರ ಅಕ್ಷರಶ: ಗೋಳು ಹೊಯ್ದುಕೊಳ್ಳುತ್ತದೆ.

ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಿರುವ ಸರಕಾರ, ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನೂ ಕೈಗೆಟುಕದಷ್ಟು ಮಟ್ಟಿಗೆ ಹೆಚ್ಚಿಸಿದೆ. ಇನ್ನು ಕಟ್ಟಡ ಪರವಾನಗಿ ಪತ್ರ, ಸಿ. ಆರ್, ಒ.ಸಿ, ಖಾತಾ ವರ್ಗಾವಣೆ, ಕಂದಾಯ ನಿಗದಿ..ಹೀಗೆ ನೂರೆಂಟು ವಿಧಗಳಲ್ಲಿ ಗ್ರಾಹಕರನ್ನು ಸತಾಯಿಸಲಾಗುತ್ತದೆ. ಇಲ್ಲಿ ಸರಕಾರಿ ಶುಲ್ಕಕ್ಕಿಂತಲೂ ಅಧಿಕಾರಿಗಳ ಕೈ ಬಿಸಿ ಮಾಡಲು ನಾಗರಿಕರು ಹೆಚ್ಚು ಹಣ ವ್ಯಯಿಸ ಬೇಕಾಗಿದೆ.

ಇದೀಗ ಆಸ್ತಿ ತೆರಿಗೆ ಕಟ್ಟದ ಮನೆಗಳನ್ನು ವಶಕ್ಕೆ ಪಡೆಯಲು ಸರಕಾರ ನಿರ್ಧರಿಸಿದೆ. ಸರಕಾರದ ಈ ನಡೆಯೇ ಸರ್ವಾಧಿಕಾರಿ ಧೋರಣೆ. ಕರೆಂಟ್ ಬಿಲ್, ನೀರಿನ ಬಿಲ್ ಪಾವತಿಸುವಂತೆ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯನ್ನು ನಾಗರಿಕ ಸ್ನೇಹಿಯಾಗಿ ಪರಿವರ್ತಿಸಿದರೆ ಇದನ್ನು ಕಟ್ಟಲು ಯಾರೂ ಹಿಂದೇಟು ಹಾಕುವುದಿಲ್ಲ. ಆದರೆ ನಮ್ಮ ಸರಕಾರ ಮತ್ತು ಅಽಕಾರಿಗಳಿಗೆ ತೆರಿಗೆದಾರ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಗೊತ್ತೇ ಇಲ್ಲ. ಆಸ್ತಿ ತೆರಿಗೆ ಕಟ್ಟಲು ಕಂದಾಯ ಕಚೇರಿಗೆ ಹೋಗುವುದು ಮತ್ತು ಪೊಲೀಸ್ ಠಾಣೆಗೆ ಹೋಗುವುದರ ಮಧ್ಯೆ ನಾಗರಿಕರು ಹೆಚ್ಚೇನೂ ವ್ಯತ್ಯಾಸ ಕಾಣುತ್ತಿಲ್ಲ.

ಒಬ್ಬ ಖಾಸಗಿ ಡೆವಲಪರ್ ಲೇ ಔಟ್ ಮಾಡಬೇಕಿದ್ದರೆ ಶೇ.40ರಷ್ಟು ಭಾಗವನ್ನು ಸಿಎ ಸೈಟ್, ರೋಡ್, ಪಾರ್ಕ್ ರೂಪದಲ್ಲಿ ಬಿಡಬೇಕು. ಆತನೇ ಎಲ್ಲ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿದ ಬಳಿಕವೂ ಸರಕಾರಕ್ಕೆ ಕೋಟ್ಯಂತರ ರು. ಶುಲ್ಕ ಪಾವತಿಸಬೇಕು. ಕಳೆದ ಎರಡು ದಶಕಗಳಲ್ಲಿ ರಾಜ್ಯದಲ್ಲಿ ನಿವೇಶನಗಳ ದರ ರಾಕೆಟ್ ವೇಗದಲ್ಲಿ ಏರಿಕೆಯಾಗಲು ಬಿಲ್ಡರ್‌ಗಿಂತಲೂ ಸರಕಾರವೇ ನೇರ ಕಾರಣ. ದೇಶದ ಎಲ್ಲ ಎಲ್ಲ ಪ್ರಜೆಗಳಿಗೆ ಸೂರು ಕಲ್ಪಿಸುವುದು ಸರಕಾರದ ಕರ್ತವ್ಯ. ತನ್ನ ಕರ್ತವ್ಯವನ್ನು ಪಾಲಿಸಲು ವಿಫಲವಾದ ಸರಕಾರಗಳು, ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯ ಗಳಿಕೆಯ ಎಲ್ಲವನ್ನೂ ಸುರಿದು ಮನೆ ಕಟ್ಟಲು ಹೊರಟರೆ ಅಲ್ಲೂ ಆತನ ಸುಲಿಗೆ ಇಳಿದಿರುವುದು ಅಕ್ಷಮ್ಯ.

ಸಬ್‌ಕಾ ವಿಕಾಸ್ ಎಂದು ಕೊಚ್ಚಿಕೊಳ್ಳುವ ಕೇಂದ್ರ ಸರಕಾರ ಸಿಮೆಂಟ್‌ಗೆ ಶೇ 28ರಷ್ಟು, ಉಳಿದ ಬಹುತೇಕ ಗೃಹ ನಿರ್ಮಾಣ ಪರಿಕರಗಳಿಗೆ ಶೇ.18ರಷ್ಟು ಜಿಎಸ್‌ಟಿ ವಿಧಿಸುತ್ತಿದೆ. ತನ್ನ ನಾಗರಿಕರ ಬಗ್ಗೆ ಕಾಳಜಿ ಇರುವ ಯಾವುದೇ ಸರಕಾರ ಮೂಲಸೌಕರ‍್ಯ ಒದಗಿಸುವಲ್ಲಿ ಮೂಲದ್ರವ್ಯವಾಗಿರುವ ಸಿಮೆಂಟ್ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ಕರ ಭಾರ ವಿಽಸಲು ಸಾಧ್ಯವಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಯಾಗಿದ್ದರೂ ಇಂಧನ ಮತ್ತು ಅಡುಗೆ ಅನಿಲ ದರವನ್ನು ಏರಿಸುವ ಸರಕಾರಗಳು ನಾಗರಿಕರ ಬಗ್ಗೆ ಕಾಳಜಿ ಹೊಂದಿವೆ ಎಂದು ಹೇಳಲು ಸಾಧ್ಯವೇ ?. ನಮ್ಮವರ ಬರೆ ಮತ್ತು ಹೊರೆ ಮಧ್ಯೆ ಟ್ರಂಪಾಸ್ತ್ರ ಏನು ಅಲ್ಲ ಎಂದು ನಿಮಗನಿಸಿದರೆ ತಪ್ಪೇನು ಅಲ್ಲ ಬಿಡಿ.