ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಸೂರ್ಯಕುಮಾರ್‌ ಫಿಫ್ಟಿ, ಯುಎಸ್‌ಎ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಶುಭಾರಂಭ!

IND vs USA Match Highlights: ಸೂರ್ಯಕುಮಾರ್‌ ಯಾದವ್‌ ಅರ್ಧಶತಕ ಹಾಗೂ ಮೊಹಮ್ಮದ್‌ ಸಿರಾಜ್‌ ಅವರ ಮಾರಕ ಬೌಲಿಂಗ್‌ ಸಹಾಯದಿಂದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎ ಗುಂಪಿನ ಮೊದಲನೇ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ 29 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಶುಭಾರಂಭ ಮಾಡಿತು.

IND vs USA: ಯುಎಸ್‌ಎ ವಿರುದ್ಧ ಹೋರಾಡಿ ಗೆದ್ದ ಭಾರತ ತಂಡ!

ಯುಎಸ್‌ಎ ವಿರುದ್ಧ ಭಾರತ ತಂಡಕ್ಕೆ 29 ರನ್‌ ಜಯ. -

Profile
Ramesh Kote Feb 7, 2026 11:03 PM

ಮುಂಬೈ: ಸೂರ್ಯಕುಮಾರ್‌ ಯಾದವ್‌ (84 ರನ್‌) ಬ್ಯಾಟಿಂಗ್‌ ಹಾಗೂ ಮೊಹಮ್ಮದ್‌ ಸಿರಾಜ್‌ (29 ಕ್ಕೆ 3) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ (India) ತಂಡ, ಯುಎಸ್‌ಎ (USA) ವಿರುದ್ಧ 29 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ನಾಯಕತ್ವದ ಟೀಮ್‌ ಇಂಡಿಯಾ ಶುಭಾರಂಭ ಕಂಡಿದೆ. 77 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್‌, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 162 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಯುಎಸ್‌ಎ ತಂಡ, ಮೊಹಮ್ಮದ್‌ ಸಿರಾಜ್‌ ಸೇರಿದಂತೆ ಇತರೆ ಬೌಲರ್‌ಗಳಿಗೆ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ನಲುಗಿ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 132 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 29 ರನ್‌ಗಳಿಗೆ ಸೋಲು ಒಪ್ಪಿಕೊಂಡಿತ್ತು. ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಮೊಹಮ್ಮದ್‌ ಸಿರಾಜ್‌ 4 ಓವರ್‌ಗಳಿಗೆ 29 ರನ್‌ ನೀಡಿ 4 ವಿಕೆಟ್‌ ಕಿತ್ತರು, ಅರ್ಷದೀಪ್‌ ಸಿಂಗ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

IND vs USA: 4 ಓವರ್‌ಗೆ 65 ರನ್‌ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಸೌರಭ್‌ ನೇತ್ರವಾಳ್ಕರ್‌!

ಯುಎಸ್‌ಎ ಪರ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಮಿಲಿಂದ್‌ ಕುಮಾರ್‌ 34 ರನ್‌, ಸಂಜಯ್‌ ಕೃಷ್ಣಮೂರ್ತಿ ಮತ್ತು ಶುಭಮ್‌ ರಂಜನೆ ತಲಾ 37 ರನ್‌ಗಳನ್ನು ಗಳಿಸಿದರು. ಈ ಮೂವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.



ಆರಂಭಿಕ ಆಘಾತ ಅನುಭವಿಸಿದ್ದ ಭಾರತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, 200ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಯುಎಸ್‌ಎ ಬೌಲರ್‌ಗಳು ತಮ್ಮ ಶಿಸ್ತುಬದ್ದ ದಾಳಿಯಿಂದ ಟೀಮ್‌ ಇಂಡಿಯಾ ಯೋಜನೆಯನ್ನು ತಳ್ಳಿ ಹಾಕಿದರು. ನ್ಯೂಜಿಲೆಂಡ್‌ ಟಿ20ಐ ಸರಣಿಯಲ್ಲಿ ಅಬ್ಬರಿಸಿದ್ದ ಇಶಾನ್‌ ಕಿಶನ್‌ (20) ಹಾಗೂ ಅಭಿಷೇಕ್‌ ಶರ್ಮಾ (0) ಅವರು ಯುಎಸ್‌ಎ ಎದುರು ನಿರೀಕ್ಷೆಯನ್ನು ಹುಸಿಗೊಳಿಸಿದರು. ಮೂರನೇ ಕ್ರಮಾಂಕದಲ್ಲಿತಿ ತಿಲಕ್‌ ವರ್ಮಾ 16 ಎಸೆತಗಳಲ್ಲಿ 25 ರನ್‌ ಗಳಿಸಿ ಭರವಸೆ ಮೂಡಿಸಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ.



ನಂತರ ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌ ವೈಯಕ್ತಿಕ ಎರಡಂಕಿ ಕಾಣದೆ ಪೆವಿಲಿಯನ್‌ಗೆ ವಾಪಸ್‌ ಆದರು. ಅಕ್ಷರ್‌ ಪಟೇಲ್‌ ಕೂಡ 14 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಭಾರತ ತಂಡ ಒಂದು ಹಂತದಲ್ಲಿ 77 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟೀಮ್‌ ಇಂಡಿಯಾ 120 ರನ್‌ ಗಳಿಸುವುದು ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ, ನಾಯಕ ಸೂರ್ಯಕುಮಾರ್‌ ಯಾದವ್‌ ತಂಡದ ಜವಾಬ್ದಾರಿಯನ್ನು ಅರಿತು ಬ್ಯಾಟ್‌ ಮಾಡಿದರು.



ಸೂರ್ಯಕುಮಾರ್‌ ಯಾದವ್‌ ನಿರ್ಣಾಯಕ ಅರ್ಧಶತಕ

ಭಾರತ ತಂಡ ಪ್ರಮುಖ ಆರು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿದ್ದ ವೇಳೆ ನಾಯಕ ಸೂರ್ಯಕುಮಾರ್‌ ಯಾದವ್‌ ಆಪದ್ಭಾಂದವನಂತೆ ಒಂದು ತುದಿಯಲ್ಲಿ ನಿಂತು ಏಕಾಂಗಿ ಹೋರಾಟ ನಡೆಸಿದರು. ಒತ್ತಡದ ಸನ್ನಿವೇಶದಲ್ಲಿಯೂ ಶಾಂತ ಭಾವನೆಯನ್ನು ತೋರಿದರು. ಅವರು ಕೊನೆಯವರೆಗೂ ಬ್ಯಾಟ್‌ ಮಾಡಿ 49 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 84 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 161 ರನ್‌ ಕಲೆ ಹಾಕಿತು.

T20 World Cup: ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ ಬಲದಿಂದ ಸ್ಲಾಟ್ಲೆಂಡ್‌ ಎದುರು ಗೆದ್ದ ವೆಸ್ಟ್‌ ಇಂಡೀಸ್‌!

ಯುಎಸ್‌ಎ ಪರ ಅತ್ಯುತ್ತಮವಾಗಿ ಬೌಲ್‌ ಮಾಡಿದ ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ 4 ಓವರ್‌ಗಳಿಗೆ 25 ರನ್‌ ನೀಡಿ 4 ವಿಕೆಟ್‌ ಸಾಧನೆ ಮಾಡಿದರು. ಹರ್ಮೀತ್‌ ಸಿಂಗ್‌ ಎರಡು ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 161-9 (ಸೂರ್ಯಕುಮಾರ್‌ ಯಾದವ್‌ 84* ರನ್‌, ತಿಲಕ್‌ ವರ್ಮಾ 25; ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ 25ಕ್ಕೆ 4, ಹರ್ಮೀತ್‌ ಸಿಂಗ್‌ 26ಕ್ಕೆ 2)

ಯುಎಸ್‌ಎ: 20 ಓವರ್‌ಗಳಿಗೆ 132-8 (ಮಿಲಿಂದ್‌ ಕುಮಾರ್‌ 34, ಸಂಜಯ್‌ ಕೃಷ್ಣಮೂರ್ತಿ 37, ಶುಭಮನ್‌ ರಂಜನೆ 37; ಮೊಹಮ್ಮದ್‌ 29ಕ್ಕೆ 4, ಅರ್ಷದೀಪ್‌ ಸಿಂಗ್‌ 18ಕ್ಕೆ 2, ಅಕ್ಷರ್‌ ಪಟೇಲ್‌ 24 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಸೂರ್ಯಕುಮಾರ್‌ ಯಾದವ್‌