Surendra Pai Column: 8450 ಪ್ರಶ್ನೆಕೋಶದ ಒಳಗುಟ್ಟು ಅರಿತವರಾರು ?
ಈಗ ಪ್ರಸುತ್ತ ಶಿಕ್ಷಣ ಇಲಾಖೆಯು ಪರಿಚಯಿಸಲಿರುವ 8450 ಪ್ರಶ್ನೆಕೋಶದ ಹಿಂದಿನ ಉದ್ದೇಶವು ಇದೇ ಇರಬಹುದೇ ಎಂಬ ಶಂಕೆಯೊಂದು ಎಡೆ ಬಹು ಚರ್ಚೆ ಆಗುತ್ತಿದೆ. ಅಂದರೆ ಈಗಾಗಲೇ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಉತ್ತಮ ಪರೀಕ್ಷಾ ಫಲಿತಾಂಶದ ಹೆಸರಿನಲ್ಲಿ ಪಾಸ್ ಅಂಕಗಳನ್ನು 100ಕ್ಕೆ ಆಂತರಿಕ 20 ಅಂಕಗಳೊಂದಿಗೆ 33 ಅಂಕ ಪಡೆದರೆ ಸಾಕು ಎಂಬ ಹೊಸ ನಿಯಮ ಜಾರಿಗೆ ತಂದಿದೆ.
-
ಪ್ರಸ್ತುತ
ಸುರೇಂದ್ರ ಪೈ, ಭಟ್ಕಳ
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 18ರಿಂದ ಪ್ರಾರಂಭವಾಗಲಿದೆ. ಅರ್ಥಾತ್ ಮಕ್ಕಳಿಗೆ ಇನ್ನೂ ಬರೋಬ್ಬರಿ ಎರಡು ತಿಂಗಳು ಕಾಲ ಮಾತ್ರ ಸಮಯಾವಕಾಶವಿದೆ. ಈ ಸಮಯದಲ್ಲಿ ಶಿಕ್ಷಣ ಇಲಾಖೆಯು ಅತ್ಯುತ್ತಮ ಫಲಿತಾಂಶಕ್ಕಾಗಿ ಹೊಸದೊಂದು ಪ್ರಯೋಗ ಮಾಡುವ ಮೂಲಕ ದಾಖಲೆಯ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳ ಭವಿಷ್ಯವನ್ನು ಅವರ ಸೃಜನಶೀಲತೆಯನ್ನು ಪಣಕ್ಕಿಡಲು ಹೊರಟಿದೆ.
ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಗ್ರಾಮಾಂತರ ಉಪ ನಿರ್ದೇಶಕರಾದ ಬೈಲಾಂಜನಪ್ಪ ಈ ಬಾರಿ ಎಸ್ಎಸ್‌ಎಲ್‌ಸಿ ಪರೀಕ್ಷೆಯ ಉತ್ತಮ ಫಲಿತಾಂಶಕ್ಕೆಂದು ರಾಜ್ಯ ಶಿಕ್ಷಣ ಇಲಾಖೆ 8450 ಪ್ರಶ್ನೆಗಳಿರುವ ಪ್ರಶ್ನೆಕೋಶ’ವನ್ನು ಸಿದ್ಧಪಡಿಸಿದೆ. ಈ ಬಾರಿಯ ವಾರ್ಷಿಕ ಪರೀಕ್ಷೆ ಯಲ್ಲಿ ಈ ಪ್ರಶ್ನೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಶ್ನೆಗಳು ಬರುವುದಿಲ್ಲ ಎಂಬುದೇ ಈ ವರ್ಷದ ವಿಶೇಷ ಎಂಬ ಹೇಳಿಕೆ ವರದಿಯಾಗಿದೆ.
ಆದರೆ ಈ 8450 ಪ್ರಶ್ನೆಕೋಶ ಇನ್ನೂ ತನಕ ಪ್ರಕಟಗೊಂಡಿಲ್ಲ. ಆದರೆ ಇದು ಹೌದು ಎಂಬ ಸುದ್ದಿ ಶಿಕ್ಷಣ ಇಲಾಖೆಯಲ್ಲಿದೆ. ಹಾಗಾದರೆ ಈ ಪ್ರಶ್ನೆಕೋಶದ ಒಳಗುಟ್ಟು ಏನು? ನಿಜವಾಗಲೂ ಇದು ಮಕ್ಕಳಿಗೆ ಅನುಕೂಲಕರವೇ ಅಥವಾ ಶಿಕ್ಷಣ ಇಲಾಖೆಯ ಸಾಧನೆಯ ಅಂಕಿಅಂಶಗಳನ್ನು ಎತ್ತರ ಕ್ಕೇರಿಸಲು ಕೈಗೊಂಡಿರುವ ಹುನ್ನಾರವೇ? ಏನಿ ಹೊಸ ಪ್ರಯೋಗದ ಮರ್ಮ ಎಂಬುದನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.
ಇದನ್ನೂ ಓದಿ:Surendra Pai Column: ಸಂಕ್ರಾಂತಿ ನಾಡಿನೆಲ್ಲೆಡೆ ಸುಗ್ಗಿ ಸಂಭ್ರಮ
ನಾವೆ ಯಥಾ ರಾಜ ತಥಾ ಪ್ರಜಾ ಎಂಬ ಮಾತನ್ನು ಕೇಳಿದ್ದೇವೆ. ರಾಜ ಹೇಗಿದ್ದಾನೋ ಹಾಗೆಯೇ ಪ್ರಜೆಗಳೂ ಇರುತ್ತಾರೆ ಎಂದರ್ಥ. ಇದು ನಾಯಕನ ನಡವಳಿಕೆ ಮತ್ತು ಗುಣಗಳು ಪ್ರಜೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿಸುತ್ತದೆ. ರಾಜನು ಉತ್ತಮ ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಂಡರೆ, ಪ್ರಜೆಗಳೂ ಅದೇ ರೀತಿಯಾಗಿ ವರ್ತಿಸುತ್ತಾರೆ, ಇಲ್ಲದಿದ್ದರೆ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ಕೌಟಿಲ್ಯನಂತಹ ಚಿಂತಕರು ಹೇಳುತ್ತಾರೆ.
ಪ್ರಸುತ್ತ ರಾಜ್ಯ ಶಿಕ್ಷಣ ಇಲಾಖೆ ಮುನ್ನಡೆಸುವ ಸಚಿವರ ನಡೆ ಕಂಡಾಗ ಈ ಮಾತು ನೆನಪಾಗುತ್ತದೆ. ನೇರವಾಗಿ ಹೇಳಬೇಕೆಂದರೆ ಇತ್ತೀಚಿನ ಶೈಕ್ಷಣಿಕ ವ್ಯವಸ್ಥೆಯ ಕುಸಿಯುತ್ತಿರುವ ಗುಣಮಟ್ಟದ ನಡುವೆಯೇ ಹೊಸ ಪ್ರಯೋಗದ ಹೆಸರಿನಲ್ಲಿ ಜಾರಿ ಮಾಡ ಹೊರಟ 8450 ಪ್ರಶ್ನೆಕೋಶದ ಹೊಸ ಪ್ರಯೋಗವು ಒಂದು ನಿದರ್ಶನ.
ಈಗಾಗಲೇ ರಾಜ್ಯದ ಶಿಕ್ಷಣ ಸಚಿವರಿಗೆ ಸ್ಪಷ್ಟವಾಗಿ ಕನ್ನಡ ಓದಲು ಬಾರದಿರುವುದು ನಮಗೆ ತಿಳಿದಿರದ ಸಂಗತಿಯೆನಲ್ಲ. ಈ ವಿಷಯದ ಸಂಬಂಧ ಹಲವು ಬಾರಿ ಮುಜುಗರಕ್ಕೆ ಒಳಗಾದರೂ ಸಹ ಎಚ್ಚೆತ್ತುಕೊಳ್ಳದೇ ಅದೇ ಅವಿವೇಕತನವನ್ನು ಪ್ರದರ್ಶನ ಮಾಡಿಕೊಂಡು ಬಂದಿರುವುದು ಹೊಸ ವಿಷಯವೇನಲ್ಲ ಬಿಡಿ.
ಅದು ಅವರ ವೈಯಕ್ತಿಕ ಅಂದುಕೊಂಡು ಸುಮ್ಮನಾದರೂ ಸಹ ತಮ್ಮ ಅವಿವೇಕದ ತಪ್ಪು ನಿರ್ಧಾರದಿಂದಾಗಿ ಮಕ್ಕಳ ಸೃಜನಶೀಲತೆಯನ್ನು ಹತ್ತಿಕ್ಕುವ ಅಧಿಕಾರವನ್ನು ಇವರಿಗ್ಯಾರು ಕೊಟ್ಟರು ಎಂಬುದೇ ಇಲ್ಲಿಯ ಪ್ರಶ್ನೆ? ಶಿಕ್ಷಣದ ಮೂಲ ಉದ್ದೇಶ ಅರಿತ ಯಾವೊಬ್ಬ ಶಿಕ್ಷಣ ಸಚಿವರು, ಆಯುಕ್ತರು, ಶಿಕ್ಷಣ ತಜ್ಞರು ಸಹ ನೋಡಿ ಮಕ್ಕಳೇ ಈ ಬಾರಿ ಪರೀಕ್ಷೆಗೆ ಇಷ್ಟೇ ಪ್ರಶ್ನೆ ಬರುತ್ತದೆ. ಇಷ್ಟನ್ನು ಮಾತ್ರ ಓದಿಕೊಂಡರೆ ಸಾಕು.
ಅತ್ಯುತ್ತಮ ಅಂಕಗಳಿಸುವವರು ನೂರಕ್ಕೆ ನೂರು ಅಂಕಗಳಿಸಬಹುದು. ಇನ್ನೂ ಅನುತ್ತೀರ್ಣ ರಾಗುವವರು ಸಹ ಸುಲಭದಲ್ಲಿ ಪಾಸ್ ಆಗಬಹುದು. ಇದನ್ನು ಬಿಟ್ಟು ಬೇರೇನೂ ಓದಬೇಡಿ ಎಂದು ಹೇಳುತ್ತಾರಾ? ಇಂದೆಂಥಾ ಶಿಕ್ಷಣ ವ್ಯವಸ್ಥೆ. ಇದುವೇ ಶಿಕ್ಷಣದ ಮೂಲ ಉದ್ದೇಶವಾ? ಹಾಗಾದರೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆಲೋಚನಾತ್ಮಕ ಚಿಂತನೆ ಮೂಡಿಸುವುದು, ಬೆಳೆಸುವುದು ಯಾರ ಹೊಣೆ? ಅದು ಶಿಕ್ಷಣದ ಗುರಿ ಯಾಕಾಗಿಲ್ಲ? ಇಷ್ಟೇ, ಇಂತಹುದೇ ಪರೀಕ್ಷೆಗೆ ಬರುತ್ತದೆ ಎಂದಾದರೆ 1-10ನೇ ತರಗತಿಯ ತನಕ ಕಲಿಯುವ ಅಗತ್ಯ ಏನಿದೆ? ಇನ್ನೂ ಶಿಕ್ಷಕರು ವರ್ಷವಿಡೀ ಪಾಠ ಮಾಡುವ ಅಗತ್ಯವೇನಿದೆ ಅಲ್ಲವೇ? ಮಕ್ಕಳ ಗುಣಮಟ್ಟದ ಫಲಿತಾಂಶದ ಬಗ್ಗೆ ಕಾಳಜಿಯೋ ಅಥವಾ ಇಲಾಖೆಯ ದಾಖಲೆಯ ಫಲಿತಾಂಶದ ಏರಿಕೆ ಬಗ್ಗೆ ಅಷ್ಟೊಂದು ಕಾಳಜಿ, ಹುನ್ನಾರ ಮೊದಲೇ ಇದಿದ್ದರೆ, ಶೈಕ್ಷಣಿಕ ವರ್ಷದ ಪ್ರಾರಂಭದ 8450 ಪ್ರಶ್ನೆ ನೀಡಿದ್ದರೆ ಸಾಕಿತ್ತು.
ಶಿಕ್ಷಕರು ತಲೆಬಿಸಿ ಕಡಿಮೆಯಾಗುತ್ತಿತ್ತು. ಹೇಗೂ ದಿನಪೂರ್ತಿ ಇಲಾಖೆಗೆ ಬೇಡವಾದ ಮಾಹಿತಿ, ದಾಖಲೆ ಒದಗಿಸುವ ಕೆಲಸದ ಮುಳುಗಿರುವ ಅವರಿಗೆ ಕೊನೆಯ ಪಕ್ಷ ವಾರ್ಷಿಕ ಪರೀಕ್ಷೆಗಾಗಿ ಮಕ್ಕಳನ್ನು ತಯಾರು ಮಾಡುವ ಟೆನ್ಶನ್ ಆದರೂ ತಪ್ಪುತ್ತಿತ್ತು.
ದಿನವೂ 8450ರಲ್ಲಿನ ಒಂದಿಷ್ಟು ಪ್ರಶ್ನೆಗಳನ್ನೇ ಉರು ಹೊಡೆಯಿಸುತ್ತಾ, ಅದನ್ನೇ ನಾಲ್ಕಾರು ಬಾರಿ ಬರೆಯಿಸುತ್ತಾ ಗಿಳಿಪಾಠವನ್ನು ಮಾಡಿಸುತ್ತಿದ್ದರು. ಅದನ್ನು ಬಿಟ್ಟು ಪರೀಕ್ಷೆಗೆ ಇನ್ನೇನು ಎರಡು ತಿಂಗಳು ಇರುವಾಗ ಹೀಗೆ ಹೊಸ ಪ್ರಯೋಗವೊಂದನ್ನು ಮಕ್ಕಳ ಮೇಲೆ ಹೇರಿದರೆ ಅವರು ಎರಡು ದೋಣಿಯ ಮೇಲೆ ಕಾಲಿಟ್ಟ ಹಾಗೇ ಆಗುವುದಿಲ್ಲವೇ? ಮಕ್ಕಳ ಮಾನಸಿಕತೆ ಬಗ್ಗೆ ಸ್ವಲ್ಪವಾದರೂ ಅರಿವಿದ್ದರೆ ಇಂತಹ ನೀತಿಯನ್ನು ಯಾವೊಬ್ಬ ಜವಬ್ದಾರಿಯುತ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಯ ಅಧಿಕಾರಿಗಳು ಜಾರಿಗೊಳಿಸುತ್ತಿದ್ದರು ಎಂಬುದನ್ನು ಒಮ್ಮೆ ಚಿಂತಿಸಬೇಕಲ್ಲವೇ.
ವರ್ಷವಿಡೀ ಪರಿಶ್ರಮಪಟ್ಟು, ಪ್ರಾಮಾಣಿಕವಾಗಿ ಓದಿ ಭವಿಷ್ಯದ ಕನಸನ್ನು, ತಮ್ಮ ಗುರಿಯನ್ನು ಸಾಕಾರಗೊಳಿಸಬೇಕೆಂಬ ಹಂಬಲ ಹೊಂದಿದ ವಿದ್ಯಾರ್ಥಿಗಳ ಜೊತೆಗೆ ಈ ರೀತಿ ಕಪಟ ನಾಟಕ ಮಾಡುವುದು ಎಷ್ಟರಮಟ್ಟಿಗೆ ಸರಿ? ಪರೀಕ್ಷೆಗೆ 60 ದಿನ ಗಳಿರುವಾಗ ಈ ರೀತಿಯ ಹೊಸ ಪ್ರಯೋಗ ಮಾಡಲು ಹೊರಟ ಬಗ್ಗೆ, ಇಲಾಖಾ ಅಧಿಕಾರಿಗಳ ಹೇಳಿಕೆಗಳು ಮಕ್ಕಳ ಸೃಜನಶೀಲತೆಗೆ ಪೆಟ್ಟು ನೀಡಲಿದೆ.
ಇದರಿಂದ ವಿದ್ಯಾರ್ಥಿಗಳ ವಿಷಯ ಜ್ಞಾನಕ್ಕಿಂತ ನೆನಪಿನ ಶಕ್ತಿಗೆ ಆದ್ಯತೆ ನೀಡಿದಂತಾಗುತ್ತದೆ. ಪ್ರಶ್ನೆಕೋಶದಲ್ಲಿನ ಪ್ರಶ್ನೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುವುದರಿಂದ ಕಂಠಪಾಠಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಭವಿಷ್ಯದ ಸವಾಲು ಎದುರಿಸುವ ಮಕ್ಕಳ ಆಲೋಚನಾತ್ಮಕ, ವಿಶ್ಲೇಷಣಾತ್ಮಕ ಅಂಶವು ಕಡೆಗಣಿಸಲ್ಪಡುತ್ತದೆ.
ಇಂತಹ ಹೊಸ ಪ್ರಯೋಗದಿಂದ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶವೇನೋ ಹೆಚ್ಚಾಗ ಬಹುದು. ಆದರೆ, ಮಕ್ಕಳ ಪ್ರತಿಭೆಗೆ ಧಕ್ಕೆಯಾಗಲಿದೆ. ಶಿಕ್ಷಣದ ಉದ್ದೇಶ ಕೇವಲ ಅಂಕಗಳಿಗೆ ಮಾತ್ರ ಸೀಮಿತವನ್ನಾಗಿಸುವ 8450 ಪ್ರಶ್ನೆಕೋಶದೊಳಗಿನ ಪ್ರಶ್ನೆ ಮಾತ್ರ ಪರೀಕ್ಷೆಯಲ್ಲಿ ಕೇಳುವ ಅವೈಜ್ಞಾ ನಿಕ ಆಲೋಚನೆ ಸುತಾರಾಂ ಒಪ್ಪಿತವಲ್ಲ.
ನಮ್ಮಲ್ಲಿ ಕೆಲವು ಶಿಕ್ಷಕರು 1-9 ತರಗತಿಯ ತನಕ ತಾವು ಒಳ್ಳೆಯ ಶಿಕ್ಷಕರು ಎಂದು ಪಾಲಕರು, ಆಡಳಿತ ಮಂಡಳಿ ಹಾಗೂ ಇಲಾಖೆಯ ಮುಂದೆ ತೋರಿಸಿಕೊಳ್ಳಲು ಪರೀಕ್ಷೆಗೂ ಮುನ್ನ ಪಾಠವಾರು ಪ್ರಮುಖ ಪ್ರಶ್ನೆಗಳು ಎಂದು ಪಠ್ಯಪುಸ್ತಕದಲ್ಲಿ ಮಾರ್ಕ್ ಮಾಡಿಸುವ ಕೆಟ್ಟ ಚಾಳಿ ಇದೆ. ಬಹುಶಃ ಇದನ್ನು ಗಮನಿಸಿದ ಪಾಲಕರು ಇದು ತಪ್ಪು ಎಂದು ಪ್ರತಿಭಟಿಸಿದ ಹಲವು ನಿದರ್ಶನಗಳು ನಮ್ಮಲ್ಲಿವೆ.
ಈಗ ಪ್ರಸುತ್ತ ಶಿಕ್ಷಣ ಇಲಾಖೆಯು ಪರಿಚಯಿಸಲಿರುವ 8450 ಪ್ರಶ್ನೆಕೋಶದ ಹಿಂದಿನ ಉದ್ದೇಶವು ಇದೇ ಇರಬಹುದೇ ಎಂಬ ಶಂಕೆಯೊಂದು ಎಡೆ ಬಹು ಚರ್ಚೆ ಆಗುತ್ತಿದೆ. ಅಂದರೆ ಈಗಾಗಲೇ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಉತ್ತಮ ಪರೀಕ್ಷಾ ಫಲಿತಾಂಶದ ಹೆಸರಿನಲ್ಲಿ ಪಾಸ್ ಅಂಕ ಗಳನ್ನು 100ಕ್ಕೆ ಆಂತರಿಕ 20 ಅಂಕಗಳೊಂದಿಗೆ 33 ಅಂಕ ಪಡೆದರೆ ಸಾಕು ಎಂಬ ಹೊಸ ನಿಯಮ ಜಾರಿಗೆ ತಂದಿದೆ.
ಇದನ್ನು ಸಮರ್ಥಿಸಿಕೊಳ್ಳಲು ಸಿಬಿಎಸ್‌ಸಿ ಕೇಂದ್ರೀಯ ಶಿಕ್ಷಣ ಇಲಾಖೆಯ ಮಾದರಿ ಅಳವಡಿಸಿ ದ್ದೇವೆ ಎಂಬ ಗೊಡ್ಡು ತರ್ಕ ಬೇರೆ. ಇಷ್ಟಾದರೂ ಸಹ ತಮ್ಮ ಆಡಳಿತಾತ್ಮಕ ವೈಫಲ್ಯದಿಂದಾಗಿ ಈ ಬಾರಿಯು ಗರಿಷ್ಠ ಸಂಖ್ಯೆಯಲ್ಲಿ ಮಕ್ಕಳು ಅನುತ್ತೀರ್ಣ ಆಗಬಹುದು ಎಂಬ ಒಂದು ಚಿಕ್ಕ ಅನುಮಾನ ಶಿಕ್ಷಣ ಸಚಿವರು, ಅಽಕಾರಿಗಳಲ್ಲಿ ಮನೆಮಾಡಿದಂತಿದೆ. ಒಂದು ವೇಳೆ ಈ ಅನುಮಾನ ನಿಜವಾದರೆ ಖಂಡಿತವಾಗಿಯೂ ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದು ನಿಶ್ಚಿತ!
ಹಾಗಾಗಿ ಇವೆಲ್ಲವನ್ನೂ ತಪ್ಪಿಸಿಕೊಳ್ಳಲು 8450 ಪ್ರಶ್ನೆಕೋಶದ ಮಾಸ್ಟರ್ ಪ್ಲಾನ್ ಸಿದ್ಧವಾದಂತೆ ಕಾಣುತ್ತಿದೆ. ಹೇಗೆ ಶಿಕ್ಷಕರು ಪರೀಕ್ಷೆಯ ಮೊದಲೇ ಇಂಪಾರ್ಟೆಂಟ್ ಕ್ವೆಶ್ಚನ್ ಮಾರ್ಕ್ ಮಾಡಿಸು ತ್ತಿದ್ದರೋ, ಅದೇ ರೀತಿ ಎಸ್ಎಸ್‌ಎಲ್‌ಸಿ ಫಲಿತಾಂಶ ಪಟ್ಟಿಯಲ್ಲಿ ತೀರಾ ಕೆಳಗಿರುವ ಜಿಲ್ಲೆಗಳು ಹಾಗೂ ತಾಲೂಕುಗಳು 8450 ಪ್ರಶ್ನೆಗಳ 20-30 ಅಂಕದ ವಾರ್ಷಿಕ ಪರೀಕ್ಷೆಯ ಪ್ರಶ್ನೆಗಳನ್ನೇ ಮಾರ್ಕ್ ಮಾಡಿ ನೀಡಿ ಮಕ್ಕಳಿಗೆ ಅವುಗಳನ್ನಷ್ಟೇ ಊರು ಹೊಡೆಯುತ್ತಾ, ಬರೆಯಿಸುವ ಹುನ್ನಾರ ಇರಬಹುದೇ ಎಂಬ ದೊಡ್ಡ ಸಂದೇಹ ಬಹುತೇಕರಲ್ಲಿ ಮನೆಮಾಡಿದೆ.
ಇದುವೇ ಹೊಸ ಪ್ರಯೋಗದ ಒಳಗುಟ್ಟು ಎಂಬ ಸಂಶಯ ಇಲಾಖೆಯ ಒಳಗೂ, ಹೊರಗೂ ಕೇಳಿ ಬರುತ್ತಿದೆ. ಈ ಗುಮಾನಿಯೇ ನಿಜವಾದರೆ, ಇಂತಹದೊಂದು ಮಾಸ್ಟರ್ ಪ್ಲಾನ್‌ನಿಂದ ಇಲಾಖೆ ಎಲ್ಲೂ ಸಿಲುಕಿ ಹಾಕಿಕೊಳ್ಳಲು ಸಾಧ್ಯವಿಲ್ಲ. ನಾಳೆ ಫಲಿತಾಂಶ ಘೋಷಣೆ ಆದ ಬಳಿಕ ಪತ್ರಕರ್ತರ ಸಚಿವರೇ, ಈ ಬಾರಿ ದಾಖಲೆಯ ಫಲಿತಾಂಶ ಬರಲು ಕಾರಣವೇನು? ಎಂಬ ಪ್ರಶ್ನೆಗೆ ನೋಡಿ ಈ ಬಾರಿ ಕೊನೆಯ ಕ್ಷಣದಲ್ಲಿ ಸಿದ್ಧಪಡಿಸಲಾದ 8450 ಪ್ರಶ್ನೆಗಳೇ ಯಶಸ್ಸಿನ ಗುಟ್ಟು ಎಂದು ಹೇಳದೆ ಇರುತ್ತಾರೆಯೇ? ಹಾಗೇನಾದರೂ ಆದರೆ ಅದು ಬಹು ದೊಡ್ಡ ಇಲಾಖಾ ಅಕ್ರಮ ಎಂದೇ ಪರಿಗಣಿಸ ಬೇಕಾಗುತ್ತದೆ.
ಇಲಾಖೆಯ ಅಧಿಕಾರಿಗಳೇ ತಮ್ಮ ತಾಲೂಕು, ಜಿಲ್ಲೆಯ ಫಲಿತಾಂಶ ಹೆಚ್ಚಳಕ್ಕಾಗಿ ಲಾಬಿ ನಡೆಸಿ, 20-30 ಪಾಸ್ ಪ್ರಶ್ನೆಗಳನ್ನು ತಾವೇ ಅನಧಿಕೃತವಾಗಿ ಲೀಕ್ ಮಾಡಿಲ್ಲ ಎಂಬುದಕ್ಕೆ ಏನಿದೆ ಆಧಾರ? ಇಂತಹದೊಂದು ಆಲೋಚನೆ ಬರಲು ಕಾರಣ ಇತ್ತೀಚಿನ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಲೀಕ್ ಅಕ್ರಮದ ವಾಸನೆ. ವಾರ್ಷಿಕ ಪರೀಕ್ಷೆ ಬಿಡಿ, ಈಗಾಗಲೇ ನಡೆದ ಮೊದಲ ಪೂರ್ವಸಿದ್ಧತಾ ಪರೀಕ್ಷೆಯ ಹಿಂದಿ, ಸಮಾಜ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯದ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಪ್ರಶ್ನೆ ಪತ್ರಿಕೆಗಳು ಶಿಕ್ಷಕರ ಸಹಾಯದಿಂದಲೇ ಲೀಕ್ ಆಗಿದೆ ಎಂದು ಪೊಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ.
ಇದುವೇ ನಾಳೆ ಆಗದು ಎಂಬ ಗ್ಯಾರಂಟಿ ಏನು? ಪರೀಕ್ಷಾ ಸಮಯ ಬಂತೂ ಮಕ್ಕಳೇ ಮೊಬೈಲ್, ಸಾಮಾಜಿಕ ಜಾಲತಾಣದಿಂದ ದೂರವಿರಿ ಎಂದು ಪದೇಪದೇ ಹೇಳುವ ಶಿಕ್ಷಕರು, ಪಾಲಕರಿಗೆ ಪರೀಕ್ಷೆಯ ಮೊದಲೇ 30 ರು., 50 ರು.ಗಳಿಗೆ ಪ್ರಶ್ನೆಪತ್ರಿಕೆ ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ʼನಲ್ಲಿ ದೊರಕುವಂತಾಗಿದೆ. ಈಗ ಮಕ್ಕಳು ಓದುವುದಕ್ಕಿಂತಲೂ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆ ಬಂತಾ ಎಂದು ನೋಡುತ್ತಾ, ಕಾಯುತ್ತಾ ಕೂರುವುದು ಸಾಮಾನ್ಯವಾಗಿದೆ.
ಇದನ್ನು ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ ವಿಶ್ವವಾಣಿಯ ಫನ್‌ತರಂಗ್ದಲ್ಲಿ ರೀ ಆಗಾಗ ಚೆಕ್ ಮಾಡ್ತಾ ಇರೀ, ಮಗ ಓದ್ತಿದಾನಾ ಅಥವಾ ಇನ್ಸ್ಟಾಗ್ರಾಮ್ ನೋಡ್ತಿದಾನಾ ಅಂತಾ...! ಎಂಬ ವಿಬಂಡನಾತ್ಮಕ ಕಟು ಸತ್ಯವನ್ನು ವ್ಯಂಗ್ಯ ಚಿತ್ರದ ಮೂಲಕ ಚಿತ್ರಿಸಿದ್ದರು.
ಇಂದು 8450 ಪ್ರಶ್ನೆಕೋಶ ಇರುವ ಕಾರಣ ವಾರ್ಷಿಕ ಪರೀಕ್ಷೆಗೆ ಹೊರಡುವ ಮುನ್ನ ಓದುವ ಬದಲು ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆ ಬಂತಾ ಎಂದು ನೋಡಬೇಕಿಲ್ಲ ಎಂದೆನಿಸುತ್ತದೆ. ಎಲ್ಲವೂ ಮೊದಲೇ ಗಿಳಿಪಾಠ ಮಾಡಿ ಆಗಿರುತ್ತದಲ್ಲ.!
ಇಂದಿನ ಪರೀಕ್ಷಾ ಪದ್ಧತಿಯ ದುರವಸ್ಥೆಯ ನಡುವೆ ಕೋವಿಡ್ ಸಮಯದಲ್ಲಿ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ ಅವರು ನೆನಪಾಗುತ್ತಾರೆ. ಅಂದು ಅವರು ತೆಗೆದುಕೊಂಡ ನಿರ್ಧಾರ ಸರ್ವತ್ರ ಶ್ಲಾಘನೀಯ. ಆದರೆ ಇಂದಿನ ಶಿಕ್ಷಣ ಸಚಿವರ ನಿರ್ಧಾರ ಸರ್ವತ್ರ ತಿರಸ್ಕರಣೀಯ ಎಂಬುದು ಬಹು ಜನರ ಇಂಗಿತ. ಇದರ ಬದಲಾಗಿ ಶಿಕ್ಷಕರ ಮೇಲೆ ಹೇರಲಾಗಿರುವ ಅನಗತ್ಯ ಇಲಾಖಾ ಕೆಲಸದ ಭಾರ ಇಳಿಸಿ, ತರಗತಿ ಪಾಠದ ಕಡೆ ಮುಖ ಮಾಡುವಂತೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಇಂದು ಬಿಆರ್ ಸಿ ಕೇಂದ್ರಗಳು ‘ಕಸ್ಟಮರ್ ಕೇರ್ ಸೆಂಟರ್‌ಗಳಾಗಿವೆ.
ಸಿಆರ್ʼಪಿಗಳು ಶಿಕ್ಷಕರಿಗೆ ಸಂಪನ್ಮೂಲ ಒದಗಿಸುವ ಬದಲಾಗಿ ನಿಮ್ಮ ಶಾಲೆಯ ಯುಡೈಸ್ ಪ್ಲಸ್ ಅಪ್ಡೇಟ್ ಆಗಿದೆಯಾ? ಆಧಾರ್ ಅಪ್ಡೇಟ್ ಆಯ್ತಾ? ಮೊಟ್ಟೆಯ ಲೆಕ್ಕ? ಆ ಮೀಟಿಂಗೂ, ಈ ಮೀಟಿಂಗೂ ಅಂಥ ಮಾಹಿತಿ ಕಲೆ ಹಾಕುವುದರ ನಿರತರಾಗಿದ್ದಾರೆ.
ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತವನ್ನು ಗಿಳಿಪಾಠಕ್ಕೆ, ಸೀಮಿತ ವ್ಯಾಪ್ತಿಗೆ ಒಳಪಡಿಸುವ ಯೋಚನೆ ಮಕ್ಕಳ ಭವಿಷ್ಯದ ದೃಷ್ಟಿ ಯಿಂದ ಹಾನಿಕರ. ಇದರ ಬಗ್ಗೆ ಬಹುತೇಕರು ಜಾಗೃತರಾಗಿಲ್ಲ. ತಮ್ಮ ಮಕ್ಕಳು ಶೇಕಡಾ 95 ಅಂಕ ಪಡೆದರು ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಆದರೆ ಪರೋಕ್ಷವಾಗಿ ಅವರನ್ನು ಬಾವಿಯೊಳಗಿನ ಕಪ್ಪೆಯನ್ನಾಗಿಸುತ್ತಿದ್ದೇವೆ ಎಂಬ ಪರಿವೆ ಬಹುತೇಕರಲ್ಲಿಲ್ಲ.
ಇದು ಚುನಾವಣೆಯ ಕಣವಲ್ಲ, ಮತದಾತನನ್ನು ಓಲೈಸಲು ನೂರೋ, ಇನ್ನೂರೋ ನೀಡಿ ಮತ ಗಿಟ್ಟಿಸಿಕೊಳ್ಳಲು, ಇದು ಮಕ್ಕಳ ಭವಿಷ್ಯ, ದೇಶದ ಪ್ರಗತಿಯ ವಿಷಯ. ಅಂಕಗಳು ಭವಿಷ್ಯ ರೂಪಿಸಲಾರವು ಎಂಬ ಅರಿವು ಮೂಡಬೇಕಲ್ಲವೇ. ಅಂತಹ ಶಿಕ್ಷಣ ವ್ಯವಸ್ಥೆ ನಮ್ಮದಾಗುವುದು ಯಾವಾಗ?