Dr N Someshwara Column: ರಾಮನು ಕಾಡಿಗೆ ಹೋದ ಮೇಲೆ ದಶರಥನೇಕೆ ಸತ್ತ ?
ನಿನ್ನ ಜೊತೆಯಲ್ಲಿ ನಾನೂ ಕಾಡಿಗೆ ಬಂದೆ ಎನ್ನುತ್ತಾ ಹಾಸಿಗೆಯಿಂದ ಮೇಲಕ್ಕೆದ್ದ ದಶರಥ. ಸಾವಿರ ಸಿಡಿಲುಗಳು ಒಮ್ಮೆಲೆ ಸಿಡಿದಂತೆ ಆಯಿತು. ತಕ್ಷಣವೇ ತನ್ನ ಹೃದಯವನ್ನು ಹಿಡಿದು ಕೊಂಡು ರಾಮಾ.... ಎಂದು ಕಿರುಚುತ್ತಾ ದಶರಥನು ಹಾಸಿಗೆಯ ಮೇಲೆ ಕುಸಿದು ಬಿದ್ದ. ಅಯ್ಯೋ... ಸ್ವಾಮಿ! ಏನಾಯಿತು ನಿಮಗೆ ಎಂದು ಕೌಸಲ್ಯೆಯು ದಶರಥನ ಬಳಿ ಬರುವಷ್ಟರಲ್ಲಿ, ದಶರಥನ ಜೀವವು ದೇಹವನ್ನು ಬಿಟ್ಟು ಹೊರಟು ಹೋಗಿತ್ತು.


ಹಿಂದಿರುಗಿ ನೋಡಿದಾಗ
naasomeswara@gmail.com
ಮಧ್ಯರಾತ್ರಿ ಮೂರ್ಛಿತನಾಗಿದ್ದ ದಶರಥ ಎದ್ದು ಕುಳಿತ. ಎಲ್ಲಿ... ನನ್ನ ರಾಮನೆಲ್ಲಿ. ಈಗಲೇ ಅವನನ್ನು ಕರೆ ತನ್ನಿ ಎಂದು ಏರುಧ್ವನಿಯಲ್ಲಿ ಕೂಗಿದ. ದಶರಥನ ಧ್ವನಿಯನ್ನು ಕೇಳಿ, ನಿದ್ರೆ ಬಾರದೆ ಹೊರಳುತ್ತಿದ್ದ ಕೌಸಲ್ಯೆ ತಕ್ಷಣ ಎದ್ದು ಕುಳಿತಳು.
ಎಲ್ಲಿ ಸ್ವಾಮಿ ರಾಮ?... ಅವನಾಗಲೇ ಸೀತೆಯೊಡನೆ ಲಕ್ಷ್ಮಣ ಸಮೇತನಾಗಿ ಕಾಡಿಗೆ ಹೊರ ಟಾಯಿತಲ್ಲ! ಅವನು ಪಿತೃವಾಕ್ಯ ಪರಿಪಾಲಕನಲ್ಲವೆ! ಅವನು ಎಂದಾದರೂ ನಿಮ್ಮ ಮಾತನ್ನು ಮೀರಿದ್ದುಂಟೆ? ಅವರೆಲ್ಲರೂ ನಾರು ಮಡಿಯನ್ನುಟ್ಟು, ಕೇವಲ ಆಯುಧಧಾರಿಗಳಾಗಿ ಕಾಡಿಗೆ ಹೋಗಿ ಆಯಿತಲ್ಲ ಮಹಾಪ್ರಭು.. ಎಂದು ಕೌಸಲ್ಯೆ ರೋಧಿಸಲಾರಂಭಿಸಿದಳು. ನೀವು ಕೊಟ್ಟ ವರಗಳಲ್ಲಿ ಒಂದು ವರವು ಪೂರ್ಣವಾಯಿತು. ಇನ್ನೊಂದು ಉಳಿದಿದೆ.
ಭರತನನ್ನು ಕರೆಯಿಸಿ. ಅವನಿಗೆ ಪಟ್ಟಾಭಿಷೇಕವನ್ನು ಮಾಡಿ. ಆಗ ನಿಮಗೆ ಸಂಪೂರ್ಣ ತೃಪ್ತಿ ದೊರೆಯುತ್ತದೆ... ನಾನೂ ಸಹ ನನ್ನ ಮಗನನ್ನು ಹಿಂಬಾಲಿಸಿ ಕಾಡಿಗೆ ಹೊರಟು ಹೋಗುತ್ತೇನೆ.. ಎಂದು ರೋಷದಿಂದ ನುಡಿದಳು ಕೌಸಲ್ಯೆ. ಚುಚ್ಚಿ ಮಾತನಾಡಬೇಡ ಕೌಸಲ್ಯೆ!.... ಉರಿಯುತ್ತಿರುವ ನನ್ನ ಹೃದಯ ಅಗ್ನಿಕುಂಡಕ್ಕೆ ತುಪ್ಪವನ್ನು ಸುರಿಯಬೇಡ. ನಾನು ತಪ್ಪು ಮಾಡಿದೆ. ಅಯ್ಯೋ! ನಾನು ತಪ್ಪು ಮಾಡಿದೆ. ಸಿಂಹಾಸನವನ್ನು ಏರಬೇಕಾದ ನನ್ನ ಮಗ ಕಾಡಿನಲ್ಲಿ ಅಲೆಯುವಂತಾ ಯಿತೆ? ಅಯ್ಯೋ! ನನ್ನ ರಾಮ ಹೊರಟುಹೋದನೆ? ನನ್ನ ಮುದ್ದಿನ ಕಂದ ನನ್ನನ್ನು ಬಿಟ್ಟು ಹೋದನೆ?! ರಘುವಂಶ ಕುಲತಿಲಕ ರಾಜ್ಯವನ್ನು ಬಿಟ್ಟು ಹೋದನೆ? ಅಯ್ಯೋ! ನನ್ನ ಪಿತೃಗಳಿಗೆ ನಾನೇನೆಂದು ಉತ್ತರವನ್ನು ಕೊಡಲಿ? ಅಯ್ಯೋ! ನನಗೆ ಧಿಕ್ಕಾರವಿರಲಿ. ರಾಮ!... ಇದೋ ನಾನೂ ಬಂದೆ. ನಿನ್ನ ಜೊತೆಯಲ್ಲಿ ನಾನೂ ಕಾಡಿಗೆ ಬಂದೆ ಎನ್ನುತ್ತಾ ಹಾಸಿಗೆಯಿಂದ ಮೇಲಕ್ಕೆದ್ದ ದಶರಥ. ಸಾವಿರ ಸಿಡಿಲುಗಳು ಒಮ್ಮೆಲೆ ಸಿಡಿದಂತೆ ಆಯಿತು. ತಕ್ಷಣವೇ ತನ್ನ ಹೃದಯವನ್ನು ಹಿಡಿದು ಕೊಂಡು ರಾಮಾ.... ಎಂದು ಕಿರುಚುತ್ತಾ ದಶರಥನು ಹಾಸಿಗೆಯ ಮೇಲೆ ಕುಸಿದು ಬಿದ್ದ. ಅಯ್ಯೋ... ಸ್ವಾಮಿ! ಏನಾಯಿತು ನಿಮಗೆ ಎಂದು ಕೌಸಲ್ಯೆಯು ದಶರಥನ ಬಳಿ ಬರುವಷ್ಟರಲ್ಲಿ, ದಶರಥನ ಜೀವವು ದೇಹವನ್ನು ಬಿಟ್ಟು ಹೊರಟು ಹೋಗಿತ್ತು.
ಇದು ಜಗತ್ತಿನ ಸಾಹಿತ್ಯದಲ್ಲಿ ಭಗ್ನಹೃದಯ ಲಕ್ಷಣಾವಳಿಯ (ಬ್ರೋಕನ್ ಹಾರ್ಟ್ ಸಿಂಡ್ರೋಮ್/ ತಕೋತ್ಸುಬೋ ಲಕ್ಷಣಾವಳಿ) ಮೊತ್ತಮೊದಲ ಉದಾಹರಣೆಯಾಗಿದೆ. ಹೆಣ್ಣು ಕ್ರೌಂಚಪಕ್ಷಿ: ತಮಸಾ ನದಿಯ ತೀರದ ಬೆಳಗಿನ ಜಾವ. ವಾಲ್ಮೀಕಿ ಮಹರ್ಷಿಗಳು ತಮ್ಮ ಶಿಷ್ಯರೊಡಗೂಡಿ ಪ್ರಾತರ್ವಿಧಿ ಗಳಿಗೆ ಹೊರಟಿದ್ದರು.
ಇದನ್ನೂ ಓದಿ: Dr N Someshwara Column: ವೈದ್ಯವಿಜ್ಞಾನದ ಮಹಾನ್ ಉಪಕರಣ: ಇಂಜಕ್ಷನ್ ಸಿರಿಂಜ್
ಆಗ ಬೇಡನೊಬ್ಬನು ಮೈಥುನದಲ್ಲಿ ನಿರತವಾಗಿದ್ದ ಕ್ರೌಂಚ ಮಿಥುನಗಳಲ್ಲಿ ಗಂಡು ಪಕ್ಷಿಗೆ ಬಾಣವನ್ನು ಬಿಟ್ಟ. ಬಾಣ ತಾಗಿದ ಗಂಡು ಪಕ್ಷಿಯು ಸತ್ತು ಮರದಿಂದ ಕೆಳಗಿ ಬಿತ್ತು. ಕೂಡಲೇ ಹೆಣ್ಣು ಪಕ್ಷಿಯು ಗಂಡುಪಕ್ಷಿಯ ಒಡಲ ಮೇಲೆ ಬಿದ್ದು ವಿಲವಿಲ ವಿಲಪಿಸಿ ಸತ್ತಿತು! ಆಗ ವಾಲ್ಮೀಕಿ ಮಹರ್ಷಿಗಳು, ತಮ್ಮ ಮನಸ್ಸಿನಲ್ಲಿ ಮೂಡಿದ ಕರುಣೆ, ಕೋಪ ಮತ್ತು ವಿಷಾಧಗಳ ಫಲವಾಗಿ
ಮಾನಿಷಾಧ ಪ್ರತಿಷ್ಠಾಮ್ ತ್ವಮಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚಮಿಥುನಾದೇಕಂ ಅವಧಿಃ ಕಾಮಮೋಹಿತಃ||
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ ನಿನ್ನ ಪಾಪದ -ಲವಾಗಿ ನೀ ಕೂಡಲೇ ಸಾಯಿ ಎಂದು ಶಾಪವನ್ನು ನೀಡಿದರು.
ಶೋಕ ರೂಪದ ಶ್ಲೋಕವು ರಾಮಾಯಣದ ಜನನಕ್ಕೆ ಕಾರಣವಾಯಿತು. ವಾಲ್ಮೀಕಿ ಮಹರ್ಷಿ ತಮ್ಮ ಮುಂದೆ ಎರಡು ಸಾವನ್ನು ಕಂಡರು. ಮೊದಲನೆಯ ಸಾವು ಗಂಡು ಹಕ್ಕಿಯದು. ಬೇಡ ಬಿಟ್ಟ ಬಾಣದಿಂದ ಸತ್ತಿತು. ಎರಡನೆಯ ಸಾವು ಹೆಣ್ಣು ಹಕ್ಕಿಯದು. ಹೆಣ್ಣು ಹಕ್ಕಿಗೇನೂ ಬಾಣ ತಾಗಿರ ಲಿಲ್ಲ. ಆದರೆ ಅದು ತನ್ನ ಸಂಗಾತಿಯು ಚಡಪಡಿಸಿ ಒದ್ದಾಡಿ ಸತ್ತದ್ದನ್ನು ತನ್ನ ಕಣ್ಣಾರೆ ನೋಡಿತು. ಸಂಗಾತಿಯ ಅಗಲಿಕೆಯ ತೀವ್ರ ಶೋಕದಿಂದ ತಕ್ಷಣವೇ ಅದರ ಹೃದಯವು ನಿಂತಿತು. ಜೀವವನ್ನು ಬಿಟ್ಟಿತು.
ಅಪ್ಪನ ಅಂತ್ಯೇಷ್ಠಿ: ಕೇರಳದಲ್ಲಿ ನಡೆದ ಘಟನೆಯಿದು. 31 ವರ್ಷದ ಮಗಳು. ಅಪ್ಪನ ಶವ ಸಂಸ್ಕಾರವು ನಡೆಯುತ್ತಿತ್ತು. ತಕ್ಷಣವೇ ತಲೆತಿರುಗಿ ಬಿದ್ದಳು. ಆಸ್ಪತ್ರೆಗೆ ಸಾಗಿಸಿದರು. ಹೃದಯ ಮಿಡಿತವು ನಾಗಾಲೋಟದಲ್ಲಿ ಓಡುತ್ತಿತ್ತು. ಎಕೋ ಪರೀಕ್ಷೆಯಲ್ಲಿ ಆಕೆಯ ಎಡ ಹೃತ್ಕುಕ್ಷಿಯು ಬಲೂನಿನಂತೆ ಊದಿಕೊಂಡಿತ್ತು. ಆಕೆ ಮರಣಿಸಿದಳು.
ತಂದೆಯ ಸಾವಿನ ಶೋಕವನ್ನು ತಡೆದುಕೊಳ್ಳಲಾಗದ ಆಘಾತವೇ ಆಕೆಯ ಸಾವಿಗೆ ಕಾರಣ ವೆಂದರು. ಇದೊಂದು ತಕೋತ್ಸುಬೋ ಲಕ್ಷಣಾವಳಿಗೆ ಉದಾಹರಣೆಯಾಗಿತ್ತು. (ಬಣವಾಲಿಕರ್ ಬಿ. ಜರ್ನಲ್ ಆ- ಎಲೆಕ್ಟ್ರೋಕಾರ್ಡಿಯಾಲಜಿ. ತಕೋತ್ಸುಬೋ ಸಿಂಡ್ರೋಮ್ ಪ್ರೆಸೆಂಟಿಂಗ್ ಆಸ್ ಸಿಂಕ್ ಇನ್ ಎ ಪೇಷಂಟ್ ವಿತ್ ಎ ಪರಮನೆಂಟ್ ಪೇಸ್ ಮೇಕರ್. ಶ್ರೀ ಚಿತ್ರಾ ತಿರುನಾಳ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ, ಕೇರಳ)
ಸೋದರನ ಅಗಲಿಕೆ: ಚೆನ್ನೈಯಲ್ಲಿ ನಡೆದ ಘಟನೆ. 69 ವರ್ಷದ ಮಹಿಳೆಯೊಬ್ಬಳ ಸೋದರನು ಕೆಲವು ದಿನಗಳ ಹಿಂದೆ ಮರಣಿಸಿದ್ದ. ಆಕೆ ಎದೆಯ ನೋವೆಂದು ಆಸ್ಪತ್ರೆಗೆ ಬಂದಳು. ಇಸಿಜಿ ಮಾಡಿ ದರು. ಹೃದಯಾಘಾತದ ಲಕ್ಷಣಗಳು ಕಂಡು ಬಂದವು. ರಕ್ತದಲ್ಲಿ ಟ್ರೋಪೋನಿನ್ ಪ್ರಮಾಣ ಮಧ್ಯಮ ಮಟ್ಟದಲ್ಲಿ ಹೆಚ್ಚಿತ್ತು. ಕರೋನರಿ ಆಂಜಿಯೋಗ್ರಾಮ್ ಮಾಡಿದರು. ಅವು ಆರೋಗ್ಯ ವಾಗಿದ್ದವು.
ಆದರೆ ಎಡ ಹೃತ್ಕುಕ್ಷಿಯು ಬಲೂನಿನಂತೆ ಉಬ್ಬಿತ್ತು. ಇದು ಸ್ಟ್ರೆಸ್ ಕಾರ್ಡಿಯೋಮಯೋಪಥಿ ಅಥವ ತಕೋತ್ಸುಬೋ ಲಕ್ಷಣಾವಳಿಯ ಫಲ ಎಂದರು. ಆಕೆಗೆ ಅಗತ್ಯ ಚಿಕಿತ್ಸೆಯನ್ನು ನೀಡಿದರು. ಒಂದು ವಾರದ ನಂತರ ಆಕೆಯು ಮನೆಗೆ ಮರಳಿದರು. ಕಾವೇರಿಯನ್ ಸೈಂಟಿಫಿಕ್ ಜರ್ನಲ್.
ಕಾವೇರಿ ಹಾಸ್ಪಿಟಲ್. ಕೇಸ್ ರಿಪೋರ್ಟ್: ತಕೋತ್ಸುಬೋ ಕಾರ್ಡಿಯೋಮಯೋಪಥಿ, ಎ ಕೇಸ್ ರಿಪೋರ್ಟ್ (2024-25) ಸೋದರನ ಅಗಲಿಕೆಯು ತೀವ್ರತೆಯು ಹೃದಯದ ಮೇಲೆ ದುಷ್ಪರಿಣಾಮ ವನ್ನು ಬೀರಿತ್ತು.
ವೆಲ್ಲೂರಿನ ಅಧ್ಯಯನ: ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರಿನಲ್ಲಿ 2013-2023ರವರೆಗೆ ಅಧ್ಯಯನವನ್ನು ಮಾಡಿ ಹಲವು ತಕೋತ್ಸುಬೋ ಪ್ರಕರಣಗಳನ್ನು ಅಧ್ಯಯನ ಮಾಡಿರುವರು. ಸಕಾಲದಲ್ಲಿ ಬಂದ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ, ಅವರಲ್ಲಿ ಹಲವರು ಮರಳಿ ಮನೆಗೆ ಹೋಗುವಂತಾದದ್ದು ಆ ಅಸ್ಪತ್ರೆಯ ಹೆಗ್ಗಳಿಕೆಯಾಗಿದೆ.
ಆಯುರ್ವೇದ: ಭಗ್ನ ಹೃದಯ ಲಕ್ಷಣಾವಳಿ ಭಾರತೀಯರಿಗೆ ಹೊಸದಲ್ಲ. ನಮ್ಮ ಸುಶ್ರುತ ಹಾಗೂ ಚರಕ ಮಹರ್ಷಿಗಳು ಈ ಬಗ್ಗೆ ತಮ್ಮ ಸಂಹಿತೆಗಳಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಅದರ ಬಗ್ಗೆ ಒಂದು ಪಕ್ಷಿನೋಟವನ್ನು ಹರಿಸೋಣ.
ಚರಕ ಸಂಹಿತ, ಸೂತ್ರಸ್ಥಾನ (30.26):
ಶೋಕೋತಿ ಯೋಗಾತ್ ಪ್ರಾಣಾನ್ ಹೃದಯ ಮೂಲಾನ್ ಹಂತಿ|
ಅತಿಯಾದ ದುಃಖವು, ಹೃದಯದಲ್ಲಿ ಬೇರುಬಿಟ್ಟಿರುವ ಪ್ರಾಣಕ್ಕೆ ಹಾನಿಯನ್ನುಂಟು ಮಾಡುತ್ತದೆ ನಮಗೆ ಪ್ರೀತಿಪಾತ್ರರಾದವರು ಮರಣಿಸಿದಾಗ ಅಥವ ಅತ್ಯಂತ ದಾರುಣವಾದ ಸುದ್ಧಿಯನ್ನು ಕೇಳಿದಾಗ, ಅದನ್ನು ಅವರ ಹೃದಯವು ತಡೆದುಕೊಳ್ಳಲಾಗದೆ, ಸ್ತಂಭಿತವಾಗಿ ಜೀವವನ್ನು ಬಿಡುತ್ತದೆ.
ಚರಕ ಸಂಹಿತ, ಚಿಕಿತ್ಸಾಸ್ಥಾನ (3.4.31):
ಹೃದಯಂ ಮನಸಃ ಸ್ಥಾನಂ| ತತ್ರ ಶೋಕೋ ಭಯಶ್ಚ ದೈನ್ಯಮ್ ಇತ್ಯೇತತ್ ಸರ್ವಮ್ ಹೃದಯಂ ಉಪತಪ್ಯತೆ| ಹೃದಯವು ಮನಸ್ಸಿನ ಆವಾಸಸ್ಥಾನ. ಶೋಕ, ಭಯ ಮತ್ತು ದೈನ್ಯತೆ ಇವು ಹೃದಯ ವನ್ನು ಬೆಂಕಿಯಂತೆ ಸುಡುತ್ತವೆ ಈ ವರ್ಣನೆಯು ಒತ್ತಡ ಹೃದಯಸ್ನಾಯುಬೇನೆಯ (ಸ್ಟ್ರೆಸ್ ಕಾರ್ಡಿಯೋಮಯೋಪಥಿ) ಲಕ್ಷಣಗಳನ್ನು ಹೋಲು ತ್ತವೆ. ತೀವ್ರಸ್ವರೂಪದ ಶೋಕ, ಭಯ ಹಾಗೂ ದೀನಾವಸ್ಥೆಯು ಮನುಷ್ಯನನ್ನು ಜರ್ಝರಿತನನ್ನಾಗಿ ಮಾಡಿ, ನಾನು ಇನ್ನು ಏಕೆ ತಾನೆ ಬದುಕಿರ ಬೇಕು ಎನ್ನುವ ಭಾವವು ಮೂಡಿ, ತಕ್ಷಣವೇ ಅದರ ತೀವ್ರ ಪ್ರಭಾವವು ಹೃದಯದ ಮೇಲೆ ಬೀರಿ ಅದರ ರಚನೆ ಮತ್ತು ಕಾರ್ಯವನ್ನು ನಾಶಪಡಿಸುತ್ತವೆ.
ಸುಶ್ರುತ ಸಂಹಿತೆ, ಸೂತ್ರಸ್ಥಾನ (15.41)
ಶೋಕಭಯಕ್ರೋಧೈಃ ಪ್ರಹೃಷ್ಠೈರಥವಾ ತತ್ರ ಹೃದಯಂ ದ್ರವತಿ|
ಶೋಕ, ಭಯ, ಕ್ರೋಧಗಳ ಕಾರಣ ಅಥವ ಇದ್ದಕ್ಕಿದ್ದ ಹಾಗೆ ಸಂಭ್ರಮಿಸುವುದು, ಹೃದಯ ವನ್ನು ಕರಗಿಸುತ್ತದೆ ಅತ್ಯಂತ ತೀವ್ರಸ್ವರೂಪದ ಭಾವಗಳು ಹೃದಯವನ್ನು ಕರಗಿಸುತ್ತವೆ ಎಂದರೆ, ಹೃದಯವನ್ನು ಕ್ರಿಯಾವಿಹೀನ ವಾಗಿಸುತ್ತವೆ.
ಈ ವರ್ಣನೆಯು ತಕೋತ್ಸುಬೋ ಹೃದಯಸ್ನಾಯುಬೇನೆ (ತಕೋತ್ಸುಬೋ ಸಿಂಡ್ರೋಮ್, ಟಿಟಿಎಸ್) ಯನ್ನು ಹೋಲುತ್ತದೆ.
ಸುಶ್ರುತ ಸಂಹಿತೆ, ಉತ್ತರ ತಂತ್ರ (54.6)
ಶೋಕಾರ್ತಾನಾಂ ಪ್ರಾಣಾಃ ಶೀಘ್ರಂ ಹೃದಯಾತ್ ಪ್ರಚ್ಯವಂತೆ|
ತೀವ್ರ ಸ್ವರೂಪದ ಶೋಕಕ್ಕೆ ಗುರಿಯಾದ ಹೃದಯದಿಂದ ಪ್ರಾಣವು ಶೀಘ್ರವಾಗಿ ಹೊರಟು ಹೋಗು ತ್ತದೆ ಇದಕ್ಕೆ ಉದಾಹರಣೆಯಾಗಿ ದಶರಥನ ಮರಣವನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ ಹೆಣ್ಣು ಕ್ರೌಂಚ ಪಕ್ಷಿಯ ಸಾವಿಗೆ ಇದೇ ಶೋಕವೇ ಕಾರಣವಾಯಿತು.
ಸಾರಾಂಶ: ಚರಕ ಸುಶ್ರುತರ ಮೇಲಿನ ವಿವರಣೆಯನ್ನು ಓದಿದ ನಂತರ, ಅವರ ಆಶಯವನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.
೧. ತೀವ್ರ ಶೋಕ ಅಥವ ಭಯದಿಂದ ಹೃದಯವು ತನ್ನ ಕೆಲಸವನ್ನು ಹಠಾತ್ತನೆ ಸ್ಥಗಿತ ಗೊಳಿಸುತ್ತದೆ.
೨. ಹೃದಯ ಮತ್ತು ಮನಸ್ಸುಗಳಿಗೆ ನಿಕಟ ಸಂಬಂಧವಿದೆ.
ಜೀವವನ್ನು ಹಿಡಿದಿಡುವ ಜೈವಿಕ ಶಕ್ತಿಗಳು (ಲೈಫ್ ಫೋರ್ಸಸ್) ಹೃದಯದಲ್ಲಿವೆ.
೩. ಅನಿಯಂತ್ರಿತ ದುಃಖವು ಸಾವಿಗೆ ನೇರವಾಗಿ ಕಾರಣವಾಗುತ್ತದೆ.
೪. ಕೆಲವು ಸಲ ಹಠಾತ್ ಸಾವನ್ನು ಅಲ್ಲದಿದ್ದರೂ, ಹೃದಯಕ್ಕೆ ತೀವ್ರ ಸ್ವರೂಪದ ಹಾನಿ ಯನ್ನುಂಟು ಮಾದಿ, ಕೆಲವು ದಿನಗಳಲ್ಲಿ ಕೊಲ್ಲುತ್ತದೆ.
ತಕೋತ್ಸುಬೋ ಹೃದಯಸ್ನಾಯು ಬೇನೆ: ಇಂತಹ ನಮೂನೆಯ ಮೊದಲ ಹೃದಯ ಬೇನೆಯನ್ನು, ಜಪಾನಿನ ವೈದ್ಯರಾದ ಹಿಕಾರೋ ಸಾಟೋ ಮತ್ತು ಸಂಗಡಿಗರು 1990 ಗಮನಿಸಿದರು. ತಕೋ ತ್ಸುಬೊ ಎನ್ನುವುದು ಜಪಾನೀ ಶಬ್ದ. ಅಷ್ಟಪಾದಿಗಳನ್ನು (ಅಕ್ಟೋಪಾಸ್) ಹಿಡಿಯಲು ಬಳಸುವ ಮಡಕೆ/ಪಾತ್ರೆ. ಈ ಮಡಕೆಯ ತಳ ಅಗಲವಾಗಿರುತ್ತದೆ. ಬಾಯಿ ಚಿಕ್ಕದಾಗಿರುತ್ತದೆ. ಅಷ್ಟಪಾದಿ ಯನ್ನು ಹಿಡಿದು ಈ ಮಡಕೆಯ ಒಳಗೆ ಹಾಕಿದರೆ, ಅದು ಸಣ್ಣ ಬಾಯಿಯಿಂದ ಸುಲಭವಾಗಿ ತಪ್ಪಿಸಿಕೊಂಡು ಬರಲಾರದು. ಭಗ್ನಹೃದಯ ಲಕ್ಷಣಾವಳಿಗೆ ತುತ್ತಾದವರ ಹೃದಯದ ಪ್ರತಿಧ್ವನಿ ಚಿತ್ರವನ್ನು ತೆಗೆದರೆ, ಎಡ ಹೃತ್ಕುಕ್ಷಿಯು ಬಲೂನಿನ ಹಾಗೆ ಉಬ್ಬಿಕೊಂಡು ತಕೋತ್ಸು ಬೋ ಪಾತ್ರೆಯನ್ನು ಹೋಲುತ್ತದೆ.
ಹಾಗಾಗಿ ಭಗ್ನಹೃದಯ ಲಕ್ಷಣಾವಳಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ತಕೋತ್ಸುಬೊ ಸಿಂಡ್ರೋಮ್ ಎಂದು ಕರೆಯುತ್ತಾರೆ. ಸಹಜವಾಗಿರುವ ಎಡ ಹೃತ್ಕುಕ್ಷಿಯು ಅತೀವ ಶೋಕ, ಭಯ, ಆನಂದವನ್ನು ಭರಿಸಿಕೊಳ್ಳಲಾಗದೆ, ಹೃದಯ ಭಿತ್ತಿಯು ಅತ್ಯಂತ ದುರ್ಬಲವಾಗಿ ಬಲೂನಿನಂತೆ ಊದಿಕೊಳ್ಳುತ್ತದೆ.
ಅತೀವ ಶೋಕ, ಭಯ, ಆನಂದದ ಕಾರಣ ಹಠಾತ್ತನೆ ಸಾಯಬಹುದು. ದಶರಥನಂತೆ ಹಾಗೂ ಹೆಣ್ಣು ಕ್ರೌಂಚಪಕ್ಷಿಯಂತೆ. ತಕ್ಷಣ ಸಾವು ಬರದಿದ್ದರೆ, ದುರ್ಬಲಗೊಂಡ ಹೃದಯವು ಕೆಲವು ದಿನಗಳಲ್ಲಿ ಸಾವಿಗೆ ಕಾರಣವಾಗುತ್ತದೆ.
ದೈನಂದಿನ ವೈದ್ಯಕೀಯ ವೃತ್ತಿಯಲ್ಲಿ ಕಾಣಸಿಗುವ ಭಗ್ನ ಹೃದಯಿಗಳಲ್ಲಿ 9%ರಷ್ಟು ಮಹಿಳೆಯರೇ ಆಗಿರುತ್ತಾರೆ. ಅವರಿಗೆ ರಜೋನಿವೃತ್ತಿಯಾಗಿರುತ್ತದೆ. ಅಂದರೆ ಅವರು ಸಾಮಾನ್ಯವಾಗಿ 50-75 ವರ್ಷ ಗಳ ನಡುವಿನ ವಯಸ್ಸಿನವರಾಗಿರುತ್ತಾರೆ.
ಅತೀವ ಶೋಕ, ಭಯ, ಸಂತೋಷಕ್ಕೆ ತುತ್ತಾದಾಗ, ಅವರಿಗೆ ಹೃದಯಾಘಾತದ ಎಲ್ಲ ಲಕ್ಷಣಗಳನ್ನು ತೋರಬಹುದು. ಅಂತಹವರನ್ನು ಆಸ್ಪತ್ರೆಗೆ ತಂದು ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆಯನ್ನು ಮಾಡಿದರೆ, ಅದರಲ್ಲಿ ಯಾವುದೇ ಹೆಪ್ಪಳಿಕೆಯಾಗಲಿ ಅಥವ ರಕ್ತಗರಣೆಯಾಗಲಿ ಇರುವುದಿಲ್ಲ. ಇಂತಹವರಲ್ಲಿ ಸುಮಾರು 4%-5% ಜನರು ಕ್ರಮೇಣ ಮೃತ್ಯುವಶರಾಗಬಹುದು. ಅಕಸ್ಮಾತ್ ಬದುಕಿದರೆ, ಅವರಲ್ಲಿ 5%-10% ಜನರಿಗೆ ಮತ್ತೆ ಹೃದಯಾಘಾತದ ಹುಸಿ ಲಕ್ಷಣಗಳು ಕಂಡುಬಂದು ಸಾವು ಎರಗಬಹುದು.
ಅತೀವ ಸ್ವರೂಪದ ಶೋಕವು ಸಂಗಾತಿ ಅಥವ ಹತ್ತಿರದ ಬಂಧು ಸತ್ತಾಗ ಆಗುವುದು ಸಹಜ. ದೊಡ್ಡ ಪ್ರಮಾಣದ ಆರ್ಥಿಕ ನಷ್ಟವಾದಾಗ (ವ್ಯಾಪಾರದಲ್ಲಿ ಹಠಾತ್ ನಷ್ಟವಾದಾಗ) ಹಠಾತ್ತನೇ ಮೂಡುವ ಭಯವು ಹೃದಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಹಾವು ಕಚ್ಚಿದಾಗ ಸಾಯುವೆನೆಂಬ ವಿಪರೀತ ಭಯವೇ (ಅದು ವಿಷರಹಿತ ಹಾವೇ ಆಗಿರಲಿ), ಅವನನ್ನು ಕೊಲ್ಲ ಬಹುದು.
ಭೂಕಂಪನಗಳಾದಾಗ, ಅಗ್ನಿ ಅವಘಡಗಳಾದಾಗ, ಪ್ರವಾಹಗಳಾದಾಗಲೂ ಕೆಲವರಿಗೆ ಆದ ನಷ್ಟ ವನ್ನು ಭರಿಸಲಾಗದ ಶೋಕವಾಗಿ ಮರಣಿಸಬಹುದು. ಕುಟುಂಬ ಕಲಹಗಳು, ಯಾದವೀ ಕಲಹಗಳು ಹಿರಿಯರ ಮನಸ್ಸಿಗೆ ತೀವ್ರಸ್ವರೂಪದ ಆಘಾತವನ್ನು ಉಂಟು ಮಾಡಿ ಅವರ ಸಾವಿಗೆ ಕಾರಣವಾ ಗಬಹುದು. ಇದನ್ನೇ ನಮ್ಮ ಸಾಹಿತಿಗಳು ಎದೆ ಒಡೆದು ಸಾಯುವುದು ಎಂದು ವರ್ಣಿಸಿರ ಬೇಕು.
ಹಠಾತ್ತನೇ ಸಾವು ಹೇಗೆ ಸಂಭವಿಸುತ್ತದೆ? ಹೃದಯದ ಮಕುಟಧಮನಿಗಳು ಆರೋಗ್ಯವಾಗಿಯೇ ಇರುತ್ತವೆ. ಆದರೂ ಕ್ಷಣಗಳಲ್ಲಿ ಸಾವು ಹೇಗೆ ಸಂಭವಿಸುತ್ತದೆ? ಇದಕ್ಕೆ ವಿಜ್ಞಾನಿಗಳು ಕೆಲವು ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಕೆಟಕೋಲಮಿನ್ ಉಲ್ಬಣ ಸಿದ್ಧಾಂತ (ಕೆಟಕೋಲಮಿನ್ ಸರ್ಜ್ ಹೈಪಾಥೆಸಿಸ್) ಲೋಮನಾಳಗಳ ಕಾರ್ಯವೈಫಲ್ಯ (ಮೈಕೊವ್ಯಾಸ್ಕುಲಾರ್ ಡಿಸಂಕ್ಷನ್) ಹೃದಯ ಸ್ನಾಯುವಿನ ಸ್ತಂಭನ (ಮಯೋಕಾರ್ಡಿಯಲ್ ಸ್ಟನ್ನಿಂಗ್) ಈಸ್ಟ್ರೋಜನ್ ಹಾರ್ಮೋನಿನ ಕೊರತೆ ಹಠಾತ್ ಸಾವಿಗೆ ಕಾರಣವಾಗುತ್ತದೆ ಎನ್ನುವ ವಾದವನ್ನು ಮಂಡಿಸಿರುವುದುಂಟು.
ಈ ಬಗ್ಗೆ ಇನ್ನೂ ಅಧ್ಯಯನಗಳು ನಡೆಯಬೇಕಿದೆ. ಭಾವನೆಗಳನ್ನು ಹಠಾತ್ ಉಲ್ಬಣಿಸುವ ಘಟನೆ ಗಳಾಗಿ ಹಠಾತ್ ಸಾವು ಸಂಭವಿಸದೆ, ತೀವ್ರ ಸ್ವರೂಪದ ಹೃದಯ ನೋವು, ಉಸಿರಾಡಲು ಕಷ್ಟ, ತಲೆಸುತ್ತು ಇತ್ಯಾದಿಗಳು ಕಂಡುಬಂದರೆ, ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕು.
ಅವರಿಗೆ ಅಗತ್ಯ ಪರೀಕ್ಷೆಗಳನ್ನು ಮಾಡುವರು. ನಂತರ ಉತ್ತಮ ನೋವು ನಿವಾರಕ ಇಂಜಕ್ಷನ್ ನೀಡಿ, ಆಕ್ಸಿಜನ್ ಕೊಟ್ಟು ಹೃದಯಸ್ನಾಯುಗಳನ್ನು ಬಲಪಡಿಸುವ ಔಷಧಗಳನ್ನು ನೀಡುವರು. ಆಸ್ಪತ್ರೆಯಲ್ಲಿ 4-8 ವಾರಗಳಿದ್ದು, ಸ್ವಲ್ಪ ಚೇತರಿಸಿಕೊಂಡು ಮನೆಗೆ ಬರಬಹುದು.