ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr D C Nanjunda Column: 2050ರಲ್ಲಿ 1 ಕೋಟಿ ರೂಪಾಯಿ ಹಣ 21 ಲಕ್ಷಕ್ಕೆ ಸಮವೇ ?!

ಹಣದುಬ್ಬರ ಎಂದರೆ ಸಾಮಾನ್ಯವಾಗಿ ಸರಕುಗಳು ಮತ್ತು ಸೇವೆಗಳ ಬೆಲೆ ಏರಿಕೆ. ಇದು ಕ್ರಮೇಣ ಜನರ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, 10 ವರ್ಷಗಳ ಹಿಂದೆ 100 ರುಪಾಯಿಯಲ್ಲಿ ಖರೀದಿ ಮಾಡುತ್ತಿದ್ದಂಥ ವಸ್ತು ಈಗ 150-160 ರು. ಬೆಲೆಗಳಲ್ಲಿ ಲಭ್ಯವಾಗು ತ್ತದೆ, ಇದು ಹಣದ ಮೌಲ್ಯ ಕುಸಿತವನ್ನು ಸ್ಪಷ್ಟವಾಗಿ ತೋರಿಸುತ್ತದೆ.

2050ರಲ್ಲಿ 1 ಕೋಟಿ ರೂಪಾಯಿ ಹಣ 21 ಲಕ್ಷಕ್ಕೆ ಸಮವೇ ?!

-

Ashok Nayak
Ashok Nayak Mar 14, 2026 4:27 PM

ಲೆಕ್ಕಪತ್ರ

ಡಾ.ಡಿ.ಸಿ.ನಂಜುಂಡ

ಇಂದಿನ 1 ಕೋಟಿ ರುಪಾಯಿ, ಹಣದುಬ್ಬರ ಮತ್ತು ಸವಕಳಿಯ ಕಾರಣದಿಂದ 2050 ರಲ್ಲಿ 21 ಲಕ್ಷ ರು.ನಷ್ಟು ಮೌಲ್ಯವನ್ನು ಮಾತ್ರ ಹೊಂದಬಹುದು. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು, ಹಣದುಬ್ಬರ ಮತ್ತು ಸವಕಳಿಯ ಅರ್ಥ ಹಾಗೂ ಪರಿಣಾಮವನ್ನು ಮೊದಲಿಗೆ ತಿಳಿದುಕೊಳ್ಳಬೇಕು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಆರ್ಥಿಕ ಚರ್ಚೆಗಳಲ್ಲಿ ಒಂದು ವಿಚಾರ ಬಹಳ ಚರ್ಚೆಗೆ ಒಳಗಾಗಿದೆ. ಅದೆಂದರೆ- ‘2050ರ ವರ್ಷದ ವೇಳೆಗೆ 1 ಕೋಟಿ ರುಪಾಯಿ ಹಣವು 21 ಲಕ್ಷಕ್ಕೆ ಸಮಾನವಾಗಬಹುದು’ ಎಂಬುದು. ಇದು ಯಾವುದೇ ಅಂಕಿ-ಸಂಖ್ಯೆಗಳ ಬಗೆಗಿನ ಮಾತಲ್ಲ; ಬದಲಾಗಿ ಇದನ್ನು ಭವಿಷ್ಯದಲ್ಲಿನ ಭಾರತೀಯರ ರುಪಾಯಿಯ ಖರೀದಿ ಶಕ್ತಿಯ ಬಗೆಗಿನ ಒಂದು ಅಂದಾಜು ಎನ್ನಬಹುದು.

ಅಂದರೆ, ಇಂದು ಇರುವ 1 ಕೋಟಿ ರುಪಾಯಿ ಹಣವು, ಹಣದುಬ್ಬರ ಮತ್ತು ಸವಕಳಿಯ ಕಾರಣದಿಂದ 2050ರಲ್ಲಿ 21 ಲಕ್ಷ ರು.ನಷ್ಟು ಮೌಲ್ಯವನ್ನು ಮಾತ್ರ ಹೊಂದಬಹುದು. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಹಣದುಬ್ಬರ ಮತ್ತು ಸವಕಳಿಯ ಅರ್ಥ ಹಾಗೂ ಪರಿಣಾಮವನ್ನು ಮೊದಲಿಗೆ ತಿಳಿದುಕೊಳ್ಳಬೇಕಾದ್ದು ಅತಿಮುಖ್ಯ.

ಹಣದುಬ್ಬರ ಎಂದರೆ ಸಾಮಾನ್ಯವಾಗಿ ಸರಕುಗಳು ಮತ್ತು ಸೇವೆಗಳ ಬೆಲೆ ಏರಿಕೆ. ಇದು ಕ್ರಮೇಣ ಜನರ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, 10 ವರ್ಷಗಳ ಹಿಂದೆ 100 ರುಪಾಯಿಯಲ್ಲಿ ಖರೀದಿ ಮಾಡುತ್ತಿದ್ದಂಥ ವಸ್ತು ಈಗ 150-160 ರು. ಬೆಲೆ ಗಳಲ್ಲಿ ಲಭ್ಯವಾಗುತ್ತದೆ, ಇದು ಹಣದ ಮೌಲ್ಯ ಕುಸಿತವನ್ನು ಸ್ಪಷ್ಟವಾಗಿ ತೋರಿಸು ತ್ತದೆ.

ಹಣದ ಸವಕಳಿ ಅಥವಾ ಹಣದ ಖರೀದಿ ಶಕ್ತಿಯ ಕುಸಿತವು ಹಣದುಬ್ಬರದಿಂದ ನೇರವಾಗಿ ಅಥವಾ ಕಾಲದ ಆರ್ಥಿಕ ಬದಲಾವಣೆಗಳ ಪರಿಣಾಮದಿಂದ ಸಂಭವಿಸುತ್ತದೆ. ವಿದ್ಯುತ್, ಆಹಾರ, ಇಂಧನ ಮತ್ತು ಸಾರಿಗೆ ಇತ್ಯಾದಿಗಳ ಬೆಲೆಗಳ ಏರಿಕೆ, ಸರಕಾರದ ಹಣಕಾಸು ನೀತಿ, ರುಪಾಯಿಯು ಅಮೆರಿಕನ್ ಡಾಲರ್ ಅಥವಾ ವಿಶ್ವದ ಇತರ ಪ್ರಮುಖ ಕರೆನ್ಸಿಗಳ ವಿರುದ್ಧ ಮೌಲ್ಯವನ್ನು ಕಳೆದುಕೊಳ್ಳುವುದು, ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿ, ಪೆಟ್ರೋಲ್ ಬೆಲೆ, ರಫ್ತು, ಆಮದು ಬದಲಾವಣೆ ಮತ್ತು ಆರ್ಥಿಕ ಸಂಕಷ್ಟಗಳು ಇತ್ಯಾದಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: Dr D C Nanjunda Column: ವಿವಿಗಳಲ್ಲಿ ಹಣವಿಲ್ಲ, ಆದರೂ ಭ್ರಷ್ಟಾಚಾರಕ್ಕೆ ಕೊರತೆಯಿಲ್ಲ..!

ಕಳೆದ ದಶಕಗಳಲ್ಲಿ ಭಾರತದ ಸರಾಸರಿ ವಾರ್ಷಿಕ ಹಣದುಬ್ಬರ ಶೇ.47ರವರೆಗೆ ಇದೆ. ಈ ಶೇಕಡಾ ಅಂದಾಜುಗಳಿಂದ, ರುಪಾಯಿಯ ಖರೀದಿ ಶಕ್ತಿ ಕ್ರಮೇಣ ಕುಸಿಯುತ್ತಿದೆ. ಹಾಗಾಗಿ ಸಾಮಾನ್ಯವಾಗಿ ರುಪಾಯಿ ಬೆಲೆ ಹೆಚ್ಚಾಗಿದ್ದರೂ, ನಿಜಮೌಲ್ಯ ಅಥವಾ ಖರೀದಿ ಶಕ್ತಿ ವರ್ಷ ದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ.

ರುಪಾಯಿಯ ಭವಿಷ್ಯದ ಮೌಲ್ಯವನ್ನು ಗಣಿತದ ದೃಷ್ಟಿಕೋನದಿಂದ ಲೆಕ್ಕಿಸಿದಾಗ ಹಣದುಬ್ಬರವು ಭಾರತದಲ್ಲಿ ಶೇ.6.3ಕ್ಕಿಂತ ಇನ್ನೂ ಕ್ರಮೇಣ ಹೆಚ್ಚಾಗುತ್ತದೆ. ಈ ಕಾರಣ ದಿಂದ 2050ರ ವೇಳೆಗೆ ರುಪಾಯಿಯ ಖರೀದಿ ಶಕ್ತಿ ಕಡಿಮೆಯಾಗುತ್ತದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಜಾಗತಿಕ ದೃಷ್ಟಿಕೋನದಲ್ಲಿ, ಭೌಗೋಳಿಕ ರಾಜಕೀಯ ಅರಾಜಕತೆ ಮತ್ತು ಪೂರೈಕೆ ಸರಪಳಿಯ ಸಮಸ್ಯೆಗಳು, ಯುದ್ಧ, ಆಂತರಿಕ ದಂಗೆ ಮುಂತಾದವು ಸಹ ರುಪಾಯಿ ಮೌಲ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಉದಾಹರಣೆಗೆ, ಅಮೆರಿಕನ್ ಡಾಲರ್ ಎದುರು ರುಪಾಯಿ ಕಳೆದ 20 ವರ್ಷಗಳಲ್ಲಿ ಸುಮಾರು ಶೇ.40-50ರಷ್ಟು ಸವಕಳಿಯನ್ನು ಹೊಂದಿದೆ.

ಇದೇ ದಾರಿಯಲ್ಲಿ ಮುಂದುವರಿದರೆ, 2050ರಲ್ಲಿ ಭಾರತೀಯ ರುಪಾಯಿ ಖರೀದಿ ಶಕ್ತಿಯಲ್ಲಿ ಹೆಚ್ಚಿನ ಇಳಿಕೆ ಕಾಣಬಹುದು. ಉದಾಹರಣೆಗೆ, 2050ರಲ್ಲಿ 1 ಕೋಟಿ ರುಪಾಯಿ ಹೊಂದಿದ ವ್ಯಕ್ತಿ, ಈಗಿನ 21 ಲಕ್ಷ ರು.ನಷ್ಟು ಮಾತ್ರ ವಸ್ತುಗಳನ್ನು ಖರೀದಿ ಮಾಡಲು ಶಕ್ತನಾಗು ತ್ತಾನೋ ಅಥವಾ ಹೆಚ್ಚಿನದನ್ನು ಕೊಳ್ಳುತ್ತಾನೋ ನೋಡಬೇಕು. ಇಲ್ಲದಿದ್ದರೆ ಅವರ ಜೀವನಶೈಲಿ ಅಂದು ಕನಿಷ್ಠ ಮಟ್ಟಕ್ಕೆ ಇಳಿಯಬಹುದು ಎನ್ನುತ್ತಾರೆ ತಜ್ಞರು.

ಹಣದ ಸವಕಳಿ ಅಥವಾ ಖರೀದಿ ಶಕ್ತಿಯ ಕುಸಿತದ ಆರ್ಥಿಕ ಪರಿಣಾಮಗಳು ವ್ಯಾಪಕ ವಾಗಿರುತ್ತವೆ. ಮೊದಲು, ಅದು ನಮ್ಮ ಉಳಿತಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಶೇ.67ರ ಹಣದುಬ್ಬರದ ಅಂದಾಜಿನಿಂದ, ಉಳಿತಾಯ ಮಾಡುವವರು ತಮ್ಮ ಬಳಿ ಇರುವ ಹಣದ ನಿಜಶಕ್ತಿಯ ಇಳಿಕೆಯನ್ನು ಕ್ರಮೇಣ ಎದುರಿಸಬೇಕಾಗುತ್ತದೆ.

ಉದಾಹರಣೆಗೆ ನಿಶ್ಚಿತ ಠೇವಣಿಯಲ್ಲಿ ಹೆಸರಿಗೆ ಮಾತ್ರ ಹಣದ ವೃದ್ಧಿಯಾದರೂ, ಅವಧಿಯ ಕೊನೆಯಲ್ಲಿ ಸರಾಸರಿ ಲಾಭ ಕಡಿಮೆ ಆಗಬಹುದು. ಹೀಗಾಗಿ ನಿಜ ಮಾತ್ರದಲ್ಲಿ ನಿಶ್ಚಿತ ಠೇವಣಿಯ ಮೌಲ್ಯ ಒಂದು ಅರ್ಥದಲ್ಲಿ ಹೆಚ್ಚಾಗುವುದಿಲ್ಲ. ಎರಡನೆಯದು, ಪಿಂಚಣಿ ಮತ್ತು ಕುಟುಂಬದ ಬಜೆಟ್ ಮೇಲೆ ಒತ್ತಡ ಹೆಚ್ಚುತ್ತದೆ.

ಏಕೆಂದರೆ ಭವಿಷ್ಯದಲ್ಲಿ ನಿಗದಿತ ಉಳಿತಾಯದ ಆದಾಯದೊಂದಿಗೆ ಉತ್ತಮ ಜೀವನ ನಡೆಸುವುದು ಬಹಳ ದೊಡ್ಡದಾದ ಸವಾಲಾಗುತ್ತದೆ. ಮೂರನೆಯದು, ದೀರ್ಘಕಾಲೀನ ಹಣಕಾಸು ಯೋಜನೆಗಳಲ್ಲಿ ನಾವು ಸವಕಳಿ ಮತ್ತು ಹಣದುಬ್ಬರದ ಹಂತಗಳನ್ನು ಗಮನಿಸಬೇಕು ಹಾಗೂ ವಸ್ತುಗಳ ದರ, ವೇತನ ಮತ್ತು ಹೂಡಿಕೆ ವಿಚಾರದಲ್ಲಿ ಇವೆಲ್ಲ ವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ನಮ್ಮ ಹೂಡಿಕೆ ತಂತ್ರಗಳು ಖರೀದಿ ಶಕ್ತಿಯನ್ನು ಕಾಪಾಡುವುದು ಬಹುಮುಖ್ಯ. ಮ್ಯೂಚ್ಯುವಲ್ ಫಂಡ್, ರಿಯಲ್ ಎಸ್ಟೇಟ್, ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ, ಹಣದುಬ್ಬರ ಆಧಾರಿತ ಬಾಂಡ್‌ಗಳ ಮೇಲಿನ ಹೂಡಿಕೆ ಮೊದಲಾದವುಗಳು ಸೂಕ್ತ ಎನ್ನುತ್ತಾರೆ ಆರ್ಥಿಕ ತಜ್ಞರು.

ಭವಿಷ್ಯದಲ್ಲಿ ಹಣದ ಖರೀದಿ ಶಕ್ತಿಯನ್ನು ಕಾಪಾಡಲು ಹಲವಾರು ಹೂಡಿಕೆ ತಂತ್ರಗಳು ಲಭ್ಯವಿವೆ. ಹಣದುಬ್ಬರ ಹೊಂದಾಣಿಕೆಯ ಹೂಡಿಕೆಗಳು, ಹಣದುಬ್ಬರ ವಿರುದ್ಧ ಬೆಳೆಯುವ ಮ್ಯೂಚ್ಯುವಲ್ ಫಂಡ್‌ಗಳು ಮತ್ತು ಮೌಲ್ಯ ಆಧಾರಿತ ಬಾಂಡ್‌ಗಳಲ್ಲಿ ಹೂಡಿಕೆಗಳು ದೀರ್ಘ ಕಾಲದಲ್ಲಿ ಹಣದುಬ್ಬರದ ವಿರುದ್ಧ ಖರೀದಿ ಶಕ್ತಿಯನ್ನು ಕಾಯ್ದುಕೊಳ್ಳಲು ಬಹಳ ಸಹಾಯಕವಾಗಿವೆ ಎನ್ನಬಹುದು. ಏಕೆಂದರೆ ಇವು ಹಣದುಬ್ಬರ ದಿಂದ ಉಂಟಾಗುವ ರುಪಾಯಿಯ ಸವಕಳಿಯನ್ನು ಸಾಧ್ಯವಾದಷ್ಟು ತಡೆಯುತ್ತವೆ.

ರಿಯಲ್ ಎಸ್ಟೇಟ್‌ನಂಥ ಹೂಡಿಕೆಯು ದೀರ್ಘ ಕಾಲದಲ್ಲಿ ಹಣದುಬ್ಬರವನ್ನು ಮೆಟ್ಟಿ ನಮಗೆ ಲಾಭ ಮಾಡಿಕೊಡಬಹುದು. ನಿವೇಶನದ ಬೆಲೆ ಸಮಯಕ್ಕೆ ಅನುಗುಣವಾಗಿ ಏರಿಕೆ ಯಾಗುತ್ತದೆ, ಆದರೆ ಲಿಕ್ವಿಡಿಟಿ ಕಡಿಮೆ ಇರುವ ಕಾರಣ ನಮ್ಮ ತುರ್ತು ಹಣದ ಅಗತ್ಯ ವನ್ನು ಪೂರೈಸುವುದು ಕಷ್ಟವಾಗಬಹುದು. ಅಂದರೆ ನಮಗೆ ಬೇಕಾದಾಗ ನಿವೇಶನಗಳನ್ನು ಬೇಕಾದ ಬೆಲೆಗೆ ಮಾರಲು ಸಾಧ್ಯವಿಲ್ಲ.

ಚಿನ್ನ, ಬೆಳ್ಳಿ ಮತ್ತು ವಿದೇಶಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ರುಪಾಯಿಯ ಖರೀದಿ ಶಕ್ತಿಯನ್ನು ನಿರಂತರವಾಗಿ ಕಾಪಾಡಲು ಸಹಾಯಕ. ಏಕೆಂದರೆ ಇವುಗಳು ದೀರ್ಘಕಾಲದ ರುಪಾಯಿ ಸವಕಳಿಗೆ ತೀವ್ರವಾದ ಪ್ರತಿರೋಧ ನೀಡಿ ಬೆಳೆಯುತ್ತವೆ ಮತ್ತು ಭವಿಷ್ಯದ ಆರ್ಥಿಕ ಅಸ್ಥಿರತೆಯನ್ನು ನಿರ್ವಹಿಸಲು ಒಂದು ಹಂತಕ್ಕೆ ನೆರವಾಗುತ್ತವೆ.

ಭವಿಷ್ಯದ ಹಣಕಾಸು ವ್ಯವಸ್ಥೆಯಲ್ಲಿ ಡಿಜಿಟಲ್ ಕರೆನ್ಸಿ ಮಹತ್ವದ ಪಾತ್ರ ವಹಿಸಬಹುದು. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಈಗಾಗಲೇ ಡಿಜಿಟಲ್ ಕರೆನ್ಸಿಯನ್ನು ಪರೀಕ್ಷಾತ್ಮಕವಾಗಿ ಪರಿಚಯಿಸಿದೆ. ಇದು ಸರಕಾರದ ಅಧಿಕೃತ ಡಿಜಿಟಲ್ ಹಣವಾಗಿದ್ದು, ಬ್ಯಾಂಕ್ ನೋಟಿನ ಡಿಜಿಟಲ್ ರೂಪವೆಂದು ಹೇಳಬಹುದು.

ಡಿಜಿಟಲ್ ರುಪಾಯಿ ಬಳಕೆಯಿಂದ ಹಣದ ವ್ಯವಹಾರಗಳು ವೇಗವಾಗಿ ಮತ್ತು ಸುರಕ್ಷಿ ತವಾಗಿ ನಡೆಯುತ್ತದೆ. ಭವಿಷ್ಯದಲ್ಲಿ ಡಿಜಿಟಲ್ ಆರ್ಥಿಕತೆ ಬೆಳೆಯುತ್ತಿದ್ದಂತೆ ಜನರು ಹೆಚ್ಚು ಪ್ರಮಾಣದಲ್ಲಿ ಡಿಜಿಟಲ್ ಹಣವನ್ನು ಬಳಸುವ ಸಾಧ್ಯತೆ ಇದೆ.

ತಜ್ಞರ ಪ್ರಕಾರ ನಾವು ಹಣವನ್ನು ವಿಭಿನ್ನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಕಾಲದಲ್ಲಿ ನಮಗೆ ನಷ್ಟವಾಗುವುದನ್ನು ಕಡಿಮೆ ಮಾಡಬಹುದು. ಏಕೆಂದರೆ ಯಾವುದಾದರೂ ಒಂದು ಹೂಡಿಕೆಯಿಂದ, ಹಣದುಬ್ಬರ ಮತ್ತು ಸವಕಳಿಯಿಂದ ರುಪಾಯಿ ತನ್ನ ಮೌಲ್ಯವನ್ನು ಕಳೆದುಕೊಂಡರೂ, ಇತರೆ ಕ್ಷೇತ್ರದ ಹೂಡಿಕೆಗಳು ನಮಗೆ ಲಾಭ ತಂದುಕೊಡುವ ಸಾಧ್ಯತೆ ಇರುತ್ತದೆ.

ಮುಖ್ಯವಾಗಿ ದುಡಿಯುವ ಯುವಜನರು ಆದಷ್ಟು ಬೇಗ ಭವಿಷ್ಯದ 20-30ವರ್ಷಗಳ ಹಣದುಬ್ಬರ ಪ್ರಮಾಣವನ್ನು ಗಮನಿಸಿ, ವೇತನ, ಇತರೆ ಆದಾಯ, ಉಳಿತಾಯ ಮತ್ತು ಹೂಡಿಕೆಗಳ ಗುರಿಯನ್ನು ನಿಗದಿಪಡಿಸಿಕೊಳ್ಳುವುದು ಬಹುಮುಖ್ಯ. ನಾವು ನಮ್ಮ ಹೂಡಿಕೆ ಯನ್ನು ಹಣದುಬ್ಬರ ಮೀರಿ ಲಾಭ ತರುವ ಷೇರುಗಳ ಮೇಲೆ ಹೂಡಬೇಕು ಎನ್ನುವ ಅಭಿಪ್ರಾಯವೂ ಇದೆ.

ಇದರಿಂದ ಭವಿಷ್ಯದಲ್ಲಿ ನಮ್ಮ ಸಂಪತ್ತು ತನ್ನ ಖರೀದಿ ಮೌಲ್ಯವನ್ನು ಕಳೆದುಕೊಳ್ಳದೇ, ದೀರ್ಘಕಾಲೀನ ಆರ್ಥಿಕ ಭದ್ರತೆ ಮತ್ತು ಸ್ಥಿರ ಹಾಗೂ ಉತ್ತಮ ಜೀವನಶೈಲಿಯನ್ನು ಕಾಯ್ದುಕೊಳ್ಳಬಹುದು. ತಕ್ಷಣದ ಲಾಭದ ಆಸೆಗೆ ಹೂಡಿಕೆ ಮಾಡುವುದು ಅಥವಾ ಹೆಸರಿಗೆ ಹೂಡಿಕೆ ಮಾಡುವುದನ್ನು ನಿಲ್ಲಿಸಬೇಕು.

ಹಣದುಬ್ಬರವನ್ನು ಮೀರಿ ಸಂಪತ್ತನ್ನು ಹೆಚ್ಚಿಸಲು ದೀರ್ಘಕಾಲೀನ ಹೂಡಿಕೆ ಅತ್ಯಂತ ಮುಖ್ಯ. ವಿಶೇಷವಾಗಿ ನಿಫ್ಟಿ ಮತ್ತು ಬಿಎಸ್‌ಇ ಸೆನ್ಸೆಕ್ಸ್ ಮುಂತಾದ ಷೇರು ಮಾರುಕಟ್ಟೆಗಳು ಕಳೆದ ಹಲವು ದಶಕಗಳಲ್ಲಿ ದೀರ್ಘಕಾಲೀನವಾಗಿ ಉತ್ತಮ ಲಾಭವನ್ನು ನೀಡಿವೆ.

ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿ ಹೆಚ್ಚು ಸದ್ದು ಮಾಡುತ್ತಿದೆ. ಕ್ರಿಪ್ಟೋ ಕರೆನ್ಸಿಯ ಪ್ರಮುಖ ವೈಶಿಷ್ಟ್ಯವೆಂದರೆ ಇದು ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದಲ್ಲಿದ್ದು, ಕೆಲವು ಹೂಡಿಕೆ ದಾರರು ಇದನ್ನು ಭವಿಷ್ಯದ ಹಣಕಾಸು ವ್ಯವಸ್ಥೆಯ ಒಂದು ಪ್ರಮುಖ ಭಾಗವೆಂದು ಪರಿಗಣಿಸುತ್ತಾರೆ. ಆದರೆ ಕ್ರಿಪ್ಟೋ ಕರೆನ್ಸಿ ಹೂಡಿಕೆಗಳಲ್ಲಿ ದೊಡ್ಡ ಮಟ್ಟದ ಅಸ್ಥಿರತೆ ಇದೆ. ಈ ಕಾರಣದಿಂದಲೇ ಅನೇಕ ಆರ್ಥಿಕ ತಜ್ಞರು ಕ್ರಿಪ್ಟೋ ಕರೆನ್ಸಿಯನ್ನು ಹೆಚ್ಚು ಅಪಾಯ ಇರುವ ಹೂಡಿಕೆ ಎಂದು ಹೇಳುತ್ತಾರೆ.

ಭವಿಷ್ಯದಲ್ಲಿ ಡಿಜಿಟಲ್ ಆರ್ಥಿಕತೆಯ ವೃದ್ಧಿಯೊಂದಿಗೆ ಕ್ರಿಪ್ಟೋ ಕರೆನ್ಸಿಗಳು ಅಥವಾ ಇತರೆ ಡಿಜಿಟಲ್ ಆಸ್ತಿಗಳು ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಒಂದು ಪಾತ್ರ ವಹಿಸುವ ಸಾಧ್ಯತೆ ಇದೆ.

‘205೦ರಲ್ಲಿ 1 ಕೋಟಿ = 21 ಲಕ್ಷ’ ಎಂಬ ಮಾತು ಭವಿಷ್ಯದ ಖರೀದಿ ಶಕ್ತಿ ಅಥವಾ ಅಂದಿನ ರುಪಾಯಿಯ ನಿಜಮೌಲ್ಯ ಎನ್ನಬಹುದು. ಒಂದು ಅಂದಾಜಿನಂತೆ ಸರಾಸರಿ ಶೇ.67ರಷ್ಟು ವಾರ್ಷಿಕ ಹಣದುಬ್ಬರ ಮತ್ತು ಮುಂದಿನ 24 ವರ್ಷಗಳಲ್ಲಿ ಭಾರತದ ರುಪಾಯಿಯ ಸಂಭವನೀಯ ಸವಕಳಿಯನ್ನು ಈ ಲೆಕ್ಕಾಚಾರ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಜನರಿಗೆ ಈ ಕುರಿತು ಈಗಲೇ ಜಾಗೃತಿ ಹೆಚ್ಚಿಸುವುದು ಬಹುಮುಖ್ಯ.

ಭವಿಷ್ಯದ ಆರ್ಥಿಕ ಸ್ಥಿರತೆಗೆ ಕೇವಲ ಹಣ ಗಳಿಸುವುದು ಸಾಕಾಗುವುದಿಲ್ಲ. ಹಣವನ್ನು ಹೇಗೆ ಬೆಳೆಸಬೇಕು, ಯಾವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬೇಕು ಮತ್ತು ಹಣದುಬ್ಬರವನ್ನು ಹೇಗೆ ಎದುರಿಸಬೇಕು ಎಂಬ ಅರಿವು ಬಹಳ ಮುಖ್ಯ. ಶಾಲೆ ಮತ್ತು ಕಾಲೇಜು ಮಟ್ಟದಲ್ಲೇ ಹಣಕಾಸು ಶಿಕ್ಷಣ ನೀಡುವುದು ಅತ್ಯಂತ ಅಗತ್ಯವಾಗಿದೆ. ಇದು ಮುಂದಿನ ಪೀಳಿಗೆಗೆ ಆರ್ಥಿಕ ಭದ್ರತೆ ಸಾಧಿಸಲು ಸಹಾಯ ಮಾಡುತ್ತದೆ.

2050ರಲ್ಲಿ ಹಣದ ಖರೀದಿ ಶಕ್ತಿ ಇಳಿಯುವ ಸಾಧ್ಯತೆ ಇದ್ದರೂ, ಸರಿಯಾದ ಹಣಕಾಸು ಯೋಜನೆ, ವೈವಿಧ್ಯಮಯ ಹೂಡಿಕೆಗಳು, ತಂತ್ರಜ್ಞಾನದ ಅರಿವು ಮತ್ತು ಹಣಕಾಸು ಶಿಕ್ಷಣದ ಮೂಲಕ ಭವಿಷ್ಯದ ಆರ್ಥಿಕ ಸವಾಲುಗಳನ್ನು ಎದುರಿಸಲು ಸಾಧ್ಯ. ಹಣದ ನಿಜವಾದ ಮೌಲ್ಯವನ್ನು ಉಳಿಸಿಕೊಳ್ಳಲು ದೀರ್ಘಕಾಲೀನ ಯೋಜನೆ ಮತ್ತು ಜಾಗೃತಿಯೇ ಅತ್ಯಂತ ಮುಖ್ಯ.

(ಲೇಖಕರು ಸಹ-ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ)