Raghava Sharma Nidle Column: ಕುರ್ಚಿ ಕಾಳಗ: ದಿಲ್ಲಿ ಅಂಗಳದಲ್ಲಿ ಗೆದ್ದವರು ಯಾರು ?
ಕರ್ನಾಟಕದಲ್ಲಿ ಸಿದ್ದರಾಮಯ್ಯರ ಬದಲಿಗೆ ಹೊಸ ನಾಯಕತ್ವವನ್ನು ತರುವ ಉದ್ದೇಶ ರಾಹುಲ್ ಗಾಂಧಿಯಲ್ಲಿ ಖಂಡಿತಾ ಇಲ್ಲ ಎನ್ನುವುದು ಪ್ರಾರಂಭದಲ್ಲಿ ಕೇಳುತ್ತಿದ್ದ ಮಾತುಗಳು. ಇತರೆ ಹಿಂದುಳಿತ ವರ್ಗದ (ಒಬಿಸಿ) ಪ್ರಬಲ ನಾಯಕನೊಬ್ಬನನ್ನು ಅಧಿಕಾರದಿಂದ ಕೆಳಗಿಳಿಸಿ, ಪ್ರಭಾವಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರರನ್ನು ಮುಖ್ಯಮಂತ್ರಿ ಮಾಡಲು ರಾಹುಲ್ ಗಾಂಧಿ ಒಪ್ಪಿರಲಿಲ್ಲ.
-
ಜನಪಥ
ರಾಜ್ಯಸಭೆಯ 4 ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಮಾಡಲು ಬೆಳಗ್ಗಿನಿಂದ ಸಂಜೆ ತನಕ ಸಭೆ ನಡೆಸುವ ಅಗತ್ಯ ಇಲ್ಲ ಎನ್ನುವುದು ಸಾಮಾನ್ಯ ಜ್ಞಾನ. ಹಾಗಾಗಿ, ಸಿದ್ದರಾಮಯ್ಯ ಅವರ ಮನವೊಲಿಸಲು ರಾಹುಲ್ ಸೇರಿ ದಿಲ್ಲಿ ನಾಯಕರು ಪ್ರಯತ್ನ ಮಾಡಿರಬಹುದೇ ಎಂಬ ಸಹಜ ಅನುಮಾನ ಮೂಡಿದೆ.
ಕರ್ನಾಟಕದ ಮುಖ್ಯಮಂತ್ರಿ ಬದಲಾಗುತ್ತಾರಾ? ಸಿದ್ದರಾಮಯ್ಯ ರಾಜೀನಾಮೆ ಸನಿಹ ವಾಗುತ್ತಿದೆಯೇ? ಪಕ್ಷದ ಭವಿಷ್ಯದ ದೃಷ್ಟಿಯಿಂದ ಸಿಎಂ ರಾಜೀನಾಮೆ ಅನಿವಾರ್ಯ ವಾಗುವುದೇ ಅಥವಾ ಸಿದ್ದರಾಮಯ್ಯರ ಆಶಯದಂತೆ 5 ವರ್ಷದ ಮತ್ತೊಂದು ಅವಧಿ ಪೂರ್ಣಗೊಳಿಸಲು ಹೈಕಮಾಂಡ್ ಅವಕಾಶ ನೀಡುವುದೇ? ಹಾಗಿದ್ದರೆ 2.5 ವರ್ಷದ ಬಳಿಕ ಅಧಿಕಾರ ಹಸ್ತಾಂತರ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ʼಗೆ ಹೈಕಮಾಂಡ್ ಭರವಸೆ ನೀಡಿದ್ದು ಸುಳ್ಳೇ? ಸಿಎಂ ಹುದ್ದೆ ನೀಡದಿದ್ದರೆ ಶಿವಕುಮಾರ್ ಸುಮ್ಮನಿರುತ್ತಾರಾ? ಕಳೆದ ಆರೇಳು ತಿಂಗಳುಗಳಿಂದ ರಾಜ್ಯದಲ್ಲಿ ಹೆಚ್ಚು ಚರ್ಚೆ, ಗೊಂದಲ ಕ್ಕೀಡು ಮಾಡಿದ ಪ್ರಶ್ನೆಗಳಿವು.
ಕರ್ನಾಟಕದಲ್ಲಿ ಸಿದ್ದರಾಮಯ್ಯರ ಬದಲಿಗೆ ಹೊಸ ನಾಯಕತ್ವವನ್ನು ತರುವ ಉದ್ದೇಶ ರಾಹುಲ್ ಗಾಂಧಿಯಲ್ಲಿ ಖಂಡಿತಾ ಇಲ್ಲ ಎನ್ನುವುದು ಪ್ರಾರಂಭದಲ್ಲಿ ಕೇಳುತ್ತಿದ್ದ ಮಾತುಗಳು. ಇತರೆ ಹಿಂದುಳಿತ ವರ್ಗದ (ಒಬಿಸಿ) ಪ್ರಬಲ ನಾಯಕನೊಬ್ಬನನ್ನು ಅಧಿಕಾರ ದಿಂದ ಕೆಳಗಿಳಿಸಿ, ಪ್ರಭಾವಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರರನ್ನು ಮುಖ್ಯಮಂತ್ರಿ ಮಾಡಲು ರಾಹುಲ್ ಗಾಂಧಿ ಒಪ್ಪಿರಲಿಲ್ಲ.
ಕಳೆದ ಕೆಲ ವರ್ಷಗಳಿಂದ ದೇಶದ ಒಬಿಸಿ ಮತವರ್ಗವನ್ನು ಗುರಿಯಾಗಿಸಿಕೊಂಡು ರಾಜಕಾರಣ ಮಾಡುತ್ತಿರುವ ರಾಹುಲ್ ಗಾಂಧಿ, ರಾಜಕೀಯವಾಗಿ ಮಹತ್ವ ಹೊಂದಿರುವ ಕರ್ನಾಟಕದಲ್ಲಿ ಒಬಿಸಿ ನಾಯಕತ್ವವನ್ನು ಕೊನೆಗೊಳಿಸುವ ಅಪಕೀರ್ತಿಗೆ ಪಾತ್ರವಾಗುವ ಸಾಹಸಮಯ ತೀರ್ಮಾನವನ್ನು ನಾವು ಕೈಗೊಳ್ಳುವುದು ಬೇಡ.
ಸಿದ್ದರಾಮಯ್ಯ ಅವರೇ ರಾಜ್ಯವನ್ನು ಮುನ್ನಡೆಸಲಿ. ಡಿಕೆಶಿ ಅವರಿಗೆ ಇನ್ನೂ ಅವಕಾಶ ಗಳಿವೆ ಎಂಬುದಾಗಿ ಈ ಹಿಂದೆ ಕೂಡ ಸೂಚ್ಯವಾಗಿ ತಿಳಿಸಿದ್ದರು. ಆದರೆ ಬದಲಾದ ಸನ್ನಿವೇಶ ಹಾಗೂ ರಾಜ್ಯದಲ್ಲಿ ಪಕ್ಷ ಮತ್ತು ನಾಯಕತ್ವದ ಭವಿಷ್ಯದ ದೃಷ್ಟಿಯಿಂದ ರಾಹುಲ್ ಅಲೋಚನೆಯಲ್ಲಿ ಬದಲಾವಣೆ ಆಗಿದೆಯೇ ಎಂಬ ಮಾತುಗಳು ದಿಲ್ಲಿ ಅಂಗಳ ದಿಂದ ಕೇಳಿ ಬರುತ್ತಿದೆ.
ಇದನ್ನೂ ಓದಿ: Raghava Sharma Nidle Column: ರಾಹುಲ್ ಆಪ್ತನ ಸೋಲು ಕಾಂಗ್ರೆಸ್ʼನ ಗೆಲುವು !
ಮಂಗಳವಾರದ ಸುದೀರ್ಘ ಸಭೆಯಲ್ಲಿ ರಾಹುಲ್ ತಮ್ಮ ಹಿಂದಿನ ನಿಲುವನ್ನು ಪುನರು ಚ್ಚರಿಸಿದ್ದಾರೆ ಎಂದು ಸಿದ್ದರಾಮಯ್ಯ ಬೆಂಬಲಿಗ ವರ್ಗ ಹೇಳಿಕೊಂಡರೂ, ಸಿದ್ದು ರಾಜೀ ನಾಮೆ ನೀಡುವುದು ನಿಶ್ಚಿತ ಎಂದು ಡಿಕೆಶಿ ಆಪ್ತ ಬಳಗ ಒತ್ತಿ ಹೇಳುತ್ತಿದೆ.
ಬಿಹಾರ ಚುನಾವಣೆ ಸೋಲಿನ ನಂತರವಂತೂ ಒಬಿಸಿ ಮತವರ್ಗದ ವಿಚಾರದಲ್ಲಿ ರಾಹುಲ್ ತಮ್ಮ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದ್ದರು. ಈ ವಿಚಾರವನ್ನು ಡಿಕೆಶಿಗೂ ದಿಲ್ಲಿ ಪ್ರತಿನಿಧಿಗಳ ಮೂಲಕ ತಿಳಿಸಲಾಗಿತ್ತು. ಹಾಗಂತ ಡಿಕೆ ಅವರೇನೂ ಸನ್ಯಾಸಿಯಲ್ಲ. ಸಿಎಂ ಸ್ಥಾನ ಪಡೆಯುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ಒಬಿಸಿ, ಮೇಲ್ವರ್ಗದ ಲೆಕ್ಕಾಚಾರಗಳನ್ನು ಕರ್ನಾಟಕದೊಂದಿಗೆ ಹೋಲಿಸಿ, ನನ್ನ ಕೆಲಸ ಗಳನ್ನು ಕಡೆಗಣಿಸಬೇಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ದಿಲ್ಲಿ ನಾಯಕರಿಗೆ ಸ್ಪಷ್ಟಪಡಿಸುತ್ತಾ ಬಂದಿದ್ದಾರೆ. ಮಂಗಳವಾರ ದಿಲ್ಲಿಯಲ್ಲಿ ಅದನ್ನೇ ಮಾಡಿದ್ದಾರೆ.
ಒಂದು ವೇಳೆ ಸಿಎಂ ಬದಲಾವಣೆ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾದರೂ, ದಿಲ್ಲಿ ದೊರೆಗಳು ದಲಿತರೊಬ್ಬರನ್ನು ಸಿಎಂ ಮಾಡುತ್ತಾರೆಯೇ ವಿನಃ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ನಾಯಕತ್ವ ಕುರ್ಚಿಯನ್ನು ಹಸ್ತಾಂತರ ಮಾಡುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ಕೆಲ ಕಾಂಗ್ರೆಸ್ ನಾಯಕರ ಅಂಬೋಣ.
ಇಂಥದ್ದೊಂದು ಅಭಿಪ್ರಾಯಕ್ಕೆ ಕಾರಣವೂ ಇಲ್ಲದಿಲ್ಲ. ಸದ್ಯ ದೇಶದ 4 ರಾಜ್ಯಗಳಲ್ಲಷ್ಟೇ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿದ್ದು, ಮೂರು ರಾಜ್ಯಗಳಲ್ಲಿ ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿ ಗಳೇ ಮುಖ್ಯಮಂತ್ರಿಗಳಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೇರಳ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ವಿ.ಡಿ.ಸತೀಶನ್ ಅವರು ನಾಯರ್ ಸಮುದಾಯ, ತೆಲಂಗಾಣ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುತ್ತಿರುವ ರೇವಂತ ರೆಡ್ಡಿ ಅವರು ರೆಡ್ಡಿ ಸಮುದಾಯ ಹಾಗೂ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖ್ಖು ಅವರೂ ರಾಜ್ಯದ 35%ಗಿಂತಲೂ ಹೆಚ್ಚು ಜನಸಂಖ್ಯೆ ಇರುವ ರಜಪೂತ ಎಂಬ ಮೇಲ್ಜಾತಿಗೆ ಸೇರಿದ್ದಾರೆ.
ಕರ್ನಾಟಕದಲ್ಲಿ ಮಾತ್ರ ಒಬಿಸಿ ಸಮುದಾಯದ ನಾಯಕತ್ವಕ್ಕೆ ಪ್ರಾಧಾನ್ಯತೆ ಸಿಕ್ಕಿರುವು ದರಿಂದ, ಕಾಂಗ್ರೆಸ್ ರಾಷ್ಟ್ರಾದ್ಯಂತ ಎದುರಿಸುತ್ತಿರುವ ಸವಾಲಿನ ರಾಜಕೀಯ ಸನ್ನಿವೇಶ ದಲ್ಲಿ ಒಬಿಸಿ ಮತಗಳನ್ನು ಡಿಸ್ಟರ್ಬ್ ಮಾಡುವುದು ಜೇನುಗೂಡಿಗೆ ಕೈ ಹಾಕಿದಂತಾಗಲಿದೆ.
ರಾಜ್ಯ ಕಾಂಗ್ರೆಸ್‌ನ್ನ ಬಹುಪಾಲು ಶಾಸಕರು ನನ್ನ ಬೆಂಬಲಕ್ಕಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳಬಹುದು. ಆದರೆ, ಹೈಕಮಾಂಡ್ ಒಲವು ಡಿಕೆಶಿ ಕಡೆ ವಾಲುತ್ತಿದೆ ಎಂಬ ಸಣ್ಣ ಸುಳಿವು ಸಿಕ್ಕರೂ ಬಹುಪಾಲು ಶಾಸಕರು ತಮ್ಮ ಒಲವನ್ನೂ ಡಿಕೆಶಿ ಕಡೆ ಶಿಫ್ಟ್ ಮಾಡುತ್ತಾರೆ. ಅವರು ತಮ್ಮ ಭವಿಷ್ಯ ನೋಡುತ್ತಾರೆಯೇ ವಿನಃ ನಿರ್ಗಮಿಸುವ ನಾಯಕನೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಆದರೆ, ಹೈಕಮಾಂಡ್ ಸಿದ್ದರಾಮಯ್ಯರ ಜತೆಗಿದೆ ಎಂಬ ನರೇಟಿವ್ ಚಾಲ್ತಿಯಲ್ಲಿದ್ದು, ಅವರು ಪೂರ್ಣಾವಧಿಗೆ ಸಿಎಂ ಆಗಿ ಇರುತ್ತಾರೆ ಎಂಬ ಚರ್ಚೆಗಳಿವೆ. ಹೀಗಿದ್ದಾಗ, ಸಿದ್ದರಾಮಯ್ಯರೊಂದಿಗೆ ಗುರುತಿಸಿಕೊಳ್ಳುವುದು ಶಾಸಕರಿಗೂ ಅನಿವಾರ್ಯ.
ದೆಹಲಿಯಲ್ಲಿ ನಡೆದ ರಾಜಕೀಯ ಸರ್ಕಸ್, ಸುದೀರ್ಘ ಸಭೆಗಳು, ಸಿಎಂ ಸಿದ್ದರಾಮಯ್ಯರ ವಾದಗಳನ್ನು ಕೇಳುವುದು ಹಾಗೂ ಡಿಕೆ ಅವರನ್ನು ಸಮಾಧಾನಪಡಿಸುವ ಜತೆಗೆ ರಾಷ್ಟ್ರ ರಾಜಕೀಯ ಸಮೀಕರಣಗಳ ಮನವರಿಕೆ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಸಿದ್ದರಾಮಯ್ಯ ಅವರನ್ನು ರಾಜ್ಯಸಭೆ ಸದಸ್ಯರಾಗಿ ಬನ್ನಿ ಎಂಬ ಆಹ್ವಾನ ನೀಡಲಾಗಿದ್ದು, ಅವರು ಅದನ್ನು ತಿರಸ್ಕರಿಸಿರುವ ಮಾಹಿತಿಯಿದೆ. 2 ವರ್ಷ ನಾನು ಸಿಎಂ ಆಗಿರುತ್ತೇನೆ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯರು ರಾಹುಲ್‌ಗೆ ನೇರವಾಗಿ ತಿಳಿಸಿದ್ದಾರೆ.
ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಗಳ ಪ್ರಾಥಮಿಕ ಹಂತದ ಚರ್ಚೆಗಳೂ ನಡೆದಿದ್ದರೂ, ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನ ಭದ್ರಗೊಳಿಸುವುದಕ್ಕೆ ಒತ್ತು ನೀಡಿದ್ದಾರೆ.
ಮಂಗಳವಾರ ಸಂಜೆ ಕೆಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಾಂಗ್ರೆಸ್ ಕೇಂದ್ರ ಕಚೇರಿ ಎದುರು ಮಾಧ್ಯಮಗಳ ಮುಂದೆ ನಾಯಕತ್ವದ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿದರೂ, ಹೊಸ ಸಿಎಂ ಬರುತ್ತಾರೋ ಇಲ್ಲವೋ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ.
ಹೀಗಾಗಿ, ನಾಯಕತ್ವ ಬದಲಾವಣೆ ಚರ್ಚೆ ಸದ್ಯಕ್ಕೆ ಹಾಗೆಯೇ ಉಳಿದುಕೊಂಡಿದೆ. ರಾಜ್ಯ ಸಭೆಯ 4 ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಮಾಡಲು ಬೆಳಗ್ಗಿನಿಂದ ಸಂಜೆ ತನಕ ಸಭೆ ನಡೆಸುವ ಅಗತ್ಯ ಇಲ್ಲ ಎನ್ನುವುದು ಸಾಮಾನ್ಯ ಜ್ಞಾನ. ಹಾಗಾಗಿ, ಸಿದ್ದರಾಮಯ್ಯರ ಮನವೊಲಿಸಲು ರಾಹುಲ್ ಸೇರಿ ದಿಲ್ಲಿ ನಾಯಕರು ಪ್ರಯತ್ನ ಮಾಡಿರಬಹುದೇ ಎಂಬ ಸಹಜ ಅನುಮಾನ ಮೂಡಿದೆ.
ಸಿದ್ದರಾಮಯ್ಯ ಇನ್ನು ಸಿಎಂ ಆಗಿ ಮುಂದುವರಿಯಬಾರದು, ಒಟ್ಟು 8 ವರ್ಷ ಅವರು ಆ ಹುzಯಲ್ಲಿರುವುದಕ್ಕೆ ನಾವು ಸಹಕಾರ ನೀಡಿಲ್ಲವೇ ಎಂದು ಪ್ರಶ್ನಿಸುತ್ತಿರುವ ಶಿವಕುಮಾರ್‌ಗೆ 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಖಚಿತತೆ ಈಗ ಇಲ್ಲ. ನನಗೆ ನಾಯಕತ್ವ ನೀಡಿದ ರಷ್ಟೇ ಶಕ್ತಿಮೀರಿ ಪ್ರಯತ್ನಿಸಬ ಎಂದಿದ್ದಾರೆ. ಈಗ ಸಿಎಂ ಆಗದಿದ್ದರೆ ಮುಂದೆಯೂ ಇಲ್ಲ ಎಂಬ ಸ್ಪಷ್ಟ ನಿಲುವಿಗೆ ಅವರು ಬಂದಂತಿದೆ. ಈ ಮಧ್ಯೆ ಸಿದ್ದರಾಮಯ್ಯ ಕೆಳಗಿಳಿದರೂ, ಶಿವಕುಮಾರ್ ಯಾವುದೇ ಕಾರಣಕ್ಕೆ ಮುಖ್ಯಮಂತ್ರಿಯಾಗಬಾರದು ಎಂದು ಸಿದ್ದರಾಮಯ್ಯ ರ ಬೆಂಬಲಿಗರು ಹೋರಾಟ ಮಾಡುತ್ತಿದ್ದಾರೆ.
ಸಿಎಂ-ಡಿಸಿಎಂ ಒಗ್ಗಟ್ಟು ಸಾರ್ವಜನಿಕ ವೇದಿಕೆಗಳಿಗಳಿಗಷ್ಟೇ ಸೀಮಿತ. ಈ ತಿಕ್ಕಾಟ ಭವಿಷ್ಯ ದಲ್ಲೂ ಮುಂದುವರಿಯಬಹುದು. ಬಹಳ ಅಪರೂಪಕ್ಕೆ ಬಹುಮತ ಪಡೆದ ಸರ್ಕಾರ ವೊಂದು, ಅಭಿವೃದ್ಧಿಯಲ್ಲಿ ಹಿಂದೆ ಬೀಳುವ ಜತೆಗೆ, ನಾಯಕತ್ವದ ಬಿಕ್ಕಟ್ಟಿನೊಂದಿಗೆ ಜನರನ್ನೂ ಗೊಂದಲದಲ್ಲಿ ಸಿಲುಕಿಸಿರುವುದು ರಾಜ್ಯದ ದುರ್ದೈವ ಎನ್ನದೆ ವಿಧಿಯಿಲ್ಲ.
ಜೈರಾಮ್, ಮಾಕೆನ್ ಕೊಡುಗೆಯೇನು?
ರಾಜ್ಯದಿಂದ ನಾಲ್ಕು ರಾಜ್ಯಸಭೆ ಸೀಟುಗಳು ಖಾಲಿಯಾಗುತ್ತಿರುವ ಮಧ್ಯೆ ಕಾಂಗ್ರೆಸ್ ನಾಯಕ ಪವನ್ ಖೇರಾ ಮತ್ತು ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನಾತೆ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶ ಮಾಡುವ ಯತ್ನದಲ್ಲಿದ್ದಾರೆ. ಈಗಾಗಲೇ ಮಾಜಿ ಕೇಂದ್ರ ಸಚಿವ ಅಜಯ್ ಮಾಕೆನ್ ಮತ್ತು ಜೈರಾಮ್ ರಮೇಶ್ ಅವರು ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿದ್ದು, ಕರ್ನಾಟಕದ ಮಟ್ಟಿಗೆ ಅವರದ್ದು ಶೂನ್ಯ ಸಂಪಾದನೆ.
ಕರ್ನಾಟಕದ ಜ್ವಲಂತ ವಿಚಾರಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾಗಲೀ, ಕರ್ನಾಟಕ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾಗಲೀ, ರಾಜ್ಯದ ಬೇಡಿಕೆ ಗಳನ್ನು ಕೇಂದ್ರದ ಮುಂದಿಟ್ಟು ಪ್ರಭಾವ ಬೀರಿರುವ ಉದಾಹರಣೆ ಇದೆಯೇ ಎಂದು ಹುಡುಕಾಡುವ ಪರಿಸ್ಥಿತಿ ಇದೆ.
ಹೀಗಿದ್ದಾಗ, ಪವನ್ ಖೇರಾ ಅಥವಾ ಸುಪ್ರಿಯಾ ಶ್ರೀನಾತೆ ಹೆಸರು ಪ್ರಸ್ತಾಪವಾಗುವುದೇ ತಪ್ಪು. ರಾಜ್ಯದ ಹಿತಾಸಕ್ತಿಗಾಗಿ ದುಡಿಯದ ವ್ಯಕ್ತಿಗಳಿಗೆ ರಾಜ್ಯಸಭೆ ಸದಸ್ಯತ್ವ ನೀಡುವ ದರ್ದು ರಾಜಕೀಯ ಪಕ್ಷಗಳಿಗೆ ಬರಬಾರದು. ಅಷ್ಟರಮಟ್ಟಿಗೆ ಪಕ್ಷಗಳು ದಿಲ್ಲಿ ನಾಯಕರ ಮುಂದೆ ತಮ್ಮ ಸ್ವಾಭಿಮಾನವನ್ನು ಪ್ರದರ್ಶಿಸಬೇಕು. ಅನ್ಯ ರಾಜ್ಯದವರನ್ನು ಕರ್ನಾಟಕ ದಿಂದ ರಾಜ್ಯಸಭೆಗೆ ಕಳುಹಿಸುವ ಕೆಟ್ಟ ಪರಂಪರೆ ನಮಗೆ ಹೊಸತೇನಲ್ಲ. ಆದರೆ, ತಮ್ಮನ್ನು ಆಯ್ಕೆ ಮಾಡಿದ ರಾಜ್ಯಕ್ಕೆ ನಿಷ್ಠರಾಗಿ ಕೆಲಸ ಮಾಡಿದವರನ್ನು ದುರ್ಬೀನು ಹಾಕಿ ಹುಡುಕ ಬೇಕಿದೆ.
ರಾಜ್ಯಸಭೆ ಸದಸ್ಯತ್ವ ಪಡೆಯಲು ರಾಜ್ಯದ ಮೇಲೆ ಪ್ರೀತಿ, ಅಭಿಮಾನ ತೋರುವುದು ಬಿಟ್ಟರೆ ಜನರ ಮೇಲೆ ಅವರಿಗೆ ನೈಜ ಕಾಳಜಿ ಇರುವುದಿಲ್ಲ. ಅಷ್ಟೇ ಅಲ್ಲ, ಅನರ್ಹರನ್ನು ರಾಜ್ಯಸಭೆ ಯಂತಹ ಘನ ಚಿಂತಕರ ವೇದಿಕೆಗೆ ಕಳುಹಿಸಿಕೊಡುವುದು ಕೂಡ ಜನರಿಗೆ ವಂಚಿಸಿದಂತೆ. ಬಿಜೆಪಿಯಿಂದ ಆಯ್ಕೆಯಾದ ಕೊರಗಪ್ಪ ನಾರಾಯಣ, ಈರಣ್ಣ ಕಡಾಡಿ, ಜಗ್ಗೇಶ್ ರಾಜ್ಯ ಸಭೆ ಸದಸ್ಯರಾಗಿ ಏನು ಕೊಡುಗೆ ನೀಡಿದ್ದಾರೆ ಎಂಬ ಪ್ರಶ್ನೆ ನನ್ನಂತೆ ಅನೇಕರನ್ನು ಕಾಡುತ್ತದೆ. ಇದೇ ಕಾರಣಕ್ಕೆ, ಇಂಥವರನ್ನು ಯಾಕಾದರೂ ಆಯ್ಕೆ ಮಾಡುತ್ತಾರಪ್ಪಾ ಎಂದು ಬಿಜೆಪಿಯವರೇ ಕೊರಗುತ್ತಾರೆ. ಇವರೆಲ್ಲ ರಾಜ್ಯಸಭೆ ಸದಸ್ಯರಾಗಿ ಕರ್ನಾಟಕದ ಪರ ಮಾಡಿದ ತಮ್ಮ ಸಾಧನೆಗಳ ಪಟ್ಟಿಯನ್ನು ಆಗಾಗ ಪ್ರಕಟಪಡಿಸಿದರೆ, ಸಾರ್ವಜನಿಕ ರಲ್ಲಿರುವ ಅನುಮಾನವಾದರೂ ಬಗೆಹರಿಯುತ್ತದೆ..!
ವಿಜಯೇಂದ್ರ ಸೇಫ್?
ಮಾಜಿ ಸಿಎಂ ಯಡಿಯೂರಪ್ಪ ಅಭಿಮಾನೋತ್ಸವದ ಯಶಸ್ಸಿನ ಬಗ್ಗೆ ಗೃಹ ಸಚಿವ ಅಮಿತ್ ಶಾ ಕೂಡ ಖುಷಿಯಾಗಿರುವುದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವಕ್ಕೆ ಪ್ಲಸ್ ಪಾಯಿಂಟ್ ಆಗಿರುವ ಮಧ್ಯೆ, ಕೆಲ ದಿನಗಳ ಹಿಂದೆ ದಿಲ್ಲಿಯಿಂದ ಬಂದ ವರಿಷ್ಠ ನಾಯಕರು ರಾಜ್ಯ ಬಿಜೆಪಿಯ 30 ನಾಯಕರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿ ನಾಯಕತ್ವ ಹಾಗೂ ಪಕ್ಷದ ಒಟ್ಟಾರೆ ಸ್ಥಿತಿ-ಗತಿ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.
ವಿಜಯೇಂದ್ರರ ನಾಯಕತ್ವಕ್ಕೆ ರಾಜ್ಯ ಬಿಜೆಪಿಯ ಕೆಲವರಿಗೆ ಅಸಮಾಧಾನಗಳಿದ್ದರೂ, ಸಂಪನ್ಮೂಲ ಕ್ರೋಢೀಕರಣ ಹಾಗೂ ಪ್ರಬಲ ಲಿಂಗಾಯತ ಜಾತಿ ಸಮೀಕರಣಗಳ ವಿಷಯ ಬಂದಾಗ ಮಾಜಿ ಬಿಎಸ್‌ವೈ ಹಾಗೂ ಅವರ ಪುತ್ರನ ಪ್ರಭಾವಳಿ ಕಡೆಗಣಿಸಲು ಸಾಧ್ಯವಿಲ್ಲ. ಹಿಂದುತ್ವದ ಆಧಾರದಲ್ಲಿ ಮತ ನೀಡಿ ಎಂದು ಬಿಜೆಪಿ ಪ್ರಚಾರ ಮಾಡಿದರೂ, ರಾಜ್ಯದ ಬಹುಪಾಲು ಲಿಂಗಾಯತ ಮತಬ್ಯಾಂಕ್ ಜಾತಿ ನೋಡಿ ಮತ ಹಾಕುತ್ತದೆಯೇ ವಿನಃ ಹಿಂದುತ್ವದ ಆಧಾರದಲ್ಲಿ ಮತದಾನ ಮಾಡುವುದಿಲ್ಲ ಎಂಬ ವಾಸ್ತವ ವರದಿಯೂ ದಿಲ್ಲಿ ವರಿಷ್ಠರ ಮುಂದಿದೆ.
ಹೀಗಾಗಿ, ಚುನಾವಣೆಗೆ 2 ವರ್ಷವಿದ್ದಾಗ ಹೊಸ ನಾಯಕತ್ವ ತರುವುದು ಬಿಜೆಪಿ ಹಾದಿ ಯನ್ನು ಮತ್ತಷ್ಟು ಕಠಿಣಗೊಳಿಸಬಹುದು. ಆದರೂ, ರಾಜ್ಯ ನಾಯಕತ್ವದ ಬಗ್ಗೆ ಪ್ರಮುಖ ಶಾಸಕ, ಸಂಸದರಿಂದ ಅಧಿಕೃತವಾಗಿ ಮಾಹಿತಿ, ಅನಿಸಿಕೆ ಪಡೆಯುವ ಡೆಮಾಕ್ರಟಿಕ್ ನಡೆಯನ್ನು ಅನುಸರಿಸಲಾಗಿದೆ. ಕನಿಷ್ಠಪಕ್ಷ ನಮ್ಮ ಅನಿಸಿಕೆಯನ್ನಾದರೂ ಕೇಳಬಹು ದಿತ್ತು ಎಂಬ ಬೇಸರ ಇತರೆ ನಾಯಕರಲ್ಲಿ ಇರಬಾರದು ಎಂಬ ಕಾರಣಕ್ಕಾಗಿ ಈ ಪ್ರಕ್ರಿಯೆ ನಡೆಸಿರಲೂಬಹುದು.