R T Vittalmurthy Column: ಸಿದ್ದು ಕೋಟೆಗೆ ಜಮೀರ್ ಎಂಟ್ರಿಯಾದರು
ಯಾವಾಗ ಅವರು ಇಂತಹ ಒತ್ತಡ ಹೇರಿದರೋ? ಆಗ ವರಿಷ್ಟರಿಗೂ ಬೇರೆ ದಾರಿ ಕಾಣಲಿಲ್ಲ. ಯಾಕೆಂದರೆ ಈಗಷ್ಟೇ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದೇವೆ. ಹೀಗಿರುವಾಗ ಜಮೀರ್ ವಿಷಯದಲ್ಲಿ ಅವರಾಡಿದ ಮಾತನ್ನು ಕೇಳದಿದ್ದರೆ ಕಿರಿಕಿರಿ ಶುರುವಾಗಬಹುದು ಎಂಬುದು ಅವರ ಯೋಚನೆ.
-
ಮೂರ್ತಿಪೂಜೆ
ಕಳೆದ ವಾರ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಅವರು ದಿಲ್ಲಿಗೆ ಹೋಗಿದ್ದಾರೆ. ಹೀಗೆ ಹೋದವರು ಪಕ್ಷದ ರಾಷ್ಟ್ರಿಯ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ನೇರವಾಗಿ ವಿಷಯ ಪ್ರಸ್ತಾಪಿಸಿದ ಜಮೀರ್ ಅಹ್ಮದ್ ಖಾನ್ ಅವರು; ‘ಸಾರ್, ನೀವು ಹೇಳಿದಂತೆ ಸಿದ್ದರಾಮಯ್ಯ ಸಾಹೇಬರ ಜತೆ ವಿವರವಾಗಿ ಮಾತನಾಡಿದ್ದೇನೆ. ಸತ್ಯ ಏನು ಅಂತ ವಿವರಿಸಿದ್ದೇನೆ. ಅವರಿಗೂ ನನ್ನ ಮಾತಿನಿಂದ ಕನ್ವಿನ್ಸ್ ಆಗಿದೆ’ ಎಂದು ಹೇಳಿದ್ದಾರೆ.
ಯಾವಾಗ ಅವರು ಈ ಮಾತು ಹೇಳಿದರೋ? ಆಗ ಕೆ.ಸಿ.ವೇಣುಗೋಪಾಲ್ ಅವರು ಯತೀಂದ್ರ ಸಿದ್ದರಾಮಯ್ಯ ಅವರ ಕಡೆ ತಿರುಗಿ ನೋಡಿದ್ದಾರೆ. ಅವರು ತಮ್ಮತ್ತ ತಿರುಗಿದ ಕೂಡಲೇ ಯತೀಂದ್ರ ಅವರೂ ಜಮೀರ್ ಅಹ್ಮದ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿ: ‘ಹೌದು ಸಾರ್, ಜಮೀರ್ ಅಹ್ಮದ್ ಅವರ ವಿಷಯದಲ್ಲಿ ನಮ್ಮ ತಂದೆಯವರಿಗಿದ್ದ ಭಿನ್ನಾಭಿಪ್ರಾಯ ನಿವಾರಣೆಯಾಗಿದೆ.
ಹೀಗಾಗಿ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ’ ಎಂದಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ? ಆಗ ಹಸನ್ಮುಖಿಯಾದ ಕೆ.ಸಿ.ವೇಣುಗೋಪಾಲ್ ಅವರು: ‘ಒಂದು ದೊಡ್ಡ ಸಮಸ್ಯೆ ಬಗೆಹರಿದಂತಾಯಿತು. ಇನ್ನು ಮುಂದೆ ಇಂತಹ ಗೊಂದಲಗಳಿಗೆ ಆಸ್ಪದವಾಗದಂತೆ ನೋಡಿಕೊಳ್ಳಿ ಜಮೀರ್ ಭಾಯ್’ ಅಂದಿದ್ದಾರೆ.
ಇದನ್ನೂ ಓದಿ: R T Vittalmurthy Column: ಅಹಿಂದ ಸೈನ್ಯಕ್ಕೆ ರಾಜಣ್ಣ ಫೆವಿಕಾಲ್
ಆಗ ಜಮೀರ್ ಅಹ್ಮದ್ ಅವರು: ‘ಇಲ್ಲ ಸಾರ್, ಇನ್ನು ಮುಂದೆ ಇಂತಹ ಕಮ್ಯುನಿಕೇಷನ್ ಗ್ಯಾಪ್ ಆಗದಂತೆ ನೋಡಿಕೊಳ್ಳುತ್ತೇನೆ ಸಾರ್. ಈ ವಿಷಯದಲ್ಲಿ ನಾನು ನಿಮಗೂ ಥ್ಯಾಂಕ್ಸ್ ಹೇಳುತ್ತೇನೆ. ಯಾಕೆಂದರೆ ನೀವು ಕೊಟ್ಟ ಸಲಹೆ-ಮಾರ್ಗದರ್ಶನ ತುಂಬ ದೊಡ್ಡದು’ ಎಂದಿದ್ದಾರೆ.
ಅರ್ಥಾತ್, ಈ ಎಪಿಸೋಡಿನ ಮೂಲಕ ಕಳೆದ ಐದಾರು ತಿಂಗಳುಗಳಿಂದ ಉರಿಯುತ್ತಿದ್ದ ಸಿದ್ದು-ಜಮೀರ್ ನಡುವಣ ವೈಮನಸ್ಯ ಬಹುತೇಕ ತಣ್ಣಗಾದಂತಾಗಿದೆ. ಅಂದ ಹಾಗೆ ದಾವಣಗೆರೆ ವಿಧಾನಸಭೆ ಕ್ಷೇತ್ರದ ಉಪಚು ನಾವಣೆಯ ನಂತರ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ವಿರುದ್ಧ ತಿರುಗಿ ಬಿದ್ದಿದ್ದರು. ತಮ್ಮ ನಾಯಕತ್ವಕ್ಕೆ ಕೆಟ್ಟ ಹೆಸರು ತರಲೆಂದೇ ಜಮೀರ್ ಅಹ್ಮದ್ ಅವರು ದಾವಣಗೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಕೆಲಸ ಮಾಡಿದರು. ಇದಕ್ಕಾಗಿ ಕಾಂಗ್ರೆಸ್ ವಿರೋಧಿ ಶಕ್ತಿಗಳಿಗೆ ನೆರವು ನೀಡಿದರು ಎಂಬುದು ಸಿದ್ಧರಾಮಯ್ಯ ಅವರ ಸಿಟ್ಟು. ಆದರೆ ಅವರ ಈ ಸಿಟ್ಟು ಜಾರಿಯಲ್ಲಿರುವಾಗಲೇ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರ ಖುರ್ಚಿಗೆ ಗಡಪಾರೆ ಹಾಕಿದರು.
ಮತ್ತದರ ಫಲವಾಗಿ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದರು. ಆದರೆ ಹೀಗೆ ಸಿಎಂ ಹುದ್ದೆಯಿಂದ ಕೆಳಗಿಳಿಯುವ ಹೊತ್ತಿಗೆ ಸಿದ್ದರಾಮಯ್ಯ ಅವರ ಕಿವಿಗೆ ಬಿದ್ದ ಮತ್ತೊಂದು ವಿಷಯವೆಂದರೆ: ‘ಡಿಕೆಶಿ ಸಿಎಂ ಆಗಲು ಜಮೀರ್ ಅಹ್ಮದ್ ಕೂಡಾ ಒತ್ತಾಸೆ ನೀಡಿದ್ದರು ಮತ್ತು ಇದೇ ಕಾರಣಕ್ಕಾಗಿ ನಿಮ್ಮ ವಿರುದ್ಧ ಮಹತ್ವದ ದಾಖಲೆಗಳನ್ನು ಒದಗಿಸಿದ್ದರು ಎಂಬುದು. ಯಾವಾಗ ಈ ವಿಷಯ ಕಿವಿಗೆ ಬಿತ್ತೋ? ಆಗ ಕೆರಳಿ ಕೆಂಡವಾದ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲೇಬಾರದು ಅಂತ ವರಿಷ್ಠರ ಮೇಲೆ ಒತ್ತಡ ಹೇರಿದರು.
ಯಾವಾಗ ಅವರು ಇಂತಹ ಒತ್ತಡ ಹೇರಿದರೋ? ಆಗ ವರಿಷ್ಟರಿಗೂ ಬೇರೆ ದಾರಿ ಕಾಣಲಿಲ್ಲ. ಯಾಕೆಂದರೆ ಈಗಷ್ಟೇ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದೇವೆ. ಹೀಗಿರುವಾಗ ಜಮೀರ್ ವಿಷಯದಲ್ಲಿ ಅವರಾಡಿದ ಮಾತನ್ನು ಕೇಳದಿದ್ದರೆ ಕಿರಿಕಿರಿ ಶುರುವಾಗಬಹುದು ಎಂಬುದು ಅವರ ಯೋಚನೆ. ಹೀಗಾಗಿಯೇ ಮುಸ್ಲಿಂ ಸಮುದಾಯದ ಟಾಲೆಸ್ಟ್ ಲೀಡರು ಅನ್ನಿಸಿಕೊಂಡು ಕಾಲರ್ ಪಟ್ಟಿ ಮೇಲೇರಿಸಿಕೊಳ್ಳುತ್ತಿದ್ದ ಜಮೀರ್ ಅಹ್ಮದ್ ಅವರು ಮೊದಲ ಕಂತಿನ ಸಂಪುಟದಲ್ಲಿ ಮಂತ್ರಿಯಾಗಲಿಲ್ಲ. ಆದರೆ ಎರಡನೇ ಕಂತಿನ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಂತ್ರಿಯಾಗಲು ಜಮೀರ್ ಅಹ್ಮದ್ ಕಸರತ್ತು ನಡೆಸುತ್ತಿದ್ದಾಗ ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಜಮೀರ್ ಅಹ್ಮದ್ ಅವರಿಗೆ: ‘ನೀವು ಮಂತ್ರಿ ಅಗಬೇಕು ಎಂಬುದು ನನ್ನಿಚ್ಛೆ. ಆದರೆ ನೀವು ಮಂತ್ರಿ ಮಂಡಲ ಸೇರುವುದನ್ನು ಸಿದ್ದರಾಮಯ್ಯ ಅವರು ಒಪ್ಪಬೇಕು. ಹೀಗಾಗಿ ನೀವು ಅವರ ಬಳಿ ಮಾತನಾಡಿ. ಏನೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಸರಿಪಡಿಸಿಕೊಳ್ಳಿ’ ಎಂದಿದ್ದಾರೆ.
ಅದರ ಪ್ರಕಾರ ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯ ಬಳಿ ಮಾತನಾಡಿದರೂ ಅವರು ಜಪ್ಪಯ್ಯ ಅಂದಿಲ್ಲ. ಆದರೆ ಇದು ಗೊತ್ತಾಗುತ್ತಿದ್ದಂತೆಯೇ ಆಕ್ಟಿವ್ ಅದ ಸಿದ್ದು ವಿರೋಧಿ ಬಣ: ‘ಜಮೀರ್ ಪರವಾಗಿ ಬ್ಯಾಟಿಂಗ್ ಮಾಡತೊಡಗಿದೆ. ಈಗ ಸಿದ್ದು ಕ್ಯಾಂಪಿನಿಂದ ಜಮೀರ್, ಜಾರಕಿಹೊಳಿ ಮತ್ತು ಹೆಚ್.ಸಿ.ಮಹದೇವಪ್ಪ ದೂರವಾಗಿದ್ದು, ಈ ಸಂದರ್ಭದಲ್ಲಿ ನಾವು ಜಮೀರ್ ಪರವಾಗಿದ್ದರೆ, ಈ ಅಂತರ ಮತ್ತಷ್ಟು ಹೆಚ್ಚುತ್ತದೆ ಎಂಬ ಲೆಕ್ಕಾಚಾರದೊಂದಿಗೆ ದಾಳ ಉರುಳಿಸಿದ ಅದು, ಫೈನಲಿ ಜಮೀರ್ ಎರಡನೇ ಕಂತಿನ ಸಂಪುಟ ವಿಸ್ತರಣೆಯಲ್ಲಿ ಜಾಗ ಪಡೆಯಲು ಸಪೋರ್ಟು ಮಾಡಿದೆ. ಅದರೆ ಈ ಬೆಳವಣಿಗೆ ಯಾವಾಗ ನಡೆಯಿತೋ? ಆಗ ಸಿದ್ದರಾಮಯ್ಯ ಮತ್ತಷ್ಟು ಕುದಿಯತೊಡಗಿದ್ದಾರಲ್ಲದೆ, ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡಿ ಅಂತ ವರಿಷ್ಠರು ಸೂಚಿಸಿದರೆ: ‘ಜಮೀರ್ ಅಹ್ಮದ್ ಸಂಪುಟದಲ್ಲಿರುವವರೆಗೆ ಅದು ಸಾಧ್ಯವಿಲ್ಲ’ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟಿದ್ದಾರೆ.
ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು: ‘ಸಾರ್, ಬಾಕಿ ಉಳಿದಿರುವ ಎರಡು ಸೀಟುಗಳನ್ನು ಭರ್ತಿ ಮಾಡುವ ಸಂಬಂಧ ವರಿಷ್ಠರ ಬಳಿ ಮಾತನಾಡೋಣ. ಡೆಲ್ಲಿಗೆ ಹೋಗಿ ಬರೋಣ’ ಎಂದರೆ ಮೊದಲು ಜಮೀರ್ ಕೇಸು ಸೆಟ್ಲ್ ಮಾಡಿಕೊಂಡು ಬನ್ನಿ. ಆಮೇಲೆ ಬಾಕಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮಾತನಾಡೋಣ ಎಂದಿದ್ದಾರೆ.
ಯಾವಾಗ ಪರಿಸ್ಥಿತಿ ಈ ಲೆವೆಲ್ಲಿಗೆ ಹೋಯಿತೋ? ಆಗ ಸಿದ್ದು ಬ್ರಿಗೇಡ್‌ನ ಪ್ರಮುಖರಾದ, ಮಾಜಿ ಸಚಿವ ಕೆ.ಎನ್.ರಾಜಣ್ಣ ಫೀಲ್ಡಿಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎಂಟ್ರಿಯ ಜತೆಗೆ ಯತೀಂದ್ರ ಅವರೂ ಸೇರಿಕೊಂಡು ಅಹಿಂದ ನಾಯಕರ ಮರು ಒಗ್ಗೂಡುವಿಕೆಗೆ ಚಾಲನೆ ನೀಡಿದ್ದಾರೆ. ಇದರ ಪರಿಣಾಮವಾಗಿಯೇ ಜಮೀರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಜಮೀರ್ ಹೇಳಿದ ಆ ರಹಸ್ಯ
ಅಂದ ಹಾಗೆ ತಮ್ಮನ್ನು ಬೇಟಿಯಾದ ಜಮೀರ್ ಅಹ್ಮದ್ ಅವರಿಗೆ ಸಿದ್ದರಾಮಯ್ಯ ಅವರು ನೇರವಾಗಿ ಪ್ರಶ್ನಿಸಿದ್ದಾರೆ.
‘ಅಲ್ರೀ ಜಮೀರ್. ನಿಮ್ಮನ್ನು ಅಲ್ಪಸಂಖ್ಯಾತರ ಟಾಪ್ ಮೋಸ್ಟ್ ಲೀಡರು ಮಾಡಲು ಯತ್ನಿಸಿದೆನಲ್ಲ? ಆದರೆ ಅದಕ್ಕೆ ಪ್ರತಿಯಾಗಿ ನೀವು ಮಾಡಿದ್ದೇನು? ದಾವಣಗೆರೆ ಬೈ ಎಲೆಕ್ಷನ್‌ನಲ್ಲಿ ನೀವು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಯಾಕೆ ಕೆಲಸ ಮಾಡಿದ್ರೀ? ಇದು ಅಂತಿಮವಾಗಿ ನನ್ನ ವಿರುದ್ಧ ಮಾಡಿದ ಕೆಲಸವಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಅದರೆ ಈ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹ್ಮದ್ ಅವರು: ‘ಅಲ್ಲಾ ಕೀ ಕಸಂ. ನಿಮ್ಮ ವಿರುದ್ಧ ನಾನೇಕೆ ಕೆಲಸ ಮಾಡಲಿ ಸಾರ್? ಸಚಿವ ಮಲ್ಲಿಕಾರ್ಜುನ್ ಅವರು: ‘ಈ ಕ್ಷೇತ್ರಕ್ಕೆ ಬರಲು ಜಮೀರ್ ಯಾರು? ಅಂತೆಲ್ಲ ಮಾತನಾಡಿದರು.
ಅದರಿಂದ ನನಗೆ ಸಿಟ್ಟು ಬಂದಿದ್ದು ನಿಜ. ಹಾಗಂತ ನಾನೇನು ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಹಾಕಿ ಅಂತ ಮುಸ್ಲಿಮರಿಗೆ ಹೇಳಿದ್ನಾ?’ ಅಂತ ಕೇಳಿದ್ದಾರೆ. ಆದರೂ ಪಟ್ಟು ಬಿಡದ ಸಿದ್ಧರಾಮಯ್ಯ: ‘ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿ ಅಂತ ವೋಟರುಗಳಿಗೆ ಹೇಳಿಲ್ಲದೆ ಇರಬಹುದು. ಆದರೆ ನಮ್ಮ ಅಭ್ಯರ್ಥಿಯ ವಿರುದ್ಧ ನಿಂತ ನಿರ್ದಿಷ್ಟ ಶಕ್ತಿಗೆ ಬೆಂಬಲ ಕೊಟ್ಟಿದ್ದು ನಿಜವಲ್ಲವೇ? ಆ ಬಗ್ಗೆ ಡಾಕ್ಯುಮೆಂಟ್ ಇದೆಯಲ್ರೀ’ ಎಂದಿದ್ದಾರೆ. ಯಾವಾಗ ಸಿದ್ದರಾಮಯ್ಯ ಮೂಲಕ್ಕೆ ಬಂದರೋ? ಆಗ ಜಮೀರ್ ಅಹ್ಮದ್ ಅವರು ರಹಸ್ಯವೊಂದನ್ನು ಬಾಯಿಬಿಟ್ಟಿದ್ದಾರೆ.
‘ಸಾರ್, ನೀವು ಯಾವ ನಿರ್ದಿಷ್ಟ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೀರೋ? ಆ ಶಕ್ತಿಗೆ ನಾನು ಸಪೋರ್ಟ್ ಮಾಡಿದ್ದು ನಿಜ. ಹಾಗೆ ಆ ಶಕ್ತಿಗೆ ನಾನು ಸಪೋರ್ಟ್ ಮಾಡುವುದೇಕೆ ಅಂತ ನಿಮಗೆ ಗೊತ್ತಿರಲಿ. ಆ ಶಕ್ತಿ ಇವತ್ತು ನನ್ನ ಮಾತು ಕೇಳುವಂತೆ ನೋಡಿಕೊಂಡಿದ್ದೇನೆ. ಅದು ಹಾಗೆ ಕೇಳುವುದರ ಪ್ರಯೋಜನ ದೊಡ್ಡ ಮಟ್ಟದಲ್ಲಿ ಪಕ್ಷಕ್ಕಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಆ ಶಕ್ತಿ ರಾಜ್ಯಾದ್ಯಂತ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಯಸಿತ್ತು. ಹಾಗೇನಾದರೂ ಅದು ಮಾಡಿದ್ದರೆ ತುಂಬ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ಒಡೆದು ಕಾಂಗ್ರೆಸ್ಸಿಗೆ ಹಾನಿಯಾಗುತ್ತಿತ್ತು. ಹಾಗಾಗಬಾರದು ಅಂತ ನಾನು ಆ ಶಕ್ತಿಯ ಪ್ರಮುಖರ ಜತೆ ಮಾತನಾಡಿದೆ. ನೀವು ಕಣಕ್ಕಿಳಿದು ಮುಸ್ಲಿಂ ಮತಗಳನ್ನು ಒಡೆದರೆ ನಮಗೆ ಹಾನಿಯಾಗಿ ಬಿಜೆಪಿಗೆ ಲಾಭವಾಗುತ್ತದೆ ಅಂತ ಕನ್ವಿನ್ಸು ಮಾಡಿದೆ. ಅದನ್ನು ಯಾಕೆ ಮಾಡಿದೆ ಎಂದರೆ ನನಗೆ ನೀವು ಸಿಎಂ ಆಗುವುದು ಬೇಕಿತ್ತು. ಇವತ್ತು ಯಾವುದೋ ಒಂದು ಕ್ಷೇತ್ರದಲ್ಲಿ ಆ ಶಕ್ತಿಯನ್ನು ನಾನು ಬೆಂಬಲಿಸಿದೆ ಎಂದ ಮಾತ್ರಕ್ಕೆ ನೀವು ಸಿಟ್ಟು ಮಾಡಿಕೊಂಡರೆ ಹೇಗೆ? ಅಂತ ವಿವರಿಸಿದ್ದಾರೆ.
ಹೀಗೆ ಜಮೀರ್ ಅಹ್ಮದ್ ಅವರು ತಮ್ಮ ಬಳಿ ಆ ಚಿದಂಬರ ರಹಸ್ಯವನ್ನು ಹೇಳಿದರೋ? ಆಗ ಸಿದ್ದರಾಮಯ್ಯ ಅವರ ಸಿಟ್ಟು ಜರ್ರಂತ ಇಳಿದು: ‘ಥೋ! ಇದನ್ನೆಲ್ಲ ಮುಂಚೆಯೇ ನನಗೆ ಯಾಕ್ರೀ ಹೇಳಿಲ್ಲ ಜಮೀರ್? ಅಂತ ಮೃದುವಾಗಿ ಕೇಳಿದ್ದಾರೆ. ಅವರ ಧ್ವನಿಯಲ್ಲಿದ್ದ ಮೃದುತ್ವವನ್ನು ಗಮನಿಸಿ ನಿರಾಳರಾದ ಜಮೀರ್ ಅಹ್ಮದ್: ‘ನಿಮಗೆ ಹೇಳಬೇಕು ಎಂದರೆ ಅವಕಾಶವೇ ಆಗುತ್ತಿರಲಿಲ್ಲ ಸಾರ್’ ಎಂದಿದ್ದಾರೆ.
ಅಗ ಸಿದ್ದರಾಮಯ್ಯ ಅವರು: ‘ಆಯ್ತು ಬಿಡ್ರಿ ಜಮೀರ್. ಎಲ್ಲ ಕ್ಲಿಯರ್ ಆಯ್ತಲ್ಲ. ಇನ್ನು ನೆಮ್ಮದಿಯಾಗಿ ಕ್ಯಾಬಿನೆಟ್ಟಿನಲ್ಲಿ ಕೆಲಸ ಮಾಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಪುತ್ರ ಯತೀಂದ್ರ ಅವರಿಗೂ ಸಿಗ್ನಲ್ಲು ನೀಡಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ. ಅಲ್ಲಿಗೆ ಐದಾರು ತಿಂಗಳ ಸಿದ್ದು-ಜಮೀರ್ ಗುಸ್ಸಾ ಎಪಿಸೋಡು ತಣ್ಣಗೆ ಮಲಗಿ ಅಹಿಂದ ಟ್ರೂಪು ಮೇಲೇಳುವ ಲಕ್ಷಣ ಕಾಣಿಸಿಕೊಂಡಿದೆ.
ಸಿದ್ದು-ಜಾರಕಿ ಒಂದಾಗಲಿದ್ದಾರೆ
ಇನ್ನು ಸಿದ್ದು ಕೋಟೆಗೆ ಜಮೀರ್ ರೀ ಎಂಟ್ರಿಯಾದ ಬೆನ್ನಲ್ಲೇ ಮತ್ತೊಬ್ಬ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡಾ ಸಿದ್ದು ಭೇಟಿಗೆ ಉತ್ಸುಕರಾಗಿದ್ದಾರೆ. ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಸಿದ್ದು ಮತ್ತು ಜಾರಕಿಹೊಳಿ ಅವರಿಬ್ಬರ ಜತೆ ತಾವಾಗ ಮಾತುಕತೆ ನಡೆಸಿದರೋ? ಇದಾದ ನಂತರ ಅಹಿಂದ ಸೈನ್ಯದ ಮರು ಒಗ್ಗೂಡುವಿಕೆಯ ಕಾರ್ಯಕ್ಕೆ ಬಿರುಸು ಸಿಕ್ಕಿದ್ದು ಇದರ ಫಲವಾಗಿಯೇ ಈ ಇಬ್ಬರು ನಾಯಕರು ಸಭೆ ಸೇರಲಿದ್ದಾರೆ.
ಅಂದ ಹಾಗೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸಿದ್ದರಾಮಯ್ತ ಮತ್ತು ಜಾರಕಿಹೊಳಿ ಅವರಿಬ್ಬರಿಗೂ ಕನ್ವಿನ್ಸು ಆಗಿರುವ ವಿಷಯವೆಂದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು. ಅರ್ಥಾತ್, ಸಿದ್ದರಾಮಯ್ಯ ಅವರ ಕೈಯ್ಯನ್ನು ತಾವು ಬಲಿಷ್ಠಪಡಿಸಿದರೆ ಅದು ತಮ್ಮ ಶಕ್ತಿಯನ್ನೇ ಹೆಚ್ಚಿಸುತ್ತದೆ ಎಂಬುದು ಜಾರಕಿಹೊಳಿ ಅವರಿಗೆ ಮನದಟ್ಟಾಗಿದ್ದರೆ, ಸತೀಶ್, ಜಮೀರ್, ಮಹದೇವಪ್ಪ ಜತೆಗಿದ್ದರೆ ತಮಗೆ ನೂರಾನೆ ಬಲ ಎಂಬುದು ಸಿದ್ದರಾಮಯ್ಯ ಅವರಿಗೂ ಕನ್ವಿನ್ಸ್ ಆಗಿದೆ.
ಹೀಗಾಗಿ ದಸರಾ ಮುಗಿಯುವುದರ ಒಳಗೆ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಪರಸ್ಪರ ಭೇಟಿ ಮಾಡಲಿದ್ದು, ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುವುದು ಬಹುತೇಕ ನಿಶ್ಚಿತವಾಗಿದೆ.