ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಆರಾಧನೆ: ಪೂಜಾ ವಿಧಿ, ಶಕ್ತಿಶಾಲಿ ಮಂತ್ರಗಳ ಮಾಹಿತಿ ಇಲ್ಲಿದೆ
Navratri 2026: ನವರಾತ್ರಿಯ ಎರಡನೇ ದಿನ ತಾಯಿ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ತಪಸ್ಸು, ತ್ಯಾಗ, ಸಂಯಮ ಮತ್ತು ದೃಢ ಸಂಕಲ್ಪದ ಪ್ರತೀಕವಾಗಿರುವ ದೇವಿಯ ಆರಾಧನೆಯು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ಎಂಬುದು ಭಕ್ತರ ನಂಬಿಕೆ. ಈ ದಿನ ದೇವಿಗೆ ಹೂವು, ಅಕ್ಷತೆ, ಚಂದನ, ಕುಂಕುಮ ಹಾಗೂ ಸಿಹಿ ಪದಾರ್ಥಗಳನ್ನು ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ ಎಂಬ ಮಂತ್ರವನ್ನು ಪಠಿಸಿ ದೇವಿಯ ಆಶೀರ್ವಾದ ಪಡೆಯಬಹುದು.
ತಾಯಿ ಬ್ರಹ್ಮಚಾರಿಣಿ -
ಬೆಂಗಳೂರು: ನವರಾತ್ರಿಯ (Navratri 2026) ಎರಡನೇ ದಿನವನ್ನು ತಾಯಿ ಬ್ರಹ್ಮಚಾರಿಣಿ ದೇವಿಯ ಆರಾಧನೆಗೆ ಸಮರ್ಪಿಸಲಾಗಿದೆ. ದುರ್ಗಾ ದೇವಿಯ ಒಂಬತ್ತು ರೂಪಗಳಲ್ಲಿ ಎರಡನೇ ರೂಪವಾಗಿರುವ ಬ್ರಹ್ಮಚಾರಿಣಿ ದೇವಿಯು ತಪಸ್ಸು, ತ್ಯಾಗ, ಸಂಯಮ, ಭಕ್ತಿ ಮತ್ತು ದೃಢ ಸಂಕಲ್ಪದ ಪ್ರತೀಕವಾಗಿದ್ದಾಳೆ. ಧಾರ್ಮಿಕ ನಂಬಿಕೆಯ ಪ್ರಕಾರ, ದೇವಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಆತ್ಮವಿಶ್ವಾಸ, ಮಾನಸಿಕ ಶಾಂತಿ ಹಾಗೂ ಸುಖ-ಸಮೃದ್ಧಿ ದೊರೆಯುತ್ತದೆ.
ಈ ದಿನ ದೇವಿಯನ್ನು ಯಾವ ರೀತಿ ಆರಾಧಿಸಬೇಕು? ಪೂಜೆಗೆ ಯಾವ ಮಂತ್ರಗಳನ್ನು ಪಠಿಸಬೇಕು? ನೈವೇದ್ಯವಾಗಿ ಏನನ್ನು ಅರ್ಪಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ತಾಯಿ ಬ್ರಹ್ಮಚಾರಿಣಿ ಯಾರು?
ಬ್ರಹ್ಮಚಾರಿಣಿ ಎಂಬ ಹೆಸರಿನಲ್ಲಿ ಆಳವಾದ ಆಧ್ಯಾತ್ಮಿಕ ಅರ್ಥವಿದೆ. ಇಲ್ಲಿ 'ಬ್ರಹ್ಮ' ಎಂದರೆ ತಪಸ್ಸು ಅಥವಾ ಪರಮ ಸತ್ಯವನ್ನು ಸೂಚಿಸಿದರೆ, 'ಚಾರಿಣಿ' ಎಂದರೆ ಅದರ ಮಾರ್ಗದಲ್ಲಿ ನಡೆಯುವವಳು ಎಂದರ್ಥ. ಹೀಗಾಗಿ ಬ್ರಹ್ಮಚಾರಿಣಿ ದೇವಿಯು ಕಠಿಣ ತಪಸ್ಸು ಮತ್ತು ಅಚಲ ಭಕ್ತಿಯ ಪ್ರತಿರೂಪವಾಗಿದ್ದಾಳೆ.
ಪುರಾಣಗಳ ಪ್ರಕಾರ, ಹಿಮವಂತನ ಪುತ್ರಿಯಾಗಿ ಜನಿಸಿದ ಪಾರ್ವತಿ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದ ಮುನಿಗಳ ಸಲಹೆಯಂತೆ ದೀರ್ಘಕಾಲ ಕಠಿಣ ತಪಸ್ಸು ಮಾಡುತ್ತಾಳೆ. ತಪಸ್ಸಿನ ಸಂದರ್ಭದಲ್ಲಿ ಆರಂಭದಲ್ಲಿ ಹಣ್ಣು, ಹೂವುಗಳನ್ನು ಸೇವಿಸುತ್ತಿದ್ದ ದೇವಿಯು ನಂತರ ಎಲೆಗಳ ಸೇವನೆಯನ್ನೂ ತ್ಯಜಿಸಿ ತಪಸ್ಸಿನಲ್ಲಿ ನಿರತರಾಗುತ್ತಾಳೆ. ಆಕೆಯ ಅಚಲ ಭಕ್ತಿ ಮತ್ತು ಕಠಿಣ ಸಾಧನೆಗೆ ಮೆಚ್ಚಿದ ಶಿವನು ಆಕೆಯನ್ನು ಸ್ವೀಕರಿಸುತ್ತಾನೆ. ಈ ಕಾರಣದಿಂದ ದೇವಿಯು ತಪಶ್ಚಾರಿಣಿ ಹಾಗೂ ಬ್ರಹ್ಮಚಾರಿಣಿ ಎಂಬ ಹೆಸರುಗಳಿಂದ ಪ್ರಸಿದ್ಧಳಾಗಿದ್ದಾಳೆ.
ಬ್ರಹ್ಮಚಾರಿಣಿ ದೇವಿಯ ಪೂಜಾ ವಿಧಾನ
ನವರಾತ್ರಿಯ ಎರಡನೇ ದಿನ ಬೆಳಿಗ್ಗೆ ಭಕ್ತರು ಶುಚಿಯಾಗಿ ದೇವಿಯ ಪೂಜೆಯನ್ನು ನೆರವೇರಿಸುತ್ತಾರೆ. ಪೂಜೆಯ ಸಂದರ್ಭದಲ್ಲಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.
- ಮುಂಜಾನೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು.
- ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ತಾಯಿ ದುರ್ಗೆಯ ಚಿತ್ರ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬೇಕು.
- ಸಂಪ್ರದಾಯಕ್ಕೆ ಅನುಗುಣವಾಗಿ ದೇವಿಗೆ ಪಂಚಾಮೃತ ಅಭಿಷೇಕ ಮಾಡಬೇಕು.
- ಅಕ್ಷತೆ, ಚಂದನ, ಕುಂಕುಮ ಹಾಗೂ ಹೂವುಗಳನ್ನು ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಬೇಕು.
- ದೇವಿಗೆ ಪ್ರಿಯವೆಂದು ನಂಬಲಾಗುವ ಕಮಲ ಅಥವಾ ದಾಸವಾಳದ ಹೂವುಗಳನ್ನು ಸಮರ್ಪಿಸಬಹುದು.
- ಕಲಶ ಪೂಜೆ ಸೇರಿ ಕುಟುಂಬದ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಬೇಕು.
- ತುಪ್ಪದ ದೀಪ ಹಚ್ಚಿ ದೇವಿಗೆ ಆರತಿ ಮಾಡಿ, ಮಂತ್ರಗಳನ್ನು ಪಠಿಸಿ ಪೂಜೆಯನ್ನು ಪೂರ್ಣಗೊಳಿಸಬೇಕು.
ತಾಯಿ ಬ್ರಹ್ಮಚಾರಿಣಿಯ ಶಕ್ತಿಶಾಲಿ ಮಂತ್ರಗಳು
ದೇವಿಯ ಆರಾಧನೆಯ ಸಂದರ್ಭದಲ್ಲಿ ಭಕ್ತರು ಕೆಳಗಿನ ಮಂತ್ರಗಳನ್ನು ಪಠಿಸಬಹುದು.
1. ಬ್ರಹ್ಮಚಾರಿಣಿ ದೇವಿಯ ಬೀಜ ಮಂತ್ರ
ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
2. ದೇವಿಯ ಸ್ತುತಿ ಮಂತ್ರ
ಯಾ ದೇವೀ ಸರ್ವಭೂತೇಷು ಬ್ರಹ್ಮಚಾರಿಣೀ ರೂಪೇಣ ಸಂಸ್ಥಿತಾ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ॥
3. ಬ್ರಹ್ಮಚಾರಿಣಿ ದೇವಿಯ ಧ್ಯಾನ ಮಂತ್ರ
ದಧಾನಾ ಕರಪದ್ಮಾಭ್ಯಾಮಕ್ಷಮಾಲಾ ಕಮಂಡಲೂ।
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ॥
ಈ ಮಂತ್ರಗಳನ್ನು ಭಕ್ತಿಯಿಂದ ಪಠಿಸುವುದರಿಂದ ಮನಸ್ಸಿನಲ್ಲಿ ಏಕಾಗ್ರತೆ, ಶಾಂತಿ ಮತ್ತು ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಎಂಬುದು ಭಕ್ತರ ನಂಬಿಕೆ.
ಬ್ರಹ್ಮಚಾರಿಣಿ ದೇವಿಗೆ ಯಾವ ನೈವೇದ್ಯ ಅರ್ಪಿಸಬೇಕು?
ನವರಾತ್ರಿಯ ಎರಡನೇ ದಿನ ದೇವಿಗೆ ಸಿಹಿ ಪದಾರ್ಥಗಳು ಹಾಗೂ ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಬಾಳೆಹಣ್ಣು, ಸಕ್ಕರೆ, ಬೆಲ್ಲದಿಂದ ತಯಾರಿಸಿದ ಸಿಹಿತಿಂಡಿಗಳು ಅಥವಾ ಕೇಸರಿ ಬಾತ್‌ನಂತಹ ಖಾದ್ಯಗಳನ್ನು ಸಮರ್ಪಿಸಬಹುದು. ಕೆಲವು ಸಂಪ್ರದಾಯಗಳಲ್ಲಿ ಬಿಳಿ ಬಣ್ಣದ ಆಹಾರ ಪದಾರ್ಥಗಳಿಗೂ ವಿಶೇಷ ಮಹತ್ವ ನೀಡಲಾಗುತ್ತದೆ.
ನೈವೇದ್ಯವನ್ನು ಅರ್ಪಿಸಿದ ಬಳಿಕ ದೇವಿಗೆ ಆರತಿ ಮಾಡಿ ಕುಟುಂಬದ ಸದಸ್ಯರೊಂದಿಗೆ ಪ್ರಸಾದವನ್ನು ಸ್ವೀಕರಿಸಬಹುದು.
ಬ್ರಹ್ಮಚಾರಿಣಿ ದೇವಿಯ ಆರಾಧನೆಯ ಮಹತ್ವ
ತಾಯಿ ಬ್ರಹ್ಮಚಾರಿಣಿಯು ತಪಸ್ಸು, ತಾಳ್ಮೆ, ತ್ಯಾಗ ಮತ್ತು ದೃಢ ನಿರ್ಧಾರದ ಸಂಕೇತವಾಗಿದ್ದಾಳೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಹಾಗೂ ಗುರಿ ಸಾಧನೆಗೆ ಅಗತ್ಯವಾದ ಮನೋಬಲವನ್ನು ಬೆಳೆಸಿಕೊಳ್ಳಲು ದೇವಿಯ ಆರಾಧನೆ ಪ್ರೇರಣೆ ನೀಡುತ್ತದೆ ಎಂಬ ನಂಬಿಕೆಯಿದೆ.
ನವರಾತ್ರಿಯ ಈ ಪವಿತ್ರ ದಿನದಂದು ತಾಯಿ ಬ್ರಹ್ಮಚಾರಿಣಿಯನ್ನು ಭಕ್ತಿಯಿಂದ ಸ್ಮರಿಸಿ, ಸತ್ಯ, ಸಂಯಮ ಮತ್ತು ಸತ್ಕರ್ಮಗಳ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡೋಣ. ದೇವಿಯ ಕೃಪೆಯಿಂದ ಎಲ್ಲರ ಜೀವನದಲ್ಲೂ ಶಾಂತಿ, ಸಂತೋಷ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸೋಣ.