ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !
“ಕಿರೀಟಿಯನ್ನು ತರಬೇತಿ ಕೇಂದ್ರಕ್ಕೆ ಬಿಡಲೆಂದು ಬರುತ್ತಿದ್ದಾಗ ಆ ತಾಯಿ ‘ಪೃಥೆ’ಯನ್ನು ನೋಡಿದ್ದ ನೆನಪಿತ್ತು, ಹಾಗಾಗಿ ನಮಸ್ಕರಿಸಿದೆ. ನನ್ನ ಕೈಯಲ್ಲಿನ ಟ್ರಂಕನ್ನೂ, ಮುಖದಲ್ಲಿನ ಮಂಕನ್ನೂ ಕಣ್ಣ ಅಳೆದ ಕಾವಲುಗಾರ ರಾಜಣ್ಣ, “ಎಲ್ಲಿಗೆ ಹೊಂಟೆ ಮಗಾ?" ಎಂದ. “ಇನ್ನೆಲ್ಲಿಗೆ ರಾಜಣ್ಣಾ... ಸಾಕು ತಾಯಿಯ ಬಳಿಗೆ" ಎಂದೆ ಗದ್ಗದಿತನಾಗಿ. ಆಗ ನನ್ನನ್ನು ಬಾಚಿ ತಬ್ಬಿದ ರಾಜಣ್ಣ, “ನಿನ್ನ ನೋವು ಅರ್ಥವಾಯ್ತದೆ ಮಗಾ. ಮಾಡೋ ಊಟವ, ಓಡೋ ಓಟವ ಅರ್ಧಕ್ಕೇ ನಿಲ್ಲಿಸ್ತಾರಾ ಮಗಾ? ನೀನು ಬಿಲ್ವಿದ್ಯೆನಾಗೆ ರಾಜ್ಯಕ್ಕೆ ಎಸರು ತರಬೇಕು ಅಂತಲ್ವಾ ದಣಿಗಳು ಆಸೆ ಪಟ್ಟಿದ್ದೂ? ನೀನೂ ಒಂಟೋದ್ರೆ ಅವರ ಆತ್ಮ ಆ ಸ್ವರ್ಗದಾಗೂ ನರಳಾಕಿಲ್ವಾ?" ಎಂದು ಜಿಜ್ಞಾಸೆ ತೋಡಿಕೊಂಡ.