Job fair: 26 ಸಾವಿರ ಜನರಿಗೆ ಉದ್ಯೋಗ ಮೇಳ ಆಸರೆ
ಕೌಶಲಾಭಿವೃದ್ಧಿ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷ ದಿಂದ ಆಯೋಜಿಸುತ್ತಿರುವ ಉದ್ಯೋಗ ಮೇಳದಲ್ಲಿ ಈವರೆಗೆ 3,31,303 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, 1,55,134 ಅಭ್ಯರ್ಥಿಗಳು ಹಾಜರಿದ್ದಾರೆ. ಇವರಲ್ಲಿ 54701 ಮಂದಿ ಶಾರ್ಟ್‌ಲಿಸ್ಟ್ ಆಗಿದ್ದರೆ, ಅದರಲ್ಲಿ 26,657 ಮಂದಿಗೆ ಉದ್ಯೋಗ ಲಭಿಸಿದೆ.
-
ಅಪರ್ಣಾ ಎ.ಎಸ್ ಬೆಂಗಳೂರು
ನೊಂದಣಿಯಾಗಿದ 1,55,134 ಪೈಕಿ 26 ಸಾವಿರ ಜನರಿಗೆ ಕೆಲಸ
ಬೆಂಗಳೂರಿನಲ್ಲಿಯೇ 9654 ಜನರಿಗೆ ಉದ್ಯೋಗ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವ ನಡುವೆಯೇ ಈ ನಿರುದ್ಯೋಗದ ಕಾವನ್ನು ತಗ್ಗಿಸಲು ಸರಕಾರ ಆಯೋಜಿಸುತ್ತಿರುವ ಉದ್ಯೋಗ ಮೇಳದಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿ, 26 ಸಾವಿರ ಜನರಿಗೆ ಕೆಲಸ ದೊರೆತಿದೆ.
ಉದ್ಯೋಗಾವಕಾಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸೇತುವೆಯಾಗಲು ಕೌಶಲಾ ಭಿವೃದ್ಧಿ ಇಲಾಖೆಯಿಂದ ರಾಜ್ಯಾದ್ಯಂತ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮೂರು ವರ್ಷದ ಅವಧಿಯಲ್ಲಿ 26 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗಿಗಳಾಗಿದ್ದಾರೆ.
ಕೌಶಲಾಭಿವೃದ್ಧಿ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷದಿಂದ ಆಯೋಜಿಸುತ್ತಿರುವ ಉದ್ಯೋಗ ಮೇಳದಲ್ಲಿ ಈವರೆಗೆ 3,31,303 ಅಭ್ಯರ್ಥಿ ಗಳು ನೊಂದಣಿ ಮಾಡಿಕೊಂಡಿದ್ದು, 1,55,134 ಅಭ್ಯರ್ಥಿಗಳು ಹಾಜರಿದ್ದಾರೆ. ಇವರಲ್ಲಿ 54701 ಮಂದಿ ಶಾರ್ಟ್‌ಲಿಸ್ಟ್ ಆಗಿದ್ದರೆ, ಅದರಲ್ಲಿ 26,657 ಮಂದಿಗೆ ಉದ್ಯೋಗ ಲಭಿಸಿದೆ. ಇವರಲ್ಲಿ 2025-26ನೇ ಸಾಲಿನಲ್ಲಿಯೇ 8676 ಮಂದಿಗೆ ಖಾಸಗಿ ಕಂಪನಿಗಳಿಂದ ಆಫರ್ ಲೆಟರ್ ಸಿಕ್ಕಿದೆ ಎನ್ನುವ ಅಂಕಿ-ಅಂಶ ಬಹಿರಂಗವಾಗಿದೆ.
ಇದನ್ನೂ ಓದಿ: Job Mela: ಜೆ.ಕೆ.ಕೃಷ್ಣಾರೆಡ್ಡಿ ಆಯೋಜನೆಯ ಬೃಹತ್ ಉದ್ಯೋಗ ಮೇಳಕ್ಕೆ ಹರಿದು ಬಂದ ನಿರುದ್ಯೋಗಿ ಜನಸಾಗರ
ಕೌಶಲಾಭಿವೃದ್ಧಿ ಇಲಾಖೆ ನೀಡಿರುವ ಅಂಕಿ- ಅಂಶದ ಪ್ರಕಾರ, ಕಳೆದ ಮೂರು ವರ್ಷ ಗಳಲ್ಲಿ ಒಟ್ಟು 57 ಉದ್ಯೋಗ ಮೇಳಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸ ಲಾಗಿದ್ದು, ಇದರೊಂದಿಗೆ 504 ಮಿನಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ.
ಇದರಲ್ಲಿ 2023-24ರಿಂದ 2025-26ರ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 3,31,303 ಯುವಕರು ಉದ್ಯೋಗ ಮೇಳಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1,55,134 ಮಂದಿ ಮೇಳಗಳಿಗೆ ಹಾಜರಾಗಿದ್ದು, 26,657 ಜನರಿಗೆ ಉದ್ಯೋಗ ಲಭ್ಯವಾಗಿದೆ.
ಪ್ರತಿ ಉದ್ಯೋಗ ಮೇಳಕ್ಕೆ 3 ಲಕ್ಷ ಅನುದಾನ: ರಾಜ್ಯದಲ್ಲಿ ಯುವಕರಿಗೆ ಉದ್ಯೋಗಾವ ಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕೌಶಲಾಭಿವೃದ್ಧಿ ಇಲಾಖೆ ಆಯೋಜಿಸುವ ಪ್ರತಿ ಉದ್ಯೋಗಮೇಳಕ್ಕೆ 3 ಲಕ್ಷ ರು.ಗಳನ್ನು ನೀಡಲಾಗುತ್ತಿದೆ. ಈ ಅನುದಾನದಲ್ಲಿ ಮೇಳದ ಆಯೋಜನೆ, ವೇದಿಕೆ ಹಾಗೂ ಮೂಲಸೌಕರ್ಯ ವ್ಯವಸ್ಥೆ, ಪ್ರಚಾರ, ನೋಂದಣಿ ವ್ಯವಸ್ಥೆ ಮತ್ತು ಅಭ್ಯರ್ಥಿ- ಕಂಪನಿಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಬಳಸಲಾಗುತ್ತಿದೆ. ಈವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಒಟ್ಟು 57 ಉದ್ಯೋಗ ಮೇಳಗಳಿಗೆ ಅಂದಾಜು 1.71 ಕೋಟಿ ರು. ವೆಚ್ಚವಾಗಿದೆ ಎಂದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.
ಬೆಂಗಳೂರೇ ಮೊದಲು: ಬೆಂಗಳೂರಿನಲ್ಲಿ ನಡೆದಿರುವ ಉದ್ಯೋಗ ಮೇಳದಲ್ಲಿ ಒಟ್ಟು 86,451 ಯುವಕರು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 44,527 ಮಂದಿ ಮೇಳಕ್ಕೆ ಹಾಜರಾಗಿದ್ದರು. ಇವರಲ್ಲಿ 16,865 ಮಂದಿಯನ್ನು ಶಾರ್ಟ್ ಲಿಸ್ಟ್ ಮಾಡಿ, ಅಂತಿಮವಾಗಿ 9654 ಜನರಿಗೆ ಉದ್ಯೋಗ ದೊರೆತಿದೆ. ಈ ಮೂಲಕ ಅತಿ ಹೆಚ್ಚು ಉದ್ಯೋಗ ಪಡೆದ ಜಿಲ್ಲೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ವಿಜಯಪುರ, ಮೈಸೂರು, ದಾವಣಗೆರೆ ಜಿಲ್ಲೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೆಲಸ ಸಿಕ್ಕಿದೆ.
ಮೂರು ಸಾವಿರಕ್ಕೂ ಹೆಚ್ಚು ಕಂಪನಿಗಳು ಭಾಗಿ
ರಾಜ್ಯ ಸರಕಾರ ಆಯೋಜಿಸಿದ್ದ ಜಿಲ್ಲಾವಾರು ಉದ್ಯೋಗ ಮೇಳದಲ್ಲಿ ಒಟ್ಟು 3790 ಕಂಪನಿ ಗಳು ಭಾಗವಹಿಸುವುದಾಗಿ ನೊಂದಣಿ ಮಾಡಿಕೊಂಡಿದ್ದರೂ, 3090 ಕಂಪನಿಗಳು ಮಾತ್ರ ಭಾಗವಹಿಸಿವೆ. ಪ್ರಮುಖವಾಗಿ ಐಟಿ, ಐಟಿಇಎಸ್, ಉತ್ಪಾದನಾ ಸಂಸ್ಥೆ, ಬಿಪಿಒ, ಆಟೋ ಮೊಬೈಲ್, ಎಲೆಕ್ಟ್ರಾನಿಕ್ಸ್, ಹೋಟೆಲ್ ಹಾಗೂ ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳೇ ಹೆಚ್ಚಾಗಿದ್ದವು ಎನ್ನಲಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿಯೇ 598 ಕಂಪನಿಗಳು ಭಾಗವಹಿಸಿದ್ದರೆ, ತುಮಕೂರಿನ ಶಿರಾದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 76 ಕಂಪನಿಗಳು ಭಾಗವಹಿಸಿದ್ದು ಅತಿ ಕಡಿಮೆ ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳವಾಗಿದೆ.