ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

60ರ ಗಡಿ ದಾಟಿದ ಅಭಿಮನ್ಯುವಿಗೆ ವಿಶ್ರಾಂತಿ

ಅಂಬಾರಿ ಹೊತ್ತ ದಸರೆಯ ರಾಜನಾಗಿ, ಕಾಡಾನೆಗಳ ಸೆರೆ ಕಾರ್ಯಾಚರಣೆಯ ‘ಎಕೆ-47’ ಆಗಿ, ನರಹಂತಕ ಹುಲಿಗಳ ಸೆರೆ ಕಾರ್ಯಾಚರಣೆಯ ಧೈರ್ಯ ಶಾಲಿ ಗಜರಾಜನಾಗಿ ಮತ್ತು ಸಂಕಷ್ಟದಲ್ಲಿರುವ ಆನೆಗಳ ಅಪತ್ಬಾಂಧವನಾಗಿ ಅಭಿಮನ್ಯು ಹಲವು ಪಾತ್ರಗಳನ್ನು ನಿರ್ವಹಿಸಿದ್ದಾನೆ. ಇದೀಗ ವಯಸ್ಸು ಆತನಿಗೆ ವಿಶ್ರಾಂತಿ ನೀಡಿದೆ.

60ರ ಗಡಿ ದಾಟಿದ ಅಭಿಮನ್ಯುವಿಗೆ ವಿಶ್ರಾಂತಿ

-

Profile
Ashok Nayak Aug 21, 2026 7:40 AM

ಕೆ.ಜೆ.ಲೋಕೇಶ್ ಬಾಬು ಮೈಸೂರು

ಮೈಸೂರು ದಸರಾ ಗಜಪಡೆಯಿಂದ ಹೊರಬಿದ್ದ ಕೂಂಬಿಂಗ್ ಸ್ಟಾರ್, ಹೊಸ ಕ್ಯಾಪ್ಟನ್‌ಗಾಗಿ ಹುಡುಕಾಟ

ಹೆಸರಿನಲ್ಲಿಯೇ ಗಾಂಭೀರ್ಯತೆ ಹೊಂದಿರುವ ಅಭಿಮನ್ಯು ಈ ಸಾಲಿನ ದಸರಾ ಮಹೋತ್ಸವ ಗಜಪಡೆಯಲ್ಲಿ ಇಲ್ಲದಿರಬಹುದು. ಆದರೆ, ಮೈಸೂರು ದಸರೆಯ ನೆನಪುಗಳಲ್ಲಿ ಆತನ ಹೆಜ್ಜೆ ಗುರುತುಗಳು ಎಂದಿಗೂ ಅಳಿಯುವುದಿಲ್ಲ. ಅಂಬಾರಿ ಹೊತ್ತ ದಸರೆಯ ರಾಜನಾಗಿ, ಕಾಡಾನೆಗಳ ಸೆರೆ ಕಾರ್ಯಾಚರಣೆಯ ‘ಎಕೆ-47’ ಆಗಿ, ನರಹಂತಕ ಹುಲಿಗಳ ಸೆರೆ ಕಾರ್ಯಾಚರಣೆಯ ಧೈರ್ಯ ಶಾಲಿ ಗಜರಾಜನಾಗಿ ಮತ್ತು ಸಂಕಷ್ಟದಲ್ಲಿರುವ ಆನೆಗಳ ಅಪತ್ಬಾಂಧವನಾಗಿ ಅಭಿಮನ್ಯು ಹಲವು ಪಾತ್ರಗಳನ್ನು ನಿರ್ವಹಿಸಿದ್ದಾನೆ. ಇದೀಗ ವಯಸ್ಸು ಆತನಿಗೆ ವಿಶ್ರಾಂತಿ ನೀಡಿದೆ.

ಆದರೆ ದಸರೆಯ ಇತಿಹಾಸದಲ್ಲಿ ಅಭಿಮನ್ಯುವಿನ ಅಧ್ಯಾಯಕ್ಕೆ ವಿಶ್ರಾಂತಿ ಇಲ್ಲ. ದಸರೆಯ ರಾಜಮಾರ್ಗದಲ್ಲಿ ಕಲಾತಂಡಗಳು ರಂಜಿಸಲಿವೆ. ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ. ಮೈಸೂರು ಅರಮನೆ ಸಡಗರದಿಂದ ಕಂಗೊಳಿಸಲಿದೆ. ಜಂಬೂಸವಾರಿ ಎಂದಿನಂತೆ ವಿಜೃಂಭಿಸಲಿದೆ. ಆದರೆ, ಈ ಎಲ್ಲದರ ನಡುವೆ ಒಂದು ಕೊರತೆ ಮಾತ್ರ ಎದ್ದು ಕಾಣಲಿದೆ, ಅದುವೇ ಅಭಿಮನ್ಯುವಿನ ಗಂಭೀರ ಹೆಜ್ಜೆ.

ಸತತ ಆರು ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಗಿದ್ದ ಗಜರಾಜನಿಗೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ವಿಶ್ರಾಂತಿ ನೀಡಲಾಗಿದೆ. ಇದರೊಂದಿಗೆ ದಸರಾ ಗಜಪಡೆಯ ಹೊಸ ಕ್ಯಾಪ್ಟನ್ ಯಾರು ಎಂಬ ಕುತೂಹಲವೂ ಮೂಡಿದೆ.

ಇದನ್ನೂ ಓದಿ: Viveka Smaraka in Mysuru: ಮೈಸೂರಿನಲ್ಲಿ 45 ಕೋಟಿ ವೆಚ್ಚದ ʼವಿವೇಕ ಸ್ಮಾರಕʼ ಉದ್ಘಾಟಿಸಿದ ಪ್ರಧಾನಿ ಮೋದಿ

2020ರಿಂದ 2025ರವರೆಗೆ ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದ. ಕೋವಿಡ್ ಕಾರಣದಿಂದ 2020 ಮತ್ತು 2021ರಲ್ಲಿ ಅರಮನೆ ಆವರಣದೊಳಗೆ ಸೀಮಿತ ದೂರದಲ್ಲಿ ಅಂಬಾರಿ ಹೊತ್ತಿದ್ದರೆ, 2022ರಿಂದ 2025ರವರೆಗೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು ಐದು ಕಿಲೋ ಮೀಟರ್ ದೂರವನ್ನು ಅಂಬಾರಿ ಹೊತ್ತು ಸಾಗಿದ್ದ. ಆದರೆ, 60 ವರ್ಷ ಪೂರೈಸಿರುವುದು ಹಾಗೂ ಇತ್ತೀಚೆಗೆ ಮತ್ತಿಗೋಡು ಆನೆ ಶಿಬಿರದಲ್ಲಿ ಮರದ ದಿಮ್ಮಿ ಸಾಗಿಸುವ ಸಂದರ್ಭದಲ್ಲಿ ದಂತವೊಂದು ಭಗ್ನವಾಗಿರುವುದು ಅಭಿಮನ್ಯುವಿನ ಈ ವರ್ಷದ ದಸರಾ ಪ್ರವೇಶಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ. ವಯಸ್ಸು ಮತ್ತು ದಂತದ ಸ್ಥಿತಿಯನ್ನು ಪರಿಗಣಿಸಿ ಅಂಬಾರಿ ಹೊರುವ ಜವಾಬ್ದಾರಿ ನೀಡುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ಬಾರಿ ಆತನನ್ನು ಗಜಪಡೆಯ ಪಟ್ಟಿಯಿಂದ ಕೈಬಿಟ್ಟಿದೆ.

ದಸರೆಯ ರಾಜನಿಂದ ಕೂಂಬಿಂಗ್ ಸ್ಟಾರ್‌ವರೆಗೆ: ಅಭಿಮನ್ಯು ಕೇವಲ ದಸರಾ ಆನೆಯಲ್ಲ. ಅರಣ್ಯ ಇಲಾಖೆಯ ಪಾಲಿಗೆ ಆತ ಅತ್ಯಂತ ವಿಶ್ವಾಸಾರ್ಹ ಕೂಂಬಿಂಗ್ ಸ್ಪೆಷಲಿ. ಕಾಡಾನೆಗಳ ಸೆರೆ ಕಾರ್ಯಾ ಚರಣೆಯಲ್ಲಿ ಪುಂಡಾನೆಗಳನ್ನು ನಿಯಂತ್ರಿಸುವುದು, ಅವುಗಳನ್ನು ಲಾರಿಗೆ ಹತ್ತಿಸುವುದು ಸೇರಿ ಅತ್ಯಂತ ಅಪಾಯಕಾರಿ ಹಂತಗಳಲ್ಲೂ ಅಭಿಮನ್ಯು ಮುಂಚೂಣಿಯಲ್ಲಿ ನಿಂತಿದ್ದ. ಕರ್ನಾಟಕ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ, ಛತ್ತೀಸ್‌ಗಡ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಗಳಲ್ಲಿಯೂ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದಾನೆ.

150ಕ್ಕೂ ಹೆಚ್ಚು ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಈ ಗಜರಾಜನಿಗೆ ಅರಣ್ಯ ಇಲಾಖೆಯಲ್ಲಿ ‘ಎಕೆ-47’ ಎಂಬ ಬಿರುದೂ ಬಂದಿದೆ. ಎದುರಿಗೆ ಎಷ್ಟೇ ಬಲಿಷ್ಠ ಪ್ರಾಣಿ ನಿಂತರೂ ಹಿಂದೆ ಸರಿಯದೆ ಮುನ್ನುಗ್ಗುವ ಗುಣವೇ ಆತನಿಗೆ ಈ ಖ್ಯಾತಿ ತಂದುಕೊಟ್ಟಿದೆ.

ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಮುಂಚೂಣಿ: ಕಾಡಾನೆಗಳ ಸೆರೆ ಮಾತ್ರವಲ್ಲ, ನರಹಂತಕ ಹುಲಿಗಳ ಸೆರೆ ಕಾರ್ಯಾಚರಣೆಯಲ್ಲೂ ಅಭಿಮನ್ಯುವಿನ ಪಾತ್ರ ಮಹತ್ವದ್ದಾಗಿದೆ. ಹುಲಿಯ ವಾಸನೆ ಹಿಡಿದು ಅದರ ಜಾಡಿನತ್ತ ಸಾಗುವುದು, ಅಪಾಯಕಾರಿ ಪರಿಸ್ಥಿತಿಯಲ್ಲೂ ಪಶುವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಲು ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಕಾರ್ಯಾಚರಣೆ ಗಳಲ್ಲಿ ಆತ ನೆರವಾಗಿದ್ದಾನೆ.

ಹಲವು ಸಂದರ್ಭಗಳಲ್ಲಿ ಹುಲಿ ಮತ್ತು ಅಭಿಮನ್ಯುವಿನ ನಡುವೆ ಮುಖಾಮುಖಿಯ ಪರಿಸ್ಥಿತಿ ಎದುರಾದರೂ ಆತ ಹಿಂದೆ ಸರಿಯಲಿಲ್ಲ. 50ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ಈ ಗಜರಾಜನ ಧೈರ್ಯ ಮತ್ತು ಸ್ಥೈರ್ಯ ಅರಣ್ಯ ಇಲಾಖೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ. ಕಾಡಿನಲ್ಲಿ ಪುಂಡಾನೆಗಳಿಗೆ ಖೆಡ್ಡಾ ತೋಡುವ ಅಭಿಮನ್ಯು, ಸಂಕಷ್ಟಕ್ಕೆ ಸಿಲುಕಿದ ಆನೆಗಳನ್ನು ರಕ್ಷಿಸುವ ಕಾರ್ಯದಲ್ಲೂ ಪರಿಣತಿ ಹೊಂದಿದ್ದಾನೆ. ನೀರಿನಲ್ಲಿ ಬಿದ್ದ ಅಥವಾ ಕೆಸರಿನಲ್ಲಿ ಸಿಲುಕಿದ ಆನೆಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಕಾರ್ಯದಲ್ಲೂ ಆತನ ಸಾಮರ್ಥ್ಯ ಹಲವು ಬಾರಿ ಸಾಬೀತಾಗಿದೆ.

ದಸರೆಯೊಂದಿಗೆ 26 ವರ್ಷಗಳ ನಂಟು: ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕಿದ್ದ ಅಭಿಮನ್ಯು, ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಬೆಳೆದು ದಸರಾ ಗಜಪಡೆಯ ಅವಿಭಾಜ್ಯ ಅಂಗವಾಗಿದ್ದ. ದಸರೆಯ ಆರಂಭಿಕ ವರ್ಷಗಳಲ್ಲಿ ಇತರ ಮಾಜಿ ಕ್ಯಾಪ್ಟನ್‌ಗಳಾದ ಬಲರಾಮ ಮತ್ತು ಅರ್ಜುನರೊಂದಿಗೆ ಹೆಜ್ಜೆ ಹಾಕಿದ್ದ ಅಭಿಮನ್ಯು, 2012ರಿಂದ 2015ರವರೆಗೆ ಜಂಬೂಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಎಳೆದಿದ್ದ. ಬಳಿಕ 2020ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಆತನ ಹೆಗಲೇರಿತು.ಆರು ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿ ದಸರೆಯ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿರುವ ಅಭಿಮನ್ಯುವಿಗೆ ಕಳೆದ ವರ್ಷವೇ ವಯಸ್ಸಿನ ಹಿನ್ನೆಲೆಯಲ್ಲಿ ಕೊನೆಯ ಅವಕಾಶ ದೊರೆಯಬಹುದು ಎಂಬ ಚರ್ಚೆ ನಡೆದಿತ್ತು. ಆದರೆ, ಈ ಬಾರಿ ಅರಣ್ಯ ಇಲಾಖೆ ಆತನನ್ನು ಗಜಪಡೆಯ ಸೇರಿಸದಿರುವ ನಿರ್ಧಾರ ಕೈಗೊಂಡಿದೆ.

ಆರೋಗ್ಯ, ಗುಣಲಕ್ಷಣಗಳ ಆಧಾರದ ಮೇಲೆ ಆಯ್ಕೆ

ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆ ಆರೋಗ್ಯ ತಪಾಸಣೆಯಿಂದ ಆರಂಭವಾಗಿತ್ತು. ಪಶುವೈದ್ಯಾಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳ ತಂಡ ವಿವಿಧ ಆನೆ ಶಿಬಿರ ಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ, ಸ್ವಭಾವ ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಪರಿಶೀಲಿ ಸಿತ್ತು. ಈ ಪರಿಶೀಲನೆಯ ಬಳಿಕ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸ ಲಾಗಿತ್ತು. ನಂತರ ನಡೆದ ಆಯ್ಕೆ ಸಭೆಯಲ್ಲಿ ಆರೋಗ್ಯ ವರದಿ, ಆನೆಗಳ ದೈಹಿಕ ಸಾಮರ್ಥ್ಯ ಹಾಗೂ ಗುಣಲಕ್ಷಣಗಳನ್ನು ಪರಿಗಣಿಸಿ ಅಂತಿಮವಾಗಿ 12 ಆನೆಗಳನ್ನು ದಸರಾ ಗಜಪಡೆಗೆ ಆಯ್ಕೆ ಮಾಡಲಾಗಿದೆ.

ಅಂಬಾರಿ ಬೇಡ, ದಸರೆಯಲ್ಲಿ ಹೆಜ್ಜೆ ಇರಲಿ ಮಾಜಿ ಕ್ಯಾಪ್ಟನ್‌ಗಳಾದ ಬಲರಾಮ ಮತ್ತು ಅರ್ಜುನ ನಿಗೆ 60 ವರ್ಷ ತುಂಬಿದ ಬಳಿಕ ಅಂಬಾರಿ ಹೊರುವ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿತ್ತು. ಆದರೂ ದಸರೆಯೊಂದಿಗಿನ ಅವರ ನಂಟನ್ನು ಸಂಪೂರ್ಣ ಕಡಿತಗೊಳಿಸದೆ, ನಿಶಾನೆ ಆನೆಗಳಾಗಿ ಜಂಬೂಸವಾರಿ ಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಹೀಗಾಗಿ, ದಸರೆಯೊಂದಿಗೆ 26 ವರ್ಷಗಳ ನಂಟು ಹೊಂದಿರುವ ಅಭಿಮನ್ಯುವಿಗೂ ಕನಿಷ್ಠ ಜಂಬೂಸವಾರಿಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂಬುದು ಆತನ ಅಭಿಮಾನಿಗಳ ಒತ್ತಾಯವಾಗಿದೆ. ಅಂಬಾರಿ ಬೇಡ, ಆದರೆ ರಾಜಮಾರ್ಗದಲ್ಲಿ ಅಭಿಮನ್ಯುವಿನ ಗಂಭೀರ ಹೆಜ್ಜೆಯಾದರೂ ಕಾಣಿಸಲಿ ಎಂಬುದು ಅವರ ಆಶಯ.

ಅಭಿಮನ್ಯುವಿಗೆ ಸಿನಿಮಾ ನಟರಷ್ಟೇ ಅಭಿಮಾನಿಗಳಿದ್ದಾರೆ. ಜಂಬೂಸವಾರಿಯ ವೇಳೆ ಆತನನ್ನು ನೋಡಲು ಸಾವಿರಾರು ಜನ ಕಾತರದಿಂದ ಕಾಯುತ್ತಿದ್ದರು. ಆತನ ಗಾಂಭೀರ್ಯ, ದೇಹಾಕೃತಿ ಮತ್ತು ರಾಜಮಾರ್ಗದ ನಡಿಗೆ ದಸರೆಯ ವಿಶೇಷ ಆಕರ್ಷಣೆಯಾಗಿತ್ತು.

ಹೊಸ ಕ್ಯಾಪ್ಟನ್ ಯಾರು?

ಅಭಿಮನ್ಯು ಹೊರಗುಳಿದಿರುವ ಹಿನ್ನೆಲೆಯಲ್ಲಿ ಈ ಬಾರಿಯ ದಸರೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬುದು ಅತ್ಯಂತ ಕುತೂಹಲದ ಪ್ರಶ್ನೆಯಾಗಿದೆ. 2026ರ ದಸರಾ ಗಜಪಡೆಗೆ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ, ಲಕ್ಷ್ಮೀ, ರೂಪಾ, ಚೈತ್ರ ಮತ್ತು ಶ್ರೀಕಂಠ ಆನೆಗಳನ್ನು ಆಯ್ಕೆ ಮಾಡಲಾಗಿದೆ.

ಭೀಮ ಮತ್ತು ಹರ್ಷ ಆನೆಗಳನ್ನು ಮೀಸಲು ಪಟ್ಟಿಯಲ್ಲಿ ಇರಿಸಲಾಗಿದೆ. ಮೊದಲ ತಂಡದಲ್ಲಿ ದುಬಾರೆ ಶಿಬಿರದ ಧನಂಜಯ (45), ಬಳ್ಳೆ ಶಿಬಿರದ ಮಹೇಂದ್ರ (42), ಭೀಮನಕಟ್ಟೆ ಶಿಬಿರದ ಏಕಲವ್ಯ (41), ದುಬಾರೆ ಶಿಬಿರದ ಪ್ರಶಾಂತ (54), ಗೋಪಿ (43), ಶ್ರೀರಾಮ (41), ಸುಗ್ರೀವ (44), ಕಾವೇರಿ (೪೬) ಹಾಗೂ ಬಳ್ಳೆ ಶಿಬಿರದ ಲಕ್ಷ್ಮೀ (೫೪) ಮೈಸೂರಿಗೆ ಆಗಮಿಸ ಲಿವೆ. ಎರಡನೇ ತಂಡದಲ್ಲಿ ದೊಡ್ಡಹ ರವೆ ಶಿಬಿರದ ರೂಪಾ (೫೦), ರಾಮಪುರ ಶಿಬಿರದ ಚೈತ್ರ (೫೫) ಹಾಗೂ ಮತ್ತಿಗೋಡು ಶಿಬಿರದ ಶ್ರೀಕಂಠ (೫೭) ಸೆಪ್ಟೆಂಬರ್ ಎರಡನೇ ವಾರದಲ್ಲಿ ಮೈಸೂರಿಗೆ ಬರಲಿವೆ. ಮತ್ತಿಗೋಡು ಶಿಬಿರದ ಭೀಮ (೨೬) ಮತ್ತು ದುಬಾರೆ ಶಿಬಿರದ ಹರ್ಷ (೫೧) ಮೀಸಲು ಆನೆಗಳಾಗಿವೆ.