ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Young Fish Farmer: ಮತ್ಸ್ಯ ಕೃಷಿ ಯುವಕನಿಗೆ ಮೋದಿ ಪ್ರಶಂಸೆ

ಬಿಎ ಪದವಿ ಮುಗಿಸಿರುವ ರಾಜು ಹುದ್ದಾರ, ಮೊದಲಿಗೆ ಆರ್ಮಿ ಸೇರುವ ಉತ್ಸಾಹ ದಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಹೈನುಗಾರಿಕೆ ಉದ್ಯಮಕ್ಕೆ ಕೈ ಹಾಕುವ ಯೋಚನೆ ಯನ್ನು ಕೈ ಬಿಟ್ಟರು. ಮುಂದೆ ಮೀನು ಕೃಷಿ ಕುರಿತು ಆಸಕ್ತಿ ಬೆಳೆಸಿಕೊಂಡು ಅತ್ಯಾಧುನಿಕ ಪದ್ಧತಿಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನ ಬಳಸಿ ಕುಚ್ಚು ಮೀನು ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ.

Young Fish Farmer: ಮತ್ಸ್ಯ ಕೃಷಿ ಯುವಕನಿಗೆ ಮೋದಿ ಪ್ರಶಂಸೆ

-

Profile
Ashok Nayak Mar 30, 2026 9:31 AM

ವಿನಾಯಕ ಮಠಪತಿ ಬೆಳಗಾವಿ

ಬೆಳಗಾವಿಯ ಯುವ ರೈತ ರಾಜು ಹುದ್ದಾರರ ಲಾಭದಾಯಕ ಮೀನುಗಾರಿಕೆಗೆ ಮನ್‌ಕೀ ಬಾತ್‌ನಲ್ಲಿ ಮೆಚ್ಚುಗೆ

ದೇಶ ಕಾಯುವ ಸೈನಿಕ. ಅನ್ನ ನೀಡುವ ರೈತ, ರಾಷ್ಟ್ರಕ್ಕೆ 2 ಕಣ್ಣುಗಳು ಇದ್ದಂತೆ. ಈ ಮಾತಿನಂತೆ ಬೆಳಗಾವಿ ಯುವಕರೊಬ್ಬರು ಸಾಧನೆ ಮಾಡಿದ್ದು, ಪ್ರಧಾನಿ ಮೋದಿ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಡ ರೈತ ಕುಟುಂಬದಲ್ಲಿ ಜನಿಸಿದ ಯುವಕ ಸೇನೆ ಸೇರುವ ಕನಸು ಕಂಡಿದ್ದರು, ಕನಸು ಸಾಕಾರಗೊಳ್ಳದೆ ಇದ್ದಾಗ ಧೃತಿಗೆಡದೆ 27ನೇ ವಯಸ್ಸಿನಲ್ಲಿ ಕೃಷಿ ಉಪಕಸುಬು ಮೀನು ಸಾಕಾಣಿಕೆಯತ್ತ ಹೊರಳಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ತಾಲೂಕಿನ ಬೋಡಕ್ಯಾನಟ್ಟಿ ಗ್ರಾಮದ ಯುವಕ ರಾಜು ಶಿವಲಿಂಗಪ್ಪ ಹುದ್ದಾರ ಮೀನುಗಾರಿಕೆಯಲ್ಲಿ ಯಶಸ್ವಿ ಕಂಡ ಯುವ ಕೃಷಿಕ. ಲಕ್ಷಾಂತರ ರು. ಸಂಪಾದಿಸಿ ಇತರರಿಗೆ ಮಾದರಿಯಾಗಿದ್ದಾರೆ. ಮನೆ ಬಾಗಿಲಿಗೆ ಮೀನು ಖರೀದಿಸಲು ಬೇರೆ, ಬೇರೆ ರಾಜ್ಯದ ಜನ ಬರುವ ಮಟ್ಟಿಗೆ ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸಿರುವ ಯುವರೈತ ರಾಜು ಅವರ ಸಾಧನೆಯನ್ನು ಪ್ರಧಾನಿ ಮೋದಿ ಅವರು ಭಾನುವಾರದ ‘ಮನ್ ಕಿ ಬಾತ್’ ಸಂಚಿಕೆಯಲ್ಲಿ ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬಿಎ ಪದವಿ ಮುಗಿಸಿರುವ ರಾಜು ಹುದ್ದಾರ, ಮೊದಲಿಗೆ ಆರ್ಮಿ ಸೇರುವ ಉತ್ಸಾಹ ದಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಹೈನುಗಾರಿಕೆ ಉದ್ಯಮಕ್ಕೆ ಕೈ ಹಾಕುವ ಯೋಚನೆಯನ್ನು ಕೈ ಬಿಟ್ಟರು. ಮುಂದೆ ಮೀನು ಕೃಷಿ ಕುರಿತು ಆಸಕ್ತಿ ಬೆಳೆಸಿಕೊಂಡು ಅತ್ಯಾಧುನಿಕ ಪದ್ಧತಿಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನ ಬಳಸಿ ಕುಚ್ಚು ಮೀನು ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ. ಸದ್ಯ ಇದರಿಂದ ಲಕ್ಷಾಂತರ ರು. ಸಂಪಾದನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Bangalore News: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್

1 ಎಕರೆ ಜಮೀನಿ ಬಳಕೆ: ತಂದೆಯ ನಾಲ್ಕು ಎಕರೆ ಜಮೀನಿನಲ್ಲಿ ಒಂದು ಎಕರೆ ಜಮೀನನ್ನು ಮೀನು ಕೃಷಿಗೆ ಬಳಸಿಕೊಂಡ ರಾಜು, ಅತ್ಯಾಧುನಿಕ ಪದ್ಧತಿಯಲ್ಲಿ ಬಯೋ ಪ್ಲಾಕ್ ತಂತ್ರಜ್ಞಾನ ಬಳಸಿ ನಾಲ್ಕು ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಬೇಡಿಕೆ ಇರುವ ಕುಚ್ಚು (ಮರಲ್) ಮೀನು ಮರಿಗಳನ್ನು ಆಂಧ್ರ ದಿಂದ ತಂದಿದ್ದಾರೆ. ಕೃಷಿ ಹೊಂಡಕ್ಕೆ ಆಮ್ಲಜನಕ ಪೂರೈಸುವ ಏರಿಯೇಟರ್ ಜತೆಗೆ ಹಕ್ಕಿಗಳ ದಾಳಿ ಆಗದಂತೆ ಬಲೆ ಹಾಗೂ ನೀರು ಪೂರೈಸುವ ಪೈಪ್‌ಲೈನ್ ಸೇರಿದಂತೆ ಒಟ್ಟು 31 ಲಕ್ಷ ರು. ಖರ್ಚು ಮಾಡಿದ್ದಾರೆ.

ಮೀನು ಸಾಕಾಣಿಕೆ ತರಬೇತಿಗಾಗಿ ಪರದಾಟ: ಯಾವಾಗ ಮೀನು ಕೃಷಿ ಮಾಡಬೇಕೆಂದು ರಾಜು ನಿರ್ಧಾರ ಮಾಡಿದರೋ ಅದೇ ದಿನದಿಂದ ಈ ಕುರಿತು ಮಾಹಿತಿ ಪಡೆದುಕೊಳ್ಳಲು ಊರೂರು ಅಡ್ಡಾಡಿದರು. ಸುಮಾರು ಒಂದು ವರ್ಷಗಳ ಕಾಲ ನಿರಂತರ ತರಬೇತಿ ನಂತರವೇ ತಮ್ಮ ಕನಸಿನ ಉದ್ಯಮಕ್ಕೆ ಚಾಲನೆ ನೀಡಿದ್ದರು. ವಿಜಯಪುರ, ತುಮಕೂರು, ಮಂಡ್ಯ, ಹೈದರಾಬಾದ್, ವಿಜಯವಾಡ ಸೇರಿದಂತೆ ಅನೇಕ ಕಡೆಗಳಿಗೆ ತೆರಳಿ ಮೀನುಗಾರಿಕೆ ಕುರಿತು ಮಾಹಿತಿ ಪಡೆದುಕೊಂಡರು. ನಂತರ ತಂದೆಗೆ ತಾವು ಮಾಡುವ ಕೆಲಸದ ಕುರಿತು ಸಂಪೂರ್ಣ ಮಾಹಿತಿ ನೀಡಿ ಆಪ್ತರಿಂದ ಹಣದ ಸಹಾಯ ಪಡೆದು ಉದ್ಯಮದಲ್ಲಿ ಯಶಸ್ವಿ ಯಾಗಿದ್ದಾರೆ.

ಒಂದೂವರೆ ವರ್ಷದಲ್ಲಿ 47 ಲಕ್ಷ ರು. ಲಾಭ

2024ರಲ್ಲಿ ಮೀನುಗಳ ಕೃಷಿ ಪ್ರಾರಂಭಿಸಿದ ನಂತರ ಈಗಾಗಲೇ ಎರಡು ಅವಧಿಯಲ್ಲಿ ಮೀನು ಮಾರುಕಟ್ಟೆ ಮಾಡಲಾಗಿದೆ. ಮೊದಲ 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 25 ಲಕ್ಷ ರೂ. ಆದಾಯ ಬಂದಿದ್ದರೆ ಎರಡನೇ ಅವಧಿಯಲ್ಲಿ 22 ಲಕ್ಷ ರೂ. ಕೈಸೇರಿದೆ. ಹೈದರಾಬಾದ್ ಮುಶಿರಾಬಾದ್ ವ್ಯಾಪಾರಿಗಳು ಖುದ್ದಾಗಿ ಜಮೀನಿಗೆ ಬಂದು ಮೀನು ಖರೀದಿ ಮಾಡುತ್ತಾರೆ. ಕೆಜಿಗೆ 250 ರಿಂದ 300 ವರೆಗೆ ದರ ಸಿಗುತ್ತದೆ. ಉತ್ತರ ಭಾರತದಲ್ಲಿ ಕುಚ್ಚು ಮೀನಿಗೆ ಅಪಾರ ಬೇಡಿಕೆ ಹಿನ್ನಲೆಯಲ್ಲಿ ಉತ್ತಮ ಲಾಬ ಗಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ರಾಜು.

ಅಳವಡಿಸಿಕೊಂಡ ವಿಧಾನ

4 ಎಕೆರೆಯಲ್ಲಿ ಒಂದು ಎಕರೆ ಮೀನುಗಾರಿಕೆ

ಬಯೋಪ್ಲಾಕ್ ತಂತ್ರಜ್ಞಾನ ಬಳಸಿ ಕೃಷಿ ಹೊಂಡ

ಬೇಡಿಕೆ ಹೆಚ್ಚಿರುವ ಮರಲ್ ತಳಿ ಮೀನುಗಳ ಸಾಕಣೆ

ಮೀನು ಕೃಷಿಗೆ ಒಟ್ಟು 31 ಲಕ್ಷ ರು. ಖರ್ಚು

image

ಮೀನು ಸಾಕಾಣಿಕೆ ಮಾಡುವ ನಿರ್ಧಾರದ ಮೊದಲು ಹಲವು ಉದ್ಯಮದ ಕುರಿತು ವಿಚಾರಿಸಿದ್ದೇ. ಹೊಸ ಆಲೋಚನೆಯೊಂದಿಗೆ ಪ್ರಾರಂಭಿಸಿದ ಮೀನು ಕೃಷಿ ಸದ್ಯ ನಮ್ಮನ್ನು ಆರ್ಥಿಕವಾಗಿ ಸಾಕಷ್ಟು ಮೇಲೆತ್ತಿದೆ. ತಂದೆ ಹಾಗೂ ಸಹೋದರರ ಬೆಂಬಲದ ಫಲವಾಗಿ ಯಶಸ್ಸು ಸಿಕ್ಕಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಶಂಸೆ ಇನ್ನಷ್ಟು ಸಾಧಿಸುವ ಛಲ ಮೂಡಿಸಿದೆ.

-ರಾಜು ಹುದ್ದಾರ, ಯುವ ಕೃಷಿಕ