ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kannadiga majority voters in Manjeshwara: ಮಂಜೇಶ್ವರದಲ್ಲಿ ಕನ್ನಡಿಗರೇ ಬಹುಸಂಖ್ಯಾತ ಮತದಾರರು

ಮಂಜೇಶ್ವರ ತಾಲೂಕಿಗೆ ಒಳಪಟ್ಟ ಎಣ್ಮಕಜೆ, ಕುಂಬಳೆ, ಮಂಗಲ್ಪಾಡಿ (ಉಪ್ಪಳ) ಮಂಜೇಶ್ವರ, ಮೀಂಜಾ, ಪೈವಳಿಕೆ, ಪುತ್ತಿಗೆ, ವರ್ಕಾಡಿ ಗ್ರಾಮ ಪಂಚಾಯತ್‌ಗಳು ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೊಳಪಡುತ್ತದೆ. ಕನ್ನಡ, ಹವ್ಯಕ, ತುಳು, ಕೊಂಕಣಿ ಮಲಯಾಳಂ, ಬ್ಯಾರಿ ಮತ್ತು ಮರಾಠಿ ಮಾತೃಭಾಷೆಯವರು ಇಲ್ಲಿ ವಾಸಿಸುತ್ತಿದ್ದರೂ ಆ ಪೈಕಿ ಶೇ.80 ಮಂದಿ ಕನ್ನಡ ಮಾಧ್ಯಮದಲ್ಲಿ ಕಲಿತವರು.

ಮಂಜೇಶ್ವರದಲ್ಲಿ ಕನ್ನಡಿಗರೇ ಬಹುಸಂಖ್ಯಾತ ಮತದಾರರು

-

Ashok Nayak
Ashok Nayak Mar 26, 2026 9:11 AM

-ನರೇಂದ್ರ ಪಾರೆಕಟ್

ಕೇರಳದ ಉತ್ತರದ ತುತ್ತ ತುದಿಯ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕನ್ನಡಿಗರ ಭದ್ರಕೋಟೆ. ಈ ಸಲ ಕೇರಳದ ಎಲ್ಲಾ ರಾಜಕೀಯ ಪಕ್ಷಗಳ ಕಣ್ಣು ಈ ಕ್ಷೇತ್ರದ ಚುನಾವಣಾ ಪಲಿತಾಂಶದತ್ತ ನೆಟ್ಟಿದೆ.

ಮಂಜೇಶ್ವರ ಬರೀ ಕೇರಳೀಯರಿಗಷ್ಟೇ ಅಲ್ಲ, ಕನ್ನಡಿಗರಿಗೂ ಚಿರಪರಿಚಿತ ಹೆಸರು. ನಮ್ಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಹುಟ್ಟಿದ ಊರದು. ಮೈಸೂರು ಪ್ರಾಂತ್ಯದ ಭಾಗ ವಾಗಿದ್ದ ಕನ್ನಡ ಪ್ರದೇಶ ಮಂಜೇಶ್ವರವು ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಕೇರಳ ರಾಜ್ಯಕ್ಕೆ ಸೇರಿತು. ಹಾಗಾಗಿ ಕೇರಳದ ಅತ್ಯಂತ ಉತ್ತರದ ವಿಧಾನಸಭಾ ಕ್ಷೇತ್ರವಾದ ಮಂಜೇಶ್ವರದ ಚುನಾವಣೆಯಲ್ಲಿ ಈಗಲೂ ಕನ್ನಡಿಗ ಮತದಾರರೇ ನಿರ್ಣಾಯಕರು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2021ರ ಅಂಕಿ-ಅಂಶಗಳ ಪ್ರಕಾರ ಇರುವ ಒಟ್ಟು ಮತದಾರರ ಒಟ್ಟು ಸಂಖ್ಯೆ 2 ಲಕ್ಷದ 20 ಸಾವಿರ. ಆ ಪೈಕಿ ಪುರುಷ ಮತದಾರರ ಸಂಖ್ಯೆ 1.10 ಲಕ್ಷವಾದರೆ, ಅಷ್ಟೇ ಸಂಖ್ಯೆಯ ಮಹಿಳಾ ಮತದಾರರೂ ಈ ಕ್ಷೇತ್ರದಲ್ಲಿದ್ದಾರೆ.

ಮಂಜೇಶ್ವರ ತಾಲೂಕಿಗೆ ಒಳಪಟ್ಟ ಎಣ್ಮಕಜೆ, ಕುಂಬಳೆ, ಮಂಗಲ್ಪಾಡಿ (ಉಪ್ಪಳ) ಮಂಜೇ ಶ್ವರ, ಮೀಂಜಾ, ಪೈವಳಿಕೆ, ಪುತ್ತಿಗೆ, ವರ್ಕಾಡಿ ಗ್ರಾಮ ಪಂಚಾಯತ್‌ಗಳು ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೊಳಪಡುತ್ತದೆ. ಕನ್ನಡ, ಹವ್ಯಕ, ತುಳು, ಕೊಂಕಣಿ ಮಲಯಾಳಂ, ಬ್ಯಾರಿ ಮತ್ತು ಮರಾಠಿ ಮಾತೃಭಾಷೆಯವರು ಇಲ್ಲಿ ವಾಸಿಸುತ್ತಿದ್ದರೂ ಆ ಪೈಕಿ ಶೇ.80 ಮಂದಿ ಕನ್ನಡ ಮಾಧ್ಯಮದಲ್ಲಿ ಕಲಿತವರು. ಹಾಗಾಗಿ ಇದು ಸಂಪೂರ್ಣ ಕನ್ನಡ ಪ್ರಾಬಲ್ಯದ ಪ್ರದೇಶ ಎಂದೇ ಜನಜನಿತವಾಗಿದೆ. ಆ ಕಾರಣಕ್ಕಾಗಿಯೇ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಬಾರಿಯೂ ಎಲ್ಲಾ ರಾಜಕೀಯ ಪಕ್ಷಗಳೂ ಬಹುತೇಕ ಕನ್ನಡ ಬಲ್ಲ ಅಭ್ಯರ್ಥಿಗಳಿಗೇ ಮಣೆ ಹಾಕುವುದೂ ಅವುಗಳ ಗೆಲುವಿನ ಪ್ರಯತ್ನದ ರಣತಂತ್ರವೂ ಹೌದು. ಇಲ್ಲಿಂದ ಪ್ರತೀ ಬಾರಿ ಗೆದ್ದ ಶಾಸಕ ಕೇರಳ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವುದು ಕೂಡಾ ಕನ್ನಡದಲ್ಲಿಯೇ ಎಂಬುದು ನಿಜಕ್ಕೂ ಉಲ್ಲೇಖನೀಯ.

ಇದನ್ನೂ ಓದಿ: Narendra Parekat Column: ಭಾರತ-ಪಾಕ್ ಸರ್ ಕ್ರೀಕ್ ವಿವಾದ: ಏನಿದು ಸಮಸ್ಯೆ? ಭಾರತ ಕೊಟ್ಟ ಎಚ್ಚರಿಕೆ ಏನು?

1957ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ಕನ್ನಡ ಹೋರಾಟಗಾರರಾಗಿದ್ದ ಎಂ.ಉಮೇಶ್ ರಾವ್ ಸ್ವತಂತ್ರ ಅಭ್ಯರ್ಥಿಯಾಗಿ ಮಂಜೇಶ್ವರ ವಿಧಾನಸಭೆಯಿಂದ ಆಯ್ಕೆಯಾದವರು. ಆ ಬಳಿಕ,1960, 1965ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೋರ್ವ ಕನ್ನಡ ಧುರೀಣ ಕೆ.ಮಹಾಬಲ ಭಂಡಾರಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೇರಳ ವಿಧಾನಸಭೆ ಪ್ರವೇಶಿಸಿದರು. ಅವರು ಆ ಬಳಿಕ 1967ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಜೇಶ್ವರದಿಂದ ಗೆದ್ದರು.

1970 ಮತ್ತು 1977ರ ಚುನಾವಣೆಯಲ್ಲಿ ಇನ್ನೋರ್ವ ಕನ್ನಡ ಹೋರಾಟಗಾರ ಎಂ.ರಾಮಪ್ಪ ಸಿಪಿಐ (ಎಡರಂಗ) ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದರು. 1980 ಮತ್ತು 1982ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮತ್ತೋರ್ವ ಕನ್ನಡಿಗ ಎ.ಸುಬ್ಬರಾವ್ ಕೇರಳದ ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದವರು.

ಆದರೆ 1987ರಿಂದ ಮಂಜೇಶ್ವರ ಕ್ಷೇತ್ರವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ತನ್ನ ಮೈತ್ರಿಕೂಟದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ ಬಿಟ್ಟುಕೊಟ್ಟಿತು. ಹಾಗಾಗಿ 1987, 1991, 1996 ಮತ್ತು 2001ರಲ್ಲಿ ಅದರ ಅಭ್ಯರ್ಥಿಯಾಗಿದ್ದ ಚೆರ್ಕಳಂ ಅಬ್ದುಲ್ಲ ಅವರು 4 ಸಲ ಮಂಜೇಶ್ವರ ವಿಧಾನಸಭಾ ಸದಸ್ಯರಾದರು. ಕೊನೆಯ ಅವಧಿಯಲ್ಲಿ ಸಚಿವರೂ ಆಗಿದ್ದರು. ಆದರೆ ಅಷ್ಟೊತ್ತಿಗಾಗಲೇ ಬಿಜೆಪಿ ಕೂಡಾ ಈ ಕ್ಷೇತ್ರದಲ್ಲಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಹೋಯಿತು.

2006ರ ವಿಧಾನಸಭಾ ಚುನಾವಣೆಯಲ್ಲಿ ಚೆರ್ಕಳಂ ಅಬ್ದುಲ್ಲಾ ಸೋತು, ಎಡರಂಗ ಒಕ್ಕೂಟದ ಸಿಪಿಐ ಅಭ್ಯರ್ಥಿ ಸಿಎಚ್ ಕುಂಞಂಬು ಆಯ್ಕೆಯಾಗುವಲ್ಲಿ ಸಫಲವಾದರೆ, ಆ ಅವಧಿಯಲ್ಲಿ ಬಿಜೆಪಿ 2ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. 2011ರಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ನ ಅಭ್ಯರ್ಥಿ ಅಬ್ದುಲ್ ರಜಾಕ್ ಮಂಜೇಶ್ವರದಿಂದ ಆಯ್ಕೆ ಯಾದರು.

2016ರಲ್ಲಿ ನಡೆದ ಚುನಾವಣೆ ಬಲು ರೋಚಕವಾಗಿತ್ತು. ಕೇರಳ ರಾಜ್ಯದ ಬಿಜೆಪಿಯ ಹಿರಿಯ ನೇತಾರ ಕೆ. ಸುರೇಂದ್ರನ್ ಅವರನ್ನು ಕೇವಲ 89 ಮತಗಳ ಅಂತರದಲ್ಲಿ ಸೋಲಿಸಿ ಅಬ್ದುಲ್ ರಜಾಕ್ ವಿಧಾನಸಭೆಗೆ ಮರು ಆಯ್ಕೆಯಾದರು. ಆದರೆ ಅವರ ಅವರ ಹಠಾತ್ ನಿಧನದ ನಂತರ ತೆರವಾದ ಕ್ಷೇತ್ರದಲ್ಲಿ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮುಸ್ಲಿಂಲೀಗ್‌ನ ಎಂಸಿ. ಕಮರುದ್ಧೀನ್ ಜಯ ಗಳಿಸಿ ವಿಧಾನಸಭೆ ಪ್ರವೇಶಿಸಿದರು.

ಕಳೆದ 2021ರಲ್ಲಿ ನಡೆದ ಚುನಾವಣಾ ಅಖಾಡದಲ್ಲಿ ಮುಸ್ಲಿಂಲೀಗ್‌ನ ಅಭ್ಯರ್ಥಿ ಕೆಎಂ ಆಶ್ರಫ್ ಅವರು ಬಿಜೆಪಿಯ ಕೆ. ಸುರೇಂದ್ರನ್ ಅವರನ್ನು 845 ಮತಗಳ ಅಂತರದಿಂದ ಸೋಲಿಸಿ ಚೊಚ್ಚಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಅಶ್ರಫ್ ಯುಡಿಎಫ್ ಅಭ್ಯರ್ಥಿ: ಯುಡಿಎಫ್ ಮೈತ್ರಿಕೂಟವು ಮುಸ್ಲಿಂಲೀಗ್‌ನ ಕೆಎಂ ಅಶ್ರಫ್ ಅವರನ್ನೇ ಮತ್ತೆ ಮಂಜೇಶ್ವರದಲ್ಲಿ ಈ ಸಲ ಕಣಕ್ಕಿಳಿಸಿದೆ. ಅತ್ಯಂತ ಸೌಮ್ಯ ಸ್ವಭಾವದ ಶಾಸಕ ಎಂದೇ ಜನಜನಿತರಾಗಿರುವ ಅಶ್ರಫ್ ಈ ಸಲದ ರಾಜ್ಯದ ಆಡಳಿತ ವಿರೋಧಿ ಅಲೆಯ ಮಧ್ಯೆ ದೊಡ್ಡ ಅಂತರದಿಂದ ಮತ್ತೆ ಮರು ಆಯ್ಕೆ ಆಗುತ್ತಾರೆ ಎಂಬ ನಿರೀಕ್ಷೆ ಯುಡಿಎಫ್ ಒಕ್ಕೂಟದ್ದಾಗಿದೆ. ಹಾಗಾಗಿ ರಾಜ್ಯದ ಘಟಾನುಘಟಿ ಕಾಂಗ್ರೆಸ್ ನಾಯಕರು ಮಂಜೇಶ್ವರದಲ್ಲಿ ಸತತ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಮಂಜೇಶ್ವರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಗೆಲ್ಲಲು ಅವಕಾಶ ಕೊಡಬಾರದು ಎಂಬ ಕಾರಣಕ್ಕೆ ಯುಡಿಎಫ್ ಪರವಾಗಿ ಪ್ರಚಾರಕ್ಕಾಗಿ ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಕೂಡಾ ಬರುವ ಸಾಧ್ಯತೆ ಇದೆ.

ಮತ್ತೆ ಸುರೇಂದ್ರನ್ ಕಣಕ್ಕೆ: ಈ ಸಲದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕೈದು ಸ್ಥಾನಗಳನ್ನು ಬಗಲಿಗೆ ಹಾಕಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಮಂಜೇಶ್ವರ ದಿಂದ ತನ್ನ ಸಮರ್ಥ ಅಭ್ಯರ್ಥಿ ಸುರೇಂದ್ರನ್ ಅವರನ್ನು ಕಣಕ್ಕೆ ಇಳಿಸಿ ಪ್ರಚಾರ ಕಾರ್ಯ ಆರಂಭಿಸಿದೆ. ಪಕ್ಷದ ಅಭ್ಯರ್ಥಿಗೆ ಕನ್ನಡಿಗರ ಮತವನ್ನು ಕ್ರೂಢೀಕರಿಸುವ ಜವಾಬ್ದಾರಿ ಯನ್ನು ಮಂಗಳೂರು ಸಂಸದ ಬ್ರಿಜೇಶ್ ಚೌಟ, ಶಾಸಕ ವೈ. ಭರತ್ ಶೆಟ್ಟಿ ಮತ್ತು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್‌ಗೆ ನೀಡಲಾಗಿದ್ದು ಹಲವಾರು ದಿನಗಳಿಂದ ಅವರೆಲ್ಲರೂ ಮಂಜೇಶ್ವರದಲ್ಲಿ ಬೀಡುಬಿಟ್ಟು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಒಂದೆರಡು ಚುನಾವಣೆಗಳಲ್ಲಿ ಚಿಕ್ಕ ಅಂತರದಲ್ಲಿ ಸೋಲುಂಡಿರುವ ತಾನು ಈ ಚುನಾವಣೆಯಲ್ಲಿ ಗೆದ್ದು ಚೊಚ್ಚಲ ಬಾರಿ ವಿಧಾನಸಭೆ ಪ್ರವೇಶಿಸುವ ನಿರೀಕ್ಷೆ ಸುರೇಂದ್ರನ್ ಅವರಲ್ಲಿದೆ.

ಜಯಾನಂದ ಎಲ್‌ಡಿಎಫ್ ಅಭ್ಯರ್ಥಿ: ಕೇರಳದ ಆಡಳಿತರೂಡ ಎಡರಂಗವು ಪಕ್ಷದ ಯುವ ನಾಯಕ ಕೆಆರ್ ಜಯಾನಂದ ಅವರನ್ನು ಈ ಸಲ ಚುನಾವಣಾ ಕಣಕ್ಕಿಳಿಸಿದೆ. ಸ್ಥಳೀಯರೂ, ಕೇರಳ ರಾಜ್ಯ ತುಳು ಅಕಾಡಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಕ್ಷೇತ್ರದಲ್ಲಿ ಪರಿಚಿತರಾಗಿರುವ ಜಯಾನಂದ ಅವರಿಗೆ ಕ್ಷೇತ್ರದ ತುಳು ಮಾತೃಭಾಷೆಯ ಮತದಾರ ರೆಲ್ಲರೂ ಪೂರ್ಣ ಬೆಂಬಲ ನೀಡಿ ಅವರಿಗೆ ಗೆಲುವನ್ನು ತಂದುಕೊಡಬಹುದೆನ್ನುವುದು ಎಲ್‌ಡಿಎಫ್‌ನ ರಾಜಕೀಯ ಲೆಕ್ಕಾಚ್ಚಾರವಾಗಿದೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಿದ್ದರೂ, ಮುಸ್ಲಿಮ್‌ರ ಸಂಖ್ಯೆಯೂ ಕಡಿಮೆಯೇನಲ್ಲ. ಹಿಂದೂಗಳಲ್ಲಿ ಬ್ರಾಹ್ಮಣ ಸಮುದಾಯ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡದವರೂ ಇದ್ದಾರೆ. ಇದುವರೆಗೂ ಧರ್ಮ ಇಲ್ಲವೇ ಜಾತಿಯ ಆಧಾರದಲ್ಲಿ ಇಲ್ಲಿ ಮತದಾನ ನಡೆದಿಲ್ಲ. ತಾವು ನಂಬಿಕೆ ಇರಿಸಿರುವ ಪಕ್ಷದ ಸಿದ್ಧಾಂತಕ್ಕೇ ಮತದಾನ ಮಾಡುವ ಪ್ರಕ್ರಿಯೆ ಮೊದಲಿನಿಂದಲೂ ಇಲ್ಲಿದೆ.

ಹಣಾಹಣಿ ನಿರೀಕ್ಷೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 3 ಚುನಾವಣೆಗಳಲ್ಲೂ ಯುಡಿಎಫ್-ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆದಿದೆ. ತನ್ನ ಅಭ್ಯರ್ಥಿ ಶತಾಯ ಗತಾಯ ವಿಧಾನಸಭೆಗೆ ಆಯ್ಕೆಯಾಗಲು ಅವಕಾಶ ಕೊಡಬಾರದೆಂಬ ಕಾರಣಕ್ಕೆ ಎಲ್‌ಡಿಎಫ್ ಮಂಜೇಶ್ವರದಲ್ಲಿ ಮುಸ್ಲಿಂಲೀಗ್ ಅಭ್ಯರ್ಥಿಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂಬುವುದು ಬಿಜೆಪಿಯ ಇತ್ತೀಚೆಗಿನ ಆರೋಪವಾಗಿದ್ದು, ಈ ಸಲ ಮಂಜೇಶ್ವರದಿಂದ ಬಿಜೆಪಿಯ ಜೈತ್ರಯಾತ್ರೆ ಆರಂಭವಾಗಲಿದೆ ಎಂಬುವುದು ಪಕ್ಷದ ಅಭ್ಯರ್ಥಿ ಸುರೇಂದ್ರನ್ ಅವರ ನಿರೀಕ್ಷೆಯಾಗಿದೆ. ತಾನು ಕಳೆದ 5 ವರ್ಷದಲ್ಲಿ ಬೆಳೆಸಿಕೊಂಡಿರುವ ವೈಯಕ್ತಿಕ ವರ್ಚಸ್ಸಿನ ಕಾರಣಕ್ಕೆ ಮತ್ತೆ ಮತದಾರರು ತನಗೇ ಮಣೆಹಾಕುವುದು ಶತಸಿದ್ಧ ಎಂಬುವುದು ಯುಡಿಎಫ್ ಅಭ್ಯರ್ಥಿ ಅಶ್ರಫ್ ಅವರ ಆತ್ಮವಿಶ್ವಾಸವಾಗಿದೆ. ಕೇರಳದಲ್ಲಿ ಸತತ ಹತ್ತು ವರ್ಷಗಳ ಕಾಲ ಎಡರಂಗ ಸರಕಾರ ಗರಿಷ್ಠ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವು ದರಿಂದ ಈ ಸಲ ಮತದಾರರು ತನ್ನನ್ನು ಆರಿಸಿ ವಿಧಾನಸಭೆಗೆ ಕಳುಹಿಸಲಿದ್ದಾರೆ ಎಂಬು ವುದು ಆ ಪಕ್ಷದ ಅಭ್ಯರ್ಥಿ ಜಯಾನಂದ ಅವರ ನಿರೀಕ್ಷೆಯಾಗಿದೆ.

‘ಗಿಳಿವಿಂಡು’ವಿಗೆ ಸಿಗದ ಕಾಯಕಲ್ಪ ಆರೋಪ

ಮಂಜೇಶ್ವರದಲ್ಲಿ ಗೋವಿಂದ ಪೈ ಅವರ ಹೆಸರಿನ ಸರಕಾರಿ ಕಾಲೇಜು ಇದ್ದರೂ ಕೇರಳ ದಲ್ಲಿ ಇದುವರೆಗೂ ಅಧಿಕಾರಕ್ಕೆ ಬಂದ ಎರಡೂ ಪಕ್ಷಗಳ ಸರಕಾರಗಳು ಕಾಲೇಜಿಗೆ ಅಗತ್ಯ ವಾಗಿರುವ ಎಲ್ಲಾ ಅನುದಾನ ನೀಡಿಲ್ಲ. ಹಾಗಾಗಿ ನಾವು ಮಕ್ಕಳನ್ನು ಮಂಗಳೂರಿಗೆ ಪದವಿ ಶಿಕ್ಷಣ ಪಡೆಯಲು ಕಳುಹಿಸುತ್ತಿದ್ದೇವೆ ಎಂಬುವುದು ಸ್ಥಳೀಯ ಹೆಚ್ಚಿನವರ ಬೇಸರ. ರಾಷ್ಟ್ರ ಕವಿಯ ಮನೆಯ ಪುನರ್ ನವೀಕರಣ ಯೋಜನೆ ‘ಗಿಳಿವಿಂಡು’ವಿಗೂ ಸಮರ್ಪಕ ಆರ್ಥಿಕ ಅನುದಾನ ಕೇರಳ ಸರಕಾರದಿಂದ ಇದುವರೆಗೂ ಸಿಕ್ಕಿಲ್ಲ ಎಂಬುವುದು ಮಂಜೇಶ್ವರದ ಹೆಚ್ಚಿನ ಕನ್ನಡಿಗರ ಅಸಮಾಧಾನವಾಗಿದೆ.

ಎಕ್ಸ್ ಪ್ರೆಸ್ ವೇ: ಸಂತಸ

ಮಂಜೇಶ್ವರದಿಂದ ಜಿಲ್ಲಾ ಕೇಂದ್ರವಾದ ಕಾಸರಗೋಡು ನಗರ ಮತ್ತು ದಕ್ಷಿಣ ಕೇರಳ ತಲುಪಲು ಮೊದಲು ಹಳ್ಳಕೊಳ್ಳದ ರಸ್ತೆಗಳಿದದ್ದು, ಇದೀಗ ಎಕ್ಸ್ ಪ್ರೆಸ್ ವೇ ಆಗಿರುವುದು ನಿಜಕ್ಕೂ ಸಂತಸದ ವಿಷಯ ಎನ್ನುತ್ತಾರೆ ಮಂಜೇಶ್ವರದ ನಾಗರಿಕರು.