ಮೈಸೂರಿಗೆ ವರ್ಷವಿಡೀ ಕಾಡಿದ ವನ್ಯಜೀವಿ ಉಪದ್ರವ!
ನಿರೀಕ್ಷೆ ಮೀರಿ ಹೆಚ್ಚಿದ ಆನೆ, ಹುಲಿ ಹಾಗೂ ಚಿರತೆಗಳ ಸಂತತಿ ಯಿಂದ ಕಾಡಂಚಿನ ಗ್ರಾಮಗಳಲ್ಲಿ ನೆಮ್ಮದಿ ದೂರಾಗಿದೆ. ಆಳುವ ಮಂದಿಗೆ ಗ್ರಾಮದ ಜನರ ಗೋಳು ನರಿ ಕೂಗು ಗಿರಿ ಮುಟ್ಟಿತೇ ಎಂಬಂತಾ ಗಿದೆ. ಆದರೂ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ಇದ್ದಲ್ಲಿಯೇ ಬದುಕು ಕಟ್ಟಿಕೊಳ್ಳುವ ಗ್ರಾಮೀಣ ಜನರ ಬದುಕಿನ ಮೇಲೆ ಕಾಡುಪ್ರಾಣಿಗಳ ಸವಾರಿ ನಡೆದೇ ಇದೆ.
-
ಕೆ.ಜೆ.ಲೋಕೇಶ್ ಬಾಬು, ಮೈಸೂರು
ಅರಣ್ಯ ಇಲಾಖೆಯ ನಿದ್ದೆಗೆಡಿಸಿದ ಮಾನವ -ಪ್ರಾಣಿಗಳ ಸಂಘರ್ಷ
ಆನೆ, ಹುಲಿ, ಚಿರತೆ ಹಾವಳಿ
ಕ್ಯಾಲೆಂಡರ್ ಅನ್ವಯ 2025 ಕಳೆದು 2026ಕ್ಕೆ ಅಡಿಯಿಟ್ಟಾಯಿತು. 2025ರ ಆರಂಭದ ದಿನದಿಂದ ಮೊದಲ್ಗೊಂಡು ಕೊನೆಯ ದಿನದ ಅಂತಿಮ ಕ್ಷಣದವರೆಗಿನ 365 ದಿನಗಳಲ್ಲಿ ಈ ಜಗತ್ತು ನಾನಾ ಬಗೆಯ ಘಟನೆಗಳಿಗೆ ಸಾಕ್ಷಿಯಾಗಿದೆ. ಹುಟ್ಟು-ಸಾವು, ನೋವು-ನಲಿವು, ದುಃಖ-ದುಮ್ಮಾನ ಸೇರಿದಂತೆ ಎಲ್ಲ ಬಗೆಯ ಮಜಲುಗಳಿಗೆ ಸಾಕ್ಷಿಯಾದವರು ಕೋಟ್ಯಂತರ ಮಂದಿ. ಇಂತಹ ಸಂದರ್ಭದಲ್ಲಿ ಕಳೆದು ಹೋದ 365 ದಿನಗಳ ವರ್ಷವಿಡೀ ಮೈಸೂರು ಜಿಲ್ಲೆಯಲ್ಲಿ ನಡೆದ ಕಣ್ಣೆದುರಿಗಿನ ವಿದ್ಯ ಮಾನಗಳು ಹತ್ತು ಹಲವು..!
ಹಿನ್ನೋಟದತ್ತ ಕಿರುನೋಟ: ಅಂತಹ ಪ್ರಮುಖ ವಿದ್ಯಮಾನಗಳತ್ತ ಒಮ್ಮೆ ಹಿಂತಿರುಗಿ ಕಣ್ಣಾಡಿಸಿ ದರೆ ಪ್ರಮುಖವಾಗಿ ಕಂಡುಬರುವುದು ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ. ಒಂದು ಕಡೆ ಪಶ್ಚಿಮ ಘಟ್ಟದ ಮಗ್ಗಲು, ಮತ್ತೊಂದು ಕಡೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಮಗದೊಂದು ಕಡೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಇನ್ನೊಂದು ಕಡೆ ಬಿಳಿಗಿರಿ ವನ್ಯಜೀವಿ ಧಾಮ ಸುತ್ತುವರೆದಿರುವ ಮೈಸೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪದ್ರವ ಇಂದು, ನಿನ್ನೆಯ ದಲ್ಲ ಎನ್ನಬಹುದಾದರೂ, 2025ರಲ್ಲಿ ತುಸು ಹೆಚ್ಚೇ ಎನ್ನಬಹುದು. ಮಾತ್ರವಲ್ಲ, ಅದರಿಂದ ಆದ ಹಾನಿಯೂ ಅಧಿಕ ಎಂಬುದನ್ನು ದಾಖಲೆಗಳೇ ದೃಢೀಕರಿಸುತ್ತವೆ.
ಆನೆ, ಹುಲಿ, ಚಿರತೆ ಹಾವಳಿ: ನಿರೀಕ್ಷೆ ಮೀರಿ ಹೆಚ್ಚಿದ ಆನೆ, ಹುಲಿ ಹಾಗೂ ಚಿರತೆಗಳ ಸಂತತಿ ಯಿಂದ ಕಾಡಂಚಿನ ಗ್ರಾಮಗಳಲ್ಲಿ ನೆಮ್ಮದಿ ದೂರಾಗಿದೆ. ಆಳುವ ಮಂದಿಗೆ ಗ್ರಾಮದ ಜನರ ಗೋಳು ನರಿ ಕೂಗು ಗಿರಿ ಮುಟ್ಟಿತೇ ಎಂಬಂತಾಗಿದೆ. ಆದರೂ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ಇದ್ದಲ್ಲಿಯೇ ಬದುಕು ಕಟ್ಟಿಕೊಳ್ಳುವ ಗ್ರಾಮೀಣ ಜನರ ಬದುಕಿನ ಮೇಲೆ ಕಾಡುಪ್ರಾಣಿಗಳ ಸವಾರಿ ನಡೆದೇ ಇದೆ.
ಇದನ್ನೂ ಓದಿ: T20 World Cup 2026: ಶಾಹೀನ್ ಶಾ ಅಫ್ರಿದಿಗೆ ಗಾಯ, ಪಾಕಿಸ್ತಾನ ತಂಡಕ್ಕೆ ಭಾರಿ ಹಿನ್ನಡೆ!
ನಗರಕ್ಕೂ ನುಗ್ಗಿದ ವನ್ಯಜೀವಿ: ಕಾಡಂಚಿನ ಗ್ರಾಮಗಳಲ್ಲಿ ವರ್ಷವಿಡೀ ಕಾಣಿಸಿಕೊಂಡು ಉಪದ್ರವ ನೀಡುವ ಕ್ರೂರ ಪ್ರಾಣಿಗಳು ಇದೀ ಮೈಸೂರು ನಗರದ ಗಡಿಯೊಳಗೆ, ನಗರದ ಹೃದಯ ಭಾಗಕ್ಕೆ ಕೆಲವೇ ಕಿಮೀ ಅಂತರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರಾಣಿ ಹಾಗೂ ಮಾನವನ ನಡುವಣ ಸಂಘರ್ಷಕ್ಕೆ ಹೊಸದೊಂದು ಭಾಷ್ಯ ಬರೆದಿದೆ.
ನಾಗರಹೊಳೆ ಮತ್ತು ಬಂಡೀಪುರ ಸಮೀಪದ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು ಇದೀಗ ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಅಲೋಕ ಅರಮನೆ, ಆರ್‌ಎಂಪಿ, ಬೆಮೆಲ್ ಆವರಣದಲ್ಲಿ ಕಾಣಿಸಿಕೊಳ್ಳುವ ಮೂಲಕ 2025ನೇ ಹೊಸದೊಂದು ದಾಖಲೆ ಬರೆಯಿತು.
ಹುಲಿಗೆ ಮೂವರು ಬಲಿ: ಜಿಲ್ಲೆಯಲ್ಲಿ ಕೇವಲ ಒಂದೆರಡು ತಿಂಗಳ ಅಂತರದಲ್ಲೇ ಮೇಲಿಂದ ಮೇಲೆ ನಡೆದ ಹುಲಿ ದಾಳಿಯಿಂದ ಮೂವರು ಮೃತಪಟ್ಟು, ಒಬ್ಬರು ತೀವ್ರವಾಗಿ ಗಾಯಗೊಂಡರು. ಈ ವೇಳೆ ಜನರ ತಾಳ್ಮೆಯ ಕಟ್ಟೆಯೊಡೆಯಿತು. ಪರಿಣಾಮ, ಹುಲಿ ಸೆರೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಗೆ ಕೇವಲ ಮೂರು ತಿಂಗಳ ಅಂತರದಲ್ಲಿ ಸೆರೆ ಸಿಕ್ಕಿದ್ದು 30ಕ್ಕೂ ಹೆಚ್ಚು ಹುಲಿಗಳು.
ಮೋಜು ಮಸ್ತಿ ಗದ್ದಲ: ಗ್ರಾಮಗಳ ಅಂಚಿನಲ್ಲಿ ಹುಲಿಗಳು ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳು ತ್ತಿರುವುದಕ್ಕೆ ಕಾರಣದ ಹುಡುಕಾಟ ನಡೆಸಿದ ವೇಳೆ ಹೊರ ಬಂದ ಫಲಿತಾಂಶವೇ ಕಾಡಿನೊಳಗಿನ ಮೋಜು ಮಸ್ತಿ ಎಂಬ ಅಂಶ. ಪರಿಣಾಮ, ಹಗಲು ಮುಗಿದು ರಾತ್ರಿ ಕಳೆಯುವುದರೊಳಗಾಗಿ ಸಫಾರಿ ನಿಷೇಧ ಆಜ್ಞೆ ಹೊರ ಬಿತ್ತು. ಕಾಡನ್ನೇ ನಂಬಿ ಕಾಸು ಮಾಡಲು ಹೊರಟಿದ್ದ ಮಂದಿಗೆ ಸರಕಾರದ ಈ ನಿರ್ಧಾರ ಮಗ್ಗಲ ಮುಳ್ಳಾಯಿತು. ಸಫಾರಿ ಪುನಾರಂಭಿಸಬೇಕು ಎಂದು ದೊಡ್ಡ ಪ್ರಮಾಣದಲ್ಲಿ ಕೂಗು ಎದ್ದಿತು. ಅದಕ್ಕೆ ಪರ್ಯಾಯ ವಾಗಿ ಸಫಾರಿ ಮಾಡಕೂಡದು ಎಂಬ ಬಲವಾದ ಪ್ರತಿಪಾದನೆ ನಡೆದಿದೆ. ಮಾನವ-ಪ್ರಾಣಿ ಸಂಘರ್ಷದ ಕಥೆ ಒಂದೆಡೆಯಾದರೆ, ಸಫಾರಿ ಪರ-ವಿರೋಧದ ಕೂಗು ಕೂಡ ಜಿಲ್ಲೆಯಲ್ಲಿ ಸರಿಸಮನಾಗಿಯೇ ಮಾರ್ಧನಿಸುತ್ತಿದೆ.
ನಗು ಮರೆಸಿದ ನುಗು: ಮಾನವ ಹಾಗೂ ಕಾಡು ಪ್ರಾಣಿಗಳ ನಡುವೆ ತೀವ್ರ ಸ್ವರೂಪದ ಸಂಘರ್ಷಕ್ಕೆ ಕಾರಣವಾಗಿದ್ದು ಎಚ್ .ಡಿ.ಕೋಟೆ ಮತ್ತು ಸರಗೂರು ತಾಲೂಕುಗಳ ನುಗು ವನ್ಯಜೀವಿಧಾಮ. ಹುಲಿ ದಾಳಿಗೆ ಬಡಗಲಪುರ ಗ್ರಾಮದಲ್ಲಿ ಮಹದೇವ್ ತೀವ್ರ ಗಾಯಗೊಂಡು ಕಣ್ಣು ಕಳೆದುಕೊಂಡರೆ, ಬೆಣ್ಣೆಗೆರೆ ಗ್ರಾಮದ ರಾಜಶೇಖರ್, ಕೂಡಿಗಿ ಗ್ರಾಮದ ದೊಡ್ಡನಿಂಗಯ್ಯ, ಹಳೆ ಹೆಗ್ಗುಡಿಲು ಗ್ರಾಮದ ದಂಡನಾಯಕ ಪ್ರಾಣ ಕಳೆದುಕೊಂಡರು.
ನಗರ ಸಮೀಪ ದರ್ಶನ: ನ.30ರಂದು ಕೂರ್ಗಳ್ಳಿ ಸಮೀಪದ ಬೆಮೆಲ್ ಕಾರ್ಖಾನೆ ಆವರಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿತು. ಸಮೀಪದ ಇಲವಾಲದ ಅಲೋಕ ಅರಮನೆಯ ಅರಣ್ಯ ಭಾಗದಲ್ಲಿ 3 ಮರಿಗಳೊಂದಿಗೆ ಹೆಣ್ಣು ಹುಲಿ ಪತ್ತೆಯಾಗಿತ್ತು. ಅದರಲ್ಲಿ ಒಂದು ಹುಲಿ ಮರಿಯನ್ನು ಸೆರೆ ಹಿಡಿಯಲಾಯಿತು.
ವನ್ಯಜೀವಿಗಳ ಹೆಜ್ಜೆ ಜಾಡು ಹಿಡಿದು ಹೊರಟಾಗ...
ಮೈಸೂರಿನ ಇನೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ 15 ದಿನ ನಡೆದ ಸೆರೆ ಕಾರ್ಯಾಚರಣೆ ಮಾಡಿ ನಂತರ ಸ್ಥಗಿತ ಮಾಡಲಾಯಿತು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವಲಯದ ಮುದಗನೂರು ಕೆರೆಯಂಚಿನ ರೈಲ್ವೆ ಬ್ಯಾರಿಕೇಡ್ ಪಿಲ್ಲರ್ ನಡುವೆ ಸಿಲುಕಿದ್ದ 30 ವರ್ಷ ವಯಸ್ಸಿನ ಸಲಗ ರಕ್ಷಣೆ ಮಾಡಲಾಯಿತು. ಎಚ್.ಡಿ.ಕೋಟೆ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ 46 ವರ್ಷದ ಗಂಡು ಕಾಡಾನೆ ಅನಾರೋಗ್ಯದಿಂದ ಸಾವು. ಸರಗೂರು ತಾಲೂಕಿನ ಬಿಡುಗಲು ಗ್ರಾಮದಲ್ಲಿ ಗೋಬರ್ ಗ್ಯಾಸ್ ಬಾವಿಗೆ ಬಿದ್ದಿದ್ದ 6 ತಿಂಗಳ ಹುಲಿ ಮರಿ ಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು.
ಆನೆ, ಹುಲಿ, ಹದ್ದುಗಳ ಮರಣ ಮೃದಂಗ !
ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ 5ನೇ ಬ್ಲಾಕ್ ನಿವಾಸಿ ಹರೀಶ್ ಕುರಿ ಮೇಯಿಸುತ್ತಿದ್ದಾಗ ಹುಲಿ ದಾಳಿಗೆ ಮೃತಪಟ್ಟರು. ಎಚ್.ಡಿ.ಕೋಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವನ್ಯಜೀವಿ ವಲಯದ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ 5 ರಣಹದ್ದುಗಳು ಮೃತಪಟ್ಟವು.
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ಹೆಣ್ಣಾನೆ ‘ಪದ್ಮಾವತಿ’ (71) ಸಾವು. ’ಆರ್‌ಎಂಪಿ’ ಆವರಣದಲ್ಲಿ ಹುಲಿ ಪ್ರತ್ಯಕ್ಷ. ಮೃಗಾಲಯದಲ್ಲಿದ್ದ ಜಾಗ್ವಾರ್ ’ವಿಕ್ರಂ’ ಸಾವು. ಮೈಸೂರು ತಾಲೂ ಕಿನ ದೊಡ್ಡಮಾರಗೌಡನಹಳ್ಳಿಯಲ್ಲಿ 8-10 ವರ್ಷದ ಗಂಡು ಚಿರತೆ ಸೆರೆ. ತಿ.ನರಸೀಪುರ ತಾಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ಸುಮಾರು 4 ವರ್ಷದ ಹೆಣ್ಣು ಚಿರತೆ ಸೆರೆ.
ತಿ.ನರಸೀಪುರ ತಾಲೂಕಿನ ಬೂದಹಳ್ಳಿಯಲ್ಲಿ ಬೋನಿಗೆ ಬಿದ್ದ 6 ವರ್ಷದ ಗಂಡು ಚಿರತೆ ಸೆರೆ. ಮೈಸೂರು ರೇಸ್ ಕ್ಲಬ್ ನಲ್ಲಿದ್ದ ಕುದುರೆಯೊಂದು ’ಗ್ಲಾಂಡರ್ಸ್’ ರೋಗದ ಸೋಂಕಿನಿಂದ ಮೃತ ಪಟ್ಟಿತು. ತದನಂತರದಲ್ಲೇ ಚಾಮರಾಜೇಂದ್ರ ಮೃಗಾಲಯದ ಹೆಣ್ಣುಹುಲಿ ’ತಾಯಮ್ಮ’ ಅನಾ ರೋಗ್ಯದಿಂದ ಸಾವಿಗೀಡಾಯಿತು.
ಹುಲಿ ದಾಳಿಗೆ ಬಲಿಯಾದ ಅನ್ನದಾತರು
ಸರಗೂರು ತಾಲೂಕಿನ ಬಡಗಲಪುರದಲ್ಲಿ ರೈತ ಮಹದೇವ್ ಮೇಲೆ ಹುಲಿ ದಾಳಿಯಿಂದ ತೀವ್ರ ಗಾಯ. ನುಗು ವನ್ಯಜೀವಿ ವಲಯ ಅರಣ್ಯದಂಚಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಹುಲಿ ದಾಳಿಯಿಂದ ಸಾವು. ಮೊಳೆಯೂರು ಅರಣ್ಯದಂಚಿನ ಕುರ್ಣೇಗಾಲದ ಜಮೀನಿನಲ್ಲಿ ಹಸು ಮೇಯಿ ಸುತ್ತಿದ್ದ ಕೂಡಿಗಿಯ ರೈತ ದೊಡ್ಡನಿಂಗಯ್ಯ ಹುಲಿ ದಾಳಿಯಿಂದ ಸಾವು. ಹಳೆಹೆಗ್ಗುಡಿಲು ಗ್ರಾಮ ದಲ್ಲಿ ರೈತ ದಂಡನಾಯಕ ಸಾವು.