Actor Darshan: ಜಾಮೀನು ರದ್ದು ಮಾಡಬೇಡಿ; ಸುಪ್ರೀಂ ಕೋರ್ಟ್‌ಗೆ ಲಿಖಿತ ಕಾರಣಗಳನ್ನು ನೀಡಿದ ನಟ ದರ್ಶನ್, ಪವಿತ್ರಾ ಗೌಡ
Actor Darshan: ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಪರ ವಕೀಲರು ಸುಪ್ರೀಂ ಕೋರ್ಟ್ ಲಿಖಿತ ರೂಪದ ವಾದ ಸಲ್ಲಿಸಿದ್ದು, ಜಾಮೀನು ಯಾಕೆ ರದ್ದು ಮಾಡಬಾರದು ಎಂಬುದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.


ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡದಂತೆ ಸುಪ್ರೀಂ ಕೋರ್ಟ್‌ಗೆ ನಟ ದರ್ಶನ್ (Actor Darshan) ಹಾಗೂ ಪವಿತ್ರಾ ಗೌಡ ಲಿಖಿತ ರೂಪದ ಕಾರಣಗಳನ್ನು ನೀಡಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್‌ನಲ್ಲಿ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಇತ್ತೀಚೆಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಜಾಮೀನು ನೀಡಲು ಹೈಕೋರ್ಟ್ ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಸದ್ಯ ವಿಚಾರಣೆ ಮುಂದೂಡಿಕೆಯಾಗಿದ್ದು, ತೀರ್ಪು ನೀಡುವುದು ಬಾಕಿ ಇದೆ.
ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ 2 ನಟ ದರ್ಶನ್ ಹಾಗೂ ಆರೋಪಿ 1 ಪವಿತ್ರಾ ಗೌಡ ಪರ ವಕೀಲರು ಸುಪ್ರೀಂ ಕೋರ್ಟ್ ಲಿಖಿತ ರೂಪದ ವಾದ ಸಲ್ಲಿಸಿದ್ದು, ಜಾಮೀನು ಯಾಕೆ ರದ್ದು ಮಾಡಬಾರದು ಎಂಬುದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಅದರಲ್ಲಿ ಸಾಕ್ಷಿ ಕೊರತೆ ಎಂಬ ಅಂಶವನ್ನು ದರ್ಶನ್ ಪರ ವಕೀಲರು ನೀಡಿದ್ದರೆ, ಇತ್ತ ಪವಿತ್ರಾ ಗೌಡ ಅವರು ಕುಟುಂಬ ಕಾರಣ ನೀಡಿದ್ದಾರೆ.
ನಟ ದರ್ಶನ್ ಪರ ವಕೀಲರ ವಾದವೇನು?
ದರ್ಶನ್‌ರನ್ನು ಮೈಸೂರಿನಲ್ಲಿ ಬಂಧಿಸಿದ್ದರೂ, ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ಬಂಧನಕ್ಕೆ ಕಾರಣವನ್ನು ಸಂಜೆ 6:30 ರವರೆಗೂ ಲಿಖಿತವಾಗಿ ನೀಡಿಲ್ಲ. ಇದು ಕಾನೂನು ಉಲ್ಲಂಘನೆ. ದರ್ಶನ್ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ, ರೇಣುಕಾಸ್ವಾಮಿ ಅಪಹರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಯಾವುದೆ ಸಾಕ್ಷ್ಯವಿಲ್ಲ. ದರ್ಶನ್ ಮತ್ತು ಆರೋಪಿ 3 ಪವನ್ ನಡುವೆ ಕರೆಗಳು ಅಥವಾ ವಾಟ್ಸಾಪ್ ಸಂದೇಶಗಳ ವಿನಿಮಯವಾಗಿಲ್ಲ. ಸಾಕ್ಷಿಗಳಾದ ಕಿರಣ್, ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಅವರ ಹೇಳಿಕೆಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದೆ. ಸಾಕ್ಷಿಗಳು ಕೋರ್ಟ್‌ನಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಿಲ್ಲ. ಮೂರು ಸೆಕೆಂಡ್ ವೀಡಿಯೊ ಇದೆ ಎನ್ನುತ್ತಿರುವ ಬೆಂಗಳೂರು ಪೊಲೀಸರ ವಾದದಲ್ಲಿ ಹುರುಳಿಲ್ಲ. ಮೂರು ಸೆಕೆಂಡ್‌ಗಳ ವಿಡಿಯೋ ಅಸ್ತಿತ್ವದಲ್ಲೇ ಇಲ್ಲ. ವಿಡಿಯೋವನ್ನು ಚಾರ್ಜ್ ಶೀಟ್ ನಲ್ಲಿ ಅಥವಾ ಹೈಕೋರ್ಟ್‌ನಲ್ಲಿ ಸಲ್ಲಿಸಿಲ್ಲ ಎಂದು ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Fake Documents: ತಂದೆಯ ಆಸ್ತಿ ವಶಕ್ಕೆ ಪಡೆಯಲು ಕೋರ್ಟ್‌ಗೆ ನಕಲಿ ದಾಖಲೆ ಸಲ್ಲಿಕೆ; ಮುಖ್ತಾರ್ ಅನ್ಸಾರಿ ಪುತ್ರನ ಬಂಧನ
ಪವಿತ್ರಾ ಗೌಡ ಪರ ವಕೀಲರ ವಾದವೇನು?
ಮೃತ ರೇಣುಕಾಸ್ವಾಮಿಯಿಂದ ಪವಿತ್ರಾ ಗೌಡ ಲೈಂಗಿಕ ಕಿರುಕುಳಕ್ಕೊಳಗಾಗಿದ್ದರು. ಪವಿತ್ರಾಗೌಡ ಮತ್ತು ಇತರ ಆರೋಪಿಗಳ ನಡುವೆ ಸಂವಹನ ನಡೆದಿಲ್ಲ. ಪ್ರಾಸಿಕ್ಯೂಷನ್ ಕ್ರಿಮಿನಲ್ ಸಂಚನ್ನು ಸಾಬೀತುಪಡಿಸಲು ವಿಫಲವಾಗಿದೆ. ಪವಿತ್ರಾ ಗೌಡರಿಂದ ರೇಣುಕಾಸ್ವಾಮಿಗೆ ಮಾರಣಾಂತಿಕ ಹಲ್ಲೆಯಾಗಿಲ್ಲ. ಪವಿತ್ರಾ ಗೌಡ ಒಬ್ಬಂಟಿ ಪೋಷಕರು. 10ನೇ ತರಗತಿಯಲ್ಲಿ ಓದುತ್ತಿರುವ ಮಗಳಿದ್ದಾಳೆ. ಆಕೆಯ ಆರೈಕೆ ಮಾಡಬೇಕಿದೆ. ವಯಸ್ಸಾದ ಪೋಷಕರಿಗೆ ಪವಿತ್ರಾ ಗೌಡ ಆಧಾರವಾಗಿದ್ದಾರೆ. ಯಾವುದೇ ಕ್ರಿಮಿನಲ್ ಕೇಸ್ ಹಿನ್ನಲೆ ಇಲ್ಲ. ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ನೀಡಿಲ್ಲ ಎಂದು ವಕೀಲರು ಕಾರಣಗಳನ್ನು ನೀಡಿದ್ದಾರೆ.