Kannada New Movie: ವಿಭಿನ್ನ ಶೀರ್ಷಿಕೆಯ ‘4.30 - 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ’ ಚಿತ್ರಕ್ಕೆ ಮುಹೂರ್ತ
Sandalwood News: ಪೂವೈ ಸುರೇಶ್ ಹಾಗೂ ಶಿವರಾಜ್ ನಿರ್ದೇಶಿಸುತ್ತಿರುವ ವಿಭಿನ್ನ ಶೀರ್ಷಿಕೆಯುಳ್ಳ ʼ4.30 ರಿಂದ 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲʼ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರೇಣುಕಾಂಬ ಥಿಯೇಟರ್‌ನಲ್ಲಿ ನೆರವೇರಿತು. ಈ ಕುರಿತ ವಿವರ ಇಲ್ಲಿದೆ.

-

ಬೆಂಗಳೂರು: ʼ4.30 ರಿಂದ 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲʼ ಎಂಬ (4.30 - 6 Muhurtha Nalvaru kaanisuttilla Movie) ವಿಭಿನ್ನ ಶೀರ್ಷಿಕೆಯುಳ್ಳ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರೇಣುಕಾಂಬ ಥಿಯೇಟರ್‌ನಲ್ಲಿ ನೆರವೇರಿತು. ನೀಲಕಂಠ ಫಿಲಂಸ್ ಹಾಗೂ ಧರ್ಮಶ್ರೀ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಧರ್ಮಶ್ರೀ ಮಂಜುನಾಥ್ (ರಥಾವರ) ಹಾಗೂ ಡಿ. ಯೋಗರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಪೂವೈ ಸುರೇಶ್ ಹಾಗೂ ಶಿವರಾಜ್ ನಿರ್ದೇಶಿಸುತ್ತಿದ್ದಾರೆ. ಧರ್ಮಶ್ರೀ ಮಂಜುನಾಥ್ ಅವರ ಪುತ್ರ ಎಂ.ಎನ್. ಸುಚಿತ್ ನಾಯಕನಾಗಿ ಹಾಗೂ ಸಾತ್ವಿಕ ನಾಯಕಿಯಾಗಿ ನಟಿಸುತ್ತಿದ್ದಾರೆ.
ಚಿತ್ರದ ದ್ವಿತೀಯ ನಾಯಕನಾಗಿ ಅನಿಲ್ ಹಾಗೂ ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಧನ್ಯ ಅಭಿನಯಿಸುತ್ತಿದ್ದಾರೆ. ನಾಯಕ ಎಂ.ಎನ್ ಸುಚಿತ್ ಹುಟ್ಟುಹಬ್ಬದ ದಿನವೇ ಚಿತ್ರ ಆರಂಭವಾಗಿದ್ದು ವಿಶೇಷ.

ಮುಹೂರ್ತ ಸಮಾರಂಭದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನೀಲಕಂಠ ಫಿಲಂಸ್‌ನ ಡಿ. ಯೋಗರಾಜ್ ಮಾತನಾಡಿ, ನಮ್ಮ ನೀಲಕಂಠ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಐದನೇ ಚಿತ್ರ ಇದು. ಈ ಚಿತ್ರವನ್ನು ನೀಲಕಂಠ ಫಿಲಂಸ್ ಹಾಗೂ ಧರ್ಮಶ್ರೀ ಎಂಟರ್‌ಪ್ರೈಸಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ʼ4.30 ರಿಂದ 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲʼ, ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಕಥಾಹಂದರ ಹೊಂದಿರುವ ಚಿತ್ರ ಎಂದು ತಿಳಿಸಿದರು.
90ರ ದಶಕದಲ್ಲಿ ಮದುವೆ ಅಂದರೆ ಒಂದು ಸಂಭ್ರಮ. ಪ್ರತಿಯೊಬ್ಬರ ಮನೆಗೂ ಹೋಗಿ ಪತ್ರಿಕೆ ಕೊಟ್ಟು ಮದುವೆಗೆ ಕರೆಯುತ್ತಿದ್ದರು. ಈಗ ಹಾಗಲ್ಲ. ಎಲ್ಲಾ ಮೊಬೈಲ್‌ನಲ್ಲೇ. ಹಾಗಾಗಿ ಈಗಿನ ಜನತೆಗೆ ಅಂದಿನ ಸಂಬಂಧಗಳು ಹೇಗಿತ್ತು ಎಂದು ತೋರಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ. ಹಾಡುಗಳ ಚಿತ್ರೀಕರಣ ಚಿಕ್ಕಮಗಳೂರು, ಮಂಗಳೂರು ಮುಂತಾದ ಕಡೆ ಆಗಲಿದೆ. ಧರ್ಮಶ್ರೀ ಮಂಜುನಾಥ್ ಅವರ ಪುತ್ರ ಎಂ.ಎನ್. ಸುಚಿತ್ ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಡಿ. ಯೋಗರಾಜ್ ಹೇಳಿದರು.
ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಮಾತನಾಡಿ, ನನ್ನ ಮಗನಿಗಾಗಿ ನಾನೇ ಒಂದು ಸಿನಿಮಾ ನಿರ್ಮಾಣ ಮಾಡುವುದು ಕಷ್ಟ ಇರಲಿಲ್ಲ. ಆದರೆ, ಅವನು ಮೊದಲು ಉತ್ತಮ ಕಲಾವಿದ ಅಂತ ಕರೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ನಟನೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾನೆ. ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾನೆ. ನೀಲಕಂಠ ಫಿಲಂಸ್ ಹಾಗೂ ನಮ್ಮ ಧರ್ಮಶ್ರೀ ಎಂಟರ್‌ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ನಾಯಕ ಎಂ.ಎನ್. ಸುಚಿತ್ ಮಾತನಾಡಿ, ಈ ಚಿತ್ರದ ಕಥೆ ಚೆನ್ನಾಗಿದೆ. ನಾನು ಈ ಹಿಂದೆ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದ ಮೂಲಕ ನಾಯಕನಾಗಿ ನಟಿಸುತ್ತಿದ್ದೇನೆ. ನಟನೆ, ಸಾಹಸ ಸೇರಿದಂತೆ ಎಲ್ಲವನ್ನು ಕಲಿತ್ತಿದ್ದೇನೆ. ಡಿ. ಯೋಗರಾಜ್ ಅವರು ಬಹಳ ಹೇಳಿಕೊಟ್ಟಿದ್ದಾರೆ. ನನ್ನ ಆಸೆಗೆ ಅಪ್ಪನ ಆಶೀರ್ವಾದ ಸದಾ ಇರುತ್ತದೆ. ನಮ್ಮ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Deepavali Jewel Fashion 2025: ದೀಪಾವಳಿ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಆಭರಣಗಳು
ನಿರ್ದೇಶಕರಾದ ಪೂವೈ ಸುರೇಶ್, ಶಿವರಾಜ್, ಚಿತ್ರದ ದ್ವಿತೀಯ ನಾಯಕ ಅನಿಲ್, ದ್ವಿತೀಯ ನಾಯಕಿ ಧನ್ಯ, ಕಲಾವಿದರಾದ ರಮೇಶ್ ರೈ, ರೇಖಾದಾಸ್, ವಸ್ತ್ರ ವಿನ್ಯಾಸ ಮಾಡುತ್ತಿರುವ ಸುಶೀಲ ಯೋಗರಾಜ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.