Operation London Cafe Movie: ಸಡಗರ ರಾಘವೇಂದ್ರ ನಿರ್ದೇಶನದ ʼಆಪರೇಷನ್ ಲಂಡನ್ ಕೆಫೆʼ ಚಿತ್ರ ನ.28ಕ್ಕೆ ರಿಲೀಸ್
Sandalwood News: ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ, ಕವೀಶ್ ಶೆಟ್ಟಿ ಅಭಿನಯದ ʼಆಪರೇಷನ್ ಲಂಡನ್ ಕೆಫೆʼ ಚಿತ್ರ ನವೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಅತೀ ಶೀಘ್ರದಲ್ಲೇ ಪ್ರೇಕ್ಷಕರನ್ನು ರಂಜಿಸುವ ಚಿತ್ರದ ಮಾಸ್ ಮತ್ತು ಮೆಲೋಡಿ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಮಾಡಲಿರುವುದಾಗಿ ಚಿತ್ರ ತಂಡ ತಿಳಿಸಿದೆ.
-
ಬೆಂಗಳೂರು: ಸಿನಿಪ್ರಿಯರ ಬಹು ನಿರೀಕ್ಷೆಯ ʼಆಪರೇಷನ್ ಲಂಡನ್ ಕೆಫೆʼ ಚಿತ್ರದ (Operation London Cafe Movie) ಬಿಡುಗಡೆಯ ದಿನಾಂಕದ ಕೌಂಟ್‌ಡೌನ್ ಈಗಾಗಲೇ ಶುರುವಾಗಿದೆ. ಇದೇ ನವೆಂಬರ್ 28ಕ್ಕೆ ಚಿತ್ರ ಬಿಡುಗಡೆಯಾಗುವ ಸಿಹಿ ಸುದ್ಧಿಯನ್ನು ಚಿತ್ರತಂಡ ಪೋಸ್ಟರ್ ಬಿಡುಗಡೆಯ ಮೂಲಕ ಹಂಚಿಕೊಂಡಿದೆ. ಉಡುಪಿ ಮೂಲದ ಇಂಡಿಯನ್ ಫಿಲಂ ಫ್ಯಾಕ್ಟರಿ, ಮರಾಠಿಯ ದೀಪಕ್ ರಾಣೆ ಫಿಲಂಸ್ ಲಾಂಛನದ ಅಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿರುವ ಈ ಚಿತ್ರ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುವ ತರಾತುರಿಯಲ್ಲಿದೆ.
ತನ್ನ ಮೊದಲ ಚಿತ್ರ ‘ಜಿಲ್ಕಾʼ ದ ಮೂಲಕ ಲವರ್ ಕಮ್ ಚಾಕಲೇಟ್ ಬಾಯ್ ಆಗಿ ಚಿತ್ರ ರಸಿಕರ ಗಮನ ಸೆಳೆದಿದ್ದ ಕವೀಶ್ ಶೆಟ್ಟಿ ‘ಅಪರೇಷನ್ ಲಂಡನ್ ಕೆಫೆʼ ಯ ಮಾಸ್ ಕಮ್ ಅಕ್ಷನ್ ಪೋಸ್ಟರ್ ಮತ್ತು ಟೀಸರ್ ಮೂಲಕ ಚಿತ್ರರಂಗಕ್ಕೆ ಒಬ್ಬ ಪ್ರತಿಭಾವಂತ ನಟನಾಗುವ ಎಲ್ಲಾ ಭರವಸೆಯನ್ನು ನೀಡಿದ್ದಾರೆ. ಇವರಿಗೆ ಜತೆಯಾಗಿ ಕನ್ನಡಿಗರ ಮನೆ ಮಾತಿನ ಬೆಡಗಿ ಮೇಘಾ ಶೆಟ್ಟಿ ಕುತೂಹಲ ಮೂಡಿಸುವ ತಮ್ಮ ಅಪ್ಪಟ ಹಳ್ಳಿ ಸೊಗಡಿನ ಹೈಸ್ಕೂಲು ಹುಡುಗಿಯ ಗೆಟಪ್ಪಿನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಟೆರ್ರರ್ ಲುಕ್ ಮೂಲಕ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡ್ಕೆ ತೆರೆ ಹಂಚಿಕೊಂಡಿದ್ದರೆ ಅರ್ಜುನ್ ಕಾಪಿಕಾಡ್ ಅದರಲ್ಲೂ ವಿಶೇಷವಾಗಿ ಒಬ್ಬ ಆರ್ಮಿ ಆಫೀಸರ್ ಉಡುಪಿನಲ್ಲಿ ತುಂಬಾ ಖದರ್‌ರಾಗಿ ಕಾಣುತ್ತಿದ್ದಾರೆ.
ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಬಿ. ಸುರೇಶ್, ಧರ್ಮೇಂದ್ರ ಅರಸ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವತ್ಥ್, ಅಶ್ವಿನಿ ಚವೇರಾ ಮುಂತಾದ ಕನ್ನಡ ಮತ್ತು ಮರಾಠಿಯ ಹೆಸರಾಂತ ಕಲಾವಿದರ ಸಂಗಮವಿದೆ. ಈ ಚಿತ್ರಕ್ಕೆ ಆರ್.ಡಿ. ನಾಗಾರ್ಜುನ್ ಛಾಯಾಗ್ರಹಣ, ಪ್ರಾಂಶು ಝಾ ಸಂಗೀತ, ವರದರಾಜ್ ಕಾಮತ್ ಕಲಾ ನಿರ್ದೇಶನ, ವಿಕ್ರಂ ಮೊರ್, ಮಾಸ್ ಮಾದ, ಅರ್ಜುನ್ ರಾಜ್ ಸಾಹಸವಿದ್ದು, ಕವಿರಾಜ್ ಮತ್ತು ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಅನಿರುಧ್ ಶಾಸ್ತ್ರಿ, ಬ್ರಿಜೇಶ್ ಶಾಂಡಿಲ್ಯ, ಐಶ್ವರ್ಯ ರಂಗರಾಜನ್, ಶ್ರೀ ಲಕ್ಷ್ಮಿ ಬೆಳ್ಮಣ್ಣು, ಪ್ರಥ್ವಿ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Winter Fashion 2025: 2025ರ ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಫ್ಯಾಷನ್‌ವೇರ್‌ಗಳಿವು!
ಅತೀ ಶೀಘ್ರದಲ್ಲೇ ಪ್ರೇಕ್ಷಕರನ್ನು ರಂಜಿಸುವ ಚಿತ್ರದ ಮಾಸ್ ಮತ್ತು ಮೆಲೋಡಿ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಮಾಡಲಿರುವುದಾಗಿ ಚಿತ್ರ ತಂಡ ತಿಳಿಸಿದೆ.