ಬರೀ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ 50+ ಕೋಟಿ ರೂ. ಬಾಚಿದ ʻಧುರಂಧರ್ 2ʼ ಸಿನಿಮಾ; ಎಲ್ಲರಿಗೂ ಈಗ ಮೊದಲ ದಿನದ ಗಳಿಕೆ ಮೇಲೆ ಕಣ್ಣು
ಧುರಂಧರ್ 2 ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಮಾರ್ಚ್ 19ರಂದು ಅಧಿಕೃತವಾಗಿ ರಿಲೀಸ್ ಆಗೋದಕ್ಕೂ ಮುನ್ನ ನಡೆದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳಿಂದಲೇ ಈ ಚಿತ್ರಔು 52 ಕೋಟಿ ರೂ. ಬಾಚಿಕೊಂಡಿದೆ. ಕೆಲವು ತಾಂತ್ರಿಕ ಕಾರಣಗಳಿಂದ ದಕ್ಷಿಣ ಭಾರತದ ಭಾಷೆಗಳ ಶೋಗಳು ರದ್ದಾಗಿದ್ದರೂ, ಉತ್ತಮ ಗಳಿಕೆ ಮಾಡುವಲ್ಲಿ ಈ ಸಿನಿಮಾ ಹಿಂದೆ ಬಿದ್ದಿಲ್ಲ!
-
ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬೇಟೆಯಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಕೇವಲ 'ಪೇಯ್ಡ್ ಪ್ರೀಮಿಯರ್' ಪ್ರದರ್ಶನಗಳಿಂದಲೇ ಈ ಚಿತ್ರವು ಮೊದಲ ಭಾಗದ ದಾಖಲೆಯನ್ನು ಮೀರಿಸಿದ್ದು, ಭಾರತದಲ್ಲಿ ಬರೋಬ್ಬರಿ 52 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರದ ಹಿಂದಿ ವರ್ಷನ್ ದೇಶಾದ್ಯಂತ 12,000ಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಕಂಡಿದೆ.
ದಾಖಲೆ ಪ್ರಮಾಣದ ಗಳಿಕೆ
ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ 'ಸ್ಯಾಕ್ನಿಲ್ಕ್' ವರದಿಯ ಪ್ರಕಾರ, 'ಧುರಂಧರ್: ದಿ ರಿವೆಂಜ್' ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಭಾರತದಾದ್ಯಂತ ಒಟ್ಟು 12,292 ಪ್ರದರ್ಶನಗಳಿಂದ 52 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ತಲುಪಿದೆ. ಇದರೊಂದಿಗೆ, ಭಾರತೀಯ ಸಿನಿಮಾವೊಂದರ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳ ಎಲ್ಲಾ ಹಳೆಯ ದಾಖಲೆಗಳನ್ನು 'ಧುರಂಧರ್: ದಿ ರಿವೆಂಜ್' ಅಳಿಸಿಹಾಕಿದೆ. ಅಂದಹಾಗೆ, ಧುರಂಧರ್ ಪಾರ್ಟ್ 1 ಸಿನಿಮಾವು ಮೊದಲ ದಿನ ಭಾರತದಲ್ಲಿ 33 ಕೋಟಿ ರೂ. ಗಳಿಸಿತ್ತು. ಆದರೆ ಪಾರ್ಟ್ 2 ಬರೀ ಪೇಯ್ಡ್ ಪ್ರೀಮಿಯರ್‌ನಿಂದಲೇ ಡಬಲ್ ಹಣವನ್ನು ಬಾಚಿಕೊಂಡಿರುವುದು ವಿಶೇಷ.
Dhurandhar 2 Review: ಆದಿತ್ಯ ಧರ್ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!
ಶೋ ಕ್ಯಾನ್ಸಲ್ ಆಗಿದ್ದರಿಂದ ಹಿನ್ನಡೆ
ಇನ್ನು, ತಾಂತ್ರಿಕ ಕಾರಣಗಳಿಂದ ಮಾರ್ಚ್ 18ರಂದು ಸಂಜೆ 5.30ಕ್ಕೆ ನಿಗದಿಯಾಗಿದ್ದ ಕೆಲವು ಪೇಯ್ಡ್ ಪ್ರದರ್ಶನಗಳು ರದ್ದಾಗಿದ್ದವು. ಹಿಂದಿ ಬಿಟ್ಟು ಇತರೆ ಭಾಷೆಗಳ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿತ್ತು. ಅಲ್ಲೆಲ್ಲಾ ಹಣವನ್ನು ವಾಪಸ್ ನೀಡಲಾಗಿದೆ. ಅದು ಕೂಡ ಗಳಿಕೆಯೊಳಗೆ ಸೇರಿದ್ದರೆ, ಪೇಯ್ಡ್ ಪ್ರೀಮಿಯರ್‌ನ ಕಲೆಕ್ಷನ್ ಇನ್ನೂ ಹೆಚ್ಚಾಗುತ್ತಿತ್ತು.
ಭರ್ಜರಿ ಓಪನಿಂಗ್ ಪಡೆದ ಧುರಂಧರ್
ಸದ್ಯದ ವರದಿಗಳ ಪ್ರಕಾರ, ಈ ಚಿತ್ರವು ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಲಿದ್ದು, ಮೊದಲ ಭಾಗದ ಒಟ್ಟು ಗಳಿಕೆಯನ್ನೂ ಮೀರಿಸುವ ಸಾಧ್ಯತೆಯಿದೆ. 'ಧುರಂಧರ್: ದಿ ರಿವೆಂಜ್' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ರಣವೀರ್ ಸಿಂಗ್ ಅವರೊಂದಿಗೆ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ಮೊದಲ ಭಾಗವು ವಿಶ್ವದಾದ್ಯಂತ 1,300 ಕೋಟಿ ರೂಪಾಯಿ ಗಳಿಸಿತ್ತು. ಇದೀಗ 'ಧುರಂಧರ್: ದಿ ರಿವೆಂಜ್' ಸಿನಿಮಾವು ಎಷ್ಟು ಕಲೆಕ್ಷನ್ ಮಾಡಬಹುದು ಮತ್ತು ಮೊದಲ ದಿನದ ಗಳಿಕೆ ಎಷ್ಟಾಗಬಹುದು ಎಂಬ ಕುತೂಹಲ ಸಿನಿಪ್ರಿಯರಿಗೆ ಇದೆ.