Love Mocktail 3 Review: ತಂದೆ - ಮಗಳ ಬಾಂಧವ್ಯದ ಕಥೆಯಲ್ಲಿ ಭಾವನಾತ್ಮಕ ಏರಿಳಿತಗಳು
Love Mocktail 3 Kannada Review: ʻಡಾರ್ಲಿಂಗ್ʼ ಕೃಷ್ಣ ಈ ಬಾರಿ ಕೇವಲ ಪ್ರೇಮಕಥೆಗೆ ಸೀಮಿತವಾಗದೆ ತಂದೆ-ಮಗಳ ಭಾವನಾತ್ಮಕ ಸಂಬಂಧವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪಾರ್ಟ್ 2ರಲ್ಲಿ ಪರಿಚಯವಾದ ಪುಟ್ಟ ಮಗಳ ಸುತ್ತ ಕಥೆ ಸಾಗಲಿದ್ದು, ಈ ಬಾರಿ ಬಾಲನಟಿ ಸಂವೃತಾ ಮತ್ತು ಕೃಷ್ಣ ಅವರ ಜುಗಲ್‌ಬಂದಿ ಇರಲಿದೆ.
-
ನಟ ʻಡಾರ್ಲಿಂಗ್ʼ ಕೃಷ್ಣ ಮೊದಲ ಬಾರಿಗೆ ʻಲವ್ ಮಾಕ್ಟೇಲ್ʼ ಸಿನಿಮಾ ಆರಂಭಿಸಿದಾಗ, ಬಹುಶಃ ಅವರಿಗೂ ಗೊತ್ತಿರಲಿಕ್ಕಿಲ್ಲ, ಇದು ಪಾರ್ಟ್ 3ರ ತನಕ ಹೋಗುತ್ತದೆ. ಹೌದು, ಪಾರ್ಟ್ 1ರಲ್ಲಿ ಆದಿ-ನಿಧಿ ಜೋಡಿಯ ಸ್ಟೋರಿಯನ್ನು ಹೇಳಿದ್ದ ಡಾರ್ಲಿಂಗ್ ಕೃಷ್ಣ, ಪಾರ್ಟ್ 2ರಲ್ಲಿ ನಿಧಿ ಇಲ್ಲದ ಆದಿ ಬದುಕು ಹೇಗಿದೆ ಮತ್ತು ಆತನ ಮಗಳಾಗಿ ನಿಧಿ ಅನ್ನೋ ಪುಟ್ಟ ಹುಡುಗಿ ಬಂದು ಸೇರುತ್ತಾಳೆ ಎಂಬುದನ್ನು ಸೊಗಸಾಗಿ ತಿಳಿಸಿದ್ದರು. ಆದರೆ ಪಾರ್ಟ್ 3 ಅನೌನ್ಸ್ ಮಾಡಿದಾಗ ಇನ್ನೇನಿದೆ ಹೇಳೋದಕ್ಕೆ ಅನ್ನೋದು ಡೌಟು ಎಲ್ಲರಿಗೂ ಇತ್ತು. ಆದರೆ ಈ ಬಾರಿ ಬೇರಯದೇ ಹಾದಿಯನ್ನು ತುಳಿದಿರುವ ಕೃಷ್ಣ, ಪ್ರೇಕ್ಷಕರನ್ನು ಭಾವುಕರನ್ನಾಗಿಸುವ ಕಾಯಕವನ್ನು ಮಾತ್ರ ಮರೆತಿಲ್ಲ.
ಇದು ಅಪ್ಪ - ಮಗಳ ಕಥೆ
ಹೌದು, ಲವ್ ಮಾಕ್ಟೇಲ್ 3 ಸಿನಿಮಾದಲ್ಲಿ ಆದಿ ಬಾಳಿಗೆ ಮತ್ಯಾವ ಲವ್ ಸ್ಟೋರಿಯನ್ನು ಎಳೆದು ತಂದಿಲ್ಲ. ಬದಲಾಗಿ, ಪಾರ್ಟ್ 2ರ ಅಂತ್ಯದಲ್ಲಿ ಜೊತೆಯಾದ ಪುಟ್ಟ ಮಗಳ ಕಥೆಯನ್ನು ಇಲ್ಲಿ ವಿಸ್ತೃತವಾಗಿ ಹೇಳಿದ್ದಾರೆ. ಇಲ್ಲಿ ಮಗಳ ಪಾತ್ರಕ್ಕೂ ನಿಧಿ ಅನ್ನೋದೇ ಹೆಸರು. ಹಾಗಾಗಿ, ಆದಿ ಮತ್ತು ನಿಧಿ ಜುಗಲ್‌ಬಂದಿ ಇಲ್ಲಿ ಅಪ್ಪ-ಮಗಳಾಗಿ ಮುಂದುವರಿದಿದೆ. ಬರೀ ಅಪ್ಪ-ಮಗಳ ಬಾಂಧವ್ಯದ ಬಗ್ಗೆ ಈ ಸಿನಿಮಾ ಕಥೆ ಇದೆಯಾ? ಇಲ್ಲ ಅದಕ್ಕೂ ಮೀರಿದ ಕಥೆ ಇದೆ. ಸಾಕಷ್ಟು ಟ್ವಿಸ್ಟ್‌ಗಳನ್ನು ಕೊಟ್ಟಿದ್ದಾರೆ ಡಾರ್ಲಿಂಗ್ ಕೃಷ್ಣ. ಅದನ್ನು ಚಿತ್ರಮಂದಿರದಲ್ಲೇ ನೋಡಿದರೆ ಚೆನ್ನ.
ʻಲವ್ ಮಾಕ್ಟೇಲ್ 3ʼ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ʻಡಾರ್ಲಿಂಗ್ʼ ಕೃಷ್ಣ; ಈ ಬಾರಿ ಏನ್ ವಿಶೇಷ?
ಇಷ್ಟವಾಗುವ ತಂದೆ - ಮಗಳ ಪಾತ್ರ
ಲವ್ ಸ್ಟೋರಿಯನ್ನು ಮಾತ್ರ ಎಮೋಷನಲ್ ಆಗಿ ಹೇಳುವುದಲ್ಲ, ತಂದೆ ಮಗಳ ಬಾಂಧವ್ಯವನ್ನು ಅಷ್ಟೇ ಎಫೆಕ್ಟೀವ್ ಆಗಿ ತೋರಿಸುತ್ತೇನೆ ಎಂದು ಹಠಕ್ಕೆ ಬಿದ್ದಂತೆ, ಈ ಚಿತ್ರವನ್ನು ಭಾವತೀವ್ರತೆಯಿಂದ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ. ಜೊತೆ ಆದಿ ಪಾತ್ರದಲ್ಲಿ ಮಿಂಚಿದ್ದಾರೆ. ಮೊದಲ ಪಾರ್ಟ್‌ನಲ್ಲಿ ತರಲೆ ಆಗಿದ್ದ ಆದಿ ನಿಧಾನಕ್ಕೆ ಪ್ರೇಮಿಯಾಗುತ್ತಾನೆ, ನಂತರ ಭಗ್ನ ಪ್ರೇಮಿಯಾಗಿ ಖಿನ್ನತೆಗೂ ಜಾರುತ್ತಾನೆ. ಆದರೆ, ಇಲ್ಲಿ ಒಬ್ಬ ಜವಾಬ್ದಾರಿಯುತ ತಂದೆಯಾಗಿ ಡಾರ್ಲಿಂಗ್ ಕೃಷ್ಣ ಮನಮುಟ್ಟುವಂತಹ ನಟನೆಯನ್ನು ಮಾಡಿದ್ದಾರೆ.
ಜೊತೆಗೆ ಬಾಲ ನಟಿ ಸಂವೃತಾ ಈ ಸಿನಿಮಾಗೆ ಮತ್ತೊಂದು ಹೈಲೈಟ್ ಎಂದೇ ಹೇಳಬಹುದು. ತನ್ನ ಮುಗ್ಧ ನಟನೆಯಿಂದ ಪ್ರೇಕ್ಷಕರನ್ನು ನಗಿಸುತ್ತಾಳೆ, ಅಳಿಸುತ್ತಾಳೆ. ಈ ಹಿಂದಿನ ಎರಡು ಪಾರ್ಟ್‌ಗಳನ್ನು ತಲೆಯಲ್ಲಿಟ್ಟುಕೊಂಡು ಈ ಸಿನಿಮಾ ನೋಡಿದರೆ, ಇಲ್ಲಿ ಬೇರೆಯದೇ ಪ್ರಪಂಚ ಕಾಣಿಸುತ್ತದೆ.
ದ್ವಿತಿಯಾರ್ಧದಲ್ಲಿ ಸಖತ್ ಟ್ವಿಸ್ಟ್
ಡಾರ್ಲಿಂಗ್ ಕೃಷ್ಣ ಈ ಹಿಂದಿನಂತೆಯೇ, ಜಾಸ್ತಿ ಪಾತ್ರಗಳಿಗೆ ಕಥೆಯಲ್ಲಿ ಜಾಗ ನೀಡಿಲ್ಲ. ಆದಿ, ಮಗಳು ನಿಧಿ, ಫ್ರೆಂಡ್ ವಿಜು ಜೊತೆಗೆ ಜಗ್ಗ ಮಮ್ಮಿ ಎಂಬ ಹೊಸ ಪಾತ್ರ ಎಂಟ್ರಿ ಆಗುತ್ತದೆ. ಬಹುತೇಕ ಫಸ್ಟ್ ಹಾಫ್ ಇವರಷ್ಟೇ ತೆರೆಮೇಲೆ ಹೆಚ್ಚು ಕಾಣಿಸುತ್ತಾರೆ. ಇಲ್ಲಿ ನಗುವಿಗೆ ಜಾಸ್ತಿ ಸ್ಕೋಪ್ ನೀಡಲಾಗಿದೆ. ಸಣ್ಣ ಸಣ್ಣ ಹಾಸ್ಯ ಸನ್ನಿವೇಶಗಳು ನಗಿಸುತ್ತದೆ. ಆದರೆ ಇಂಟರ್ವಲ್ ಬರುವ ಹೊತ್ತಿಗೆ ಕಥೆ ಸೀರಿಯಸ್ ಮೋಡ್‌ಗೆ ಜಾರಿಕೊಳ್ಳುತ್ತದೆ. ಅಲ್ಲಿಂದ ನಿರೀಕ್ಷೆ ಮಾಡದಂತಹ ಟ್ವಿಸ್ಟ್‌ಗಳು, ಮತ್ತೊಂದಿಷ್ಟು ಹೊಸ ಪಾತ್ರಗಳು ಕಥೆಯೊಳಗೆ ಸೇರಿಕೊಳ್ಳುತ್ತವೆ. ಕೋರ್ಟ್ ರೂಮ್ ಡ್ರಾಮಾ ಕೂಡ ಇದೆ. ಅದ್ಯಾಕೆ ಅನ್ನೋದೇ ಇಲ್ಲಿ ಇಂಟರೆಸ್ಟಿಂಗ್ ವಿಚಾರ.
ಈ ಬಾರಿ ಕೂಡ ಜಾಸ್ತಿ ಅಬ್ಬರವಿಲ್ಲದೆ, ಹಾಸ್ಯದ ಜೊತೆಗೆ ಅಲ್ಲಲ್ಲಿ ಅಚ್ಚರಿ ಎನಿಸುವಂತಹ ಟ್ವಿಸ್ಟ್‌ಗಳನ್ನು ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ ಡಾರ್ಲಿಂಗ್ ಕೃಷ್ಣ. ಅನಗತ್ಯ ದೃಶ್ಯಗಳಲ್ಲ. ಜೊತೆಗೆ ಫ್ಲಾಶ್‌ಬ್ಯಾಕ್ ಸೀನ್‌ಗಳಿಗೂ ಜಾಸ್ತಿ ಮೊರೆಹೋಗದೇ, ಹೊಸದಾಗಿ ಬರೆದಿರುವ ಕಥೆಯನ್ನು ಸಿಂಪಲ್ & ಬ್ಯೂಟಿಫುಲ್ ಆಗಿ ನಿರೂಪಣೆ ಮಾಡಿದ್ದಾರೆ ಕೃಷ್ಣ.
ನಕುಲ್ ಅಭ್ಯಂಕರ್ ನೀಡಿರುವ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿದ್ದರೆ, ಹಿನ್ನೆಲೆ ಸಂಗೀತ ಚಿತ್ರಕ್ಕೊಂದು ಸೊಗಸಾದ ಫೀಲ್ ಕಟ್ಟಿಕೊಟ್ಟಿದೆ. ಶ್ರೀ ಕ್ರೇಜಿಮೈಂಡ್ಸ್ ಅವರ ಛಾಯಾಗ್ರಹಣ ಮತ್ತು ಸಂಕಲನ ಸಿನಿಮಾವನ್ನು ಅಚ್ಟುಕಟ್ಟಾಗಿಸಿದೆ.
ಕಲಾವಿದರ ಅಭಿನಯ ಹೇಗಿದೆ?
ಲವ್ ಮಾಕ್‌ಟೇಲ್ 3ರಲ್ಲಿ ಹಿಂದಿನ ಸರಣಿಯ ಕಲಾವಿದರ ಜೊತೆಗೆ ಹೊಸ ಕಲಾವಿದರ ಸೇರ್ಪಡೆ ಕೂಡ ಆಗಿದೆ. ವಿಜು ಆಗಿ ಅಭಿಲಾಷ್ ಅವರ ಕಾಮಿಡಿ ಕಿಕ್ ಇಲ್ಲಿಯೂ ಮುಂದುವರಿದಿದೆ. ಜಗ್ಗಾ ಮಮ್ಮಿ ಎಂಬ ಪಾತ್ರದಲ್ಲಿ ಹೊಸ ಪ್ರತಿಭೆ ಜಗದೀಶ್ ಅವರು ಸಿನಿಮಾದುದ್ದಕ್ಕೂ ನಗಿಸಿದ್ದಾರೆ. ರೇಖಾ ಕೂಡ್ಲಿಗಿ, ನೆಯಾರಾ ಅವರು ನಿಭಾಯಿಸಿರುವ ಪಾತ್ರಗಳು ಕಥೆಗೆ ದೊಡ್ಡ ತಿರುವು ನೀಡುತ್ತವೆ, ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಕೀಲರಾಗಿ ದಿಲೀಪ್ ರಾಜ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ನಟನೆ ಇಷ್ಟವಾಗುತ್ತದೆ. ಜಡ್ಜ್ ಪಾತ್ರದಲ್ಲಿ ನಿರ್ದೇಶಕ ಬಿ ಎಂ ಗಿರಿರಾಜ್ ಇಷ್ಟವಾಗುತ್ತಾರೆ. ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ರೆಚೆಲ್ ಡೇವಿಡ್, ಸುಷ್ಮಿತಾ ಅವರು ಈ ಸೀಕ್ವೇಲ್ ಸಿನಿಮಾದ ಕೊಂಡಿಯಂತೆ ಬಂದು ಹೋಗುತ್ತಾರೆ. ಒಟ್ಟಾರೆಯಾಗಿ, ಲವ್ ಮಾಕ್‌ಟೇಲ್‌ನ ಈ ಹಿಂದಿನ ಪಾರ್ಟ್‌ಗಳನ್ನು ನೋಡಿದವರಿಗೆ ಈ ಸಿನಿಮಾವು ಹೊಸ ಅನುಭವವನ್ನು ನೀಡುತ್ತದೆ.
Movie: ಲವ್ ಮಾಕ್ಟೇಲ್ 3
Release Date: ಮಾ.19, 2026
Language: ಕನ್ನಡ
Genre: ಡ್ರಾಮಾ, ಕಾಮಿಡಿ
Director: ಡಾರ್ಲಿಂಗ್ ಕೃಷ್ಣ
Cast: ಡಾರ್ಲಿಂಗ್ ಕೃಷ್ಣ, ಸಂವೃತಾ, ದಿಲೀಪ್ ರಾಜ್, ಶ್ವೇತಾ ಆರ್ ಪ್ರಸಾದ್, ರಜನಿ, ರೇಖಾ ಕೂಡ್ಲಿಗಿ, ಅಭಿಲಾಷ್, ಜಗದೀಶ್, ಬಿ ಎಂ ಗಿರಿರಾಜ್, ಅಮೃತಾ ಅಯ್ಯಂಗಾರ್
Duration: 134 ನಿಮಿಷ
Rating: 3.5/5