ಹಬ್ಬದ ಸೀಸನ್‌ನಲ್ಲಿ ಸಕ್ಕರೆ ದರ ದಿಢೀರ್ ಏರಿಕೆ: ಎಥನಾಲ್ ನೀತಿ ಇದಕ್ಕೆ ಕಾರಣವೆ? ಕೇಂದ್ರ ಸರ್ಕಾರ ಹೇಳೋದೇನು?
Sugar Price Surge in India: ಹಬ್ಬದ ಋತುವಿನಲ್ಲಿ ದೇಶದಲ್ಲಿ ಸಕ್ಕರೆ ದರ ದಿಢೀರ್ ಏರಿಕೆಯಾಗಿದೆ. ದೇಶದಲ್ಲಿ ಎಥೆನಾಲ್ ಪೆಟ್ರೋಲ್‌ಗೆ ಆದ್ಯತೆ ನೀಡಿರುವ ಕಾರಣ ಸಕ್ಕರೆ ಉತ್ಪಾದನೆ ಕುಂಠಿತವಾಗಿದೆ ಎಂದು ಆರೋಪ ಕೇಳಿಬಂದಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕರ ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣವಲ್ಲ ಎಂದಿದೆ. ಹಾಗಾದರೆ ಸಕ್ಕರೆ ಬೆಲೆ ಏರಿಕೆಗೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಆ. 26: ದೇಶಾದ್ಯಂತ ಸಕ್ಕರೆ, ಬೆಲ್ಲ ಸೇರಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏಕಾಏಕಿ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರ ಜೇಬಿಗೆ ದೊಡ್ಡ ಕತ್ತರಿ ಬಿದ್ದಂತಾಗಿದೆ. ಹಬ್ಬದ ಋತುವಿನಲ್ಲೇ ಅಡುಗೆ ಎಣ್ಣೆ, ಧಾನ್ಯಗಳು ಮತ್ತು ಸಕ್ಕರೆ ದರ ಹೆಚ್ಚಿರುವುದು ಮಧ್ಯಮ ವರ್ಗದ ಕುಟುಂಬಗಳು ವೆಚ್ಚ ಸರಿದೂಗಿಸಲು ಪರದಾಡುತ್ತಿವೆ. ಕಳೆದ ತಿಂಗಳು ಪ್ರತಿ ಕೆಜಿ ಸಕ್ಕರೆಗೆ 45 ರುಪಾಯಿ ಇದ್ದ ದರ ಇದೀಗ 75 ರುಪಾಯಿಗೆ ಏರಿಕೆಯಾಗಿದೆ (Sugar Price Surge in India). ಸಕ್ಕರೆ ಬೆಲೆ ದುಬಾರಿಯಾಗುತ್ತಿರುವ ಬೆನ್ನಲೇ ದೇಶದಲ್ಲಿ ಆತಂಕ ಹೆಚ್ಚಾಗಿದೆ.
ಇದೇ ವೇಳೆ ದೇಶದಲ್ಲಿ ಎಥೆನಾಲ್ ಪೆಟ್ರೋಲ್‌ಗೆ ಆದ್ಯತೆ ನೀಡಿರುವ ಕಾರಣ ಸಕ್ಕರೆ ಉತ್ಪಾದನೆ ಕುಂಠಿತವಾಗಿದೆ ಎಂದು ಆರೋಪ ಕೇಳಿಬಂದಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕರ ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣವಲ್ಲ ಎಂದಿದೆ.
ಒಂದೇ ತಿಂಗಳಲ್ಲಿ ಸಕ್ಕರೆ ಬೆಲೆಯಲ್ಲಿ ಭಾರಿ ಏರಿಕೆ
ಒಂದೇ ತಿಂಗಳ ಅವಧಿಯಲ್ಲಿ ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ತೀವ್ರವಾಗಿ ಏರಿಕೆಯಾಗಿದ್ದು, ಗ್ರಾಹಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕಳೆದ ಜುಲೈ 20ರಂದು ಪ್ರತಿ ಕೆಜಿಗೆ ಸರಾಸರಿ 48.18 ರುಪಾಯಿಯಷ್ಟಿದ್ದ ಚಿಲ್ಲರೆ ಸಕ್ಕರೆ ದರವು, ಆಗಸ್ಟ್ 20ರ ವೇಳೆಗೆ ಗಣನೀಯವಾಗಿ ಹೆಚ್ಚಿ 55.70 ರುಪಾಯಿಗೆ ತಲುಪಿದೆ. ಸಕ್ಕರೆಯ ಪೂರೈಕೆ ಮತ್ತು ಬೇಡಿಕೆಯ ನಡುವೆ ಉಂಟಾಗಿರುವ ಹಲವು ಸವಾಲುಗಳೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
E20 ಶುದ್ಧ ಇಂಧನ, ಎಥನಾಲ್ ರಹಿತ ಪೆಟ್ರೋಲ್‌ಗೆ ಮರಳುವ ಯೋಜನೆ ಇಲ್ಲ: ಸಂಸತ್ತಿನಲ್ಲಿ ಕೇಂದ್ರದ ಸ್ಪಷ್ಟನೆ
ಕಾರಣವೇನು?
ಮೊದಲನೆಯದಾಗಿ, ಈ ಬಾರಿ ದೇಶೀಯ ಸಕ್ಕರೆ ಉತ್ಪಾದನೆಯು ಆರಂಭದಲ್ಲಿ ಅಂದಾಜಿಸಿದ್ದಕ್ಕಿಂತ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಜತೆಗೆ, ಸಾಲು ಸಾಲು ಹಬ್ಬಗಳ ಋತು ಹತ್ತಿರವಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸಕ್ಕರೆಗೆ ಬೇಡಿಕೆ ದಿಢೀರನೆ ಹೆಚ್ಚಾಗಿದೆ. ಮತ್ತೊಂದೆಡೆ, ಈ ಬಾರಿ ಕಂಡುಬಂದ ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಯಿಂದಾಗಿ ಕಬ್ಬಿನ ಬೆಳೆಗೆ ಅಪಾರ ಹಾನಿಯುಂಟಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲೂ ಸಕ್ಕರೆಯ ಲಭ್ಯತೆ ಕಡಿಮೆಯಾಗಿದೆ. ಇದೆಲ್ಲ ಬೆಲೆ ಏರಿಕೆಯ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲದೆ, ಸಕ್ಕರೆ ಉದ್ಯಮದ ಕೆಲ ವಲಯಗಳಲ್ಲಿ ನಡೆಯುತ್ತಿರುವ ಕೃತಕ ಅಭಾವ, ಊಹಾಪೋಹಗಳು ಹಾಗೂ ಅಕ್ರಮ ಸಂಗ್ರಹಣೆಯ ಕುರಿತಾದ ಆತಂಕಗಳು ಮಾರುಕಟ್ಟೆಯ ಪೂರೈಕೆಯ ಮೇಲೆ ದುಷ್ಪರಿಣಾಮ ಬೀರಿವೆ.
ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಉತ್ಪಾದನೆ ಕಾರಣವಲ್ಲ
ಎಥನಾಲ್ ಉತ್ಪಾದನೆ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಸಕ್ಕರೆಯನ್ನು ಎಥನಾಲ್ ಉತ್ಪಾದನೆಗೆ ಬಳಸುತ್ತಿರುವ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ವಾಸ್ತವವಾಗಿ ಕಡಿಮೆಯಾಗಿದೆ ಎಂದು ತಿಳಿಸಿದೆ. ಸರ್ಕಾರದ ಅಧಿಕೃತ ದತ್ತಾಂಶಗಳ ಪ್ರಕಾರ, ಪೆಟ್ರೋಲ್ ಮಿಶ್ರಣಕ್ಕಾಗಿ ಸಕ್ಕರೆಯಿಂದ ತಯಾರಿಸುವ ಎಥನಾಲ್ ಪ್ರಮಾಣವು 2022-23ರ ಸಾಲಿನಲ್ಲಿ ಶೇಕಡಾ 12ರಷ್ಟಿತ್ತು. ಪ್ರಸ್ತುತ ಸಾಲಿನಲ್ಲಿ ಈ ಪ್ರಮಾಣವು ಶೇಕಡಾ 9ಕ್ಕೆ ಕುಸಿದಿದೆ.
ಇದರ ಜತೆಗೆ, ಎಥನಾಲ್ ತಯಾರಿಕೆಗೆ ಬಳಸುವ ಕಚ್ಚಾ ಪದಾರ್ಥಗಳ ಬಳಕೆಯಲ್ಲೂ ಪ್ರಮುಖ ಬದಲಾವಣೆಯಾಗಿದೆ ಎಂದು ಕೇಂದ್ರ ತಿಳಿಸಿದೆ. ಭಾರತದಲ್ಲಿ ಪ್ರಸ್ತುತ ಉತ್ಪಾದನೆಯಾಗುತ್ತಿರುವ ಒಟ್ಟು ಎಥನಾಲ್ ಪೈಕಿ ಸುಮಾರು ಮುಕ್ಕಾಲು ಭಾಗದಷ್ಟು (ಶೇಕಡಾ 75) ಎಥನಾಲ್ ಸಕ್ಕರೆಯ ಬದಲು ಧಾನ್ಯಗಳಿಂದ, ಮುಖ್ಯವಾಗಿ ಮೆಕ್ಕೆಜೋಳದಿಂದ ತಯಾರಾಗುತ್ತಿದೆ. ಹೀಗಾಗಿ, ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕಂಡುಬಂದಿರುವ ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಉತ್ಪಾದನೆಯೇ ಕಾರಣ ಎಂದು ಹೇಳುವುದು ಸರಿಯಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸಕ್ಕರೆ ಉತ್ಪಾದನೆ ಕಡಿಮೆಯಾಗಲು ಕಾರಣಗಳೇನು?
ಪ್ರಸ್ತುತ ಸಾಲಿನಲ್ಲಿ ದೇಶೀಯ ಸಕ್ಕರೆ ಉತ್ಪಾದನೆಯು ಸುಮಾರು 30.6 ಮಿಲಿಯನ್ ಟನ್‌ಗಳಷ್ಟಾಗಬಹುದು ಎಂದು ಸರ್ಕಾರ ಅಂದಾಜಿಸಿದ್ದು, ಇದು ಕಬ್ಬು ಬೆಳೆಯುವ ರಾಜ್ಯಗಳು ಆರಂಭದಲ್ಲಿ ಅಂದಾಜಿಸಿದ್ದ 34.3 ಮಿಲಿಯನ್ ಟನ್‌ಗಳಿಗಿಂತ ಕಡಿಮೆಯಾಗಿದೆ. ಈ ಉತ್ಪಾದನಾ ಕುಸಿತಕ್ಕೆ ಮುಖ್ಯವಾಗಿ ಬೆಳೆಗೆ ಬಾಧಿಸುವ ರೋಗಗಳು ಹಾಗೂ ಪ್ರತಿಕೂಲ ಹವಾಮಾನವೇ ಕಾರಣ. ಕೆಲವು ಪ್ರಮುಖ ಪ್ರದೇಶಗಳಲ್ಲಿ ಕಬ್ಬಿನ ಬೆಳೆಗೆ ಕೆಂಪು ಕೊಳೆ ರೋಗ ಮತ್ತು ತದಿ ಸುಳಿ ಕೊರೆಕದಂತಹ ಮಾರಕ ರೋಗಗಳು ಆವರಿಸಿವೆ. ಅತಿಯಾದ ಮಳೆ ಹಾಗೂ ಹೊಲಗಳಲ್ಲಿ ನೀರು ನಿಂತಿದ್ದರಿಂದ ಕಬ್ಬಿನ ಬೆಳೆ ತೀವ್ರವಾಗಿ ಹಾನಿಗೊಳಗಾಗಿದೆ. ಆದಾಗ್ಯೂ ಉತ್ಪಾದನೆ ಕಡಿಮೆಯಾಗುವ ಮುನ್ಸೂಚನೆಯಿದ್ದರೂ ಅಕ್ಟೋಬರ್‌ನಲ್ಲಿ ಹೊಸ ಕಬ್ಬು ಕಟಾವು ಋತು ಪ್ರಾರಂಭವಾಗುವವರೆಗೆ ದೇಶದ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಪ್ರಸ್ತುತ ಲಭ್ಯವಿರುವ ಸಕ್ಕರೆ ದಾಸ್ತಾನು ಸಂಪೂರ್ಣವಾಗಿ ಸಾಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸುಂಕ ರಹಿತ ಸಕ್ಕರೆ ಆಮದಿಗೆ ಅನುಮತಿ: ಸಕ್ಕರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರ
ಭಾರತದ ಸಕ್ಕರೆ ಉದ್ಯಮದಲ್ಲಿ ಎಥನಾಲ್ ಪಾತ್ರವೇನು?
ಎಥನಾಲ್ ಪೆಟ್ರೋಲ್ ಪರಿಚಯಿಸಿರುವ ಯೋಜನೆ ಸಕ್ಕರೆ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನುವ ಬದಲು ಕೇಂದ್ರ ಸರ್ಕಾರ ಸಕ್ಕರೆ ಉದ್ಯಮದಲ್ಲಿ ತಂದಿರುವ ಅತ್ಯಂತ ಪ್ರಮುಖ ರಚನಾತ್ಮಕ ಸುಧಾರಣೆ ಎಂದು ಸಮರ್ಥಿಸಿಕೊಂಡಿದೆ. ಭಾರತದಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಸುಮಾರು 32ರಿಂದ 34 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ. ದೇಶೀಯ ಬಳಕೆಯು 28ರಿಂದ 29 ಮಿಲಿಯನ್ ಟನ್‌ಗಳಷ್ಟಿರುತ್ತದೆ. ಅಂದರೆ ಉತ್ತಮ ಇಳುವರಿ ಬರುವ ವರ್ಷಗಳಲ್ಲಿ ಸಕ್ಕರೆ ಉತ್ಪಾದನೆಯು ದೇಶದ ಒಟ್ಟು ಬಳಕೆಗಿಂತ ಗಣನೀಯವಾಗಿ ಹೆಚ್ಚಾಗಿರುತ್ತದೆ.
ಈ ರೀತಿ ಹೆಚ್ಚುವರಿ ಸಕ್ಕರೆ ಉತ್ಪಾದನೆಯಾದಾಗ ಸಕ್ಕರೆ ಕಾರ್ಖಾನೆಗಳಲ್ಲಿ ಬೃಹತ್ ಪ್ರಮಾಣದ ದಾಸ್ತಾನು ಉಳಿಯುತ್ತದೆ ಎನ್ನಲಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆದ ರೈತರಿಗೆ ಸಮಯಕ್ಕೆ ಸರಿಯಾಗಿ ಬಾಕಿ ಹಣ ಪಾವತಿಸಲು ಸಾಧ್ಯವಾಗದೆ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ತಿಳಿಸಿರುವಂತೆ, ಎಥನಾಲ್ ಪೆಟ್ರೋಲ್ ಯೋಜನೆ ಈ ಹೆಚ್ಚುವರಿ ಸಕ್ಕರೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಾಯ ಮಾಡಿದೆ. ಸಕ್ಕರೆ ಮತ್ತು ಇತರ ಕಚ್ಚಾ ವಸ್ತುಗಳಿಗೆ ಎಥನಾಲ್ ರೂಪದಲ್ಲಿ ಹೊಸದೊಂದು ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲಾಗಿದೆ ಹಾಗೂ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸಲು ಅವರಿಗೆ ನೆರವಾಗಿದೆ ಎಂದು ಹೇಳಿದೆ.
ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.