ಹೋಟೆಲ್, ರೆಸ್ಟೋರೆಂಟ್ ಮಾಲಕರಿಗೆ ಗುಡ್‌ನ್ಯೂಸ್; ವಾಣಿಜ್ಯ ಎಲ್‌ಪಿಜಿ ವಿತರಣೆ ಶೇಕಡಾ 20ರಷ್ಟು ಹೆಚ್ಚಿಸಿದ ಸರ್ಕಾರ
Gas Shortage: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ರಾಜ್ಯಗಳ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಶೇಕಡಾ 20ರಷ್ಟು ಹೆಚ್ಚಿಸಿರುವುದಾಗಿ ತಿಳಿಸಿದೆ. ಈ ಮೂಲಕ ಒಟ್ಟಾರೆ ಹಂಚಿಕೆ ಶೇಕಡಾ 50ಕ್ಕೆ ಏರಿದೆ. ಮಾರ್ಚ್ 23ರಿಂದ ಇದು ಜಾರಿಗೆ ಬರಲಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಮಾ. 21: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಸೇನೆಗಳು ಈಗಲೂ ಜಂಟಿ ದಾಳಿ ನಡೆಸುತ್ತಿವೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಸ್ಥಿತಿ ಮುಂದುವರಿದಿದೆ. ಇದರ ಪರಿಣಾಮ ಭಾರತದಲ್ಲಿ ಎಲ್‌ಪಿಜಿ ಕೊರತೆ ಎದುರಾಗಿದ್ದು, ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ (Gas Shortage). ಶನಿವಾರ (ಮಾರ್ಚ್ 21) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, ರಾಜ್ಯಗಳ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಶೇಕಡಾ 20ರಷ್ಟು ಹೆಚ್ಚಿಸಿರುವುದಾಗಿ ತಿಳಿಸಿದೆ. ಈ ಮೂಲಕ ಒಟ್ಟಾರೆ ಹಂಚಿಕೆ ಶೇಕಡಾ 50ಕ್ಕೆ ಏರಿದೆ. ಮಾರ್ಚ್ 23ರಿಂದ ಜಾರಿಗೆ ಬರುವಂತೆ ರಾಜ್ಯಗಳಿಗೆ ಹೆಚ್ಚುವರಿ ಶೇಕಡಾ 20ರಷ್ಟು ಎಲ್‌ಪಿಜಿ ಹಂಚಿಕೆ ಮಾಡಲಾಗುವುದು. ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಹೊಸ ಶೇಕಡಾ 20ರಷ್ಟು ಹಂಚಿಕೆಯು ರೆಸ್ಟೋರೆಂಟ್‌ಗಳು, ಢಾಬಾಗಳು, ಹೋಟೆಲ್‌ಗಳು, ಕೈಗಾರಿಕಾ ಕ್ಯಾಂಟೀನ್‌ಗಳು ಮತ್ತು ಆಹಾರ ಸಂಸ್ಕರಣಾ ಘಟಕ ಮತ್ತು ಡೈರಿಗಳಿಗೆ ಅನ್ವಯವಾಗುತ್ತದೆ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ಕ್ಯಾಂಟೀನ್‌ಗಳು ಮತ್ತು ಔಟ್‌ಲೆಟ್‌ಗಳಿಗೂ ಇದರಿಂದ ಅನುಕೂಲವಾಗಲಿದೆ.
ವಾಣಿಜ್ಯ ಎಲ್‌ಪಿಜಿ ಹಂಚಿಕೆ ಶೇಕಡಾ 20ರಷ್ಟು ಹೆಚ್ಚಳ:
Govt has approved another 20% allocation of commercial #LPG to States, which would take overall allocation to 50%, including 10% allocation based on ease of doing reforms for #PNG expansion.
— SansadTV (@sansad_tv) March 21, 2026
This additional percentage of allocation shall be given on priority to sectors like… pic.twitter.com/b4Y3RDbJdZ
ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗುತ್ತದೆ. ಒಟ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಯ ಸುಮಾರು ಶೇಕಡಾ 50ರಷ್ಟು ಈ ವಲಯಗಳಿಗೆ ಹೋಗಲಿದೆ ಎಂದು ಸರ್ಕಾರ ಹೇಳಿದೆ. ದೇಶೀಯ ಎಲ್‌ಪಿಜಿ ಪೂರೈಕೆ ಸ್ಥಿರವಾಗಿದ್ದು, ಯಾವುದೇ ಕೊರತೆ ಇಲ್ಲ ಮತ್ತು ಸಾಮಾನ್ಯ ವಿತರಣಾ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಎಲ್‌ಪಿಜಿ ಗ್ರಾಹಕರಿಗೆ ಗ್ಯಾಸ್ ವಿತರಕನ ಅಭಯ; 1 ಕೋಟಿ ವೀವ್ಸ್ ಕಂಡ ವೈರಲ್ ವಿಡಿಯೋ ಇಲ್ಲಿದೆ
ಸದ್ಯ ಮನೆ ಬಳಕೆಯ ಎಲ್‌ಪಿಜಿಯ ಪ್ಯಾನಿಕ್ ಬುಕಿಂಗ್ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ಪೂರೈಕೆ ಒತ್ತಡವನ್ನು ಕಡಿಮೆ ಮಾಡಲು, ಸರ್ಕಾರವು ಪೈಪ್ಡ್ ನೈಸರ್ಗಿಕ ಅನಿಲ (PNG) ವ್ಯವಸ್ಥೆಗೆ ಆದ್ಯತೆ ನೀಡುವಂತೆ ಕರೆ ನೀಡಿದೆ. ವಿಶೇಷವಾಗಿ ವಾಣಿಜ್ಯ ಸಂಸ್ಥೆಗಳಿಗೆ ಮತ್ತು ನಗರ ಅನಿಲ ವಿತರಣಾ ಜಾಲಗಳಿಗೆ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಎಲ್ಲ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದಿದೆ. ಜತೆಗೆ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನಿದೆ ಎಂದಿದೆ.
ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಇಂಧನ ಕೊರತೆ ವರದಿಯಾಗಿಲ್ಲ ಮತ್ತು ಸಾರ್ವಜನಿಕರು ಭಯಭೀತರಾಗಿ ಖರೀದಿಸದಂತೆ ಮನವಿ ಮಾಡಿದೆ. ದೇಶೀಯ ಪಿಎನ್‌ಜಿ ಮತ್ತು ಸಿಎನ್‌ಜಿ ಸೇರಿ ಆದ್ಯತೆಯ ವಿಭಾಗಗಳಿಗೆ ನೈಸರ್ಗಿಕ ಅನಿಲ ಸರಬರಾಜುಗಳನ್ನು ಸಮರ್ಪಕವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರಲು ಸಿದ್ಧವಾಗಿದೆ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳು
ವಿವಿಧ ಕ್ರಮ
ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಪರ್ಯಾಯ ಇಂಧನ ಆಯ್ಕೆಗಳನ್ನು ಒದಗಿಸಲು ರಾಜ್ಯಗಳಿಗೆ ಹೆಚ್ಚುವರಿ ಸೀಮೆಎಣ್ಣೆ ಸರಬರಾಜು ಮಾಡುವುದು ಮುಂತಾದ ಕ್ರಮಗಳನ್ನೂ ಕೇಂದ್ರ ಕೈಗೊಂಡಿದೆ. ಸದ್ಯ ಇರಾನ್‌ನ ಹೊರ್ಮುಜ್ ಜಲಸಂಧಿ ದಾಟಿ ಭಾರತದ ಹಡಗುಗಗಳು ಬರುತ್ತಿದ್ದು, ಇನ್ನಷ್ಟು ಟ್ಯಾಂಕರ್‌ಗಳಿಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಇದರಿಂದ ದೇಶದಲ್ಲಿ ತಲೆದೋರಿರುವ ಇಂಧನ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ.