ದಶಕದ ಮೈಲುಗಲ್ಲಿನಲ್ಲಿ ಜಿ.ಎಸ್.ಟಿ.: ಮುಂದಿನ ತಲೆಮಾರಿನ ಸುಧಾರಣೆಗಳಿಗೆ ಎಫ್.ಐ.ಎಸ್.ಎಂ.ಇ. ಕರೆ
ದೇಶಾದ್ಯಂತ ಇರುವ ಎಂ.ಎಸ್‌ಎಂ.ಇ.ಗಳ ಪ್ರತಿಕ್ರಿಯೆ ಆಧರಿಸಿ, ಫೆಡರೇಶನ್ ಆಫ್ ಇಂಡಿಯನ್ ಮೈಕ್ರೋ ಅಂಡ್ ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್ (ಎಫ್.ಐ.ಎಸ್.ಎಂ.ಇ) ಸಂಸ್ಥೆಯು ತೆರಿಗೆ ಜಾರಿಯನ್ನು ಸಡಿಲಗೊಳಿಸದೆ, ನಿಯಮಗಳ ಪಾಲನೆಯ ವೆಚ್ಚವನ್ನು ಕಡಿಮೆ ಮಾಡಲು, ದುಡಿಯುವ ಬಂಡವಾಳವನ್ನು ಸುಲಭವಾಗಿ ಸಿಗುವಂತೆ ಮಾಡಲು, ಪಾರದರ್ಶಕತೆ ಹೆಚ್ಚಿಸಲು ಮತ್ತು ಸ್ವಯಂ ಪ್ರೇರಿತ ತೆರಿಗೆ ಪಾವತಿ ಬಲಪಡಿಸಲು ಪ್ರಾಯೋಗಿಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ.
-
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಜಾರಿಗೆ ಬಂದು ಸುಮಾರು ಒಂದು ದಶಕದ ನಂತರ, ಈ ಸುಧಾರಣೆಯು ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸಿದೆ ಎಂದು ಭಾರತದ ಸಣ್ಣ ಉದ್ಯಮಿಗಳು ಒಪ್ಪಿಕೊಂಡಿದ್ದಾರೆ. ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸುವ ಹಾಗೂ ತೆರಿಗೆ ಪಾಲನೆಯನ್ನು ಸುಧಾರಿಸುವ ಮೂಲಕ, ಜಿ.ಎಸ್.ಟಿ ಭಾರತದ ಅತ್ಯಂತ ಮಹತ್ವದ ಆರ್ಥಿಕ ಸುಧಾರಣೆಗಳಲ್ಲಿ ಒಂದಾಗಿದೆ.
ಆದರೆ ದೇಶದ ಅತಿ ದೊಡ್ಡ ಉದ್ಯೋಗದಾತರು ಮತ್ತು ಉದ್ಯಮಿಗಳಾಗಿರುವ ಲಕ್ಷಾಂತರ ಎಂ.ಎಸ್.ಎಂ.ಇ.ಗಳಿಗೆ ಈ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ. ಉದ್ಯಮಗಳು ವಿವಿಧ ರಾಜ್ಯಗಳಿಗೆ ವಿಸ್ತರಿಸುತ್ತಿರುವಾಗ, ಡಿಜಿಟಲ್ ವಹಿವಾಟನ್ನು ಅಳವಡಿಸಿಕೊಳ್ಳುತ್ತಿರುವಾಗ ಮತ್ತು ರಾಷ್ಟ್ರೀಯ ಪೂರೈಕೆ ಸರಣಿಗಳಲ್ಲಿ ಸಂಯೋಜನೆಗೊಳ್ಳುತ್ತಿರುವಾಗ, ಅನೇಕ ಸಂಸ್ಥೆಗಳು ತಮ್ಮ ಉದ್ಯಮವನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ ತೆರಿಗೆ ನಿಯಮಗಳ ಪಾಲನೆಗೇ ಹೆಚ್ಚಿನ ಸಮಯ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿವೆ.
ಆದ್ದರಿಂದ, ಜಿ.ಎಸ್.ಟಿ ಸುಧಾರಣೆಯ ಮುಂದಿನ ಹಂತವು ಇನ್ನು ಮುಂದೆ ತೆರಿಗೆ ದರಗಳ ಕುರಿತಾಗಿಯಲ್ಲ, ಬದಲಿಗೆ ನಿಯಮಗಳ ಪಾಲನೆಯನ್ನು ಹೆಚ್ಚು ಸರಳ, ನ್ಯಾಯಯುತ ಮತ್ತು ಊಹಿಸಬಲ್ಲ ಸರಳ ವ್ಯವಸ್ಥೆಯನ್ನಾಗಿ ಮಾಡುವುದರ ಕುರಿತಾಗಿದೆ.
ಇದನ್ನೂ ಓದಿ: GST Notice: ಸಣ್ಣ ಪುಟ್ಟ ವ್ಯಾಪಾರಿಗಳಿಗೂ GST ನೋಟಿಸ್ ಬಂತಾ? ಹಾಗಾದ್ರೆ ಪರಿಹಾರ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶಾದ್ಯಂತ ಇರುವ ಎಂ.ಎಸ್‌ಎಂ.ಇ.ಗಳ ಪ್ರತಿಕ್ರಿಯೆ ಆಧರಿಸಿ, ಫೆಡರೇಶನ್ ಆಫ್ ಇಂಡಿಯನ್ ಮೈಕ್ರೋ ಅಂಡ್ ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್ (ಎಫ್.ಐ.ಎಸ್.ಎಂ.ಇ) ಸಂಸ್ಥೆಯು ತೆರಿಗೆ ಜಾರಿಯನ್ನು ಸಡಿಲಗೊಳಿಸದೆ, ನಿಯಮಗಳ ಪಾಲನೆಯ ವೆಚ್ಚವನ್ನು ಕಡಿಮೆ ಮಾಡಲು, ದುಡಿಯುವ ಬಂಡವಾಳವನ್ನು ಸುಲಭವಾಗಿ ಸಿಗುವಂತೆ ಮಾಡಲು, ಪಾರದರ್ಶಕತೆ ಹೆಚ್ಚಿಸಲು ಮತ್ತು ಸ್ವಯಂಪ್ರೇರಿತ ತೆರಿಗೆ ಪಾವತಿ ಬಲಪಡಿಸಲು ಪ್ರಾಯೋಗಿಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ.
ಎಫ್.ಐ.ಎಸ್.ಎಂ.ಇ ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್ "ಜಿಎಸ್‌ಟಿ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸುವ ಮೂಲಕ ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ವ್ಯವಸ್ಥೆ ಬೆಳೆಯುತ್ತಿದ್ದಂತೆ, ತೆರಿಗೆ ಪಾವತಿಯನ್ನು ವಿಶೇಷವಾಗಿ ಎಂಎಸ್‌ಎಂಇಗಳಿಗೆ ಸರಳ, ಹೆಚ್ಚು ಊಹಿಸಬಲ್ಲ ಮತ್ತು ಪ್ರಾಮಾಣಿಕ ತೆರಿಗೆದಾರರಿಗೆ ಕಡಿಮೆ ಹೊರೆಯಾಗಿಸುವತ್ತ ಗಮನ ಹರಿಸಬೇಕು.
ನಮ್ಮ ಶಿಫಾರಸುಗಳು ತೆರಿಗೆ ಹೊಣೆಗಳಲ್ಲಿ ಯಾವುದೇ ವಿನಾಯಿತಿಯನ್ನು ಕೋರುತ್ತಿಲ್ಲ. ನಿಯಮ ಗಳ ಪಾಲನೆಯ ವೆಚ್ಚವನ್ನು ಕಡಿಮೆ ಮಾಡುವುದು, ನಿಶ್ಚಿತತೆಯನ್ನು ಹೆಚ್ಚಿಸುವುದು, ದುಡಿಯುವ ಬಂಡವಾಳವನ್ನು ಮುಕ್ತಗೊಳಿಸುವುದು, ಸ್ವಯಂಪ್ರೇರಿತ ತೆರಿಗೆ ಅನುಸರಣೆ ಬಲಪಡಿಸುವುದು ಮತ್ತು ಜಿ.ಎಸ್.ಟಿ ಆಡಳಿತವನ್ನು ಹೆಚ್ಚು ದಕ್ಷ, ಪಾರದರ್ಶಕ ಹಾಗೂ ತೆರಿಗೆದಾರರ ಸ್ನೇಹಿಯನ್ನಾಗಿ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದರು.
ಇನ್ನೊಬ್ಬರ ತಪ್ಪಿಗೆ ಪ್ರಾಮಾಣಿಕ ಉದ್ಯಮಗಳು ಬೆಲೆ ತೆರಬೇಕಾದಾಗ
ಎಂ.ಎಸ್.ಎಂ.ಇ ಗಳಿಗೆ ಎದುರಾಗಿರುವ ಪ್ರಮುಖ ಕಾಳಜಿಗಳಲ್ಲಿ ಒಂದೆಂದರೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ಪಡೆಯುವಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ. ಪೂರೈಕೆದಾರರು ತೆರಿಗೆ ಪಾವತಿಸಲು ವಿಫಲವಾದರೆ, ಅವರ ನೋಂದಣಿ ಪೂರ್ವಾನ್ವಯವಾಗಿ ರದ್ದಾದರೆ ಅಥವಾ ಪೂರೈಕೆ ಜಾಲದ ಮೇಲ್ಮಟ್ಟದಲ್ಲಿ ಅಕ್ರಮಗಳು ನಡೆದರೆ — ಈ ರೀತಿಯ ತಮ್ಮ ನಿಯಂತ್ರಣ ಮೀರಿದ ಪರಿಸ್ಥಿತಿ ಗಳಿಂದಾಗಿ ಪ್ರಾಮಾಣಿಕವಾಗಿ ಸರಕು ಖರೀದಿಸುವ ಉದ್ಯಮಿಗಳಿಗೆ ಐಟಿಸಿ ನಿರಾಕರಿಸಲಾಗುತ್ತಿದೆ.
ಎಂ.ಎಸ್.ಎಂ.ಇ.ಗಳು ಪೂರೈಕೆದಾರರ ಭವಿಷ್ಯದ ತೆರಿಗೆ ಪಾವತಿಯನ್ನು ಮೇಲ್ವಿಚಾರಣೆ ಮಾಡ ಬೇಕೆಂದು ನಿರೀಕ್ಷಿಸುವುದು ಸಮಂಜಸವೂ ಅಲ್ಲ, ಪ್ರಾಯೋಗಿಕವೂ ಅಲ್ಲ ಎಂದು ಎಫ್.ಐ.ಎಸ್. ಎಂ.ಇ. ತಿಳಿಸಿದೆ. ಆದ್ದರಿಂದ, ಅಧಿಕೃತ ತೆರಿಗೆ ಇನ್‌ವಾಯ್ಸ್, ಸರಕು ಅಥವಾ ಸೇವೆಗಳನ್ನು ಸ್ವೀಕರಿಸಿದ ದಾಖಲೆ, ಬ್ಯಾಂಕಿಂಗ್ ಮಾರ್ಗಗಳ ಮೂಲಕ ಪಾವತಿಸಿದ ರಶೀದಿ ಹೊಂದಿರುವ ಮತ್ತು ಯಾವುದೇ ವಂಚನೆಯಲ್ಲಿ ಭಾಗಿಯಾಗದ ಪ್ರಾಮಾಣಿಕ ಖರೀದಿದಾರರನ್ನು ಇನ್ನೊಬ್ಬರ ತಪ್ಪಿಗಾಗಿ ದಂಡಿಸಬಾರದು ಎಂದು ಈ ಉದ್ಯಮ ಸಂಸ್ಥೆಯು ಶಾಸನಬದ್ಧ ಸುರಕ್ಷತೆ ನೀಡಲು ಶಿಫಾರಸು ಮಾಡುತ್ತದೆ. ತೆರಿಗೆ ವಸೂಲಾತಿಯು ತಪ್ಪಿತಸ್ಥ ಪೂರೈಕೆದಾರರ ಮೇಲೆಯೇ ಕೇಂದ್ರಿಕೃತವಾಗಿರ ಬೇಕು ಎಂದು ಅದು ವಾದಿಸುತ್ತದೆ.
ವಿಳಂಬವಾಗುವ ಜಿ.ಎಸ್.ಟಿ ಮರುಪಾವತಿಗಳು ಉದ್ಯಮಗಳ, ವಿಶೇಷವಾಗಿ ರಫ್ತುದಾರರು ಮತ್ತು ಇನ್ವರ್ಟೆಡ್ ಸುಂಕದ ರಚನೆಯಿಂದ ಪ್ರಭಾವಿತರಾದ ಉದ್ಯಮಗಳ ದುಡಿಯುವ ಬಂಡವಾಳವನ್ನು ಹಾಗೆಯೇ ತಡೆಹಿಡಿಯುತ್ತಿವೆ. ದೊಡ್ಡ ಕಂಪನಿಗಳು ಇಂತಹ ವಿಳಂಬಗಳನ್ನು ಭರಿಸಬಲ್ಲವು, ಆದರೆ ಎಂ.ಎಸ್.ಎಂ.ಇ.ಗಳಿಗೆ ಇವು ನೇರವಾಗಿ ನಗದು ಹರಿವು ಮತ್ತು ಉತ್ಪಾದನೆಯ ಮೇಲೆಯೇ ಪರಿಣಾಮ ಬೀರುತ್ತವೆ. ಆದ್ದರಿಂದ, ಮರುಪಾವತಿ ಪ್ರಕ್ರಿಯೆಯನ್ನು 30 ರಿಂದ 45 ದಿನಗಳ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು, ವಿಳಂಬವಾದಲ್ಲಿ ಸ್ವಯಂಚಾಲಿತವಾಗಿ ಬಡ್ಡಿ ನೀಡು ವುದು ಮತ್ತು ಜಮೆಯಾದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಸರಳೀಕೃತ ನಿಯಮಗಳನ್ನು ಜಾರಿಗೆ ತರಬೇಕೆಂದು ಎಫ್.ಐ.ಎಸ್.ಎಂ.ಇ. ಸರ್ಕಾರವನ್ನು ಆಗ್ರಹಿಸಿದೆ.
ಭಾರತದಾದ್ಯಂತ ಬೆಳೆಯುವುದು ಎಂದರೆ ನಿಯಮಗಳ ಪಾಲನೆಯ ಹೊರೆ ಹೆಚ್ಚಾಗಬಾರದು
ಉದ್ಯಮಗಳು ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುತ್ತಿರುವಾಗ ಮತ್ತು ಈ-ಕಾಮರ್ಸ್ ಅನ್ನು ಅಳವಡಿಸಿಕೊಳ್ಳುತ್ತಿರುವಾಗ, ಜಿ.ಎಸ್.ಟಿ ನಿಯಮಗಳ ಪಾಲನೆಯು ಹೆಚ್ಚು ಸಂಕೀರ್ಣ ಮತ್ತು ವಿಭಜಿತಗೊಳ್ಳುತ್ತಿದೆ. ವಿಭಿನ್ನ ರಾಜ್ಯಗಳಲ್ಲಿ ಹಲವು ನೋಂದಣಿಗಳು, ಬೇರೆ ಬೇರೆ ತೆರಿಗೆ ಅಧಿಕಾರಿ ಗಳು ಮತ್ತು ವೈವಿಧ್ಯಮಯ ನೋಂದಣಿ ಪ್ರಕ್ರಿಯೆಗಳು ತೆರಿಗೆ ನಿಯಮಾವಳಿಗಳನ್ನು ಅನುಸರಿಸುವ ವೆಚ್ಚವನ್ನು ಹೆಚ್ಚಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ, ಎಫ್.ಐ.ಎಸ್.ಎಂ.ಇ. ಸಂಸ್ಥೆಯು ಒಂದು ಪ್ಯಾನ್-ಒಂದು ಆಡಳಿತ ವ್ಯವಸ್ಥೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದೆ. ಇದು ಐಚ್ಛಿಕ ಕೇಂದ್ರೀಕೃತ ನಿಯಮಗಳ ಪಾಲನೆಗೆ ಮತ್ತು ವಿವಿಧ ನೋಂದಣಿಗಳಾದ್ಯಂತ ಇರುವ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಒಟ್ಟುಗೂಡಿಸಿ ಬಳಸಲು ಅವಕಾಶ ನೀಡುತ್ತದೆ. ಜೊತೆಗೆ, ತವರು ರಾಜ್ಯದ ಪ್ರಮುಖ ಉದ್ಯಮ ಸ್ಥಳ (ಎಚ್.ಪಿ.ಪಿ.ಒ.ಬಿ) ಮಾದರಿಯ ಅಡಿಯಲ್ಲಿ ಏಕರೂಪದ ನೋಂದಣಿ ಪ್ರಕ್ರಿಯೆಗಳನ್ನು ಜಾರಿಗೆ ತರಬೇಕೆಂದು ಅದು ಪ್ರತಿಪಾದಿಸುತ್ತದೆ.
ತಂತ್ರ.ಜ್ಞಾನವು ಅನುಸರಣೆಯನ್ನು ಸುಲಭಗೊಳಿಸಬೇಕೇ ಹೊರತು ಸಂಕೀರ್ಣ ಗೊಳಿಸಬಾರದು
ಜಿ.ಎಸ್.ಟಿ ನಿಯಮಗಳ ಪಾಲನೆಯು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ. ಆದಾಗ್ಯೂ, ಯಾವುದೇ ಮುನ್ಸೂಚನೆಯಿಲ್ಲದೆ ಜಿ.ಎಸ್.ಟಿ ಪೋರ್ಟಲ್‌ನಲ್ಲಿ ಆಗಾಗ್ಗೆ ಮಾಡಲಾಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಉದ್ಯಮಗಳು ಪರದಾಡುವಂತಾಗಿದೆ. ಈ ಸಿದ್ಧತೆಯನ್ನು ಸುಧಾರಿಸಲು, ಪ್ರತಿವರ್ಷ ಜಿ.ಎಸ್.ಟಿ ತಂತ್ರಜ್ಞಾನ ನಕ್ಷೆಯನ್ನು ಪ್ರಕಟಿಸಬೇಕು, ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಮೂರರಿಂದ ಆರು ತಿಂಗಳ ಕಾಲಾವಕಾಶ ನೀಡಬೇಕು, ಸ್ಯಾಂಡ್ ಬಾಕ್ಸ್ ಟೆಸ್ಟಿಂಗ್ ಅನುಮತಿಸಬೇಕು ಮತ್ತು ಜಾರಿಯ ಅವಧಿಯಲ್ಲಿ ದಂಡವಿಲ್ಲದ ಪರಿವರ್ತನೆಯ ಅವಕಾಶವನ್ನು ಒದಗಿಸಬೇಕು ಎಂದು ಎಫ್.ಐ.ಎಸ್.ಎಂ.ಇ. ಶಿಫಾರಸು ಮಾಡುತ್ತದೆ.
ವಿವಾದಗಳನ್ನು ಕಡಿಮೆ ಮಾಡುವುದು ತೆರಿಗೆದಾರರು ಮತ್ತು ತೆರಿಗೆ ಆಡಳಿತಕ್ಕೂ ಅನುಕೂಲ
/ತಾಂತ್ರಿಕ ವ್ಯತ್ಯಾಸಗಳು ಮತ್ತು ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಭಿನ್ನ ಪ್ರಾಧಿಕಾರಗಳಿಂದ ಬರುವ ನೋಟೀಸ್‌ಗಳಿಂದಾಗಿ ಉದ್ಯಮಗಳು ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಿವೆ. ಜಿ.ಎಸ್.ಟಿ ಆಡಳಿತವು ವ್ಯಾಜ್ಯಗಳನ್ನು ಹೆಚ್ಚಿಸುವುದಕ್ಕಿಂತ ಹೆಚ್ಚಾಗಿ ಅವುಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಎಫ್.ಐ.ಎಸ್.ಎಂ.ಇ. ಪ್ರತಿಪಾದಿಸುತ್ತದೆ. ಪ್ರಕರಣಗಳು ಪದೇ ಪದೇ ಮರು ಪರಿಶೀಲನೆಗೆ ಒಳಪಡುವುದನ್ನು ತಡೆಯಲು ಮುಖರಹಿತ ನ್ಯಾಯನಿರ್ಣಯ, ನೋಟೀಸ್ ನೀಡುವ ಮುನ್ನ ಕಡ್ಡಾಯ ಅನುಸರಣೆಯ ಪರಿಶೀಲನೆ, ಕ್ರೋಢೀಕೃತ ನೋಟೀಸ್ ಡ್ಯಾಶ್ ಬೋರ್ಡ್‌ಗಳು ಮತ್ತು ವಿಷಯಾಧಾರಿತ ಎಲೆಕ್ಟ್ರಾನಿಕ್ ವಿಚಾರಣೆ ಲಾಕ್ ಗಳನ್ನು ಜಾರಿಗೆ ತರಲು ಅದು ಶಿಫಾರಸು ಮಾಡುತ್ತದೆ. ಅಲ್ಲದೆ, ಜಿ.ಎಸ್.ಟಿ ಜಾರಿಯ ಆರಂಭಿಕ ವರ್ಷಗಳಲ್ಲಿ ಮತ್ತು ಕೋವಿಡ್ ಸಮಯದಲ್ಲಿ ಅರಿವಿಲ್ಲದೆ ಸಂಭವಿಸಿದ ಪ್ರಕ್ರಿಯಾತ್ಮಕ ತಪ್ಪುಗಳ ಕಡೆಗೆ ಸೌಹಾರ್ದಯುತ ಮತ್ತು ಸಹಕಾರಾತ್ಮಕ ಧೋರಣೆಯನ್ನು ತಳೆಯುವಂತೆ ಕೋರಿದೆ.
ಜಿ.ಎಸ್.ಟಿ.ಯನ್ನು ಡಿಜಿಟಲ್ ಅರ್ಥವ್ಯವಸ್ಥೆಗೆ ಪೂರಕವಾಗಿಸುವುದು
ಡಿಜಿಟಲ್ ವಹಿವಾಟು ಎಂ.ಎಸ್.ಎಂ.ಇ.ಗಳ ಬೆಳವಣಿಗೆಯ ಪ್ರಮುಖ ಇಂಧನವಾಗುತ್ತಿರುವ ಹಿನ್ನೆಲೆಯಲ್ಲಿ, ಜಿ.ಎಸ್.ಟಿ ಪ್ರಕ್ರಿಯೆಗಳು ಆಧುನಿಕ ಉದ್ಯಮ ಮಾದರಿಗಳಿಗೆ ತಕ್ಕಂತೆ ಬದಲಾಗಬೇಕು ಎಂದು ಎಫ್.ಐ.ಎಸ್.ಎಂ.ಇ. ವಾದಿಸುತ್ತದೆ. ಹೆಚ್ಚುವರಿ ಉದ್ಯಮ ಸ್ಥಳಗಳಿಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಸ್ವಯಂ-ಅನುಮೋದಿತ ಬದಲಾವಣೆಗಳೆಂದು ಪರಿಗಣಿಸಲು ಮತ್ತು ಬಿ2ಸಿ ಸರಕು ಸಾಗಣೆಯ ಜೊತೆ ಕಡ್ಡಾಯವಾಗಿ ಕಳುಹಿಸುವ ಕಾಗದದ ಇನ್ ವಾಯ್ಸ್ ಗಳ ಬದಲಿಗೆ ಸುರಕ್ಷಿತ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ದಾಖಲೆಗಳನ್ನು ಬಳಸಲು ಇದು ಶಿಫಾರಸು ಮಾಡುತ್ತದೆ. ಜೊತೆಗೆ, ಆಮದುದಾರರಿಗಾಗಿ ಐಸ್‌ಗೇಟ್ ಮತ್ತು ಜಿ.ಎಸ್.ಟಿ.ಎನ್ ಡೇಟಾ ನಡುವೆ ನಿರಂತರವಾಗಿ ಉಂಟಾಗುವ ವ್ಯತ್ಯಾಸಗಳನ್ನು ಸ್ವಯಂಚಾಲಿತ ಅನುಸರಣೆ ಪ್ರಕ್ರಿಯೆಯ ಮೂಲಕ ಬಗೆಹರಿಸಬೇಕೆಂದು ಕರೆ ನೀಡುತ್ತದೆ.
ಊಹಿಸಬಲ್ಲ ಸಾಮರ್ಥ್ಯವೇ ನಿಜವಾದ ಸುಲಭ ವಹಿವಾಟು
ಅಂತಿಮವಾಗಿ, ಜಿ.ಎಸ್.ಟಿ ಸುಧಾರಣೆಗಳ ಮುಂದಿನ ಹಂತವು ಉದ್ಯಮಗಳು ಪ್ರಕ್ರಿಯಾತ್ಮಕ ಅನಿಶ್ಚಿತತೆಯನ್ನು ನಿವಾರಿಸುವುದರಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಹೂಡಿಕೆ ಮಾಡಲು, ಉದ್ಯೋಗ ಸೃಷ್ಟಿಸಲು ಮತ್ತು ಉದ್ಯಮ ಬೆಳೆಸಲು ಹೆಚ್ಚಿನ ಸಮಯ ನೀಡುವಂತೆ ಇರಬೇಕು ಎಂದು ಎಫ್.ಐ.ಎಸ್.ಎಂ.ಇ. ನಂಬುತ್ತದೆ. ವಿವಾದಗಳನ್ನು ಕಡಿಮೆ ಮಾಡಲು ಮತ್ತು ತೆರಿಗೆದಾರರ ಆತ್ಮವಿಶ್ವಾಸವನ್ನು ಹೆಚ್ಚಿಸಲು ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳ ಮೂಲಕ ಹೆಚ್ಚಿನ ಆಡಳಿತಾತ್ಮಕ ಸ್ಥಿರತೆ, ಕಡ್ಡಾಯ ಸ್ಪಷ್ಟ ಆದೇಶಗಳು, ಅರ್ಥಪೂರ್ಣ ವೈಯಕ್ತಿಕ ವಿಚಾರಣೆಗಳು, ರಿಸ್ಕ್-ಆಧಾರಿತ ಮೌಲ್ಯಮಾಪನಗಳು ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ನಿಯಮಿತ ಸಾಮರ್ಥ್ಯ ವರ್ಧನೆ ತರಬೇತಿಯನ್ನು ನೀಡಬೇಕೆಂದು ಈ ಉದ್ಯಮ ಸಂಸ್ಥೆಯು ಶಿಫಾರಸು ಮಾಡುತ್ತದೆ.
ಈ ಸುಧಾರಣೆಗಳು ಜಿ.ಎಸ್.ಟಿ.ಯ ನೈಸರ್ಗಿಕ ವಿಕಸನವನ್ನು ಪ್ರತಿನಿಧಿಸುತ್ತವೆ — ಅಂದರೆ ಕೇವಲ ಸಾಮಾನ್ಯ ತೆರಿಗೆ ವ್ಯವಸ್ಥೆಯನ್ನು ಸ್ಥಾಪಿಸುವುದರಿಂದ ಹಿಡಿದು ಉದ್ಯಮಗಳ ಬೆಳವಣಿಗೆಯನ್ನು ಸಕ್ರಿಯವಾಗಿ ಬೆಂಬಲಿಸುವ ವ್ಯವಸ್ಥೆಯನ್ನು ನಿರ್ಮಿಸುವವರೆಗೆ ಎಂದು ಎಫ್.ಐ.ಎಸ್.ಎಂ.ಇ. ನಂಬುತ್ತದೆ. ಭಾರತದ ಲಕ್ಷಾಂತರ ಎಂ.ಎಸ್.ಎಂ.ಇ ಗಳಿಗೆ, ತೆರಿಗೆ ನಿಯಮಾವಳಿಗಳ ಪಾಲನೆ ಯಲ್ಲಿನ ತೊಡಕುಗಳನ್ನು ಕಡಿಮೆ ಮಾಡುವುದು ಕೇವಲ ಆಡಳಿತಾತ್ಮಕ ಸುಧಾರಣೆಯಷ್ಟೇ ಅಲ್ಲ; ಅದು ಸ್ಪರ್ಧಾತ್ಮಕತೆಯನ್ನು ಬಲಪಡಿಸುವ, ನಗದು ಹರಿವನ್ನು ಸುಧಾರಿಸುವ ಮತ್ತು ವ್ಯಾಪಾರ ಮಾಡುವುದನ್ನು ಗಮನಾರ್ಹವಾಗಿ ಸುಲಭಗೊಳಿಸುವ ಅನಿವಾರ್ಯ ಆರ್ಥಿಕ ಅಗತ್ಯವಾಗಿದೆ.