ಅಮೆರಿಕ- ಇರಾನ್ ಸಂಘರ್ಷದ ನಡುವೆಯೂ ರೆಪೊ ದರದಲ್ಲಿ ಸ್ಥಿರತೆ ಕಾಯ್ದುಕೊಂಡ ಆರ್‌ಬಿಐ
ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನಿರ್ಧರಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆಯೂ ಆರ್‌ಬಿಐ ರೆಪೊ ದರವನ್ನು ಶೇ. 5.25ರಷ್ಟು ಕಾಯ್ದುಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದರು.
ಸಂಗ್ರಹ ಚಿತ್ರ -
ನವದೆಹಲಿ: ಇರಾನ್ ಮತ್ತು ಅಮೆರಿಕ (Iran and US war) ನಡುವಿನ ಸಂಘರ್ಷದ ಮಧ್ಯೆ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ( Reserve Bank of India) ರೆಪೊ ದರದಲ್ಲಿ (Repo Rate) ಸ್ಥಿರತೆಯನ್ನು ಕಾಯ್ದುಕೊಂಡಿದೆ. ಕಳೆದ ಮೂರು ದಿನಗಳಿಂದ ನಡೆದ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ನಿರ್ಧರಿಸಲಾಗಿದೆ. ನೀತಿ ಸಮಿತಿ ನಿರ್ಧಾರವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (RBI Governor Sanjay Malhotra), ಭಾರತೀಯ ರಿಸರ್ವ್ ಬ್ಯಾಂಕ್ ಅಮೆರಿಕ-ಇರಾನ್ ಯುದ್ಧದ ನಡುವೆಯೂ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಹಿಂದೆ ಇದ್ದಷ್ಟೇ ಅಂದರೆ ಶೇಕಡಾ 5.25ರಷ್ಟು ಇರಿಸಿಕೊಂಡಿದೆ ಎಂದು ತಿಳಿಸಿದರು.
ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆಯೂ ಆರ್‌ಬಿಐ ರೆಪೊ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇದು ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ನಡುವೆ ದೇಶೀಯ ಆರ್ಥಿಕ ಚಟುವಟಿಕೆಗಳು ಸ್ಥಿರವಾಗಿರುವುದನ್ನು ತೋರಿಸಿದೆ ಎಂದರು.
3 ದಿನಗಳಲ್ಲಿ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ಸೇಫ್ ಹಾರ್ಬರ್ ಕಳೆದುಕೊಳ್ಳಿ; ಮೆಟಾಗೆ ಕೇಂದ್ರದಿಂದ ಎಚ್ಚರಿಕೆ
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯ ಬಳಿಕ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಇದರೊಂದಿಗೆ ಆರ್‌ಬಿಐ ಸ್ಟ್ಯಾಂಡಿಂಗ್ ಠೇವಣಿ ಸೌಲಭ್ಯ (SDF) ದರವನ್ನು ಶೇಕಡಾ 5, ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ (MSF) ದರ ಮತ್ತು ಬ್ಯಾಂಕ್ ದರದಲ್ಲಿ ಕೂಡ ಯಾವುದೇ ಬದಲಾವಣೆ ಮಾಡದೇ ಶೇಕಡಾ 5.5ರಷ್ಟು ಇರಿಸಲಾಗಿದೆ ಎಂದು ತಿಳಿಸಿದರು.
ಯುದ್ಧದ ನಡುವೆ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಹಣದುಬ್ಬರ ಕೂಡ ನಿರೀಕ್ಷೆಯಂತೆ ಹೆಚ್ಚಾಗಿದೆ ಎಂದು ಅವರು, ಆದರೂ 2027 ಆರ್ಥಿಕ ವರ್ಷದ ಚಿಲ್ಲರೆ ಹಣದುಬ್ಬರದ ಅಂದಾಜನ್ನು ಹಿಂದಿನ ಶೇಕಡಾ 5.1 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ ಮತ್ತು ಜಿಡಿಪಿ ಅಂದಾಜನ್ನು ಶೇಕಡಾ 6.6 ರಿಂದ ಶೇಕಡಾ 6.7ಕ್ಕೆ ಏರಿಸಲಾಗಿದೆ ಎಂದರು.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸ್ಥಿರತೆ ಇದ್ದರೂ ಈ ಹಣಕಾಸು ವರ್ಷದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಯಾಕೆಂದರೆ ದಕ್ಷಿಣದ ಜಾಗತಿಕ ವ್ಯಾಪಾರ ನೀತಿಗೆ ಸಂಬಂಧಿಸಿದ ಅನಿಶ್ಚಿತತೆ ಮುಂದುವರಿದಿರುವುದರಿಂದ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವಿಶೇಷವಾಗಿ ಹಣದುಬ್ಬರ, ಅದರ ಮಾರ್ಗ ಮತ್ತು ಸಂಯೋಜನೆಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕಾಗಿರುತ್ತದೆ ಎಂದು ಹೇಳಿದರು.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರವು ಮುನ್ಸೂಚನೆಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಆಹಾರ ಮತ್ತು ಇಂಧನದಿಂದ ಪೂರೈಕೆಯಲ್ಲಿ ಉಂಟಾಗಿರುವ ಒತ್ತಡಗಳಿಂದ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗುವ ನಿರೀಕ್ಷೆಯಿದೆ. ಅಮೂಲ್ಯ ಲೋಹಗಳನ್ನು ಹೊರತುಪಡಿಸಿದಂತೆ ಹಣದುಬ್ಬರ ನಿಧಾನವಾಗಿದೆ. ಮುನ್ಸೂಚನೆಗಳಿಗೆ ಅನುಗುಣವಾಗಿಯೇ ಮುಂದುವರಿದಿದೆ ಎಂದು ತಿಳಿಸಿದರು.
ಕಳೆದ ಜುಲೈ ತಿಂಗಳ ಆರಂಭದಿಂದ ಮತ್ತೆ ಇರಾನ್ ಯುದ್ಧ ಪ್ರಾರಂಭವಾಗಿರುವುದರಿಂದ ಇಂಧನ ಬೆಲೆಗಳಲ್ಲಿ ಏರಿಳಿತ ದಾಖಲಾಗುತ್ತಿದೆ. ಉತ್ಪಾದನಾ ವಲಯ ಆರೋಗ್ಯಕರವಾಗಿದೆ. ಭಾರತದ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮವಾಗಿತ್ತು ಎಂದರು.
ವಿಮೆ ಇಲ್ಲದ ವಾಹನಗಳಿಗೆ ಇಂಧನ ಪೂರೈಕೆಗೆ ಬ್ರೇಕ್? ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ
ಎಲ್ ನಿನೊ ಪ್ರಭಾವದಿಂದ ಜಾಗತಿಕ ತೈಲ ಬೆಲೆಗಳು ಹೆಚ್ಚು ಅಸ್ಥಿರವಾಗಿ ಉಳಿದಿವೆ ಎಂದ ಅವರು, ಹಣದುಬ್ಬರದ ಒತ್ತಡಗಳು ಈವರೆಗೆ ಸಾಧಾರಣವಾಗಿದ್ದರೂ ಹೆಚ್ಚಿನ ಆಹಾರ, ಇಂಧನ ವೆಚ್ಚಗಳಿಂದ ಮುಂದಿನ ದಿನಗಳಲ್ಲಿ ಹಣದುಬ್ಬರದಲ್ಲಿ ಏರಿಕೆಯಾಗಬಹುದು ಎಂದು ತಿಳಿಸಿದರು.