ಇರಾನ್ ಸಂಘರ್ಷದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆ ಕಾಡದೇ ಇದ್ದರೂ ಎಲ್‌ಪಿಜಿಗೆ ಕೊರತೆಯಾಗಿರುವುದೇಕೆ?
ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ದಾಳಿ ನಡೆಸಿರುವ ಪರಿಣಾಮ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬಿಕ್ಕಟ್ಟನ್ನು ಉಂಟು ಮಾಡಿದೆ. ದೇಶದಲ್ಲಿ ಮೇಲ್ನೋಟಕ್ಕೆ ಪೆಟ್ರೋಲ್, ಡೀಸೆಲ್ ಸಮಸ್ಯೆ ಕಾಡುತ್ತಿಲ್ಲ. ಆದರೆ ಅಡುಗೆ ಅನಿಲ ಕೊರತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಯಾಕೆ ಈ ಸಮಸ್ಯೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ಬೆಂಗಳೂರು: ಅಡುಗೆ ಅನಿಲದ (LPG Crises) ಕೊರತೆಯಿಂದ ದೇಶಾದ್ಯಂತ ಹಲವಾರು ರೆಸ್ಟೋರೆಂಟ್ ಗಳು, ಹೊಟೇಲ್ ಗಳು ಮುಚ್ಚಲ್ಪಟ್ಟಿವೆ. ಶಾಲೆ, ಅಂಗನವಾಡಿಗಳಲ್ಲಿ ಊಟ, ಉಪಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ (Iran war) ದಾಳಿ ( US-Israel strikes) ನಡೆಸಿದ ಬಳಿಕ ಇರಾನ್ ಮಧ್ಯಪ್ರಾಚ್ಯದ ಹಲವಾರು ರಾಷ್ಟ್ರಗಳ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಇದರೊಂದಿಗೆ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚಿ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಇದು ಹಲವಾರು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟಿಗೆ (Oil crisis) ಕಾರಣವಾಗಿದೆ.
ಮೇಲ್ನೋಟಕ್ಕೆ ಪೆಟ್ರೋಲ್, ಡೀಸೆಲ್ ಸಮಸ್ಯೆ ದೇಶದಲ್ಲಿ ಕಾಡುತ್ತಿಲ್ಲವಾದರೂ ಅಡುಗೆ ಅನಿಲ ಕೊರತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನೆ ದಾಳಿ ನಡೆಸಲು ಪ್ರಾರಂಭಿಸಿದ ಒಂದು ವಾರದ ಬಳಿಕ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳಿಗಾಗಿ ಉದ್ದನೆಯ ಸರತಿ ಸಾಲುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ದೇಶದಲ್ಲಿ ತೈಲ ಕೊರತೆ ಇಲ್ಲ ಎಂಬುದನ್ನು ಪದೇ ಪದೇ ಉಲ್ಲೇಖಿಸಿದರೂ ಕೂಡ ಎಲ್‌ಪಿಜಿಗೆ ಕೊರತೆ ಕಾಣಿಸಿಕೊಂಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಯಾಕೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್‌ಪಿಜಿಯ ಹಿತಮಿತ ಬಳಕೆಗೆ ಸೂಚನೆ ನೀಡಿದ್ದರು. ಜೊತೆಗೆ ಕಾಳಸಂತೆಯಲ್ಲಿ ಇದು ಮಾರಾಟವಾಗುವುದನ್ನು ತಡೆಯಲು ರಾಜ್ಯಗಳಿಗೆ ಆದೇಶ ನೀಡಿದ್ದರು.
ಕೆರಳಿದ ಉತ್ತರ ಕೊರಿಯಾ; ಜಪಾನ್, ದ.ಕೊರಿಯಾ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಗಳ ದಾಳಿ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ದೇಶದ ಎಲ್‌ಪಿಜಿ ಪೂರೈಕೆ ಸರಪಳಿ ಮೇಲೆ ಒತ್ತಡ ಉಂಟು ಮಾಡಿದೆ. ಇದರ ಪರಿಣಾಮ ಅನಿಲ ಏಜೆನ್ಸಿಗಳ ಹೊರಗೆ ದೀರ್ಘ ಸರತಿ ಸಾಲುಗಳು ಕಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಹೊರ್ಮುಜ್ ಜಲಸಂಧಿ. ವಿಶ್ವದ ಪ್ರಮುಖ ಇಂಧನ ಹಡಗು ಮಾರ್ಗಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿರುವುದು. ಇದು ಇಂಧನ ರಫ್ತುದಾರರಾಗಿರುವ ಮಧ್ಯಪ್ರಾಚ್ಯದಲ್ಲಿ ಸಮುದ್ರ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ.
ಹೊರ್ಮುಜ್ ಜಲಸಂಧಿ ಭಾರತದ ಪ್ರಮುಖ ಇಂಧನ ಆಮದು ಮಾರ್ಗವಾಗಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ದೇಶದಲ್ಲಿ ಇಲ್ಲ. ಯಾಕೆಂದರೆ ಇದಕ್ಕಾಗಿ ಉತ್ಪಾದಿಸಲು ಸಂಸ್ಕರಿಸಿದ ಪೆಟ್ರೋಲಿಯಂ ಇಂಧನದ ಸಾಕಷ್ಟು ಪೂರೈಕೆ ಇದೆ. ಎಲ್‌ಪಿಜಿ ಪೂರೈಕೆಗೂ ದೇಶೀಯವಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರ ಹೇಳಿದೆ.
ಎಲ್‌ಪಿಜಿ ಕೊರತೆ ಕಾಣಿಸಿಕೊಂಡಿರುವುದೇಕೆ?
ದೇಶದಲ್ಲಿ ಈಗ ಎಲ್‌ಪಿಜಿ ಕೊರತೆ ದಟ್ಟವಾಗಿ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಂಘರ್ಷ ಆರಂಭವಾದ ದಿನಗಳಲ್ಲಿ ಎಲ್‌ಪಿಜಿ ಪಡೆದುಕೊಳ್ಳಲು ಗ್ರಾಹಕರು ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲಲು ಆರಂಭಿಸಿದರು. ಇದರಿಂದ ಸಿಲಿಂಡರ್ ವಿತರಣೆಯಲ್ಲಿ ಕೊಂಚ ವಿಳಂಬ ಕಾಣಿಸಿಕೊಳ್ಳಲು ಪ್ರಾರಂಭವಾಯಿತು.
ಇದು ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಹೀಗಾಗಿ ಸರ್ಕಾರ ಮೊದಲು ದೇಶೀಯ ಗ್ರಾಹಕರಿಗೆ ಆದ್ಯತೆ ನೀಡಲು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟವನ್ನು ನಿಲ್ಲಿಸಿತ್ತು. ಇದರೊಂದಿಗೆ ಕಾಳಸಂತೆಯಲ್ಲಿ ಎಲ್‌ಪಿಜಿ ಮರುಪೂರಣಗಳ ಬೆಲೆ ಏರಿಕೆಯಾಗಿದ್ದು, ಇದು ಹಲವು ಆಹಾರ ಮಳಿಗೆಗಳ ಮೇಲೆ ಪರಿಣಾಮ ಬೀರಿದೆ. ಬಳಿಕ ಪರ್ಷಿಯನ್ ಕೊಲ್ಲಿಯ ಹೊರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದು ದೇಶದಲ್ಲಿ ಎಲ್‌ಪಿಜಿ ಸರಬರಾಜಿನ ಮೇಲೆ ಪರಿಣಾಮ ಬೀರಿತ್ತು. ಇದರ ಬಿಸಿ ಈಗ ದೇಶದ ಎಲ್ಲಾ ಗ್ರಾಹಕರನ್ನು ತಟ್ಟಿದೆ.
ಹೊರ್ಮುಜ್ ಜಲಸಂಧಿ ಬೀರಿರುವ ಪರಿಣಾಮ
ದೇಶದ ಪೆಟ್ರೋಲಿಯಂ ಸಚಿವಾಲಯದ ಮಾಹಿತಿ ಪ್ರಕಾರ, ಭಾರತ ಪ್ರತಿ ವರ್ಷ 31 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಎಲ್‌ಪಿಜಿಯನ್ನು ಬಳಸುತ್ತದೆ. ದೇಶೀಯ ಉತ್ಪಾದನೆಯು ಅದರ ಅರ್ಧಕ್ಕಿಂತ ಕಡಿಮೆ ಬೇಡಿಕೆಯನ್ನು ಮಾತ್ರ ಪೂರೈಸುತ್ತದೆ. ಉಳಿದವು ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತು ಕುವೈತ್‌ನಂತಹ ಗಲ್ಫ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಇಂಧನವನ್ನು ಸಾಗಿಸುವ ಟ್ಯಾಂಕರ್‌ಗಳು ಭಾರತವನ್ನು ತಲುಪುವ ಮೊದಲು ಹೊರ್ಮುಜ್ ಜಲಸಂಧಿಯ ಮೂಲಕ ಹಾದು ಬರಬೇಕಿದೆ. ದೇಶದ ಎಲ್‌ಪಿಜಿ ಸರಬರಾಜಿನ ಸುಮಾರು ಶೇ. 80-90ರಷ್ಟು ಭಾಗ ಈ ಮಾರ್ಗದ ಮೂಲಕವೇ ಬರಬೇಕಿದೆ. ಹೀಗಾಗಿ ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆ ಉದ್ಭವವಾಗಿದೆ.
ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ರಷ್ಯಾ ಅತಿದೊಡ್ಡ ಪೂರೈಕೆದಾರನಗಿದೆ. ಅನಂತರ ಇರಾಕ್ ಮತ್ತು ಸೌದಿ ಅರೇಬಿಯಾವಿದೆ. ರಷ್ಯಾದ ಕಚ್ಚಾ ತೈಲ ಹೊರ್ಮುಜ್ ಜಲಸಂಧಿಯ ಮೂಲಕ ಹಾದು ಬರುತ್ತವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಕಚ್ಚಾ ತೈಲ ಪೂರೈಕೆಯಾದ ಬಳಿಕ ಭಾರತೀಯ ಸಂಸ್ಕರಣಾಗಾರಗಳು ಅದನ್ನು ಪೆಟ್ರೋಲ್, ಡೀಸೆಲ್ ಮತ್ತು ಇತರ ಇಂಧನಗಳಾಗಿ ಪರಿವರ್ತಿಸುತ್ತವೆ. ದೇಶೀಯ ಬೇಡಿಕೆಗೆ ಹೋಲಿಸಿದರೆ ದೇಶವು ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಪೂರೈಕೆ ಮಾದರಿಗಳು ಬದಲಾದರೆ ಉತ್ಪಾದನೆಯನ್ನು ಸರಿಹೊಂದಿಸಬಹುದು.
ಭಾರತವು ಕಚ್ಚಾ ತೈಲವನ್ನು ಪೆಟ್ರೋಲಿಯಂ ನಿಕ್ಷೇಪಗಳ ಮೂಲಕ ನಿರ್ವಹಿಸುತ್ತದೆ.ಇದಕ್ಕಾಗಿ ಹಲವು ಭೂಗತ ಶೇಖರಣಾ ಸೌಲಭ್ಯಗಳನ್ನು ಹೊಂದಿದೆ. ಇದು ಪೂರೈಕೆಯಲ್ಲಿ ಉಂಟಾಗುವ ತೊಂದರೆಯನ್ನು ನಿವಾರಿಸುತ್ತದೆ. ತುರ್ತು ಪರಿಸ್ಥಿತಿಗಳಿಗಾಗಿ ಭಾರತವು ವಿಶಾಖಪಟ್ಟಣಂ, ಮಂಗಳೂರು ಮತ್ತು ಪಾದೂರ್‌ನಲ್ಲಿ ಭೂಗತವಾಗಿ ಕಚ್ಚಾ ತೈಲವನ್ನು ಸಂಗ್ರಹಿಸುತ್ತದೆ. ಸಂಸ್ಕರಣಾಗಾರಗಳು ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಹೊಂದಿರುವ ದಾಸ್ತಾನುಗಳಲ್ಲಿ ಹಲವಾರು ವಾರಗಳ ಕಾಲ ದೇಶದ ಬೇಡಿಕೆಯನ್ನು ನಿರ್ವಹಿಸಲು ಸಾಧ್ಯವಿದೆ.
ಎಲ್‌ಪಿಜಿ ದಾಸ್ತಾನು ಹೇಗಿದೆ?
ಕಚ್ಚಾ ತೈಲಕ್ಕಿಂತ ಭಿನ್ನವಾಗಿ ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸೀಮಿತ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ ಮಂಗಳೂರು ಮತ್ತು ವಿಶಾಖಪಟ್ಟಣನಲ್ಲಿ ಮಾತ್ರ ಎಲ್‌ಪಿಜಿ ದಾಸ್ತಾನು ವ್ಯವಸ್ಥೆ ಇದೆ. ಇವುಗಳ ಒಟ್ಟು ಸಾಮರ್ಥ್ಯ ಕೇವಲ 1.4 ಲಕ್ಷ ಟನ್‌ಗಳು. ಇದು ದೇಶದ ಒಟ್ಟು ಬಳಕೆಯ ಎರಡು ದಿನಗಳು ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯ ಬೇಡಿಕೆಯನ್ನು ಮಾತ್ರ ಪೂರೈಸಲು ಸಾಧ್ಯ. ದೇಶದಲ್ಲಿ ಅನಿಲ ವ್ಯವಸ್ಥೆಯನ್ನು ದಾಸ್ತಾನು ಮಾಡುವ ಬದಲು ನಿರಂತರ ಹರಿವಿಗಾಗಿ ವಿನ್ಯಾಸಗೊಳಿಸಲಾಗಿದೆ.
ಇಂಡಿಯಾ ಗ್ಯಾಸ್ ಮಾರ್ಕೆಟ್ ವರದಿ ಪ್ರಕಾರ ದೇಶವು ಪ್ರಸ್ತುತ ಭೂಗತ ಅನಿಲ ಸಂಗ್ರಹ ಸೌಲಭ್ಯಗಳ ಕೊರತೆಯನ್ನು ಹೊಂದಿದೆ. ಸುಮಾರು 1.9 ಬಿಲಿಯನ್ ಸೀಮಿತ ಎಲ್ ಎನ್ ಜಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಅನಿಲ ನಿಕ್ಷೇಪಗಳ ನಿರ್ಮಾಣದ ಪ್ರಸ್ತಾಪಗಳು ಇನ್ನೂ ಮಾತುಕತೆಯ ಹಂತದಲ್ಲಿವೆ ಎಂದು ಹೇಳಿದೆ.
ಸುಮಾರು 4 ಬಿಲಿಯನ್ ಸೆಂ.ಮೀ.ವರೆಗಿನ ಭೂಗತ ಅನಿಲ ಸಂಗ್ರಹ ಸಾಮರ್ಥ್ಯಕ್ಕೆ 1- 2 ಬಿಲಿಯನ್ ಡಾಲರ್ ವೆಚ್ಚವಾಗಲಿದೆ. ಈ ಯೋಜನೆಗೆ ಅನುಮೋದನೆ ದೊರೆತರೆ ಇದರ ನಿರ್ಮಾಣಕ್ಕಾಗಿ 3- 4 ವರ್ಷಗಳು ಬೇಕಾಗುತ್ತವೆ. ಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ" ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ವರದಿ ತಿಳಿಸಿದೆ.
ಎಲ್‌ಪಿಜಿ ಬೇಡಿಕೆ ಏಕಾಏಕಿ ಹೆಚ್ಚಳ
ದೇಶದಲ್ಲಿ ಕೇಂದ್ರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಯಾದ ಮೇಲೆ ಎಲ್‌ಪಿಜಿ ಸಿಲಿಂಡರ್‌ಗಳ ಬೇಡಿಕೆಯೂ ಹೆಚ್ಚಳವಾಗಿದೆ. ಈ ಯೋಜನೆಯು ಲಕ್ಷಾಂತರ ಗ್ರಾಮೀಣ ಮನೆಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಿದೆ. ಇದರ ಪರಿಣಾಮವಾಗಿ ದೇಶಾದ್ಯಂತ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ 33 ಕೋಟಿ ದಾಟಿದೆ. ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ ದತ್ತಾಂಶದ ಪ್ರಕಾರ ಅವು 2010 ರಲ್ಲಿ ಸುಮಾರು 10.6 ಕೋಟಿಯಿಂದ 2014 ರಲ್ಲಿ 14.5 ಕೋಟಿಗೆ ಮತ್ತು ನಂತರ 2018 ರಲ್ಲಿ 22.4 ಕೋಟಿಯಿಂದ 2025 ರ ವೇಳೆಗೆ ಸುಮಾರು 33 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ದೇಶದ ಹೆಚ್ಚಿನ ಅಡುಗೆ ಮನೆಗಳು ಇಂದು ಎಲ್ ಪಿಜಿಯನ್ನೇ ಅವಲಂಬಿಸಿದೆ.
ದುಬೈನಲ್ಲಿ ಮುಂದುವರಿದ ಸ್ಫೋಟ; ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಇರಾನ್ ದಾಳಿ
ಎಲ್‌ಪಿಜಿ ಸಮಸ್ಯೆಗೆ ಪರಿಹಾರ ಏನು?
ಸದ್ಯ ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿನ ಸಮಸ್ಯೆಯನ್ನು ನಿರ್ವಹಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಹಲವು ಅನಿಲ ಕಂಪನಿಗಳು ತುರ್ತು ಕ್ರಮಗಳನ್ನು ತೆಗೆದುಕೊಂಡಿವೆ. ಕಚ್ಚಾ ಸಂಸ್ಕರಣೆಯಿಂದ ಎಲ್‌ಪಿಜಿ ಉತ್ಪಾದನೆ ಗರಿಷ್ಠಗೊಳಿಸಲು ಸಂಸ್ಕರಣಾಗಾರಗಳನ್ನು ಕೇಳಲಾಗಿದೆ.
ಪ್ರೋಪೇನ್ ಮತ್ತು ಬ್ಯುಟೇನ್‌ನಂತಹ ಕೆಲವು ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಹರಿವುಗಳನ್ನು ತಾತ್ಕಾಲಿಕವಾಗಿ ಹೆಚ್ಚು ಅಡುಗೆ ಅನಿಲವನ್ನು ಉತ್ಪಾದಿಸಲು ಬಳಸಲಾಗುತ್ತಿದೆ. ಇದರೊಂದಿಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಪಶ್ಚಿಮ ಆಫ್ರಿಕಾ ಸೇರಿದಂತೆ ಗಲ್ಫ್‌ನ ಹೊರಗಿನ ಪೂರೈಕೆದಾರರಿಂದ ಹೆಚ್ಚುವರಿ ಎಲ್‌ಪಿಜಿ ಪಡೆಯಲು ಸರ್ಕಾರ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಇದು ಬರುವುದು ಕೊಂಚ ವಿಳಂಬವಾಗುತ್ತದೆ ಜೊತೆಗೆ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗುತ್ತದೆ. ಹೀಗಾಗಿ ಸದ್ಯ ದೇಶದಲ್ಲಿ ವಾಣಿಜ್ಯ ಬಳಕೆಗಿಂತ ಹೆಚ್ಚಾಗಿ ಗೃಹ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ.