ಪಿಎಫ್ ಬಡ್ಡಿ ಮೊತ್ತ ಖಾತೆಗೆ ಜಮೆಯಾಗಿದೆಯೇ? ಪರಿಶೀಲಿಸುವುದು ಎಲ್ಲಿ, ಹೇಗೆ?
ಭವಿಷ್ಯ ನಿಧಿ ಖಾತೆ ಹೊಂದಿರುವ ಎಲ್ಲರಿಗೂ ಜುಲೈ 15ರೊಳಗೆ ಪಿಎಫ್ ಮೊತ್ತದ ಬಡ್ಡಿಯನ್ನು ಪಾವತಿಸಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಎಷ್ಟು ಬಡ್ಡಿ ಮೊತ್ತ ಪಾವತಿಯಾಗಿದೆ, ಇದನ್ನು ಪರಿಶೀಲಿಸುವುದು ಹೇಗೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ದೇಶಾದ್ಯಂತ ಇರುವ ಸುಮಾರು 34 ಕೋಟಿ ಜನರ ಭವಿಷ್ಯ ನಿಧಿ ಖಾತೆಗೆ ಬಡ್ಡಿ ಮೊತ್ತವನ್ನು ಜುಲೈ 15ರೊಳಗೆ ಜಮೆ ಮಾಡಲಾಗುವುದು. ಹೀಗಾಗಿ ಆ ಬಳಿಕ ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳು ಬಡ್ಡಿ ಮೊತ್ತ ತಮ್ಮ ಖಾತೆಗೆ ಜಮೆ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಈ ಕುರಿತು 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ನೀಡಿದ ಕೇಶವ್ ಪ್ರಸಾದ್ ಅವರು ಈ ಬಾರಿ ಒಟ್ಟು 1.44 ಕೋಟಿ ರೂಪಾಯಿಗೂ ಅಧಿಕ ಪಿಎಫ್ ಬಡ್ಡಿ ಮೊತ್ತವು 34 ಕೋಟಿ ಜನರ ಖಾತೆಗೆ ಜಮೆಯಾಗಲಿದೆ. ೨೦೨೬ರ ಹೊಸ ನಿಯಮದ ಅನ್ವಯ ಒಟ್ಟು ಪಿಎಫ್ ನಿಧಿಯ ಶೇ. 75ರಷ್ಟನ್ನು ಉದ್ಯೋಗಿಗಳು ನೇರವಾಗಿ ಯುಪಿಐ ಮೂಲಕ ಪಡೆಯಬಹುದಾಗಿದೆ. ದೇಶಾದ್ಯಂತ ಇರುವ 9 ಕೋಟಿ ಪಿಎಫ್ ಖಾತೆಗಳು ಮಾತ್ರ ಚಾಲ್ತಿಯಲ್ಲಿದೆ. ಉಳಿದ ಸದಸ್ಯರು ಯುಎಎನ್ ಆಧಾರಿತ ಖಾತೆಗಳಿಗೆ ಜೋಡಿಸುವಂತೆ ಸೂಚಿಸಿದೆ. ಅಲ್ಲದೇ ಜುಲೈ 15ರ ಬಳಿಕ ಪಿಎಫ್ ನ ಅಧಿಕೃತ ವೆಬ್ ಸೈಟ್ ಅಥವಾ ಉಮಂಗ್ ಆಪ್ ಮೂಲಕವೂ ಪಿಎಫ್ ಖಾತೆಗೆ ಜಮೆ ಆಗಿರುವ ಬಡ್ಡಿ ಮೊತ್ತವನ್ನು ಪರಿಶೀಲಿಸಬಹುದಾಗಿದೆ ಎಂದು ಅವರು ಹೇಳಿದರು.