ಎಸ್‌ಬಿಐ ಗ್ರಾಹಕರೇ ಗಮನಿಸಿ: ಅಕ್ಟೋಬರ್ 1ರಿಂದ ನಗದು ಹಿಂಪಡೆಯುವ ಶುಲ್ಕದಲ್ಲಿ ಬದಲಾವಣೆ
SBI Cash Withdrawal Charges: ಎಸ್‌ಬಿಐಯ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳಲ್ಲಿ ಅಕ್ಟೋಬರ್ 1ರಿಂದ ನಗದು ಹಿಂಪಡೆಯುವ ಶುಲ್ಕ ಪರಿಷ್ಕರಣೆಯಾಗಲಿದೆ. ತಿಂಗಳಿಗೆ ನಾಲ್ಕು ನಗದು ವಹಿವಾಟು ಉಚಿತವಾಗಿದ್ದು, ನಂತರದ ಪ್ರತಿ ವಹಿವಾಟಿಗೆ 15 ರುಪಾಯಿ ಜತೆಗೆ ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಡಿಜಿಟಲ್ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಆ. 20: ಭಾರತೀಯ ಸ್ಟೇಟ್ ಬ್ಯಾಂಕ್ (State Bank of India) ತನ್ನ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳಿಗೆ (Basic Savings Bank Deposit Accounts) ಸಂಬಂಧಿಸಿದ ನಗದು ಹಿಂಪಡೆಯುವ ಶುಲ್ಕವನ್ನು (Cash Withdrawal Charges) ಪರಿಷ್ಕರಿಸಿದ್ದು, ಹೊಸ ಶುಲ್ಕಗಳು (Revised Charges) ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಹೊಸ ನಿಯಮದ ಪ್ರಕಾರ, ಖಾತೆದಾರರು ಒಂದು ತಿಂಗಳಲ್ಲಿ ನಾಲ್ಕು ಬಾರಿ ನಗದು ಹಿಂಪಡೆಯುವ ವಹಿವಾಟನ್ನು ಉಚಿತವಾಗಿ ನಡೆಸಬಹುದು. ನಾಲ್ಕು ವಹಿವಾಟುಗಳನ್ನು ಮೀರಿದ ಬಳಿಕ ಪ್ರತಿ ಹೆಚ್ಚುವರಿ ನಗದು ಹಿಂಪಡೆಯುವ ವಹಿವಾಟಿಗೆ 15 ರುಪಾಯಿ ಜತೆಗೆ ಸರಕು ಮತ್ತು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.
ಈ ಶುಲ್ಕ ಪರಿಷ್ಕರಣೆ ಮುಖ್ಯವಾಗಿ ಶಾಖೆಯ ಮೂಲಕ ತೆರೆಯಲಾದ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳಿಗೆ ಅನ್ವಯವಾಗಲಿದೆ. ಗ್ರಾಹಕರು ಹೆಚ್ಚುವರಿ ನಗದು ವಹಿವಾಟು ನಡೆಸುವ ಸಂದರ್ಭದಲ್ಲಿ ಹೊಸ ಶುಲ್ಕವನ್ನು ಗಮನದಲ್ಲಿಟ್ಟುಕೊಳ್ಳುವಂತೆ ಬ್ಯಾಂಕ್ ಸೂಚಿಸಿದೆ. ಆದರೆ ಡಿಜಿಟಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಎಲ್ಲ ಡಿಜಿಟಲ್ ವಹಿವಾಟುಗಳು ಯಾವುದೇ ಶುಲ್ಕವಿಲ್ಲದೆ ಮುಂದುವರಿಯಲಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಭಾರತೀಯ ಬ್ಯಾಂಕ್‌ಗಳಿಂದ ಜಾಗತಿಕ ಬಾಂಡ್‌ಗಳ ಮೂಲಕ 4 ಶತಕೋಟಿ ಡಾಲರ್ ನಿಧಿ ಸಂಗ್ರಹ
ಇದೇ ವೇಳೆ, ಭಾರತೀಯ ಬ್ಯಾಂಕ್‌ಗಳು ಇತ್ತೀಚಿನ ತಿಂಗಳಲ್ಲಿ ಜಾಗತಿಕ ಬಾಂಡ್‌ಗಳ ವಿತರಣೆಯ ಮೂಲಕ ಒಟ್ಟು 4 ಶತಕೋಟಿ ಅಮೆರಿಕನ್ ಡಾಲರ್ ನಿಧಿ ಸಂಗ್ರಹಿಸಿವೆ. ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ಭಾರತೀಯ ಹಣಕಾಸು ವಲಯಕ್ಕೆ ಉತ್ತಮ ಬೇಡಿಕೆ ಮುಂದುವರಿದಿರುವುದರಿಂದ, ಈ ನಿಧಿ ಸಂಗ್ರಹದ ಪ್ರವೃತ್ತಿ ವರ್ಷದ ಉಳಿದ ಅವಧಿಯಲ್ಲೂ ಮುಂದುವರಿಯುವ ನಿರೀಕ್ಷೆಯಿದೆ.
ಹೋಂವರ್ಕ್ ಮಾಡಿಲ್ಲವೆಂದು ಥಳಿಸಿದ ಶಿಕ್ಷಕಿ; ಮಡಿಲಲ್ಲೇ ಪ್ರಾಣಬಿಟ್ಟ 6 ವರ್ಷದ ಬಾಲಕ
ಜೂನ್ 16ರಿಂದ ಆಗಸ್ಟ್ 13ರವರೆಗೆ ನಡೆದ ವಿವಿಧ ವಹಿವಾಟುಗಳ ಮೂಲಕ ಈ ನಿಧಿ ಸಂಗ್ರಹಿಸಲಾಗಿದೆ. ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ 750 ದಶಲಕ್ಷ ಅಮೆರಿಕನ್ ಡಾಲರ್ ಸಂಗ್ರಹಿಸುವ ಮೂಲಕ ಈ ಸರಣಿಯ ಪ್ರಮುಖ ವಹಿವಾಟು ನಡೆಸಿತ್ತು.
ಭಾರತೀಯ ಸ್ಟೇಟ್ ಬ್ಯಾಂಕ್ ಆಗಸ್ಟ್ 11ರಂದು ಐದು ವರ್ಷಗಳ ಬಾಂಡ್ ಮೂಲಕ 500 ದಶಲಕ್ಷ ಅಮೆರಿಕನ್ ಡಾಲರ್ ಸಂಗ್ರಹಿಸಿದೆ. ಈ ವಹಿವಾಟು ಭಾರತೀಯ ಬ್ಯಾಂಕ್‌ಗಳ ಐದು ವರ್ಷಗಳ ಬಾಂಡ್‌ಗಳ ಪೈಕಿ ಅತ್ಯಂತ ಕಡಿಮೆ ಬಡ್ಡಿ ಅಂತರದಲ್ಲಿ ನಡೆದ ಪ್ರಮುಖ ನಿಧಿ ಸಂಗ್ರಹವಾಗಿದೆ. ಐಸಿಐಸಿಐ ಬ್ಯಾಂಕ್ ಐದು ವರ್ಷಗಳ ಬಾಂಡ್ ಮೂಲಕ ಒಂದು ಶತಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದು, ಸುಮಾರು 14 ವರ್ಷಗಳ ಬಳಿಕ ಭಾರತೀಯ ಖಾಸಗಿ ವಲಯದ ಬ್ಯಾಂಕ್‌ವೊಂದರಿಂದ ನಡೆದ ಅತಿದೊಡ್ಡ ಡಾಲರ್ ಸೀನಿಯರ್ ಬಾಂಡ್ ವಿತರಣೆಯಾಗಿದೆ.
ಇನ್ನು ಆಕ್ಸಿಸ್ ಬ್ಯಾಂಕ್ ಜೂನ್ 23ರಂದು ಎರಡು ಬಾಂಡ್‌ಗಳ ಮೂಲಕ ಒಟ್ಟು 800 ದಶಲಕ್ಷ ಅಮೆರಿಕನ್ ಡಾಲರ್ ಸಂಗ್ರಹಿಸಿದೆ. ಬ್ಯಾಂಕ್ ಆಫ್ ಬರೋಡಾ ಕೂಡ ಎರಡು ಸಾಧನಗಳ ಮೂಲಕ ಒಟ್ಟು 700 ದಶಲಕ್ಷ ಅಮೆರಿಕನ್ ಡಾಲರ್ ನಿಧಿ ಸಂಗ್ರಹಿಸಿದೆ.
ಭಾರತೀಯ ಹಣಕಾಸು ವಲಯದ ಮೇಲಿನ ಅಂತರರಾಷ್ಟ್ರೀಯ ಹೂಡಿಕೆದಾರರ ವಿಶ್ವಾಸ, ಬಲವಾದ ಬೇಡಿಕೆ ಮತ್ತು ವಿದೇಶಿ ಕರೆನ್ಸಿ ನಿಧಿಯ ಅಗತ್ಯತೆಯಿಂದಾಗಿ ಭಾರತೀಯ ಬ್ಯಾಂಕ್‌ಗಳ ಜಾಗತಿಕ ಬಾಂಡ್ ವಿತರಣೆ ಮುಂದಿನ ತಿಂಗಳುಗಳಲ್ಲೂ ಮುಂದುವರಿಯುವ ಸಾಧ್ಯತೆ ಇದೆ.