ಹಬ್ಬದ ಸಡಗರದ ಹೊಸ್ತಿಲಲ್ಲೇ ಭಾರತೀಯ ರೈಲ್ವೆ ಜೊತೆಗೆ ಪಾಲುದಾರಿಕೆ ಮತ್ತಷ್ಟು ವಿಸ್ತರಿಸಿದ ಅಮೆಜಾನ್ ಇಂಡಿಯಾ
ಭಾರತೀಯ ರೈಲ್ವೆ ಮತ್ತು ಅಮೆಜಾನ್ ಇಂಡಿಯಾ ನಡುವಿನ ಈ ದೀರ್ಘಕಾಲದ ಪಾಲುದಾರಿಕೆಯು ಭಾರತದ ಸರಕು ಸಾಗಣೆ ಆಧುನೀಕರಣದ ಮಹತ್ವಾಕಾಂಕ್ಷೆ ಹಾಗೂ ದೇಶದ ಲಾಜಿಸ್ಟಿಕ್ಸ್ ಮೂಲ ಸೌಕರ್ಯವನ್ನು ಬಲಪಡಿಸುವ ನಮ್ಮ ಬದ್ಧತೆಯ ಸಂಗಮವಾಗಿದೆ. ಇದು ಕೇಂದ್ರ ಸರ್ಕಾರದ ವಿಕಸಿತ ಭಾರತ, ವಿಕಸಿತ ರೈಲು ಎಂಬ ದೂರದೃಷ್ಟಿಯ ಚಿಂತನೆಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ
-
ಬೆಂಗಳೂರು: ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಡೆಲಿವರಿ ಒದಗಿಸುವ ಉದ್ದೇಶದಿಂದ, ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿ ಎಫ್ ಸಿ ಸಿ ಐ ಎಲ್) ಸಹಯೋಗದೊಂದಿಗೆ ಭಾರತೀಯ ರೈಲ್ವೆಯ ಪಶ್ಚಿಮ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನಲ್ಲಿ (ಡಿ ಎಫ್ ಸಿ) ತನ್ನ ಸರಕು ಕಾರ್ಯಾಚರಣೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ನೂತನ ವಿಸ್ತರಣೆಯು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಅಮೆಜಾನ್ ನ ಮಲ್ಟಿಮೋಡಲ್ (ವಿವಿಧ ಸಾರಿಗೆ ಮಾದರಿಗಳ) ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆಯ ಪಾತ್ರವನ್ನು ಮತ್ತಷ್ಟು ಬಲಪಡಿಸಲಿದೆ.
2019 ರಲ್ಲಿ ಭಾರತದಲ್ಲಿ ತ್ವರಿತ ಪಾರ್ಸೆಲ್ ಸಾಗಣೆಗಾಗಿ ರೈಲ್ವೆ ಜಾಲವನ್ನು ಬಳಸಿಕೊಂಡ ಮೊಟ್ಟಮೊದಲ ಇ-ಕಾಮರ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ದಿನದಿಂದ ಆರಂಭವಾದ ಈ ದೀರ್ಘಕಾಲದ ಸಹಯೋಗವು ನಿರಂತರವಾಗಿ ಮುಂದುವರಿದಿದೆ. ತದನಂತರ 2023 ರಲ್ಲಿ, ವೆಸ್ಟರ್ನ್ ಡಿಎಫ್‌ಸಿಯ 659 ಕಿ.ಮೀ ಉದ್ದದ ರೇವಾರಿ- ಪಾಲನ್ ಪುರ ವಿಭಾಗದಲ್ಲಿ ಯಶಸ್ವಿ ಕಾರ್ಯಾಚರಣೆ ಆರಂಭಿಸುವ ಮೂಲಕ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಗಾಗಿ ದೇಶದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಪ್ರವರ್ತಕ ಸಂಸ್ಥೆಯಾಗಿ ಹೊರಹೊಮ್ಮಿತು. ಇಂದಿನ ಈ ಘೋಷಣೆಯು ಆ ಪಯಣದ ಮುಂದಿನ ಪ್ರಮುಖ ಹಂತವಾಗಿದ್ದು, ಪಶ್ಚಿಮ ಭಾರತದಲ್ಲಿ ಅಮೆಜಾನ್ ನ ಡಿಎಫ್‌ಸಿ ಹೆಜ್ಜೆಗುರುತನ್ನು ಇನ್ನಷ್ಟು ಗಾಢವಾಗಿ ಹಾಗೂ ವಿಸ್ತಾರವಾಗಿ ಹೆಚ್ಚಿದೆ.
ಈ ಮಹತ್ವದ ವಿಸ್ತರಣೆಯೊಂದಿಗೆ, ಭಾರತೀಯ ರೈಲ್ವೆಯ ಪಶ್ಚಿಮ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನಲ್ಲಿ ಚಾಲನೆಗೊಂಡ ಉದ್ಘಾಟನಾ ಜಂಟಿ ಪಾರ್ಸೆಲ್ ಪ್ರಾಡಕ್ಟ್- ರಾಪಿಡ್ ಕಾರ್ಗೋ ಸರ್ವಿಸ್ (ಜೆಪಿಆರ್- ಆರ್ ಸಿ ಎಸ್) ರೈಲಿನಲ್ಲಿ ಸರಕು ಸಾಗಣೆ ಕಾರ್ಯಾಚರಣೆ ಆರಂಭಿಸಿದ ಮೊದಲ ಇ-ಕಾಮರ್ಸ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಅಮೆಜಾನ್ ಪಾತ್ರವಾಗಿದೆ. ಈ ವಿಶೇಷ ಸರಕು ರೈಲಿಗೆ ನ್ಯೂ ದಾದ್ರಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಂಡಳಿಯ ಸದಸ್ಯರಾದ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಡಾ. ಮನೋಜ್ ಸಿಂಗ್ ಹಾಗೂ ಅಮೆಜಾನ್ ಇಂಡಿಯಾದ ಕಾರ್ಯಾ ಚರಣೆಗಳ ನಿರ್ದೇಶಕ ಕಿಶೋರ್ ಲಂಕಾ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿದರು.
ಇದನ್ನೂ ಓದಿ: Railway Minister V.Somanna: ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ರೈಲ್ವೆ ಸಚಿವ ವಿ.ಸೋಮಣ್ಣ
ಈ ದೈನಂದಿನ ಸರಕು ರೈಲು ಸಂಚಾರವು ಅಮೆಜಾನ್ ನ ಉತ್ತರ ಮತ್ತು ಪಶ್ಚಿಮ ಭಾರತದ ಗೋದಾಮು ಜಾಲಗಳನ್ನು ಸುಲಭವಾಗಿ ಬೆಸೆಯಲಿದ್ದು, ಈ ನಿಗದಿತ ಮಾರ್ಗದಲ್ಲಿ ನಿತ್ಯ 10 ಕ್ಕೂ ಹೆಚ್ಚು ವ್ಯಾನ್ ಪಾರ್ಸೆಲ್ ಗಳು ಕಾರ್ಯಾಚರಣೆ ನಡೆಸಲಿವೆ. ಇದು ಸರಕುಗಳ ಸಾಗಣೆಯನ್ನು ರಸ್ತೆ ಮಾರ್ಗದ ಬದಲಾಗಿ ಸಂಪೂರ್ಣವಾಗಿ ರೈಲ್ವೆಗೆ ವರ್ಗಾಯಿಸಲಿದ್ದು, ಮಲ್ಟಿಮೋಡಲ್ ಸಾರಿಗೆ ಜಾಲವನ್ನು ಬಲಪಡಿಸುವುದರ ಜೊತೆಗೆ ಹೆಚ್ಚು ವಿಶ್ವಾಸಾರ್ಹ, ಸುರಕ್ಷಿತ ಹಾಗೂ ಪರಿಸರಸ್ನೇಹಿ ಸುಸ್ಥಿರ ಸಾರಿಗೆಯನ್ನು ಸಾಧ್ಯವಾಗಿಸಲಿದೆ. ಈ ಕಾರಿಡಾರ್ ರಾಷ್ಟ್ರ ರಾಜಧಾನಿ ದೆಹಲಿ, ಗುಜರಾತ್ ನ ಅಹಮದಾಬಾದ್ ಮತ್ತು ಸೂರತ್ ಸೇರಿದಂತೆ ಪ್ರಮುಖ ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸಿ, ಮಹಾರಾಷ್ಟ್ರದ ಪುಣೆ, ಮುಂಬೈ ಹಾಗೂ ಗೋವಾ ರಾಜ್ಯಗಳಿಗೆ ಮುಂದಿನ ಸರಕು ಸಂಪರ್ಕವನ್ನು ಕಲ್ಪಿಸುವ ಮೂಲಕ ಮುಂಬರುವ ದೀಪಾವಳಿ ಸೇರಿದಂತೆ ಪ್ರಮುಖ ಹಬ್ಬದ ಋತುವಿನ ಗ್ರಾಹಕರ ಆರ್ಡರ್ ಗಳನ್ನು ತ್ವರಿತವಾಗಿ ಪೂರೈಸಲು ಸಂಪೂರ್ಣ ಬೆಂಬಲ ನೀಡಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮೆಜಾನ್ ಇಂಡಿಯಾದ ಆಪರೇಷನ್ಸ್ ವಿಭಾಗದ ನಿರ್ದೇಶಕ ಕಿಶೋರ್ ಲಂಕಾ ಅವರು , "ಭಾರತೀಯ ರೈಲ್ವೆ ಮತ್ತು ಅಮೆಜಾನ್ ಇಂಡಿಯಾ ನಡುವಿನ ಈ ದೀರ್ಘಕಾಲದ ಪಾಲುದಾರಿಕೆಯು ಭಾರತದ ಸರಕು ಸಾಗಣೆ ಆಧುನೀಕರಣದ ಮಹತ್ವಾಕಾಂಕ್ಷೆ ಹಾಗೂ ದೇಶದ ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಬಲಪಡಿಸುವ ನಮ್ಮ ಬದ್ಧತೆಯ ಸಂಗಮವಾಗಿದೆ. ಇದು ಕೇಂದ್ರ ಸರ್ಕಾರದ ವಿಕಸಿತ ಭಾರತ, ವಿಕಸಿತ ರೈಲು ಎಂಬ ದೂರದೃಷ್ಟಿಯ ಚಿಂತನೆಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ. ಮೀಸಲಾದ ಸರಕು ಸಾಗಣೆ ಮೂಲಸೌಕರ್ಯದ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ, ನಾವು ನಮ್ಮ ಸಾರಿಗೆ ಜಾಲದಲ್ಲಿ ಮಲ್ಟಿ ಮೋಡಲ್ ವ್ಯವಸ್ಥೆಯನ್ನು ಹೆಚ್ಚಿಸುತ್ತಿದ್ದೇವೆ. ಜೊತೆಗೆ ರೈಲ್ವೆಯನ್ನು ಅತ್ಯಂತ ಮಿತವ್ಯಯಕಾರಿ, ವಿಶ್ವಾಸಾರ್ಹ ಹಾಗೂ ಸುಸ್ಥಿರ ಸಾರಿಗೆ ಮಾದರಿಯಾಗಿ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುತ್ತಿದ್ದೇವೆ. ನಮ್ಮ ಲಾಜಿಸ್ಟಿಕ್ಸ್ ಜಾಲವನ್ನು ಮತ್ತಷ್ಟು ಬಲಪಡಿಸಲು, ಕಾರ್ಯಾಚರಣೆಯ ಒಟ್ಟಾರೆ ದಕ್ಷತೆ ಯನ್ನು ಸುಧಾರಿಸಲು ಮತ್ತು ಭಾರತದಾದ್ಯಂತ ಇರುವ ನಮ್ಮ ಕೋಟ್ಯಂತರ ಗ್ರಾಹಕರ ನಿರಂತರ ಅಗತ್ಯತೆಗಳನ್ನು ಯಶಸ್ವಿಯಾಗಿ ಪೂರೈಸಲು ಭಾರತೀಯ ರೈಲ್ವೆ ಮತ್ತು ಡಿ ಎಫ್ ಸಿ ಸಿ ಐ ಎಲ್ ಸಂಸ್ಥೆಗಳೊಂದಿಗೆ ನಮ್ಮ ಸಹಯೋಗವನ್ನು ಇನ್ನಷ್ಟು ಮುಂದು ವರಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ವಿವರಿಸಿದರು.
ರೈಲ್ವೆ ಮಂಡಳಿಯ ಸದಸ್ಯರಾದ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಡಾ. ಮನೋಜ್ ಸಿಂಗ್ ಅವರು ಮಾತನಾಡಿ , "ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಲ್ಲಿ ಈ ವಿನೂತನ ಸರಕು ಸೇವೆಯನ್ನು ಪ್ರಾರಂಭಿಸುತ್ತಿರುವುದು ನಮಗೆ ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ. ಡಿಎಫ್‌ಸಿ ಜಾಲವು ಸಾಂಪ್ರದಾಯಿಕ ಮಾರ್ಗಗಳಿಗಿಂತ ಹೆಚ್ಚು ಹಸಿರು, ಅತಿ ವೇಗದ ಹಾಗೂ ಅತ್ಯಂತ ವಿಶ್ವಾಸಾರ್ಹ ಸಾರಿಗೆ ವಿಧಾನವನ್ನು ಒದಗಿಸುತ್ತದೆ. ಇದು ಸರಕುಗಳನ್ನು ರಾತ್ರೋರಾತ್ರಿ ಸಾಗಿಸಿ ಮರುದಿನವೇ ನಿಗದಿತ ಗಮ್ಯಸ್ಥಾನಕ್ಕೆ ತಲುಪಿಸಲು ಅನುವು ಮಾಡಿಕೊಡುತ್ತದೆ. ಕೇವಲ 24 ಗಂಟೆಗಳ ಅಲ್ಪಾವಧಿಯಲ್ಲಿ ಸುಮಾರು 350 ರಿಂದ 400 ಟನ್ ಗಳಷ್ಟು ಬೃಹತ್ ಪ್ರಮಾಣದ ಸರಕನ್ನು ಸುಲಭವಾಗಿ ಸಾಗಿಸುವ ಅಗಾಧ ಸಾಮರ್ಥ್ಯ ಹೊಂದಿರುವ ಈ ಸೇವೆಯು, ಆರ್ಥಿಕ ಮತ್ತು ಸುಸ್ಥಿರ ಸರಕು ಸಾಗಣೆ ಪರಿಹಾರವನ್ನು ಒದಗಿಸುತ್ತದೆ. ಜೊತೆಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೂ ಸಹ ಈ ಡಿಎಫ್‌ಸಿ ಜಾಲದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಲು ಅತ್ಯುತ್ತಮ ವಾಣಿಜ್ಯ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ" ಎಂದು ತಿಳಿಸಿದರು.
ಪಶ್ಚಿಮ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಬ್ಲ್ಯೂ ಡಿ ಎಫ್ ಸಿ) ಉತ್ತರ ಪ್ರದೇಶದ ನ್ಯೂ ದಾದ್ರಿ ಯಿಂದ ಆರಂಭವಾಗಿ ಮುಂಬೈ ಸಮೀಪದ ಜವಾಹರಲಾಲ್ ನೆಹರು ಪೋರ್ಟ್ ಟರ್ಮಿನಲ್ (ಜೆ ಎನ್ ಪಿ ಟಿ) ವರೆಗೆ ಸರಿಸುಮಾರು 1,504 ಕಿಲೋಮೀಟರ್ ಗಳಷ್ಟು ಬೃಹತ್ ವಿಸ್ತಾರವನ್ನು ಹೊಂದಿದೆ. ಪ್ರಸ್ತುತವಿರುವ ಸಾಂಪ್ರದಾಯಿಕ ರೈಲು ಜಾಲದ ಮೇಲಿನ ಅತಿಯಾದ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲು, ಸರಕು ರೈಲುಗಳ ಸರಾಸರಿ ವೇಗವನ್ನು ಹೆಚ್ಚಿಸಲು, ಹೆಚ್ಚು ತೂಕದ ಭಾರೀ ಸರಕು ಹೊರುವ ವಿಶೇಷ ರೈಲುಗಳ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡಲು, ವೇಗದ ಸರಕು ಸಾಗಣೆಗಾಗಿ ದೇಶದ ಪ್ರಮುಖ ಬಂದರುಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ನೇರವಾಗಿ ಬೆಸೆಯಲು ಹಾಗೂ ದೇಶದ ಒಟ್ಟಾರೆ ಲಾಜಿಸ್ಟಿಕ್ಸ್ ಸಾರಿಗೆ ವೆಚ್ಚವನ್ನು ಕಡಿತಗೊಳಿಸಲು ಈ ಡಿಎಫ್‌ಸಿ ಕಾರಿಡಾರ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಹಲವು ಪ್ರಥಮಗಳ ಐತಿಹಾಸಿಕ ಪಾಲುದಾರಿಕೆ
ಕಳೆದ 2019 ರಲ್ಲಿ, ದೇಶಾದ್ಯಂತ ಇರುವ ತನ್ನ ಗ್ರಾಹಕರಿಗೆ ಅತ್ಯಂತ ವೇಗದ ಮತ್ತು ವಿಶ್ವಾಸಾರ್ಹ ಡೆಲಿವರಿ ನೀಡುವ ವಾಣಿಜ್ಯ ಭರವಸೆಯನ್ನು ಯಶಸ್ವಿಯಾಗಿ ಈಡೇರಿಸುವ ಸಲುವಾಗಿ ಭಾರತೀಯ ರೈಲ್ವೆಯೊಂದಿಗೆ ನೇರ ಕಾರ್ಯಾಚರಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ವಿಶಾಲವಾದ ರೈಲ್ವೆ ಜಾಲವನ್ನು ಬಳಸಿಕೊಂಡ ದೇಶದ ಮೊದಲ ಇ-ಕಾಮರ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಅಮೆಜಾನ್ ಇಂಡಿಯಾ ಪಾತ್ರವಾಯಿತು.
ಈ ವಿಶೇಷ ಎಕ್ಸ್ ಪ್ರೆಸ್ ಸಾರಿಗೆ ಪರಿಹಾರವು ಮುಂಬೈ-ದೆಹಲಿ ಮಾರ್ಗದ ಪ್ರಸಿದ್ಧ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮೀಸಲಾದ ಪಾರ್ಸೆಲ್ ವ್ಯಾಗನ್ ಗಳನ್ನು ಯಶಸ್ವಿಯಾಗಿ ಸಾಗಿಸಿತು. ನಂತರ 2023 ರಲ್ಲಿ, ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ಗಳನ್ನು (ಡಿ ಎಫ್ ಸಿ) ವಾಣಿಜ್ಯ ಬಳಕೆಗೆ ತಂದ ಮೊದಲ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಕಂಪನಿಯಾಗುವ ಮೂಲಕ ಭಾರತೀಯ ರೈಲ್ವೆಯೊಂದಿಗಿನ ತನ್ನ ಐತಿಹಾಸಿಕ ಸಂಬಂಧವನ್ನು ಸಂಸ್ಥೆಯು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿತು.
ಇಂದು, ಅಮೆಜಾನ್ ಇಂಡಿಯಾದ ರೈಲು ಸಾರಿಗೆ ಜಾಲವು 2019 ರಲ್ಲಿ ಕೇವಲ ಒಂದೇ ಒಂದು ರೈಲಿನಿಂದ ಆರಂಭವಾಗಿ, ಪ್ರಸ್ತುತ 100ಕ್ಕೂ ಹೆಚ್ಚು ಗಮ್ಯಸ್ಥಾನ ನಗರಗಳನ್ನು ಪರಸ್ಪರ ಸಂಪರ್ಕಿಸುವ 130 ಇಂಟರ್‌ಸಿಟಿ ಮಾರ್ಗಗಳಲ್ಲಿ 140 ಕ್ಕೂ ಹೆಚ್ಚು ರೈಲುಗಳಿಗೆ ಅಗಾಧವಾಗಿ ವಿಸ್ತರಿಸಿದೆ. ಈ ನಿರಂತರ ಬಂಡವಾಳ ಹೂಡಿಕೆಗಳು ತನ್ನ ದೇಶವ್ಯಾಪಿ ಕಾರ್ಯಾಚರಣಾ ಜಾಲವನ್ನು ಸಮಗ್ರವಾಗಿ ಬಲಪಡಿಸಲು ಮತ್ತು ಭಾರತದಾದ್ಯಂತ ಇರುವ ಪ್ರತಿಯೊಬ್ಬ ಗ್ರಾಹಕರಿಗೂ ಮತ್ತಷ್ಟು ವೇಗದ ಹಾಗೂ ಅತ್ಯಂತ ವಿಶ್ವಾಸಾರ್ಹ ಡೆಲಿವರಿ ಸೇವೆಗಳನ್ನು ಒದಗಿಸಲು ಅಮೆಜಾನ್ ಇಂಡಿಯಾ ಕೈಗೊಳ್ಳುತ್ತಿರುವ ದೃಢ ಪ್ರಯತ್ನಗಳ ಪ್ರಮುಖ ಭಾಗವಾಗಿವೆ.
*
ಭಾರತೀಯ ರೈಲ್ವೆಯ ಪಶ್ಚಿಮ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಲ್ಲಿ ನೂತನವಾಗಿ ಆರಂಭಿಸ ಲಾದ ಉದ್ಘಾಟನಾ ಜಂಟಿ ಪಾರ್ಸೆಲ್ ಪ್ರಾಡಕ್ಟ್- ರಾಪಿಡ್ ಕಾರ್ಗೋ ಸರ್ವಿಸ್ (ಜೆಪಿಆರ್- ಆರ್ ಸಿ ಎಸ್) ರೈಲಿನಲ್ಲಿ ವಾಣಿಜ್ಯ ಸರಕು ಕಾರ್ಯಾಚರಣೆಯನ್ನು ಆರಂಭಿಸಿದ ದೇಶದ ಮೊಟ್ಟಮೊದಲ ಇ-ಕಾಮರ್ಸ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಅಮೆಜಾನ್ ಇಂಡಿಯಾ ಪಾತ್ರವಾಗಿದೆ. ಇದು ಸಂಸ್ಥೆಯ ರೈಲು ಸರಕು ಸಾಗಾಣಿಕಾ ಸಾರಿಗೆ ಜಾಲದ ಅತ್ಯಂತ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸ ಲಾಗಿದೆ.
- ಈ ಹೊಸ ಸರಕು ಸಾರಿಗೆ ಕಾರಿಡಾರ್ ದೆಹಲಿ, ಅಹಮದಾಬಾದ್ ಮತ್ತು ಸೂರತ್ ನಗರಗಳಲ್ಲಿ ರುವ ಅಮೆಜಾನ್ ನ ಬೃಹತ್ ಜಾಲವನ್ನು ಸಂಪರ್ಕಿಸುವುದರ ಜೊತೆಗೆ ಮಹಾರಾಷ್ಟ್ರದ ಪುಣೆ, ಮುಂಬೈ ಹಾಗೂ ಗೋವಾ ರಾಜ್ಯಗಳಿಗೆ ಸಾರಿಗೆ ಸಂಪರ್ಕವನ್ನು ಒದಗಿಸಲಿದೆ. ಇದು ಮುಂಬರುವ ಪ್ರಮುಖ ಹಬ್ಬದ ದಿನಗಳಿಗೂ ಮುನ್ನವೇ ಉತ್ತರ ಮತ್ತು ಪಶ್ಚಿಮ ಭಾರತ ದಾದ್ಯಂತ ರೈಲು ಮಾರ್ಗದ ಮೂಲಕ ತ್ವರಿತ ಸರಕು ಸಾಗಣೆಗೆ ಪ್ರಬಲ ಬೆಂಬಲ ನೀಡಲಿದೆ.
- ಈ ದೈನಂದಿನ ರೈಲು ಕಾರ್ಯಾಚರಣೆಯು 10ಕ್ಕೂ ಹೆಚ್ಚು ಮೀಸಲಾದ ವ್ಯಾನ್ ಪಾರ್ಸೆಲ್ ಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಲಿದ್ದು, ಸರಕು ಸಾಗಣೆಯನ್ನು ಸಾಂಪ್ರದಾಯಿಕ ರಸ್ತೆ ಸಾರಿಗೆಯಿಂದ ಸುರಕ್ಷಿತ ರೈಲ್ವೆ ಜಾಲಕ್ಕೆ ವರ್ಗಾಯಿಸುವ ಮೂಲಕ ಹೆಚ್ಚಿನ ವಿಶ್ವಾಸಾರ್ಹತೆ ಹಾಗೂ ಪರಿಸರಸ್ನೇಹಿ ಸುಸ್ಥಿರತೆಯನ್ನು ತರಲಿದೆ.
- 2019 ರಲ್ಲಿ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಎಕ್ಸ್ ಪ್ರೆಸ್ ಪಾರ್ಸೆಲ್ ರೈಲು ಸಾಗಣೆ ಆರಂಭಿಸಿದ್ದರಿಂದ ಹಿಡಿದು, 2023 ರಲ್ಲಿ 659 ಕಿಲೋಮೀಟರ್ ಉದ್ದದ ರೇವಾರಿ-ಪಾಲನ್ ಪುರ ಮಾರ್ಗದಲ್ಲಿ ಡಿಎಫ್‌ಸಿ ಕಾರ್ಯಾಚರಣೆ ವಿಸ್ತರಿಸುವವರೆಗೆ ಭಾರತೀಯ ರೈಲ್ವೆಯೊಂದಿಗೆ ಅಮೆಜಾನ್ ಹೊಂದಿರುವ ಸಹಯೋಗವನ್ನು ಈ ಒಪ್ಪಂದ ಮತ್ತಷ್ಟು ಗಟ್ಟಿಗೊಳಿಸಿದೆ.
- 2019 ರಲ್ಲಿ ಕೇವಲ ಒಂದೇ ಒಂದು ಪ್ರಾಯೋಗಿಕ ರೈಲಿನ ಮೂಲಕ ಆರಂಭವಾದ ಅಮೆಜಾನ್ ಇಂಡಿಯಾದ ರೈಲು ಸಾರಿಗೆ ಜಾಲವು ಇಂದು ದೇಶದ 130ಕ್ಕೂ ಹೆಚ್ಚು ಪ್ರಮುಖ ನಗರ ಮಾರ್ಗಗಳಲ್ಲಿ ಸಂಚರಿಸುವ 140ಕ್ಕೂ ಅಧಿಕ ರೈಲುಗಳಾಗಿ ಬೃಹತ್ ಮಟ್ಟದಲ್ಲಿ ಬೆಳೆದಿದ್ದು, ಒಟ್ಟು 100ಕ್ಕೂ ಹೆಚ್ಚು ಗಮ್ಯಸ್ಥಾನ ನಗರಗಳನ್ನು ಸಂಪರ್ಕಿಸುತ್ತಿದೆ.