ಹನಿ ಟ್ರ್ಯಾಪ್, ಆತ್ಮಹತ್ಯಾ ದಾಳಿಗೆ ಸಂಚು: ಬಂಧನಕ್ಕೊಳಗಾದ ಜೈಪುರ ಮಹಿಳೆಗೆ ಜೈಶ್ ಸಂಪರ್ಕ
ಹನಿಟ್ರ್ಯಾಪ್, ಆತ್ಮಹತ್ಯಾ ದಾಳಿಗೆ ಸಂಚು ರೂಪಿಸುತ್ತಿದ್ದ ಜೈಪುರದ ಮಹಿಳೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಜೊತೆ ಸಂಬಂಧ ಹೊಂದಿದ್ದವರ ಜೊತೆ ಸುಮಾರು ಎರಡು ವರ್ಷಗಳಿಂದ ಸಂಪರ್ಕ ಹೊಂದಿದ್ದಳು. ಜೈಪುರದ ಬಬಿತಾ ಧಕಾದ್ ಅಲಿಯಾಸ್ ಖದೀಜಾ ಜೈಶ್ ನ ಸ್ಲೀಪರ್-ಸೆಲ್ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಳು ಎಂದು ತನಿಖೆ ವೇಳೆ ಬಹಿರಂಗವಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ಬಂಧನಕ್ಕೆ ಒಳಗಾದ ಮಹಿಳೆ ಜೈಶ್-ಎ-ಮೊಹಮ್ಮದ್ (Jaish-e-Mohammed) ಸ್ಲೀಪರ್-ಸೆಲ್ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ಈಕೆ ಹನಿಟ್ರ್ಯಾಪ್ (Honey trap), ಆತ್ಮಹತ್ಯಾ ದಾಳಿಗೆ (suicide attack plot) ಸಂಚು ರೂಪಿಸುತ್ತಿದ್ದಳು. ಜೈಶ್ ಜೊತೆ ಸಂಬಂಧ ಹೊಂದಿದ್ದ ಅನೇಕ ಮಂದಿಯ ಜೊತೆ ಸುಮಾರು ಎರಡು ವರ್ಷಗಳಿಂದ ಸಂಪರ್ಕ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳವು (Rajasthan Anti-Terrorist Squad) ಸುಳಿವುಗಳ ಆಧಾರದಲ್ಲಿ ಜೈಪುರದ ಬಬಿತಾ ಧಕಾದ್ ಅಲಿಯಾಸ್ ಖದೀಜಾ ವಶಕ್ಕೆ ಪಡೆದಿದ್ದು, ಏಳು ದಿನಗಳ ಕಸ್ಟಡಿ ವಿಚಾರಣೆಗೆ ಒಳಪಡಿಸಿದೆ. ಈ ಸಂದರ್ಭದಲ್ಲಿ ಹಲವು ಮಹತ್ವಪೂರ್ಣ ಮಾಹಿತಿಗಳು ಬೆಳಕಿಗೆ ಬಂದಿವೆ.
ಬಬಿತಾ ಧಕಾದ್ ಅಲಿಯಾಸ್ ಖದೀಜಾಗೆ ಜೈಶ್ ಸಂಪರ್ಕವಿರುವುದು ಮತ್ತು ಹನಿ ಟ್ರ್ಯಾಪ್, ಆತ್ಮಹತ್ಯಾ ದಾಳಿಗೆ ಸಂಚು ರೂಪಿಸುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಬಬಿತಾ ಸುಮಾರು ಎರಡು ವರ್ಷಗಳಿಂದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
ಅನಾರೋಗ್ಯಕ್ಕೊಳಗಾಗಿದ್ದ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ
ಬಬಿತಾಳ ಬಂಧನದಿಂದ ಜೈಶ್ ಭಯೋತ್ಪಾದಕ ಸಂಘಟನೆಗೆ ಯುವತಿಯರ ನೇಮಕ, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಹನಿ ಟ್ರ್ಯಾಪ್ ನಡೆಸಲು ಸಂಘಟನೆ ತಯಾರಿಸುತ್ತಿದ್ದ ಹಲವಾರು ಪ್ರಮುಖ ಮಾಹಿತಿಗಳು ಬಹಿರಂಗಗೊಂಡಿದೆ.
ಸುಮಾರು ಎರಡು ವರ್ಷಗಳಿಂದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಬಬಿತಾಳಿಗೆ ಜೈಶ್ ನಲ್ಲಿ ದೊಡ್ಡ ಪಾತ್ರ ನೀಡಲು ಸಿದ್ಧತೆ ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಇದಕ್ಕಾಗಿ ಆನ್‌ಲೈನ್ ತರಬೇತಿಗೆ ಸಂಬಂಧಿಸಿ ಡಿಜಿಟಲ್ ಪುರಾವೆಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಆತ್ಮಹತ್ಯಾ ದಾಳಿ, ಉಗ್ರಗಾಮಿ ಚಟುವಟಿಕೆಗೆ ಸಂಬಂಧಿಸಿದ ಹಲವಾರು ಮಾಹಿತಿಗಳು ಕಂಡು ಬಂದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಬಬಿತಾಳ ಇಂಟರ್ನೆಟ್ ಚಟುವಟಿಕೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆಕೆಯ ಸಂಪರ್ಕ, ಚಟುವಟಿಕೆಗಳ ವ್ಯಾಪ್ತಿಯನ್ನು ಪತ್ತೆ ಹಚ್ಚಲು ಆಕೆಯ ಮೊಬೈಲ್ ಫೋನ್, ಡಿಜಿಟಲ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬಬಿತಾಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರನ್ನು ಹನಿ ಟ್ರ್ಯಾಪ್ ಗೆ ಸೆಳೆಯಲು ಪ್ರಯತ್ನಿಸಲು ತರಬೇತಿ ನೀಡಲಾಗಿದೆ. ಇದು ಮುಂದುವರೆದಿದೆಯೇ ಎಂಬುದನ್ನು ನಿರ್ಧರಿಸಲು ತನಿಖಾಧಿಕಾರಿಗಳು ಸಂವಹನ ದಾಖಲೆಗಳನ್ನು ಕೂಡ ಪರಿಶೀಲಿಸುತ್ತಿದ್ದಾರೆ.
ಅನೇಕ ರಾಜ್ಯಗಳ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ ಬಬಿತಾ, ಕೆಲವು ಯುವತಿಯರನ್ನು ಭಯೋತ್ಪಾದನೆಗೆ ಸೆಳೆಯುವ ಪ್ರಯತ್ನ ಕೂಡ ಮಾಡಿದ್ದಾಳೆ. ಇದಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದ್ದಿರಬಹುದು. ಅಲ್ಲದೇ ಕ್ರಿಪ್ಟೋಕರೆನ್ಸಿ ಮೂಲಕ ಹಣಕಾಸಿನ ನೆರವು ಪಡೆಯುವ ಯೋಜನೆಯನ್ನು ಕೂಡ ಹೊಂದಿದ್ದಳು. ಇದಕ್ಕಾಗಿ ಹಣಕಾಸಿನ ಸಂಪರ್ಕಗಳು, ವಹಿವಾಟುಗಳ ಮಾಹಿತಿಯನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಪಾಕ್‌ನೊಂದಿಗೆ ಸಂಪರ್ಕದಲ್ಲಿದ್ದ ಶಂಕಿತ ಉಗ್ರನ ಬಂಧನ
ಬಬಿತಾ "ಖಾದಿಜಾ" ಎಂಬ ಹೆಸರನ್ನು ತನ್ನ ಹೆಸರಿನೊಂದಿಗೆ ಮತ್ತೆ ಸೇರಿಸಿಕೊಂಡಿದ್ದಳು. ಇದು ಜೈಶ್ ಜೊತೆ ಸಂಪರ್ಕ ಹೊಂದಿದ ವ್ಯಕ್ತಿಗಳಿಂದ ಪ್ರಭಾವಿತರಾಗಿ ಮಾಡಿಕೊಂಡಿದ್ದಳು ಎನ್ನಲಾಗಿದೆ. ಆಕೆಯ ಮೊಬೈಲ್ ನಲ್ಲಿ ಅಳಿಸಲಾದ ಚಾಟ್, ಛಾಯಾಚಿತ್ರ, ವಿಡಿಯೋ ಮತ್ತು ಇತರ ಡಿಜಿಟಲ್ ದಾಖಲೆಗಳನ್ನು ಕೂಡ ಅಧಿಕಾರಿಗಳು ಪತ್ತೆ ಮಾಡಿದ್ದು ಇದನ್ನು ಮರುಪಡೆಯಲು ವಿಧಿವಿಜ್ಞಾನ ತಜ್ಞರನ್ನು ಸಂಪರ್ಕಿಸಿದ್ದಾರೆ. ಇದರಿಂದ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.