Bengaluru News: ಪ್ರಿಯಕರನ ಕೈಕಾಲು ಕಟ್ಟಿ ಭೀಕರವಾಗಿ ಹತೈಗೈದ ಕಿರುತೆರೆ ನಟಿ
Crime News: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಬಾಗಲಗುಂಟೆಯ ವಿಜಯಲಕ್ಷ್ಮೀ ಬಡಾವಣೆಯ ಮನೆಯೊಂದರಲ್ಲಿ ಪ್ರಿಯಕರನನ್ನು ಕಿರುತೆರೆ ನಟಿ ಊರ್ವಶಿ ಕೊಲೆ ಮಾಡಿದ್ದಾಳೆ. ಕೆಲವು ದಿನಗಲ ಹಿಂದೆ ಮೃತದೇಹ ಪತ್ತೆಯಾಗಿತ್ತು. ಇದೀಗ ಕೊಲೆಯ ರಹಸ್ಯ ಬಯಲಾಗಿದ್ದು, ಮೃತನನ್ನು ಮೋಹನ ಕೃಷ್ಣ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಮಾ. 2: ಆಕೆ ಕಿರುತೆರೆ ನಟಿ. ಅದಾಗಲೇ ಆಕೆಗೆ ಮದುವೆಯಾಗಿತ್ತು. ಆದರೂ ಮತ್ತೊಬ್ಬ ವಿವಾಹಿತನನ್ನು ಪ್ರೀತಿಸಿದಳು. ಮದುವೆಯಾಗಿದ್ದ ಆತನೂ ಈಕೆಗೆ ಮನಸೋತ. ಹೀಗೆ ಇಬ್ಬರೂ ಪತಿ-ಪತ್ನಿ ಎಂದು ಹೇಳಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸ ಮಾಡತೊಡಗಿದರು (Bengaluru News). ಬಳಿಕ ಅದೇನಾಯ್ತೋ ಗೊತ್ತಿಲ್ಲ ಆಕೆ ತನ್ನ ಪ್ರಿಯಕರನ ಕೈಕಾಲು ಕಟ್ಟಿ ಬಾಯಿಗೆ ಟೈಪ್ ಸುತ್ತಿ ಕೊಲೆ ಮಾಡಿದ್ದಾಳೆ. ಬೆಂಗಳೂರಿನಲ್ಲಿ ಈ ಭೀಕರ ಘಟನೆ ನಡೆದಿದೆ (Crime News). ಕೊಲೆ ಮಾಡಿದಾಕೆಯನ್ನು ಊರ್ವಶಿ ಆಲಿಯಾಸ್ ಸಿಂಧು ಎಂದು ಗುರುತಿಸಲಾಗಿದೆ. ಸದ್ಯ ಆಕೆ ಪೊಲೀಸರು ಅತಿಥಿಯಾಗಿದ್ದಾಳೆ.
ಊರ್ವಶಿಯಿಂದ ಕೊಲೆಯಾದ ನತದೃಷ್ಟ ಹಾಸನದ 29 ವರ್ಷದ ಮೋಹನ ಕೃಷ್ಣ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ಘಟನೆ ಸಂಬಂಧ ಪೊಲೀಸರು ಈಗಾಗಲೇ ಊರ್ವಶಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಊರ್ವಶಿ ಕೆಲವೊಂದು ಮಾಹಿತಿಯನ್ನು ಬಾಯ್ಬಿಟ್ಟಿದ್ದಾಳೆ. ನಿರಂತರ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಮೋಹನ ಕೃಷ್ಣನನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಸುರಪುರದಲ್ಲಿ ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೈದ ಪತ್ನಿ; ಇಬ್ಬರು ಆರೋಪಿಗಳ ಬಂಧನ
ಘಟನೆ ಹಿನ್ನೆಲೆ
ಕೈಕಾಲು ಕಟ್ಟಿ ಬಾಯಿಗೆ ಟೈಪ್ ಸುತ್ತಿದ ಸ್ಥಿತಿಯಲ್ಲಿ ಮೋಹನ ಕೃಷ್ಣನ ಮೃತದೇಹ ಬಾಗಲಗುಂಟೆಯ ವಿಜಯಲಕ್ಷ್ಮೀ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡು ಸಂಶಯದ ಮೇರೆಗೆ ಆತನ ಪ್ರಿಯತಮೆ, ನಟಿ ಊರ್ವಶಿಯನ್ನು ವಶಕ್ಕೆ ಪಡೆದುಕೊಂಡಾಗ ಬೆಚ್ಚಿ ಬೀಳಿಸುವ ವಿಚಾರ ಒಂದೊಂದಾಗಿ ಬೆಳಕಿಗೆ ಬಂದಿದೆ.
ಅದಾಗಲೇ ಮದುವೆಯಾಗಿದ್ದರೂ ಊರ್ವಶಿ ಮತ್ತು ಮೋಹನ ಕೃಷ್ಣ ಮಧ್ಯೆ ಸಂಬಂಧ ಬೆಳೆದಿತ್ತು. ಹೀಗಾಗಿ ಅವರು ಪತಿ-ಪತ್ನಿ ಎಂದು ಹೇಳಿಕೊಂಡು 3 ತಿಂಗಳ ಹಿಂದೆ . ಬಾಗಲಗುಂಟೆಯ ವಿಜಯಲಕ್ಷ್ಮೀ ಬಡಾವಣೆಯಲ್ಲಿ ಮನೆ ಬಾಡಿಗೆ ಪಡೆದುಕೊಂಡಿದ್ದರು. ಈ ವೇಳೆ ಮೋಹನ್ ಕೃಷ್ಣ ಪಿಗ್ನಿ ಕಲೆಕ್ಟರ್ ಎಂದೂ ಊರ್ವಶಿ ಸಹ ನಿರ್ದೇಶಕಿ ಎಂದು ಪರಿಚಯಿಸಿಕೊಂಡಿದ್ದರು.
ಮನೆಯೊಳಗೆ ವ್ಯಕ್ತಿಯ ಕೊಳೆತ ಶವ ಪತ್ತೆ; ಹತ್ಯೆ ಎಸಗಿ ಮನೆಗೆ ಲಾಕ್ ಮಾಡಿದ ದುಷ್ಟರು
ಕಿರುಕುಳ ನೀಡುತ್ತಿದ್ದ ಪ್ರಿಯಕರ
ಅದಾದ ಬಳಿಕ ಕೆಲವೇ ದಿನಗಳಲ್ಲಿ ಆ ಮನೆ ಚಿಕ್ಕದಾಯಿತು ಎಂದು ಹೇಳಿ ಎದುರುಗಡೆಯ ಮತ್ತೊಂದು ಮನೆಗೆ ಶಿಫ್ಟ್ ಆಗಿದ್ದರು. ಆದರೆ ನಂತರ ಅವರಿಬ್ಬರ ಸಂಬಂಧ ಹಳಸತೊಡಗಿತು. ʼʼಮೋಹನ ಕೃಷ್ಣ ಅನಗತ್ಯವಾಗಿ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡತೊಡಗಿದ. ಬಹಳಷ್ಟು ಸಹಿಸಿದೆ. ಮತ್ತೂ ಆತನ ಕಿರುಕುಳ ಹೆಚ್ಚಾಗಿದ್ದರಿಂದ ತಾಳ್ಮೆ ಕಳೆದುಕೊಂಡು ಕೊಲೆ ಮಾಡಿದೆʼʼ ಎಂದು ಊರ್ವಶಿ ಹೇಳಿದ್ದಾಳೆ. ಒಟ್ಟಿನಲ್ಲಿ ಮದುವೆಯಾಗಿ ತಮ್ಮದೇ ಸಂಸಾರದಲ್ಲಿ ಸುಖವಾಗಿರಬೇಕಾದ ಜೋಡಿಯೊಂದು ಮತ್ತೊಂದು ಸಂಬಂಧದ ವ್ಯಾಮೋಹಕ್ಕೆ ಒಳಗಾಗಿ ಜೀವನವನ್ನೇ ನರಕವಾಗಿಸಿದೆ. ಪ್ರಿಯಕರ ಇನ್ನಿಲ್ಲವಾದರೆ ಆತನನ್ನು ಕೊಂದ ಆಕೆ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.