ಆದಷ್ಟು ಬೇಗ ಇರಾನ್ ಬಿಟ್ಟು ಹೊರಡಿ; ಭಾರತೀಯರಿಗೆ ಕೇಂದ್ರದ ಸೂಚನೆ
Iran Unrest: ಇರಾನ್‌ನಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿಯೇ ಮುಂದುವರಿದಿದ್ದು, ಪ್ರತಿಭಟನೆಯಲ್ಲಿ ಇದುವರೆಗೆ 2 ಸಾವಿರಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಭಾರತ ಸರ್ಕಾರ ಅಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದು, ಶೀಘ್ರದಲ್ಲೇ ದೇಶ ತೊರೆಯುವಂತೆ ಸೂಚಿಸಿದೆ. ಜತೆಗೆ ಇರಾನ್‌ಗೆ ತೆರಳದಂತೆ ಭಾರತೀಯರಿಗೆ ಸಲಹೆ ನೀಡಿದೆ.
ಇರಾನ್‌ನಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ) -
ದೆಹಲಿ, ಜ. 14: ಇರಾನ್‌ನಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿಯೇ ಮುಂದುವರಿದಿದ್ದು, ಪ್ರತಿಭಟನೆಯಲ್ಲಿ ಇದುವರೆಗೆ 2 ಸಾವಿರಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ (Iran Unrest). ಪ್ರತಿಭಟನಾಕಾರರು ಸುಮಾರು 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ ಹಚ್ಚಿದ್ದಾರೆ. ʼʼಮುಲ್ಲಾಗಲೇ ದೇಶ ಖಾಲಿ ಮಾಡಿʼʼ ಎಂದು ಪ್ರತಿಭಟನಾಕಾರರು ಬೀದಿಗಳಿದು ಘೋಷಣೆ ಕೂಗುತ್ತಿದ್ದಾರೆ. ಈ ಮಧ್ಯೆ ಭಾರತ ಸರ್ಕಾರ ಅಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದು, ಶೀಘ್ರದಲ್ಲೇ ದೇಶ ತೊರೆಯುವಂತೆ ಸೂಚಿಸಿದೆ. ಜತೆಗೆ ಇರಾನ್‌ಗೆ ತೆರಳದಂತೆ ಭಾರತೀಯರಿಗೆ ಸಲಹೆ ನೀಡಿದೆ.
ಕಳೆದ ತಿಂಗಳ ಕೊನೆಯಲ್ಲಿ ಇರಾನ್‌ನ ಕರೆನ್ಸಿ ರಿಯಾಲ್ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದ ನಂತರ ಅಲ್ಲಿ ಪ್ರತಿಭಟನೆ ಪ್ರಾರಂಭವಾಯಿತು. ಆರ್ಥಿಕ ಸಂಕಷ್ಟಗಳ ವಿರುದ್ಧದ ಆರಂಭವಾದ ಆಂದೋಲನ ಬಳಿಕ ರಾಜಕೀಯ ಹೋರಾಟವಾಗಿ ದೇಶಾದ್ಯಂತ ಹರಡಿದೆ.
ಭಾರತೀಯ ರಾಯಭಾರ ಕಚೇರಿ ಹೇಳಿದ್ದೇನು?
"ಇರಾನ್‌ನಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಅಲ್ಲಿರುವ ಭಾರತೀಯ ಪ್ರಜೆಗಳು (ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು) ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಇರಾನ್‌ನಿಂದ ತೆರಳಬೇಕು" ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಭಾರತೀಯರಿಗೆ ನೀಡಲಾದ ಎಚ್ಚರಿಕೆ:
Advisory for Indian nationals regarding travel to Iran
— Randhir Jaiswal (@MEAIndia) January 14, 2026
🔗 https://t.co/6nSHTg45Bu pic.twitter.com/JWK1xC8EQO
"ಎಲ್ಲ ಭಾರತೀಯ ನಾಗರಿಕರು ಮತ್ತು ಪಿಐಒಗಳು (ಭಾರತೀಯ ಮೂಲದ ವ್ಯಕ್ತಿಗಳು) ಎಚ್ಚರಿಕೆಯಿಂದ ಇರಬೇಕು. ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಕ್ಕೆ ಯಾವ ಕಾರಣಕ್ಕೂ ತೆರಳಬೇಡಿ. ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಯಾವುದೇ ಬೆಳವಣಿಗೆಗಳಿಗಾಗಿ ಸ್ಥಳೀಯ ಮಾಧ್ಯಮಗಳನ್ನು ಗಮನಿಸುತ್ತಿರಬೇಕುʼʼ ಎಂದು ಪುನರುಚ್ಚರಿಸಿದೆ.
ಇರಾನ್ ಮೇಲೆ ದಾಳಿ ಮಾಡುವಷ್ಟು ಶಕ್ತಿ ಅಮೆರಿಕಕ್ಕಿಲ್ವಾ? ಟ್ರಂಪ್ ಬೆದರಿಕೆ ಬಗ್ಗದ ಖಮೇನಿ!
ವಿದೇಶಾಂಗ ಸಚಿವಾಲಯ (MEA) ಕೂಡ ಭಾರತೀಯರು ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಲಹೆ ನೀಡಿದೆ. ʼʼಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳು ಮುಂದಿನ ಸೂಚನೆ ಬರುವವರೆಗೆ ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಮತ್ತೊಮ್ಮೆ ಮನವಿ ಮಾಡಲಾಗಿದೆ" ಎಂದು ಹೇಳಿದೆ. ಜನವರಿ 5ರಂದು ಹೊರಡಿಸಲಾದ ಪ್ರಕಟಣೆಯಲ್ಲಿ ವಿದೇಶಾಂಗ ಸಚಿವಾಲಯವು ತನ್ನ ಪ್ರಜೆಗಳಿಗೆ ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಟೆಹರಾನ್‌ಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಜೈಶಂಕರ್ ಜತೆ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಮಾತುಕತೆ
ಇರಾನ್‌ನಲ್ಲಿ ಹೆಚ್ಚುತ್ತಿರುವ ಅಶಾಂತಿಯ ಮಧ್ಯೆ ಅಲ್ಲಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಕರೆ ಮಾಡಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು. ತಮ್ಮ ಎಕ್ಸ್ ಖಾತೆಯ ಪೋಸ್ಟ್ ಮೂಲಕ, ಜೈಶಂಕರ್ ದೂರವಾಣಿ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. "ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಕರೆ ಮಾಡಿದ್ದಾರೆ. ಇರಾನ್ ಮತ್ತು ಸುತ್ತಮುತ್ತಲಿನ ಪರಿಸ್ಥಿತಿಯ ಕುರಿತು ನಾವು ಚರ್ಚಿಸಿದ್ದೇವೆ" ಎಂದು ಜೈಶಂಕರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರ.