ಅಮೆರಿಕದಲ್ಲಿ ಹೆಲಿಕಾಪ್ಟರ್ ಅಪಘಾತ: ಮದುವೆಯಾದ ಕೆಲವೇ ಗಂಟೆಗಳಲ್ಲಿ ಭಾರತೀಯ ಮೂಲದ ಪೈಲಟ್ ಸಾವು
ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಕೇರಳ ಮೂಲದ, 26 ವರ್ಷದ ಡೆಲ್ಟಾ ಏರ್‌ಲೈನ್ಸ್ ಪೈಲಟ್ ಡೇವ್ ಫಿಜಿ ಮೃತಪಟ್ಟಿದ್ದಾರೆ. ದುರಂತ ಎಂದರೆ ಅಪಘಾತಕ್ಕೆ ಕೆಲವೇ ಗಂಟೆಗಳ ಮೊದಲಷ್ಟೆ ಇವರ ಮದುವೆಯಾಗಿತ್ತು. ಹನಿಮೂನ್‌ಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಪತ್ನಿ ಜೆಸ್ನಿ ಗಂಭೀರವಾಗಿ ಗಾಯಗೊಂಡು ಬದುಕುಳಿದಿದ್ದಾರೆ. ಹವಾಮಾನ ಸಮಸ್ಯೆ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಮೃತ ದುರ್ದೈವಿ ದೇವ್ ಫಿಜಿ ಮತ್ತು ಅವರ ಮದುವೆಯ ಕ್ಷಣ -
ವಾಷಿಂಗ್ಟನ್, ಜೂ. 1: ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ (Helicopter Crash) ಭಾರತೀಯ ಮೂಲದ ಯುವಕ ವಿವಾಹವಾದ ಕೆಲವೇ ಗಂಟೆಗಳಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಡೆಲ್ಟಾ ಏರ್‌ಲೈನ್ಸ್ (Delta Air Lines) ಪೈಲಟ್ ಆಗಿದ್ದ 26 ವರ್ಷದ ಡೇವ್ ಫಿಜಿ (Dave Fiji) ಮೃತಪಟ್ಟ ದುರ್ದೈವಿ. ಇವರದು ಕೇರಳ ಮೂಲದ ಕುಟುಂಬ. ಡೇವ್ ತಮ್ಮ ಮದುವೆಯ ನಂತರ ನವವಧುವಿನೊಂದಿಗೆ ಹನಿಮೂನ್‌ಗೆ ತೆರಳುತ್ತಿದ್ದಾಗ, ಅವರು ಪ್ರಯಾಣಿಸುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ಡಾಸನ್‌ವಿಲ್ಲೆ ಕಲ್ಯಾಣ ಮಂಟಪದ ಸಮೀಪವೇ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇವ್ ಅವರ ಪತ್ನಿ, ವೃತ್ತಿಯಲ್ಲಿ ದಾದಿಯಾಗಿರುವ ಜೆಸ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಮೆಟ್ರೋ ಅಟ್ಲಾಂಟಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
"ನನ್ನ ಮಗ ತುಂಬಾ ಸಂತೋಷವಾಗಿದ್ದ" ಎಂದು ಡೇವ್ ತಂದೆ ಜಾರ್ಜ್ ಫಿಜಿ ಕಣ್ಣೀರು ಹಾಕಿದ್ದಾರೆ. ದಶಕದ ಹಿಂದೆ ಚರ್ಚ್‌ನಲ್ಲಿ ಪರಿಚಯವಾಗಿದ್ದ ಜೆಸ್ನಿ ಅವರನ್ನು ಡೇವ್ ಶುಕ್ರವಾರವಷ್ಟೇ (ಮೇ 29) ಕೈಹಿಡಿದಿದ್ದರು. ಡಾಸನ್‌ವಿಲ್ಲೆಯ ದಿ ರೀವರ್‌ನಲ್ಲಿ ನಡೆದ ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಸುಮಾರು 400 ಅತಿಥಿಗಳು ಭಾಗವಹಿಸಿದ್ದರು. ರಿಸೆಪ್ಷನ್ ಮುಗಿದ ನಂತರ, ದಂಪತಿ ಅಟ್ಲಾಂಟಾ ಹೋಟೆಲ್‌ಗೆ ತೆರಳಲು ವಿಶೇಷ ವಿದಾಯದ ಕೊಡುಗೆಯಾಗಿ ಹೆಲಿಕಾಪ್ಟರ್ ಏರಿದ್ದರು. ಆದರೆ ದುರದೃಷ್ಟವಶಾತ್, ಹೆಲಿಕಾಪ್ಟರ್ ಮೌಂಟ್ ವರ್ನಾನ್ ಡ್ರೈವ್ ಬಳಿಯ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತು.
ಬಿಜೆಪಿಯೊಂದಿಗೆ ವೈಮಸ್ಸು? ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರ ಅಣ್ಣಾಮಲೈ?
ದುಃಖದಲ್ಲಿ ಮುಳುಗಿದ ಪತ್ನಿ
ಅಪಘಾತದ ನಂತರ ಹೆಲಿಕಾಪ್ಟರ್ ಪತ್ತೆಹಚ್ಚಲು ರಕ್ಷಣಾ ತಂಡಕ್ಕೆ ಸಾಕಷ್ಟು ಸಮಯ ಹಿಡಿಯಿತು. ತೀವ್ರವಾಗಿ ಗಾಯಗೊಂಡಿದ್ದ ಜೆಸ್ನಿ ಸುಮಾರು ಆರು ಗಂಟೆಗಳ ಕಾಲ ಹೆಲಿಕಾಪ್ಟರ್‌ನ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದರು. "ಅವಳು ಕಣ್ಣು ಬಿಟ್ಟಾಗ ಡೇವ್ ಅವಳ ಮಡಿಲಲ್ಲೇ ಮಲಗಿದ್ದ. ರಕ್ತಸಿಕ್ತವಾಗಿದ್ದ ಅವನ ದೇಹ ಸಂಪೂರ್ಣ ತಣ್ಣಗಾಗಿತ್ತು. ತಾನು ದಾದಿಯಾಗಿದ್ದರಿಂದ ಜೆಸ್ನಿಗೆ ಆತ ಈಗಾಗಲೇ ಮೃತಪಟ್ಟಿರುವುದು ತಕ್ಷಣವೇ ತಿಳಿಯಿತು" ಎಂದು ಜಾರ್ಜ್ ಫಿಜಿ ಹೇಳಿದ್ದಾರೆ.
ಹವಾಮಾನದ ಬಗ್ಗೆ ಆತಂಕವಿತ್ತು
ತಾವೂ ಒಬ್ಬ ವೃತ್ತಿಪರ ಪೈಲಟ್ ಆಗಿದ್ದರಿಂದ ಡೇವ್‌ಗೆ ಹಾರಾಟದ ಮುನ್ನ ಹವಾಮಾನದ ಬಗ್ಗೆ ತೀವ್ರ ಆತಂಕವಿತ್ತು. ಅಲ್ಲಿನ ಶೂನ್ಯ ದೃಶ್ಯ ಗೋಚರತೆಯ (ಝೀರೋ ವಿಜಿಬಿಲಿಟಿ) ಬಗ್ಗೆ ಅವರು ಹೆಲಿಕಾಪ್ಟರ್ ಪೈಲಟ್‌ಗೆ ಎಚ್ಚರಿಸಿದ್ದರು. ಆದರೆ ಪೈಲಟ್ ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸುವುದಾಗಿ ಭರವಸೆ ನೀಡಿ ಹೆಲಿಕಾಪ್ಟರ್ ಚಲಾಯಿಸಿದ್ದರು ಎನ್ನಲಾಗಿದೆ. ಸದ್ಯ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆಯ ತನಿಖೆ ಆರಂಭಿಸಿದೆ.