ಯುದ್ಧ ಆರಂಭಿಸುವ ಎಲ್ಲಾ ಸಾಮರ್ಥ್ಯ ವಾಷಿಂಗ್ಟನ್ ಗೆ ಇದೆ, ಡೊನಾಲ್ಡ್ ಟ್ರಂಪ್ ಒಪ್ಪಿದರೆ ಮಾತ್ರ ಸಂಘರ್ಷ ಕೊನೆಯಾಗುವುದು ಎಂದ ಟ್ರಂಪ್ ಸಹಾಯಕ
ಇರಾನ್ ಜೊತೆಗಿನ ಅಮೆರಿಕ ಸಂಘರ್ಷ ಇನ್ನೂ ಕೊನೆಯಾದಂತೆ ಕಂಡು ಬರುತ್ತಿಲ್ಲ. ಯಾಕೆಂದರೆ ಪೆಂಟಗನ್ ಮುಖ್ಯಸ್ಥರು ಈ ಕುರಿತು ಸಿಂಗಾಪುರದಲ್ಲಿ ನಡೆದ ರಕ್ಷಣಾ ಶೃಂಗಸಭೆಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ. ಇರಾನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇನ್ನೂ ಸಹಿ ಹಾಕಿಲ್ಲ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಇನ್ನೂ ಶಾಂತಿ ಒಪ್ಪಂದಕ್ಕೆ (peace deal) ಸಹಿ ಹಾಕಿಲ್ಲ. ಹೀಗಾಗಿ ಇರಾನ್ (Iran war) ಜೊತೆಗಿನ ಯುದ್ಧ ಇನ್ನೂ ಕೊನೆಯಾಗಿಲ್ಲ. ವಾಷಿಂಗ್ಟನ್ ಮತ್ತೆ ಯುದ್ಧ ಆರಂಭಿಸುವ ಹೆಚ್ಚು ಸಾಮರ್ಥ್ಯ ಹೊಂದಿದೆ ಎಂಬುದಾಗಿ ಡೊನಾಲ್ಡ್ ಟ್ರಂಪ್ ಅವರ ಆಪ್ತ, ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್ ಹೇಳಿದ್ದಾರೆ. ಅವರು ಶನಿವಾರ ಸಿಂಗಾಪುರದಲ್ಲಿ ನಡೆದ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿ, ಇರಾನ್ ಯುದ್ಧವನ್ನು ಪುನರಾರಂಭಿಸುವ ಸಾಧ್ಯತೆ ಕುರಿತು ಎಚ್ಚರಿಕೆಯನ್ನು ನೀಡಿದರು.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಕುರಿತು ಅಮೆರಿಕ ವಿಧಿಸಿದ ಷರತ್ತು ಒಪ್ಪದೇ ಶಾಂತಿ ಒಪ್ಪಂದ ನಡೆಯಲು ಸಾಧ್ಯವಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವುದೇ ಶಾಂತಿ ಒಪ್ಪಂದವು ತನ್ನ ನಿಯಮಕ್ಕೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ. ಇರಾನ್ ಜೊತೆ ಯುದ್ಧವನ್ನು ಪುನರಾರಂಭಿಸುವ ಹೆಚ್ಚು ಸಾಮರ್ಥ್ಯ ಅಮೆರಿಕ ಹೊಂದಿದೆ ಎಂದು ಅವರು ಎಚ್ಚರಿಸಿದರು.
ತಾಜ್ ಮಹಲ್, ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಟ್ರಂಪ್ ಪುತ್ರಿ ಟಿಫಾನಿ
ಇರಾನ್ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸುವ ಕುರಿತು ಇನ್ನೂ ವಾಷಿಂಗ್ಟನ್ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಒಪ್ಪಂದದ ನಿರ್ಧಾರಕ್ಕೆ ಟ್ರಂಪ್ ಹತ್ತಿರವಾಗಿದ್ದಾರೆ. ಒಪ್ಪಂದವು ಅವರ ಸಹಿಗಾಗಿ ಕಾಯುತ್ತಿದೆ. ಆದರೆ ಶುಕ್ರವಾರ ನಡೆದ ಸಭೆಯ ಬಳಿಕ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಶ್ವೇತಭವನ ತಿಳಿಸಿದೆ.
ಈ ನಡುವೆ ಸಿಂಗಾಪುರದಲ್ಲಿ ಮಾತನಾಡಿದ ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್ ಅವರು ವಾಷಿಂಗ್ಟನ್ ಯುದ್ಧವನ್ನು ಪುನರಾರಂಭಿಸುವ ಎಲ್ಲಾ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ಈ ನಡುವೆ ಯುಎಸ್ ಸೆಂಟ್ರಲ್ ಕಮಾಂಡ್ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಅಮೆರಿಕನ್ ಪಡೆಗಳು ಸಂಘರ್ಷ ಪ್ರದೇಶದಲ್ಲಿ ಹೆಚ್ಚು ಜಾಗರೂಕವಾಗಿದೆ ಎಂದು ಹೇಳಿದೆ.
ಇತ್ತೀಚೆಗೆ ಇರಾನ್‌ನ ಅಬ್ಬಾಸ್ ಬಂದರಿನ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಇರಾನ್ ಒಪ್ಪಂದಕ್ಕೆ ಬರುವ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದ್ದರೂ ಕೂಡ ಅದು ಅಮೆರಿಕ ವಿರುದ್ಧ ಪ್ರತಿ ದಾಳಿಯನ್ನು ಮುಂದುವರಿಸಿತ್ತು.
ಯುಎಸ್-ಜಿಯೋನಿಸ್ಟ್ ಆಕ್ರಮಣಕಾರಿ ಶತ್ರುವಿಗೆ ಸೇರಿದ ಡ್ರೋನ್ ಅನ್ನು ಶನಿವಾರ ತನ್ನ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿದೆ ಎಂದು ಇರಾನ್‌ನ ಸುದ್ದಿಸಂಸ್ಥೆಗಳು ಹೇಳಿವೆ. ಈ ನಡುವೆ ರಾಜತಾಂತ್ರಿಕತೆ ಮಾತುಕತೆಯನ್ನು ಮುಂದುವರಿಸುವುದಾಗಿ ತಿಳಿಸಿದೆ. ಎರಡೂ ರಾಷ್ಟ್ರಗಳ ಮಿಲಿಟರಿ ನಿಯೋಗಗಳು ಪೆಂಟಗನ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರೂ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ.
ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಮತ್ತು ಹೊರ್ಮುಜ್ ಜಲಸಂಧಿಯನ್ನು ಯಾವುದೇ ರೀತಿಯ ನಿರ್ಬಂಧವಿಲ್ಲದೆ ತೆರೆಯಲು ಇರಾನ್ ಒಪ್ಪಿಕೊಳ್ಳಬೇಕು ಎನ್ನುವ ಷರತ್ತನ್ನು ಅಮೆರಿಕ ವಿಧಿಸಿದೆ. ಆದರೆ ಈ ಷರತ್ತುಗಳನ್ನು ತಳ್ಳಿ ಹಾಕಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಇಸ್ಲಾಮಿಕ್ ಗಣರಾಜ್ಯವು 47 ವರ್ಷಗಳ ಹಿಂದೆಯೇ 'ಕಡ್ಡಾಯ' ಎಂಬ ಭಾಷೆಗೆ ವಿದಾಯ ಹೇಳಿದೆ. ಸಂದೇಶಗಳ ವಿನಿಮಯ ಮುಂದುವರೆದಿದೆ. ಯಾವುದೇ ಅಂತಿಮ ಒಪ್ಪಂದಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಡೊನಾಲ್ಡ್ ಟ್ರಂಪ್ ಅವರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಇರಾನ್ ಜಲಮಾರ್ಗದ ಮೇಲಿನ ನಿರ್ಬಂಧವನ್ನು ತೆಗೆದು ಹಾಕುತ್ತದೆ. ಅಲ್ಲಿವರೆಗೆ ಯುಎಸ್ ದಿಗ್ಬಂಧನವನ್ನು ಮುಂದುವರಿಸುತ್ತದೆ ಎಂದು ತಿಳಿಸಿದ್ದಾರೆ.
ಈ ನಡುವೆ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ನಿರ್ವಹಣೆ ಮತ್ತು ಸಾರ್ವಭೌಮತ್ವವನ್ನು ಜಾರಿಗೆ ತರುವ ಯೋಜನೆಯನ್ನು ಶೀಘ್ರದಲ್ಲೇ ಸಂಸತ್ತು ಅನುಮೋದಿಸಲಿದೆ ಎಂದು ಶಾಸಕ ಅಲಿರೆಜಾ ಸಲೀಮಿ ತಿಳಿಸಿದ್ದಾರೆ.
ಇದರೊಂದಿಗೆ ಲೆಬನಾನ್ ಮುಂಭಾಗದಲ್ಲಿ ಹೋರಾಟ ಮುಂದುವರಿದಿದೆ. ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪಡೆಗಳು ದೇಶದೊಳಗೆ ದೂರದವರೆಗೆ ಸಾಗಿದೆ. ದಕ್ಷಿಣ ಲೆಬನಾನ್‌ನ ಏಳು ಹಳ್ಳಿಗಳ ನಿವಾಸಿಗಳಿಗೆ ಇಸ್ರೇಲ್ ಸೇನೆ ಶನಿವಾರ ಸ್ಥಳಾಂತರಿಸುವ ಎಚ್ಚರಿಕೆಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ತನ್ನ ಭಾರೀ ಬಾಂಬ್ ದಾಳಿಯನ್ನು ಮುಂದುವರೆಸಿದ್ದು, ಈ ಕುರಿತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗಿನ ಮಾತನಾಡಿ ಕದನ ವಿರಾಮಕ್ಕೆ ಎಲ್ಲಾ ಪ್ರಯತ್ನ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಏಪ್ರಿಲ್ 17 ರಂದು ಕದನ ವಿರಾಮ ಆರಂಭವಾಗಿದ್ದರೂ ಅದನ್ನು ಪಾಲಿಸಲಾಗಿಲ್ಲ. ಎರಡೂ ಕಡೆಯವರು ಅದನ್ನು ಉಲ್ಲಂಘಿಸುತ್ತಲೇ ಇದ್ದಾರೆ ಎಂದು ಜೋಸೆಫ್ ಔನ್ ಆರೋಪಿಸಿದ್ದಾರೆ.