1 ಬಿಲಿಯನ್ ಡಾಲರ್ ಜೊತೆಗೆ ಅತ್ಯಂತ ಸುಂದರಿ ವಧು ಕೊಡಿ: ಟರ್ಕಿಗೆ ವಿಚಿತ್ರ ಬೇಡಿಕೆಯಿಟ್ಟ ಉಗಾಂಡಾ ಸೇನಾ ಮುಖ್ಯಸ್ಥ
Uganda’s army chief makes bizarre demand: ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಝಿ ಕೈನೆರುಗಾಬಾ ಅವರು ಟರ್ಕಿಯಿಂದ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. $1 ಬಿಲಿಯನ್ ನೀಡುವಂತೆ ಅವರು ಕೇಳಿದ್ದಾರೆ. ಎರಡನೇ ಬೇಡಿಕೆ, ಬಹುಶಃ ತಮಾಷೆಯಾಗಿ ಹೇಳಿರಬಹುದು. ಅದೇನೆಂದರೆ- ಆ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತಮ್ಮ ಪತ್ನಿಯಾಗಿ ಒಪ್ಪಿಸಬೇಕು ಎಂದು ಹೇಳಿದ್ದಾರೆ.
ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಝಿ ಕೈನೆರುಗಾಬಾ (ಸಂಗ್ರಹ ಚಿತ್ರ) -
ಕ್ಯಾಂಪಾಲಾ, ಏ. 12: ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಝಿ ಕೈನೆರುಗಾಬಾ (Muhoozi Kainerugaba) ಅವರು ಟರ್ಕಿಯಿಂದ (Turkey) ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೊದಲ ಬೇಡಿಕೆಯಾಗಿ, ಸೋಮಾಲಿಯಾದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳನ್ನು ಎದುರಿಸಲು ಉಗಾಂಡಾ (Uganda) ದೀರ್ಘಕಾಲದಿಂದ ನೀಡುತ್ತಿರುವ ಸೈನಿಕ ಸಹಕಾರಕ್ಕೆ $ 1 ಬಿಲಿಯನ್ ನೀಡುವಂತೆ ಅವರು ಕೇಳಿದ್ದಾರೆ. ಎರಡನೇ ಬೇಡಿಕೆ, ಬಹುಶಃ ತಮಾಷೆಯಾಗಿ ಹೇಳಿರಬಹುದು. ಅದೇನೆಂದರೆ- ಆ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತಮ್ಮ ಪತ್ನಿಯಾಗಿ ಒಪ್ಪಿಸಬೇಕು ಎಂದು ಹೇಳಿದ್ದಾರೆ.
ಕೈನೆರುಗಾಬಾ ಅವರ ಬೇಡಿಕೆಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಅವರು ಇಂತಹ ವಿಲಕ್ಷಣ ಬೇಡಿಕೆಯನ್ನು ಮಾಡುತ್ತಿರುವುದು ಇದೇ ಮೊದಲಲ್ಲ. 2022 ರಲ್ಲಿ, ಕೈನೆರುಗಾಬಾ ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಮದುವೆಯಾಗಲು 100 ಹಸುಗಳನ್ನು ನೀಡಿದ್ದರು. ಇದೀಗ ಅತ್ಯಂತ ಸುಂದರ ಟರ್ಕಿಶ್ ಮಹಿಳೆಯನ್ನು ತನ್ನ ಹೆಂಡತಿಯಾಗಲು ಬೇಡಿಕೆ ಇಟ್ಟಿದ್ದಾನೆ.
30 ದಿನಗಳೊಳಗೆ ಈ ಬೇಡಿಕೆಗಳನ್ನು ಪೂರೈಸಲು ವಿಫಲವಾದರೆ, ಗಂಭೀರ ರಾಜತಾಂತ್ರಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮುಹೂಝಿ ಕೈನೆರುಗಾಬಾ ಎಚ್ಚರಿಸಿದ್ದಾರೆ. ಇದರಲ್ಲಿ ಉಗಾಂಡಾದ ರಾಜಧಾನಿಯಾದ ಕ್ಯಾಂಪಾಲಾದಲ್ಲಿರುವ ಟರ್ಕಿಯ ರಾಯಭಾರ ಕಚೇರಿಯನ್ನು ಮುಚ್ಚಿಸುವ ಸಾಧ್ಯತೆಯೂ ಇದೆ ಎಂದಿದ್ದಾರೆ.
ಉಗಾಂಡಾದ ಸೇನಾ ಮುಖ್ಯಸ್ಥನಿಗೆ ಟರ್ಕಿಶ್ ಪತ್ನಿ ಬೇಕು. ಏಕೆ?
ಉಗಾಂಡಾದ ಸೇನಾ ಮುಖ್ಯಸ್ಥ, ಜನರಲ್ ಮುಹೂಝಿ ಕೈನೆರುಗಾಬಾ ಅವರು ದೇಶದ ಅಧ್ಯಕ್ಷ ಯೊವೆರಿ ಮುಸೆವೆನಿ ಅವರ ಪುತ್ರರಾಗಿದ್ದಾರೆ. ಶನಿವಾರ (ಏಪ್ರಿಲ್ 11) X ನಲ್ಲಿ ಸರಣಿ ಪೋಸ್ಟ್‌ಗಳಲ್ಲಿ, ಉಗಾಂಡಾದ ರಕ್ಷಣಾ ಪಡೆಗಳ ಮುಖ್ಯಸ್ಥ ಕೈನೆರುಗಾಬಾ, ಸೊಮಾಲಿಯಾದಲ್ಲಿನ ಮೂಲಸೌಕರ್ಯ ಒಪ್ಪಂದಗಳಿಂದ ಮತ್ತು ದೇಶದ ರಾಜಧಾನಿ ಮೊಗಾದಿಶುದಲ್ಲಿನ ಬಂದರು ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆಗಳಿಂದ ಟರ್ಕಿ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದರು.
ಆದರೆ ಅಲ್-ಖೈದಾ ಸಂಬಂಧಿತ ಮತ್ತು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅಲ್-ಶಬಾಬ್ ವಿರುದ್ಧ ಹೋರಾಡುವ ಭಾರಿ ಭದ್ರತಾ ಹೊರೆಯನ್ನು ಉಗಾಂಡಾ ಸುಮಾರು ಎರಡು ದಶಕಗಳ ಕಾಲ ಆಫ್ರಿಕನ್ ಯೂನಿಯನ್ ಕಾರ್ಯಾಚರಣೆಗಳ ಮೂಲಕ ಹೊತ್ತುಕೊಂಡಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಅವರು ಟರ್ಕಿಯಿಂದ 1 ಬಿಲಿಯನ್ ಡಾಲರ್ ಅನ್ನು ಭದ್ರತಾ ಲಾಭಾಂಶವಾಗಿ ಬೇಡಿಕೆ ಇಟ್ಟರು. ಅದರ ಜೊತೆಗೆ ವೈಯಕ್ತಿಕ ವಿವಾಹ ವಿನಂತಿಯನ್ನು ಕೂಡ ಸೇರಿಸಿದರು.
ಪಾಲಿಸಲು ವಿಫಲವಾದರೆ, ಕ್ಯಾಂಪಾಲಾ ತನ್ನ ವಾಯುಪ್ರದೇಶದಲ್ಲಿ ಟರ್ಕಿಶ್ ಏರ್‌ಲೈನ್ಸ್ ಕಾರ್ಯನಿರ್ವಹಿಸುವುದನ್ನು ನಿಷೇಧಿಸುತ್ತದೆ ಮತ್ತು ಅಂಕಾರಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸುತ್ತದೆ ಎಂದು ಕೈನೆರುಗಾಬಾ ಎಚ್ಚರಿಸಿದ್ದಾರೆ.
ಟರ್ಕಿಯ ಮಟ್ಟಿಗೆ ಇದು ನಿಜವಾಗಿಯೂ ಸರಳವಾದ ಒಪ್ಪಂದ. ಅವರು ನಮಗೆ ಹಣ ಪಾವತಿಸಬಹುದು ಅಥವಾ ನಾನು ಅವರ ರಾಯಭಾರ ಕಚೇರಿಯನ್ನು ಮುಚ್ಚಬಹುದು. ಅವರು ಟರ್ಕಿಯಲ್ಲಿರುವ ನಮ್ಮ ರಾಯಭಾರ ಕಚೇರಿಯನ್ನು ಸಹ ಮುಚ್ಚಬಹುದು. ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಟರ್ಕಿ ನಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ನಾವು 30 ದಿನಗಳಲ್ಲಿ ನಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು. ಅಲ್ಲದೆ ಬೆನ್ನಿಗೆ ಚೂರಿ ಹಾಕುವ ಸ್ನೇಹಿತರು ತಮಗೆ ಬೇಡ ಎಂದಿದ್ದಾರೆ.